ಕೊಡಗಿನಲ್ಲಿ ಅವಧಿಗೂ ಮೊದಲೇ ಈ ಬಾರಿಯ ಮಳೆ ಜನ ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಜುಲೈ 20ರಿಂದ ಚುರುಕುಗೊಂಡ ಮಳೆ ಹಾಗೂ ಬಿರುಗಾಳಿಯಿಂದಾಗಿ ಕೊಡಗು ಜಿಲ್ಲೆ ಅಕ್ಷರಶಃ ನಲುಗಿದೆ. ನೂರಾರು ಮರಗಳು ಧರೆಗುರುಳಿದೆ, ಅಲ್ಲಲ್ಲಿ ಗುಡ್ಡ ಕುಸಿತ ಸಂಭವಿಸಿದೆ, ಕೊಡಗಿನ ಹಲವು ಗ್ರಾಮಗಳು ವಿದ್ಯುತ್ ಸಂಪರ್ಕ ಕಡಿತದಿಂದ ಕತ್ತಲ ಕೂಪಕ್ಕೆ ದೂಡಲ್ಪಟ್ಟಿದೆ. ಕೊಡಗಿನಾದ್ಯಂತ ನದಿ, ಹೊಳೆಗಳು ಉಕ್ಕಿ ಹರಿಯುತ್ತಿದ್ದು. ದಡದ ನಿವಾಸಿಗಳು ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಕೊಡಗಿನಾದ್ಯಂತ ಎನ್‌ಡಿಆರ್‌ಎಫ್ ಸಿಬ್ಬಂದಿಗಳು, ರಕ್ಷಣಾ ಪಡೆಗಳು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಅಪಾಯಕಾರಿ ಸ್ಥಳಗಳಿಂದ ಜನರನ್ನು ಸ್ಥಳಾಂತರಿಸುವ ಕೆಲಸವನ್ನು ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಮಾಡುತ್ತಿದೆ. ಕಳೆದ ವರ್ಷ (ಜನವರಿಯಿಂದ ಜುಲೈ 27ರ ವರೆಗೆ) 1947.47 ಮಿ.ಮೀ ಮಳೆಯಾಗಿತ್ತು. ಈ ವರ್ಷ 2089.90 ಮಿ.ಮೀ ನಷ್ಟು ಮಳೆ ಯಾಗಿದ್ದು, ಕಳೆದ ವರ್ಷಕ್ಕಿಂತಲೂ ಅಧಿಕ ಮಳೆ ಈ ವರ್ಷ ದಾಖಲಾಗಿದೆ. ಈಗಾಗಲೇ ಹಲವು ಮನೆಗಳಿಗೆ ಹಾನಿಯಾಗಿದೆ, ಸೋಮವಾರಪೇಟೆ ತಾಲೂಕಿನಲ್ಲಿ ಮಹಿಳೆಯೊಬ್ಬರು ಮನೆಯ ಗೋಡೆ ಕುಸಿದು ಮೃತಪಟ್ಟಿರುತ್ತಾರೆ.
ಬಿರುಗಾಳಿ ಸಹಿತ ಭಾರಿಮಳೆಗೆ ಕೊಡಗಿನಾದ್ಯಂತ ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳು ಹಾಗೂ ನೂರಾರು ಟ್ರಾನ್ಸ್ ಫಾರಂಗಳು ಹಾನಿಗೊಳಗಾಗಿದ್ದು ವಿದ್ಯುತ್ ಮರು ಪೂರೈಕೆಗೆ ಚೆಸ್ಕಾಂ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.
ಆಗಸ್ಟ್ ತಿಂಗಳ ಮಳೆಗಾಲ 2017ರಿಂದ ಈಚೇಗೆ ಕೊಡಗಿನಾದ್ಯಂತ ಜನರ ನಿದ್ದೆ ಗೆಡಿಸುತ್ತಿದೆ. 2018 ರಲ್ಲಿ ಮಡಿಕೇರಿ ಸುತ್ತ ಮುತ್ತ ಮುಕ್ಕೊಡ್ಲು, ಹಮ್ಮಿಯಾಲ, ಮಕ್ಕಂದೂರು, ಮದೆನಾಡು, ಸೂರ್ಲಬಿ, ಕಾಲೂರು ಮುಂತಾದ ಭಾಗಗಳಲ್ಲಿ ಹಿಂದೆಂದೂ ಕಂಡೂ ಕೇಳರಿಯದ ಗುಡ್ಡ ಕುಸಿತ ಸಂಭವಿಸಿ, ಅಪಾರ ಪ್ರಮಾಣದ ನಷ್ಟ ಹಾಗೂ ಹಲವು ಜೀವ ಹಾನಿಯಾಗಿತ್ತು.
2019 ಆಗಸ್ಟ್ ಒಂಭತ್ತರ ನಡುರಾತ್ರಿ ವಿರಾಜಪೇಟೆಯ ತೋರ ಗ್ರಾಮದಲ್ಲಿ ಭೀಕರ ಗುಡ್ಡ ಕುಸಿತಕ್ಕೆ ಹತ್ತು ಜನರು ಸಾವನ್ನಪ್ಪಿದರೆ 2020 ರ ಆಗಸ್ಟ್ ನಲ್ಲಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದು ಪ್ರದಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಅವರ ಕುಟುಂಬದ ಸದಸ್ಯರು ಮೃತರಾಗಿದ್ದರು ಹಾಗೂ 20 ಕ್ಕೂ ಹೆಚ್ಚಿನ ಜಾನುವಾರುಗಳು, ಎರಡು ಕಾರು ಮಣ್ಣು ಪಾಲಾಗಿತ್ತು. ಸುಮಾರು 16ದಿನಗಳ ಕಾಲ ನಾಪತ್ತೆಯಾದವರ ಶೋದಕಾರ್ಯಚರಣೆ ನಡೆಸಲಾಗಿತ್ತು. ಕೊಳೆತ ಸ್ಥಿತಿಯಲ್ಲಿ ಸಿಕ್ಕ ಕೆಲವು ಮೃತದೇಹಗಳನ್ನು ಗುರುತಿಸಲೂ ಕಷ್ಟವಾಗಿದ್ದವು.
ಪ್ರತೀ ಆಗಸ್ಟ್ ತಿಂಗಳ ಮಳೆ ನಾಪೋಕ್ಲು, ಸಿದ್ದಾಪುರ ಭಾಗದಲ್ಲಿ ಪ್ರವಾಹ ಸೃಷ್ಟಿಸಿ, ಅಲ್ಲಿನ ನಿವಾಸಿಗಳನ್ನು ಅತಂತ್ರ ಮಾಡುತ್ತಿದೆ. ವಿರಾಜಪೇಟೆಯ ಮಲೆ ತಿರುಕ ಬೆಟ್ಟ ಕುಸಿಯುವ ಭೀತಿಯಿಂದಾಗಿ ಬೆಟ್ಟದ ಸನಿಹದ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತದೆ.
ಸಿದ್ದಾಪುರ ಕರಡಿಗೋಡಿನಲ್ಲಿ ಹಲವುಮನೆಗಳು ನೆರೆಗೆ ಮುಳುಗಡೆಗೊಳ್ಳುತ್ತದೆ. ಇದೀಗ ಕೊಡಗು ಈಗಾಗಲೇ ಜುಲೈ ಅಂತ್ಯದ ಮಳೆಗೆ ತತ್ತರಿಸಿ ಹೋಗಿದ್ದು. ಆಗಸ್ಟ್ ತಿಂಗಳ ಮಳೆಯ ಆತಂಕದಲ್ಲಿ ದಿನದೂಡುವಂತಾಗಿದೆ.
ರಂಜಿತ್ ಕವಲಪಾರ