ಹನೂರು ಕಿರುಬನಕಲ್ಲು ಗುಡ್ಡದಲ್ಲಿ ಎರಡು ಹುಲಿಮರಿಗಳ ಕಳೇಬರ ಪತ್ತೆ:ತಾಯಿಯಿಂದ ಬೇರ್ಪಟ್ಟು ಹಸಿವಿನಿಂದ ಸಾವು

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಧಾಮದ ಮುರದಟ್ಟಿಯ ಕಿರುಬನಕಲ್ಲು ಗುಡ್ಡದಲ್ಲಿ ಎರಡು ಹುಲಿ ಮರಿಗಳು ಹಸಿವಿನಿಂದ ಮೃತಪಟ್ಟಿವೆ.
    ಅರಣ್ಯ ಸಿಬ್ಬಂದಿ ಸೋಮವಾರ ಈ ಪ್ರದೇಶದಲ್ಲಿ ಗಸ್ತು‌ ತಿರುಗುತ್ತಿದ್ದಾಗ ಗಂಡು ಹುಲಿ ಮರಿಯ ಕಳೇಬರ ಪತ್ತೆಯಾಗಿದೆ.ಮಂಗಳವಾರ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸಿದಾಗ ಆ ಪ್ರದೇಶದ ಸಮೀಪದ ಗುಹೆಯೊಂದರ ಬಳಿ ಮತ್ತೊಂದು ಹೆಣ್ಣು ಹುಲಿ ಮರಿಯ ಕಳೇಬರ ಪತ್ತೆಯಾಗಿದೆ.
     ಈ ಎರಡು ಮರಿಗಳು ತಾಯಿಯಿಂದ ಬೇರ್ಪಟ್ಟು ಹಸಿವಿನಿಂದ ಸತ್ತಿವೆ ಎಂದು ಮರಣೋತ್ತರ ಪರೀಕ್ಷೆಯಿಂದ ಧೃಡಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ಮರಿಗಳು ಜನಿಸಿ ಕೇವಲ ಹದಿನೈದು ದಿನಗಳಾಗಿವೆ.
     ಈ ಹಿಂದೆ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದ ಮೀಣ್ಯಂ ಬಳಿ ವಿಷಪ್ರಾಷನದಿಂದ ಐದು ಹುಲಿಗಳು ಮೃತಪಟ್ಟು,ಐವರು ಅರಣ್ಯಾಧಿಕಾರಿಗಳು ಸೇವೆಯಿಂದ ಅಮಾನತ್ತಾಗಿರುವುದನ್ನು ಇಲ್ಲಿ ಸ್ಮರಿಸಬಹುದು.