ಬೆಂಗಳೂರು ಮೆಟ್ರೋ ಹಳದಿ ಮಾರ್ಗ-ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ:ಮೂರನೆ ಹಂತಕ್ಕೆ ಶಂಕುಸ್ಥಾಪನೆ
ಬೆಂಗಳೂರಿನ ನಮ್ಮ ಮೆಟ್ರೋ ಹಳದಿ ಮಾರ್ಗ,ಬೆಳಗಾವಿ-ಬೆಂಗಳೂರು ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಭಾನುವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದರು.
ಇದೇ ಸಂಧರ್ಭ ಅವರು ಮೆಟ್ರೋ ಮೂರನೆ ಹಂತ ಕಿತ್ತಳೆ ಮಾರ್ಗದ ಅಂದಾಜು ರೂ.15,650 ಕೋಟಿ ವೆಚ್ಚದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು.ಅಲ್ಲದೆ ಅಮೃತಸರದಿಂದ ಜಮ್ಮು ಕಾಶ್ಮೀರದ ಕಟ್ರಾ ಹಾಗೂ ಪುಣೆಯಿಂದ ಅಜ್ನಿ-ನಾಗಪುರ ವಂದೇ ಭಾರತ್ ರೈಲಿಗೆ ವರ್ಚುವಲ್ ಚಾಲನೆ ನೀಡಿದರು.
ಮೆಟ್ರೋ ರೈಲು ಯೋಜನೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ ನಡೆಯಲಿದ್ದು,ಕೇಂದ್ರವು ರಾಜ್ಯ ಸರಕಾರಕ್ಕೆ ಸಾಲದ ರೂಪದಲ್ಲಿ ನೆರವು ನೀಡಿದೆ.
ಪ್ರಧಾನಿ ಮೆಟ್ರೋ ಹಳದಿ ಮಾರ್ಗಕ್ಕೆ ರಾಗಿಗುಡ್ಡ ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿ ಎಲೆಕ್ಟ್ರಾನಿಕ್ ಸಿಟಿವರೆಗೆ ಅದರಲ್ಲಿ ನಿಂತೇ ಪ್ರಯಾಣಿಸಿದರು.ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಕುಳಿತು ಪ್ರಯಾಣಿಸಿದರು.ಈ ಸಂಧರ್ಭ ಮೂರನೆ ಹಂತದ ಕುರಿತು ಚರ್ಚೆ ನಡೆಸಿದರು.
ಹಳದಿ ಮಾರ್ಗವು19.15 ಕಿ.ಮೀ.ಉದ್ದವಿದ್ದು,16 ನಿಲ್ದಾಣಗಳನ್ನು ಹೊಂದಿದೆ. ಬೊಮ್ಮಸಂದ್ರದಿಂದ ಆರ್ ವಿ ರಸ್ತೆವರೆಗೆ ಸಂಪರ್ಕ ಕಲ್ಪಿಸುತ್ತದೆ. ಈ ಮಾರ್ಗದಲ್ಲಿ ನಿತ್ಯ ಮೂರು ರೈಲು ಸಂಚರಿಸಲಿದೆ.ಇದರೊಂದಿಗೆ ನಮ್ಮ ಮೆಟ್ರೋ 96 ಕಿ.ಮೀ ವರೆಗೆ ವಿಸ್ತರಣೆಯಾಗಿದೆ. ಈವರೆಗೆ 76.95 ಉದ್ದವಿತ್ತು.
ಉದ್ಘಾಟನೆ ನಂತರ ಪ್ರಧಾನಿ ಮೋದಿ ಮಾತನಾಡಿ ದೇಶದ ಮಾಹಿತಿ ತಂತ್ರಜ್ಞಾನ-ರಕ್ಷಣಾ ಕ್ಷೇತ್ರದ ಪ್ರಗತಿಗೆ ಬೆಂಗಳೂರಿನ ಕೊಡುಗೆ ಅಪಾರವಾದದ್ದು, ವಿಶ್ವದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ವಿಶಿಷ್ಟ ಸ್ಥಾನ ಪಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರು ಅತಿ ಉದ್ದದ ಮೆಟ್ರೋ ಜಾಲ ಹೊಂದಿರುವ ದೇಶದ ಎರಡನೇ ನಗರವಾಗಿದೆ.2014 ರಲ್ಲಿ ಐದು ನಗರದಲ್ಲಿ ಮಾತ್ರವಿದ್ದ ಮೆಟ್ರೋ ಈಗ 20 ನಗರಗಳಿಗೆ ವಿಸ್ತರಿಸಿದೆ.ದೇಶದಲ್ಲಿ ಒಟ್ಟು ಒಂದು ಸಾವಿರ ಕಿ.ಮೀ.ಮೆಟ್ರೋ ಜಾಲವಿದ್ದು,951 ಕಿ.ಮೀ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿ ನಮ್ಮ ಮೆಟ್ರೋ ಕಾಮಗಾರಿಗೆ ರಾಜ್ಯದ್ದೇ ಸಿಂಹಪಾಲು.ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಶಂಕುಸ್ಥಾಪನೆ ಮಾಡಿದ್ದ ಈ ಯೋಜನೆಗೆ ರಾಜ್ಯ ಸರ್ಕಾರ ಈವರೆಗೆ 25,379 ಕೋಟಿ ವೆಚ್ಚ ಮಾಡಿದೆ ಎಂದರು.ಕೇಂದ್ರದ ಪಾಲು7,468 ಕೋಟಿ ಸಾಲದಲ್ಲಿ ಈಗಾಗಲೇ 3,987 ಕೋಟಿ ತೀರಿಸಲಾಗಿದೆ.ಮೂರನೇ ಹಂತದ ಕಿತ್ತಳೆ ಮಾರ್ಗಕ್ಕೆ ಡಿಪಿಆರ್ ಸಿದ್ಧವಾಗಿದ್ದು,ಅಂದಾಜು ವೆಚ್ಚ 15,650 ಕೋಟಿ ಆಗಿದೆ.ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಮಾರಂಭದಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್,ರಾಜ್ಯ ಸಚಿವ ವಿ.ಸೋಮಣ್ಣ,ಭಾರಿ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಪಾಲ ಥ್ಯಾವರ್ ಚಂದ್ ಗೆಹಲೋಟ್,ರಾಜ್ಯ ಸರಕಾರದ ಸಚಿವರು ಉಪಸ್ಥಿತರಿದ್ದರು.


