ಹೌದು ಸ್ವಾಮಿ, ಬಿಗ್ ಬಾಸ್ ! ಗಿಲ್ಲಿ, ನಟ!
ಬಿಗ್ ಬಾಸ್ ಟಿವಿ ಕಾರ್ಯಕ್ರಮ ಕನ್ನಡಿಗರ ನೆಚ್ಚಿನ ಟಿವಿ ಕಾರ್ಯಕ್ರಮಗಳಲ್ಲೊಂದಾಗಿದೆ. ಬಿಗ್ ಬಾಸ್ ಒಂದು ವಿಶೇಷ ಕಾರ್ಯಕ್ರಮ. ವ್ಯಕ್ತಿಗಳನ್ನು ಒಂದು ಸ್ಥಳದಲ್ಲಿ ಜೀವನ ಮಾಡುವಂತೆ ಮಾಡಿ ಅವರಿಗೆ ಮಾನಸಿಕ ಮತ್ತು ದೈಹಿಕ ಸವಾಲಿನ ಆಟಗಳ ಟಾಸ್ಕಗಳನ್ನು ಕೊಟ್ಟು ಕಾರ್ಯತಂತ್ರದ ಆಟ ಆಡಿಸುವುದು ಮತ್ತು ಅವುಗಳಿಂದಾಗುವ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಪರಿಣಾಮಗಳನ್ನು ವೀಕ್ಷಿಸುವುದು ಈ ಕಾರ್ಯಕ್ರಮದ ಮನರಂಜನೆಯ ಮುಖ್ಯ ಭಾಗವಾಗಿದೆ.
1.
ಹೌದು ಸ್ವಾಮಿ, ಬಿಗ್ ಬಾಸ್ ! ಗಿಲ್ಲಿ, ನಟ!
2013ರಿಂದ ಕನ್ನಡ ಬಿಗ್ ಬಾಸ್ ಟಿವಿ ಕಾರ್ಯಕ್ರಮ ಕನ್ನಡಿಗರ ನೆಚ್ಚಿನ ಟಿವಿ ಕಾರ್ಯಕ್ರಮಗಳಲ್ಲೊಂದಾಗಿದೆ. ಬಿಗ್ ಬಾಸ್ ಒಂದು ವಿಶೇಷ ಕಾರ್ಯಕ್ರಮ. ವ್ಯಕ್ತಿಗಳನ್ನು ಒಂದು ಸ್ಥಳದಲ್ಲಿ ಜೀವನ ಮಾಡುವಂತೆ ಮಾಡಿ ಅವರಿಗೆ ಮಾನಸಿಕ ಮತ್ತು ದೈಹಿಕ ಸವಾಲಿನ ಆಟಗಳ ಟಾಸ್ಕಗಳನ್ನು ಕೊಟ್ಟು ಕಾರ್ಯತಂತ್ರದ ಆಟ ಆಡಿಸುವುದು ಮತ್ತು ಅವುಗಳಿಂದಾಗುವ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಪರಿಣಾಮಗಳನ್ನು ವೀಕ್ಷಿಸುವುದು ಈ ಕಾರ್ಯಕ್ರಮದ ಮನರಂಜನೆಯ ಮುಖ್ಯ ಭಾಗವಾಗಿದೆ. ಅದನ್ನು ರಿಯಾಲಿಟಿ ಶೋ ಎಂದು ಕರೆಯಲಾಗುತ್ತದೆ. ಆದರೆ ಅದನ್ನು ಮನರಂಜನೆಯ ಭಾಗವಾಗಿ ಕಂಡರೆ ಮಾತ್ರ ಸಾಲದು. ಈ ಕಾರ್ಯಕ್ರಮಗಳು ವ್ಯಕ್ತಿಗಳ ಮೈಂಡ್ ಗೇಮಿಗೆ ಸಂಬಂಧಿಸಿದ ಕಾರ್ಯಕ್ರಮಗಳಾಗಿವೆ. ವ್ಯಕ್ತಿಗಳನ್ನು ಜೀರೋ ಲೆವಲ್ ವಾತಾವರಣದಲ್ಲಿರಿಸಿ ಅವರ ಮಾನಸಿಕ ಸ್ವಭಾವ ಮತ್ತು ದೈಹಿಕ ಕ್ಷಮತೆಗಳನ್ನು ಅಳೆಯುವ ಕಾರ್ಯಕ್ರಮವು ವೀಕ್ಷಕರಲ್ಲಿ ಮನುಷ್ಯನ ನೈಜ ಸ್ವಭಾವಗಳನ್ನು ಪರೀಕ್ಷಿಸುವಂತಹ ಅನೇಕ ಅವಕಾಶಗಳನ್ನು ಒದಗಿಸುತ್ತದೆ.
ಇಲ್ಲಿ ಬರುವ ಎಲ್ಲಾ ವ್ಯಕ್ತಿಗಳ ಆಟಗಳೂ ಸಹಾ ಮನುಷ್ಯನ ಬದುಕುಳಿಯುವ ಸಿದ್ಧಾಂತಕ್ಕೆ ಹೊಂದಿಕೊಂಡಂತೆಯೇ ಇರುತ್ತದೆ. ಒಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳುತ್ತಾನೆ ಅಥವಾ ಜೀವನದ ಅಸ್ತಿತ್ವಕ್ಕಾಗಿ ಹೇಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾನೆ ಎಂಬುದನ್ನು ನೋಡಿ ಕಲಿಯಬಹುದು. ಪ್ರತಿಯೊಂದು ಟಾಸ್ಕ್ ವ್ಯಕ್ತಿಯ ಸಾಮರ್ಥ್ಯವೇನು, ದೌರ್ಭಲ್ಯವೇನು ಎಂಬುದನ್ನು ಕೂಲಂಕುಶ ವಿಮರ್ಶೆಗೆ ಒಳಪಡಿಸುತ್ತದೆ. ವ್ಯಕ್ತಿಗಳು ಜೀವನವನ್ನು ಹೇಗೆ ನಿಭಾಯಿಸುತ್ತಾರೆ ಪರಸ್ಪರ ಹೇಗೆ ವರ್ತಿಸುತ್ತಾರೆ, ಮನುಷ್ಯನ ಪ್ರತಿಕ್ರಿಯಾತ್ಮಕ ಸ್ವಭಾವಗಳಾದ ಕೋಪ, ಅಸೂಯೆ, ದ್ವೇಷ, ಸೇಡು ಮುಂತಾದ ಕೆಲವು ಭಾವನೆಗಳು ವ್ಯಕ್ತಿಗಳಲ್ಲಿ ಹೇಗೆ ಅನಿವಾರ್ಯವಾಗಿ ಹುಟ್ಟಿಕೊಳ್ಳುತ್ತವೆ, ಅವುಗಳು ಎಷ್ಟು ಮುಜುಗರವನ್ನುಂಟುಮಾಡುತ್ತವೆ ಹಾಗೂ ಅವುಗಳನ್ನು ಹೇಗೆ ಸುಧಾರಣೆ ಮಾಡ ಬಹುದಿತ್ತು ಎಂಬ ಹಲವು ಮಾರ್ಗೋಪಾಯಗಳನ್ನು ವೀಕ್ಷಕರರಿಗೆ ಅರ್ಥಮಾಡಿಕೊಳ್ಳಲು ಸಹಾಯಮಾಡುತ್ತದೆ.
ವಿಭಿನ್ನ ಸಂದರ್ಭಗಳಲ್ಲಿ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಕಾರ್ಯತಂತ್ರಗಳಲ್ಲಿ ಒದಗಿಬರುವ ಅವಕಾಶಗಳನ್ನು ಹೇಗೆ ಬಳಸಿಕೊಳ್ಳುತ್ತಾರೆ, ನಕರಾತ್ಮಕ ಯೋಚನೆಗಳನ್ನು ಹೇಗೆ ಸಮರ್ಥಿಸುತ್ತಾರೆ ಮತ್ತು ಅವುಗಳು ಹೇಗೆ ಪ್ರಚಾರ ಪಡೆದುಕೊಳ್ಳುತ್ತದೆ ಎಂಬುದನ್ನು ಪರೀಕ್ಷಿಸುವ ವಿಕಸಿತ ಘಟನೆಗಳು ಈ ರಿಯಾಲಿಟಿ ಶೋಗಳಲ್ಲಿ ನಿರಂತರ ಬರುತ್ತಲೇ ಇರುವುದು ಇಂತಹ ಶೋಗಳ ವೈಶಿಷ್ಟ್ಯತೆಯಾಗಿದೆ.
ಚಿಂತನೆ, ಆಲೋಚನೆ, ಭಾವನೆಗಳನ್ನು ಪ್ರಕ್ಷುಬ್ಧಗೊಳಿಸಿ ತಕ್ಷಣ ನೀಡುವ ಸವಾಲಿಗೆ ಸ್ಪಂಧಿಸುವಂತೆ ವ್ಯಕ್ತಿಯ ಸ್ವಭಾವ ಸಂವೇದನೆಯನ್ನು ರೂಪಗೊಳಿಸುತ್ತದೆ. ಈ ಒತ್ತಡಗಳಿಗೆ ವ್ಯಕ್ತಿ ಮಾತ್ರ ಜವಾಬ್ಧಾರಿಯಾಗಿ ವರ್ತಿಸುತ್ತಿರುತ್ತಾನೆ. ಅಷ್ಟೊಂದು ವ್ಯಕ್ತಿಗಳು ಜೊತೆಯಲ್ಲಿದ್ದರೂ ಸ್ನೇಹಿತರಾಗಿ ಕಂಡರೂ ಪ್ರತಿಯೊಬ್ಬರ ಅಂತರ್ಮನಸ್ಸಿನಲ್ಲಿ ಅವರು ಅಪರಿಚಿತರಾಗಿಯೇ ಕಾಣುತ್ತಾರೆ. ತನ್ನ ಹೊರತು ಇತರರ ವರ್ತನೆ ನಡೆ ನುಡಿ ಗುಣ ಸ್ವಭಾವಗಳನ್ನು ಅನುಮಾನದಿಂದಲೇ ನೋಡುತ್ತಾರೆ! ವಿಚಿತ್ರವಾಗಿ ಪ್ರತಿಕ್ರಿಯಿಸುತ್ತಾರೆ. ಬಿಗ್ ಬಾಸ್ ಒಂದು ಮಾನವನ ಸ್ವಭಾವವನ್ನು ಅಧ್ಯಯನ ಮಾಡಲು ಯೋಗ್ಯವೆನಿಸಿದ ಪ್ರಯೋಗಾಲಯ!
ಅದುದರಿಂದಲೇ ಇದೊಂದು ಮನುಷ್ಯರ ಸ್ವಭಾವ, ವ್ಯಕ್ತಿತ್ವಗಳನ್ನು ಅಧ್ಯಯನ ಮಾಡುವ ಕಾರ್ಯಕ್ರಮವೆಂದು ಈ ರಿಯಾಲಿಟಿ ಶೋವನ್ನು ಪ್ರಶಂಸಿಸಬಹುದು. ಇಲ್ಲಿ ಸ್ಪರ್ಧೆಯಲ್ಲಿ ಗೆಲ್ಲುವುದು ಇತರರೊಂದಿನ ಸಂಬಂಧ ಮತ್ತು ವರ್ತನೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ಬಿಗ್ ಬಾಸ್ ಅನ್ನು ಮನಸ್ಸು ಮತ್ತು ಮೆದುಳಿನ ಸಂಬಂಧ ಮತ್ತು ಅದರ ಚಟುವಟಿಕೆಯನ್ನು ಪರಿಶೀಲನೆಗೊಳಪಡಿಸಲು ಮೀಸಲಾಗಿಸಿರುವ ಕೇಂದ್ರವೆಂದು ಹೇಳಬಹುದಾಗಿದೆ. ಅತೀ ಹೆಚ್ಚು ವೀಕ್ಷಕರನ್ನು ಹೊಂದಿರುವ ಟಿವಿ ಕಾರ್ಯಕ್ರಮವಾಗಿ ಮನರಂಜನಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.
ಕನ್ನಡದ ಬಿಗ್ ಬಾಸ್ ಕಾರ್ಯಕ್ರಮ 2013ರಲ್ಲಿ ಆರಂಭವಾಗಿತ್ತು. ಮೊದಲು ಈ ಕಾರ್ಯಕ್ರಮವನ್ನು ಈ ಟಿವಿಯಲ್ಲಿ ಬಿತ್ತರಿಸಲಾಗುತ್ತಿತ್ತು. ಆವಾಗ್ಗೆ ಈ ಕಾರ್ಯಕ್ರಮಗಳು ಪುಣೆಯ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗುತ್ತಿತ್ತು. ನಂತರ ಈ ಕಾರ್ಯಕ್ರಮವನ್ನು ರಾಮನಗರದ ಬಳಿ ಇರುವ ಇನೊವೇಟಿವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಿಸಲಾಗುತ್ತಿದೆ.
ಹಿಂದೆ ಹಿಂದಿ ಬಿಗ್ ಬಾಸ್ 10ರಲ್ಲಿ ಸ್ವಾಮಿ ಓಂ ಎಂಬ ಸ್ಪರ್ಧಿ ತನ್ನ ಸಹ ಸ್ಪರ್ಧಿಗಳ ಮೇಲೆ ಮೂತ್ರ ವಿಸರ್ಜನೆಯನ್ನು ಸುರಿದಿದ್ದರು! ಅತ್ಯಂತ ಕೆಟ್ಟದಾದ ನಕರಾತ್ಮಕ ಸ್ವಭಾವವನ್ನು ಪ್ರದರ್ಶಿಸಿದ್ದರು.
2011ನೇ ಕನ್ನಡ ಬಿಗ್ ಬಾಸ್ ನಲ್ಲಿ ಹನುಮಂತು ಎಂಬ ಪಕ್ಕಾ ಗ್ರಾಮೀಣ ಪ್ರತಿಭೆ ಬಿಗ್ ಬಾಸಿಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶಿಸಿ ಸ್ವರ್ಧೆಯನ್ನು ಗೆದ್ದುಕೊಂಡ. ತನ್ನ ನೈಜ ಉಡುಗೆ ಪಂಚೆಯಲ್ಲಿಯೇ ಪೂರ್ಣ ಬಿಗ್ ಬಾಸ್ ಪ್ರದರ್ಶನವನ್ನು ನಿಭಾಯಿಸಿದ! ಸಾವಿರಾರು ರೂಪಾಯಿ ಬೆಲೆ ಬಾಳುವ ಕಾಕ್ ಟೈಲ್ ಪೋಷಾಕು, ಉಡುಗೆ ತೊಡುಗೆ ಧಿರಿಸುಗಳ ವೇಷ ಭೂಷಣಗಳಿಂದ ತಮ್ಮ ಸೌಂದರ್ಯ, ಆಕರ್ಷಣೆಯನ್ನು ವೃದ್ಧಿಸಿ ವೀಕ್ಷಕರ ಗಮನ ಸೆಳೆಯುವ ಪ್ರಯತ್ನಿಸುವ ಎಜುಕೇಟೆಡ್ ಕ್ಲಾಸ್ ಸ್ಪರ್ಧಿಗಳ ಮದ್ಯೆ ಈ ಪಕ್ಕಾ ಗ್ರಾಮೀಣ ನಕ್ಷತ್ರ ನೂರು ನೂರ್ಐವತ್ತರ ಪಂಚೆಯಿಂದಲೇ ಜನ ಮನ್ನಣೆಯನ್ನು ಪಡೆದುಕೊಂಡು ಬಿಟ್ಟ. ಎಲ್ಲರೂ ಹೇಳಲೂ ನಾಚಿಕೊಳ್ಳುವ ಕ್ಷುಲ್ಲಕವಾದ ಹೂಸನ್ನು ಬಹಿರಂಗವಾಗಿಯೇ ಬಿಟ್ಟು, ತನಗೆ ನಿಯಂತ್ರಿಸಲು ಸಾಧ್ಯವಿಲ್ಲವೆಂದು ಹೂಸು ಬಿಡುವ ವಿಚಾರವನ್ನು ಬಹಿರಂಗ ಚರ್ಚೆಗೆ ತಂದು ಬಿಟ್ಟ!.
ಈಗ ಬಿಗ್ ಬಾಸ್ 12ರ ಸೃಷ್ಟಿ ಈಗ ಕಲರ್ ಟಿವಿಯಲ್ಲಿ ಪ್ರದರ್ಶಿತವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಂಡ್ಯ ಹುಡುಗ ಗಿಲ್ಲಿ ನಟ ನೆಂಬ ಹಾಸ್ಯನಟನ ಪಾತ್ರ ನಿರ್ವಹಣೆಯಿಂದ ಬಿಗ್ ಬಾಸ್ ಪ್ರದರ್ಶನವು ಸಾರ್ವಜನಿಕ ಸುದ್ಧಿಯಾಗುತ್ತಿದೆ. ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಿಂದಾಗಿ ಕಲರ್ ಟಿವಿಗೆ ಭಾರೀ ಮನ್ಣಣೆಯು ಸಿಕ್ಕಿದೆ. ಅತೀ ಹೆಚ್ಚು ಟಿಆರ್ ಪಿಯನ್ನು ಗಳಿಸಿರುವ ಕಾರ್ಯಕ್ರಮವಾಗಿ ಟಿವಿಯಲ್ಲಿ ಮೂಡಿ ಬರುತ್ತಿದೆ.
ಗಿಲ್ಲಿ ನಟ ಕಾಮಿಡಿ ನಟ. ವಿಷಯಗಳನ್ನು ಕಾಮಿಡಿಯಾಗಿ ಪ್ರತಿಕ್ರಿಯಿಸಿ ವಾತಾವರಣವನ್ನು ಹಾಸ್ಯಮಯಗೊಳಿಸುತ್ತಿದ್ದ. ಆತನು ವೀಕ್ಷಕರ ಮನಸ್ಸನ್ನು ಗಮನದಲ್ಲಿಟ್ಟುಕೊಂಡು ಹೀಗೆ ಕೀಟಲೆಯ ಸನ್ನಿವೇಶವನ್ನು ಸೃಷ್ಟಿಸುತ್ತಿದ್ದನೆಂದು ಈ ಹಿಂದೆಯು ಹೇಳಿಕೊಂಡಿದ್ದ. ಜನ ಸಾಮಾನ್ಯರು ಹಲವರು ಕೆಲಸ ಕಾರ್ಯಗಳಿಂದ ಒತ್ತಡದ ಕೆಲಸ ನಿರ್ವಹಿಸಿ ದಣಿದು ಬಂದವರ ಉಲ್ಲಾಸಕ್ಕಾಗಿ ನಾನು ಕಾಮಿಡಿ ಮಾಡುತ್ತಿರುವುದಾಗಿ ನೇರವಾಗಿ ಹೇಳಿಕೊಂಡಿದ್ದ. ವೀಕ್ಷಕರು ಕೂಡ ಈ ಅಭಿಪ್ರಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇವನಿಗೆ ಅಸಂಖ್ಯಾತ ಅಭಿಮಾನಿ ಬಳಗದ ಬೆಂಬಲವಿದೆ.
ಕಳೆದ ವಾರ ಬಿಗ್ ಬಾಸಿಗೆ ಬೇಟಿನೀಡಿದ ರೆಸಾರ್ಟ್ ಅತಿಥಿಗಳ ಟಾಸ್ಕ್ ಬಹಳಷ್ಟು ವಿಮರ್ಶೆಗೆ ಒಳಗಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದೆ. ವೀಕ್ಷಕರು ಗಿಲ್ಲಿನಟನಿಗೆ ಅವಮಾನವಾಗಿದೆ ಎಂದೇ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ ಬಾಸಿಗೆ ಈಗ ಇದೊಂದು ಪೇಚಿನ ಸಂಗತಿಯಾಗಿದೆ. ಗಿಲ್ಲಿ ನಟನನ್ನು ಸಾಮರ್ಥ್ಯವನ್ನು ದುರ್ಬಲಗೊಳಿಸಲೆಂದೇ ಈ ಅತಿಥಿ ನಟರುಗಳು ಬಂದಿದ್ದಾರೆಂಬುದು ನೆಟ್ಟಿಗರ ಆಕ್ಷೇಪ. ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ ಇದಕ್ಕೆ ಸ್ಪಷ್ಟೀಕರಣ ನೀಡುವ ಪ್ರಯತ್ನವೂ ನಡೆಯಿತು. ಗಿಲ್ಲಿಯು ಅತಿಥಿ ನಟರಾದ ಮಂಜಣ್ಣ ಮತ್ತು ರಜತ್ ಇವರನ್ನು ಬೇಕಂತಲೇ ರೇಗಿಸಿ ಅವಮಾನಿಸಿದ್ದಾನೆ ಎಂಬುದು ವಿವಾದಕ್ಕೆ ಕಾರಣ. ಹಾಗೇ ಹೇಳುವುದಾದರೇ ಗಿಲಿ ನಟನಿಗೂ ಅತಿಥಿ ನಟರುಗಳು ಸಹಾ ಮಿತಿಯನ್ನು ಮೀರಿ ಹಿಯಾಳಿಸುವ ಅವಮಾನಿಸುವ ಪ್ರಯತ್ನವನ್ನು ಮಾಡಿದ್ದಾರೆ. ಈ ಮೂವರೂ ಇದನ್ನು ಹೊರಗಿಟ್ಟು ಪಾತ್ರ ನಿರ್ವಹಿಸಬಹುದಾಗಿತ್ತು.
ಕಿಚ್ಚನ ಪಂಚಾಯಿತಿಯಲ್ಲಿ ಗಿಲ್ಲಿಗೆ ನೀವು ಗೆಸ್ಟಾಗಿ ಹೊಟೇಲಿಗೆ ಹೋದರೆ ಈ ಟ್ರೀಟ್ ಮಾಡಿದರೆ ನೀವು ಒಪ್ಪುತ್ತೀರಾ ಎಂದು ಪ್ರಶ್ನಿಸಲಾಗಿತ್ತು. ಗಿಲ್ಲಿ ತಪ್ಪಾಗಿರುವುದಾಗಿ ಒಪ್ಪಿಕೊಂಡ. ಆದರೆ ಅತಿಥಿಗಳೂ ಸಹಾ ಹೊಟೇಲಿಗೆ ಹೋಗಿ ಹೀಗೆ ಈ ರೀತಿ ವರ್ತಿಸ್ತಾರಾ ಅಂತ ಅತಿಥಿಗಳನ್ನೂ ಸಹಾ ಕೇಳ ಬೇಕಾಗಿತ್ತು. ಅವರೂ ಸಹ ಪಾತ್ರ ನಿರ್ವಹಣೆಯನ್ನು ಸರಿಯಾಗಿ ಮಾಡಲಿಲ್ಲ. ಆದರೆ ಬಿಗ್ ಬಾಸಿಗೆ ಇರುವ ಪೇಚಿನ ಸಮಸ್ಯೆ ಎಂದರೆ ಇಬ್ಬರೂ ತಪ್ಪು ಮಾಡಿದ್ದಾರೆ ಎಂದು ಒಪ್ಪಿಕೊಳ್ಳುವ ಹಾಗಿಲ್ಲ! ಎಕೆಂದರೆ ಇಬ್ಬರೂ ಸಹ ತಪ್ಪು ಮಾಡಿದ್ದಾರೆ ಎಂದು ಒಂದು ವೇಳೆ ಬಿಗ್ ಬಾಸ್ ಹೇಳಿದರೇ ಇಡೀ ಟಾಸ್ಕನ್ನೇ ಬಿಗ್ ಬಾಸ್ ತಪ್ಪಾಗಿ ನೀಡಿದಂತಾಗುತ್ತದೆ! ಹಾಗಂತ ಗಿಲ್ಲಿಯದು ತಪ್ಪು ಎಂದರೆ ಆಟವನ್ನು ನೇರ ನೋಡಿರುವ ವೀಕ್ಷಕರು ಅಷ್ಟು ಸುಲಭಕ್ಕೆ ಸಮ್ಮನಿರಲಾರರು. ಎಗ್ಗಾಮುಗ್ಗ ಬಿಗ್ ಬಾಸನ್ನು ಹುರಿದು ಬಿಡುತ್ತಾರೆ! ಇಡೀ ಎಪಿಸೋಡನ್ನು ನೋಡಿದಾಗ, ಸಹ ಸ್ಪರ್ಧಿ ಕಾವ್ಯ ಶೈವ ಹೇಳಿದಂತೆ ಮೊದಲು ಗಿಲ್ಲಿ ಆರಂಭಿಸಿದ ತಪ್ಪನ್ನು ಅತಿಥಿಗಳು ಟ್ರಿಗರ್ ಮಾಡುತ್ತಲೇ ಕೆಟ್ಟ ಲೆವಲ್ಲಿಗೆ ತೆಗೆದುಕೊಂಡು ಹೋಗಿದ್ದಾರೆ. ಹಾಗಂತ ಬಿಗ್ ಬಾಸಿಗೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ! ಅದಕ್ಕೇ ಇದನ್ನು ಮೈಂಡ್ ಗೇಮ್ ಎಂದು ಹೇಳುವುದು. ನೀಡಿದ ಟಾಸ್ಕ್ ಸಂದರ್ಬೋಚಿತವಾಗಿ ವ್ಯಕ್ತಿಯ ಮನಸ್ಸು ಮೆದುಳುಗಳ ಸಂಯೋಜಿತ ತೀರ್ಮಾನದ ವರ್ತನೆಗಳು ಸನ್ನಿವೇಶಕ್ಕೆ ಹೊಂದಿಕೊಂಡಿರುತ್ತವೆಯೇ ಹೊರತು ನಿಗಧಿತ ಟಾಸ್ಕಿಗೆ ಹೊಂದಿಕೊಂಡಿರದು. ಇದೊಂದು ಡೋಲಾಯಮಾನ ಸನ್ನಿವೇಶ. ಬಿಗ್ ಬಾಸಿನಲ್ಲಿರುವ ಸ್ಪರ್ಧಿಗಳಿಗೂ ಈ ಸನ್ನಿವೇಶಕ್ಕೆ ಹೇಗೆ ಹೊಂದಿಕೊಳ್ಳುವುದು ಎಂಬ ಬಗ್ಗೆ ಗೊಂದಲ ಕಾಡುತ್ತಲೇ ಇದ್ದುದನ್ನು ಎಪಿಸೋಡಿನಲ್ಲಿ ಎದ್ದು ಕಾಣುತ್ತಿತ್ತು. ವ್ಯಕ್ತಿಯ ಆಲೋಚನೆಗಳು, ಭಾವನೆಗಳು, ಪ್ರೇರಣೆಗಳು ಮತ್ತು ಆತ ಸುತ್ತಲಿನ ಪ್ರಪಂಚದೊಂದಿಗೆ ಹೇಗೆ ಸಂವಹನ ನಡೆಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ. ಮನುಷ್ಯನು ವೈಕ್ತಿಕವಾಗಿರುವಾಗ ಹಾಗೂ ಗುಂಪುನಲ್ಲಿರುವಾಗ ಹೇಗೆ ತನ್ನ ನಡವಳಿಕೆಯಲ್ಲಿ ತೋರಿಸುವ ಸಾಮನ್ಯ ತತ್ವ ಮತ್ತು ಅನುಸಂಧಾನಗಳನ್ನು ವೀಕ್ಷಕರು ನೇರವಾಗಿ ಗಮನಿಸಬಹುದಾಗಿದೆ. ಇಲ್ಲಿ ಸ್ಪರ್ಧಿಯೊಬ್ಬನ ಮನಸ್ಸಿನ ಯೋಚನೆ, ಭಾವನೆಗಳು, ಚಿಂತನೆ, ಗ್ರಹಿಕೆ, ಬುದ್ಧಿವಂತಿಕೆ, ಕಲಿಕೆ ಮತ್ತು ಸ್ಮರಣೆಯಂತಹ ಅಂಶಗಳ ಕಾರ್ಯನಿರ್ವಹಣೆಯನ್ನು ಅಧ್ಯಯನ ಮಾಡಬಹುದು ಅಷ್ಟೇ ಅಲ್ಲ ಮನುಷ್ಯರಾಗಿ ಎಲ್ಲಾ ಸ್ವಭಾವಗಳು ಹಾಗೆಯೇ ಇರುತ್ತದೆಯೆಂಬುದನ್ನೂ ಕಲಿಯಬಹುದಾಗಿದೆ. ಮನಸ್ಸುಗಳು ಹಾಗೆಯೇ? ಜೀರೋ ಲೆವಲಿನಲ್ಲಿರುವಾಗ ಸಣ್ಣ ಮಕ್ಕಳ ಮನಸ್ಸಿನಂತಿರುತ್ತದೆ.


