ಬುರ್ಕಿನಿ:ಬಿಡುಗಡೆಯ ಹೆಜ್ಜೆ
ಫ್ರಾನ್ಸ್ ದೇಶ ಮುಸ್ಲಿಂ ಮಹಿಳೆಯರ ಈಜುತೊಡುಗೆಯಾದ ಬುರ್ಕಿನಿಯನ್ನು ಇತ್ತೀಚಿಗಷ್ಟೆ ನಿಷೇಧಿಸಿದ್ದು ಪ್ರಪಂಚಾದ್ಯಂತ ಚರ್ಚೆಯನ್ನು ಹುಟ್ಟುಹಾಕಿತು. ಬಿಕಿನಿ ಮತ್ತು ಬುರ್ಖಾ ತೊಡುಗೆಗಳ ಸಮಾಗಮವೇ ಈ ಬುರ್ಕಿನಿ.
ಬುರ್ಖಾ ದೇಹವನ್ನು ಸಂಪೂರ್ಣ ಮುಚ್ಚುವುದಲ್ಲದೆ ಅಂಗಾಂಗಳನ್ನು ಸ್ವಲ್ಪವೂ ಅಂಟದೆ ಹೆಣ್ಣಿನ ದೇಹವನ್ನು ಚೀಲದ ಆಕೃತಿಯಲ್ಲಿ ಇಡುತ್ತದೆ. ಆದರೆ ಬುರ್ಕಿನಿ ದೇಹವನ್ನು ಸಂಪೂರ್ಣವಾಗಿ ಮುಚ್ಚಿದರೂ ದೇಹಕ್ಕೆ ಅಂಟುವುದರಿಂದ ಅಂಗಾಂಗಳ ಚಲನೆ ಸಾಧ್ಯವಾಗುತ್ತದೆ. ಮುಸ್ಲಿಮೇತರರು ಸೂರ್ಯನ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಅಪರೂಪಕ್ಕೆ ಇದನ್ನು ಬಳಸಿದರೂ ಮುಸ್ಲಿಂ ಹೆಣ್ಣು ಮಕ್ಕಳೇ ಹೆಚ್ಚಾಗಿ ಬಳಸುತ್ತಾರೆ.
ಧಾರ್ಮಿಕ ಅಭಿವ್ಯಕ್ತಿ, ಸಾರ್ವಜನಿಕ ಸ್ಥಳಗಳಲ್ಲಿ ಜಾತ್ಯತೀತ ವಾತಾವರಣದ ಸೃಷ್ಟಿಗೆ ಅಡ್ಡಿಯಾಗುತ್ತದೆ ಎಂದು ಫ್ರಾನ್ಸ್ ದೇಶ ಬುರ್ಕಿನಿ ಮೇಲಿನ ನಿಷೇಧವನ್ನು ಸಮರ್ಥಿಸಿಕೊಂಡಿತ್ತು. ಮುಸ್ಲಿಂ ನಾಯಕರು ಮತ್ತು ಮಾನವ ಹಕ್ಕು ಹೋರಾಟಗಾರರು ಈ ನಿಷೇಧವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರು.
ಅವರಿಗೆ ಈಗ ಜಯ ದೊರೆತಿದೆ. ಮಹಿಳೆಯರ ಅಭಿವ್ಯಕ್ತಿ ಸ್ವಾತಂತ್ರವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲವೆಂಬ ತೀರ್ಪು ಬಂದಿದೆ. ಇಲ್ಲಿ ನಾವು ಗಮನಿಸಬೇಕಾದ ಎರಡು ಅಂಶವೆಂದರೆ, ಧಾರ್ಮಿಕ ಅಭಿವ್ಯಕ್ತಿಗೆ ಫ್ರಾನ್ಸ್ ಸರ್ಕಾರದ ನಿಲುವು ಮತ್ತು ಮುಸ್ಲಿಂ ಮಹಿಳೆಯರ ವಸ್ತ್ರಸಂಹಿತೆಯಲ್ಲಿ ಆಗಿರುವ ಪರಿಷ್ಕರಣೆ.
ಇಂದು ಐರೋಪ್ಯ ದೇಶಗಳಿಗೆ ಇಸ್ಲಾಂ ಭಯೋತ್ಪಾದನೆ, ಅವು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಮತ್ತು ಯುರೋಪ್ ಒಕ್ಕೂಟದ ಸಮಸ್ಯೆಗಳಿಗಿಂತ ದೊಡ್ಡ ಸ್ವರೂಪದ್ದಾಗಿದೆ. ಫ್ರಾನ್ಸ್‌ನಲ್ಲಿ ಹೆಚ್ಚಾಗುತ್ತಿರುವ ಇಸ್ಲಾಂ ಭಯೋತ್ಪಾದಕರ ದಾಳಿ ದೊಡ್ಡ ಪ್ರಮಾಣದ ಸಾವುನೋವುಗಳನ್ನು ತಂದಿದೆ.
ಇದರಿಂದ ವಿಚಲಿತವಾಗಿರುವ ಫ್ರಾನ್ಸ್ ದೇಶ, ಶಸ್ತ್ರಾಸ್ತ್ರಗಳನ್ನು ಒಯ್ಯಲು ಬುರ್ಖಾ ಅನುಕೂಲ ಮಾಡಿಕೊಡುತ್ತದೆ ಎಂಬ ಕಾರಣದಿಂದ ಅದನ್ನು ಧರಿಸಿ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುವುದನ್ನು ೨೦೧೦ರಲ್ಲೇ ನಿಷೇಧಿಸಿತ್ತು. ಮುಂಬರುವ ಚುನಾವಣೆಯಲ್ಲಿ ಇಸ್ಲಾಂ ಭಯೋತ್ಪಾದನೆಯ ನಿಗ್ರಹ ನಿರ್ಣಾಯಕ ಪಾತ್ರ ಹೊಂದಿದೆ. ಹಾಗಾಗಿ ಬುರ್ಕಿನಿ ನಿಷೇಧ ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ.
ಫ್ರಾನ್ಸ್‌ನ ಸಂವಿಧಾನ ಜಾತ್ಯತೀತ ಮತ್ತು ಮತಧರ್ಮನಿರಪೇಕ್ಷಿತ. ಸಾರ್ವಜನಿಕ ಸ್ಥಳಗಳಲ್ಲಿ, ಶಾಲೆಗಳಲ್ಲಿ ದೇಶದ ಪ್ರಜೆಗಳಾಗಿ ಗುರುತಿಸಿಕೊಳ್ಳಬೇಕೆ ಹೊರತು ಯಾವುದೇ ಧಾರ್ಮಿಕ ಅಭಿವ್ಯಕ್ತಿಗೆ ಫ್ರಾನ್ಸ್‌ನಲ್ಲಿ ಅವಕಾಶವಿಲ್ಲ. ಧಾರ್ಮಿಕ ಆಚರಣೆಗಳು ಮತ್ತು ನಂಬಿಕೆಗಳು ವೈಯಕ್ತಿಕ ವಲಯಗಳಿಗೆ ಸೀಮಿತವಾಗಿರುವುದು ನಾಗರಿಕ ಸಮಾಜಕ್ಕೆ ಒಳಿತು. ಆದ್ದರಿಂದ ಬುರ್ಖಾ ನಿಷೇಧದ ಉದ್ದೇಶವನ್ನು ಒಪ್ಪಬಹುದು. ಆದರೆ ಬುರ್ಕಿನಿ ಈಜುತೊಡುಗೆಯ ನಿಷೇಧವನ್ನಲ್ಲ.
ಮುಸ್ಲಿಂ ಮಹಿಳೆಯರ ಸಾಂಪ್ರದಾಯಿಕ ತೊಡುಗೆ ಬುರ್ಖಾ. ಈ ತೊಡುಗೆಯಲ್ಲಿ ದೇಹದ ಸ್ವತಂತ್ರ ಚಲನೆಯನ್ನು ಬಯಸುವ ಜಲಕ್ರೀಡೆ ಸಾಧ್ಯವಾಗದು. ಅದಕ್ಕೆಂದೇ ಆಸ್ಟ್ರೇಲಿಯಾದ ವಸ್ತ್ರವಿನ್ಯಾಸಗಾರ್ತಿ ಅಹೇದಾ ಜನೇಟಿ ಪಾಶ್ಚಾತ್ಯ ಉಡುಗೆಯಾದ ಬಿಕಿನಿ ಮತ್ತು ಇಸ್ಲಾಂ ಒಪ್ಪುವ ಬುರ್ಖಾ ವಿನ್ಯಾಸಗಳನ್ನು ಸಮನ್ವಯಗೊಳಿಸಿ, ಬುರ್ಕಿನಿ ಈಜು ಉಡುಗೆಯನ್ನು ೨೦೦೩ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ತಂದರು.
ತಲೆಗೂದಲಿನಿಂದ ಕಾಲಿನವರೆಗೆ ಹೆಣ್ಣಿನ ದೇಹವನ್ನು ಸಂಪೂರ್ಣವಾಗಿ ಮುಚ್ಚುವ ಈ ತೊಡುಗೆಯಲ್ಲಿ ಮುಖ ಮಾತ್ರ ಕಾಣಿಸುತ್ತದೆ. ದೇಹಕ್ಕೆ ಅಂಟುವ ಬಟ್ಟೆಯಿಂದ ಮಾಡಿರುವ ಬುರ್ಕಿನಿ ನೀರಿನಲ್ಲಿ ಅಂಗಾಂಗಳ ಸಹಜ ಚಲನೆಗೆ ಅಡ್ಡಿಯಾಗುವುದಿಲ್ಲ.
ಇದನ್ನು ಧರಿಸಿ ಮುಸ್ಲಿಂ ಹೆಣ್ಣುಮಕ್ಕಳು ಸ್ವತಂತ್ರವಾಗಿ ಮನೆ ಹೊರಗಿನ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲಿ ಎಂಬುದೇ ಅಹೇದಾ ಅವರ ಆಶಯವಾಗಿತ್ತು. ಅದರಂತೆಯೇ ೨೦೦೮ರಿಂದ ಈಚೆಗೆ ಈಜಿಗಷ್ಟೆ ಅಲ್ಲದೆ, ಹೊರಾಂಗಣ ಕ್ರೀಡೆಗಳಲ್ಲೂ ಬುರ್ಕಿನಿ ಮಾದರಿಯ ಉಡುಗೆ ಜನಪ್ರಿಯವಾಗತೊಡಗಿತು.
ದೇಹಾಕೃತಿಯನ್ನು ತೋರಿಸುವ ಬುರ್ಕಿನಿಯನ್ನು ಇಸ್ಲಾಂ ಧರ್ಮಗುರುಗಳು ಕೆಲವರು ಒಪ್ಪುವುದಿಲ್ಲ. ಆದರೆ, ಬುರ್ಕಿನಿಯನ್ನು ಧರಿಸಿ ಇಲ್ಲಿಯವರೆಗೂ ಶೋಧಿಸದ ಹೊರ ಪ್ರಪಂಚದ ಚಟುವಟಿಕೆಗಳನ್ನು ಅನುಭವಿಸುವ ಧೈರ್ಯವನ್ನು ಮುಸ್ಲಿಂ ಹೆಣ್ಣು ಮಕ್ಕಳು ತೋರಿಸುತ್ತಿದ್ದಾರೆ. ಬುರ್ಕಿನಿ ಎಲ್ಲಾ ಮುಸ್ಲಿಮರನ್ನು ಇನ್ನೂ ಮುಟ್ಟಲು ಸಾಧ್ಯವಾಗಿಲ್ಲವಾದರೂ, ಅದರ ತಿಳಿವಳಿಕೆಯು ಮುಸ್ಲಿಂ ಪ್ರಪಂಚದಲ್ಲಿ ವಿಸ್ತರಿಸುತ್ತಿದೆ.
ಈಗಲೂ ಬುರ್ಕಿನಿ ಬಳಕೆ ಪ್ರಜಾಪ್ರಭುತ್ವ ದೇಶಗಳಲ್ಲಿರುವ ಮುಸ್ಲಿಮರಲ್ಲಿ ಮಾತ್ರ ಬಳಕೆಯಲ್ಲಿದೆ. ಮುಸ್ಲಿಂ ಮಹಿಳೆಯ ವಸ್ತ್ರಸಂಹಿತೆಯಲ್ಲಿ ಮಹತ್ವದ ಪರಿಷ್ಕರಣೆಯೆಂದೇ ಬುರ್ಕಿನಿಯನ್ನು ಗುರುತಿಸಬೇಕಾಗುತ್ತದೆ.
ಮಹಿಳೆಯರ ವಸ್ತ್ರಸಂಹಿತೆ ಮುಸ್ಲಿಂ ಪ್ರಪಂಚಕ್ಕಷ್ಟೆ ಸೀಮಿತವಾಗಿಲ್ಲ. ಎಲ್ಲಾ ಧರ್ಮಗಳಲ್ಲೂ ಮಹಿಳೆಗೆ ಆಕೆಯ ದೇಹ ಪ್ರದರ್ಶನಕ್ಕೆ ಸೀಮಿತ ಅವಕಾಶಗಳಿವೆ. ಹೆಣ್ಣಿನ ದೇಹದ ಸ್ವತಂತ್ರ ಅಭಿವ್ಯಕ್ತಿ ಪಾಶ್ಚಾತ್ಯ ದೇಶಗಳಲ್ಲೂ ನಿರಂತರವಾಗಿ ಪರಿಷ್ಕರಣೆ ಹೊಂದುತ್ತಾ ಬಂದಿದೆ.
೯೦ರ ದಶಕದಲ್ಲಿ ಮೊದಲ ಬಾರಿ ದೇಹಕ್ಕೆ ಅಂಟುವ ಈಜುತೊಡುಗೆಯನ್ನು ಧರಿಸಿದ್ದ ಮಹಿಳೆಯನ್ನು ಅಮೆರಿಕದಲ್ಲಿ ಬಂಧಿಸಲಾಗಿತ್ತು. ಬಿಕಿನಿಯನ್ನು ಮೊದಲ ಬಾರಿಗೆ (೧೯೪೬) ವಿನ್ಯಾಸಗೊಳಿದಾಗ ಅದನ್ನು ತೊಡಲು ಯಾರೂ ಮುಂದೆ ಬರಲಿಲ್ಲ.
ಆದರೆ, ಕಾಲಕ್ರಮೇಣ ಪಾಶ್ಚಾತ್ಯ ಮಹಿಳೆಯ ದೈಹಿಕ ಅಭಿವ್ಯಕ್ತಿ ಪರಿಷ್ಕರಣೆಗೊಂಡು ಲಿಂಗತಾರತಮ್ಯದಿಂದ ಸ್ವಲ್ಪಮಟ್ಟಿಗೆ ಹೊರಬರಲು ಸಾಧ್ಯವಾಗಿದೆ.
ಹೆಣ್ಣಿನ ದೇಹಕ್ಕೆ ಸಂಬಂಧಿಸಿದ ಧಾರ್ಮಿಕ ಪರಿಷ್ಕರಣೆ ಮುಸ್ಲಿಂ ಸಮುದಾಯದಲ್ಲಿ ಬುರ್ಕಿನಿಯ ಮೂಲಕ ಆಗುತ್ತಿರುವುದನ್ನು ನಾವು ಸ್ವಾಗತಿಸಬೇಕಾಗುತ್ತದೆ. ಬುರ್ಕಿನಿ ಪೂರ್ಣ ಪ್ರಮಾಣದ ದೈಹಿಕ ಅಭಿವ್ಯಕ್ತಿಗೆ ಆಸ್ಪದ ಕೊಡದಿದ್ದರೂ, ಹೆಣ್ಣಿನ ದೇಹದ ಸಹಜ ಪ್ರಾಕೃತಿಕ ಆಕೃತಿಯನ್ನು ಮುಚ್ಚಿಡುವ ಬುರ್ಖಾದಿಂದ ಬಿಡುಗಡೆಗೊಳಿಸಿದೆ.
ಇದು, ಹೆಣ್ಣಿಗೆ ಅತ್ಯಂತ ಕಠಿಣ ನೀತಿ ಸಂಹಿತೆ ನೀಡುವ ಇಸ್ಲಾಂ ಧರ್ಮದ ಕ್ರಾಂತಿಕಾರಿ ಪರಿಷ್ಕರಣೆಯೆಂದೇ ಗುರುತಿಸಬೇಕಾಗುತ್ತದೆ. ಇಲ್ಲಿ ಬುರ್ಕಿನಿಯನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ ಮಹಿಳೆ ಎನ್ನುವುದು ಇನ್ನೂ ಮುಖ್ಯವಾಗುತ್ತದೆ.
ಧಾರ್ಮಿಕ ಸಂಕೋಲೆಗಳಿಂದಾಚೆಗೆ ಹೆಣ್ಣಿನ ಅಸ್ಮಿತೆಯ ಅಭಿವ್ಯಕ್ತಿಗೆ ಶೋಷಿತ ಹೆಣ್ಣಿನ ಜಾಗೃತ ಪ್ರಜ್ಞೆಯಿಂದಲೇ ನಿಜವಾದ ಬಿಡುಗಡೆ ಸಾಧ್ಯ. ಈ ನಿಟ್ಟಿನಲ್ಲಿ ಬುರ್ಕಿನಿ ಒಂದು ಹೆಜ್ಜೆಯಾಗಿ ಕಾಣಿಸುತ್ತದೆ. ಇದರಂತೆಯೇ ಡೆನ್ಮಾರ್ಕ್‌ನಲ್ಲಿ ಮಹಿಳೆಯರ ಮೊದಲ ಮಸೀದಿ ಈ ವಾರ ಆರಂಭಗೊಂಡಿದೆ.
ಧಾರ್ಮಿಕ ಪರಿಷ್ಕರಣೆಗಳ ಸಂಕೇತವಾಗಿರುವ ಇಂತಹ ಪ್ರಾಪಂಚಿಕ ಬೆಳವಣಿಗೆಗಳು ಮುಂದೊಂದು ದಿನ ಧರ್ಮದ ಅಡಿಪಾಯವಿಲ್ಲದ, ಕೇವಲ ಮಾನವ ಮೌಲ್ಯಗಳ ಜೀವಪರ ನಾಗರಿಕ ಸಮಾಜ ಸೃಷ್ಟಿಗೆ ನಾಂದಿಯಾಗಬಹುದು.
ಧಾರ್ಮಿಕ ಸಂಕೋಲೆಗಳಿಂದ ಬಿಡುಗಡೆ ಧರ್ಮದ ನಿರಂತರ ಪರಿಷ್ಕರಣೆಯಿಂದ ಸಾಧ್ಯವಾಗಬಹುದು. ಈ ನಿಟ್ಟಿನಲ್ಲಿ ಎಲ್ಲ ಧರ್ಮಗಳ ಚಿಂತಕರ ಮನಸ್ಸುಗಳು ಮುಕ್ತವಾಗಬೇಕಾಗಿದೆ.
ಡಾ.ಸುಶಿ ಕಾಡನಕುಪ್ಪೆ


