ಸಮಾಧಿ ರಾಜಕಾರಣದ ಎದುರು ಚಿಂತನೆಗಳ ಸಮಾಧಿ
ಸಮಾಧಿಗಳ ರಾಜಕಾರಣದ ಎದುರು ಚಿಂತನೆಗಳ ಸಮಾಧಿ
-------------------------------------------------------------------------------
ಈ ಕೆಲವು ಸಂಗತಿಗಳನ್ನು ಗಮನಿಸಿ.
ರಾಷ್ಟ್ರಕವಿ, ಜ್ಞಾನಪೀಠ ಪುರಸ್ಕೃತ ಸಾಹಿತಿ ಕುವೆಂಪು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹಿರೇಕೊಡಿಗೆ ಗ್ರಾಮದಲ್ಲಿ, ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ, ವೃತ್ತಿ ಸೇರಿದಂತೆ ಸಾರ್ವಜನಿಕ ಬದುಕಿನ ಬಹುಭಾಗ ಕಳೆದಿದ್ದು ಮೈಸೂರಿನಲ್ಲಿ. 1994 ರಲ್ಲಿ ನಿಧನರಾದಾಗ ಅವರ ಕಳೇಬರ (ಉದ್ದೇಶಪೂರ್ವಕವಾಗಿಯೇ ಪಾರ್ಥಿವ ಶರೀರ ಎಂದು ಬಳಸಿಲ್ಲ)ದ ಅಂತ್ಯ ಸಂಸ್ಕಾರ ನಡೆದ ಪೂರ್ವಜರ ಗ್ರಾಮ ಕುಪ್ಪಳಿಯಲ್ಲೇ ಕವಿಶೈಲ ಸ್ಮಾರಕವನ್ನು ಅವರ ಹೆಸರಿನ ಪ್ರತಿಷ್ಠಾನ ನಿರ್ಮಿಸಿತು. ಕವಿಶೈಲ ಸಾಹಿತಿಗಳು, ಪ್ರಗತಿಪರರು, ಯುವ ಬರಹಗಾರರು ಸೇರಿದಂತೆ ನಾಡಿನ ಎಲ್ಲ ಕಡೆಯ ಜನರ 'ಪವಿತ್ರ' ಕ್ಷೇತ್ರವಾಯಿತು. ಓರ್ವ ಸಾಹಿತಿ ಬೆಳೆದ ಪರಿಸರ, ಅವರ ಮೇಲೆ ಗಾಢ ಪ್ರಭಾವ ಬೀರಿದ ಪೂರ್ವಜರಿದ್ದ ಮಲೆನಾಡ ಗ್ರಾಮವೊಂದು ಹೇಗಿದ್ದಿರಬಹುದೆಂದು ನೋಡುವ ಕುತೂಹಲ ಇರುವವರಿಗೆ ಈ ಗ್ರಾಮದಲ್ಲೇ ಸ್ಮಾರಕ ನಿರ್ಮಿಸಿದ್ದು ಸಮರ್ಥನೀಯವೂ ಆಗಿರಬಹುದು.
ಹಾಗೇ ಹೆಸರಾಂತ ಸಾಹಿತಿ, ನಾಟಕಕಾರ, ಚಲನಚಿತ್ರ ಕಲಾವಿದ, ಪ್ರಖರ ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಕೆಲವು ವರ್ಷಗಳ ಹಿಂದೆ ನಿಧನರಾದಾಗ ಅವರ ಕಳೇಬರದಅಂತ್ಯಸಂಸ್ಕಾರವನ್ನು ಯಾವುದೇ ಪ್ರದರ್ಶನ, ಮೆರವಣಿಗೆ,ಧಾರ್ಮಿಕ ವಿಧಿವಿಧಾನ, ಸರ್ಕಾರಿ ಗೌರವಗಳಿಲ್ಲದೇ ಬೆಂಗಳೂರಿನ ಕಲ್ಪಲ್ಲಿ ಸ್ಮಶಾನದಲ್ಲಿ ನೆರವೇರಿಸಲಾಯಿತು. ಆ ಸಂದರ್ಭದಲ್ಲಿ ಅವರು ಬರೆದ ಕೆಲವು ಕೃತಿಗಳ ಆಯ್ದ ಭಾಗಗಳ ಪಠಣವಷ್ಟೇ ನಡೆಯಿತು.ಗಿರೀಶ್ ಕಾರ್ನಾಡರ ಇಚ್ಚೆಯಂತೆ ಅವರ ಕುಟುಂಬ ಸದಸ್ಯರ ಮನವಿ ಮೇರೆಗೆ ಅಂತ್ಯಸಂಸ್ಕಾರ ಸದ್ದುಗದ್ದಲವಿಲ್ಲದೇ ತುಂಬ ಸರಳವಾಗಿ ನಡೆದುಹೋಯಿತು.ಅವರು ಕನ್ನಡನಾಡಿನಲ್ಲಿ ಪಡೆದಿದ್ದ ಜನಪ್ರೀತಿಗೆ, ಸಾಂಸ್ಕೃತಿಕ ವಲಯದಲ್ಲಿ ಅವರಿಗಿದ್ದ ಜಾಗತಿಕ ಪ್ರಭಾವ ಮೊದಲಾದ ಕಾರಣಗಳಿಂದ ಅವರ ಕಳೇಬರದ ಅಂತ್ಯ ಸಂಸ್ಕಾರ ಸರ್ಕಾರಿ ಮರ್ಯಾದೆಯೊಂದಿಗೆ ನಡೆಯಬಹುದಿತ್ತು. ಆದರೆ ಸರಳವಾಗಿ ನಡೆದ ಆ ಅಂತ್ಯ ಸಂಸ್ಕಾರ ಅವರ ಘನತೆ, ಗೌರವದ ಪ್ರತಿಬಿಂಬವಾಗಿತ್ತು. ಯಾವುದೇ ತೋರಿಕೆ ಇಲ್ಲದ ಸೀದಾಸಾದಾ ಮನುಷ್ಯನೊಬ್ಬನ ಅಂತ್ಯಸಂಸ್ಕಾರ ಈ ರೀತಿಯಲ್ಲಿ ನಡೆಯಬೇಕಾದ್ದು ನಿಜದ ಧರ್ಮವಾಗಿತ್ತು.
ಅಷ್ಟೇ ಏಕೆ? ನನ್ನಂಥ ಲಕ್ಷಾಂತರ ಮಂದಿ ಮೇಷ್ಟ್ರು ಎಂದೇ ಪ್ರೀತಿಯಿಂದ ಕರೆಯುತ್ತಿದ್ದ, ಒಂದು ತಲೆಮಾರನ್ನು ಆಧುನಿಕ ಚಿಂತನೆಗಳ ನೆಲೆಯಲ್ಲಿ ರೂಪಿಸಿದ, ಧರ್ಮ ಸಮನ್ವಯದ ಭಾರತದಲ್ಲಿ ಸಹಬಾಳ್ವೆಯ ಅನಿವಾರ್ಯತೆಯನ್ನು ಹೇಳಿಕೊಟ್ಟವರು ಪಿ.ಲಂಕೇಶ್.ಸಾಂಸ್ಕೃತಿಕ ವಲಯದ ಭಟ್ಟಂಗಿತನದ ಅಪಾಯವನ್ನು ಮನವರಿಕೆ ಮಾಡಿಕೊಟ್ಟವರು ಅವರು. ಇಪ್ಪತ್ತೈದು ವರ್ಷಗಳ ಹಿಂದೆ ನಿಧನರಾದಾಗ ಅವರಿಗೆ ಸರ್ಕಾರಿ ಗೌರವ ಸಿಗದಿದ್ದರೂ ಅಪಾರ ಸಂಖ್ಯೆಯ ನಿರೀಕ್ಷೆ ಮೀರಿದ ಜನಮಾನಸದ ಗೌರವ ದೊರೆಯಿತು. ಸರ್ಕಾರವೂ ಅದರ ಬಗ್ಗೆ ಯೋಚಿಸಲಿಲ್ಲ. ಆಗಿನ ಸರ್ಕಾರದ ಬಗ್ಗೆ ಕಟುವಾದ ನಿಲುವು ತಳೆದಿದ್ದ ಲಂಕೇಶರ ನಿಧನದ ನಂತರ ಏನು ಮಾಡಬೇಕೆಂಬ ಬಗ್ಗೆ ಸಹಜವಾಗಿಯೇ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರಿಗೆ ಆಸಕ್ತಿ ಇರಲಿಲ್ಲ. ಲಂಕೇಶರ ತೋಟದಲ್ಲಿ ಅವರ ಕುಟುಂಬದ ಇಚ್ಚೆಯಂತೆ ಧಾರ್ಮಿಕ ವಿಧಿವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿತು. ಕುಟುಂಬದವರೇ ಸಮಾಧಿಯೊಂದನ್ನು ನಿರ್ಮಿಸಿದರು. ಒಡಹುಟ್ಟಿದವರ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ಆಸ್ತಿ ಹಂಚಿಕೆ ನಂತರದ ಅನಗತ್ಯ ಬೆಳವಣಿಗೆಗಳನ್ನು ಸಮಾಧಿ ಕಾಣುವಂತಾಯಿತು.ದೇಶದಲ್ಲಿ ಸೋನಿಯಾಗಾಂಧಿಯ ರಾಜಕೀಯ ಆಗಮನವನ್ನು ಮೊದಲು ಬೆಂಬಲಿಸಿದ್ದ ಲಂಕೇಶ್ ಹೆಸರನ್ನು ಯಾವುದೇ ಸರ್ಕಾರ ಹೋಗಲೀ ಕಾಂಗ್ರೆಸ್ ಸರ್ಕಾರಗಳೂ ಈವರೆಗೂ ಯಾವುದೇ ಒಂದು ರಸ್ತೆಗೂ ಇಡಲಿಲ್ಲ, ಆ ಬಗ್ಗೆ ತಲೆ ಕೆಡಿಸಿಕೊಳ್ಳಲೂ ಇಲ್ಲ.
ಇತ್ತೀಚಿನ ಘಟನೆಯನ್ನೇ ನೆನಪು ಮಾಡಿಕೊಳ್ಳಿ. ತಮ್ಮ ತಾಯಿ ಲೀಲಾವತಿ ನಿಧನರಾಗಿ ವರ್ಷ ತುಂಬುವಷ್ಟರಲ್ಲೇಅವರ ಮಗ ವಿನೋದ್ ರಾಜ್ ಸೋಲದೇವನಹಳ್ಳಿಯ ತಮ್ಮ ಸ್ವಂತ ಜಾಗದಲ್ಲಿ, ಸ್ವಂತ ಖರ್ಚಿನಲ್ಲಿ ಸ್ಮಾರಕ ನಿರ್ಮಿಸಿ ಅದನ್ನು ಲೀಲಾವತಿ ದೇಗುಲ ಎಂದು ಕರೆದರು. ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದೆಯರಲ್ಲಿ ಲೀಲಾವತಿ ಅಗ್ರಸ್ಥಾನದಲ್ಲಿದ್ದವರು. ರಾಜ್ ಕುಮಾರ್ ಅವರೆದುರು ಸರಿಸಮಾನವಾಗಿ ಪ್ರತಿಭೆ ಮೆರೆದವರು. ಮೊದಲು ನಾಯಕಿಯಾಗಿ ವರ್ಷಗಳ ಕಾಲ ಕಾಣಿಸಿಕೊಂಡಿದ್ದ ಲೀಲಾವತಿ ಕ್ರಮೇಣ ತಮ್ಮ ವಯಸ್ಸಿಗೆ ತಕ್ಕಂಥ ಪಾತ್ರಗಳಲ್ಲಿ ಕಾಣಿಸಿಕೊಂಡು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಅಪಾರ ಪ್ರತಿಭೆ ಇದ್ದ ಲೀಲಾವತಿ ಅಸಂಖ್ಯಾತ ಚಿತ್ರಗಳಲ್ಲಿ ಅಭಿನಯಿಸಿ ಚಿತ್ರರಂಗದ ಇತಿಹಾಸದಲ್ಲಿ ತಮ್ಮದೇ ವಿಶಿಷ್ಠ ಅಧ್ಯಾಯವನ್ನು ದಾಖಲಿಸಿದ್ದರು. ಇಂಥ ಮಹಾಕಲಾವಿದೆಗೆ ಪದ್ಮ ಪ್ರಶಸ್ತಿ ಲಭಿಸಿತೋ ಇಲ್ಲವೋ ನೆನಪಾಗುತ್ತಿಲ್ಲ. ರಾಜ್ಯ ಸರ್ಕಾರ ಯಾವ ಪ್ರಶಸ್ತಿ ನೀಡಿತ್ತೋ ನೆಮಪಿಲ್ಲ.ಪ್ರಶಸ್ತಿಗಳನ್ನು ಮೀರಿದ ಪ್ರತಿಭೆ ಲೀಲಾವತಿ ತಮ್ಮ ಪುತ್ರನೊಂದಿಗೆ ಸಾಮಾನ್ಯರಲ್ಲೇ ಸಾಮಾನ್ಯರಂತೆ ಯಾವುದೇ ಪ್ರದರ್ಶನ, ಆಡಂಬರಗಳಿಲ್ಲದೇ ಬದುಕಿದವರು. ಉನ್ನತ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಅರ್ಹರಾಗಿದ್ದರೂ ಅಂಥದ್ದೇನೂ ಪಡೆದಿರುವುದು ನನಗಂತೂ ಗೊತ್ತಿಲ್ಲ. ಅವರು ಮೃತಪಟ್ಟಾಗ ಸರ್ಕಾರವೂ ಸ್ಮಾರಕ ನಿರ್ಮಿಸುವ ಮಾತನಾಡಿದ್ದೂ ನೆನಪಿಲ್ಲ. ಆದರೆ ಲೀಲಾವತಿ ಮತ್ತು ವಿನೋದ್ ರಾಜ್ ಎಂಬ ತಾಯಿ ಮಗನ ಸಂಬಂಧ ಅಪೂರ್ವವಾದದ್ಧು, ಕನ್ನಡ ನೆಲದ ಚಲನಚಿತ್ರ ರಂಗದ ಇತಿಹಾಸ ನೆನಪಿಟ್ಟುಕೊಳ್ಳುವಂಥದ್ದು.ಎಲ್ಲರಿಗೂ
ಮಾದರಿಯಾಗಿರುವ ಸಂಬಂಧ ಅದು.ತಮ್ಮ ತಾಯಿಯ ಸ್ಮಾರಕ ಏಕೆ ನಿರ್ಮಿಸಿಲ್ಲ ಎಂದು ವಿನೋದ್ ರಾಜ್ ಸರ್ಕಾರವನ್ನೂ ಕೇಳಲಿಲ್ಲ. ಇನ್ಯಾರದೋ ಮೂಲಕ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಕೂಗೆಬ್ಬಿಸಲಿಲ್ಲ. ತಮ್ಮದೇ ಜಾಗದಲ್ಲಿ, ತಮ್ಮದೇ ಖರ್ಚಿನಲ್ಲಿ ತಾಯಿಯ ಪ್ರೀತಿ ಸದಾ ಪಸರಿಸುವಂತೆ ದೇಗುಲ ನಿರ್ಮಿಸಿದರು. ಅದನ್ನು ದೇಗುಲ ಎಂದು ಕರೆಯಿರಿ, ಸ್ಮಾರಕ ಎಂದು ಕರೆಯಿರಿ, ಏನೇ ಕರೆದುಕೊಳ್ಳಿ. ಈ ಸ್ಮಾರಕ ವಿನೋದ್ ರಾಜ್ ತಾಯಿಯ ಮೇಲಿರಿಸಿರುವ ಪ್ರೀತಿಯನ್ನಷ್ಟೇ ದಾಖಲಿಸಿಲ್ಲ. ಸರ್ಕಾರವನ್ನೂ ನೆಚ್ಚಿಕೊಳ್ಳದೇ ನಿರ್ಮಾಣಗೊಂಡ ಈ ಸ್ಮಾರಕ ವಿನೋದ್ ರಾಜ್ ಅವರ ಆತ್ಮಗೌರವದ ಪ್ರತೀಕ. ಇದಕ್ಕಾಗಿ ಅವರು ಅಭಿನಂದನಾರ್ಹರು.
ಹಾಜಿ ಉಸ್ಮಾನ್ ಸೇಠ್ ಹೆಸರು ಎಷ್ಟು ಮಂದಿ ಕನ್ನಡಿಗರಿಗೆ ಗೊತ್ತಿದೆ ಎಂದು ನನಗಂತೂ ತಿಳಿದಿಲ್ಲ. ಕಂಟೋನ್ಮೆಂಟ್ ಪ್ರದೇಶದಲ್ಲಿದ್ದ ಆಗರ್ಭ ಶ್ರೀಮಂತ ಕುಟುಂಬ ಅವರದು.ಬಹುದೊಡ್ಡ ಗುತ್ತಿಗೆದಾರರಾಗಿದ್ದರು. ಅವರಕ್ಕಳ ಹೆಸರಲ್ಲಿ ಅದೆಷ್ಟೋ ಬಂಗಲೆಗಳನ್ನು ನಿರ್ಮಿಸಿದ್ದರು. ಸೇಂಟ್ ಮಾರ್ಕ್ಸ್ ರಸ್ತಯಲ್ಲಿದ್ದ ಕ್ಯಾಶ್ ಫಾರ್ಮಸಿ ಒಳಗೊಂಡಿದ್ದ ಕ್ಯಾಶ್ ಬಝಾರ್ ಆ ದಿನಗಳ ಅತಿ ದೊಡ್ಡ ಸೂಪರ್ ಮಾರ್ಕೆಟ್ ಆಗಿತ್ತು. ಅದನ್ನು ಉಸ್ಮಾನ್ ಸೇಠ್ ಅವರ ತಾತ ನಿರ್ಮಿಸಿದ್ದು. ಅಲ್ಲಿ ಮಾರಾಟವಾಗುತ್ರಿದ್ದ ವಸ್ತುಗಳಲ್ಲಿ ಏನಿತ್ತು ಅನ್ನುವುದಕ್ಕಿಂತ ಏನಿರಲಿಲ್ಲ ಎಂದು ಹೇಳುವುದು ಕಷ್ಟ. ಯುರೋಪಿನ ವಿವಿಧೆಡೆಗಳಿಂದ ತರಿಸಿದ ವಸ್ತುಗಳು ಅಲ್ಲಿ ಮಾರಾಟವಾಗುತ್ತಿತ್ತು. ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಆ ಸಮಯದಲ್ಲಿ ನಿರ್ಮಾಣವಾದ ಶಾಲೆಗಳಲ್ಲಿ ಬಹುತೇಕ ಸೇಠ್ ಕುಟುಂಬದ ದಾನದ ನೆರವಿನಿಂದಲೇ ತಲೆ ಎತ್ತಿದ್ದವು. ಸ್ವತಃ ಸೇಠ್ ಅವರೇ ಸ್ವತಃ ಇಂಡಿಯನ್ ನ್ಯಾಷನಲ್ ಸ್ಕೂಲ್ ಹೆಸರಿನ ಶಾಲೆಯೊಂದನ್ನು ಆರಂಭಿಸಿದ್ದರು.ಕೇವಲ ಇಂಗ್ಲಿಷ್ ಚಲನಚಿತ್ರಗಳನ್ನಷ್ಟೇ ಪ್ರದರ್ಶನ ಮಾಡುತ್ತಿದ್ದ ಇಂಪೀರಿಯಲ್ ಥಿಯೇಟರ್ ನ ಮಾಲೀಕರಾಗಿದ್ದವರು ಇದೇ ಉಸ್ಮಾನ್ ಸೇಠ್. ಆದರೆ ಮಹಾತ್ಮ ಗಾಂಧಿ ಕರೆ ನೀಡಿದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಮದ್ರಾಸ್ ಮತ್ತು ಕರ್ನಾಟಕ ಖಿಲಾಫತ್ ಸಮಿತಿಯ ಅಧ್ಯಕ್ಷರಾಗಿದ್ದ ಅವರು 1919 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ವಿದೇಶಿ ವಸ್ತುಗಳ ವಸ್ತುಗಳ ಬಹಿಷ್ಕಾರ ಕರೆಗೆ ಸ್ಪಂದಿಸಿ ತಮ್ಮ ಕ್ಯಾಶ್ ಬಝಾರ್ ನಲ್ಲಿದ್ದ ಎಲ್ಲ ವಿದೇಶಿ ವಸ್ತುಗಳನ್ನು ಸುಟ್ಟು ಹಾಕಿದ್ದರು. ಸ್ವಾತಂತ್ರ್ಯ ಹೋರಾಟದ ಖರ್ಷಿಗಾಗಿ ತಮ್ಮೆಲ್ಲ ಆಸ್ತಿಯನ್ನು ದಾನ ಮಾಡಿದರು. 1928 ರಲ್ಲಿ ಅವರು ನಿಧನರಾದಾಗ ಪುಟ್ಟ ಬಾಡಿಗೆ ಮನೆಯೊಂದರಲ್ಲಿ ನೆಲಸಿದ್ದರು. ಅವರ ಕಳೇಬರದ ಅಂತ್ಯ ಸಂಸ್ಕಾರಕ್ಕಾಗಿ ಶಿವಾಜಿನಗರದ ಜುಮ್ಮಾ ಮಸೀದಿಯಿಂದ ಜಯಮಹಲ್ ಸ್ಮಶಾನಕ್ಕೆ ಕೊಂಡೊಯ್ಯುತ್ತಿದ್ದಾಗ ಸುಮಾರು ಐದು ಕಿಲೋಮೀಟರ್ ಉದ್ದ ಜನಸಂದಣಿ ಸೇರಿತ್ತು ಎಂದು ಆಗ ಕಂಡವರು ಹೇಳುತ್ತಾರೆ. ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಮಸ್ತ ಆಸ್ತಿಯನ್ನೂ ದಾನಮಾಡಿ ಬರಿಗೈ ದಾಸನಾಗಿಸ್ದ ಅವರು ಗಳಿಸಿದ್ದು ಜನಪ್ರಿತಿಯನ್ನು. ಯಾವುದೇ ಸರ್ಕಾರ ಅವರನ್ನು ಸ್ಮರಿಸುವುದಾಗಲೀ ಅವರ ಹೆಸರು ಶಾಶ್ವತವಾಗಿ ಉಳಿಯುವಂಥ ಯಾವುದೇ ಕಾರ್ಯಕ್ರಮವನ್ನೂ ರೂಪಿಸಲಿಲ್ಲ.
ನಾನು ಹುಟ್ಟಿ ಬೆಳೆದ ಮಡಿಕೇರಿಯಲ್ಲೇ ನೋಡಿ. ಪ್ರವಾಸಿಗರ ನೆಚ್ಚಿನ ಸ್ಥಳ ರಾಜಾಸೀಟಿನಲ್ಲಿರುವ ಉದ್ಯಾನದ ಜಾಗ ದಶಕಗಳ ಹಿಂದೆ ಇಂಗ್ಲಿಷರ ಸ್ಮಶಾನವಾಗಿತ್ತು. ಅಲ್ಲಿದ್ದ ಸಮಾಧಿಗಳ ಬಳಿ ನಾವು ಶಾಲಾ ಬಿಡುವಿನ ಸಮಯದಲ್ಲಿ ಆಟವಾಡುತ್ತಿದ್ದೆವು. ಕ್ರಮೇಣ ಅಲ್ಲಿದ್ದ ಸಮಾಧಿಗಳನ್ನು ತೆರವುಗೊಳಿಸಿ ಅವುಗಳನ್ನು ಕಾಲೇಜು ರಸ್ತೆ ಬಳಿಗೆ ಸ್ಥಳಾಂತರಿಸಲಾಯಿತು. ಕೊಡಗಿ ರಾಜರ ಸಮಾಧಿಗಳು ಕೂಡ ಮಡಿಕೇರಿಯಲ್ಲಿವೆ. ಪುರಾತತ್ವ ಇಲಾಖೆ ಜವಾಬ್ದಾರಿಯಲ್ಲಿದ್ದ ಈ ಗದ್ದಿಗೆಯನ್ನು ವರ್ಷಗಳ ಕಾಲ ಸರ್ಕಾರ ನಿರ್ಲಕ್ಷಿಸಿತ್ತು. ಅಲ್ಲಿನ ಕಿಟಕಿಗಳಲ್ಲಿದ್ದ ಪಂಚಲೋಹದ ಸರಳುಗಳಲ್ಲಿ ಅನೇಕ ಕಳುವಾಗಿದ್ದವು. ಇತ್ತೀಚಿನ ವರ್ಷಗಳಲ್ಲಿ ಅದನ್ನು ರಕ್ಷಿಸುವ ಕಾರ್ಯ ನಡೆದಿದೆ.
ಅಂದ ಹಾಗೆ ಕನ್ನಡದ ವರನಟ ರಾಜ್ ಕುಮಾರ್ ಅವರ ನಿಧನದ ನಂತರ ಅವರ ಸ್ಮಾರಕವನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿ ನಿರ್ಮಿಸಲಾಗಿದೆ. ಅಷ್ಟಕ್ಕೂ ನಿಲ್ಲದೇ ಅವರ ಪತ್ನಿ ಪಾರ್ವತಮ್ಮ, ಅವರ ಮಗ ಪುನೀತ್ ಸ್ಮಾರಕವನ್ನೂ ಇಲ್ಲೇ ನಿರ್ಮಿಸಲಾಗಿದೆ. ಒಂದೇ ಕುಟುಂಬದ ಮೂವರಲ್ಲದೇ ಷಿತ್ರನಟ ಅಂಬರೀಶ್ ಸ್ಮಾರಕವೂ ಇಲ್ಲೇ ನಿರ್ಮಾಣವಾಗಿದೆ. ಗಲ್ಲಿ ಗಲ್ಲಿಗಳಲ್ಲೂ ರಾಜ್ ಕುಮಾರ್ ಮತ್ತು ಪುನೀತ್ ಪುತ್ಥಳಿಗಳೂ ತಲೆ ಎತ್ತಿವೆ. ಜನಪ್ರೀತಿಯಿಂದಲೇ ಹೀಗೆಲ್ಲ ನಡೆದಿರಬಹುದು ಎಂದು ಒಪ್ಪಿಕೊಳ್ಳೋಣ.
ಅದಿರಲಿ. ಒಂದು ಮಾಹಿತಿಯಂತೆ ಸುಮಾರು ಐನೂರು ವರ್ಷಗಳ ಹಿಂದೆ ಬದುಕಿದ್ದ ಜಗದ್ವಿಖ್ಯಾತ ಸಾಹಿತಿ ಷೇಕ್ಸ್ ಪಿಯರ್ 1616 ರ ಏಪ್ರಿಲ್ 23 ರಂದು ತಮ್ಮ 52ನೇ ಜನ್ಮದಿನದಂದು ನಿಧನರಾದರು. ವಿಚಿತ್ರ ಎಂದರೆ ಇಂಗ್ಲೆಂಡ್ ನ ಸ್ಟ್ರಾಟ್ ಫರ್ಡ್ ನಲ್ಲಿರುವ ಹೋಲಿ ಟ್ರಿನಿಟಿ ಚರ್ಚ್ ನ ಒಳಭಾಗದಲ್ಲಿ ಷೇಕ್ಸ್ ಪಿಯರ್ ಸಮಾಧಿ ಇದೆ. ಈ ಸಮಾಧಿಯ ಶಿಲಾಶಾಸನದಲ್ಲಿ ಅಚ್ಚರಿ ಹುಟ್ಟಿಸುವ ವಾಕ್ಯವೊಂದಿದೆಯಂತೆ.ಯೇಸುವಿನ ನಿಜವಾದ ಅನುಯಾಯಿ ಈ ಸಮಾಧಿ ಅಗೆಯುವುದನ್ನು ಸಹಿಸಬಾರದು. ಇಲ್ಲಿನ ಕಲ್ಲುಗಳನ್ನು ಉಳಿಸುವವನು ಧನ್ಯನಾಗುತ್ತಾನೆ. ಅವುಗಳನ್ನು ಎತ್ತಿ ಹಾಕುವವನು ಶಾಪಗ್ರಸ್ತನಾಗುತ್ತಾನೆ ಎನ್ನುವರ್ಥದ ಮಾತುಗಳಿವೆಯಂತೆ. ಷೇಕ್ಸ್ ಪಿಯರ್ ಕಾಲಘಟ್ಟದಲ್ಲಿ ಐತಿಹಾಸಿಕ ಮಹತ್ವದ ಅವಶೇಷಗಳನ್ನು ಕದ್ದೊಯ್ಯುತ್ತಿದ್ದ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಮಾತುಗಳನ್ನು ಬರೆಸಲಾಗಿದೆ ಎನ್ನಲಾಗುತ್ತದೆ. ಷೇಕ್ಸ್ ಪಿಯರ್ ಮತ್ತು ಆತನ ಕುಟುಂಬದ ಕೆಲವು ಸದಸ್ಯರ ಸಮಾಧಿ ಹೊರತುಪಡಿಸಿದರೆ
ಜಗತ್ತಿನ ಯಾವುದೇ ಚರ್ಚ್ ನ ಒಳಭಾಗದಲ್ಲಿ ಇನ್ಯಾರದೇ ಸಮಾಧಿ ನಿರ್ಮಿಸಿರುವ ಉದಾಹರಣೆ ಇಲ್ಲ. ಷೇಕ್ಸ್ ಪಿಯರ್ ತಾವೊಬ್ಬ ಮುಖ್ಯ ಲೇಖಕ ಎಂಬ ಅರಿವಿದ್ದೇ ತಮ್ಮ ಸಾವಿನ ಮುನ್ನವೇ ಚರ್ಚ್ ಜತೆ ಮಾಡಿಕೊಂಡಿದ್ದ ಒಪ್ಪಂದದಂತೆ ಈ ಸಮಾಧಿ ನಿರ್ಮಾಣವಾಯಿತೆಂದು ಹೇಳುತ್ತಾರೆ.
ಮಹಾತ್ಮ ಗಾಂಧಿ, ಜವಹರದ ಲಾಲ್ ನೆಹರೂ, ಇಂದಿರಾಗಾಂಧಿ ಸೇರಿದಂತೆ ಜನಮಾನಸದಲ್ಲಿ ನೆಲೆ ನಿಂತ ಮಹಾಮಹಿಮರ ಸ್ಮಾರಕಗಳನ್ನು ಜಗತ್ತಿನ ವಿವಿಧ ದೇಶಗಳಲ್ಲಿ ಕಾಣಬಹುದಾಗಿದೆ. ಸದ್ದಾಂ ಹುಸೇನ್ ನಂಥ ಇನ್ನು ಕೆಲವರು ಬದುಕಿರುವಾಗಲೇ ತಮ್ಮ ಪ್ರತಿಮೆ ಪ್ರತಿಷ್ಠಾಪಿಸುವ ಹುಚ್ಚು ಹಿಡಿಸಿಕೊಂಡಿರುವುದನ್ನೂ ಕಂಡಿದ್ದೇವೆ. ಕಲಾವಿದನೋ, ಸಾಹಿತಿಯೋ ಮೃತಪಟ್ಟರೆ ಅವರ ಸ್ಮಾರಕಗಳು ನಿರ್ಮಾಣವಾಗಿರುವುದೂ ನಿಮಗೆ ಗೊತ್ತು. ಪ್ರಭಾವಿ ಕುಟುಂಬಗಳು ಸರ್ಕಾರವೇ ಸ್ಮಾರಕ ನಿರ್ಮಿಸುವಂತೆ ಕಣ್ಸನ್ನೆಯಲ್ಲೇ ಆದೇಶ ಕೊಟ್ಟು ಉದ್ದೇಶ ಈಡೇರಿಸಿಕೊಳ್ಳುವುದೂ ಇದೆ. ಅವರ ಸ್ಮಾರಕ ಇದೆ, ನಮ್ಮವರು ಮೃತಪಟ್ಟಾಗ ಸ್ಮಾರಕ ನಿರ್ಮಿಸುವುದಕ್ಕೆ ಸಮಸ್ಯೆ ಏನು, ವಿವಾದ ಯಾಕೆ ಎಂದು ಪ್ರಶ್ನಿಸಿದವರೂ ಇದ್ದಾರೆ.
ಇದನ್ನೆಲ್ಲ ಯಾಕೆ ಹೇಳುತ್ರಿದ್ದೇನೆ ಎಂದು ನಿಮಗೆ ಅರ್ಥವಾಗಿರಬಹುದು. ಚಲನಚಿತ್ರ ನಟ ವಿಷ್ಣುವರ್ಧನ್ ನಿಧನರಾದಾಗ ಅವರ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿ ನಡೆಸಲಾಗಿತ್ತು. ಈ ಜಾಗದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸ್ಮಾರಕವನ್ನು ರಾತ್ರೋರಾತ್ರಿ ನೆಲಸಮ ಮಾಡಲಾಗಿದೆಯೆಂದೂ ವಿಷ್ಣುವರ್ಧನ್ ಅಭಿಮಾನಿಗಳು ಇದರಿಂದ ಕಣ್ಣೀರಿಟ್ಟರೆಂದೂ, ಚಿತ್ರನಟರು ಆಕ್ರೋಶ ವ್ಯಕ್ತಪಡಿಸಿದ್ದಾರೆಂದೂ ಒಂದೆರಡು ದಿನಗಳ ಹಿಂದೆ ವರದಿಯಾಗಿತ್ತು. ಒಂದಿಬ್ಬರು ನಟರು ಅಸಮಾಧಾನ ವ್ಯಕ್ತಪಡಿಸಿದ್ದನ್ನೂ ನಾನು ಪತ್ರಿಕೆಗಳಲ್ಲಿ ಓದಿದ್ದೇನೆ. ವಿಷ್ಣುವರ್ಧನ್ ನಿಧನರಾಗಿ ಹದಿನಾರು ವರ್ಷಗಳೇ ಕಳೆದಿವೆ. ಆದರೆ ರಾಜ್ ಕುಮಾರ್ ನಂತರ ಅವರಷ್ಟಲ್ಲದಿದ್ದರೂ ಒಂದು ವಿಶೇಷ ಸ್ಥಾನವನ್ನು ವಿಷ್ಣುವರ್ಧನ್ ಗಳಿಸಿದ್ದಾರೆ.ಅವರ ಅನೇಕ ಜನಪ್ರಿಯ ಚಲನಚಿತ್ರಗಳೂ ಜನಮನ್ನಣೆ ಗಳಿಸಿವೆ. ಒಂದು ವರ್ಗದ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ. ಹೀಗಿದ್ದೂ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬ ತಾರತಮ್ಯ ಯಾಕಾಗಿದೆ? ಇದು ಪ್ರಶ್ನಿಸಬೇಕಾದದ್ದೇ. ರಾಜ್ ಕುಮಾರ್ ಕುಟುಂಬದ ಮೂವರಿಗೂ ತಕ್ಷಣವೇ ಸಿಕ್ಕ ಗೌರವ ವಿಷ್ಣುವರ್ಧನ್ ಗೆ ಯಾಕೆ ಸಿಗಲಿಲ್ಲ? ಮೇಲ್ನೋಟಕ್ಕೆ ಇದು ತಾರತಮ್ಯ ಅನ್ನಿಸದೇ ಇರಲಾರದು. ಆದರೆ ಅಭಿಮಾನ್ ಸ್ಟುಡಿಯೋ ಇರುವ ಜಾಗ ಖಾಸಗಿಯಾದದ್ದು. ಪ್ರತಿಭಾವಂತ ಕಲಾವಿದ, ಬಾಲಣ್ಣ ಎಂದೇ ಖ್ಯಾತರಾಗಿದ್ದ ಟಿ.ಎನ್.ಬಾಲಕೃಷ್ಣ ಅವರಿಗೆ ಸೇರಿದ ಆಸ್ತಿ ಇದು. ಅವರ ಮರಣಾ ನಂತರ ಕುಟುಂಬ ಸದಸ್ಯರಲ್ಕಿನ ಭಿನ್ನಾಭಿಪ್ರಾಯಗಳಿಂದ ಆಸ್ತಿ ಹಂಚಿಕೆ ಚಿಷಯ ನ್ಯಾಯಾಲಯದಲ್ಲಿದೆ. ಇಂಥಾ ಒಂದು ಖಾಸಗಿ ಸ್ಥಳದಲ್ಲಿ ವಿಷ್ಣುವರ್ಧನ್ ಕಳೇಬರದ ಅಂತ್ಯಸಂಸ್ಕಾರ ಯಾಕೆ ನಡೆಸಲಾಯಿತು? ಇದಕ್ಕೆ ಅನುಮತಿ ಕೊಟ್ಟವರು ಯಾರು? ಇಲ್ಲೇ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಬೇಕೆನ್ನುವ ಹಠ ಏಕೆ? ಅವರ ಕುಟುಂಬದ ಸದಸ್ಯರು ಕಂಠೀರವ ಸ್ಟುಡಿಯೋ ಆವರಣದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಬಾರದೆಂದು
ಸರ್ಕಾರವನ್ನೇನಾದರೂ ಕೇಳಿಕೊಂಡಿದ್ದರೇ? ಹಾಗಿದ್ದರೆ ಯಾಕೆ? ಬೇರೊಂದು ಸ್ಥಳದಲ್ಲಿ ಸ್ಮಾರಕ ನಿರ್ಮಿಸಬೇಕು ಎನ್ನುವ ಉದ್ದೇಶ ಅವರಿಗಿದ್ದಿದ್ದರೆ ಆ ಜಾಗ ಖರೀದಿಸಿ ಅವರೇ ಸ್ಮಾರಕ ನಿರ್ಮಾಣಕ್ಕೆ ಮುಂದಾಗಬಹುದಿತ್ತಲ್ಲ? ಇಂಥೆಲ್ಲ ಪ್ರಶ್ನೆಗಳು ಕೆಲವರನ್ನಾದರೂ ಕಾಡದೇ ಇರದು. ವಿಷ್ಣು ನಿಧನರಾದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಆ ಸಮಯದಲ್ಲೇ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಹತ್ತು ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ಘೋಷಿಸಿ ಮೊಲೊದಲ ಕಂತಿನಲ್ಲಿ ಐದು ಕೋಟಿ ರೂ. ಬಿಡುಗಡೆ ಮಾಡಿದ್ದರು. ಈ ಮಧ್ಯೆ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಸಾಧದತವಿಲ್ಲವೆಂದರಿತ ವಿಷ್ಣು ಕುಟುಂಬ ಸದಸ್ಯರು ಮೈಸೂರಿನಲ್ಲಿ ಜಾಗವೊಂದನ್ನು ಖರೀದಿಸಿ ಸ್ಮಾರಕ ನಿರ್ಮಾಣ ಮಾಡಿದ್ದಾರಂತೆ. ಹೀಗಿದ್ದ ಮೇಲೆ ಬೆಂಗಳೂರಿನಲ್ಲೂ ಇನ್ನೊಂದು ಸ್ಮಾರಕ ಇರಬೇಕೆಂದು ಬಯಸುವುದು ಎಷ್ಟು ಸರಿ? ಅದೂ ಇನ್ನೊಬ್ಬರಿಗೆ ಸೇರಿದ ಖಾಸಗಿ ಜಾಗದಲ್ಲಿಯೇ ನಿರ್ಮಾಣವಾಗಬೇಕೆಂದು ಬಯಸುವುದು ಅನೈತಿಕವೂ ಹೌದು, ಕಾನೂನುಬಾಹಿರವೂ ಹೌದು.ಇಷ್ಟರ ನಡುವೆಯೂ ಬನಶಂಕರಿ ದೇವಾಲಯದಿಂದ ಕೆಂಗೇರಿವರೆಗಿನ ಅತಿ ಉದ್ದದ ಹಲವು ರಸ್ತೆಗಳ ಜೋಡಣೆ ಇರುವ ಮಾರ್ಗಕ್ಕೆ ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಿಸಿಕೊಳ್ಳುವಲ್ಲಿ ವಿಷ್ಣು ಕುಟುಂಬ ಯಶಸ್ವಿಯಾಗಿದೆ.ಇನ್ಯಾರದೋ ಪ್ರಭಾವದಿಂದ ಕಂಠೀರವ ಸ್ಟೇಡಿಯಂ ಆವರಣದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗದೇ ಇದ್ದಿದ್ದರೆ ಅದು ಅಪರಾಧ. ಅಥವಾ ಸರ್ಕಾರದ ನಿರ್ಧಾರವನ್ನೂ ಒಪ್ಪದೇ ಅಭಿಮಾನ್‌ಸ್ಟುಡಿಯೋ ಆವರಣದಲ್ಲೇ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಲೇ ಬೇಕೆಂದು ಅವರ ಕುಟುಂಬ ಬಯಸಿದ್ದರೆ ಅದು ತಮ್ಮ ಮಾತೇ ನಡೆಯಬೇಕೆಂಬ ಒತ್ತಡ ತಂತ್ರ.
ಅಷ್ಟಕ್ಕೂ ಸ್ಮಾರಕಗಳು ಸಮಾಧಿಗಳು ಯಾಕೆ ಬೇಕು? ಇಂಥ ಮಹಾನ್ ವ್ಯಕ್ತಿಯೊಬ್ಬರು ನಮ್ಮನಡುವೆ ಇದ್ದರು ಎಂಬ ಐತಿಹಾಸಿಕ ತಿಳಿವಳಿಕೆ ನೀಡುವ ಸಲುವಾಗಿ ಬೇಕು ಎಂಬ ಮಾತನ್ನೇ ಒಪ್ಪಿಕೊಳ್ಳೋಣ. ಆದರೆ ಪ್ರಭಾವ ಬೀರಿ, ಪರೋಕ್ಷವಾಗಿ ಸರ್ಕಾರವನ್ನೇ ಬ್ಲ್ಯಾಕ್ ಮೇಲ್ ಮಾಡಿ ಸ್ಮಾರಕ ನಿರ್ಮಿಸಲೇಬೇಕೆಂಬ ಹಠ ಯಾರಿಗಾದರೂ ಯಾಕೆ ಬೇಕು? ತಮ್ಮ ಕುಟುಂಬದ ಪ್ರಭಾವದ ಬೇಳೆ ಬೇಯಿಸಿಕೊಳ್ಳುವ ಹಿನ್ನೆಲೆಯಲ್ಲೇ ಇಂಥ ಹಠ ಹುಟ್ಟಿಕೊಳ್ಳುತ್ತದೆ. ಇಂಥ ವಿಚಾರಗಳಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟವರ ಕುಟುಂಬಗಳು ಪಾರದರ್ಶಕವಾಗಿದ್ದರೆ ಯಾವುದೇ ರೀತಿಯಲ್ಲಿ ಅನುಮಾನ ಹುಟ್ಟುವುದು ಸಾಧ್ಯವಿಲ್ಲ. ಇರುವುದೊಂದೇ ಭೂಮಿ. ಭೂಮಿಯೇನೂ ಬೆಳೆಯುತ್ತಾ ಹೋಗುವುದಿಲ್ಲ. ಆದರೆ ಜನಸಂಖ್ಯೆ ಏರಿಕೆ ವೇಗ ಗಾಳಿ, ಬೆಳಕು ಮತ್ತು ಸದ್ದಿಗಿಂತ ಹೆಚ್ಷಾಗಿದೆ. ಹೆಣ ಹೂಳುವ ಪದ್ಧತಿ ಇರುವ ಎಷ್ಟೋ ಸಮುದಾಯಗಳ ಸ್ಮಶಾನಗಳಲ್ಲಿ ಶವಸಂಸ್ಕಾರಕ್ಕೆ ಜಾಗವನ್ನು ಮುಂಗಡ ಕಾಯ್ದಿರಿಸುವ ಅನಿವಾರ್ಯತೆಯೂ ಎದುರಾಗಿರಬಹುದು.ಸುಡುವ ಅಂತ್ಯ ಸಂಸ್ಕಾರ ಅನುಸರಿಸುವ ಸಮುದಾಯಗಳಲ್ಲಿ ಜಾಗದ ಸಮಸ್ಯೆ ಬರುವುದಿಲ್ಲ. ಆದರೆ ಆ ಪ್ರಶ್ನೆ ಉದ್ಭವಿಸುತ್ತಿರುವುದು ಇಂಥ ಸಮುದಾಯಗಳ ಮಹೋನ್ನತ ವ್ಯಕ್ತಿಗಳ ಸಾವಿನ ನಂತರವಷ್ಟೇ. ಹಿಂದುಳಿದ ವರ್ಗದವರ ದನಿಯಾಗಿದ್ದ ದೇವರಾಜ ಅರಸು ಅವರ ಅಂತ್ಯ ಸಂಸ್ಕಾರ ನಡೆದ ಅವರ ಹುಟ್ಟೂರು ಕಲ್ಲಳ್ಳಿಗೆ ಎಷ್ಟು ಮಂದಿ ಭೇಟಿ ನೀಡಿ ಗೌರವ ನಮನ ಸಲ್ಕಿಸುತ್ತಾರೋ ಗೊತ್ತಿಲ್ಲ. ಆದರೆ ಅವರ ಹೆಸರಲ್ಲಿರುವ ರಸ್ತೆ, ನಿಗಮ, ಪ್ರತಿಮೆಗಳು ಅವರನ್ನು ನೆನಪಿಸುತ್ತವೆ. ಮಹಾಮಹಿಮರ ವ್ಯಕ್ತಿತ್ವ ಮತ್ತು ಅವರ ಚಿಂತನೆಗಳು ಸ್ಮಾರಕ ಅಥವಾ ಪ್ರತಿಮೆಗಳಿಗಿಂತ ಮುಖ್ಯ. ಕುವೆಂಪು ಅವರ ಹೆಸರನ್ನು ಗುತ್ತಿಗೆ ಪಡೆದಂತೆ ವರ್ತಿಸುವ ಒಕ್ಕಲಿಗ ಸಮುದಾಯದ ಪ್ರಭಾವಿಗಳು ವಿಶ್ವಮಾನವ ಪ್ರಜ್ಞೆಗಿಂತ ಜಾತಿ ಸಂಕುಚಿತ ಕೊಚ್ಚೆಯಲ್ಲೇ ವ್ಯವಹಾರಕ್ಕೆ ಮಹತ್ವ ನೀಡಿದ್ದಾರೆ. ರಾಜ್ ಕುಮಾರ್ ಅವರ ಸರಳತೆ, ಸಜ್ಜನಿಕೆ ಜನಸಮುದಾಯದ ಮೇಲೆ ಪ್ರಭಾವ ಬೀರಬೇಕಾಗಿತ್ತು. ಆದರೆ ಸ್ಮಾರಕಗಳ ಪೂಜೆಯ ಮಟ್ಟದಲ್ಲೇ ಅದೆಲ್ಲ ನಿಂತ ನೀರಾಗಿದೆ. ಲಂಕೇಶರ ಧರ್ಮಸಮನ್ವಯತೆಯ ಆಶಯ ಜನಸಮುದಾಯದ ಆಲೋಚನೆಯನ್ನು ಸರಿದಾರಿಯಲ್ಲಿ ಕೊಂಡೊಯ್ಯಬೇಕೇ ಹೊರತು ಅವರ ಸ್ಮಾರಕದ ಪೂಜೆಗೆ ಸೀಮಿತವಾಗಬಾರದು.ಹಾಗೇ ಯಾರೇ ಮಹಾನ್ ವ್ಯಕ್ತಿಯ ಚಿಂತನೆ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೇ ಹೊರತು ಸ್ಮಾರಕದ ಪ್ರದರ್ಶನಕ್ಕಲ್ಲ.ದುರಂತ ಎಂದರೆ ಮಹಾಮಹಿಮರ ಚಿಂತನೆಗಳು ಸಮಾಧಿಯಾಗುತ್ತಿದ್ದರೆ ಕಣ್ಊಕುಕ್ಕುವ ಭಾರೀ ಖರ್ಚಿನ ಸಮಾಧಿಗಳು ಜನಸಮುದಾಯದ ಆಲೋಚನೆಯ ದಿಕ್ಕನ್ನೇ ಬದಲಿಸುತ್ತಿವೆ. ಇಂಥವರ ನಡುವೆ
ರಾಜ್ಯದ ಸುಮಾರು ಏಳು ಸಾವಿರಕ್ಕೂ ಹೆಚ್ಚು ಗ್ರಾಮಗಳಲ್ಲಿ ಸ್ಮಶಾನಗಳೇ ಇಲ್ಲ. ಈ ಗ್ರಾಮಗಳಲ್ಲಿನಿರ್ಲಕ್ಷಿತ ಸಮುದಾಯಗಳಿಗೆ ಸೇರಿದ ಜನರು ತಮ್ಮ ಕುಟುಂಬದಲ್ಲಿ ಸಾವನ್ನಪ್ಪಿದವರ ಅಂತ್ಯಸಂಸ್ಕಾರವನ್ನು ರಸ್ತೆಬದಿಗಳಲ್ಲಿ ನಡೆಸಿದ್ದೂ ಇದೆ. ಜಮೀನು ಹೊಂದಿರುವ ಪ್ರಬಲಮತ್ತು ಪ್ರಭಾವಿ ಜಾತಿಗಳ ಜನರ ಕುಟುಂಬದಲ್ಲಿ ಸಾವು ಸಂಭವಿಸಿದರೆ ಇಂಥ ಸಮಸ್ಯೆ ಎದುರಾದ ಒಂದೇ ಒಂದು ಸಂದರ್ಭವೂ ಬಂದಿಲ್ಲ. ಇಂಥ ಪರಿಸ್ಥಿತಿಯ ನಡುವೆಯೂ ಸ್ಮಾರಕವೇ ಸುದ್ದಿಯಾಗುತ್ತದೆ. ಅಭಿಮಾನಿಗಳು ಕಣ್ಣೀರಿಟ್ಟರೆಂಬ ಸುದ್ದಿ ಮಹತ್ವಪಡೆದುಕೊಳ್ಳುತ್ತದೆ. ಅಂತ್ಯ ಸಂಸ್ಕಾರಕ್ಕೂ ಜಾಗವಿಲ್ಲದೇ ಪರದಾಡುವ ಅತಂತ್ರ ಸಮುದಾಯಗಳ ನೋವನ್ನು ಸ್ಮಾರಕಗಳು ಪರಿಹರಿಸಬಲ್ಲವೇ? ಮಹಾಮಹಿಮರು ಹುಟ್ಟುತ್ತಲೇ ಇರುತ್ತಾರೆ, ಸಹಜವಾಗಿ ಸಾವು ಎದುರಾಗುತ್ತದೆ. ಆಧುನಿಕ ಜಗತ್ತಿನ ಅಭಿವೃದ್ಧಿ ಅನಿವಾರ್ಯತೆಯಲ್ಲಿ ಎಷ್ಟೋ ಸಮಾಧಿಗಳು ನಿರ್ನಾಮವಾಗಿವೆ. ಸಮಾಧಿಗಳ ಸಂಸ್ಕೃತಿ ಎದುರು ಚಿಂತನೆಗಳು ಸಮಾಧಿಯಾಗುತ್ತಿವೆ.ಚಿಂತನೆಗಳು ಸಮಾಧಿ ಸೇರುತ್ತಿವೆ ಎಂದು ಅಳುವವರು ಯಾರಾದರೂ ಇದ್ದಾರೆಯೇ?ಚಿಂತನೆಗಳು ಗೆಲ್ಲಬೇಕೆಂದರೆ ಸಮಾಧಿಗಳ ರಾಜಕಾರಣ ಸೋಲಬೇಕು.
-ಟಿ.ಕೆ.ತ್ಯಾಗರಾಜ್


