ಕನ್ನಡ ಕಲಿತು, ಕಲಿಸುತ್ತಿರುವ ಮುಂಬೈಯ ಸಾಕ್ಷಿ ಬೇದ್

ಕನ್ನಡ ಕಲಿತು, ಕಲಿಸುತ್ತಿರುವ ಮುಂಬೈಯ ಸಾಕ್ಷಿ ಬೇದ್

ಕನ್ನಡ ಕಲಿತು, ಕಲಿಸುತ್ತಿರುವ ಮುಂಬೈಯ ಸಾಕ್ಷಿ ಬೇದ್

ಉದ್ಯೋಗ ಅರಸಿಬಂದು ಇಲ್ಲಿಯೇ ಬದುಕು ಕಟ್ಟಿಕೊಳ್ಳುವ ಅನೇಕರು ಕನ್ನಡ ಕಲಿಯುವುದಿಲ್ಲ. ಕನ್ನಡದ ನೆಲದಲ್ಲಿ ಜೀವಿಸುತ್ತಿದ್ದರೂ ಕನ್ನಡ ಭಾಷೆ ಕಲಿಯಲು ಒಂದು ರೀತಿಯ ಅಸಡ್ಡೆ. ಕನ್ನಡ ಕಲಿಯದೆಯೇ ಇಲ್ಲಿ ಜೀವಿಸಬಹುದು ಎಂಬ ಧೋರಣೆ. ಆದರೆ, ಇದಕ್ಕೆ ಅಪವಾದವೂ ಉಂಟು. ಕನ್ನಡೇತರ ಅನೇಕರು ಹೊಟ್ಟೆಪಾಡಿಗಾಗಿ, ಅಧ್ಯಯನಕ್ಕಾಗಿ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು ಕನ್ನಡಿಗರೊಂದಿಗೆ ಕನ್ನಡಿಗರಾಗಿಯೇ ಬಾಳುತ್ತಿದ್ದಾರೆ. ಕೆಲವರು ತಾವು ಕನ್ನಡ ಕಲಿಯುವುದಲ್ಲದೇ ಕನ್ನಡೇತರ ಇತರರಿಗೂ ಕನ್ನಡ ಕಲಿಸುತ್ತಿದ್ದಾರೆ. ಅಂಥವರು ಕೆಲವರು ಮಾತ್ರ. ಮುಂಬೈಯ ಯುವತಿ ಸಾಕ್ಷಿ ಬೇದ್ ಅಂಥವರಲ್ಲಿ ಪ್ರಮುಖರು. 

ಸಾಕ್ಷಿ ಬೇದ್ ಮೂಲತಃ ಮುಂಬೈನವರು. ಹುಟ್ಟಿ, ಬೆಳೆದಿದ್ದು ಮುಂಬೈನಲ್ಲಿ. ತಂದೆ ವಿಪಿನ್ ಬೇದ್ ಉದ್ಯಮಿ, ತಾಯಿ ಸಪ್ನಾ ಬೇದ್, ಮಾತೃಭಾಷೆ ಮಾರ್ವಾಡಿ, ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೋಮಾ ನಂತರ ಎಂಜಿನಿಯರಿಂಗ್ ಓದಲು ಮೂರೂವರೆ ವರ್ಷಗಳ ಹಿಂದೆ ಬೆಂಗಳೂರಿಗೆ ಬಂದವರು, ಎಂಜಿನಿಯರಿಂಗ್ ಓದುತ್ತಲೇ ಕನ್ನಡವನ್ನು ಕಲಿತವರು. ಅಷ್ಟೇ ಅಲ್ಲ, ಕನ್ನಡೇತರರಿಗೂ ಕನ್ನಡ ಕಲಿಸಬೇಕೆಂದು ಹಂಬಲಿಸಿದವರು. ಅದಕ್ಕಾಗಿ ಕಾರ್ಯೋನ್ಮುಖರಾದರು. ಕನ್ನಡೇತರರು ಕನ್ನಡ ಕಲಿಯಲು ಸಾಕ್ಷಿ ಬೇದ್ ಸಾಕ್ಷಿ ಯಾದರು.

ಸಾಕ್ಷಿ ಮುಂಬೈನಿಂದ ಬೆಂಗಳೂರಿಗೆ ಬಂದಾಗ ಕಾಲೇಜಿನಲ್ಲಿ ಗೆಳೆಯರು ಹೆಚ್ಚಾಗಿ ಕನ್ನಡ ಮಾತಾಡುತ್ತಿದ್ದುದನ್ನು ಗಮನಿಸಿದರು. ಆದರೆ, ಕನ್ನಡ ಅರ್ಥ
ವಾಗುತ್ತಿರಲಿಲ್ಲ. ಸುತ್ತಲಿನ ಪರಿಸರದಲ್ಲಿ ಕನ್ನಡ ಭಾಷೆ ಕಿವಿಗೆ ಬೀಳುತ್ತಿದ್ದರೆ ಅರ್ಥವಾಗುತ್ತಿಲ್ಲವಲ್ಲ ಎಂಬ ಸಂಕಟ, ಕನ್ನಡದ ಪರಿಸರದಲ್ಲಿದ್ದೇನೆ. ಆದರೆ, ಕನ್ನಡ ಗೊತ್ತಿಲ್ಲ. ಬೆಂಗಳೂರಿನಲ್ಲಿದ್ದೇನೆ, ಆದರೆ, ಬೆಂಗಳೂರು ಹೇಗೆ ಎಂಬುದು ಅರ್ಥವಾಗುತ್ತಿಲ್ಲ ಎಂಬ ತೊಳಲಾಟ,

ಸಾಕ್ಷಿ ಬೇದ್ ಯಾವುದೇ ಒಂದು ಭಾಷೆ ಕಲಿತರೆ ಆ ಭಾಷೆಯ ಸಂಸ್ಕೃತಿ ತಿಳಿಯುತ್ತದೆ ಎಂಬ ಅರಿವು, ಕನ್ನಡ ಮತ್ತು ಸಂಸ್ಕೃತಿಯನ್ನು ತಿಳಿಯುವ ತುಡಿತ. ಕನ್ನಡದ ರಂಗಭೂಮಿ, ಚಲನಚಿತ್ರ, ಕಲೆ, ಸಾಹಿತ್ಯದ ಬಗ್ಗೆ ತಿಳಿಯಬೇಕು ಎಂಬ ಇಚ್ಛೆ, ಕನ್ನಡ ಕಲಿತರೆ ಕನ್ನಡಿಗರ ಜೊತೆ ಒಡನಾಟ ಸಾಧ್ಯ ಎಂಬ ಹಂಬಲ. ಕನ್ನಡ ಕಲಿಯಲೇಬೇಕೆಂಬ ಪಣ, ಅದಕ್ಕಾಗಿ ಶ್ರಮ.

ಸಾಕ್ಷಿ ಬೇದ್ ಅವರಿಗೆ ಕನ್ನಡ ಕಲಿಕೆಗೆ ಮಾರ್ಗ ತಿಳಿಯಲಿಲ್ಲ. ಅವರಿಗೆ ಇದಾಯಿತು ಸವಾಲು. ಕಾಲೇಜಿನಲ್ಲಿ ಸಹಪಾಠಿಗಳ ಜೊತೆ ಕನ್ನಡ ಮಾತಾಡಲು ಪ್ರಯತ್ನ, ಸಹಪಾಠಿಗಳಿಂದ ಕನ್ನಡ ಕಲಿಕೆಗೆ ನೆರವು. ತಪ್ಪು ಮಾತಾಡಿದಾಗ ಬೆರಳೆಣಿಕೆಯಷ್ಟು ಜನರು ತಮಾಷೆ   ಮಾಡಿದ್ದೂ ಉಂಟು. ಆದರೆ, ಬಹುತೇಕರಿಂದ ಉತ್ತೇಜನದ ಮಾತು. ಪ್ರಯತ್ನಕ್ಕೆ ಪ್ರಶಂಸೆ. ಕಲಿಕೆಗೆ ನೆರವು.

ಸಾಕ್ಷಿ ಬೇದ್ ಅವರಿಗೆ ಆರಂಭದಲ್ಲಿ ಕನ್ನಡ ಮಾತಾಡಲು ಹಿಂಜರಿಕೆ. ತಪ್ಪಾದರೆ ಎಂಬ ಅಂಜಿಕೆ, ನಿಧಾನವಾಗಿ ಕನ್ನಡ ಮಾತಾಡಲು ಆರಂಭ, ತಪ್ಪು ಮಾತಾಡಿದಾಗ ಸಹಪಾಠಿಗಳು ತಿದ್ದಿದರು. ಉಚ್ಚಾರಣೆ ಸರಿ ಇಲ್ಲದಿದ್ದಾಗ ಸರಿಪಡಿಸಿದರು. ಕನ್ನಡ ಮಾತಾಡುವ ಆತ್ಮವಿಶ್ವಾಸ ನಿಧಾನವಾಗಿ ಬೆಳೆಯಿತು.

ಸಾಕ್ಷಿ ಬೇದ್ ಕನ್ನಡ ಕಲಿಯಲು ನೆರವಾಗುವ ಪುಸ್ತಕಗಳನ್ನು ಓದಿದರು. ಮಾತಾಡುವ ಕನ್ನಡ, ಬರೆಯುವ ಕನ್ನಡ ಬೇರೆ ಎಂಬುದು ಅವರಿಗೆ ಅರ್ಥವಾಯಿತು. ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಲು ಆರಂಭಿಸಿದರು. ಕನ್ನಡ ಭಾಷೆಯನ್ನು ಹೇಗೆ ಮಾತಾಡುತ್ತಾರೆ ಎಂದು ಗ್ರಹಿಸಲು ಶುರು ಮಾಡಿದರು. ಜನರು ಕನ್ನಡ ಮಾತಾಡುವಾಗ ಪದಗಳ ಉಚ್ಛಾರಣೆಯನ್ನು ಸೂಕ್ಷ್ಮವಾಗಿ ಗಮನಿಸಿದರು. ಕನ್ನಡ ಪದಗಳ ತಿಳಿದುಕೊಂಡರು. ಕನಾಟಕದಲ್ಲಿ ಪ್ರದೇಶದಿಂದ ಪ್ರದೇಶಕ್ಕೆ ಕನ್ನಡದಲ್ಲಿ ಮಾತಾಡುವುದು ಸ್ವಲ್ಪ ಭಿನ್ನವಾಗಿರುತ್ತದೆ ಎಂಬುದನ್ನು ಅರಿತರು.

ಕಲಿತ ಮೇಲೆ ಸಾಕ್ಷಿ ಸುಮ್ಮನಾಗಲಿಲ್ಲ. ಕನ್ನಡೇತರರು ಕನ್ನಡ ಕಲಿಯಬೇಕು ಎಂದು ಬಯಸಿದರು. ಫೆಬ್ರವರಿ ೨೦೨೪ರಲ್ಲಿ ಇನ್‌ಸ್ಟಾ ಗ್ರಾಂ ಪೇಜ್‌ ಆರಂಭ, ಹೆಸರು 'ಮೋರ್ ದೆನ್ ಕನ್ನಡ್ ಗೊತ್ತಿಲ್ಲ'. ಈ ಇನ್‌ಸ್ಟಾ ಗ್ರಾಂ ಪೇಜ್‌ಗೆ 
ಬಹುಬೇಗ ಫಾಲೋಯರ್ಸ್‌ಗಳು.
ಸಾಕ್ಷಿ ಅವರು ಇನ್‌ಸ್ಟಾ ಗ್ರಾಂನಲ್ಲಿ
ಕನ್ನಡ ಕಲಿಸುವ ಕೆಲವು ಸೆಕೆಂಡುಗಳ ಕಾಲದ ವಿಡಿಯೋ ಮಾಡಿ ಹರಿಬಿಟ್ಟರು. 
ಕನ್ನಡ ಪದಗಳ ಅರ್ಥವನ್ನು ವಿವರಿಸತೊಡಗಿದರು. 
ಸರಳ, ಸಂವಾದದ ರೂಪದಲ್ಲಿ ಪಾಠಗಳು. ಅನೇಕ ಕನ್ನಡಿಗರು ಉಚ್ಛಾರಣೆಗೆ, ಪದಗಳ ಅರ್ಥಗಳ ವಿವರಣೆಗೆ ನೆರವಾದರು. ಆನ್ ಲೈನ್‌ನಲ್ಲಿ ಕನ್ನಡ ಕಲಿಕೆ ಬಹುಬೇಗ ಜನಪ್ರಿಯತೆ ಪಡೆಯಿತು.
ಆನ್ ಲೈನ್‌ನಲ್ಲಿ ಕನ್ನಡ ಕಲಿಕೆ ಬಹುಬೇಗ ಜನಪ್ರಿಯತೆ ಪಡೆಯಿತು.
'ಮೋರ್ ದೆನ್ ಕನ್ನಡ್ ಗೊತ್ತಿಲ್ಲ' ಇನ್‌ಸ್ಟಾಗ್ರಾಂ ಪೇಜ್‌ಗೆ ಇವತ್ತು ನಾಲ್ಕು ಲಕ್ಷ ಫಾಲೋಯರ್ಸ್. ಜೊತೆಗೆ ವಾಟ್ಸಪ್ ಚಾನೆಲ್.

ಸಾಕ್ಷಿ ಅವರು ಇಂಗ್ಲಿಷ್, ಹಿಂದಿ, ಕನ್ನಡ, ಮರಾಠಿ, ಗುಜರಾತಿ, ಜರ್ಮನಿ, ಫ್ರೆಂಚ್ ಭಾಷೆಗಳನ್ನು ಬಲ್ಲರು. ಈಗ ಆನ್ ಲೈನ್ ಹಾಗೂ ಆಫ್ ಲೈನ್‌ನಲ್ಲಿ ಕನ್ನಡ ಕಲಿಸುವುದಕ್ಕಾಗಿ ತಮ್ಮದೇ ಆದ ಕಂಪನಿಯನ್ನು ನೋಂದಾಯಿಸಿದ್ದಾರೆ. ಹೆಸರು 'ಬೋಲೋ ಬೋಲಿ'. ಪ್ರಾದೇಶಿಕ ಭಾಷೆಗಳ ಕಲಿಕೆಗೆ ವೇದಿಕೆ ಕಲ್ಪಿಸಲು ಮುಂದಾಗಿದ್ದಾರೆ. ದೇಶದ ಪ್ರಮುಖ ನಗರಗಳಲ್ಲಿ ಭಾಷಾ ಕೇಂದ್ರಗಳನ್ನು ತೆರೆಯಬೇಕು. ಆಫ್ ಲೈನ್ ಮತ್ತು ಆನ್ ಲೈನ್ ಕ್ಲಾಸ್ ಮಾಡಬೇಕು ಎಂಬ ಉದ್ದೇಶ ಅವರದು.

ಕನ್ನಡ ಭಾಷೆ ಗೊತ್ತಾದರೆ ಕನ್ನಡ ಸಂಸ್ಕೃತಿ ತಿಳಿಯುತ್ತದೆ. ಜನರು ಪ್ರಾದೇಶಿಕ ಭಾಷೆಗಳನ್ನು ಕಲಿಯಬೇಕು. ಅಲ್ಲಿನ ಸಂಸ್ಕೃತಿಯನ್ನು ಅರಿಯಬೇಕು ಎನ್ನುತ್ತಾರೆ ೨೪ ವರ್ಷದ ಸಾಕ್ಷಿ ಬೇದ್, ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಸದಾ ಹೆಮ್ಮೆ ಪಡುತ್ತಾರೆ. ಸಂಸ್ಕೃತಿಯ ಉಳಿವಿಗಾಗಿ ಶ್ರಮಿಸುತ್ತಾರೆ. ಕನ್ನಡಿಗರು ಹೃದಯವಂತರು ಎಂದು ಸಾಕ್ಷಿ ಬೇದ್ ಗುಣಗಾನ ಮಾಡುತ್ತಾರೆ.

ಸಾಕ್ಷಿ ಬೇದ್ ಎಂಜಿನಿಯರಿಂಗ್ ಪದವಿ ಮುಗಿಸಿ ಎಂಬಿಎ ಓದುತ್ತಿದ್ದಾರೆ. ವಿದ್ಯಾಭ್ಯಾಸದ ಅನಂತರ ಬೆಂಗಳೂರು ತೊರೆಯಲು ಅವರಿಗೆ ಮನಸ್ಸಿಲ್ಲ. ತಮ್ಮದೇ 'ಬೋಲೋ ಬೋಲಿ' ಸ್ಟಾರ್ಟ್ ಅಪ್ ಕಂಪನಿಯ ಆರಂಭದ ತಯಾರಿಯಲ್ಲಿದ್ದಾರೆ. ಬೆಂಗಳೂರಿನ ಪರಿಸರ ಅವರಿಗೆ ಇಷ್ಟವಾಗಿದೆ. ಐ ಲವ್ ಬೆಂಗಳೂರು ಅಂತಾರೆ. ಬೆಂಗಳೂರಿನಲ್ಲೇ ನೆಲೆ ನಿಲ್ಲಬೇಕು ಎಂದು ಬಯಸುತ್ತಾರೆ.

ಕರ್ನಾಟಕದಲ್ಲಿರುವ ಕನ್ನಡೇತರರು ಕನ್ನಡ ಕಲಿಯಲು ಸಾಕ್ಷಿ ಬೇದ್ ಅವರು ಸ್ಫೂರ್ತಿ.

* ಡಾ. ಕೂಡ್ಲಿ ಗುರುರಾಜ ಹಿರಿಯ ಪತ್ರಕರ್ತರು