ಮತದಾರರ ಪಟ್ಟಿ ದಶಕಗಳ ನಿರ್ಲಕ್ಷ್ಯ: ಲೋಪ ಅಸಂಖ್ಯ
ಮತದಾರರ ಪಟ್ಟಿ ದಶಕಗಳ ನಿರ್ಲಕ್ಷ್ಯ ಲೋಪ ಅಸಂಖ್ಯ
ಪಿ.ಜಿ.ಭಟ್
ರಾಹುಲ್ ಗಾಂಧಿ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ, ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಆಧರಿಸಿ ದೇಶದಾದ್ಯಂತ ಮತದಾರರ ಪಟ್ಟಿಯಲ್ಲಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದರು. ಇದು ಹೊಸ ವಿಷಯವೇನಲ್ಲ. ಬಹುಕಾಲದಿಂದಲೂ ಗುರುತರವಾದ ಲೋಪಗಳು ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಲೇ ಇದ್ದು, ಮತದಾರರ ವಿವರಗಳು ಸಮಸ್ಯೆಗಳಿಂದ ಕೂಡಿದೆ ಎನ್ನುವುದನ್ನು ಹೇಳುತ್ತಿವೆ.
ಒಂದಕ್ಕಿಂತ ಹೆಚ್ಚು ಕಡೆ ಹೆಸರು ಇರುವುದು ಮತ್ತು ಅಸಿಂಧುವಾದ ವಿವರಗಳು ಬಹುದೊಡ್ಡ ಸಮಸ್ಯೆಯಾಗಿವೆ. ಸಾಫ್ಟ್‌ವೇರ್ ಮತ್ತು ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಲೋಪಗಳಿಂದಾಗಿ ಪ್ರಜ್ಞಾಪೂರ್ವಕವಾಗಿ ಮತ್ತು ಆಕಸ್ಮಿಕವಾಗಿ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಮತ್ತೊಂದು ಸಮಸ್ಯೆಯಾಗಿದೆ. ಒಂದು ಪ್ರಕರಣದಲ್ಲಿ, ಒಂದು ರಸ್ತೆಯ–ಬಿಪಿ ವಾಡಿಯಾ ರಸ್ತೆ– ಎಲ್ಲ ಮತದಾರರ ಹೆಸರನ್ನೂ ಪಟ್ಟಿಯಿಂದ ಕೈಬಿಡಲಾಗಿತ್ತು. ಮತದಾರರ ಪಟ್ಟಿಯಲ್ಲಿರುವ ಶೇ 50ರಷ್ಟು ಮಂದಿಯ ವಿಳಾಸಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ ಎಂದು ಪೋಸ್ಟ್ ಮಾಸ್ಟರ್ ಜನರಲ್ ಅವರೇ ಒಪ್ಪಿಕೊಂಡಿದ್ದರು.
ಕೆಲವು ವಿಳಾಸಗಳು ಕೇವಲ ಒಂದೇ ಪದದಿಂದ ಕೂಡಿರುತ್ತವೆ, ಮತ್ತೆ ಕೆಲವು ತಪ್ಪಾಗಿರುತ್ತವೆ, ಇಲ್ಲವೇ ಅಸ್ತಿತ್ವದಲ್ಲೇ ಇರುವುದಿಲ್ಲ. ಒಂದೇ ವಿಳಾಸದಲ್ಲಿ ವಾಸವಾಗಿರುವ ದಂಪತಿಯನ್ನು ಬೇರೆ ಬೇರೆ ಸ್ಥಳಗಳಲ್ಲಿ ತೋರಿಸಲಾಗಿರುತ್ತದೆ. ತಪ್ಪು ವಿಳಾಸಗಳಲ್ಲಿ ಇರುವವರನ್ನು ಮತಗಟ್ಟೆ ಅಧಿಕಾರಿ (ಬಿಎಲ್‌ಒ) ಪರಿಶೀಲನೆ ನಡೆಸುವ ವೇಳೆ ಪಟ್ಟಿಯಿಂದ ಕೈಬಿಡುವುದು ಅವರ ಕೆಲಸದ ಮುಖ್ಯ ಭಾಗ. ಹೆಸರು, ವಯಸ್ಸು, ಲಿಂಗ, ಸಂಬಂಧ ಮತ್ತು ವಿಳಾಸ ಬರೆಯುವಾಗ ಅಕ್ಷರ ದೋಷಗಳಂತೂ ಅತ್ಯಂತ ಸಾಮಾನ್ಯವಾಗಿವೆ.
ಮತದಾರರ ಪಟ್ಟಿಯ ನಿಜವಾದ ಸಮಸ್ಯೆ ಏನು ಎನ್ನುವುದನ್ನು ಅರಿಯಬೇಕೆಂದರೆ, ಮತದಾರರ ಮಾಹಿತಿಯನ್ನು ಪಡೆದು, ವಿಶ್ಲೇಷಣೆ ಮಾಡಬೇಕು. ಆದರೆ, 2017ರಿಂದ ಸ್ಕ್ಯಾನ್ ಮಾಡಲಾದ ಪಿಡಿಎಫ್ ಪ್ರತಿಗಳು ಮಾತ್ರ ಲಭ್ಯವಿದ್ದು, ಅವುಗಳಲ್ಲಿ ನಮಗೆ ಅಗತ್ಯವಾದ ಮಾಹಿತಿಯನ್ನು ಹುಡುಕಲು ಸಾಧ್ಯವಿಲ್ಲ. ಅವುಗಳನ್ನು ತೆರೆಯಲು ಪಾಸ್‌ವರ್ಡ್ ಅಗತ್ಯ. ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (ಒಸಿಆರ್) ಮೂಲಕ ದತ್ತಾಂಶ ಹೊರತೆಗೆಯಲು ಸಾಧ್ಯವಿದೆ ಎಂದರೂ ಅದಕ್ಕೆ ತುಂಬಾ ಸಮಯ ಬೇಕು. ಬೆಂಗಳೂರಿನ ದತ್ತಾಂಶ ಹೊರತೆಗೆಯಲು ಒಂದು ತಿಂಗಳಿಗೂ ಹೆಚ್ಚು ಅವಧಿ ಬೇಕಾಗುತ್ತದೆ.
ಬೆಂಗಳೂರಿನ 65 ಲಕ್ಷ ಮತದಾರರ ಪೈಕಿ 13.73 ಲಕ್ಷ ಮತದಾರರನ್ನು ಪ್ರಜ್ಞಾಪೂರ್ವಕವಾಗಿ ಮತ್ತು ಕಾನೂನುಬಾಹಿರವಾಗಿ ಕೈಬಿಟ್ಟಿದ್ದರ ಬಗ್ಗೆ 2012ರ ಸಾರ್ವಜನಿಕ ಹಿತಾಸಕ್ತಿಯ ಪ್ರಕರಣವು ಹಲವು ಪ್ರಶ್ನೆಗಳನ್ನು ಮೂಡಿಸಿತ್ತು. ಜತೆಗೆ, ದತ್ತಾಂಶದ ಗುಣಮಟ್ಟದ ಬಗ್ಗೆಯೂ ಪ್ರಶ್ನೆಗಳು ಕೇಳಿಬಂದಿದ್ದವು. ಆಗ ರಾಜ್ಯದ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೀಗೆ ಹೇಳಿತ್ತು: ‘ರಿಟ್ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ವಿಚಾರಗಳು ಸತ್ಯಾಂಶದಿಂದ ಕೂಡಿವೆ. ಕೆಲವು ಹೆಸರುಗಳನ್ನು ಕಾನೂನುಬಾಹಿರವಾಗಿ ಪಟ್ಟಿಯಿಂದ ಕೈಬಿಡಲಾಗಿದೆ. ಮುಖ್ಯ ಚುನಾವಣಾಧಿಕಾರಿಯು ಸ್ವಯಂಪ್ರೇರಿತವಾಗಿ ಈ ವಿಚಾರಗಳನ್ನು ಪರಿಶೀಲಿಸಬೇಕು ಮತ್ತು ಕೈಬಿಟ್ಟಿರುವ ಹೆಸರುಗಳನ್ನು ಸೇರ್ಪಡೆ ಮಾಡಬೇಕು’. ಕೈಬಿಡಲಾಗಿದ್ದ ಹೆಸರುಗಳನ್ನು ನ್ಯಾಯಾಲಯದ ತೀರ್ಪಿನ ನಂತರ ಸೇರ್ಪಡೆ ಮಾಡಲಾಯಿತು.
ಮತದಾರರ ಪಟ್ಟಿಯಲ್ಲಿ ಸಮಸ್ಯೆಗಳಿರುವುದು ಬೆಂಗಳೂರಿಗೆ ಸೀಮಿತವಲ್ಲ. ಲೋಕಸಭಾ ಚುನಾವಣೆಯ ವೇಳೆ ಪಟ್ಟಿಯಿಂದ ಹೆಸರುಗಳು ಕಾಣೆಯಾಗಿದ್ದ ಬಗ್ಗೆ ಮಹಾರಾಷ್ಟ್ರ ಚುನಾವಣಾ ಆಯುಕ್ತ ಎಚ್.ಎಸ್.ಬ್ರಹ್ಮ ಅವರು 2014ರಲ್ಲಿ ಮುಂಬೈ ಜನರ ಕ್ಷಮೆಯಾಚಿಸಿದ್ದರು.
ಮನೆ ಮನೆ ಸಮೀಕ್ಷೆಯ ಆಧಾರದಲ್ಲಿ ದೆಹಲಿಯ ಮತದಾರರ ಪಟ್ಟಿಯಲ್ಲಿ 15 ಲಕ್ಷ ಬೋಗಸ್ ಮತದಾರರು ಇರುವುದಾಗಿ ದೆಹಲಿಯ ಮುಖ್ಯ ಚುನಾವಣಾಧಿಕಾರಿ 2013ರಲ್ಲಿ ಹೇಳಿದ್ದರು. ಅನೇಕ ಹೆಸರುಗಳು ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿದ್ದವು. ಶಂಕಾಸ್ಪದರಾಗಿದ್ದ ಎಲ್ಲರಿಗೂ ನೋಟಿಸ್‌ಗಳನ್ನು ಕಳಿಸಲಾಗಿತ್ತು. ಅದರ ಜತೆಗೆ, ಪಟ್ಟಿಯಲ್ಲಿ 1.5 ಲಕ್ಷ ಎಪಿಕ್ ಸಂಖ್ಯೆಗಳು ಸಮಸ್ಯಾತ್ಮಕವಾಗಿದ್ದವು. ತಮ್ಮ ಮತದಾರ ದಾಖಲೆಗೆ ಬದಲಾವಣೆಗಳನ್ನು ಮಾಡಿರುವುದೇ ಅವರ ಅರಿವಿಗೆ ಬರುತ್ತಿರಲಿಲ್ಲ. ಅದಕ್ಕೆ ಸಂಬಂಧಿಸಿದ ವಿವರಗಳನ್ನು ತಿಳಿಯುವುದು ಅಷ್ಟು ಸುಲಭದ ಕೆಲಸವೂ ಅಲ್ಲ.
ಸರ್ವಜ್ಞನಗರ ಕ್ಷೇತ್ರದ ಎರಡು ಭಾಗಗಳ (ಪಾರ್ಟ್) ಮತದಾರರ ಪಟ್ಟಿಯನ್ನು ಸರಿಪಡಿಸಲು ಕಮಾಂಡರ್ ವಿಕ್ರಮ್ ಸತ್ಪಥಿ (ನಿವೃತ್ತ) ಅವರು ಪ್ರಯತ್ನಿಸುತ್ತಲೇ ಇದ್ದಾರೆ. 2023ರ ಜುಲೈ 8ರಂದು ಅವರು ಸಹಾಯಕ ಚುನಾವಣಾ ನೋಂದಣಾಧಿಕಾರಿಗೆ ಕಳುಹಿಸಿದ ಇ–ಮೇಲ್‌ನಿಂದ 177 ಮತ್ತು 184ನೇ ಮತಗಟ್ಟೆಗಳಲ್ಲಿ ಅಪಾಯಕಾರಿ ಪ್ರಮಾಣದಲ್ಲಿ ನೋಂದಣಿಯಾಗಿದ್ದ ನಕಲಿ ಮತದಾರರ ಮಾಹಿತಿ ಸಿಕ್ಕಿತು; ಪಟ್ಟಿಯಲ್ಲಿದ್ದ ಒಟ್ಟು 1,698 ಮತದಾರರ ಪೈಕಿ 901 ಮತದಾರರು ಮಾತ್ರ ಕ್ರಮಬದ್ಧವಾಗಿ ನೋಂದಣಿಯಾದ ಮತದಾರರಾಗಿದ್ದರು. ಮುಂದಕ್ಕೆ, ಅವರಿಗೆ ಸಿಕ್ಕಿದ್ದು ದಿವ್ಯ ನಿರ್ಲಕ್ಷ್ಯ ಮತ್ತು ಅವಮಾನಗಳು ಮಾತ್ರ.
ರಾಜಕೀಯ ಇಚ್ಛಾಶಕ್ತಿಯ ಕೊರತೆ
ನಾನು ಸುಮಾರು ಎರಡು ದಶಕಗಳಿಂದ ಕರ್ನಾಟಕದ ಮತದಾರರ ಪಟ್ಟಿಯನ್ನು ಅವಲೋಕಿಸುತ್ತಿದ್ದೇನೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ದೆಹಲಿಯ ಮತದಾರರ ಪಟ್ಟಿಯನ್ನು ತಮ್ಮ ಪಕ್ಷದ ಪದಾಧಿಕಾರಿಗಳು ಪರಿಶೀಲಿಸಿದ್ದಾಗಿಯೂ, ಅಸಂಖ್ಯ ದೋಷಗಳನ್ನು ಕಂಡಿದ್ದಾಗಿಯೂ 2013ರಲ್ಲಿ ಎಐಸಿಸಿ ಮುಖಂಡರು ಮಾಧ್ಯಮಕ್ಕೆ ತಿಳಿಸಿದ್ದರು. 2014ರಲ್ಲಿ ನನ್ನನ್ನು ಭೇಟಿಯಾಗಿದ್ದ ಕಾಂಗ್ರೆಸ್‌ನ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ, ಮತದಾರರ ಪಟ್ಟಿಯ ನಿರ್ವಹಣಾ ವ್ಯವಸ್ಥೆಯ ಗುಣಮಟ್ಟದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದರು. ಆನಂತರ ಕೆಪಿಸಿಸಿ ಕಾರ್ಯದರ್ಶಿ ಮತ್ತು ಇತರ ಮೂವರು ನನ್ನನ್ನು ಎರಡು ಬಾರಿ ಭೇಟಿಯಾಗಿ ವಿವರವಾಗಿ ಚರ್ಚಿಸಿದ್ದರು. ನಂತರ ಅವರು ನನ್ನನ್ನು ಸಂಪರ್ಕಿಸಲೇ ಇಲ್ಲ.
ನಾನು ಬೆಂಗಳೂರಿನ ಹಲವು ಶಾಸಕರನ್ನು ಭೇಟಿ ಮಾಡಿ, ವ್ಯವಸ್ಥೆಯನ್ನು ಸರಿಪಡಿಸುವ ಬಗ್ಗೆ ಚರ್ಚಿಸಿದ್ದೆ. ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರು, ‘ಈ ಎಲ್ಲ ತಪ್ಪುಗಳೂ ನಮ್ಮ ಕಣ್ಣಮುಂದೆಯೇ ನಡೆದಿದ್ದು, ನಾವು ಆಗ ಇದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ’ ಎಂದರು. ಅವರನ್ನು ಸಂಪುಟದಿಂದ ವಜಾ ಮಾಡಲಾಯಿತು.
ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳಿಗೆ ಈ ಬಗ್ಗೆ ಕಾಳಜಿ ಇದ್ದಿದ್ದರೆ, ಕನಿಷ್ಠ 18 ವರ್ಷಗಳ ಹಿಂದೆಯೇ ಈ ವಿಚಾರದಲ್ಲಿ ಕಾರ್ಯಪ್ರವೃತ್ತರಾಗಬೇಕಾಗಿತ್ತು. ಅವರಿಗೆ ಈ ಸಂಬಂಧ ಹಲವು ಅನುಕೂಲಗಳಿರುತ್ತವೆ. ಅವರು ತಮ್ಮ ಜವಾಬ್ದಾರಿಯನ್ನು ನಿರ್ಲಕ್ಷಿಸಬಾರದು. ಅವರು ಜಗತ್ತನ್ನು ಬದಲಾಯಿಸಬಲ್ಲರು. ಅದು ಅವರ ಜವಾಬ್ದಾರಿಯೂ ಹೌದು.
ನಾನು ಕೆಲವು ಚುನಾವಣಾ ಆಯುಕ್ತರನ್ನೂ ಭೇಟಿಯಾಗಿ, ಅವರ ಮುಂದೆ ಮತದಾರರ ಪಟ್ಟಿಯ ನಿರ್ವಹಣಾ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಸಿದ್ದೇನೆ. ಅವುಗಳನ್ನು ಸರಿಪಡಿಸುವ ದಿಸೆಯಲ್ಲಿ ಸಹಾಯ ಮಾಡುವುದಾಗಿಯೂ ಅವರಿಗೆ ಭರವಸೆ ನೀಡಿದ್ದೇನೆ. ವೈಯಕ್ತಿಕವಾಗಿ ಅವರು ಸಹೃದಯರು. ಆದರೆ, ಕಾರ್ಯಸಾಧನೆ ಶೂನ್ಯ. ಇದೆಲ್ಲದರಿಂದ ನನಗೆ ದತ್ತಾಂಶದ ನಿರಾಕರಣೆಯು ಹೆಚ್ಚಾಯಿತು.
‘ಮತದಾನ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸುವ ವಿಚಾರದಲ್ಲಿ ಚುನಾವಣಾ ಆಯೋಗವು ಗಣನೀಯ ಪ್ರಗತಿ ಸಾಧಿಸಿದೆ’ ಎಂದು 2012ರ ಜ.23ರಂದು ಆಯೋಗವು ಪ್ರತಿಪಾದಿಸಿತ್ತು. ‘ಮತದಾರರ ಪಟ್ಟಿಯಲ್ಲಿ ನಕಲು ಇಲ್ಲದೇ ಇರುವ ಮೊದಲ ರಾಷ್ಟ್ರ ಭಾರತ’ ಎಂದು ಮುಖ್ಯ ಚುಣಾವಣಾಧಿಕಾರಿಯು 2014ರಲ್ಲಿ ಮತ್ತೆ ಘೋಷಿಸಿದ್ದರು. ಮತದಾರರ ಪಟ್ಟಿಗಳಲ್ಲಿನ ಲೋಪಗಳ ಬಗ್ಗೆ ನಾವು ಪುರಾವೆಗಳನ್ನು ಮುಂದಿಟ್ಟರೂ ಆಯೋಗವು ನಿರಾಕರಿಸುತ್ತದೆ. ಆಯೋಗವು ಮತದಾರರ ನಿರಾಸಕ್ತಿಯ ಬಗ್ಗೆ ಮಾತನಾಡುತ್ತದೆ. ಆದರೆ, ಅದು ಮತ್ತು ಅದರ ದತ್ತಾಂಶ ಹೆಚ್ಚು ಹೆಚ್ಚು ಅಪಾರದರ್ಶಕವಾಗುತ್ತಿವೆ.
ರಾಹುಲ್ ಗಾಂಧಿ ಹೇಳಿಕೆ ನಿಜವಲ್ಲ
2024ರ ಲೋಕಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿಗಳನ್ನು ತಿರುಚಲಾಗಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆ ನಿಜವಲ್ಲ. ಬೆಂಗಳೂರಿನ ಇತರ ಕ್ಷೇತ್ರಗಳಂತೆ ಮಹದೇವಪುರದ ಮತದಾರರ ಪಟ್ಟಿಯಲ್ಲೂ ದೋಷಗಳಿವೆ. ಪಟ್ಟಿಯಲ್ಲಿ ಎಷ್ಟು ಮಂದಿಯ ಹೆಸರುಗಳು ಹಲವು ಬಾರಿ ಸೇರ್ಪಡೆಯಾಗಿವೆ ಅಥವಾ ನಕಲಿ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಅಂದಾಜು ಸಂಖ್ಯೆಯಷ್ಟನ್ನೇ ನೀಡಲು ಸಾಧ್ಯ.
ನನ್ನ ವಿಶ್ಲೇಷಣೆಯ ಪ್ರಕಾರ, 2024ರ ಚುನಾವಣೆಗೂ ಮೂರು ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಈ ದೋಷಗಳಿವೆ. ಕೆಲವು ಪುನರಾವರ್ತಿತ ಹೆಸರುಗಳನ್ನು 2025ರ ವೇಳೆಗೆ ತೆಗೆದುಹಾಕಿರಬಹುದು. ಉದಾಹರಣೆಗೆ 2021ರ ಜನವರಿಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಒಂದೇ ಮನೆ ವಿಳಾಸದಲ್ಲಿ 735 ಹೆಸರುಗಳು ಸೇರ್ಪಡೆಯಾಗಿದ್ದವು. ಅದೇ ಭಾಗದ ಬೇರೆ ಮನೆಗಳ ವಿಳಾಸಗಳಲ್ಲಿ 2,144 ಹೆಸರುಗಳು ನೋಂದಣಿಯಾಗಿದ್ದವು. ಅದೇ ಕ್ಷೇತ್ರದ ಬೇರೆ ಭಾಗಗಳಲ್ಲಿ 28,188 ಹೆಸರುಗಳು ಸೇರ್ಪಡೆಯಾಗಿದ್ದವು. ಒಟ್ಟಾರೆಯಾಗಿ ಇಂತಹ ಶಂಕಿತ ಹೆಸರುಗಳ ಸಂಖ್ಯೆ 31,067.
ಈ ಪೈಕಿ 11,555 ಚೀಟಿಗಳಲ್ಲಿ ಮನೆ ಸಂಖ್ಯೆ ಇರಲಿಲ್ಲ. 8,500 ಚೀಟಿಗಳಲ್ಲಿ ಮನೆ ಸಂಖ್ಯೆ ‘0’ ಎಂದು, 2,961 ಚೀಟಿಗಳಲ್ಲಿ ಮನೆ ಸಂಖ್ಯೆ ‘00’ ಎಂದೂ 20 ಚೀಟಿಗಳಲ್ಲಿ ಮನೆ ಸಂಖ್ಯೆ ‘000’ ಎಂದಿತ್ತು. ಪುರುಷ ಮತದಾರರಿಗೆ ಸೇರಿದ ಚೀಟಿಯಲ್ಲಿ ‘ಪತಿ’ಯ ಹೆಸರಿತ್ತು! ಮಹಿಳೆಯರನ್ನೂ ಪುರುಷ ಎಂದು ಉಲ್ಲೇಖಿಸಿದ ಪ್ರಕರಣಗಳೂ ಇದ್ದವು. ಇವುಗಳಲ್ಲದೇ ಬೇರೆ ಬೇರೆ ಸ್ವರೂಪದ ಹಲವು ತಪ್ಪುಗಳೂ ಕಂಡು ಬಂದಿದ್ದವು. ಮಹದೇವಪುರವೂ ಸೇರಿದಂತೆ ಎಲ್ಲ ಕ್ಷೇತ್ರಗಳ ಮತದಾರರ ಪಟ್ಟಿಗಳಲ್ಲೂ ಇಂತಹ ಅಸಂಬದ್ಧಗಳು, ನಿಗೂಢಗಳು ಇವೆ. ಇವು ಈಗಿನದ್ದಲ್ಲ; 18 ವರ್ಷಗಳಿಂದಲೂ ಇವೆ.
ಪರಿಸ್ಥಿತಿ ಹೀಗಿರುವಾಗ, ರಾಹುಲ್ ಗಾಂಧಿ ಅವರ ಆರೋಪಗಳು ಮಾಧ್ಯಮಗಳಲ್ಲಿ ಗಮನ ಸೆಳೆಯಬಹುದು. ಆದರೆ, ಇದು ನಿಜವಾದ ಸಮಸ್ಯೆಯಿಂದ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುವಂತಹದ್ದು. ದೇಶದಲ್ಲಿ ಮತದಾರರ ಪಟ್ಟಿಗಳನ್ನು ತಿರುಚಿರುವುದು ಇತ್ತೀಚಿನ ಬೆಳವಣಿಗೆ ಏನಲ್ಲ. ಹಲವು ವರ್ಷಗಳಿಂದ ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಎಲ್ಲ ರಾಜಕೀಯ ಪಾಲುದಾರರೂ ಶಾಮೀಲಾಗಿದ್ದಾರೆ.
ಗಂಭೀರವಾದ ಈ ಸಮಸ್ಯೆಗೆ ರಾಜಕೀಯ ಆರೋಪಗಳು ಪರಿಹಾರವಲ್ಲ; ಬದಲಿಗೆ ಸಾಂಸ್ಥಿಕ ಸುಧಾರಣೆಗಾಗಿ ಸುಸ್ಥಿರವಾದ ಬದ್ಧತೆ ಬೇಕಾಗಿದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳು ತಮ್ಮ ಚಿಂತನೆಯಲ್ಲಿ ಮತ್ತು ಕ್ರಿಯೆಯಲ್ಲಿ ಸಮತೋಲನ ಹಾಗೂ ಪ್ರಾಮಾಣಿಕತೆ ಕಾಯ್ದುಕೊಳ್ಳದಿದ್ದರೆ, ಮತದಾರರ ಪಟ್ಟಿಯ ಲೋಪಗಳನ್ನು ಸರಿಪಡಿಸಲು ಸಾಧ್ಯವೇ ಇಲ್ಲ.
(ಲೇಖಕರು 15 ವರ್ಷಗಳಿಂದ ಮತದಾರರ ಪಟ್ಟಿಗಳಲ್ಲಿರುವ ದೋಷಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ)
ಒಂದೇ ವಿಳಾಸದಲ್ಲಿ ಹಲವು ಹೆಸರುಗಳು ಇರಲು ಹೇಗೆ ಸಾಧ್ಯ?
* ಜನರು ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಹೋದಾಗ, ಹೊಸ ಮತದಾರರ ಚೀಟಿಗೆ ಅರ್ಜಿ ಸಲ್ಲಿಸುತ್ತಾರೆ. ಜೊತೆಗೆ ಹಳೆಯ ಚೀಟಿಯನ್ನೂ ಇಟ್ಟುಕೊಳ್ಳುತ್ತಾರೆ. ಇದರಿಂದಾಗಿ ಒಂದೇ ವಿಳಾಸದಲ್ಲಿ ಹಲವರು ಮತದಾರರ ಚೀಟಿ ಹೊಂದುವಂತಾಗುತ್ತದೆ
* ಗುರುತಿನ ಚೀಟಿಯಲ್ಲಿರುವ ಹೆಸರಿನಲ್ಲಿ ಅಕ್ಷರ ದೋಷಗಳಿದ್ದರೆ, ಜನರು ಅದನ್ನು ತಿದ್ದುಪಡಿ ಮಾಡುವ ಬದಲು ಹೊಸ ಚೀಟಿಗಾಗಿ ಅರ್ಜಿ ಸಲ್ಲಿಸುತ್ತಾರೆ
* ಒಬ್ಬ ವ್ಯಕ್ತಿ ಹಲವು ಅರ್ಜಿಗಳನ್ನು ಸಲ್ಲಿಸಿದ ಸಂದರ್ಭದಲ್ಲೂ ಒಂದೇ ವಿಳಾಸದಲ್ಲಿ ಹಲವು ಹೆಸರುಗಳ ನೋಂದಣಿಗೆ ದಾರಿ ಮಾಡುತ್ತದೆ
* ನೋಂದಣಿಯ ನಂತರ ಬಿಎಲ್‌ಒಗಳು ಸಮರ್ಪಕವಾಗಿ ಪರಿಶೀಲನೆ ನಡೆಸದೇ ಇರುವುದು ಕೂಡ ಒಂದು ಕಾರಣ
* ಪಟ್ಟಭದ್ರ ಹಿತಾಸಕ್ತಿಗಳು ಉದ್ದೇಶಪೂರ್ವಕವಾಗಿಯೂ ಒಂದು ವಿಳಾಸದಲ್ಲಿ ಹಲವು ಹೆಸರುಗಳು ನೋಂದಣಿಯಾಗುವಂತೆ ಮಾಡುತ್ತವೆ.


