ನೆದರ್ಲ್ಯಾಂಡ್ ಬಾಣಂತನ-ಪುಸ್ತಕ ವಿಮರ್ಶೆ
" ನೆದರ್ ಲ್ಯಾಂಡ್ ಬಾಣಂತನ" - ಖ್ಯಾತ ಲೇಖಕ ಕೆ. ಸತ್ಯನಾರಾಯಣ ರವರ ಹೊಸ ಪುಸ್ತಕ. ಹೊಸ ರೀತಿಯ ಪ್ರವಾಸ ಸಾಹಿತ್ಯ. ಅನೇಕ ಒಳ ನೋಟಗಳು ! ನನ್ನನ್ನು ಓದಲು ಹೇಳಿದ್ದರು. ನನ್ನ ಅನಿಸಿಕೆಗಳನ್ನು ಕೆಳಗೆ ಕೊಟ್ಟಿದ್ದೇನೆ
ನೆದರ್ಲ್ಯಾಂಡ್ +
ಈ ಬರಹ ಕೆ. ಸತ್ಯನಾರಾಯಣ (ಕೆ.ಎಸ್) ಅವರ ನೆದರ್ಲ್ಯಾಂಡ್ಸ್ ಕುರಿತ ಪುಸ್ತಕವನ್ನು ಓದಿದ ನಂತರ ನನ್ನ ಆಲೋಚನೆಗಳು. . ಇದು ಅವರ ಚಿಂತನೆಯ ಅಥವಾ ಬರವಣಿಗೆಯ ವಿಮರ್ಶೆಯಲ್ಲ. ಪುಸ್ತಕವನ್ನು ಸಂಪೂರ್ಣವಾಗಿ ಓದಿಲ್ಲ ಎಂದು ನಾನು ಹೇಳಲೇಬೇಕು( ಕೆಲವು ಭಾಗಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಓದಿರಬಹುದು). ನನಗೆ ಸ್ವಾರಸ್ಯ ಕಂಡ ವಿಷಯಗಳ ಬಗ್ಗೆ ಮತ್ತು ನನಗೆ ಅರ್ಥವಾಗಿದ್ದನ್ನು ಮಾತ್ರ ಸ್ವಲ್ಪ ಚರ್ಚಿಸುತ್ತೇನೆ: ನೆದರ್ಲೆಂಡ್ (ಹಾಲೆಂಡ್) ನ ಜೀವನದ ವಿವಿಧ ಆಯಾಮಗಳನ್ನು ಸ್ವಾರಸ್ಯವಾಗಿ ಬಣ್ಣಿಸಿದ್ದಾರೆ. ಶಿಕ್ಷಣ ವಿಧಾನಗಳ ಬಗ್ಗೆ ಆಳವಾಗಿ ಚಿಂತಿಸಿದ್ದಾರೆ .
(1) “ ಯಾರೇ ಬಿಳಿಯರನ್ನು, ಕೆಂಪಗಿರುವವರನ್ನು ಕಂಡರೆ ಸಾಕು, ಒಂದು ರೀತಿಯ ದ್ವೇಷ, ಅಸಹನೆ ಮನಸ್ಸಿನಲ್ಲಿ ತಕ್ಷಣ ಮೂಡಿಬಿಡುತ್ತಿತ್ತು. .. ಎಲ್ಲರೂ ಬಿಳಿ ಬಣ್ಣದವರು, ಕೆಂಪು ಬಣ್ಣದವರು. ತುಂಬಾ ಸುಖವಾಗಿದ್ದಾರೆ, ಸಂತೃಪ್ತಿಯಿಂದಿದ್ದಾರೆ ಎಂಬ ಭಾವನೆ. ಸರಿ, ಅವರು ಸಂತೋಷವಾಗಿದ್ದರೆ, ಸುಖವಾಗಿದ್ದರೆ ನನಗೇಕೆ ಈ ರೀತಿಯ ಅಸೂಯೆ, ದ್ವೇಷ? ಇದೇನೂ ಆಕಸ್ಮಿಕವಲ್ಲ, ತಾತ್ಕಾಲಿಕವೂ ಅಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನನಗೂ ಹಿಂಸೆ. …ನಮ್ಮಂಥ ದೇಶದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದವರು…..ಸುಂದರ. ಆದರೆ ಇದಕ್ಕೆಲ್ಲ ಇವರು, ಈಗಿನವರು ಹೇಗೆ ಹೊಣೆ” ಇಷ್ಟೆಲ್ಲಾ ಚಿಂತಿಸಿ ತಮ್ಮ “ ಓದು, ಬರಹ, ಪ್ರವಾಸ .. ಎಲ್ಲ “ ಇದ್ದೂ ಏಕೆ ಇಷ್ಟು ದ್ವೇಷ ಎಂದು ಕೇಳಿಕೊಳ್ಳುತ್ತಾರೆ. “ನನಗೆ ಎಪ್ಪತ್ತು ವರ್ಷ ಇನ್ನೇನು ತುಂಬುತ್ತದೆ. ಇದುವರೆಗಿನ ಅನುಭವ, ಓದು, ಚಿಂತನೆ, ಪ್ರವಾಸ, ಬರವಣಿಗೆ – ಇದಕ್ಕೆಲ್ಲ ಏನಾಯಿತು? “ (ಅಮೆರೀಕನ್ನರ ಬಗ್ಗಯೂ ಈ ದ್ವೇಷ ಇದೆಯೇ ಏನೋ ತಿಳಿಯಲಿಲ) .
ಪುಸ್ತಕದಲ್ಲಿ ಇದು ನನಗೆ ಒಂದು ಮುಖ್ಯ ವಿಷಯವಾಗಿ ಕಂಡುಬಂದಿ ತು. ಮುಂದೆ ಅವರೇ ಎತ್ತುವ ‘ ವಿಶ್ವಮಾನವ’ ವಿಷಯಕ್ಕೂ ಮೇಲೆ ತೋರಿಸರುವ ಭಾವನೆಗಳು ಮುಖ್ಯ. ಈ ವಿಷಯದಲ್ಲಿ ನನ್ನ ಅನುಭವವನ್ನು ಸ್ವಲ್ಪ ಹಂಚಿಕೊಳ್ಳುತ್ತೇನೆ. ನಾನು 1942 ರಲ್ಲಿ ಜನಿಸಿದೆ, ಅದು ಬ್ರಿಟಿಷ್ ಆಳ್ವಿಕೆಯ ಕೊನೆಯ ವರ್ಷಗಳು. ಆ ಆಳ್ವಿಕೆಯ ಯಾವುದೇ ನೇರ ಪರಿಣಾಮವನ್ನು ಅನುಭವಿಸಲು ಅಥವಾ ಅರ್ಥಮಾಡಿಕೋಳ್ಳಲು ನಾನು ತುಂಬಾ ಚಿಕ್ಕವನಾಗಿದ್ದೆ. ಗಾಂಧಿ ಮತ್ತು ನೆಹರೂರಂತಹವರು ಬ್ರಿಟಿಷರಿಂದ ಹಲವಾರು ವರ್ಷಗಳು ವಿವಿಧ ರೀತಿಯಲ್ಲಿ ತೊಂದರೆಗಳನ್ನು ಅನುಭವಿಸಿದರು. ಆದರೂ ಇದು ಅವರಿಗೆ ವೈಯಕ್ತಿಕ ಇಂಗ್ಲಿಷ್ ಜನರ ಬಗ್ಗೆ ಯಾವುದೇ ತರಹದ ದ್ವೇಷವನ್ನು ಉಂಟುಮಾಡಲಿಲ್ಲ. ನೆಹರೂ 9+ ವರ್ಷಗಳ ಕಾಲ ಜೈಲಿನಲ್ಲಿದ್ದರು; ಆದರೂ ಅವರು ಪಾಶ್ಚಿಮಾತ್ಯರೊಂದಿಗೆ ಗಮನಾರ್ಹವಾಗಿ ನಿಕಟರಾಗಿದ್ದರು. ಭಾರತದ ಸಾಮಾನ್ಯ ಜನತೆಯೂ ಇಂಗ್ಲಿಷರ ಮೇಲೆ ಹಲ್ಲೆ ಇತ್ಯಾದಿ ನಡೆಸಲಿಲ್ಲ ಎಂದು ಹೇಳಬಹುದು ( ಕೆಲವು ಅಪರೂಪದ ಘಟನೆಗಳು ನಡೆದಿರಬಹುದು, ನನಗೆ ಅದು ಗೊತ್ತಿಲ್ಲ). ಆದರೆ ಬ್ರಿಟಿಷರ ಮೇಲಿನ ಅಸಹನೆ ನನ್ನಂಥವನನ್ನೂ ಸಂಪೂರ್ಣವಾಗಿ ಬಿಡಲಿಲ್ಲ. ಭಾರತ ಅಥವಾ ಬೇರೆ ಯಾವುದೇ ರಾಷ್ಟ್ರ ಬ್ರಿಟಿಷರ ವಿರುದ್ಧ ಆಡಿದಾಗಲೆಲ್ಲಾ, ಇಂಗ್ಲೆಂಡ್ ಪಂದ್ಯವನ್ನು ಸೋಲಬೇಕೆಂದು ನಾನು ಯಾವಾಗಲೂ ಬಯಸುತ್ತಿದ್ದೆವು. ಎಸ್‌ಎಸ್‌ಎಲ್‌ಸಿ ಫೈನಲ್‌ನಲ್ಲಿ ಇತಿಹಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯ ಬಗ್ಗೆ ಬರೆಯಲು ಕೇಳಿದಾಗ, ನಾನು ನೆಪೋಲಿಯನ್ ಬಗ್ಗೆ ಬರೆದಿದ್ದೆ. ಅವನ ಬಗ್ಗೆ ನನಗೆ ಏಕೆ ಆಕರ್ಷಣೆ ಇತ್ತು ಎಂದು ನನಗೆ ಆಶ್ಚರ್ಯವಾಯಿತು: ಬ್ರಿಟಿಷರನ್ನು ಸೋಲಿಸಿದ ವ್ಯಕ್ತಿ, ನಮ್ಮ ಸಾಮಾನ್ಯ ಶತ್ರು? ಆದಾಗ್ಯೂ, ನಮ್ಮ ದ್ವೇಷವು ಆಸ್ಟ್ರೇಲಿಯಾದಂತಹ ಇತರ ಪಾಶ್ಚಿಮಾತ್ಯರಿಗೆ ಹರಡಲಿಲ್ಲ. ಒಟ್ಟಿನಲ್ಲಿ ನೆಹರು ರ ನವಭಾರತಕ್ಕೆ ತನ್ನದೇ ಸಮಸ್ಯೆಗಳು ಅನೇಕವಿದ್ದು ಬೇರೆಯ ದೇಶವನ್ನು ದ್ವೇಷಿಸಲು ಸಮಯ ಸಿಗಲಿಲ್ಲ. ಹಾಗೆಯೇ ನನಗೂ ಇದು ಹೆಚ್ಚು ತಟ್ಟಲಿಲ್ಲ ಎಂದು ತೋರುತ್ತದೆ.
ನನ್ನ 25 ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ಹೋಗಿ 10+ ವರ್ಷಗಳು ಇದ್ದೇ. ಅಲ್ಲೇ ವಾಸ ನಾಡಬೇಕಾದ್ದರಿಂದಲೋ ಅಥವಾ ಅಮೆರಿಕನ್ ಸ್ನೇಹತರು ಸಿಕ್ಕಿದ್ದರಿಂದಳೋ ಏನೋ ಅಮೆರಿಕನ್ನರ ಬಗ್ಗೆಯೂ ಅಂತಹ ಅಸಮಾಧಾನವೇನೂ ಹುಟ್ಟಲಿಲ್ಲ. ನಾನು ವಿಶ್ವವಿದ್ಯಾಲಯಗಳಲ್ಲಿ, ಕ್ಯಾಂಪಸ್ ಗಳಲ್ಲಿ ವಿದ್ಯಾರ್ಥಿಯಾಗಿದ್ದರಿಂದ ಇದು ಪ್ರಾಯಶಃ: ಸಾಧ್ಯವಾಯಿತು ಎಂದು ತೋರುತ್ತದೆ. ಬೇರೆ ಕೆಲಸದಲ್ಲಿದ್ದರೆ ಅಲ್ಲಿಯ ಜನರನ್ನು ಅಷ್ಟು ಹತ್ತಿರದಿಂದ ನೋಡಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿ ಮತ್ತೊಂದು ಪ್ರಾಯಶಃ; ಬಾಲಿಶ ಪ್ರತಿಕ್ರಿಯಯನ್ನು ದಾಖಲು ಮಾಡಬೇಕು. ನಾನು ಚಿಕ್ಕಂದಿನಲ್ಲಿಯೇ ಟೆನಿಸ್ ಕಲಿತಿದ್ದು ಸುಮಾರಾಗಿಯಾದರೂ ಆಡುತ್ತಿದ್ದೆ. ಅಮೆರಿಕದಲ್ಲಿ ವಿಶ್ವವಿಧ್ಯಾಲಯ ಅಥವಾ ನಗರದ ಟೆನಿಸ್ ಕೋರ್ಟ್ ಗಳಿಗೆ ಆಡಲು ಹೋಗುತ್ತಿದ್ದೆ. ಆಗಾಗ ಕೆಲವು ಆಜಾನುಬಾಹು ಬಿಳಿಯರನ್ನು ಎದುರಿಸಬೇಕಿತ್ತು. ಅಂತಹವರ ಮೇಲೂ ನಾನು ಕೆಲವುಬಾರಿ ಗೆಲ್ಲುತ್ತಿದ್ದೆ; ಆಗ ನಾನು ಪಡುತ್ತಿದ್ದ ಖುಷಿ ಸಾಮಾನ್ಯ ಗೆಲುವಿನ ಸಂತೋಸಜ್ಯಕ್ಕಿಂತಲೂ ಹೆಚ್ಚೇ ಇರುತ್ತಿದ್ದು ಎಲ್ಲೋ ಪ್ರತಿಕಾರದ ಛಾಯೆ ಇತ್ತೋ ಏನೋ !
ಈ ಸಮಯದಲ್ಲಿ ಪಶ್ಚಿಮದವರ ಮನೋಭಾವವನ್ನೂ ನೋಡೋಣ.ನನಗೆ ತಿಳಿದ ಅಲ್ಲಿಯ ಅನೇಕ ಜನರು ಸಜ್ಜನರೆ ಆಗಿದ್ದರು ( ಇದರಲ್ಲಿ selection effect ಇರುತ್ತದೆ) . ಆದಷ್ಟೂ ನಮ್ಮಂತೆ ಇರುವರನ್ನೂ ನಾವು ಸ್ನೇಹಿತರಾಗಿ ಆಯ್ಕೆಮಾಡಿಕೊಳ್ಳುತ್ತೇವಲ್ಲವೇ? . ಸಾಮಾನ್ಯವಾಗಿ ಆವೇರಿಕನ್ನರಲ್ಲಿ ‘ Arrogance ‘ ಹಾಗೂ ಆಕ್ರಮಣಶೀಲ ಸ್ವಭಾವ ಇರುತ್ತದೆ ಎನ್ನುವುದನ್ನು ಓದಿರುತ್ತೇವೆ . ನನ್ನದೇ ಜೀವನದಲ್ಲಿ ನನಗೆ ಅದರ ಅನುಭವ ಹೆಚ್ಚು ಆಗಲಿಲ್ಲ. ಆದರೆ ಆ ಸ್ವಭಾವ ಇದೆ. Academic ಕ್ಷೇತ್ರಗಳಲ್ಲಿ ನನ್ನ ಕಳೆದ 50 ವರ್ಷಗಳ ಅನುಭವ- ಅವರಲ್ಲಿ ಬಹಳ ಮಂದಿಗೆ ಏಷಿಯನ್ನರ ಬಗ್ಗೆ ಪೂರ್ವಗ್ರಹವಿದೆ. ನಮ್ಮ ಸಂಸ್ಕೃತಿಗಳಲ್ಲಿ ವಿಜ್ಞಾನ ಮುಖ್ಯವಲ್ಲ ಎನ್ನುವ ಧೋರಣೆ ಕೆಲವರಿಗಿದೆ( ಆದ್ದರಿಂದ ನಮ್ಮ ವೈಜ್ಞಾನಿಕ ಕೆಲಸಗಳು ಮತ್ತು ಸಂಶೋಧನಾ ಲೇಖನಗಳಿಗೆ ಸ್ವಲ್ಪ ಹೆಚ್ಚೇ ತಪಾಸಣೆ ನಡೆಯಬಹುದು. ಒಂದು ವಿಧದಲ್ಲಿ ನಾವೆಲ್ಲರೂ Racist ರೇ : ನಮಗಿಂತ ಬೇರೆಯ ತರಹ ಇರುವವರನ್ನು ಕಂಡರೆ ಎಚ್ಚರಿಕೆ ಮತ್ತು ಸಂಶಯ ಹುಟ್ಟಿನಿಂದ ( ವಿಕಾಸದ ಪರಿಣಾಮ) ಬಂದಿರುತ್ತದೆ ಎಂದು ಕಾಣುತ್ತದೆ ! Rheseus ಕೋತಿಗಳಿಗೂ ಲಾಂಗೂರ್ ಕೋತಿಗಳಿಗೂ ವೈರತ್ವ ವಿದೆಯಲ್ಲವೇ !
(2) ದೇಶದ ಕುರಿತಾದ ಅಧ್ಯಾಯದಲ್ಲಿ, ಕೆ.ಎಸ್. ಡಚ್ ಜೀವನದ ವಿವಿಧ ಅಂಶಗಳನ್ನು ಸರಿಯಾಗಿ ಎತ್ತಿ ತೋರಿಸುತ್ತಾರೆ. “ ಪ್ರತಿ ಹಂತದಲ್ಲೂ ಇದನ್ನೆಲ್ಲ ಅಮೆರಿಕದ ಆಯ್ಕೆ ಮತ್ತು ಜೀವನಶೈಲಿಯೊಡನೆ ಹೋಲಿಸುವ ಆಸೆಯೂ ಆಗುತ್ತದೆ. ನಮ್ಮೆಲ್ಲರಿಗೂ ಅಮೆರಿಕದ ಬಗ್ಗೆ ಇರುವ ಪ್ರೀತಿ-ದ್ವೇಷದ ಕಾರಣದಿಂದಾಗಿ ಮನಸ್ಸು ಯಾವಾಗಲೂ ಯುರೋಪಿನ ಪರವಾಗಿಯೇ ಇರುತ್ತದೆ. ಡಚ್ಚರು ನಮ್ಮನ್ನು ಆಳಿದವರಲ್ಲವಾದ್ದರಿಂದ ನಾವು ಕೂಡ ಯೋಚಿಸುವಾಗ, ಹೋಲಿಸುವಾಗ ಸಾಕಷ್ಟು ವಸ್ತುನಿಷ್ಠವಾಗಿರುತ್ತೇವೆ “ . ಜೀವನ ನಿಧಾನವಾಗಿದ್ದು ಆ ದೇಶ (ನೆದರ್ಲ್ಯಾಂಡ್) ತನ್ನನ್ನು ತಾನು ಶಕ್ತಿಶಾಲಿ ಎಂದು ಬಿಂಬಿಸಿಕೊಳ್ಳುವ ಅಗತ್ಯವಿಲ್ಲಎಂದು ಹೇಳುತ್ತಾರೆ . ಯುರೋಪಿನಲ್ಲಿ ಅನೇಕ ಜನರು ಬೇಸಿಗೆಯಲ್ಲಿ ರಜೆಗಾಗಿ ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ರಜೆ ತೆಗೆದುಕೊಳ್ಳುತ್ತಾರೆ ಎಂದು ಮೊದಲ ಬಾರಿ ನನಗೆ ತಿಳಿದಾಗ ಬಹಳ ಆಶ್ಚರ್ಯವಾಗಿತ್ತು . ಇದನ್ನು ಅಮೆರಿಕ ಅಥವಾ ಭಾರತದಲ್ಲಿ ಕೇಳಿರಲಿಲ್ಲ. ಸರಿಯೋ ತಪ್ಪೋ ನಾವು ಬ್ರಿಟಿಷ್-ಅಮೇರಿಕನ್ ಮಾರ್ಗವನ್ನು ಅನುಸರಿಸಲು ಆಯ್ಕೆ ಮಾಡಿಕೊಂಡು ಅದಕ್ಕೆ ನಮ್ಮದೇ ವೈಶಿಷ್ಟ್ಯಗಳನ್ನು ಸೇರಿಸಿದ್ದೇವೆ. ಅದಲ್ಲದೆ ನಾವು ಇನ್ನೂ ಬೆಳೆವಣಿಗೆಯ್ ಹಾದಿಯಲ್ಲಿ ಇರುವುದರಿಂದ ಯುರೋಪಿನಲ್ಲಿನ ವ್ಯವ ಧಾನ ಸರಿಹೋಗುವುದಿಲ್ಲ.ಜ್ವಲಂತ ಸಮಸ್ಯೆಗಳು ಇದ್ದೇ ಇರುತ್ತವೆ. ಅದಲ್ಲದೆ ಈಗ ನಾವು ಹೆಚ್ಚು ಮಹತ್ವಾಕಾಂಕ್ಷೆಯ ರಾಷ್ಟ್ರವಾಗಿದ್ದೇವೆ; ನಾವು ವಿಶ್ವ ಗುರುಗಳಾಗಲು ಹೊರಟಿದ್ದೇವೆ. ಸಣ್ಣ ದೇಶಗಳಿಗೆ ಇಲ್ಲದಿರುವ ಕೆಲವು ಜವಾಬ್ದಾರಿಗಳನ್ನು ದೊಡ್ಡ ದೇಶಗಳು ಹೊಂದಿವೆ ಎಂಬುದು ನಿಜ, ಆದರೆ ವಿಪರೀತ ಆಸೆಗಳಿಗೆ , ಆಕಾಂಕ್ಷೆಗಳಿಗೆ ಕಡಿವಾಣ ಹಾಕಿಕೊಳ್ಳಬೇಕಾಗುತ್ತದೆ.
(3) “ ಓದುವಾಗ, ಬರೆಯುವಾಗ ಕಲ್ಪನಾ ಪ್ರಪಂಚದಲ್ಲಿ ವಿಶ್ವಮಾನವರಾಗುವುದು ಸುಲಭ. ದಿನನಿತ್ಯದ ಬದುಕಿನ ಒತ್ತಡದ ಒಡನಾಟದಲ್ಲಿ ವಿಶ್ವಮಾನವರಾಗುವುದು, ಕೊನೆಯ ಪಕ್ಷ ವಿಶ್ವಮಾನವರಾಗಲು ನಮ್ಮನ್ನು ನಾವೇ ತೆರೆದುಕೊಳ್ಳುವುದು ಬಲು ಕಷ್ಟ. “ ನಮ್ಮ ಸ್ವಂತ ರಾಷ್ಟ್ರೀಯತೆಯನ್ನು ಸ್ವಲ್ಪವಾದರೂ ಬಿಟ್ಟುಕೊಡದೆ ವಿಶ್ವದ ಪ್ರಜೆಯಾಗುವುದು ಕಷ್ಟ. “ನನ್ನ ದೇಶ ಮಹಾನ್ “ ಎನ್ನುವ ಭಾವನೆ ಕಡಿಮೆಯಾಗಬೇಕು ( ಇದು ಸ್ವಲ್ಪ ಅದ್ವೈತ ಪರಿಕಲ್ಪನೆಯಂತೆ (ನನಗೆ ತತ್ವಜ್ಞಾನದ ಪರಿಚಯ ಕಡಿಮೆ ; ಆದರೂ ಈ ಉಪಮೆ!) - ವೈಯಕ್ತಿಕ ಆತ್ಮಗಳು ಬ್ರಹ್ಮನಲ್ಲಿ ಲೀನವಾಗಳೇ ಬೇಕು) ಜಾತಿ, ಧರ್ಮ, ರಾಷ್ಟ್ರ ಇತ್ಯಾದಿ ವೈಯಕ್ತಿಕ ಅಂಶಗಳನ್ನು ನಿಧಾನವಾಗಿ ತ್ಯಜಿಸಬೇಕಾಗುತ್ತದೆ. ಇದು ಕಷ್ಟವೆನಿಸಿದರೆ ವಿಶಿಷ್ಟಾ ದ್ವೈತ ದ ಕಲ್ಪನೆಯನ್ನಾದರೂ ಸಾಧ್ಯ ಮಾಡಿಕೊಳ್ಳಬೇಕಾಗುತ್ತದೆ. ಹೇಗೋ ನಮ್ಮ ಭಾರತೀಯತೆಯನ್ನೂ ಉಳಿಸಿಕೊಂಡು ( ಆದರೆ ಹೆಚ್ಚು ಮಾಡಿಕೊಳ್ಳದೆ) ವಿಶ್ವಮಾನವನಾಗುವುದು ಅಪೇಕ್ಷಣೀಯ. ಮಾನವ ಜನಾಂಗವು ಭೌತಿಕ ಪ್ರಪಂಚದ (ಭೂಮಿಯ) ಕೊನೆಯವರೆಗೂ ಮುಂದುವರಿಯಬೇಕಾದರೆ, ವಿಶ್ವ ಮಾನವನ ಕಡೆಗೆ ಸಾಗುವುದು ಬಹಳ ಅವಶ್ಯಕ. ಇಲ್ಲದಿದ್ದರೆ ಯುದ್ಧಗಳಲ್ಲಿ ಮನುಕುಲವು ತನ್ನನ್ನು ತಾನು ನಾಶಪಡಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ವಿಕಾಸದಲ್ಲಿ ಇಲ್ಲಿಯವರೆವಿಗೆ ಬಂದಿರುವ ಮನುಕುಲ ಪ್ರಕೃತಿ ಯ ಪ್ರಯೋಗಗಳಲ್ಲಿ ಅಮೂಲ್ಯವಾದದ್ದು. ಇದಕ್ಕಾಗಿ ನಾವು ಪ್ರಕೃತಿಗೆ ಧನ್ಯವಾದ ಹೇಳುತ್ತಾ ವಿಶ್ವಮಾನವರಾಗಳು ಪ್ರಯತ್ನಿಸಲೇ ಬೇಕು. ಒಂದು ದೇಶದಲ್ಲೇ ಇದ್ದುಕೊಂಡು ಈ ಮನಸ್ಥಿತಿ ತಲಪುವುದು ಕಷ್ಟವಿರಬಹುದು ( ಕುವೆಂಪು ಅಂತಹವರನ್ನು ಬಿಟ್ಟು). ಆದ್ದರಿಂದ ಇದು ಹಲವಾರು ಸಂಸ್ಕೃತಿ ಗಳನ್ನು ಅನುಭವಿಸಿರುವ ವ್ಯಕ್ತಿಗಳಿಗೆ ಸ್ವಲ್ಪ ಸುಲಭವಿರಬಹುದು. ಅಂತಹ ವ್ಯಕ್ತಿಗಳು ‘ ಪ್ರವಾಸ ಸಾಹಿತ್ಯ’ ಗಳ ಮೂಲಕ ಇತರ ದೇಶಗಳನ್ನು ಸ್ಥಳೀಯರಿಗೆ ಪರಿಚಯಮಾಡಿಕೊಡಬೇಕು. ಈ ದಿಕ್ಕಿನಲ್ಲಿ ಸತ್ಯನಾರಾಯಣ ಅವರ ಇಂತಹ ಪುಸ್ತಕಗಳು ಪ್ರಶಂಸನಿಯ ಮತ್ತು ಮುಖ್ಯವಾಗಿ ಅವಶ್ಯಕ,
(4) “ಯುರೋಪಿನ ಶಿಕ್ಷಣ ವ್ಯವಸ್ಥೆ ಚೆನ್ನಾಗಿದೆ. ವ್ಯಕ್ತಿ ವೈಶಿಷ್ಟ್ಯವನ್ನು ಚೆನ್ನಾಗಿ ಪ್ರೋತ್ಸಾಹಿಸುತ್ತದೆ. ಆದರೆ ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತಯಾರು ಮಾಡುವುದಿಲ್ಲ. ಶಾಲೆಗಳಲ್ಲಿ ಕಲಿಯುವುದನ್ನು ಒಂದೆರಡು ವರ್ಷ ತಡವಾಗಿ ಕಲಿತರೂ, ಕಲಿಸಿದರೂ ಯಾರಿಗೂ ಯಾವ ರೀತಿಯ ನಷ್ಟವೂ ಇರುವುದಿಲ್ಲ. . ಸಂಪತ್ತು ಇರುವ ದೇಶಗಳಿಗೆ ಇದು ಸುಲಭ, ಅದಲ್ಲದೆ ಕಳೆದ ಹಲವಾರು ದಶಕಗಳಿಂದ ಯೂರೋಪಿನ ಹಲವಾರು ದೇಶಗಳು ಸಮಾಜವಾದವನ್ನು ಸ್ವೀಕರಿಸಿವೆ. ಇದರಿಂದ ಸ್ವಲ್ಪ ನಿಧಾನ ಪ್ರವೃತ್ತಿ ಬರಬಹುದು. ಒಂದು ರೀತಿಯಲಿ ನಾವು ಅದನ್ನು ಸ್ವಾಗತಿ ಸಬೇಕು. ಕಳೆದ ಶತಮಾನ ಮನುಷ್ಯ ಸ್ವಲ್ಪ ಹೆಚ್ಚೇ ಓಡಿದ್ದಾನೆ; ಹಲವಾರು ಯುದ್ಧಗಳನ್ನುಮಾಡಿದ್ದಾನೆ. ಪ್ರಪಂಚಕ್ಕೆ ವಿರಾಮ ಬೇಕು ಅದಲ್ಲದೆ ವಿಶ್ವಮಾನವ ಸ್ಥಿತಿಯನ್ನು ತಲುಪಲು ಈ ವಿಧಾನ ವಾಸಿಯೋ ಏನೋ !
(5) ಟೋಬಿ ಎಂಬ ಅಸಂಪ್ರದಾಯಕ ಶಿಕ್ಷಕರ ಬಗ್ಗೆ ಒಂದು ಅಧ್ಯಾಯವಿದೆ. ಮಾದರಿ ಶಿಕ್ಷಕ ಎನಿಸಿ ಕೊಂಡಿದ್ದ ಈ ವ್ಯಕ್ತಿ ವ್ಯವಸ್ಥೆಯನ್ನು ತೊರೆದು ಹೊರಟುಹೋಗುತ್ತಾನೆ “ಟೋಬಿಯಂಥವರು ಅಲ್ಲಲ್ಲಿ ಹರಡಿಕೊಂಡಿರುತ್ತಾರೆ. ಭವಿಷ್ಯದ ಬಗ್ಗೆ ಆತಂಕ, ದುರಾಸೆ ಇಲ್ಲದಿದ್ದಾಗ, ಜೀವನದಲ್ಲಿ ಆರ್ಥಿಕ, ಸಾಮಾಜಿಕ ಪ್ರಗತಿಗಿಂತ ಮಾನಸಿಕ ನೆಮ್ಮದಿ, ವೈಯಕ್ತಿಕ ಸಾಕ್ಷಾತ್ಕಾರವೇ ಮುಖ್ಯವಾದಂತಹ ಸಮಾಜದಲ್ಲಿ ಮಾತ್ರ ನಾವು ಟೋಬಿಯಂಥವರನ್ನು ಮತ್ತೆ ಮತ್ತೆ ನಿರಂತರವಾಗಿಯಲ್ಲದಿದ್ದರೂ, ಆಗಾಗ್ಗೆಯಾದರೂ ಎದುರಾಗಲು ಸಾಧ್ಯ.”. ಇಂತಹ ವ್ಯಕ್ತಿಗಳು ಎಲ್ಲೆಲ್ಲೂ, ಕಡಿಮೆ ಪ್ರಮಾಣದಲ್ಲಾದರೂ, ಇರುತ್ತಾರೆ ಎಂದು ನನ್ನ ಅಭಿಪ್ರಾಯ. 1960 ರ ದಶಕದಲ್ಲಿ ನಾನು ಮುಂಬಯಿಯಲ್ಲಿ ಸಂಶೋಧನೆಗಳನ್ನು ಶುರುಮಾಡಿದಾಗ ನಮ್ಮ ಗುಂಪಿನ ಹಿರಿಯರೋಬರು ನಮ್ಮ ವ್ಯವಸ್ಥೆಯನ್ನೇ ಪ್ರಶ್ನಿಸಿ ಸರಿಯಾದ ಉತ್ತರಗಳು ಸಿಗದೇ ರಾಜೀನಾಮೆ ಕೊಟ್ಟು ವ್ಯವಸಾಯ ಮಾಡಲು ವಾಪಸ್ಸು ಬಂಗಾಳಕ್ಕೆ ಹೊರಟುಹೋದರು. ನಾವು ಅವರನ್ನು ಕಳೆದುಕೊಂಡರೂ ಅವರ ಮಾಲ್ಯಗಳಿಗೆ ಮಣಿಯಲೇಬೇಕಾಯಿತು. ನಾನು ಅಮೆರಿಕದಲ್ಲಿ ಇದ್ದಾಗ ನನಗೆ ಕೆಲವು ಹಿಪ್ಪಿ ಗೆಳೆಯರಿದ್ದರು. ಅವರುಗಳೂ ಅಲ್ಲಿನ ವ್ಯವಸ್ಥೆಯನ್ನು ತಿರಸ್ಕರಿಸಿದ್ದರು; ಆ 70 ರ ದಶಕದಲ್ಲಿ , ಅವರನ್ನು ಸಹಿಸಿದವರೂ ಶಿಸಿದವರೂ ಬಹಳ ಇದ್ದರೂ. ಕ್ರಮೇಣ ಅವರಲ್ಲಿ ಕೆಲವರು ವಾಪಸ್ಸು ಬಂದು ವ್ಯವಸ್ಥೆಯ ಭಾಗ್ಯವಾದರೂ. ಈಗಲೂ ಒಂದಿಬ್ಬರು ಹಾಗೆಯೇ ಇದ್ದಾರೆ. ಎಲ್ಲ ಸಮಾಜಗಳಲ್ಲೂ ಇಂಥವರು ಸಾಧ್ಯ ಎಂದು ನನಗೆ ಅನಿಸುತ್ತದೆ. ಅದಲ್ಲದೆ ಸಮಾಜದ ರೀಟಿನೀತಿಗಳನ್ನು ಪ್ರಶ್ನಿಸಿವುದರಿಂದ ಅಂತವರು ಇರಲೇ ಬೇಕು. ಎಲ್ಲೋ ನಾವೂ ಹಾಗಿರಬೇಕು ಎಂದು ನಮಗೂ ಅನಿಸಿರುತ್ತದೆ ; ಆದರೆ ಧೈರ್ಯ ಸಾಲದೆ ನೇರ ದಾರಿಯಲ್ಲಿ ಮುಂದೆ ಹೋಗಿರುತ್ತೇವೆ.
(6) ಸತ್ಯನಾರಾಯಣ ಅವರು ಪುಸ್ತಕದ ಮೊದಲಲ್ಲೆ ಯಾವ ತರಹ ಬರೆಯಬೇಕು ಎಂದು ಕೇಳಿಕೊಳ್ಳುತ್ತಾರೆ . ಚಾಲ್ತಿಯಲ್ಲಿರುವ ಪ್ರವಾಸ ಕಥನದ ಸ್ವರೂಪಕ್ಕೆ ಇಲ್ಲಿಯ ಬರಹ ಹೊಂದಲಾರದು ಎಂಬ ಹಿಂಜರಿಕೆಯನ್ನೂ ವ್ಯಕ್ತಪಡಿಸತ್ತಾರೆ. ಹೌದು ! ಅವರ ಪುಸ್ತಕದಲ್ಲಿ ಅಮ್ಸ್ಟರ್ಡ್ಯಾಂ ನ ಖುಷಿತಾಣಗಳಾಗಲೀ ದೇಶದ ಅಲ್ಲಿಯ ಕಾಲುವೆಗಳಾಗಲೀ ಕಾಣಬರುವುದಿಲ್ಲ. ಹಾಗೆಯೇ ಈ ಪುಟ್ಟ ದೇಶದ ಹಲವಾರು ಮಹತ್ವದ ಪ್ರವಾಸೀತಾಣಗಳೂ ಕಾಣಸಿಗುವುದಿಲ್ಲ. ಆದರೆ ಇಂದಿನ ದಿನಗಳಲ್ಲಿ ಇಂತಹ ಮಾಹಿತಿಗಳು ಅಂತರ ಜಾಲದಲ್ಲಿ ಹಲವಾರು ಕಡೆ ಸಿಗುವುದರಿಂದ ಓದುಗರಿಗೆ ಈ ಪುಸ್ತಕದಲ್ಲಿ ದೊರಕುವುದು ಒಂದು ದೇಶದ ಆದ್ಯತೆ, ಜೀವನಶೈಲಿ,ಶಿಕ್ಷಣಪದ್ಧತಿ ,ಇತಿಹಾಸದಲ್ಲಿ ಸ್ಥಾನ ಇತ್ಯಾದಿ ಬಗ್ಗೆ ಪ್ರಬಂಧಗಳು. ಆದ್ದರಿಂದ ಈ ಪ್ರವಾಸವು ನಮಗೆ ಬೇರೆ ಜೀವನ ಶೈಲಿ ಯ ಪರಿಚಯಮಾ ಡಿಕೊಟ್ಟು, ಅಲ್ಲಿಯ ಜೀವನಕ್ಕೂ ನಮ್ಮ ಜೀವನಕ್ಕೂ ಹೋಲಿಕೆಗಳನ್ನು ಮಾಡಿ ನಮ್ಮನ್ನು ನಾವು ತಿದ್ದಿಕೊಳ್ಳಲು ಕೂಡ ದಾರಿಯನ್ನು ತೆರೆಯುತ್ತದೆ. ಈ ಸ್ವಾರಸ್ಯಕರ ಪುಸ್ತಕ್ಕೆ ಶ್ರೀ ಸತ್ಯನಾರಾಯಣ ಅವರಿಗೆ ಧನ್ಯವಾದಗಳು
- ಪಾಲಹಳ್ಳಿ ವಿಶ್ವನಾಥ್.


