ರೇಣುಕಾಸ್ವಾಮಿ ಕೊಲೆ:ನಟ ದರ್ಶನ್-ಪವಿತ್ರಾ ಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದು

ರೇಣುಕಾಸ್ವಾಮಿ ಕೊಲೆ:ನಟ ದರ್ಶನ್-ಪವಿತ್ರಾ ಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಪವಿತ್ರಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದು ಮಾಡಿರುವ ಸುಪ್ರೀಂಕೋರ್ಟ್ ಎಲ್ಲಾ ಆರೋಪಿಗಳನ್ನು ಕೂಡಲೆ ವಶಕ್ಕೆ ಪಡೆದು ಜೈಲಿಗೆ ಕಳುಹಿಸುವಂತೆ ಸೂಚಿಸಿದೆ.
     ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನಿನನ್ನು ರದ್ದು ಮಾಡುವಂತೆ ಕೋರಿ ಕರ್ನಾಟಕ ಸರಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ ವಿಭಾಗೀಯ ಪೀಠ ಹೈಕೋರ್ಟ್ ನಡೆಗೆ ಛೀಮಾರಿ ಹಾಕಿದೆ.ನ್ಯಾಯಮೂರ್ತಿಗಳಾದ ಪಾರ್ದಿವಾಲಾ ಹಾಗೂ ಆರ್.ಮಹದೇವನ್ ಅವರು ಜುಲೈ 24 ರಂದು ಮೇಲ್ಮನವಿಯ ವಿಚಾರಣೆ ನಡೆಸಿ ಹೈಕೋರ್ಟ್ ತೀರ್ಪಿನ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.ಈ ತೀರ್ಪನ್ನು ಗಮನಿಸಿದರೆ ಎಲ್ಲಾ ಆರೋಪಿಗಳನ್ನು ಖುಲಾಸೆ ಮಾಡುವಂತಿದೆ  ಎಂದು ತರಾಟೆಗೆ ತೆಗೆದುಕೊಂಡ ನ್ಯಾಯಾಲಯವು ಈ ಪ್ರಕರಣವನ್ನು ವಿಭಾಗೀಯ ನ್ಯಾಯಾಲಯವೇ ನಡೆಸಿ ಆದಷ್ಟು ಬೇಗ ತೀರ್ಪು ನೀಡುವಂತೆ ಸಲಹೆ ನೀಡಿತು.ಪ್ರಕರಣದ ಸಾಕ್ಷ್ಯಾಧಾರಗಳನ್ನು ಗಮನಿಸಿದರೆ ಆರೋಪಿಗಳಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ.ಹೈಕೋರ್ಟ್ 2024 ಡಿಸೆಂಬರ್ 13 ರಂದು ಆರೋಪಿಗಳಿಗೆ ಜಾಮೀನು ನೀಡಿತ್ತು. ಆರೋಪಿಗಳಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ, ಐಶಾರಾಮಿ ಸವಲತ್ತು ನೀಡದಂತೆ ಎಚ್ಚರಿಸಿರುವ ಪೀಠವು ಕಾನೂನು ಉಲ್ಲಂಘಿಸುವ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡುವುದಾಗಿ ಹೇಳಿದೆ.ತೀರ್ಪಿನ ಪ್ರತಿಯನ್ನು ಕಾಯುತ್ತಿರುವ ಪೊಲೀಸರು ದರ್ಶನ್ ಮತ್ತಿತರ ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ.ದರ್ಶನ್ ಈಗಾಗಲೇ ತಮಿಳುನಾಡಿನಲ್ಲಿದ್ದು,ಅವರ ಬರುವಿಕೆಯನ್ನೇ ನಿರೀಕ್ಷಿಸಲಾಗುತ್ತಿದೆ.ಬಂದ ನಂತರ ವಶಕ್ಕೆ ಪಡೆದು ಬಳ್ಳಾರಿ ಜೈಲಿಗೆ ಕರೆದೊಯ್ಯಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
    ಈ ತೀರ್ಪಿನಿಂದ ಸಂತೋಷವಾಗಿದೆ ಎಂದು ಕೊಲೆಯಾದ ರೇಣುಕಾಸ್ವಾಮಿಯ ತಾಯಿ ರತ್ನಪ್ರಭಾ ಪ್ರತಿಕ್ರಿಯೆ ನೀಡಿದ್ದಾರೆ.