ಮರ್ಲಿನ್ ಮನ್ರೋ - ಜಾನ್ ಸ್ಟೈನ್ ಬೆಕ್

ಮರ್ಲಿನ್ ಮನ್ರೋ - ಜಾನ್ ಸ್ಟೈನ್ ಬೆಕ್

 ( ೧೯೫೦ರ ದಶಕದಲ್ಲಿ  ಅಮೆರಿಕದ ಖ್ಯಾತ ಲೇಖಕನೊಬ್ಬ (ಜಾನ್ ಸ್ಟೈನ್ ಬೆಕ್ ) ಪ್ರಖ್ಯಾತ ನಟಿಯೊಬ್ಬಳಿಗೆ ( ಮ್ಯಾರಿಲಿನ್ ಮನ್ರೊ) ಅವಳ ಭಾವಚಿತ್ರವನ್ನು ಕಳಿಸಲು ಕೇಳಿ ಬರೆದ  ಪತ್ರದ ಸುತ್ತ ಹೆಣೆದಿರುವ ಕಥೆ)                                                                                                         
         ಮೊನ್ನೆ ಎನೋ ಕೋಪದಿ೦ದ ನನ್ನ ಪತ್ನಿ ಒ೦ದು ಸೂಟಕೇಸಿನಲ್ಲಿದ್ದ ನನ್ನ ಹಳೆಯ ವಸ್ತುಗಳನ್ನೆಲ್ಲಾ ಗರಾಜಿನಲ್ಲಿ ಬಿಸಾಕಿದ್ದಳು. ಅಲ್ಲಿ ಹೋಗಿ ನೋಡಿದಾಗ ಎಲ್ಲ ಚಲ್ಲಾಪಿಲ್ಲಿ ಬಿದಿದ್ದವು: ನನ್ನ  ತ೦ದೆಯ ಒಡೆದ ಕಾಫಿ ಮಗ್, ಅವರ ಮುರಿದ ಟೆನಿಸ್ ರಾಕೆಟ್ , ಅವರು ಬರೆದಿದ್ದ ಸಮಾಜಶಾಸ್ರದ ಪುಸ್ತಕ, ಶಾಲೆಯಲ್ಲಿದ್ದಾಗ ಅಮ್ಮ ಹಾಕಿಕೊಟ್ಟಿದ್ದ  ಸ್ವೆಟರ್, ಅನೇಕ  ಬಸ್ ಟಿಕೆಟ್ ಗಳು(  ೧೯೬೫ರಲ್ಲಿ ವಾಶಿಂಗ್ಟನ್ನಿಗೆ ಮಾರ್ಟಿನ್ ಲೂಥರ ಕಿಂಗರ ಭಾಷಣ  ಕೇಳಲು ಹೋದಾಗಿನ ಬಸ್ ಟಿಕೆಟ್.೧೯೬೮ರಲ್ಲಿ  ಡೆಮೊಕ್ರಾಟಿಕ್ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲು ಶಿಕಾಗೊಗೆ ಹೋಗಿದ್ದಾಗಿನ ಟಿಕೆಟ್, ಇತ್ಯಾದಿ ), ವುಡ್  ಸ್ಟಾಕ್ ನೆನಪುಗಳು. ಪುಟ್ಟ ಕವರಿನಲ್ಲಿ ಸ್ವಲ್ಪ  ಗಾ೦ಜಾ, ಜೋನ್ ಕೊಟ್ಟ ಮೊದಲ ಟೀ ಶರ್ಟ್ .ಅವಳು ಪರಿಚಯಿಸಿದ ಜಾಕ್ ಕೆರ್ವಾಕ್,ಗಿನ್ಸ್ ಬರ್ಗರ ಪುಸ್ತಕಗಳು , ಅವಳ ನಿಧನದ ಸುದ್ದಿಯ ಪತ್ರಿಕೆಯ ಪುಟ, ... 
          ಒ೦ದು ಪುಟ್ಟ ಕರವಸ್ತ್ರ. ಬಗ್ಗಿ ನೆಲದಿ೦ದ ತೆಗೆದುಕೊಂಡು ನೋಡಿದರೆ . ಕಲೆಗಳು ! ಓ ! ನವೆ೦ಬರ್ ೨೩, ೧೯೬೩ ಡಲ್ಲಾಸ್ ! ನನಗಾಗ ವಯಸ್ಸು ೨೨.  ಅಸ್ಟಿನ್ ನಿಂದ ಡಲ್ಲಾಸ್ ಗೆ ಕೆಲಸ ಹುಡುಕಲು   ಹೋಗಿದ್ದೆ. ಬೆಳಿಗ್ಗೆಯೇ  ಇ೦ಟರ್ವ್ಯೂ ಮುಗಿದಿತ್ತು . ಸಂಜೆಯ ಬಸ್  ಸಮಯದ ತನಕ ಮಾಡಲು ಎನೂ ಇರಲಿಲ್ಲ. ಅಧ್ಯಕ್ಷ  ಜಾನ್ ಕೆನೆಡಿ   ಡೌನ್ ಟೌನಿಗೆ ಬರುತ್ತಿದ್ದಾರೆ೦ದು ತಿಳಿಯಿತು . ನನ್ನ ಹೀರೊ !  ಅಲ್ಲಿ ಹೋಗಿ  ಎಲ್ಮ್ ರಸ್ತೆಯಲ್ಲಿ ನಿ೦ತೆ. ಮು೦ದಿನ ಸಾಲಿನಲ್ಲಿಯೇ  ಇದ್ದೆ. ಅದರೆ ಕುಳ್ಳು  ಹೆ೦ಗಸೊಬ್ಬಳು ನನ್ನ  ಹಿ೦ದೆ ಇದ್ದು ಚಡಪಡಿಸುವುದನ್ನು  ನೋಡಿ ಅವಳನ್ನು  ಮು೦ದೆ ಬಿಟ್ಟೆ.  ಅಧ್ಯಕ್ಷರ ಕಾರು ನಮ್ಮ ರಸ್ತೆಗೆ ತಿರುಗಿತು.” ಮಿ.ಪ್ರೆಸಿಡೆ೦ಟ್, ಮಿ.ಪ್ರೆಸಿಡೆ೦ಟ್”  ಎಂದು ಜನ ಕೂಗಲು ಶುರುಮಾಡಿದರು.  ದೂರದಲ್ಲಿ  ಜಾನ್ ಕೆನೆಡಿ  ಕಾಣುತ್ತಿದ್ದರು ನಮ್ಮಟೆಕ್ಸಸ್ ಗವರ್ನರ್ ಕಾನೊಲಿ ಮು೦ದಿನ ಸೀಟಿನಲ್ಲಿ ! ಕೆನೆಡಿ  ಮುಗುಳ್ನಗುತ್ತ ಎಲ್ಲರಿಗೂ  ವೇವ್  ಮಾಡುತ್ತಿದ್ದರು.  ಜಾಕಿ ಆಕಡೆ ನೋಡುತ್ತ ಸ್ಮಿತವದನರಾಗಿದ್ದರು. ಅಷ್ಟರಲ್ಲಿ  ಗು೦ಡುಗಳ ಶಬ್ದ. ಅಧ್ಯಕ್ಷರು ಕೆಳಗೆ ಕುಸಿಯುತ್ತಿದ್ದರು. ಅದನ್ನು ನೋಡಿ ಜಾಕಿ ಅವರನ್ನು ಹಿಡಿದುಕೊಂಡರು. ಕೆಲವೇಕ್ಷಣಗಳ ನ೦ತರ  ಮು೦ದಿನ ಸೀಟಿನಲ್ಲಿದ್ದ  ಗವರ್ನರ್ ಕಾನೊಲಿ ಕೂಡ ಕೆಳಗೆ ಕುಸಿದರು .  ಸರಿಯಾಗಿ  ಏನಾಗಿದೆ ಎಂದು ನಮಗೆ ಗೊತ್ತಾಗಲಿಲ್ಲ. ಹತ್ಯೆ! ಕೊಲೆ  ! ಎ೦ದು ಜನ ಕೂಗಲಾರಂಭಿಸಿದರು. ಅಧ್ಯಕ್ಷರಿಗೆ ಗುಂಡು  ಬಿದ್ದಿರುವುದ೦ತೂ ತಿಳಿಯಿತು. ಪೋಲೀಸರು  ನಮ್ಮನ್ನೆಲ್ಲ  ಹಿ೦ದಕ್ಕೆ ಅಟ್ಟಿದರು. ನಾವೆಲ್ಲಾ ಹಾಗೆಯೆ ರಸ್ತೆಯ ಬದಿಯಲ್ಲಿ ಬಹಳ ಹೊತ್ತು ನಿ೦ತಿದ್ದೆವು. ನಾನೂ  ಬಹಳ ಹೊತ್ತು ಹಾಗೇ ಇದ್ದೆ. ಸರಿ ಹೊರಡೋಣ  ಎ೦ದಾಗ ಕೆಳಗೆ ಎನೋ ಕಾಣಿಸಿತು. ಪುಟ್ಟ ಕರವಸ್ತ್ರ, ರಕ್ತದ ಕಲೆಗಳು.  ಜಾಕಿ ಕೆನೆಡಿಯವರಿದ್ದಿರಬೇಕು. ಪತಿಯನ್ನು  ಹಿಡಿದಾಗ ಅದು  ಎಲ್ಲೋ ಗಾಳಿಗೆ ಹಾರಿದ್ದು  ಈ ಕಡೆ ಬಂದು  ಹುಲ್ಲಿನ ಮೇಲೆ ಬಿದ್ದಿತ್ತು . ಅಲ್ಲಿ ಇಲ್ಲಿ ನೋಡುತ್ತಾ ಮಡಿಸಿ ಜೇಬಿನಲ್ಲಿಟ್ಟುಕೊ೦ಡೆ.  ಐವತ್ತೂ  ಅಗಿರಲಿಲ್ಲ  ನಮ್ಮ ಕೆನೆಡಿಯವರಿಗೆ ! ಅಮೆರಿಕಕ್ಕೆ  ಮುಂದೆ ಏನೋ ಹೇಗೋ ಅನ್ನಿಸಿತು. 
     ಮೊನ್ನೆ ನನ್ನ ಕಡೆಯ  ಮಗ ಬಂದಿದ್ದಾಗ ಇದನ್ನು ತೋರಿಸಿದ್ದೆ. ಅವನು ನಗಲು ಶುರುಮಾಡಿದ. ಆಮೇಲೆ ಕೂಗಾಡಿದ “  ಜಾನ್ ಕೆನೆಡಿ  ವಿಷಯಲ೦ಪಟ . ಹೆಣ್ಣುಗಳ ಹಿ೦ದೆಯೇ ಓಡಾಡುತ್ತಿದ್ದ.  ಅವನಿಂದ ಅಮೆರಿಕಕ್ಕೆ ಏನು ಉಪಯೋಗವಾಗಲಿಲ್ಲ. ಅವನ ಕುಟುಂಬವೆಲ್ಲಾ  ಬರೇ ಆಡಂಬರ ,  ಪ್ರದರ್ಶನ ಪ್ರಿಯರು , ತಮ್ಮ ರಾಬರ್ಟನ್ನೂ ಕೊಂದರಲ್ಲವೆ.  ಬಿಡಿ  ಅ ಕೊಲೆಗಳು  ಮಹಾ ದುರ೦ತವೇನಲ್ಲ. ಮ್ಯಾರಿಲಿನ ಮನ್ರೋ ಳನ್ನು ಅಣ್ನ ತಮ್ಮ೦ದಿರಬ್ಬರೂ ಉಪಯೋಗಿಸಿಕೊಂಡಿದ್ದರಂತೆ. “ ಹೀಗೆಯೆ ಬಡಬಡಿಸುತ್ತಿದ್ದ. ನನ್ನ ತಂದೆ ತಾಯಿ, ನಾನು ಎಲ್ಲ  ಡೆಮೊಕ್ರಾಟ್  ಪಕ್ಷ್ದದವರು.  ನನ್ನ ಈ ಮಗ ಮಾತ್ರ ನಮ್ಮದಾರಿ ಬಿಟ್ಟು ರಿಪಬ್ಲಿಕನ್ ಪಕ್ಷ ಸೇರಿದ್ದಾನೆ. . ಹೊರಗಿನಿಂದ ಬಂದವರನ್ನೆಲ್ಲ ವಾಪಸ್ಸು  ಕಳಿಸಬೇಕಂತೆ. ನಮ್ಮ ಈಗಿನ ಅಧ್ಯಕ್ಷರ  ಪಟ್ಟ ಶಿಷ್ಯ,. ಇನ್ನೂ ಎನೇನೋ ಹಾಸ್ಯ ಮಾಡಿಹೋದ. “  ಆ ಕರವಸ್ತ್ರವನ್ನುಇಟ್ಟುಕೊಂಡು ಏನು ಸಂಭ್ರಮ ಪಡುತ್ತಿದ್ದೀರೋ “  ಎಂದು ರೇಗಿಸಿ ಹೊರಟುಹೋದ.         
         ನಮ್ಮ ಆದರ್ಶ, ನಮ್ಮ೬೦ರ ದಶಕದ  ಸಂಭ್ರಮ ಅವನಿಗೇನು ಗೊತ್ತು ? ಓದುವುದೂ ಇಲ್ಲ. ಹೇಳಿದರೆ ಕೇಳಿಸಿಕೊಳ್ಳಲು ಮನಸ್ಸೇ ಇಲ್ಲ ! ಕೆನೆಡಿ  ಬಹಳ ದೊಡ್ದವರೆ೦ದು ನಾನು ಎನೂ  ಹೇಳ್ತ್ತಿಲ್ಲ. ಆದರೆ ಎರಡನೆಯ ಮಹಾಯುದ್ಧ ದ  ದಶಕದ ನ೦ತರ ಅಮೆರಿಕದಲ್ಲಿ  ಆಗ ಏನೋ ಹೊಸ ಅಭಿಪ್ರಾಯಗಳು , ಹೊಸ ಯೋಚನೆಗಳು .ಕಪ್ಪು  ಜನತೆಯ ಹಕ್ಕುಗಳಿಗೆ  ಮಾನ್ಯತೆ ಸಿಕ್ಕಿತು. ಕಿಂಗರ ಅಬಿಪ್ರಾಯಗಳು ಕಿಚ್ಚ್ಚಿನ೦ತೆ ಹರಡುತ್ತಿದ್ದವು ಹೌದು. ಅದರೂ ಅವರೂ ಹತ್ಯೆಗೀಡಾಗಿದ್ದರು. ಅಧ್ಯಕ್ಷ  ನಿಕ್ಸನರ ಭಾಷಣಗಳಿಗೆ   ಹೋಗಿ ಎಷ್ಟೆಲ್ಲ ಅವಹೇಳನಮಾಡಿದ್ದೆವು ! ವಿಯಟ್ನಾಮ್ ಯುದ್ಧವನ್ನು ಎಲ್ಲೆಲ್ಲ ಹೋಗಿ ಪ್ರತಿಭಟಿಸಿದ್ದೆವು!  ಅಮೆರಿಕಕ್ಕೆ ಹೊಸ ಚೇತನ ತುಂಬಿ ಹೊಸ ಜೀವನ  ಕೊಟ್ಟಿದ್ದೆವು !ಹಿಂದಿರದ ಸ್ವಾತಂತ್ರ್ಯ ಬಂದಿತ್ತು. ಮಹಿಳೆಯರಿಗೆ ! ಕಪ್ಪು ಜನಕ್ಕೆ ! ನಮ್ಮ ಜೀವನ ಶೈಲಿಯೇ ಬದಲಾಯಿತು .  ಇದೆಲ್ಲ ಅವನಿಗೆ ಎಲ್ಲಿ ಅರ್ಥವಾಗಬೇಕು?     
         ದೂರದಲ್ಲಿ ಒ೦ದು ಕಂದು ಬಣ್ಣದ ಕವರು ಬಿದ್ದಿತ್ತು.  ತಕ್ಷಣ ಅಲ್ಲಿಗೆ ಬಿರ್ರನೆ ನಡೆದೆ.  ಅದರಲ್ಲಿ  ಏನಿದೆ ಎ೦ದು ನನಗೆ ಗೊತ್ತಿತ್ತು : ಮ್ಯಾರಿಲಿನ್ ಮನ್ರೊಳ ಫೊಟೋ !  “ಪ್ರಿಯ ಜಾನ್ ಆಟ್ಕಿನ್ಸನ್ ಗೆ  - ನಿನ್ನ ಮ್ಯಾರಿಲಿನ್ “  ಎ೦ದಿತ್ತು. ನಗೆ ಬ೦ದಿತು. ನನಗೆ ಆಗ ವಯಸ್ಸು ೧೪- ೧೫. ಮ್ಯಾರಿಲಿನ್ ನನ್ನ ಅರಾಧ್ಯ ದೇವತೆ. ಅವಳ  ಸಿನೆಮಗಳೆಲ್ಲವನ್ನೂ ನೋಡಿದ್ದೆ. ಅವಳ ಗ೦ಡ೦ದಿರು,ಗೆಳೆಯರ ಬಗ್ಗೆ ಅಸೂಯೆ ಪಡುತ್ತಿದ್ದೆ.  ಆಗ ತಾನೆ ‘ಸೆವೆನ್ ಇಯರ್ ಇಚ್’  ಬ೦ದಿತ್ತು. ಆ ಸಿನೆಮವನ್ನು ಎಷ್ಟು ಸರಿ ನೋಡಿದೆನೋ ಗೊತ್ತಿಲ್ಲ !  ಆ ಮೊದಲನೆಯ ದೃಶ್ಯವನ್ನು ಹೇಗೆ ಮರೆಯುವುದು ? ಹಬೆ ಮೇಲೆ ಬರುವ  ಕಟಕಟೆಯ ಮೆಲೆ ನಿ೦ತಾಗ ಅವಳ ಸ್ಕರ್ಟ್ ಮೇಲೆ ಹೋಗುವುದು ! ಆದರೆ ಅದಕ್ಕಿ೦ತ ಹೆಚ್ಚಾಗಿ ನನಗೆ ಅವಳ  ಮೋಹಕ , ಮುಗ್ಚ ಮುಖ ! ಬೇರೆ ಏನೂ ಬೇಡವಾಗಿತ್ತು.  ಮನೆಯಲ್ಲಿ, ಗೆಳೆಯರು ಎಲ್ಲಾ ತಮಾಷೆ ಮಾಡುತ್ತಿದ್ದರು ! ಎಷ್ಟು ಚೆನ್ನಾಗಿದೆ ಈ ಚಿತ್ರ. ಆಗ ಅವಳಿಗೆ  ೩೦ ವರ್ಷ. ಎಲ್ಲೋ ಯಾವುದೋ  ಯೋಚನೆಯಲ್ಲಿ ಇರುವ೦ತಿದೆಯಲ್ಲವೇ ! ಯಾರಿಗೆ ಗೊತ್ತು ಆಗಲೆ ಅವಳಿಗೆ ಆತ್ಮಹತ್ಯೆಯ  ಯೋಚನೆಗಳು ಬ೦ದಿದ್ದವೋ ಏನೋ !  ಎಲ್ಲರೂ ತಿಳಿದಂತೆ  ಅವಳು ಹುಂಬಳೇನಿರಲಿಲ್ಲ. ಗಟ್ಟಿ ಹೆಣ್ಣು ಕೂಡ . ಯಾರ ಸ೦ಗ ಮಾಡಿದಳೋ ?  ಏನೇನು ಅಪಾಯದಲ್ಲಿದ್ದಳೋ ! ಅ೦ತೂ ಈ ಫೋಟೋ  ದೊರಕಿದ ಏಳೇ  ವರ್ಷಗಳಲ್ಲಿ ಆತ್ಮ ಹತ್ಯೆ ಮಾಡಿಕೊಂಡಿದ್ದಳು!  ೩೬ ವರ್ಷಗಳ ಜೀವನ ವಷ್ಟೇ ! ಇನ್ನೂ ಹೊಸತಾಗಿ ಕಾಣುವ ಇಷ್ಟು  ಒಳ್ಳೆಯ ಫೋಟೋ ನನಗೆ  ಹೇಗೆ ಸಿಕ್ಕಿತ್ತು?
          ಇದನ್ನು  ಕಳಿಸಿದ್ದವರು ಜಾನ್  ಸ್ಟೈನ್ ಬೆಕ್ !   ಹೌದು  ಅವರೇ ! ಅಮೆರಿಕದ ಮಹಾಲೇಖಕ, ಗ್ರೇಪ್ಸ್ ಅಫ್ ರಾಥ್ ಬರೆದ ಮಹಾಶಯ ! ಆದರೆ  ನನ್ನ ಚಿಕ್ಕಮ್ಮನ ಗ೦ಡ ಕೂಡ. ಒ೦ದು ಬಾರಿ ಆಸ್ಟಿನ್ ನಲ್ಲಿ  ನಮ್ಮ ಮನೆಗೆ  ಬ೦ದಿದ್ದರು. ಮನೆಯವರೆಲ್ಲಾ ನನ್ನ ಮ್ಯಾರೆಲಿನ್ ಮೋಹದ ಬಗ್ಗೆ ರೇಗಿಸುತ್ತಿದ್ದನ್ನು ನೋಡಿದರು.  ಆಗಲೇ ಜಾನ್ ಚಿಕ್ಕಪ್ಪನಿಗೆ  ಮ್ಯಾರಿಲಿನ್  ಗೊತ್ತು ಎ೦ದು ಚಿಕ್ಕಮ್ಮ ಹೇಳಿದ್ದ ನೆನಪು ಬ೦ದಿತು. ಆಗ ಅವರನ್ನು ‘  ಹೇಗಾದರೂ ಒ೦ದು ಫೋಟೋ  ಕೊಡಿಸಿ ‘ ಎಂದು ಪೀಡಿಸಲು ಶುರುಮಾಡಿದ್ದೆ. ಕಡೆಗೂ  ಒಂದು ದಿನ ಮ್ಯಾರಿಲಿನ್ ಳ  ಈ ಫೋಟೋ ನ್ಯೂಯಾರ್ಕಿನಿಂದ ಅಂಚೆಯಲ್ಲಿ ಬಂದಿತ್ತು !                                                                                               
         ನನ್ನ ಚಿಕ್ಕಪ್ಪ ಜಾನ್ ಅನೇಕ ಪುಸ್ತಕಗಳನ್ನು ಬರೆದವರು. ೧೯೩೯ರಲ್ಲಿ ಬರೆದ  “ ಗ್ರೇಪ್ಸ್ ಅಫ್ ರಾತ್’ “ ಎಲ್ಲರಿಗೂ ತಿಳಿದಿರುವ  ಪುಸ್ತಕ. ಅದಕ್ಕೆ ನೊಬೆಲ್ ಪ್ರಶಸ್ತಿಯೂ  ಬಂದಿತು.  ೧೯೩೦ರ ತೀವ್ರ   ಆರ್ಥಿಕ ಸಮಸ್ಯೆಗಳ ( ಡಿಪ್ರೆಶನ್ ) ಸಮಯದಲ್ಲಿ ಓಕ್ಲೊಹಾಮ ಪ್ರ೦ತ್ಯದ ಗ್ರಾಮಗಳ ರೈತರು ಜೀವನೋಪಾಯಕ್ಕಾಗಿ  ಕ್ಯಾಲಿಫೋರ್ನಿಯಕ್ಕೆ ಹೋಗಬೇಕಾದ ಪರಿಸ್ಥಿತಿಯನ್ನು ಕಾದಂಬರಿ ಚಿತ್ರಿಸುತ್ತದೆ. ಕ್ಯಾಲಿಫೋರ್ನಿಯದ ಜಿಲ್ಲೆಯೊದರ   ಜನ ತಮಗೇ ಜೀವನದಲ್ಲಿ ತೊದರೆಯಾಗುತ್ತಿದೆಯ೦ದು ಈ ವಲಸೆಗಾರರನ್ನು ವಿರೋಧಿಸಿತ್ತಾರೆ .ನಿಧಾನವಾಗಿ, ಬಹಳ ನಿಧಾನವಾಗಿ , ಅವರು ಈ ಹೊರಗಿನವರನ್ನು ಒಪ್ಪಿಕೊಳ್ಳಲು ಶುರುಮಾಡುತ್ತಾರೆ  ಇದು ಅದರ ಕಥಾವಸ್ತು. ಈಗಿನ ಪ್ರಪಂಚದಲ್ಲೂ ಹೀಗೆಯೇ ಅಲ್ಲವೇ ! ಹೊರಗಿನವರು ಬೇಡ ಎನ್ನುತ್ತಿದ್ದಾರೆ ನಮ್ಮ ಅಧ್ಯಕ್ಷರು.ಈ ದೇಶದಲ್ಲಿ ಹೊರಗಿನವರು ಯಾರು ? ನಾವೆಲ್ಲಾ ಹೊರಗಿನವರೆ !  ಬೇರೆ ದೇಶಗಳಲ್ಲೂ ಶತಮಾನಗಳಿಂದ ಇರುವ  ಜನರನ್ನೂ ದೇಶದ ಜನ ಎಂದು ಒಪ್ಪಿಕೊಳ್ಳುತ್ತಿಲ್ಲವಂತೆ ! ಏನೂ  ಬದಲಾಗಿಲ್ಲ ಅಲ್ಲವೇ  ! ಅದು ಪ್ರಕಟವಾದಾಗ ಕಾಲಿಫೊರ್ನಿಯದಲ್ಲಿ  ಜಿಲ್ಲೆಯೊಂದು ಇದು ಅಶ್ಲೀಲ ಬರಹ ವೆಂದು  ಈ ಪುಸ್ತಕವನ್ನು  ಬಹಿಷ್ಕಾರ ಮಾಡಿತ್ತಂತೆ . ಜಾನ್ ಚಿಕ್ಕಪ್ಪ  ವಿಚಿತ್ರ ವ್ಯಕ್ತಿ ಎ೦ದು ನಮಗೆಲ್ಲ ತಿಳಿದಿತ್ತು. ಅನೇಕ ಲೇಖಕರ ತರಹ ಹೆಚ್ಚು ಕುಡಿಯುವುದೂ ಇತ್ತು. ಅನ್ಯಾಯ ಮತ್ತು ಬಡತನದ   ಬಗ್ಗೆ ಅವರಿಗೆ ಬಹಳ ಆಕ್ರೋಶವಿತ್ತು. ಹಾಗೂ ತನ್ನ  ಜೀವನದಲ್ಲಿ ಶ್ರೀಮ೦ತ ಶೈಲಿಯನ್ನೆ  ಇಟ್ಟುಕೊ೦ಡಿದ್ದ  ವಿರೊಧಾಭಾಸಗಳ  ಮನುಷ್ಯ. ನಾನು  ಆ ಫೋಟೋವನ್ನು ನೋಡುತ್ತಿದ್ದಾಗ ಕವರಿನೊಳಗೆ  ಒ೦ದು ಪತ್ರವೂ ಇದ್ದಿತು. ಯಾವುದೋ ಮೂಲಪತ್ರದ ಪ್ರತಿ ಇದ್ದ೦ತಿತ್ತು . ನನ್ನ ಕಣ್ಣಿಗೆ ಬಿದ್ದೇ ಇರಲಿಲ್ಲ 

------------------------------------------------------------------------------------------------
ಮಿಸ್ . ಮ್ಯಾರಿಲಿನ್ ಮನ್ರೊ                                                 ಏಪ್ರಿಲ್ ೨೮,೧೯೫೫ 
ವಾಲ್ಡಾರ್ಫ್ ಟವರ್ಸ್ 
ನ್ಯೂಯಾರ್ಕ್ ಸಿಟಿ 
ಪ್ರಿಯ ಮ್ಯಾರಿಲಿನ್ 
     ನನ್ನ ಇಡೀ ಅನುಭವದಲ್ಲಿ ಯಾವಾಗಲೂ ಯಾರೂ ಹಸ್ತಾಕ್ಷರಗಳನ್ನು ಅವರಿಗಾಗಿಯೇ ಕೇಳುವುದಿಲ್ಲ. ಯಾವಾಗಲೂ ಇದು ಬೇರೆ ಯಾರಿಗೋ, ಯಾರ ಮಗುವಿಗೊ  ಅಥವಾ ಅತ್ತೆಗೋ  ಇರುತ್ತದೆ ಮತ್ತು ಅದು ಎಷ್ಟು ಪ್ರಯಾಸ ಎ೦ಬುದು ನನಗಿ೦ತ ಹೆಚ್ಚ್ಚಾಗಿ ನಿಮಗೆ ಗೊತ್ತಿದೆ. ಆದ್ದರಿ೦ದ ಒ೦ದು ರೀತಿಯ ಬೇಸರದಿಂದ ನಾನು ಆಸ್ಟಿನ್, ಟೆಕ್ಸಾಸ್ ನಲ್ಲಿ ನೆಲಸಿರುವ ನನ್ನ  ಸೋದರಳಿಯ ಜಾನ್ ಆಟ್ಕಿನ್ಸನ್ ಎ೦ಬುವನ  ಬಗ್ಗೆ ಹೇಳಬೇಕಾಗುತ್ತದೆ.  ಅವನು ಈಗತಾನೆ ಯೌವನದ  ಹೊಸಲಲ್ಲಿ ಕಾಲಿಟ್ಟಿದ್ದಾನೆ . ಹೌದು, ಅದು ಒ೦ದು ತೊ೦ದರೆಯೇ ಸರಿ . ಇನ್ನೊ೦ದು ನೀವು !      
    ನೀವು ದೇವಲೋಕದಿ೦ದೇನೂ ಇಳಿದು ಬ೦ದಿಲ್ಲ ಎ೦ದು ನನಗೆ ತಿಳಿದಿದೆ. ಆದರೆ ನಿಮಗೂ ನಮ್ಮ೦ತೆಯೇ ಸ್ವಾಭಾವಿಕ ದೈಹಿಕ ಕ್ರಿಯೆಗಳಿವೆ ಎ೦ಬುದನ್ನು  ಅವನಿಗೆ ಹೇಳಿದರೆ ಅವನು ಮೂರ್ಚೆ ಹೋಗುತ್ತಾನೆ.ನಾನಂತೂ ಆ ಕೆಲಸ  ಮಾಡುವುದಿಲ್ಲ. ಇತ್ತೀಚೆಗೆ ಟೆಕ್ಸಾಗೆ ಹೋಗಿದ್ದಾಗ ನನ್ನ  ಪತ್ನಿ   ನನಗೆ  ನಿಮ್ಮ ಪರಿಚಯ  ಉ೦ಟು ಎ೦ದು ಹೇಳುವ ದೊಡ್ಡ ತಪ್ಪನ್ನು ಮಾಡಿದಳು.  ಅದನ್ನು ಅವನು ನ೦ಬಿಲ್ಲವಾದರೂ  ಈ ಸುಲ್ಲಿನಿಂದ  ಅವನ ದೃಶ್ಟಿಯಲ್ಲಿ  ನಾನು ಮೇಲೆ ಹೋಗಿದ್ದೇನೆ.
       ಜನ ನನನ್ನ್ನು ಎಷ್ಟೋ ಕ್ಷುಲ್ಲಕ ವಿಷಯಗಳಿಹಾಗಿ ಸಹಾಯ ಕೇಳುತ್ತಾರೆ. ಹಾಗೆಯೇ ನಾನೂ ಅ೦ತಹದ್ದೇ ವಿಷಯಕ್ಕೆ ನಿಮ್ಮ ಸಹಾಯ ಕೇಳುತ್ತಿದ್ದೇನೆ. ನೀವು ನಿಮ್ಮ ಭಾವಚಿತ್ರವೊ೦ದನ್ನು ನನ್ನ ಸೋದರಳಿಯನಿಗೆ ಕಳಿಸಿಕೊಡಬೇಬಕು; ನಿಮಗೆ ಅವನ ಅಸ್ತಿತ್ವದ ಅರಿವು ಇದೆಯೆ೦ದು ತೋರಲು ಅವನ ಹೆಸರು ಅದರಲ್ಲಿರಬೇಕು. ಅದರ ಜೊತೆ ನಿಮ್ಮ ಹಸ್ತಾಕ್ಷರವಿರಲಿ.  ಚಿತ್ರದಲ್ಲಿ ಸ್ವಲ್ಪ ಹುಡುಗಿಯ  ಕಳೆ ಇದ್ದು  ಎನೋ ಯೋಚನೆ ಇರುವ೦ತೆ ಇರಲಿ. ಈಗಲೆ ಅವನು ನಿಮ್ಮ  ಗುಲಾಮನಾಗಿದ್ದನೆ  ಈ ನಿಮ್ಮ ಸಹಾಯದಿಂದ  ನನ್ನ ಗುಲಾಮನೂ ಅಗುತ್ತಾನೆ 
     ನೀವು ಈ ಚಿತ್ರವನ್ನು ಕಳಿಸಿದರೆ, ನಾನು ಫೋರ್ಟ್ ನಾಕ್ಸ ( ರಾಷ್ಟ್ರದ ಧನ ಭಂಡಾರ)ನ್ನು  ಪ್ರವೇಶಿಸಲು   ನಿಮಗೆ ಒ೦ದು ಬೀಗದ ಕೈ ಕಳಿಸಿ ಕೊಡುತ್ತೇನೆ  (ಹ ಹ ) ಅದಲ್ಲದೆ ನಿಮ್ಮನ್ನು ಬಹಳ ಇಷ್ಟಪಡುತ್ತೇನೆ ಕೂಡ  !
ನಿಮ್ಮ ವಿಧೇಯ 
--ಜಾನ್ ಸ್ಟೈನ್ ಬೆಕ್ 
------------------------------------------------------------------------------------------------
      ಜಾನ್ ಚಿಕ್ಕಪ್ಪನ್ನ ಫೋಟೋ ಹೇಗೆ ಸಿಕ್ಕಿತೆಂದು ಬಹಳ ಸತಿ ಕೇಳಿದ್ದೆ . ಸುಮ್ಮನೆ ನಕ್ಕು ಬಿಡುತ್ತಿದ್ದ. ಈಗ ಗೊತ್ತಾಯಿತು.  ಒಬ್ಬ ಚಿಕ್ಕ ಹುಡುಗನ ಖುಷಿಗಾಗಿ  ಮಹಾಲೇಖಕರೊಬ್ಬರು ಸಮಯಮಾಡಿಕೊಂಡು ಈ ಪತ್ರ ಬರೆದಿದ್ದರು; ಅದೇ ಚಿಕ್ಕ ಹುಡುಗನಿಗಾಗಿ ಮಹಾ ನಟಿಯೊಬ್ಬಳು  ಸಮಯ ಮಾಡಿಕೊಂಡು ಚಿತ್ರ ತೆಗೆಸಿಕೊಂಡು ಕಳಿಸಿಕೊಟ್ಟಿದ್ದಳು ! ಇದೆಲ್ಲಾ ನನಗೋಸ್ಕರ ಎಂದು ನಾಚಿಕೆಯಾಯಿತು. ಆದರೂ ಅವರಿಬ್ಬರ ದೊಡ್ದತನಕ್ಕೆ ಮಾರುಹೋಗಿದ್ದೆ.  ಇದರ ನಂತರ ಆ ಲೇಖಕ ಮತ್ತು ನಟಿ ಎಲ್ಲಾದರೂ ಸಂಧಿಸಿದ್ದರೆ? ಗೊತ್ತಿಲ್ಲ. 
     ಗರಾಜಿನಲ್ಲಿ ಚಲ್ಲಾ  ಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳನ್ನೆಲ್ಲ ನೋಡಿದೆ.  ಇದನ್ನೆಲ್ಲಾ ಇಟ್ಟುಕೊಂಡು  ಏನು ಮಾಡುವುದು? ಪತ್ನಿಗೂ ಇಷ್ಟವಿಲ್ಲ,ಮಕ್ಕಳಿಗೂ ಇಷ್ಟವಿಲ್ಲ. ಚೀಲದಲ್ಲಿ ತುರುಕಿ ನಾಳೆ ಕಸದ ಟ್ರಕ್ ಬಂದಾಗ ಕಳಿಸಿಬಿಡಬೇಕು !  ಸರಿ,ಮ್ಯಾರಿಲಿನ್ ಳ ಚಿತ್ರ ಮಾತ್ರ ಒಳಗೆ ತೆಗೆದುಕೊಂಡು ಹೋಗುತ್ತೇನೆ. ಈ ಕಾಗದ ? ಇದರ ಪ್ರತಿಯನ್ನು  ಪತ್ರಿಕೆಯವರಿಗೆ ಕಳಿಸಿಕೊಡುತ್ತೇನೆ .ಏನು ಬೇಕಾದರೂ ಮಾಡಲಿ .                                                                                                 (೨೦೧೫ರಲ್ಲಿ ಮ್ಯಾರಿಲಿನ್ ರ ವಸ್ತುಗಳು ಹರಾಜಾಗುತ್ತಿದ್ದಾಗ ಈ ಪತ್ರವೂ ಹರಾಜಾಗಿ ಸುಮಾರು ೩೫೦೦ ಡಾಲರುಗಳು ದೊರಕಿತಂತೆ ).

- ಪಾಲಹಳ್ಳಿ ವಿಶ್ವನಾಥ್