ಧರ್ಮಸ್ಥಳಕ್ಕೆ ಏನಾಗಿದೆ? ಭಾಗ-3

ಯೂಟ್ಯೂಬರ್ ಗಳ ಮೇಲೆ ಹಲ್ಲೆ ಮಾಡಿ ಭಯದ ವಾತಾವರಣ ಸೃಷ್ಟಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರಿಂದ ವಿವಾದವನ್ನು ತಿಳಿಗೊಳಿಸಲು ಸಾಧ್ಯವಿಲ್ಲ. ಮಹೇಶ್ ತಿಮ್ಮರೋಡಿಯವರು ಸಹ ಒಂಟಿ ಸಲಗದಂತೆ ಹೋರಾಡುತ್ತಿರುವುದು ನಿಜ. ಆದರೆ ತಮ್ಮ ಹೋರಾಟವು ಸಭ್ಯತೆಯನ್ನು ಮೀರದಂತೆ ನೋಡಿಕೊಳ್ಳಬೇಕು.

ಧರ್ಮಸ್ಥಳಕ್ಕೆ ಏನಾಗಿದೆ?  ಭಾಗ-3

ಧರ್ಮಸ್ಥಳಕ್ಕೆ ಏನಾಗಿದೆ?

ಭಾಗ-3

 

ಧರ್ಮಸ್ಥಳದ ದೂರಿನ ವಿಚಾರಣೆ ಮತ್ತು ತನಿಖೆ ಆರಂಭವಾಗಿ ಈಗಾಗಲೇ ತಿಂಗಳು ಕಳೆದಿದೆ.  ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಅಷ್ಟೇನು ಪ್ರಾಮುಖ್ಯತೆಯನ್ನು ಕೊಡದೇ ಇರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಅದು ದೃಶ್ಯಮಾಧ್ಯಮವಾಗಲೀ ಅಥವಾ ಸುದ್ಧಿ ಮಾಧ್ಯಮವಾಗಲೀ.  ಸ್ವಲ್ಪಅಪ್ ಡೇಟೆಡ್ ಸುದ್ಧಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ. ಕೆಲವಾರು ಯೂಟ್ಯೂಬರ್ ಗಳು ಸುದ್ಧಿಗಳನ್ನು ನೇರ ಪ್ರಸಾರ ಮಾಡುತ್ತಿದ್ದುದನ್ನು ಗಮನಿಸಬಹುದಾಗಿದೆ.  ಈಗಅವರ ಮೇಲೆ ಹಲ್ಲೆಯಾಗುತ್ತಿದೆ. ಬೆದರಿಕೆ ತಂತ್ರಗಳಿಂದ ಸುದ್ಧಿ ಪ್ರಸಾರಗಳನ್ನು ತಡೆಹಿಡಿಯುತ್ತಿದ್ದಾರೆ.

ಭಯದ ವಾತಾವರಣ ಸೃಷ್ಟಿಸಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಹೊರಟಿರುವುದು ವಿವಾದವನ್ನು ತಿಳಿಗೊಳಿಸಲು ಮಾಡುತ್ತಿರುವ ಪ್ರಯತ್ನವಾಗದು.  ಬದಲಾಗಿ ಇದು ಹಲವಾರು ಸಂಶಯಗಳು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಇದು ಈಗ ಧರ್ಮಸ್ಥಳದಲ್ಲಿ ನಡೆಯುತ್ತಿರುವ ತನಿಖೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಸಾರ್ವಜನಿಕರಲ್ಲಿ ಯಾರದು ಸರಿ ಯಾರದು ತಪ್ಪು ಎಂಬುದನ್ನು ನಿರ್ಧರಿಸಲಾಗದ ಅನುಮಾನಗಳು ಮೂಡಲು ಈ ಕೃತ್ಯಗಳು ಕಾರಣವಾಗುತ್ತಿವೆ. ಹಾಲಿ  ಧರ್ಮಸ್ಥಳದಲ್ಲಿ ನಡೆದಿರುವ ಅಥವಾ ನಡೆಯದೇ ಇರುವ ಕೊಲೆಯ ಅಪರಿಚಿತ ಸಾವುಗಳ ಬಗ್ಗೆ ಪೊಲೀಸ್ ತನಿಖೆಯನ್ನು ನಡೆಸಲಾಗುತ್ತಿದೆ. ಈ ಬಗ್ಗೆ ತನಿಖೆಗೆ ಕಾರಣವಾಗುತ್ತಿರುವ ವಿಚಾರಗಳನ್ನು ತಿಳಿದು ಕೊಳ್ಳುವ ಹಕ್ಕು ಪ್ರತೀ ನಾಗರೀಕರಿಗಿದೆ. ಆದರೆ ಇದನ್ನು ಕೇಳಲು ನೀವು ಯಾರು ? ಅಭಿಪ್ರಾಯ ಹೇಳಲು ನೀವು ಯಾರು?  ಇಲ್ಲಿ ನಾವು ಹೇಳಿದ್ದನ್ನು ಮಾತ್ರ  ಕೇಳಬೇಕು. ನಾವು ಒಪ್ಪದ್ದನ್ನು ಯಾರೂ  ಪ್ರಶ್ನಿಸಬಾರದು, ಹೇಳಬಾರದು, ಕೇಳಲೂ ಕೂಡದು ಎಂದು ಗೆರೆ ಎಳೆದು ಅಡ್ಡನಿಲ್ಲುವ ಧೋರಣೆ  ಫ್ಯಾಸಿಸ್ಟ್ ಚಿಂತನೆಯ ಭಾಗವಾಗಿದೆ.

 ಕರಾವಳಿ ತೀರ ಫ್ಯಾಸಿಸ್ಟ್ ಚಿಂತನೆಯ ಕೇಂದ್ರವಾಗಿದೆ. ಇಲ್ಲಿ ಹೀಗೆ ಬೆಳೆಯಲು ಕೋಮುವಾದವೇ ಕಾರಣ.  ಒಂದು ವೇಳೆ ಇದು  ಬರೀ ಹಿಂದು-ಮುಸ್ಲೀಂ, ಹಿಂದು-ಮುಸ್ಲೀಂ ವಿಚಾರವಾಗಿದ್ದರೆ ಕರಾವಳಿಯಲ್ಲಿ ಸ್ಥಿತಿಗತಿಗಳು ಈಗಿರುವ ರೀತಿಯಲ್ಲಿ ಇರುತ್ತಿರಲಿಲ್ಲ. ಇಡೀ ಕರಾವಳಿ ಪ್ರದೇಶವು  ಪ್ರತಿಕ್ರಯಿಸುತ್ತಿದ್ದ ರೀತಿಯನ್ನು ಯಾರೂ ಊಹಿಸಬಹುದಾಗಿರುವಂತಹದೇ.  

ಆದರೆ ವಿಚಾರ ಎಷ್ಟೇ ಕೋಮುಬಣ್ಣ ಬಳಿದರೂ ಸೌಜನ್ಯಳ ಕೇಸು ತನ್ನ ನಿಜರೂಪವನ್ನು ಬಿಡುತ್ತಿಲ್ಲ. ಕರ್ನಾಟಕದ ಸುದ್ಧಿಮಾದ್ಯಮಗಳು  ಧರ್ಮಸ್ಥಳದ ವಿವಾದದ ಬಗ್ಗೆ ಅಷ್ಟೇನು ಮಹತ್ವ ನೀಡಿಲ್ಲ. ಆದರೆ ಪಕ್ಕದ ಕೇರಳದ ಮಾದ್ಯಮಗಳು ವಿಶೇಷ ಸುದ್ಧಿಗಳನ್ನು ಪ್ರಸಾರ ಮಾಡುತ್ತಿವೆ. ಅದರ ಬಗ್ಗೆಯು ಅಪವಾದ,ಆರೋಪಗಳ ಟ್ರೋಲ್ ಗಳು ಇವೆ. ಈಗ ಸುದ್ಧಿಗಳು ಪ್ರಸಾರಕ್ಕೆ ಬರುತ್ತಿರುವುದು ಯೂಟ್ಯೂಬರ್ ಗಳಿಂದ ಮಾತ್ರ. ಈಗ  ಅವರ ಮೇಲೆಯು ಒತ್ತಡ ತಂತ್ರವನ್ನು ಹೇರಲಾಗುತ್ತಿದೆ. ಬೆದರಿಕೆಗಳನ್ನು ಹಾಕಲಾಗುತ್ತಿದೆ. ದೈಹಿಕವಾಗಿ ಹಲ್ಲೆ  ಮಾಡಿ ಅವರನ್ನು ಹಿಮ್ಮೆಟ್ಟಿಸುವ ತಂತ್ರ ಸರಿಯಾದ ಕ್ರಮವಲ್ಲ. ಎಲ್ಲರೂ ಸತ್ಯ ಗೊತ್ತಾಗಲಿ ಎಂದಷ್ಟೇ ಬಯಸುತ್ತಿದ್ದಾರೆ. ಯಾರಿಗೂ ಮಹೇಶ್ ತಿಮ್ಮರೋಡಿ ಅಥವಾ ಗಿರೀಶ್ ಮಟ್ಟೆನ್ನನವರ್ ರವರಿಗೆ ಇರುವಷ್ಟೇ ಕೆಚ್ಚಿನ ಭಾವನೆ ಇದೆಯೆಂದು ತಿಳಿಯುವುದು ತಪ್ಪು   ಆದರೆ ಅವರು ಹೇಳುತ್ತಿರುವುದರಲ್ಲಿ ತಪ್ಪೇನಿದೆ  ಎಂಬ ರೀತಿಯಲ್ಲಿ ಇತ್ತೀಚಿನ  ಘಟನೆಗಳು ನಡೆಯುತ್ತಿವೆ. ಭಯದ ವಾತಾವರಣ ಸೃಷ್ಟಿಸಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರಿಂದ  ವಿವಾದವನ್ನು ತಿಳಿಗೊಳಿಸಲು  ಸಾಧ್ಯವಿಲ್ಲ. ಅದು ಮತ್ತಷ್ಟೂ ನಿಗೂಢವಾಗಿ ಸಾರ್ವಜನಿಕರ ಮುಂದೆ ನಿಲ್ಲುತ್ತದೆ.

ಇತ್ತೀಚೆಗೆ ಧರ್ಮಸ್ಥಳದ ಗ್ರಾಮಪಂಚಾಯಿತಿಯ ಅಧ್ಯಕ್ಷ,  ಉಪಾಧ್ಯಕ್ಷ,  ಸದಸ್ಯ ಆದವರು ನೀಡಿದ  ಹೇಳಿಕೆಗಳನ್ನು ಗಮನಿಸಿ.  ಧರ್ಮಸ್ಥಳದಲ್ಲಿ ಹಲವಾರು ಅಪರಿಚಿತ ಹೆಣಗಳನ್ನು  ಗ್ರಾಮಪಂಚಾಯಿತಿಯಿಂದ ದಫನ ಮಾಡಿದ್ದಾರೆ. ಈ ಬಗ್ಗೆ ವಿವರ,  ಲೆಕ್ಕ, ಬಿಲ್ಲುಗಳು ಇವೆ ಎಂದು ಹೇಳಿದ್ದಾರೆ.  ಈ ಹೇಳಿಕೆಯು ವಿವಾದವನ್ನು ತಿಳಿಗೊಳಿಸುವ ಬದಲು ಮತ್ತಷ್ಟು ಕಗ್ಗಂಟುಮಾಡುತ್ತಿವೆ.  ಈ ಮಾಹಿತಿಯನ್ನು ತಿಳಿಸ ಬೇಕಾದವರು ಪೊಲೀಸ್ ಇಲಾಖೆ. ಗ್ರಾಮ ಪಂಚಾಯಿತಿ ಅಲ್ಲ.  ಗ್ರಾಮಪಂಚಾಯಿತಿಯ ಅಭಿಪ್ರಾಯವು ಸರಿಯಾಗಿದ್ದಲ್ಲಿ ಈ ರೀತಿ ಎಷ್ಟು ಅಪರಿಚಿತ ಹೆಣಗಳನ್ನು ವಿಲೇವಾರಿ ಮಾಡಲಾಗಿದೆ? ಅವುಗಳ ಪತ್ತೆಗೆ ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು , ಇದರಲ್ಲಿ ಪುರುಷರು ಎಷ್ಟು? ಮಹಿಳೆಯರು ಎಷ್ಟು,? ಯುವಕರೆಷ್ಟು? ಯುವತಿಯರೆಷ್ಟು? ಹೇಗೆ ಮೃತಪಟ್ಟಿದ್ದರು? ನೀರಿನಲ್ಲಿ ಮುಳುಗಿಯೋ? ನೇಣು ಹಾಕಿಕೊಂಡೋ?ಅಥವಾ ವಿಷಸೇವನೆಯಿಂದ ಮೃತಪಟ್ಟರೇ ಹೀಗೆ ಹತ್ತು ಹಲವು ವಿಚಾರಗಳ ಮಾಹಿತಿಗಳನ್ನು  ವಾರ್ಷಿಕ ಅಂಕಿ ಅಂಶಗಳನ್ನು ಪೊಲೀಸ್ ಇಲಾಖೆಯು ನೀಡ ಬೇಕು.

ಸಾಧಾರಣವಾಗಿ ಅಪರಿಚಿತ ಹೆಣಗಳನ್ನು ವಿಲೇವಾರಿ ಮಾಡಲು ಪೊಲೀಸರು ಗ್ರಾಮಪಂಚಾಯಿತಿಗೆ ಒಪ್ಪಿಸುವುದಿಲ್ಲ. ಹಿಂದೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನು ನೆನಪಿಸಬೇಕು.  ಅಪರಿಚಿತ ಮೃತದೇಹಗಳನ್ನು ವಿಲೇವಾರಿ ಮಾಡುತ್ತೇವೆ ಎಂದು ಪೋಸ್ಟ್ ಮಾರ್ಟಂ ಮಾಡಿದ ವೈದ್ಯಾಧಿಕಾರಿಗಳು ಪೊಲೀಸರಿಂದ ಹೆಣವನ್ನು ಪಡೆದುಕೊಳ್ಳುತ್ತಿದ್ದರು. ಸುಮ್ಮನೆ ಅವುಗಳನ್ನು ತೆಗೆದುಕೊಂಡು ಹೋಗಿ ದಫನ ಮಾಡುವ ಉಸಾಭರಿ ಕಡಿಮೆಯಾಯಿತಲ್ಲಾ ಎಂದು ಪೊಲೀಸರು ಸಹ ಮೃತದೇಹವನ್ನು ಆಸ್ದತ್ರೆಯವರಿಗೇ ಕೊಟ್ಟು ಹೋಗುತ್ತಿದ್ದರು.  ಆದರೆ ಆಸ್ಪತ್ರೆಯವರು ಮಾತ್ರ ಅಂತಹ ಮೃತ ದೇಹಗಳನ್ನು ರಾಜ್ಯದ ಮೆಡಿಕಲ್ ಕಾಲೇಜುಗಳಿಗೆ ಕದ್ದು ಮಾರಾಟ ಮಾಡಿ  ದೊಡ್ಡ ಹಗರಣವನ್ನೇ ಸೃಷ್ಟಿಸಿದರು. ಅಪರಿಚಿತ ಹೆಣಗಳು ದೊರೆತರೆ ಪೊಲೀಸರು ಅವುಗಳ ಬಗ್ಗೆ ವಿಶೇಷ ಮುತುವರ್ಜಿಯಿಂದ ಪತ್ತೆಗೆ ಪ್ರಯತ್ನಪಡಬೇಕು. ಹೇಗೆ ಮೃತಪಟ್ಟಿರುತ್ತಾರೆ ಎಂಬ ಬಗ್ಗೆ ತನಿಖೆಯನ್ನು ನಡೆಸಿ ತಿಳಿದುಕೊಳ್ಳಬೇಕು.  ಎರೆಡು ಮೂರು ದಿವಸ ಕಾದು ನಂತರವು ಪತ್ತೆಯಾಗಿಲ್ಲವೆಂದರೆ ಹೆಣದ ಪೋಸ್ಟ್ ಮಾರ್ಟಂಮಾಡಿ ಮೃತದೇಹವನ್ನು ಸಾರ್ವಜನಿಕ ಸ್ಮಶಾನದಲ್ಲಿ ಮಹಜರು ಕ್ರಮ ಜರುಗಿಸಿ ಸಾಕ್ಷಿಗಳ ಸಮಕ್ಷಮ ಹೂತು ಹಾಕಬೇಕು. ಇವೆಲ್ಲವನ್ನೂ ಪೊಲೀಸರು ಕಡತದಲ್ಲಿ ದಾಖಲು ಮಾಡಬೇಕು. ಅಪರಿಚಿತ ಮೃತದೇಹಗಳ ಗುರುತು ಪತ್ತೆಗೆ ಕ್ರಮ ಕೈಗೊಳ್ಳಬೇಕು.  ವಿಷಯ ಹೀಗಿರುವಾಗ ಯಾವ ಪೊಲೀಸರು ಯಾವ ಉದ್ದೇಶಕ್ಕಾಗಿ ಮೃತದೇಹವನ್ನು ದಫನ್ ಮಾಡಲು ಗ್ರಾಮಪಂಚಾಯಿತಿಯವರಿಗೆ ವಹಿಸಿಕೊಟ್ಟಿದ್ದಾರೆ? ಆದರೆ ಈಗ ಮಾತ್ರ ಪೊಲೀಸರು ನಮ್ಮ ಬಳಿ ಹಿಂದಿನ ಯಾವುದೇ ಮಾಹಿತಿ ಇಲ್ಲವೆಂದು ಹೇಳುತ್ತಿದ್ದಾರೆ. ಗ್ರಾಮ ಪಂಚಾಯಿತಿಯ ಬಳಿ ಇರುವ ಮಾಹಿತಿಗಳು  ಧರ್ಮಸ್ಥಳದ ಪೊಲೀಸ್ ಠಾಣೆಯಲ್ಲಿ ಹೇಗೆ ಇಲ್ಲವಾಯಿತು?

ಯಾವುದೇ ವಿಚಾರವನ್ನು ಹಿಂದು ಮುಸ್ಲೀಮಿಕರಣ ಮಾಡಿ ಸರಕಾರವನ್ನು ಸಾರ್ವಜನಿಕರನ್ನು ಭಯ ಮತ್ತು ಗೊಂದಲದಲ್ಲಿರಿಸಿ ಕೇಸಿನ ಮೇಲೆ ಮಕಾಡೆ ಮಲಗಿಬಿಡುವ ಅಭ್ಯಾಸವನ್ನು ಕರಾವಳಿಯ ಪೊಲೀಸರು ಚೆನ್ನಾಗಿ ಮಾಡುತ್ತಾರೆ.  ಈಗಿನ ಎಲ್ಲಾ ಅವಾಂತರಗಳಿಗೂ ಇದೇ ಕಾರಣ. ಯೂಟ್ಯೂಬರ್ಗಳ ಮೇಲೆ ಹಲ್ಲೆ ಮಾಡಿದರೆ ಕ್ರಮ ತೆಗೆದುಕೊಳ್ಳಲು ಇಲ್ಲಿನ ಪೊಲೀಸರಿಗೆ ಗೃಹ ಸಚಿವರು ಅಥವಾ ಮುಖ್ಯಮಂತ್ರಿಯವರು ತಿಳಿಸಬೇಕಾಗಿದೆ. ಇಲ್ಲದಿದ್ದರೆ ಕೇಸು ಮಕಾಡೆ ಮಲಗಿ ಕೊಳ್ಳುತ್ತದೆ!

ಈಗ “ದೂರುದಾರ ಭೀಮನ” ದೂರಿನ ತನಿಖೆಯನ್ನು ನಡೆಸುತ್ತಿರುವ ಎಸ್ ಐಟಿಯು ಸಹ ಸಾರ್ವಜನಿಕರಿಗೆ ಮಾಹಿತಿಯನ್ನು  ನೀಡಿ ಗೊಂದಲವನ್ನು ನಿವಾರಿಸಲು ಪ್ರಯತ್ನಿಸಬೇಕು.   ಸತ್ಯಾಂಶ ಏನೆಂದು ತಿಳಿದುಕೊಳ್ಳಲು ಎಲ್ಲರೂ ಬಯಸುತ್ತಿದ್ದಾರೆ.  ಒಬ್ಬರನ್ನು ಆರೋಪಿಯಾನ್ನಾಗಿ ಮಾಡಿ ಎಂದು ಯಾರೂ ಹೇಳುತ್ತಿಲ್ಲ. ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುವುದೂ ಬೇಡ, ಆದರೆ ವಿಚಾರಣೆಯು ನಡೆಯಲಿ. ಜನರ ಅನುಮಾನದ ಆಧಾರದಲ್ಲಿ ವಿಚಾರಣೆಯು ನಡೆಯುತ್ತಿದೆ. ಅಟೆನ್ಷನ್ ಡೈವರ್ಷನ್ ಆಗೋದು ಬೇಡ. ಭಯ ಒತ್ತಡ ತಂತ್ರ ಮಾಡೋದರಿಂದ ಧರ್ಮಸ್ಥಳಕ್ಕೆ ಒಳ್ಳೆಯ ಹೆಸರು ಬಂದಂತಾಗುವುದಿಲ್ಲ. ಯೂಟ್ಯೂಬರ್ ಗಳಿಗೆ ಹೆದರಿಸೋದರಿಂದ, ಬೆದರಿಸೋದರಿಂದ, ಮಹೇಶ್ ತಿಮ್ಮರೋಡಿಗೆ  ಬೈಯೋದರಿಂದ ಜನರಲ್ಲಿರುವ ಅನುಮಾನವನ್ನು ನಿವಾರಿಸಿದಂತಾಗುವುದಿಲ್ಲ. 

ಮಹೇಶ್ ತಿಮ್ಮರೋಡಿಯವರು ಸಹ ಒಂಟಿ ಸಲಗದಂತೆ ಹೋರಾಡುತ್ತಿರುವುದು ನಿಜ. ಆದರೆ ತಮ್ಮ ಹೋರಾಟವು ಸಭ್ಯತೆಯನ್ನು  ಮೀರದಂತೆ ನೋಡಿಕೊಳ್ಳಬೇಕು. ಏಕೆಂದರೆ ಮಹೇಶ್ ತಿಮ್ಮರೋಡಿರವರು ಸಹ ಕರಾವಳಿಯಲ್ಲಿರುವ ಕಮ್ಯೂನಲ್ ಫ್ಯಾಕ್ಟರಿ ಒಂದರಲ್ಲಿ  ಬೆಳೆದವರೇ!  ಈ ಒಬ್ಬ ವ್ಯಕ್ತಿಯ ಸತತ ಹೋರಾಟದಿಂದಾಗಿಯೇ  ಸಾರ್ವಜನಿಕರು ಸತ್ಯಾಂಶವನ್ನು ತಿಳಿಯಲು ಬಯಸಿದ್ದಾರೆ. ನಿರಂತರ ಹೋರಾಟದ ಕಾರಣದಿಂದಲೇ ಕರಾವಳಿಯಲ್ಲಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಈ ಹೋರಾಟ ಇಲ್ಲಿಯವರೆಗೆ ಬಂದಿರುವುದು.    ಪರಿಸ್ಥಿತಿ  ಹೀಗಿರುವಾಗ ಪ್ರಶ್ನಿಸುವವರನ್ನುಹಲ್ಲೆಯ ಮೂಲಕ, ಬೆದರಿಸುವ ಮೂಲಕ ಹೆದರಿಸಿ ಧಮನಿಸಲು ಹೋದರೆ ಆ ಕಳಂಕವನ್ನು ಧರ್ಮಸ್ಥಳದ ನಾಗರೀಕರು ವಹಿಸಿಕೊಂಡಂತಾಗುತ್ತದೆ.

ಬಿ.ಆರ್. ಮಂಜುನಾಥ್, ಮೊ: 7353353797