ನಾಡಹಬ್ಬ ದಸರಾ ಮಹೋತ್ಸವದ ಪೂರ್ವಭಾವಿಯಾಗಿ ನಾಗರಹೊಳೆ ಅಭಯಾರಣ್ಯದ ವೀರನಹೊಸಳ್ಳಿಯಿಂದ ಮೈಸೂರಿಗೆ ಇಂದು ಸೋಮವಾರ ಪೂರವಾಹ್ನ ಗಜಪಯಣ ಆರಂಭವಾಯಿತು.
ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಒಂಭತ್ತು ಆನೆಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವುದರೊಂದಿಗೆ ಗಜಪಯಣಕ್ಕೆ ಚಾಲನೆ ನೀಡಿದರು. ಸಿಂಗರಿಸಿದ್ದ ದಸರಾ ಆನೆಗಳಾದ ಅಭಿಮನ್ಯು,ಭೀಮ,ಧನಂಜಯ, ಮಹೇಂದ್ರ, ಕಾವೇರಿ, ಏಕಲವ್ಯ, ಪ್ರಶಾಂತ, ಲಕ್ಷ್ಮಿ, ಕಂಜನ್ ಗೆ ಪಾದಪೂಜೆ ಮಾಡಲಾಯಿತು. ಚಿಕ್ಕಜಾಜೂರಿನ ಕಳಶ ಹೊತ್ತ ಮಹಿಳೆಯರು ಪೂರ್ಣ ಕುಂಭ ಸ್ವಾಗತ ನೀಡಿದರು.
ಆನೆಗಳಿಗೆ ಶ್ರೀಗಂಧ,ಪಂಚಫಲ,ಕಡುಬು,ಚಕ್ಕುಲಿ,ಹೋಳಿಗೆ,ಬೆಲ್ಲ,ದ್ರಾಕ್ಷಿ, ಗೋಡಂಬಿ,ಕಲ್ಲುಸಕ್ಕರೆ ನೈವೇದ್ಯ ಅರ್ಪಿಸಿ,ವನದೇವತೆ ಹಾಗೂ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಯಿತು.ಗಜಪಯಣಕ್ಕೂ ಮುನ್ನ ವಾಡಿಕೆಯಂತೆ ಗೇಟಿನಲ್ಲಿರುವ ಆಂಜನೇಯ ಸ್ವಾಮಿಗೆ ಮಾವುತರು ಮತ್ತು ಕಾವಾಡಿಗಳ ಕುಟುಂಬದವರು ವಿಶೇಷ ಪೂಜೆ ಸಲ್ಲಿಸಿದರು.
ನಂತರ ನಡೆದ ಸಮಾರಂಭದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ವೀರ ಮರಣವನ್ನಪ್ಪಿದ ಅಂಬಾರಿ ಆನೆ ಅರ್ಜುನನ ನೆನಪಿನಲ್ಲಿ ಮಾವುತ ಗುಂಡಣ್ಣ,ಕಾವಾಡಿ ನಂಜುಂಡಸ್ವಾಮಿಗೆ ಅರಣ್ಯ ಸಚಿವರು ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದರು.
ಆನೆಗಳು ನೇರವಾಗಿ ಮೈಸೂರಿನ ಅರಣ್ಯ ಭವನಕ್ಕೆ ಆಗಮಿಸಲಿದ್ದು,ಆಗಸ್ಟ್ ಏಳರಂದು ಅರಮನೆಗೆ ಬರಲಿವೆ.ಸಮಾರಂಭದಲ್ಲಿ ಸಚಿವ ಕೆ.ವೆಂಕಟೇಶ, ಶಾಸಕರಾದ ತನ್ವೀರ್ ಸೇಠ್,ಜಿ.ಡಿ.ಹರೀಶ್ ಗೌಡ,ರವಿಶಂಕರ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಜಿ.ಪಂ.ಸಿಇಓ ಯುಕೇಶ್ ಕುಮಾರ್, ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ,ಎಸ್ಪಿ ವಿಷ್ಣುವರ್ಧನ್, ಡಿಸಿಎಫ್ ಗಳಾದ ಸೀಮಾ,ಪ್ರಭುಗೌಡ ಉಪಸ್ಥಿತರಿದ್ದರು.