ಕನ್ನಡದ ಹೆಸರಾಂತ ನಾಟಕಕಾರ ಕಂಸರ ಒಂದು ನೆನಪು
ಸಂಸರಿಗೆ ಪೊಲೀಸರೆಂದರೆ ಭಯ, ಈ ಪೊಲೀಸರು ನನ್ನನ್ನು ಬದುಕಲು ಬಿಡುವುದಿಲ್ಲವೆಂದೇ ಹೇಳುತ್ತಿದ್ದರು. ಪೊಲೀಸರ ಮೇಲಿನ ಈ ಭಾವನೆ ಸಂಸರ ಮನಸ್ಸಿಗೆ ಹೇಗೆ ಹತ್ತಿಕೊಂಡಿದೆ ಎಂಬುದನ್ನು ಮನಶಾಸ್ತ್ರಜ್ಞರು ಪತ್ತೆ ಮಾಡಿ ಚಿಕಿತ್ಸೆಕೊಡುವ ಪ್ರಯತ್ನದ ಮದ್ಯೆ ಸಂಸರು ಆತುರವಾಗಿ ಜೀವನಯಾತ್ರೆಯನ್ನು ಅಂತ್ಯಗೊಳಿಸಿ ಸಾಹಿತ್ಯಲೋಕದಲ್ಲಿ ದುರಂತಕತೆಯನ್ನು ದಾಖಲಿಸಿದರು. ಕನ್ನಡ ನಾಟಕಲೋಕಕ್ಕೊಬ್ಬನೇ ಸಂಸ.
ಕನ್ನಡದ ಹೆಸರಾಂತ ನಾಟಕಕಾರ ಕಂಸರ ಒಂದು ನೆನಪು
ಕನ್ನಡ ಸಾಹಿತ್ಯ ಲೋಕದ ವಿಶಿಷ್ಟ ನಾಟಕಕಾರರೆನಿಸಿರುವ ಪ್ರಸಿದ್ಧ ನಾಟಕಕಾರ ‘ಸಂಸ’’ ನ ಸಾಹಿತ್ಯ ವಿದ್ಯಾರ್ಥಿಗಳು ಯಾರೂ ಈ ಅಪ್ರತಿಮ ಪ್ರತಿಭಾಶಾಲಿಯನ್ನು ಮರೆಯಲು ಸಾಧ್ಯವಿಲ್ಲ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಎಂಬಲ್ಲಿ ಅವರು ಹುಟ್ಟಿದ ದಿನ ಜನವರಿ 13, 1898ರಂದು ಜನಿಸಿದ್ದರು.
ಆಗ 10ನೇ ತರಗತಿಯವರೆಗೆ ಓದಿ ಅಲ್ಲಿಗೆ ಓದು ನಿಲ್ಲಿಸಿದ್ದ ಸಂಸನ ನಿಜ ನಾಮ ಎ. ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್ ಎಂದಾಗಿತ್ತು. ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್. ತಂದೆ ನರಸಿಂಹ ಪಂಡಿತರು, ತಾಯಿ ಗೌರಮ್ಮ. ಸಂಸರ ಬದುಕು ವಿಚಿತ್ರ ಅವಸ್ಥೆಗಳಿಂದ ಕೂಡಿತ್ತು. ‘ಸಂಸ’ ಅವರ ಕಾವ್ಯನಾಮ. ತಾನು ಕಂಸ ಎಂಬ ಕಾವ್ಯನಾಮದಲ್ಲಿ ನಾಟಕವನ್ನು ರಚಿಸಿದ್ದರು. ಆದರೆ ಪ್ರಕಟಣೆಯಾಗಿ ಬರುವಾಗ ಕಂಸನ ಬದಲಾಗಿ ಸಂಸನೆಂದು ಮುದ್ರಣವಾಗಿತ್ತು. ಅದೇ ಹೆಸರನ್ನೇ ಸಾಹಿತಿಯು ಮುಂದೆ ಸ್ವೀಕರಿಸಿಕೊಂಡಿದ್ದರು.
ಬಾಲ್ಯದಿಂದಲೂ ಸಂಸ ಅಂತರ್ಮುಖಿಯಾಗಿದ್ದರು. ಸದಾ ಏಕಾಂಗಿಯಾಗಿದ್ದರು. ಬಾಲ್ಯದ ಜೀವನವನ್ನೇನೂ ಅವರು ಅನುಭವಿಸಿಲ್ಲ. ಕುಟುಂಬದ ಪ್ರೀತಿಯಿಂದ ವಂಚಿತರಾಗಿದ್ದರು. ಅಥವಾ ಹಾಗೇ ಸಂಶ ಭಾವಿಸಿಕೊಂಡಿದ್ದರು. ಅವರ ಜೀವನ ಹಲವು ಮಾನಸಿಕ ತೊಳಲಾಟ, ಖಿನ್ನತೆಯಿಂದ ಗೊಂದಲಮಯವಾಗಿತ್ತು. ಹಾಗಿದ್ದರೂ ಮೌಲಿಕವಾದ ಬರವಣಿಗೆಯಿಂದ ಶ್ರದ್ದೇಯರಾಗಿದ್ದರು.
ಸಂಸ ಹತ್ತನೆಯ ತರಗತಿಯಲ್ಲಿ ಫೇಲು. ಕನ್ನಡದಲ್ಲಿ ಪ್ರಚಂಡ ಪಾಂಡಿತ್ಯ ಗಳಿಸಿಕೊಂಡರು. ತಮಿಳು ಮತ್ತು ಇಂಗ್ಲೀಷನ್ನೂ ಕಲಿತ್ತಿದ್ದರು. ಅವರು ವಿದ್ಯಾಭ್ಯಾಸವನ್ನು ಮುಂದುವರಿಸಲೇ ಇಲ್ಲ. ವಿದ್ಯಾರ್ಥಿಯಾಗಿರುವಾಗಲೇ
‘ಕೌಶಲ’ ಎಂಬ ಬಂಗಾಳಿ ಶೈಲಿಯ ನಾಟಕ ಬರೆದು ಪ್ರಕಟಿಸಿದ್ದರು. ಆನಂತರ ಅವರು ‘ಶ್ರೀಮಂತೊದ್ಯಾನ ವರ್ಣನಂ’ ಎಂಬ ಚಂಪೂ ಕಾವ್ಯವನ್ನು ರಚಿಸಿದ್ದರು. ಮನೆಯಲ್ಲಿ ಚಿಕ್ಕಪ್ಪ, ಅಣ್ಣಂದಿರೊಡನೆ ಇದ್ದ ಭಿನ್ನಾಭಿಪ್ರಾಯದಿಂದ ಮನೆಯಿಂದ ಹೊರ ಹೋದವರು ಮತ್ತೆ ಮನೆಕಡೆ ಹೋಗಲೇ ಇಲ್ಲ. ಏನೇನೋ ಕೆಲಸವನ್ನು ಮಾಡಿಕೊಂಡಿದ್ದರು. ಅಲೆಮಾರಿಯ ಹಾಗೆ ತಿರುಗಾಡಿಕೊಂಡಿದ್ದರು. ದೇಶಾಟನೆಗೈಯುತ್ತಾ, ತಾತ್ಕಾಲಿಕ ಉದ್ಯೋಗಗಳಲ್ಲಿ ತೊಡಗಿಕೊಂಡು ಒಂದು ರೀತಿಯಲ್ಲಿ ಅವ್ಯವಸ್ಥಿತವಾಗಿ ಜೀವಿಸಿಕೊಂಡಿದ್ದರು. ಹತ್ತಾರು ವರ್ಷ ಕಾಲ ಮೈಸೂರು, ಮಂಗಳೂರು ಮುಂತಾದ ಸ್ಥಳಗಳಲ್ಲಿ ಉಪಾಧ್ಯಾಯರಾಗಿ ಕೆಲಸ ಮಾಡಿದರು. ಜೀವನದ ಕೊನೆಯಲ್ಲಿ ಅಂದರೆ 1936ರಿಂದ 1939ರವರೆಗೆ ಮಾತ್ರ ಮೈಸೂರಿನಲ್ಲಿದ್ದರು.
ಸಂಸರು ‘ಸುಗುಣ ಗಂಭೀರ’ ಎಂಬ ಮೊದಲ ನಾಟಕವನ್ನು ರಚಿಸಿದ್ದರು. ಆಗ ಅವರು ಇನ್ನೂ ಇಪ್ಪತ್ತೊಂದು ವರ್ಷದ ಯುವಕರಾಗಿದ್ದರು. ನಂತರ ತನ್ನ ಬದುಕನ್ನು ನಾಟಕ ರಚನೆಗೇ ಮೀಸಲಾಗಿರಿಸಿದರು. ಸಂಸರು ‘ವಿಗಡ ವಿಕ್ರಮರಾಯ’ ನಾಟಕವನ್ನು ಬರೆದರು. ಆದರೆ ಯಾಕೋ ಏನೋ ಸ್ವಲ್ಪ ಕಾಲದವರೆಗೆ ಆ ಕೃತಿಯನ್ನು ಯಾರಿಗೂ ತೋರಿಸಲೇ ಇಲ್ಲ! ಅವರು ಒಟ್ಟು 23 ನಾಟಕಗಳನ್ನು ರಚಿಸಿದರಂತೆ. ಅದರಲ್ಲಿ ಈಗ ಲಭ್ಯವಿರುವುದು ಕೇವಲ ಆರು ನಾಟಕಗಳು ಮಾತ್ರ. ೧. ಸುಗುಣ ಗಂಭೀರ ೨. ವಿಗಡ ವಿಕ್ರಮರಾಯ ೩. ವಿಜಯನಾರಸಿಂಹ ೪. ಬಿರುದಂತೆಂಬರ ಗಂಡ ೫. ಬೆಟ್ಟದ ಅರಸು ಮತ್ತು ೬. ಮಂತ್ರಶಕ್ತಿ. ಉಳಿದವುಗಳು ಲಭ್ಯವಿರುವುದಿಲ್ಲ. ಬಹುತೇಕ ಮೈಸೂರಿನ ಅರಸು ಮನೆತನದ ಚರಿತ್ರೆಗೆ ಸಂಬಂಧಿಸಿದ ವಿಚಾರಗಳನ್ನು ಆಯ್ಕೆ ಮಾಡಿ ನಾಟಕವನ್ನು ರಚಿಸುತ್ತಿದ್ದರು. ಸಂಸರ ನಾಟಕಗಳಲ್ಲಿ ಅರಮನೆಯ ಕೋಲಾಹಲಗಳು, ಕುಟಿಲ ತಂತ್ರಗಳ ಸಂಚು-ಹೊಂಚುಗಳು, ನೀಚ ಗುಣಕಾರಕಗಳು ವಸ್ತುವಾಗಿ ಕಥಾವಸ್ತುವಾಗಿರುವುದರಿಂದ ಸಹಜವಾಗಿಯೇ ವೈವಿಧ್ಯ ಸ್ವಾರಸ್ಯಗಳಿರುತ್ತಿತ್ತು. ರಂಗಭೂಮಿಯ ದೃಷ್ಟಿಯಿಂದಲೂ ಇವರ ನಾಟಕಗಳು ಯಶಸ್ವಿಯಾಗಿವೆ.
ಸಂಸರು ತಮ್ಮ ಐತಿಹಾಸಿಕ ನಾಟಕಗಳಲ್ಲೂ ಸಮಕಾಲೀನ ಪ್ರಜ್ಞೆಯನ್ನು ಉಳಿಸಿಕೊಂಡಿದ್ದರು. ಐತಿಹಾಸಿಕ ನಾಟಕ ರಚನೆಗೆ ಹೊಸ ಸಂಪ್ರದಾಯ ಹಾಕಿಕೊಟ್ಟಿದ್ದರು. ನಾಟಕ ರಚನೆಯಲ್ಲಿ ತಮ್ಮದೇ ಆದ ಭಿನ್ನವಾದ ಮಾರ್ಗವನ್ನು ಅನುಸರಿಸಿದ್ದರು. ಇಂಗ್ಲಿಷಿನಲ್ಲಿ ‘ಶೆರ್ಲಾಕ್ ಹೋಮ್ಸ್ ಇನ್ ಜೈಲ್’ ಎಂಬ ಕಾದಂಬರಿಯನ್ನು ಸಂಸರು ಬರೆದಿದ್ದಾರೆ. ‘ಶ್ರೀಮಂತೊಧ್ಯಾನಂ’, ‘ಸಂಸ ಪದಂ’, ‘ಈಶಪ್ರಕೋಪನ’, ‘ನರಕ ದುರ್ಯೋಧನೀಯಂ’, ‘ಅಚ್ಚುಂಬ ಶತಕ’ ಅವರ ಕಾವ್ಯದ ಸಾಲಿನಲ್ಲಿ ಸೇರುತ್ತವೆ. ಅವರು ಯಾರನ್ನೂ ಅನುಕರಿಸಲಿಲ್ಲ. ತಮ್ಮದೇ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡರು. ಆದ್ದರಿಂದಲೇ ಕನ್ನಡಕೊಬ್ಬನೇ ‘ಸಂಸ’ ಎನ್ನುವ ಹೆಗ್ಗಳಿಕೆ ಇದೆ.
ಸಂಸ ಜೀವನ ಬಹಳ ನಿಗೂಡವಾಗಿತ್ತು. ಅದೇಕೋ ಏನೋ, ಪೊಲೀಸರೆಂದರೆ ಅವರಿಗೆ ಸರಿ ಬರುತ್ತಿರಲಿಲ್ಲ. ಪೊಲೀಸರು ನನ್ನನ್ನು ಎನ್ ಕೌಂಟರ್ ಮಾಡಲು ರೆಡಿಯಾಗಿದ್ದಾರೆ ಎಂದು ಆರೋಪಿಸುತ್ತಿದ್ದರು! ಅವರು ಇರುವಕಡೆ ಒಬ್ಬ ಪೊಲೀಸ್ ಯಾವುದಾಕ್ಕಾದರೂ ಹೋದರೂ ಸಾಕು,ಆ ಪೊಲೀಸರು ನನ್ನನ್ನು ಹಿಡಿಯಲು ಬಂದಿದ್ದಾರೆ, ನನ್ನನ್ನು ನೋಡುತ್ತಿದ್ದಾನೆ ಎಂದು ಭಯ ಪಡುತ್ತಿದ್ದರು. ಮಾನಸಿಕ ಉನ್ಮಾದಕ್ಕೆ ಒಳಗಾಗುತ್ತಿದ್ದರು. ವಿಲಕ್ಷಣವಾದ ಮಾನಸಿಕ ರೋಗದಿಂದ ಬಳಲುತ್ತಿದ್ದರು. ಪೊಲೀಸರು ತನ್ನನ್ನು ಬೆನ್ನಟ್ಟುತ್ತಿದ್ದಾರೆ, ಇವತ್ತು ರಾತ್ರಿ ನನ್ನನ್ನು ಅರೆಸ್ಟ್ ಮಾಡ್ತಾರೆ ಎಂದು ಅವರು ತಮ್ಮ ಹಿತೈಷಿಗಳೊಂದಿಗೆ ಹೇಳಿ ಭಯ ಪಡುತ್ತಿದ್ದರು. ಅದೇನೋ, ಹೇಗೋ ಅವರಿಗೆ ಪೊಲೀಸರ ಬಗ್ಗೆ ಅವರಿಗೆ ಕಾಲ್ಪನಿಕ ಭಯಗೊಂಡಿದ್ದರು. ಅವರ ಸ್ನೇಹಿತರು ಸಂಸರ ಮಾನಸಿಕ ಅಸ್ವಸ್ಥತೆಯ ಸಮಸ್ಯೆಗೆ ಚಿಕಿತ್ಸೆಕೊಡಿಸಲು ಪ್ರಯತ್ನಿಸಿದ್ದರು. ಮೈಸೂರಿನಲ್ಲಿ ಕೆಲವು ಪೊಲೀಸ್ ಅಧಿಕಾರಿಗಳೊಂದಿಗೆ ಬೇಟಿ ಮಾಡಿಸಿ ಮನಸಿನಲ್ಲಿ ಇರುವ ಭಯವನ್ನು ನಿವಾರಿಸುವ ಪ್ರಯತ್ನವನ್ನು ಮಾಡಲಾಗಿತ್ತು. ಕೆಲವು ಪೊಲೀಸ್ ಅಧಿಕಾರಿಗಳು ಅವರಿಗೆ ಖುದ್ದು ಸಮದಾನಪಡಿಸುವ ಪ್ರಯತ್ನವನ್ನು ಮಾಡಿದ್ದರು. ನಾವು ನಿಮ್ಮ ಹಿತೈಷಿಗಳೂ, ಅಭಿಮಾನಿಗಳೂ ಆಗಿದ್ದೀವಿ, ನಿಮಗೆ ನಾವು ಪೊಲೀಸರು ಏಕೆ ತೊಂದರೆ ಕೊಡುತ್ತೇವೆ, ನಿಮ್ಮ ಬಗ್ಗೆ ನಮಗೆ ಅಭಿಮಾನವಿದೆ, ನಿಮಗೆ ಅಗತ್ಯವಿದ್ದರೆ ರಕ್ಷಣೆಯನ್ನು ಕೊಡುವ ಭರವಸೆಯನ್ನು ಕೊಟ್ಟು ಅವರಿಗೆ ಧೈರ್ಯ ತುಂಬುವ ಪ್ರಯತ್ನವನ್ನೂ ಮಾಡಿದ್ದರು. ಸಂಸರು ಮಾತ್ರ ನಂಬಲೇ ಇಲ್ಲ! ಆದರೂ ಪೊಲೀಸರು ತನಗೆ ಕಾಟ ಕೊಡುತ್ತಿದ್ದಾರೆ, ತನಗೆ ಮಾರ್ಯಾದೆಯಿಂದ ಬದುಕಲು ಸಾಧ್ಯವಿಲ್ಲವೆಂದೇ ಆತಂಕಗೊಂಡಿದ್ದರು. ಹತಾಶರಾಗಿದ್ದರು. ಯಾವುದೇ ಚಿಕಿತ್ಸೆಗಳು, ಪ್ರಯತ್ನಗಳು ಸಂಸರನ್ನು ಭಯಮುಕ್ತಗೊಳಿಸಲಿಲ್ಲ. ಈ ಮಾನಸಿಕ ವಿಹ್ವಲತೆಯು ಒಂದು ಸಮಸ್ಯೆಯಾಗಿ ಹೆಚ್ಚಾಗುತ್ತಲೇ ಹೋಯಿತು. ಈ ಪೊಲೀಸ್ ನಾಯಿಗಳು ನನಗೆ ಬದುಕಲು ಬಿಡುವುದಿಲ್ಲವೆಂದೇ ಹೇಳುತ್ತಿದ್ದರು. ಮನಸ್ಸಿನ ಲಯತಪ್ಪಿ 1939ರಲ್ಲಿ ತಮ್ಮ 41ನೇ ಎಳೆಯ ವಯಸ್ಸಿನಲ್ಲಿಯೇ ಸಂಸರು ಆತ್ಮಹತ್ಯೆಯನ್ನು ಮಾಡಿಕೊಂಡರು. ಪೊಲೀಸರ ಮೇಲಿನ ಈ ಭಾವನೆ ಸಂಸರ ಮನಸ್ಸಿಗೆ ಹೇಗೆ ಹತ್ತಿಕೊಂಡಿದೆ ಎಂಬುದನ್ನು ಮನಶಾಸ್ತ್ರಜ್ಞರು ಪತ್ತೆ ಮಾಡಿ ಚಿಕಿತ್ಸೆಕೊಡುವ ಪ್ರಯತ್ನದ ಮದ್ಯೆ ಸಂಸರು ಆತುರವಾಗಿ ಜೀವನಯಾತ್ರೆಯನ್ನು ಅಂತ್ಯಗೊಳಿಸಿ ಸಾಹಿತ್ಯಲೋಕದಲ್ಲಿ ದುರಂತಕತೆಯನ್ನು ದಾಖಲಿಸಿದರು.


