ಮಾತು ಮಾತು: ಗಡಿಗೆಯ ತೂತು

ಮಾತು ಮಾತು: ಗಡಿಗೆಯ ತೂತು

ಮಾತು ಮಾತು: ಗಡಿಗೆಯ ತೂತು 
..............................................................

ಮಾತು ಎಂಬುದು ಮನುಷ್ಯನಿಗೆ ದೇವರು ಕೊಟ್ಟ ವರ ಮತ್ತು ಸ್ವರ. ಕೆಲವು ಬಾರಿ ಶಾಪವೂ ಹೌದು. ಇದು ಅತಿಯಾದರೆ ಮನಸ್ಸಿಗೆ ಜ್ವರ. ಹಿತವಾಗಿದ್ದರೆ ಮನಸ್ಸಿಗೆ ಹಗುರ. 

 ಪ್ರಾಣಿಗಳಿಗೆ ಮಾತಾಡುವ ವರದಾನವನ್ನು ದೇವರು ನೀಡಿಲ್ಲ ಅಥವಾ ಪ್ರಾಣಿಗಳು ಮಾತನಾಡುವುದು ನಮಗೆ ಅರ್ಥವಾಗುವುದಿಲ್ಲ. ಈಗ ಜಗತ್ತಿನಲ್ಲಿ ನಡೆಯುವ ಶೇಕಡ 50 ರಷ್ಟು ವ್ಯಾಪಾರ ವಹಿವಾಟು, ಸಂಬಂಧಗಳು, ಮಾತಿನಲ್ಲಾದರೆ ಉಳಿದವು ಬರಹಗಳಲ್ಲಿ ಅಥವಾ ಲಿಖಿತವಾಗಿ  ನಡೆಯುತ್ತಿವೆ. ಈ ದೃಷ್ಟಿಯಲ್ಲಿ ಮಾತೇ ಮಾಣಿಕ್ಯ... ಮಾತು ಬಲ್ಲವನೇ ಚಾಣಕ್ಯ ಎಂಬುದಂತೂ ಸತ್ಯ.

 ಮಾತು ಎಂಬುದು ಗಂಡ ಹೆಂಡತಿಯ ಪ್ರೀತಿಗೂ ಮೂಲ. ಜಗಳಕ್ಕೂ ಮೂಲ-ವ್ಯಾಧಿ. ಹಾಗಂತ ಮಾತಿನಿಂದ ಜಗಳವಾಗುತ್ತದೆ ಅಂತ ಗಂಡ ಹೆಂಡತಿಯಲ್ಲಿ ಯಾರೊಬ್ಬರೂ ಮೌನಕ್ಕೆ ಶರಣಾದರೂ ಮನೆಯ ವಾತಾವರಣ ಸಪ್ಪೆ. ಆಗ ಸೂರ್ಯಂಗು ಚಂದ್ರಂಗು ಬಂದಾರೆ ಮುನಿಸು... ಎಂದು ಶುಭ ಮಂಗಳ ಸಿನಿಮಾದ ಹಾಡನ್ನು ಹಾಡಬೇಕಷ್ಟೇ.

 ಮಾತೊಂದು ಇದ್ದರೆ ರಾಜಕಾರಣದಲ್ಲಿ ಯಾವುದೇ ಹುದ್ದೆಗೂ ಏರಬಹುದು ಅಥವಾ ಹಾರಬಹುದು ಎಂಬುದು ಪ್ರತೀತಿ. ಆದರೆ ಮನಮೋಹನ್ ಸಿಂಗ್ ಅವರಂತಹವರು ಪ್ರಧಾನಿಯಾದ ನಂತರ ಮಾತು ಮುಖ್ಯವಲ್ಲ. ಹೈಕಮಾಂಡಿನ ಮಾತು ಕೇಳುವುದು ಮುಖ್ಯ ಎಂಬ ಹೊಸ ರಾಜಕೀಯ ವರಸೆ ಚಾಲ್ತಿಗೆ ಬಂತು. ವಾಜಪೇಯಿಯವರ ಮಾತೆಂದರೆ ಅದು ಕವನಗಳ ಮಸಾಲಾ ಬಾತ್ ಆಗಿರುತ್ತಿತ್ತು. 

ಮುರಾರ್ಜಿ ದೇಸಾಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಒಮ್ಮೆ ಸ್ವಮೂತ್ರ ಪಾನದ ಬಗ್ಗೆ ಮಾತನಾಡಿ ಮೂತ್ರಾರ್ಜಿ ದೇಸಾಯಿ ಎಂದು ನಿಕ್ ನೇಮ್ ಅಂಟಿಸಿಕೊಂಡಿದ್ದರು. ಇಂದಿರಾ ಗಾಂಧಿಯವರ ಮಾತೆಂದರೆ ಅದು ಕೆಲವರಿಗೆ ಕೊಡಲಿ ಪೆಟ್ಟಾಗಿ ಕಾಡುತ್ತಿತ್ತು. ನರೇಂದ್ರ ಮೋದಿ ಅವರಂತೂ ತಮ್ಮ ಮಾತಿಗೆ ಮನ್ ಕಾ ಬಾತ್ ಎಂದರು.

 ಆಕಾಶವಾಣಿಯಿಂದ ಪ್ರಸಾರವಾಗುವ ಅವರ ಮನ್ ಕಾ ಬಾತ್ ಕನ್ನಡದಲ್ಲಿ ಮಾತು ಆಯಿತು. ಮಾಜಿ ಪ್ರಧಾನಿ ದೇವೇಗೌಡರಿಗೆ ಕನ್ನಡದಲ್ಲಿ ಮಾತನಾಡುವುದೆಂದರೆ ರಾಗಿ ಮುದ್ದೆ ತಿಂದಷ್ಟೇ ಸಲೀಸು, ಆದರೆ ಹಿಂದಿ ಮಾತನಾಡುವುದೆಂದರೆ ಅವರಿಗೆ ಕಬ್ಬಿಣದ ಕಡಲೆ ಜಗಿದಷ್ಟೇ ಕಷ್ಟ.

 ಸಾಮಾನ್ಯವಾಗಿ ಹಳೆ ಮೈಸೂರು ಭಾಗದವರಿಗೆ ಹಿಂದಿ ಮಾತನಾಡುವುದೆಂದರೆ ಅದು ರಷ್ಯನ್ ಅಥವಾ ಚೈನೀಸ್ ಭಾಷೆಗಿಂತಲೂ ಪ್ರಯಾಸದ ಕೆಲಸ ಎಂಬ ಮಾತಿದೆ.

 ಇನ್ನು ದಕ್ಷಿಣ ಕನ್ನಡದವರು ತುಳುವಿನಲ್ಲಿ ತುಳುಕಾಡಿದಂತೆ ಆಡುವ ಮಾತು ಪಕ್ಕದಲ್ಲೇ ಇರುವ ಉತ್ತರ ಕನ್ನಡದವರಿಗೂ ಕೆಲವೊಮ್ಮೆ ಅರ್ಥವಾಗುವುದಿಲ್ಲ. ಮಂಗಳೂರಿನವರ ಕೊಂಕಣಿ ಪಕ್ಕದ ಮಡಿಕೇರಿಯವರಿಗೂ ತಿಳಿಯುವುದಿಲ್ಲ, ಆದರೆ ಗೋವಾದಲ್ಲಿ ಕೊಂಕಣಿ ಬಹು ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆ.

ಅನೇಕ ಸಂದರ್ಭಗಳಲ್ಲಿ ಮಾತಿಗಿಂತ ಮೌನವೇ ಲೇಸು ಎಂದು ಪಿ.ವಿ.ನರಸಿಂಹರಾಯರು ಪ್ರಧಾನಿಯಾಗಿದ್ದಾಗ ಹೇಳಿಕೊಟ್ಟು ಮೇಲ್ಪಂಕ್ತಿಯಾಗಿದ್ದರು. ಗಾಂಧೀಜಿಯವರು ಆಗಾಗ ಮೌನ ವ್ರತ ಮಾಡುತ್ತಿದ್ದರು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿಯಾಗಿದ್ದಾಗ ಗಂಟಲು ನೋವು ತೀವ್ರವಾಗಿ ಕಾಡಿದಾಗ ಮೌನಕ್ಕೆ ಶರಣಾಗುತ್ತಿದ್ದರು. 

 ತಿಂಗಳಿನಲ್ಲಿ ಒಂದು ದಿನ ಸಂಪೂರ್ಣ ಮೌನವ್ರತ ಆಚರಿಸಿ ಉಳಿದ ಬಾಯಿ ಚಪಲದ ರಾಜಕಾರಣಿಗಳಿಗೆ ಹೆಗಡೆಯವರು ಆಗ ಮಾದರಿಯಾಗಿದ್ದರು. ಆದರೆ ಈಗಿನ ನಮ್ಮ ರಾಜಕಾರಣಿಗಳು ಆಡುವ ಮಾತಿನ ಮೇಲೆ, ಅವರ ಭಾಷಣದ ಮೇಲೆ ತೆರಿಗೆ ವಿಧಿಸುವ ಪದ್ಧತಿ ಜಾರಿಯಾದರೆ ನಮ್ಮ ದೇಶದ ಆದಾಯವಾದರೂ ದುಪ್ಪಟ್ಟಾಗುತ್ತಿತ್ತೇನೊ. ಆದರೆ ರಾಜಕಾರಣಿಗಳನ್ನೂ ಮೀರಿಸುವಷ್ಟು ಮೊಬೈಲುಗಳೇ ಮಾತನಾಡುತ್ತಿವೆ ಎಂಬುದು ಇತ್ತೀಚಿನ ವರ್ಷಗಳ ಬೆಳವಣಿಗೆ. 

 ಕೆಲವರ ಮಾತು ಎಂದರೆ ಗಡಿಗೆಯ ತೂತು. ಕಾರಣ ಗಡಿಗೆಗೆ ತೂತಾದರೆ ಹೇಗೆ ನೀರನ್ನು ಸಂಗ್ರಹಿಸಲು ಸಾಧ್ಯವಿಲ್ಲವೋ, ಹಾಗೆಯೇ ಗುಟ್ಟನ್ನು ಅಥವಾ ರಹಸ್ಯವನ್ನು ಕೆಲವರಿಗೆ ಬಾಯಲ್ಲಿ ಹಿಡಿದಿಟ್ಟುಕೊಳ್ಳಲಾಗುವುದಿಲ್ಲ. ಹೀಗಾಗಿ ಕೆಲವರ ಬಾಯಿಗೆ ಬೊಂಬಾಯಿ- ದುಬಾಯಿ ಎಂಬ ಬಿರುದು ಬಂದಿರುತ್ತದೆ.

 ಕೆಲವರಿಗೆ ಮಾತಿನ ಛಲ ಚಪಲ ಜಾಸ್ತಿ. ಅವರು ಮಾತಿಗೆ ಪ್ರಾರಂಭಿಸಿದರೆ ಸರಪಟಾಕಿಸರಕ್ಕೆ ಬೆಂಕಿ ಹಚ್ಚಿದಂತಿರುತ್ತದೆ. ಆದರೆ ನಮ್ಮ ಮಾತು ಮುಂಗಾರು ಮಳೆಯಂತೆ ಹಿತವಾಗಿರಬೇಕು. ಮಳೆ ನಿಂತ ನಂತರವೂ ಹನಿ ತೊಟ್ಟಿಕ್ಕುವಂತೆ ನಮ್ಮ ಮಾತು ಮುಗಿದ ನಂತರವೂ ಅದು ವಿಚಾರಗಳನ್ನು ಸುರಿಸುವಂತಿರಬೇಕು. ಇಲ್ಲದಿದ್ದರೆ ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಮಾತನಾಡಿದ್ದಲ್ಲ ಸ್ವಾರ್ಥ. ವ್ಯರ್ಥ.

 ಮಾತಿನಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ..
 ಹೂ.. ಅಂತೀಯಾ ಉಹೂ.. ಅಂತೀಯಾ.. ಎನ್ನುವ,  ಪ್ರೀತಿಗಿಂತಲೂ ಜಾಸ್ತಿ ಮಾತನಾಡಿ, ಅಂಗೈಯಲ್ಲೇ ಅರಮನೆ ತೋರಿಸುವ ಮಂದಿಯೂ ನಮ್ಮಲ್ಲಿ ಸಾಕಷ್ಟಿದ್ದಾರೆ. 

 ಮಾತುಗಾರಿಕೆ ಕೆಲವರಿಗೆ ಕಲೆಯಾದರೆ ಇನ್ನೂ ಹಲವರು ಮಾತನ್ನೇ ಅತಿಯಾಗಿ ಆಡುತ್ತಾ ತಮ್ಮ ವ್ಯಕ್ತಿತ್ವಕ್ಕೆ ಕಲೆ ಮಾಡಿಕೊಳ್ಳುತ್ತಾರೆ. ಕೇವಲ ಮಾತಿನಿಂದ ಮಾವಿನಕಾಯಿಯನ್ನು ಮರದಿಂದ ಹೊಡೆದುರುಳಿಸುವುದು ಸಾಧ್ಯವಿಲ್ಲವೆಂಬುದು ಗೊತ್ತಿದ್ದರೂ, ಪುಂಖಾನುಪುಂಖವಾಗಿ ಮಾತನಾಡುತ್ತಾ ಮೈ ಮರೆಯುವವರೂ ನಮ್ಮಲ್ಲಿ ಸಾಕಷ್ಟು ಮಂದಿಯಿದ್ದಾರೆ.

 ಇನ್ನು ಮದುವೆಗಿಂತ ಮುಂಚೆ ಪ್ರಿಯತಮೆಯ ಮಾತು - ಖುಷಿಯ ಕೇಸರಿಬಾತು. ಮದುವೆ ನಂತರ ಆಕೆಯ ಮಾತು ಖಾರಾ ಮೆಣಸಿನಕಾಯಿ ಬಾತು... ಎಂಬಂತಹ ಅನುಭವಸ್ಥರೂ ನಮ್ಮಲ್ಲಿ ಬೇಕಷ್ಟಿದ್ದಾರೆ. 

 ಮಾತಾಡುವುದರಲ್ಲೂ ಹಲವು ಬಗೆ. ಕೆಲವರು ಚಕ್ಕಡಿ ಗಾಡಿಯಂತೆ ನಿಧಾನವಾಗಿ ಮಾತನಾಡುತ್ತಾರೆ. ಆದರೆ ರಾಜಕೀಯದ ಮಂದಿಯ ಮಾತನ್ನು ರೈಲಿಗೆ ಹೋಲಿಸುವುದು ವಾಡಿಕೆ. ಈ ರೈಲಿಗೆ ಹಳಿ ಬೇಕಿಲ್ಲ. ಕೆಲವರ ಮಾತು ಕೇಳುವಾಗ ಕರಗಸದಿಂದ ನಮ್ಮ ಕಿವಿಯನ್ನೇ ಕೊರೆದ, ನಮ್ಮ ಮೆದುಳನ್ನೇ ಗಿವುಚಿದ ಅನುಭವವಾಗುವುದು ವಿಶೇಷ. 


ಕೇಳುಗರ ಮನಸ್ಸಿನಲ್ಲಿ ಕೊಳವೆ ಬಾವಿ ಕೊರೆದಂತೆ ಅಥವಾ ಅವರ ಕರುಳನ್ನೇ ಬಗೆದಂತೆ, ಹಾಡಿದ್ದನ್ನೇ ಮತ್ತೆ ಹಾಡುವ ಕಿಸಬಾಯಿದಾಸರೂ ನಮ್ಮಲ್ಲಿ ಹೇರಳವಾಗಿದ್ದಾರೆ.

ಮಲೆನಾಡು, ಕರಾವಳಿ ಭಾಗದಲ್ಲಂತೂ ಒಳ್ಳೆಯ ಮಾತುಗಾರಿಕೆಯಿದ್ದರೆ ಉತ್ತಮ ಯಕ್ಷಗಾನ ಪಟುವಾಗಲು ದೊಡ್ಡ ಅರ್ಹತೆ. ಈ ಕಾಲದಲ್ಲಿ ಮಾತಿನ ಮತ್ತು ನೋಟಿನ ಬಲವಿದ್ದರೆ ಸಾಕು... ಆ ಸ್ವರ್ಗಕ್ಕೇ ಕಿಚ್ಚು ಹಚ್ಚಬಹುದು. ಅಷ್ಟೇ ಅಲ್ಲ ಪಕ್ಕದ ಮನೆಯವರ ಹೊಟ್ಟೆಕಿಚ್ಚನ್ನೂ ಹೆಚ್ಚಿಸಬಹುದು.

 ಕೆಲವರು ಆಡುವ ಮಾತನ್ನು ಕೇಳಿದರೆ ಅವರು ಯಾವ ಪ್ರದೇಶದವರು ಎಂದು ಸುಲಭವಾಗಿ ಪತ್ತೆ ಹಚ್ಚಬಹುದು. ಎಂತ ಮಾರಾಯ.. ಮಂಡೆ ಸಮ ಉಂಟಾ ಎಂದು ಕೇಳಿದರೆ ಅವರು ಮಂಗಳೂರಿನವರು. ಹೋಯಕು ಬರ್ಕು, ಕಾಂಬ ಅಂದರೆ ಅವರು ಕುಂದಾಪುರದವರು, ಯಾಕಲೇ ಮೈಗೆ ಹೆಂಗೈತಿ.. ಧೀಡ್ ಶಾಣ್ಯ ಆಗಾಕ್ ಹೋಗಬೇಡ ಅಂದರೆ ಅವನು ಗುಲ್ಬರ್ಗದವನು, ಎಂಗೆ ಆಸರಿಗೆ ಈಗ ಬ್ಯಾಡ, ಕವಳ ಹಾಕೊಂಡು ಭರ್ತಿ, ಅಡ್ಡಿಲ್ಲೇ ಅಡ್ಡಿಲ್ಲೆ ಎಂದರೆ ಆತ ಶಿರಸಿ ಕಡೆಯವನು ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. 

ನಮ್ಮೂರಿನಲ್ಲಿ ವಾಣಿ ಎಂಬವಳು ತುಂಬಾ ಮಾತನಾಡುತ್ತಿದ್ದರಿಂದ ಆಕೆ ಘಟವಾಣಿ ಎಂದೇ ಊರಲ್ಲೆಲ್ಲ ಪ್ರಸಿದ್ಧಿಯಾಗಿದ್ದಳು. ಮಾತು ವ್ಯಕ್ತಿತ್ವಕ್ಕೂ ಕನ್ನಡಿ ಇದ್ದಂತೆ.

 ಮೃದು ಸ್ವಭಾವದವರ ಮಾತು ಕೂಡ  ಸಾಮಾನ್ಯವಾಗಿ ಮೃದುವಾಗಿಯೇ ಇರುತ್ತದೆ. ಹಾಗಂತ ಆ ಮಾತಿನಲ್ಲಿ ಸತ್ಯವೇ ತುಂಬಿರುತ್ತದೆ ಎನ್ನಲು ಸಾಧ್ಯವಿಲ್ಲ. ಇನ್ನೂ ಕೆಲವರು ಸುಳ್ಳನ್ನು ಸತ್ಯ ಎಂಬಂತೆ ಮಾತಿನಲ್ಲಿ ಬಿಂಬಿಸುವ ಚತುರರಾಗಿರುತ್ತಾರೆ. ಮನೆಯಲ್ಲಿ ಹೆಂಡತಿ ತೆಗೆದುಕೊಳ್ಳುವ ಕ್ಲಾಸನ್ನು ಕೇಳುವುದೆಂದರೆ ಗಂಡನಿಗೆ ಸುತ್ತಿಗೆಯಲ್ಲಿ ಹೊಡಿಸಿಕೊಂಡ ಅನುಭವ.

 ಕನ್ನಂಬಾಡಿ ಅಣೆಕಟ್ಟೆಯಲ್ಲಿ ಎಷ್ಟು ಕಲ್ಲುಗಳಿವೆ ? ಆಕಾಶದಲ್ಲಿ ಎಷ್ಟು ನಕ್ಷತ್ರಗಳು ಈಗ ಮಿನುಗುತ್ತಿವೆ ಎಂಬ ಲೆಕ್ಕವನ್ನು ಪಕ್ಕಾ ನಂಬುವಂತೆ ಹೇಳುವ ಮಾತಿನ ಮಲ್ಲರೂ, ಮಾತಿನ ಮಲ್ಲಿಯರೂ ನಮ್ಮಲ್ಲಿ ಸಾಕಷ್ಟಿದ್ದಾರೆ. ಇವರು ಅಂಗೈಯಲ್ಲಿಯೇ ಅಥವಾ ತಮ್ಮ ಬಾಯಿಯಲ್ಲಿಯೇ ಅಮೆರಿಕವನ್ನೂ ತೋರಿಸಬಲ್ಲರು.

ಇಂಥವರ ಮಾತನ್ನು ಕೇಳುವಾಗ ನಾವು ಕಿವುಡರಾಗಿ ಹುಟ್ಟಿದ್ದರೆ ಇನ್ನೂ ಒಳ್ಳೆಯದಿತ್ತೇನೋ ಎಂದು ಅನ್ನಿಸುವುದು ಸಹಜ. ಕೆಲವರ ಮಾತು ಕೇಳಿದರಂತೂ ಅವರ ಮೆದುಳಿನ ಆರೋಗ್ಯದ ಬಗ್ಗೆ ಪ್ರಶ್ನೆಗಳೇಳುತ್ತವೆ. ಅವರ ಮೆದುಳಿಗೂ ನಾಲಿಗೆಗೂ ಕನೆಕ್ಷನ್ ತಪ್ಪಿರಬಹುದು ಎಂಬ ಸಂಶಯ ಮೂಡುವಂತಾಗುತ್ತದೆ.

 ಇನ್ನು ಗುಂಡು ಹಾಕುವ ಮಂದಿ ಸೇರಿದರಂತೂ ಸದಾ ಮಾತಿನ ಸಾಮ್ರಾಜ್ಯದಲ್ಲಿ ತೇಲಾಡುತ್ತಿರುತ್ತಾರೆ. ಹೈಸ್ಕೂಲಿನಲ್ಲಿ ಓದುವಾಗ ಇಂಗ್ಲಿಷ್ ವಿಷಯದಲ್ಲಿ ಮೂರು ಬಾರಿ ಫೇಲಾದವನು ಕೂಡ ಗುಂಡು ಹಾಕಿದಾಗ ಮಾತ್ರ ಇಂಗ್ಲಿಷ್ ಪ್ರೊಫೆಸರನೇ ದಿಗ್ ಭ್ರಾಂತನಾಗುವಂತೆ  ಮಾತನಾಡಬಲ್ಲ. ಹಿಂದಿನ ಕಾಲದಲ್ಲಿ ಅಕ್ಬರನ ಆಸ್ಥಾನದಲ್ಲಿ ಬೀರಬಲ್ಲ ಉತ್ತಮ ಮಾತುಗಾರನಾಗಿದ್ದನಂತೆ. ಈಗಿನ ಕಾಲದ ಗುಂಡಿನ ಆಸ್ಥಾನದಲ್ಲಿ ಅನೇಕ ಬಿಯರ್ ಬಲ್ಲರು ಉತ್ತಮ ಮಾತುಗಾರರೇ. 

 ಕೆಲವರಿಗಂತೂ ಸಭೆ ಸಮಾರಂಭಗಳಲ್ಲಿ ಮೈಕನ್ನು ಕಂಡರೆ ಗರ್ಲ್ ಫ್ರೆಂಡನ್ನು ಕಂಡಷ್ಟೇ ಖುಷಿ. ತಕ್ಷಣ ಅವರು ಆ ಮೈಕಿನ ಗಲ್ಲ ಸವರುತ್ತಾ, ಅವರು ಅಲ್ಪಪ್ರಾಣ ಮಹಾಪ್ರಾಣಕ್ಕೂ ಅವಕಾಶವಿಲ್ಲದಂತೆ ಮಾತನಾಡುವುದನ್ನು ಕೇಳುವುದೆಂದರೆ  ನಮಗೆ ನಿಜಕ್ಕೂ ಕಾಡುವುದು ಪ್ರಾಣ ಸಂಕಟ.

 ಬಹುತೇಕ ಸಂದರ್ಭದಲ್ಲಿ ನಮಗೆ ಇಷ್ಟವಾಗುವವರ ಮಾತೆಂದರೆ ಅದು ಪ್ರೀತಿಯ ಕುಟೀರ. ಇಷ್ಟವಾಗದವರ ಮಾತೆಂದರೆ ಅದು ಕರ್ಣ ಕಠೋರ. ಪ್ರತಿನಿತ್ಯ ಪತ್ರಿಕೆಯಲ್ಲಿ ಕೆಲವರು ಆಡುವ ಮಾತನ್ನು ಓದುವಾಗ ಸತ್ಯವಂತರಿಗೆ ಇದು ಕಾಲವಲ್ಲ ಎಂದು ವಿಷಾದವಾಗುತ್ತದೆ. ಹಾಗೆಯೇ ಮಿಥ್ಯವಂತರೇ ಇಲ್ಲಿ ನಿತ್ಯವಂತರು ಎಂಬ ಪರಮ ಸತ್ಯವನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ.

 ಕೆಲವೊಮ್ಮೆ ಮಾತಿನಲ್ಲಿರುವ ಒಂದೇ ಶಬ್ದ ಬೇರೆ ಬೇರೆ ಭಾವನೆಗಳನ್ನು ಧ್ವನಿಸುತ್ತದೆ. ಉದಾಹರಣೆಗೆ ಎಲ್ಲಿದ್ದೀಯಪ್ಪ ಎಂದು ಒಬ್ಬರು ಕೇಳಿದ್ದರು. ಆಗ ನಾನು ನನ್ನ ಶರೀರ ಇಂಥ ಕಡೆ ಇದೆ ಎಂದು ಹೇಳಿದಾಗ ಅವರು ಹೆದರಿದ್ದರು. ಕಾರಣ ಶರೀರ ಎಂಬ ಶಬ್ದವೇ ಅಶರೀರ ಎಂಬ ಧ್ವನಿಯನ್ನು ಸೂಸುಸುತ್ತದೆ. ಶರೀರ ಎಂಬುದನ್ನು ಜೀವಂತವಾಗಿರುವವರಿಗಿಂತ ನಿರ್ಜೀವವಾಗಿರುವವರಿಗೆ ಹೆಚ್ಚು ಬಳಸುವುದೇ ಇದಕ್ಕೆ ಕಾರಣ. 

 ಮಾತಿಗೆ ನುಡಿ ಎಂಬ ಶಬ್ದವೂ ಇದೆ. ಹೇಗೆ  ಸವಿ ಮಾತು, ಅಕ್ಕರೆಯ ಮಾತು, ಮೃದು ಮಾತು, ಒರಟು ಮಾತು, ಪಿಸುಮಾತು, ಹುಸಿ ಮಾತು, ಗುಸುಗುಸು ಮಾತು, ವದಂತಿ, ಗುಲ್ಲು ಎಂಬ ನಾನಾ ಪ್ರಕಾರಗಳಿರುವಂತೆ ನುಡಿಯಲ್ಲಿಯೂ ಶುಭ ನುಡಿ, ಬೆನ್ನುಡಿ, ಚೆನ್ನುಡಿ, ಮುನ್ನುಡಿ, ಸವಿ ನುಡಿ, ಕವಿನುಡಿ, ತೊದಲು ನುಡಿ, ಬಿರು ನುಡಿ ಈ ಮುಂತಾದ ನಮೂನೆಗಳುಂಟು. ಇಂತಹ ಅನೇಕ ನುಡಿಗಳಿಂದಲೇ ದೊಡ್ಡ ಗುಡಿ ಕಟ್ಟಬಹುದೇನೋ. 


ಹೀಗೆ ನುಡಿಗಳಿಂದಲೇ ಗುಡಿ ಕಟ್ಟಿದ ಮೇಲೆ ಅಲ್ಲಿರುವ ದೇವರಿಗೆ ಪ್ರಾರ್ಥನೆ, ಮಂತ್ರಾರ್ಚನೆ ಮಾಡುವುದಿದ್ದರೂ ಅದಕ್ಕೆ ನುಡಿಯೇ ಬೇಕು. ಸಾಮಾನ್ಯವಾಗಿ ನಾವು ಸಮಾಜದಲ್ಲಿ ಕೇಳುವ ನುಡಿಯಲ್ಲಿ ಹೊಡಿ, ಬಡಿ, ಕಡಿ, ಕೊಡಿ, ಗಡಿಬಿಡಿ, ಹೋಯಿತು ಬಿಡಿ ಎಂಬಂಥ ಶಬ್ದಗಳೇ ಪುನರಾವರ್ತನೆ ಆಗುತ್ತಿರುವುದರಿಂದ, ಬಹುಷ: ಅದಕ್ಕೆ ಬೇಸತ್ತು ಬೇಂದ್ರೆ ಅಜ್ಜ ಶುಭನುಡಿಯೇ ಶಕುನದ ಹಕ್ಕಿ ಎಂದು ಬರೆದಿದ್ದರೇನೋ. ಈಗಿನ ಕಾಲದ ಆ ಶಕುನದ ಹಕ್ಕಿಗಳೂ ಅಪಶಕುನ ನುಡಿದರೂ ನಾವು ಕೇಳಿಸಿಕೊಂಡು ತೆಪ್ಪಗಿರುವುದು ಅನಿವಾರ್ಯ.

 ಹಿಂದೆ ದೇವ ದಾನವರು ಸಮುದ್ರ ಮಥನ ನಡೆಸಿದಾಗ ಅಮೃತ ಸಿಕ್ಕಿತ್ತಂತೆ. ಈಗ ಮಾತು ಮಾತುಗಳನ್ನು ಮಥಿಸಿದರೆ ಅಥವಾ ಮಸೆದರೆ ಹುಟ್ಟಿಕೊಳ್ಳುವುದು ಜಗಳ ರಗಳೆಗಳಷ್ಟೇ. ಮಾತು ಚೆನ್ನಾಗಿ ಆಡುವವರನ್ನು ಮಾತಿನ ಮಲ್ಲ ಎನ್ನುತ್ತಾರೆ. ಮಲೆನಾಡು, ಕರಾವಳಿಗಳಲ್ಲಿ ಅಡ್ಡಾದಿಡ್ಡಿ ಮಾತನಾಡುವವರನ್ನು ಮಾತಿನ ಮಳ್ಳ ಎಂದು ಟೀಕಿಸುವುದು ಸಾಮಾನ್ಯ ರೂಢಿ. 

 ಕೇವಲ ಮಾತೇ ಸಾಧನೆಯಾಗಬಾರದು, ಆದರೆ ಸಾಧನೆಯೇ ಮಾತಾದರೆ ಅದು ಅರ್ಥಪೂರ್ಣ. ಕೆಲವರು ಬಾಯಿಬಿಟ್ಟರೆಂದರೆ ಆತ್ಮ ಪ್ರಶಂಸೆ. ಇಂಥವರಿಗೆ ಟಾಂಗ್ ಕೊಡಲು ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆ ಹಿಂದಿನ ಕಾಲದಿಂದಲೂ ಚಾಲ್ತಿಯಲ್ಲಿದೆ. ಇನ್ನೂ ಹಲವರದ್ದು ಬಾಯಿ ತುಂಬಾ ಪರ ನಿಂದನೆ. ಇಂಥ ಮಾತುಗಳನ್ನೆಲ್ಲ ಕೇಳಿ ಕೇಳಿಯೇ ಸುಸ್ತಾಗಿ ಆಚಾರವಿಲ್ಲದ ನಾಲಿಗೆ...ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ದಾಸರು ಬರೆದಿರಬೇಕು.

 ವಿಧಾನಸಭೆ ಅಥವಾ ಲೋಕಸಭೆಯಲ್ಲಿ ಮಾತನಾಡುವವರೆಲ್ಲ ಆಡಳಿತ ಪಕ್ಷದ ಅಥವಾ ವಿರೋಧ ಪಕ್ಷದ ಸದಸ್ಯರೇ. ಮಂತ್ರಿಗಳೇ. ನಿಜವಾಗಿಯೂ ಅವರೇ ಸ್ಪೀಕರುಗಳು, ಅಷ್ಟೇ ಏಕೆ ಅವರೇ ಲವ್ಡ್ ಸ್ಪೀಕರುಗಳೂ ಹೌದು. ಆದರೆ ಚರ್ಚೆಯಲ್ಲಿ ಮಾತನಾಡದೇ ಸುಮ್ಮನೆ ಕೇಳಿಸಿಕೊಳ್ಳುವ, ಅಂಪಾಯರ್ ರೀತಿಯಲ್ಲಿ ಮೌನ ಮೂರ್ತಿಯಂತಿರುವ ಸಭಾಧ್ಯಕ್ಷರಿಗೆ ವಿಧಾನಸಭೆಯಲ್ಲಿ ಸ್ಪೀಕರ್ ಎನ್ನುವುದು ವಿಚಿತ್ರ. ನಿಜವಾದ ಅರ್ಥದಲ್ಲಿ ಈಗಿನ ಸ್ಪೀಕರ್ ಎಂದರೆ ಸೈಲೆಂಟ್ ಸ್ಪೀಕರ್ ಅಥವಾ ಸೈಲೆಂಟ್ ಸ್ಪೆಕ್ಟೇಟರ್ ಅಷ್ಟೇ. 

 ನಮ್ಮಲ್ಲಿ ವಯಸ್ಕರಿಗೆ ಜಾಸ್ತಿ ಮಾತನಾಡಬೇಡ ಎಂದು ಹೇಳುವಂತೆಯೂ ಇಲ್ಲ. ಕಾರಣ ವಾಕ್ ಸ್ವಾತಂತ್ರ್ಯದ ಹೆಸರಿನಲ್ಲಿ ಸಂವಿಧಾನವೇ ಅವರಿಗೆ ಮಾತನಾಡುವ ಹಕ್ಕನ್ನು ನೀಡಿದೆ. ಹೀಗಾಗಿ ನಿಮ್ಮ ಹೆಂಡತಿ ನಿಮಗೆ ಬೈದರೆ ನೀವು ತಿರುಗಿ ಸುಮ್ಮನಿರಿ ಎಂದರೆ ಅದು ಅವರ ಹಕ್ಕು ಚ್ಯುತಿಯಾಗಬಹುದು ಎಚ್ಚರ !  ಕೆಲವೊಮ್ಮೆ ಈ ವಾಕ್ಯ ಸ್ವಾತಂತ್ರ್ಯವೇ ವಾಕರಿಕೆ ತರುತ್ತದೆ ಎಂಬುದು ಸುಳ್ಳಲ್ಲ.

ಆಡದೇ ಮಾಡುವವ ರೂಢಿಯೊಳಗುತ್ತಮನು ಎಂದು 
 ಸರ್ವಜ್ಞರೂ ಹಾಡಿ, ಮಿತಭಾಷೆಯೇ ನಡೆತೆಗೆ ಒಳ್ಳೆಯದು ಎಂದು ಹೇಳಿದ್ದರು.

 ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು.
 ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು
 ಎಂದು ಶತಶತಮಾನಗಳ ಹಿಂದೆಯೇ ಜಗಜ್ಯೋತಿ ಬಸವಣ್ಣನವರೂ ಹೇಳಿದ್ದು ಇಂದಿಗೂ ಕೂಡ ಅತ್ಯಂತ ಅರ್ಥಪೂರ್ಣವಾಗಿದೆ. 

 ಮಾತೇ ಮಾಣಿಕ್ಯ.. ಮಾತು ಬಲ್ಲವನೇ ಚಾಣಕ್ಯ ಎಂದೆಲ್ಲ ಮಾತನ್ನೇ ಮಾತಿನಿಂದ ಹೊಗಳಿ ಅಟ್ಟಕ್ಕೇರಿಸುವ ಪರಿಪಾಠವೂ ನಮ್ಮಲ್ಲಿದೆ. ಮಾತಿಗಿಂತ ಕೃತಿ ಲೇಸು ಎಂಬ ಗಾದೆಯೂ ಇದೆ. ಈ ಮಾತು ಕೃತಿ ಇವೆರಡಕ್ಕಿಂತಲೂ ಕತ್ತಿಯೇ ಲೇಸು ಎನ್ನುವ ಹೋರಾಟಗಾರರು, ಹಾರಾಟಗಾರರು, ಚೀರಾಟಗಾರರು ನಮ್ಮಲ್ಲಿ ಸಾಕಷ್ಟಿದ್ದಾರೆ. 

 ಕೆಲವರ ಮಾತಿಗಿಂತ ಅವರಾಡುವ ಸುಳ್ಳಿನ ಕಥೆಯೇ ಕೇಳಲು ಇಷ್ಟವಾಗುವುದರಿಂದ ಮಾತುಕತೆ ( ಮಾತು+ಕತೆ )ಎಂಬ ಶಬ್ದ ಹುಟ್ಟಿರಬಹುದೇನೋ.. ಆದರೆ ಕೆಲವೊಮ್ಮೆ ಮಾತೇ ಹೆಚ್ಚಾಗಿ ಕಥೆಯಾಗದೇ ಅದು ಬರೀ ವ್ಯಥೆಯಾಗುವ ಅಪಾಯವೂ ಇದೆ.

 ಮಾತು ಆಡಿದರೆ ಹೋಯಿತು...
 ಮುತ್ತು ಒಡೆದರೆ ಹೋಯಿತು....
 ಮಾತು ಬಲ್ಲವ ಮಾಣಿಕ್ಯ ತಂದ...
ಮಾತರಿಯದವ ಜಗಳ ತಂದ...

 ಇಂತಹ ಹಳೆಯ ಗಾದೆ ಮಾತುಗಳು ಕೂಡ ಮಾತು ಮನುಷ್ಯನ ಸನ್ನಡತೆಯ ಪ್ರತೀಕ ಎಂದು ಪ್ರತಿಪಾದಿಸಿವೆ.

ಮಾತಿನಿಂದಲೇ ಮನೆ ಕಟ್ಟಲು ಸಾಧ್ಯವಾಗಿದ್ದರೆ ನಮ್ಮಲ್ಲಿಯ ಅನೇಕ ಮನೆಗಳಿಗೆ ಇಟ್ಟಿಗೆಗಳ ಅವಶ್ಯಕತೆಗಳೂ ಇರುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಒಂದು ಚುಟುಕು ಬರೆದೆ.

 ಕೆಲವರ ಕಿಸೆಯಲ್ಲಿ 
ಇಲ್ಲದಿದ್ದರೂ ಕಾಸು 
ಆಡುತ್ತಾರೆ ದೊಡ್ಡದೊಡ್ಡ ಮಾತು 
 ಇದರಿಂದಲೇ ಅವರಾಗುತ್ತಾರೆ ಬಾಸು 
 ಬುಡ ನೋಡಿದರೆ ಗೊತ್ತಾಗುತ್ತೆ ಅವರು ಬರೇ ಬುರ್ನಾಸು!
ಇವರಿಗಿಂತಲೂ ಬೆಸ್ಟು
ಜಾತ್ರೆಯಲ್ಲಿ ಸಿಗುವ ಸಿಹಿಸಿಹಿ 
ಬೆಂಡು ಬತ್ತಾಸು !!

ಲಂಡನ್ನಿನಲ್ಲಿ ಹೈಡ್ ಪಾರ್ಕ್ ಎಂಬ ಜಾಗವಿದೆ. ಅಲ್ಲಿರುವ ಪುಟ್ಟ ವೇದಿಕೆಯಲ್ಲಿ ನಿಂತು ಏನು ಬೇಕಾದರೂ ಮಾತನಾಡಬಹುದು. ಯಾರನ್ನು ಬೇಕಾದರೂ ಹೊಗಳಬಹುದು ಅಥವಾ ಯಾರನ್ನು ಬೇಕಾದರೂ ತೆಗಳಬಹುದು. ಪಾರ್ಕಿನಲ್ಲಿ ಕೇಳುವವರು ಕೇಳುತ್ತಾರೆ. ಇಷ್ಟವಿಲ್ಲದಿರುವವರು ಕಿವಿ ಮುಚ್ಚಿಕೊಳ್ಳುತ್ತಾರೆ. ಪ್ರತಿನಿತ್ಯ ಇಲ್ಲಿ ಬಂದು ಬಾಯಿ ಚಪಲ ತೀರಿಸಿಕೊಳ್ಳುವ 8-10 ಮಂದಿಯಾದರೂ ನೋಡ ಸಿಗುತ್ತಾರೆ. 

ಹತ್ತು ವರ್ಷಗಳ ಹಿಂದೆ ನಾನು ಲಂಡನ್ನಿಗೆ ಹೋದಾಗ ಈ ಹೈಡ್ ಪಾರ್ಕಿಗೆ ಹೋಗಿದ್ದೆ. ಇಲ್ಲಿ ಒಬ್ಬ ನಿಂತು ಅರ್ಧ ಗಂಟೆ ಕಾಲ ಒಂದೇ ಸಮನೇ ಬಯ್ಯುತ್ತಿದ್ದ. ಯಾರನ್ನು ಬೈತಿಯಾ ಎಂದು ಕೇಳಿದ್ದಕ್ಕೆ ನನ್ನ ಹೆಂಡತಿಯನ್ನು ಬಯ್ಯುತ್ತೇನೆ ಎಂದಿದ್ದ. ಕಾರಣ ಅವನಿಗೆ ಮನೆಯಲ್ಲಿ ಬೈಯ್ಯುವ ಸ್ವಾತಂತ್ರ್ಯ / ಧೈರ್ಯ ವಿರಲಿಲ್ಲವೇನೋ. ಅವನು ಪಾಡು ನೋಡಿ ನನಗೆ ಆಗ  ಪಾಪ ಅನ್ನಿಸಿದ್ದು ಸುಳ್ಳಲ್ಲ. ಬಹುಶಃ ಅವನಿಗೆ ಮನೆಗೆ ಹೋದ ನಂತರ ಹೆಂಡತಿಯಿಂದ ಮಂತ್ರಾರ್ಚನೆ ಗ್ಯಾರಂಟಿ ಇರಬಹುದು ಅಂದುಕೊಂಡೆ.

 ಈ ಹೈಡ್ ಪಾರ್ಕಿನಲ್ಲಿ ಇನ್ನಷ್ಟು ಕಾಲ ನಾನು ಕುಳಿತಿದ್ದರೆ ಇನ್ನೆಷ್ಟು ಮಹಿಳೆಯರು ತಮ್ಮ ಗಂಡನನ್ನು ವಾಚಾಮ ಗೋಚರವಾಗಿ ಬೈಯ್ಯುವುದನ್ನೂ ಕೇಳಿಸಿಕೊಳ್ಳಬೇಕಾಗುತ್ತಿತ್ತೇನೊ. ಸದ್ಯ ಅಂದು ನಾನು ನನ್ನ ಹೆಂಡತಿಯನ್ನು ಅಲ್ಲಿಗೆ ಕರೆದುಕೊಂಡು ಹೋಗಿರಲಿಲ್ಲ. ಬಚಾವಾದೆ. ಇಲ್ಲದಿದ್ದರೆ ನನ್ನ ಪರಿಸ್ಥಿತಿ ಕುಂಬಳಕಾಯಿ ಕದ್ದ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡಂತೆ ಆಗುತ್ತಿತ್ತೇನೋ.. ಆ ದೇವರೇ ಬಲ್ಲ.

-ರಾಜು ಅಡಕಳ್ಳಿ