ಕೊಡಗಿನಲ್ಲಿ ಸಿ.ವಿ.ಶಂಕರ್ ಕ್ರೀಡಾ ‌ಅಕಾಡೆಮಿ ಸ್ಥಾಪನೆಯಾಗಲಿ

ಕೊಡಗಿನ ಮಹಾನ್ ಕ್ರೀಡಾ ಪೋಷಕ ದಿವಂಗತ ಸಿ.ವಿ.ಶಂಕರ್ ಹೆಸರಲ್ಲಿ ಕೊಡಗಿನಲ್ಲಿ ಕ್ರೀಡಾ ‌ಅಕಾಡೆಮಿ ಸ್ಥಾಪನೆಯಾಗಲಿ...ಕೊಡಗಿನಲ್ಲಿ ಬ್ರಿಟೀಷರಿಂದ ಪರಿಚಯಗೊಂಡ ಹಾಕಿ ಕ್ರೀಡೆಯನ್ನು ಜಗದೆತ್ತರಕ್ಕೆ ಬೆಳೆಸಿ ಅಂತರರಾಷ್ಟ್ರೀಯ ಮನ್ನಣೆ ಸಿಗುವಂತೆ ಮಾಡಿದ ಪ್ರಾತ:ಸ್ಮರಣೀಯರು ಇವರು. ಕೊಡಗಿನ ಪ್ರಥಮ ಕ್ರೀಡಾ ಸಂಸ್ಥೆ "ವಾಂಡರರ್ಸ್" ಅನ್ನು ಗೆಳೆಯರೊಡಗೂಡಿ ಸ್ಥಾಪಿಸುವುದರೊಂದಿಗೆ ಹಾಕಿ ಕ್ರೀಡೆಯನ್ನು ಉತ್ತೇಜಿಸಿ ಅದು ಬೆಳೆದು ಹೆಮ್ಮರವಾಗುವಂತೆ ಪೋಷಿಸಿದ ಮಹಾನ್ ವ್ಯಕ್ತಿ.ಅಂತರರಾಷ್ಟ್ರೀಯ ಖ್ಯಾತಿಯ ಹಾಕಿ ತಾರೆಗಳಾದ ಎಂ.ಪಿ.ಗಣೇಶ್, ಬಿ.ಪಿ.ಗೋವಿಂದ ಅವರ ಗಾಡ್ ಫಾದರ್ ಕೂಡ ಇವರೇ... ಇವರಿಬ್ಬರಲ್ಲದೆ ಕೊಡಗಿನ ಮತ್ತೊಬ್ಬ ಪ್ರತಿಭೆ ಬಿ.ಕೆ.ಹಾಲಪ್ಪನವರನ್ನು ಸಹ ತಮ್ಮ ಗರಡಿಯಲ್ಲಿ ಬೆಳೆಸಿದರು.ದುರದೃಷ್ಟವಶಾತ್ ರಾಷ್ಟ್ರೀಯ ಹಾಕಿ ಶಿಬಿರದಲ್ಲಿದ್ದಾಗ ಮಂಡಿಗೆ ಬಲವಾದ ಪೆಟ್ಟು ಬಿದ್ದು ಹಾಲಪ್ಪ ಅವಕಾಶ ವಂಚಿತರಾದರು.ಇವರು ಒಲಂಪಿಯನ್, ಭಾರತದ ಮಾಜಿ ನಾಯಕ ಅರ್ಜುನ್ ಹಾಲಪ್ಪ ಅವರ ತಂದೆ. ಈ ಮೂವರು ವಾಂಡರರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದರು.ಇವರಿಗೆ ಕ್ರೀಡಾ ಸಲಕರಣೆ,ಹಣಕಾಸಿನ ನೆರವನ್ನು ನೀಡುವುದರೊಂದಿಗೆ ದೂರದ ಕೊಲ್ಕೊತ್ತಾದ ಪ್ರತಿಷ್ಠಿತ ಹಾಕಿ ಕ್ಲಬ್ ಗಳಲ್ಲಿ ಆಡುವಂತೆ ಮಾಡಿ ರಾಷ್ಟ್ರೀಯ ಆಯ್ಕೆದಾರರ ಗಮನ ಸೆಳೆಯಲು ಕಾರಣರಾದರು.ಮುಂದಿನದೆಲ್ಲಾ ಇತಿಹಾಸ.ಇವರು ಗಳಿಸಿದ ಅಂತರರಾಷ್ಟ್ರೀಯ ಖ್ಯಾತಿಯಿಂದ ಕೊಡಗಿನ ಯುವಕರು ಸ್ಪೂರ್ತಿಗೊಂಡು ಹಾಕಿಯನ್ನು ತಮ್ಮ ಉಸಿರಾಗಿಸಿಕೊಂಡರು.ಅಲ್ಲದೆ ಹಲವು ಹಾಕಿ ಕ್ಲಬ್ ಗಳು ಜನ್ಮ ತಳೆದವು,ಅವುಗಳಲ್ಲಿ ಸೋಮವಾರಪೇಟೆಯ ಬ್ಲೂ ಸ್ಟಾರ್,ವೀರಾಜಪೇಟೆಯ ಡೈನಮೇಟ್ಸ್, ಗೋಣಿಕೊಪ್ಪದ ಬಿಬಿಸಿ,ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಪ್ರಮುಖವಾದವು.ಈಗ ಇವುಗಳಲ್ಲಿ ಕೆಲವು ಅಸ್ತಿತ್ವದಲ್ಲಿಲ್ಲ. ಕೊಡವ ಕುಟುಂಬಗಳ ಹಾಕಿ,ನೆಸ್ಲೆ ಕಪ್ ಹಾಕಿ, ಕ್ರೀಡಾ ನಿಲಯಗಳ ಪಂದ್ಯಾವಳಿಗಳು ಮಾತ್ರ ಈಗ ಕೊಡಗಿನಲ್ಲಿ ನಡೆಯುತ್ತಿದೆ.ರಾಷ್ಟ್ರೀಯ, ಅಂತರರಾಷಮುಂದಾಗಿ ಪಂದ್ಯಾವಳಿಗಳು ಇಲ್ಲಿ ನಡೆಯಬೇಕಿದೆ.ಈ ನಿಟ್ಟಿನಲ್ಲಿ ಕೇಂದ್ರ ಅಥವಾ ರಾಜ್ಯ ಸರಕಾರ ಮುಂದಾಗಿ ಶಂಕರ್ ಅವರ ಹೆಸರಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಿ ಅವರ ಪ್ರತಿಮೆಯೊಂದನ್ನು ಸಹ ಪ್ರತಿಷ್ಠಾಪಿಸಿ ಅವರಿಗೆ ಗೌರವ ಸಲ್ಲಿಸಬೇಕಿದೆ.ಜಿಲ್ಲೆಯ ಶಾಸಕರು,ಕ್ರೀಡಾ ಪಟುಗಳು,ಸಂಘ ಸಂಸ್ಥೆಗಳೊಂದಿಗೆ ಅವರ ಶಿಷ್ಯಂದಿರಾದ ಎಂ.ಪಿ.ಗಣೇಶ್,ಬಿ.ಪಿ ಗೋವಿಂದ,ಬಿ.ಕೆ.ಹಾಲಪ್ಪ ಮುಂತಾದವರು ಕೈ ಜೋಡಿಸಿ ಗುರು ಕಾಣಿಕೆ ನೀಡಬೇಕಾಗಿದೆ...ಬಹಳ ವರ್ಷಗಳ ಹಿಂದೆಯೇ ನನ್ನ ಕ್ರೀಡಾ ಬರಹವೊಂದರಲ್ಲಿ ಶಂಕರ್ ಅವರ ಕ್ರೀಡಾ ಸೇವೆಯನ್ನು ಸ್ಮರಿಸಿದ್ದೆ. ಬಿ.ಆರ್.ಮಂಜುನಾಥ ಮೈಸೂರು

1.