"ಹಲಾಲ್" ಜ್ಞಾನ ಅಗತ್ಯ..
"ಹಲಾಲ್" ಜ್ಞಾನ ಅಗತ್ಯ..
ದೇಶದ ಕೆಲವು ರಾಜಕಾರಣಿಗಳು ತಮ್ಮ ಲಾಭಕ್ಕೋಸ್ಕರ ಹಲಾಲ್ ಹೆಸರಿನಲ್ಲಿ ಜನರ ದೇಹಾರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಅರಬ್ಬಿ ಪದವಾದ "ಹಲಾಲ್"ಎಂದರೆ ಕನ್ನಡದಲ್ಲಿ " ಪ್ರಮಾಣಿಕರಿಸಲ್ಪಟ್ಟಿದೆ" ಎಂದೂ, ಇಂಗ್ಲೀಷಿನಲ್ಲಿ ಸರ್ಟಿಫೈಡ್, ಹಿಂದಿಯಲ್ಲಿ ಪ್ರಮಾಣಿತ್ ಹಾಗೂ ಯಹೂದಿಗಳಾಡುವ ಹೀಬ್ರೂ ಭಾಷೆಯಲ್ಲಿ ಕೋಷರ್ ಎಂದು ಅರ್ಥ. ಹಲಾಲ್ ಯಾವುದಾದರೂ ನಿರ್ದಿಷ್ಟ ವಸ್ತು ಅಥವಾ ಉತ್ಪನ್ನಕ್ಕೆ ಮಾತ್ರವೇ ಉಪಯೋಗಿಸುವ ಪದವಲ್ಲ. ಜನುಪಯೋಗಿ ಉತ್ಪನ್ನಗಳನ್ನು ಸರ್ಕಾರ ನೇಮಿಸಿದ ಸಂಸ್ಥೆಯಿಂದ ಸೇವನೆ ಅಥವಾ ಉಪಯೋಗಕ್ಕೆ ಯೋಗ್ಯವಾಗಿದೆ ಎಂದು ಪ್ರಮಾಣಿಕರಿಸುವುದನ್ನು ಹಲಾಲ್ ಎನ್ನುತ್ತಾರೆ..
ಆಹಾರ ಮತ್ತು ಔಷಧ ಉತ್ಪನ್ನಗಳನ್ನು ಅನಧಿಕೃತ ಸಂಸ್ಥೆಗಳು ಸೂಕ್ತ ಗುಣಮಟ್ಟ ಕಾಯ್ದುಕೊಳ್ಳದೆ ಅಕ್ರಮವಾಗಿ ಮಾರಾಟ ಮಾಡಬಾರದು ಹಾಗೂ ಗುಣಮಟ್ಟದ ವಸ್ತುಗಳನ್ನು ಜನರಿಗೆ ಲಭ್ಯವಾಗಿಸಬೇಕು ಎನ್ನುವ ಕಾರಣಕ್ಕೆ ಹಲವು ಇಸ್ಲಾಮಿಕ್ ದೇಶಗಳಲ್ಲಿ ಮತ್ತು ಮುಸ್ಲಿಂ ವಲಯಗಳಲ್ಲಿ ಈ ಹಲಾಲ್ ಪ್ರಮಾಣಿಕೃತ ವ್ಯವಸ್ಥೆ ಇರುವುದು. ಇದೊಂದು ಉತ್ಪನ್ನಗಳ ಗುಣಮಟ್ಟದ ಮಾಪನ ವ್ಯವಸ್ಥೆಯೇ ಹೊರತು ಕೆಲವು ರಾಜಕಾರಣಿಗಳು ರಾಜಕೀಯ ಭಾಷೆಯಲ್ಲಿ ಪುಂಗುವಂತೆ ಧರ್ಮಾಂತರ ಅಥವಾ ದುರುದ್ದೇಶದ ಕಾರಣಕ್ಕಿರುವುದಲ್ಲ ..
ಔಷಧ ಮತ್ತು ಆಹಾರದ ವಿಚಾರದಲ್ಲಿ ಇಡೀ ಜಗತ್ತಿನಲ್ಲಿ ಭಾರತ ಅತ್ಯಂತ ಅಸುರಕ್ಷಿತ ರಾಷ್ಟ್ರ. ಇಂದಿಗೂ ಕೂಡ ಔಷಧದ ಅಂಗಡಿಗಳಲ್ಲಿ ಮತ್ತು ಜನಸಾಮಾನ್ಯರು ಬಳಸುವ ದಿನನಿತ್ಯದ ಆಹಾರ ವಸ್ತುಗಳಲ್ಲಿ ಮನುಷ್ಯನಿಗೆ ಮಾರಣಾಂತಿಕ ಕಾಯಿಲೆಗಳು ತರಬಲ್ಲ ವಿಷವಸ್ತುಗಳ ಪ್ರಮಾಣ ಇತರ ಎಲ್ಲಾ ದೇಶಗಳಿಗಿಂತ ಭಾರತದಲ್ಲಿ ಹೆಚ್ಚಿದೆ ಎನ್ನುವುದು ಸಾಮಾನ್ಯ ಜ್ಞಾನ ಇರುವವರಿಗೆ ತಿಳಿದಿದೆ. ಆಹಾರದ ವಿಚಾರದಲ್ಲಿ ಭಾರತೀಯ ಉಪಖಂಡದ ದೇಶಗಳಲ್ಲಿರುವಷ್ಟು ಅಜ್ಞಾನಿಗಳು ಬೇರೆ ಎಲ್ಲೂ ಇಲ್ಲ. ಮಾಂಸವನ್ನು ಹೊರತುಪಡಿಸಿ ಪಕ್ಕದ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲೂ ಕೂಡ ಇದೇ ಅಜ್ಞಾನ ದೊಡ್ಡಮಟ್ಟದಲ್ಲಿದೆ. ಯುರೋಪ್ ದೇಶಗಳಲ್ಲಿ ಸರ್ಕಾರಗಳು ಆಹಾರ ಮತ್ತು ಔಷಧಗಳ ಮೇಲೆ ಒಂದು ದೊಡ್ಡ ನಿಗಾ ಇಟ್ಟಿವೆ. ಗಲ್ಫ್ ರಾಷ್ಟ್ರಗಳು ಸೇರಿದಂತೆ ಇತರ ಮುಸ್ಲಿಂ ರಾಷ್ಟ್ರಗಳಲ್ಲಿ ಕಳಪೆ ಗುಣಮಟ್ಟದ ಮತ್ತು ದೇಹಾರೋಗ್ಯಕ್ಕೆ ಪೂರಕವಲ್ಲದ ಉತ್ಪನ್ನಗಳ ಪ್ರಮಾಣ ಹಲಾಲ್ ಪ್ರಮಾಣಿಕೃತ ವ್ಯವಸ್ಥೆಯ ಕಾರಣದಿಂದ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದೇ ಹೇಳಬಹುದು..
ಪ್ರಾಣಿಗಳ ಮಾಂಸಕ್ಕೆ ಹಲಾಲ್ ಸರ್ಟಿಫಿಕೇಟ್ ಸಿಗಬೇಕಿದ್ದರೆ ಮಾಂಸದಲ್ಲಿ ರಕ್ತದ ಪ್ರಮಾಣ ಸ್ವಲ್ಪವೂ ಇರಬಾರದು. ಪ್ರಾಣಿಗಳ ರಕ್ತ ಸೇವನೆಯು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ ಎನ್ನುವ ಅಂಶವನ್ನು ವೈದ್ಯವಿಜ್ಞಾನ ದೃಢಪಡಿಸಿದೆ. ಕನಿಷ್ಠ ವಿದ್ಯಾಭ್ಯಾಸ ಹೊಂದಿದವರು ಸಣ್ಣದಾಗಿ ಗೂಗಲ್ ಸರ್ಚ್ ಮಾಡಿದರೂ ಈ ಸತ್ಯ ಗೊತ್ತಾಗುತ್ತದೆ. ಮಾಂಸಾಹಾರಿ ಪ್ರಾಣಿಗಳು ಕೂಡ ತಾವು ಬೇಟೆಯಾಡುವ ಪ್ರಾಣಿಯ ಕತ್ತಿಗೆ ಬಾಯಿ ಹಾಕಿ ಅನ್ನನಾಳ, ರಕ್ತನಾಳ ಮತ್ತು ಶ್ವಾಸನಾಳಗಳನ್ನು ಕಡಿದು, ಬೇಟೆಯಾಡಿದ ಪ್ರಾಣಿಯ ರಕ್ತವು ಸರಾಗವಾಗಿ ಹಾಗೂ ಸಂಪೂರ್ಣವಾಗಿ ಹರಿದು ಹೋದ ನಂತರ ಮಾಂಸವನ್ನು ಸೇವಿಸುತ್ತವೆ.
ರಕ್ತ ಮೆತ್ತಿದ ಮಾಂಸಕ್ಕೆ ಹಲಾಲ್ ಸರ್ಟಿಫಿಕೇಟ್ ಸಿಗುವುದಿಲ್ಲ. ಪ್ರಾಣಿಯನ್ನು ಬೇರೆ ಯಾವುದೇ ವಿಧಾನದಲ್ಲಿ ಕಡಿದರೂ ಕೂಡ ದೇಹದಲ್ಲಿರುವ ರಕ್ತದ ಅಂಶ ಪೂರ್ಣಪ್ರಮಾಣದಲ್ಲಿ ಹೊರಹೋಗುವುದಿಲ್ಲ. ಹೀಗೆ ಹೊರಹೋಗದೆ ಉಳಿದ ಮಾಂಸವು ಜನರ ಮಾನಸಿಕ ದೈಹಿಕ ಆರೋಗ್ಯವನ್ನು ದೊಡ್ಡಮಟ್ಟದಲ್ಲಿ ಏರುಪೇರುಗೊಳಿಸುತ್ತದೆ. ಪ್ರಾಣಿಗಳ ರಕ್ತವು ರೋಗವಾಹಕ ಮಾತ್ರವಲ್ಲ ಮನುಷ್ಯ ಸ್ವಭಾವದ ಮೇಲೆ ಪರಿಣಾಮ ಬೀರಬಲ್ಲ ಗುಣವಾಹಕವೂ ಹೌದು ಎನ್ನುವುದನ್ನು ಅಧ್ಯಯನಗಳು ಪುಷ್ಟೀಕರಿಸಿವೆ. ಸತ್ಯ ಹೀಗಿದ್ದರೂ, ರಾಜಕಾರಣಿಗಳು ಹಲಾಲ್ ವಿಚಾರದಲ್ಲಿ ತಪ್ಪು ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡುವುದರ ಮೂಲಕ ಜನಸಾಮಾನ್ಯರ ಆರೋಗ್ಯದೊಂದಿಗೆ ಚೆಲ್ಲಾಟವಾಡಿ ರಾಜಕಾರಣ ಮಾಡುತ್ತಿರುವುದು ದುರಂತ. ನೀವು ಸತ್ತರೆ ಸಾಯಿರಿ, ನಮಗೊಂದು ಓಟು ಕೊಡಿ ಎನ್ನುವುದು ಇದರ ಹಿಂದಿರುವ ಉದ್ದೇಶ. ಈ ಮೇಲಿನ ವಿಚಾರಗಳು ಮಾತ್ರವಲ್ಲದೆ ಹಲಾಲ್ ವಿಚಾರದಲ್ಲಿ ವಿಸ್ಕೃತ ವಿಚಾರಗಳು ಮತ್ತು ಮಾಹಿತಿಗಳು ನನ್ನ ಪುಸ್ತಕ "ಧರ್ಮಾಧರ್ಮ" ದಲ್ಲಿದೆ..
✍🏾ಮುಷ್ತಾಕ್ ಹೆನ್ನಾಬೈಲ್


