ಕಾರಂತರ ಕುರಿತು ಅವರ ಮಕ್ಕಳೊಂದಿಗೆ ಸಂವಾದ!!
ಕಾರಂತರ ಕುರಿತು ಅವರ ಮಕ್ಕಳೊಂದಿಗೆ ಸಂವಾದ!!
_______
ಶಿವರಾಮ ಕಾರಂತರ ಮೂವರು ಮಕ್ಕಳು, ತಮ್ಮ ತಂದೆಯ ಕುರಿತು ಬರೆದ"Growing up Karanth" ಪುಸ್ತಕದ ಕನ್ನಡ ಅನುವಾದ "ಕಾರಂತರ ಸುಳಿಯಲ್ಲಿ" ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಾಹಿತ್ಯ ಹಬ್ಬದಲ್ಲಿ ಇದೊಂದು ವಿಶಿಷ್ಟ ಗೋಷ್ಠಿಯನ್ನು ಏರ್ಪಡಿಸಲಾಗಿತ್ತು.
ಸಂವಾದದಲ್ಲಿ ಕಾರಂತರ ಮೂವರು ಮಕ್ಕಳಾದ ಡಾ.ಮಾಲವಿಕಾ ಕಪೂರ್, ಡಾ.ಉಲ್ಲಾಸ ಕಾರಂತ ಹಾಗೂ ಕ್ಷಮಾರಾವ್ ಪಾಲ್ಗೊಂಡಿದ್ದರು.
ಸಂವಾದಕಾರರಾಗಿ ವಿಮರ್ಶಕ ಎಸ್.ಆರ್.ವಿಜಯ ಶಂಕರ್ ತಮ್ಮ ಬಾಲ್ಯದ ಪುತ್ತೂರಿನ ದಿನಗಳಲ್ಲಿ ಕಂಡ ಕಾರಂತರ ನೆನಪುಗಳನ್ನು, ಚಿಕ್ಕ ಮಕ್ಕಳನ್ನೂ ಸಮಾನವಾಗಿ ಗೌರವಿಸುವ ಕಾರಂತರ ಸಹಜ ಸ್ವಭಾವವನ್ನು ವಿವರಿಸುತ್ತ, ಇಡೀ ಸಂವಾದವನ್ನು ಬಹಳ ಚೆನ್ನಾಗಿ ನಡೆಸಿ ಕೊಟ್ಟರು.
ಇದನ್ನೇ ವಿಸ್ತರಿಸಿದ ಮಾಲವಿಕಾ ಕಪೂರ್,ಮಕ್ಕಳೇ ನಿಮ್ಮ ನಿಜವಾದ ಸೃಜನಶೀಲ ಶಿಕ್ಷಕರು ಅನ್ನುವ ಪರಿಕಲ್ಪನೆಯನ್ನು ತಂದೆಯವರಿಂದ ಕಲಿತೆ ಎಂದು ಹೇಳಿದರು.ತಾವು ಮನಶ್ಶಾಸ್ತ್ರದಲ್ಲಿ ಆಸಕ್ತಿ ವಹಿಸಿದಾಗ ಒಮ್ಮೆ ಅಮ್ಮ ಲೀಲಾ ಕಾರಂತರು" ನೀನು ನನ್ನ ಹೊಟ್ಟೆ ಯಲ್ಲಿದ್ದಾಗ ನಾನು ಫ್ರಾಯ್ಡ್ ನನ್ನು ಓದುತ್ತಿದ್ದೆ" ಅಂದಿದ್ದರಂತೆ.! ಜೊತೆಗೆ ತಾವೀಗ ಮಕ್ಕಳ ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಕೈಗೊಂಡ ಎಲ್ಲ ಚಟುವಟಿಕೆಗಳಿಗೂ ತಂದೆ ತಾಯಿಯವರ ಬದುಕೇ ಪ್ರೇರಣೆ ಅನ್ನುವುದನ್ನು ಬಾಲ್ಯದ ನೆನಪುಗಳೊಂದಿಗೆ ಸೊಗಸಾಗಿ ವಿವರಿಸಿದರು.
ಹೀಗೆ, ಮಾಲವಿಕಾ,ಉಲ್ಲಾಸ ಕಾರಂತ ಮತ್ತು ಕ್ಷಮಾ ರಾವ್ ಮೂವರೂ ತಾವು ಕಂಡ ತಂದೆ ತಾಯಿಯ ವ್ಯಕ್ತಿತ್ವದ ನೆನಪುಗಳನ್ನು ಬಹಳ ಚೆನ್ನಾಗಿಯೇ ಕಟ್ಟಿಕೊಟ್ಟರು. ಅದರಲ್ಲೂ ಮಾಲವಿಕಾ ಅವರ ಮಾತುಗಳ ತೂಕ ಸ್ವಲ್ಪ ಹೆಚ್ಚೇ ಇತ್ತು.
ಕೃತಿಯ ಅನುವಾದಕ ವಿಶ್ವೇಶ್ವರ ಭಟ್ಟರು ಕೂಡ ಬಾಲ್ಯದಲ್ಲಿ ಅಜ್ಜನಿಗಾಗಿ ಕಾರಂತರ ಎಲ್ಲ ಕೃತಿಗಳನ್ನು ಓದಿದ ನೆನಪುಗಳನ್ನು ವಿವರಿಸಿ,ಈ ಪುಸ್ತಕವನ್ನು ತಾನು ಯಾಕೆ ಅನುವಾದಿಸಿದೆ ಎಂದು ಸ್ವಾರಸ್ಯಕರವಾಗಿ ವಿವರಿಸಿದರು.
ಇದಕ್ಕೂ ಹಿಂದಿನ ಪರಿಸರ ಕುರಿತ ಗೋಷ್ಠಿಯಲ್ಲಿ ನಾಗೇಶ ಹೆಗಡೆಯವರು ಕೂಡಾ ಕಾರಂತರನ್ನು ಹೆಮ್ಮೆಯಿಂದ ನೆನಪಿಸಿಕೊಂಡರು. ಪರಿಸರ ಸಂರಕ್ಷಣೆಯ ಹೋರಾಟವನ್ನು ತಾತ್ವಿಕವಾಗಿ ಕರ್ನಾಟಕದಲ್ಲಿ ಆರಂಭಿಸಿದವರಲ್ಲಿ ಕಾರಂತರೇ ಪ್ರಮುಖರು,ವಿಶ್ವಸಂಸ್ಥೆ ಪ್ರಕಟಿಸಿದ ನಾನೂರು ಪುಟಗಳ ಪರಿಸರ ಅಧ್ಯಯನ ವರದಿಯನ್ನು ಮೊದಲ ಬಾರಿಗೆ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದರು ಎನ್ನುತ್ತ, ಪರಿಸರ ಹೋರಾಟದಲ್ಲಿ ಕಾರಂತರು ಬಹಳ ದೊಡ್ಡ ಶಕ್ತಿಯಾಗಿ ಪ್ರೇರಣೆ ನೀಡಿದವರು ಎಂದು ಹೇಳಿದ್ದರು.
ಉಲ್ಲಾಸ ಕಾರಂತರು ಮಾತನಾಡುತ್ತಾ, ಮೂರೂ ಮಕ್ಕಳ busy schedule ನಡುವೆ ಒಟ್ಟಾಗುವ ಕಷ್ಟವನ್ನು ವಿವರಿಸಿದರು.ತಾನು ವನ್ಯ ಪ್ರಾಣಿಗಳ ಸಂಶೋಧನೆ ಕುರಿತು ಆಸಕ್ತಿ ತಾಳಲು ತಂದೆಯವರು ಹೇಗೆ ಪ್ರೇರೇಪಿಸಿದರು ಅನ್ನುವುದನ್ನು ಕೆಲವೊಂದು ನೆನಪುಗಳೊಂದಿಗೆ ಹಂಚಿಕೊಂಡರು.
ಜೊತೆಗೆ, ಈ ಪುಸ್ತಕವನ್ನು ಬರೆಯಲೇಬೇಕು ಎಂದು ಬೆನ್ನು ಬಿಡದೆ ಹಿಂಬಾಲಿಸಿ ,ಒತ್ತಾಯಿಸಿ, ಬರೆಯಲು ಕಾರಣರಾದವರು, ದೂರದ ಪಂಜಾಬಿನಿಂದ ಇಲ್ಲಿಗೆ ಬಂದು ಅಪ್ಪಟ ಕನ್ನಡಿಗರಾದ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅನ್ನುವ ಸ್ವಾರಸ್ಯಕರ ಮಾಹಿತಿಯನ್ನೂ ಹಂಚಿಕೊಂಡಾಗ, ಸಿಂಗ್ ಅವರ ಮೇಲಿನ ಅಭಿಮಾನ ಇನ್ನಷ್ಟು ಹೆಚ್ಚಾಯಿತು.
ಕ್ಷಮಾರಾವ್ ಮಾತನಾಡುತ್ತ ನಮ್ಮನ್ನು ಆರಂಭದಲ್ಲಿ ಶಾಲೆಗೇ ಕಳಿಸಿರಲಿಲ್ಲ,ಪುತ್ತೂರಿನಲ್ಲಿ ಬಾಲ್ಯ ಕಳೆದ ಮೂವರೂ ಶಾಲೆಗೆ ಸೇರಿದ್ದು ನೇರವಾಗಿ ಆರನೇ ತರಗತಿಗೆ. ಅಲ್ಲಿವರೆಗೂ ಬಾಲವನದ ಪರಿಸರವೇ ತಮಗೆ ಶಾಲೆಯಾಗಿತ್ತು ಎಂದರು. ನಂತರ ಸಭಿಕರೊರೊಬ್ಬರು ಪ್ರತಿಕ್ರಿಯಿಸುತ್ತ ವಿಶ್ವವಿದ್ಯಾಲಯವೇ ಮನೆಯಲ್ಲಿರಬೇಕಾದರೆ ನಿಮಗೆ ಶಾಲೆಗೆ ಹೋಗುವ ಅನಿವಾರ್ಯತೆಯಾದರೂ ಏನಿತ್ತು ಅಂದರು.ಅದೂ ನಿಜವೇ !!
ಕಾರಂತರ ಕುರಿತು ಮಕ್ಕಳೇ ಬರೆದಿರುವ ಈ ಕೃತಿ ನಿಜಕ್ಕೂ ವಿಶೇಷವಾದದ್ದು.ಈ ಪುಸ್ತಕವನ್ನು ಯಾಕೆ ಓದಬೇಕು ಅಂದರೆ,ಕಾರಂತರ ಬಗ್ಗೆ ಬೇರೆಯವರು ಬರೆಯುವುದಕ್ಕಿಂತ ಬೇರೆಯದೇ ಆದ, ವಿಶಿಷ್ಟ ಒಳನೋಟ ಆಯಾಮಗಳು ಮಕ್ಕಳ ಬರಹದಲ್ಲಿ ಸಿಗುತ್ತದೆ ಅನ್ನುವ ಕಾರಣಕ್ಕೆ.!ಅದಕ್ಕಿಂತಲೂ ಹೆಚ್ಚಾಗಿ, ಕಾರಂತರ ಸಾಧನೆಯ ಕ್ಷೇತ್ರದ ಮುಂದುವರಿದ ಮೂರು ಕವಲುಗಳೆಂದೇ ಹೇಳಬಹುದಾದ,ಅವರ ಮೂವರೂ ಮಕ್ಕಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಸಾಧಕರೆಂದು ಗುರುತಿಸಲ್ಪಟ್ಟಿರುವುದರಿಂದ.!!
ಅಂದಹಾಗೆ, ಕಾರಂತರು ತೀರಿಕೊಂಡು 28ವರ್ಷಗಳಾದವು.(09.12.1997) ಈ ನೆಪದಲ್ಲಾದರೂ ಕಾರಂತರನ್ನು ನೆನೆಯೋಣವೆಂದು ಇದೆಲ್ಲ ಬರೆಯುತ್ತಿದ್ದೇನೆ.
ಕಾರಂತರಿಗೆ ಗೌರವ ಪೂರ್ವಕ ನಮನಗಳು.
- ಗಿರಿಧರ ಕಾರ್ಕಳ


