ಹೂವಯ್ಯ ಮತ್ತು ಬುದ್ಧ

ಹೂವಯ್ಯ ಮತ್ತು ಬುದ್ಧ

ಹೂವಯ್ಯ ಮತ್ತು ಬುದ್ಧ

ಕುವೆಂಪು ಗುರುಗಳಾದ ಟಿ.ಎಸ್. ವೆಂಕಣ್ಣಯ್ಯನವರು 'ಪ್ರಾಚೀನ ಕರ್ನಾಟಕದಲ್ಲಿ ಬೌದ್ಧಸಮಾಜವಿತ್ತೆಂದೂ; ಅದು ತನ್ನ ಧಾರ್ಮಿಕ ಹಿನ್ನೆಲೆಯಿಂದ ಸಾಹಿತ್ಯ ರಚಿಸಿತ್ತೆಂದೂ' ಒಂದು ಊಹಾವಾದ ಮಂಡಿಸಿದರು. ಈ ವಾದವನ್ನು ಚರಿತ್ರೆಯನ್ನಾಗಿಸಲು ತಕ್ಕ ಆಧಾರಗಳು ಸಿಗಲಿಲ್ಲ. ಆದರೆ ಈ ವಾದಕ್ಕೆ ೨೦ನೇ ಶತಮಾನವು ಬೇರೊಂದು ಪರಿಯಲ್ಲಿ ಉತ್ತರಿಸಿತು. ವೈಯಕ್ತಿಕವಾಗಿ ಬೌದ್ಧರಾಗಿರದ ಲೇಖಕರು ಬುದ್ಧನ ಜೀವನ ಮತ್ತು ದರ್ಶನಕ್ಕೆ ಸಂಬಂಧಿಸಿ ಸಾಹಿತ್ಯವನ್ನು ರಚಿಸಿದರು. ಧಮ್ಮವನ್ನು ತಮ್ಮದೇ ದೃಷ್ಟಿಕೋನದಲ್ಲಿ ಮರುವ್ಯಾಖ್ಯಾನಿಸಿದರು. ಇವರ ಸಾಹಿತ್ಯವು ಧಮ್ಮಪ್ರಸಾರದ ಭಾಗವಾಗಿಲ್ಲ. ಬದಲಿಗೆ ಬುದ್ಧನ ಬದುಕಿನೊಳಗಿದ್ದ ಮಾನವೀಯ ಆಯಾಮಗಳನ್ನು ಶೋಧಿಸುವ ನೆಲೆಯಲ್ಲಿದೆ. ಇವರು ಬೌದ್ಧ ದರ್ಶನಕ್ಕಿಂತ ಹೆಚ್ಚಾಗಿ ಬುದ್ಧ, ಆನಂದ, ಯಶೋಧರೆ ಅಂಗುಲಿಮಾಲಾ, ಕಿಸಾಗೋತಮಿ, ಅಶೋಕ ಮುಂತಾದವರ ಚರಿತ್ರೆಯನ್ನು ಅನುಸಂಧಾನಿಸಿದರು. ಕನ್ನಡದ ಈ ಆಧುನಿಕ ಧಮ್ಮ ಸಾಹಿತ್ಯವು ಕಲೆಯಾಗಿ ದರ್ಶನವಾಗಿ ಬಹುರೂಪೀ ನೆಲೆಗಳನ್ನು ಹೊಂದಿದೆ. ಇದರಲ್ಲಿ ಬೇಂದ್ರೆ, ಗೋವಿಂದಪೈ, ಮಾಸ್ತಿ, ಕುವೆಂಪು, ರಾಜರತ್ನಂ, ಕಾರಂತ, ಲಂಕೇಶ್ ಮೊದಲಾಗಿ ಅನೇಕರು ಬರುವರು.

ದಾರ್ಶನಿಕವಾಗಿ ಕುವೆಂಪು ಅವರನ್ನು ಪ್ರಧಾನವಾಗಿ ಪ್ರಭಾವಿಸಿದ್ದು ಅದ್ವೈತ ದರ್ಶನ. ಅವರೊಬ್ಬ ಆತ್ಮವಾದಿ ಮತ್ತು  ಭಾವನಾವಾದಿ. ಬುದ್ಧನದು ಅನಾತ್ಮವಾದ ಮತ್ತು ಭೌತವಾದ. ಆದರೆ ಬುದ್ಧನಂತೆ ಕುವೆಂಪು ಅವರಿಗೂ ವರ್ಣಧರ್ಮದ ಮೇಲೆ ತಿರಸ್ಕಾರವಿತ್ತು. ಸಾಂಪ್ರದಾಯಿಕ ಅಂಕುಶಗಳಿರುವ ಸಮಾಜದಲ್ಲಿ  ವ್ಯಕ್ತಿ ನಿರಂಕುಶ ಮತಿತ್ವವನ್ನು ಪಡೆದುಕೊಳ್ಳುವ ಬಗೆಗಿನ ಅವರ ಆಶಯವು, ಬುದ್ಧನ ಪ್ರಜ್ಞೆಯ ಪರಿಕಲ್ಪನೆಗೂ;  ಅವರ ಆಧ್ಯಾತ್ಮಿಕತೆ ಮತ್ತು ವಿಶ್ವಮಾನವತೆಯ ಕಾಳಜಿಗಳು ಬುದ್ಧನ ಮೈತ್ರಿ ಕರುಣೆಗಳಿಗೂ  ಹತ್ತಿರವಾಗಿದ್ದವು. ಕುವೆಂಪು ಅವರನ್ನು ಪ್ರಭಾವಿಸಿದ ಅದ್ವೈತಿ  ವಿವೇಕಾನಂದರು ಸ್ವತಃ ಬುದ್ಧನಿಂದ ಸ್ಫೂರ್ತಗೊಂಡಿದ್ದರು. ವಿವೇಕಾನಂದರು `ತಮ್ಮನ್ನು ನಾನು ಬುದ್ಧನ ನಾಡಿನಿಂದ ಬಂದಿರುವೆ, ಬುದ್ಧ ನನ್ನ ಗುರು’ ಎಂದು ಹೇಳುತ್ತಿದ್ದರು. ಭಾರತದಲ್ಲಿ ಪರಸ್ಪರ ವಿರುದ್ಧ  ದರ್ಶನಗಳು ಕೂಡ ಸಂಕರಗೊಂಡು ಮತ್ತೊಂದನ್ನೇನೂ ರೂಪಿಸುತ್ತವೆ. 

ಕುವೆಂಪು ಸಾಹಿತ್ಯದಲ್ಲಿ ಮೊದಲ ಸಲ ಬುದ್ಧನ ಪ್ರಸ್ತಾಪ ಬರುವುದು ನಾಡಗೀತೆಯಲ್ಲಿ. ನಾಡಗೀತೆಯು ಭಾರತದ ದಾರ್ಶನಿಕ ಭವ್ಯತೆಯನ್ನು ನಿರೂಪಿಸುತ್ತ ಗೌತಮನನ್ನು ಸ್ಮರಿಸುತ್ತದೆ. ಅದರ ಕರಡುಪ್ರತಿಯಲ್ಲಿ `ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಬೌದ್ಧರುದ್ಯಾನ’ ಎಂಬ (೧೯೨೪) ಸಾಲಿತ್ತು. ೧೯೨೮ರಲ್ಲಿ ಅದನ್ನು ಪರಿಷ್ಕರಿಸುವಾಗ, `ಬೌದ್ಧರುದ್ಯಾನ’ ಹೋಗಿ `ಜೈನರುದ್ಯಾನ’ವಾಯಿತು. ಯಾಕೀ ಪಲ್ಲಟ? ನಾಡಗೀತೆಯಲ್ಲಿ ಭಾರತದ ದಾರ್ಶನಿಕರ ಜತೆ `ಗೌತಮ’ನನ್ನು ಸ್ಮರಿಸುತ್ತಿರುವುದರಿಂದ ಇಲ್ಲಿ ಪ್ರತ್ಯೇಕ ಬೌದ್ಧ ಬೇಡವೆನಿಸಿತೇ? ಕುವೆಂಪು ಕಾಲದಲ್ಲಿ ಕರ್ನಾಟಕದಲ್ಲಿ ಬೌದ್ಧರು ಒಂದು ಸಮಾಜವಾಗಿ ಇರದಿದ್ದುದು ಕಾರಣವೇ? ವೇದೋಪನಿಷತ್ತುಗಳನ್ನು ಪ್ರಮಾಣ ಗ್ರಂಥಗಳಾಗಿ ಪರಿಭಾವಿಸಿ, ಅವುಗಳಲ್ಲಿ ಜೀವನ ಮೌಲ್ಯಗಳ ಮೂಲಕ ಭಾರತದ ಸಾಂಸ್ಕೃತಿಕ ಉತ್ಥಾನ ಸಾಧ್ಯವೆಂದು ನಂಬಿದ್ದ ಕವಿಗೆ ('ಕಾನೂರು ಹೆಗ್ಗಡಿತಿ'ಯ ಹೂವಯ್ಯನು ಈ ನಂಬಿಕೆಯನ್ನು ಅನೇಕ ಸಲ ಉಗ್ಗಡಿಸುತ್ತಾನೆ), ಬುದ್ಧನ ವೇದವಿರೋಧಿ ಎಂಬ ಆಗ್ರಹವಿತ್ತೇ? 

 ಈ ಚರ್ಚೆಯನ್ನು ಬಹಳ ಎಳೆಯಲು ಆಗುವುದಿಲ್ಲ. ಕಾರಣ, ಕುವೆಂಪು ನಾಡಗೀತೆ ಕರಡು ರಚಿಸುವಾಗ ಹತ್ತೊಂಬತ್ತರ ತರುಣ;  ಪರಿಷ್ಕರಿಸುವಾಗ ಇಪ್ಪತ್ಮೂರರ ಯುವಕ. ಆದರೆ ಈಗ ಚಿತ್ರ ಬದಲಾಗಿದೆ. ಕರ್ನಾಟಕದಲ್ಲಿ ಲಕ್ಷಾಂತರ ಬೌದ್ಧರಿದ್ದಾರೆ. ಹತ್ತಾರು ವಿಹಾರಗಳಿವೆ. ನೂರಾರು ಭಂತೆಯರಿದ್ದಾರೆ. ಬುದ್ಧನನ್ನು ಧಮ್ಮವನ್ನು ಕುರಿತು ಸಾವಿರಾರು ಕೃತಿಗಳು ಪ್ರಕಟವಾಗಿವೆ. ಕರ್ನಾಟಕದ ಧರ್ಮಗಳ ಚರಿತ್ರೆ ಬರೆಯುವರು ಬೌದ್ಧವನ್ನು ಬಿಟ್ಟು ಬರೆಯುವಂತಿಲ್ಲ. 

ನಾಡಗೀತೆಯಲ್ಲಿ ಬೌದ್ಧರನ್ನು ಕೈಬಿಟ್ಟರೂ ಧಮ್ಮದ ಧ್ಯಾನವು ಕುವೆಂಪು ಅವರನ್ನು ಕಾಡುತ್ತಲೇ ಇತ್ತು. ನಾಡಗೀತೆ ಪರಿಷ್ಕರಿಸಿದ ಎಂಟು ವರ್ಷಗಳ ಬಳಿಕ `ಕಾನೂರು ಹೆಗ್ಗಡಿತಿ’ಯ (೧೯೩೬) ನಾಯಕ ಹೂವಯ್ಯನನ್ನು ಬುದ್ಧನೊಂದಿಗೆ ಸಮೀಕರಿಸಲು ಯತ್ನಿಸಿದರು. ನಗರದಲ್ಲಿ ವಿದ್ಯಾಭ್ಯಾಸ ಮುಗಿಸಿ ಹುಟ್ಟಿದ ಹಳ್ಳಿಗೆ ಮರಳಿದ ಹೂವಯ್ಯ, ಮಲೆನಾಡಿನ ಬದುಕನ್ನು ಸುಧಾರಣೆಗೆಂದು ಬದುಕನ್ನು ಮೀಸಲಿಟ್ಟವನು. ಪ್ರೀತಿಸಿದ ಹೆಣ್ಣನ್ನು ಮದುವೆಯಾಗಲಾರದೆ, ಮಲೆನಾಡಿನ ಅನೇಕ ದುರಂತಗಳಿಗೆ ಸಾಕ್ಷಿಯಾಗಿ, ಹತಾಶೆಯಿಂದ ಸನ್ಯಾಸಿಯ ಬದುಕನ್ನು ಆರಿಸಿಕೊಂಡವನು. ಅವನಿಗೆ ತನ್ನ ಬಾಳಿನ ಬಿಕ್ಕಟ್ಟಿನ ಗಳಿಗೆಯಲ್ಲಿ ಬುದ್ಧನ ಧ್ಯಾನ ಸಮಾಧಾನ ಕೊಡುತ್ತದೆ. ಕಾದಂಬರಿಯಲ್ಲಿ `ಬುದ್ಧದೇವನ ಕೃಪಾಮಹಿಮೆ’ ಎಂಬ ಅಧ್ಯಾಯವಿದೆ. ಇಲ್ಲಿ ಬುದ್ಧನು `ದೇವ’ನಾಗಿದ್ದರೂ ಕಾದಂಬರಿ ಅವನನ್ನು `ಗುರು’ವೆಂದು ಕರೆಯುತ್ತದೆ. `ಗುರುದೇವ’ ಪರಿಕಲ್ಪನೆ ಕುವೆಂಪು ಸಾಹಿತ್ಯದಲ್ಲಿ ಮತ್ತೆಮತ್ತೆ ಬರುತ್ತದೆ. ಸದರಿ ಅಧ್ಯಾಯ ಶುರುವಾಗುವುದು ಸಂಜೆಯ ವರ್ಣನೆಯೊಂದಿಗೆ. ಮುಗಿಯುವುದು ಬೆಳಕು ಹರಿಯುವಾಗ ಬುದ್ಧನಿಗೆ ಸಲ್ಲಿಸುವ ಪ್ರಾರ್ಥನೆಯೊಂದಿಗೆ. 

ಈ ಪ್ರಾರ್ಥನೆಯ ಪೂರ್ವದಲ್ಲಿ ಕಾದಂಬರಿ ಒಂದು ಬೇಟೆಯ ಪ್ರಸಂಗವನ್ನು ತರುತ್ತದೆ. ಅದು, ಹೂವಯ್ಯನ ಸಮಾಜ ಸುಧಾರಣೆಯ ಪ್ರಹಾರದಿಂದ ತಪ್ಪಿಸಿಕೊಂಡು ಬೇಟೆ ಹೆಂಡ ದೈವಾರಾಧನೆಗಳಲ್ಲಿ ತನ್ಮಯವಾಗಿ ಬದುಕುತ್ತಿರುವ ಪುಟ್ಟಣ್ಣಯ್ಯನು, ಓಬಯ್ಯ-ಬಾಡುಗಳ್ಳ ಸೋಮರ ಜತೆ ನಡೆಸುವ ಮಾತುಕತೆ. ಸೋಮನ ಹೆಗಲ ಮೇಲೆ ಬೇಟೆಯಾಡಿದ ಬರ್ಕವಿದೆ. ಅವನು ದಣಿವಾರಿಸಿಕೊಳ್ಳಲು ಆ ಪ್ರಾಣಿಯನ್ನು ಹೆಗಲಿನಿಂದ ಕೆಳಗಿಡುವುದೇ ತಡ, ಬೇಟೆನಾಯಿಗಳು ಅದಕ್ಕೆ ಗಬಕ್ಕನೆ ಎರಗುತ್ತವೆ. ಜಿಂಕೆಜಾತಿಗೆ ಸೇರಿದ ಬರ್ಕವು ಬುದ್ಧನ ಕರುಣೆಯನ್ನು ಸೂಚಿಸುವ ಸಂಕೇತ. ಅದಿಲ್ಲಿ ಬೇಟೆಯಾಡಲ್ಪಟ್ಟಿದೆ. ಹೂವಯ್ಯನ ಹಾದಿಯಲ್ಲಿ ಹೋಗದ ಮಲೆನಾಡಿನ ಸಮಾನ್ಯ ಮಾನವರ ಬದುಕಿನ ಭಾಗವಾಗಿದೆ. ಇದಾದ ಬಳಿಕ ಹೂವಯ್ಯನು ಬುದ್ಧನಂತೆ ಸಂಜೆಯ ನಿರ್ಜನವಾದ ಪ್ರದೇಶದಲ್ಲಿ ಧ್ಯಾನಕ್ಕೆ ಕೂತಿರುವ ಚಿತ್ರವನ್ನು ಕಾದಂಬರಿ ತರುತ್ತದೆ. ಅವನ ಧ್ಯಾನಸ್ಥ ಭಂಗಿಯ ವರ್ಣನೆಯಿದು:

``ಮಷೀಪೂರ್ಣವಾದ ರೇಖಾಚಿತ್ರದಂತೆ ಕಾಣಿಸುತ್ತಿದ್ದ ಚಿತ್ರ ವ್ಯಕ್ತಿ ಬಂಡೆಯ ನೆತ್ತಿಯಲ್ಲಿ ಧೀರವಾಗಿ ನೇರವಾಗಿ ನಿಂತು ಸಂಧ್ಯಾಕಾಶವನ್ನು ನೋಡತೊಡಗಿತು. ತಲೆಯುಡೆಯಿಲ್ಲದೆ ಕೂದಲಿಲ್ಲದ ಶಿರಸ್ಸಿನ ಹೊರಗೆರೆಯ, ಎರಡು ಕಿವಿಗಳ ರೇಖಾಕೃತಿಯ, ಹಾಕಿಕೊಂಡಿದ್ದ ಷರ್ಟು ಮತ್ತು ಉಟ್ಟುಕೊಂಡಿದ್ದ ಅಡ್ಡಪಂಚೆಯ ಆ ವ್ಯಕ್ತಿ ಬಂಡೆಯ ಮೇಲೆ ನೆಟ್ಟ ಶಿಲಾಮೂರ್ತಿಯಂತೆ ತುಸುಹೊತ್ತು ನಿಂತಿದ್ದು, ಮತ್ತೆ ಉತ್ತರಕ್ಕೆ ತಿರುಗಿ ನಿಂತಾಗ, ನೀಳವಾದ ಮೂಗೂ, ತುಟಿ ಬಾಯಿ ಗಲ್ಲಗಳ ಗೆರೆಯೂ ಕಡೆದಿಟ್ಟಂತೆ’’ 

ಇಲ್ಲಿ ಹೂವಯ್ಯನು ಬೌದ್ಧಭಿಕ್ಷುಗಳಂತೆ ಅಥವಾ ರಾಮಕೃಷ್ಣ ಮಠದ ಸನ್ಯಾಸಿಗಳಂತೆ  ಕೇಶಮುಂಡನ ಮಾಡಿಸಿದ್ದಾನೆ. ಆತ ತನ್ನ ಮಲಸೋದರನಾದ ರಾಮಯ್ಯನು ಸೀತೆಯನ್ನು ಮದುವೆಯಾದ ಬಳಿಕ ತಲುಪಿರುವ ದುರವಸ್ಥೆಯನ್ನು ತಿಳಿದು, ಅವನ ಸಂಕಟಕ್ಕೆ ತಾನೂ ಕಾರಣವೆಂದು ಹಲುಬುತ್ತಾನೆ. ಧ್ಯಾನಾನಂತರ "ಅತಿ ಎಂದು ಹೇಳಬಹುದಾದ ಕಠಿಣತೆಯಿಂದ ಆತ್ಮಪರೀಕ್ಷೆ ಮಾಡಿಕೊಳ್ಳುತ್ತಾ, ತನ್ನೆದುರು ಮೇಜಿನ ಮೇಲಿದ್ದ ಬುದ್ಧದೇವನ ಧ್ಯಾನಸ್ಥಿಮಿತ ಮೂರ್ತಿಯನ್ನು ಎವೆಕ್ಕಿದೆ ನೋಡುತ್ತ’’ ಧ್ಯಾನಿಸುತ್ತಾನೆ. ``''ಆ ಮಹಾಪುರುಷನ ಸ್ವಾರ್ಥತ್ಯಾಗ, ವೈರಾಗ್ಯ, ಔದಾರ್ಯ, ಕನಿಕರ, ಅಹಿಂಸೆ, ತೀಕ್ಷ್ಣಮತಿ, ಪರದುಃಖ ಕಾತರತೆ- ಇವುಗಳಲ್ಲಿ ಒಂದೊಂದೂ ಅವನ ಜೀವನ ಚರಿತ್ರೆಯ ಘಟನಾಚಿತ್ರಗಳೊಡನೆ ಮೂರ್ತೀಭವಿಸಿ, ಮನೋಭಿತ್ತಿಯಲ್ಲಿ ಚರಿಸಿದುವು. ಆ ಭವ್ಯಭೈರವ ವ್ಯಕ್ತಿತ್ವದ ಮುಂದೆ ತನ್ನ ಅಲ್ಪತೆ ಕನಿಕರಣೀಯವಾಗಿ, ನೀಚವಾಗಿ ತೋರಿ, ಹೂವಯ್ಯನ ಕಣ್ಣುಗಳಿಂದ ಹನಿಗಳು ಒಂದಾದ ಮೇಲೊಂದು ಉದುರಿದುವು’’ ಎಂದು ಕಾದಂಬರಿ ನಿರೂಪಿಸುತ್ತದೆ. ಹೂವಯ್ಯನು ಬುದ್ಧಮೂರ್ತಿಯ ಪಾದಪದ್ಮಗಳ ಮೇಲೆ ತನ್ನ ಹಣೆಯಿಟ್ಟು ``ಗುರುದೇವ, ನನ್ನನ್ನು ಕೈಹಿಡಿದೆತ್ತಿಕೊ. ಉದ್ಧಾರ ಮಾಡು. ನಿನ್ನ ಮಹಾಗುಣಗಳಲ್ಲಿ ಒಂದಿನಿತನ್ನಾದರೂ ದಯಪಾಲಿಸು. ನನ್ನ ಜೀವನವನ್ನು ಸಾರ್ಥಕ ಮಾಡು’’ ಎಂದು ಬೇಡುತ್ತಾನೆ. ತನ್ನನ್ನು ದ್ವೇಷಿಸುತ್ತಿರುವ ರಾಮಯ್ಯನನ್ನು  ಭೇಟಿ ಮಾಡುತ್ತಾನಾದರೂ, ಆದರೆ ಸಾಂತ್ವನ ನೀಡುವ ಪ್ರಯತ್ನದಲ್ಲಿ ಶೋಚನೀಯವಾಗಿ ಸೋಲುತ್ತಾನೆ.

 ದುಃಖಿತನಾದ ಹೂವಯ್ಯನಿಗೆ ಸಾಂತ್ವನ ನೀಡುವ ಶಕ್ತಿಯಾಗಿ ಬುದ್ಧನ ಬದುಕು ಮತ್ತು ಧಮ್ಮದ ಜೀವನ ಮೌಲ್ಯಗಳು ಒದಗುತ್ತವೆ. ಆದರೆ ಆತನಿಗೂ ನೆಮ್ಮದಿ ಸಿಗುವುದಿಲ್ಲ.  "``ಬರಬರುತ್ತ ಹೂವಯ್ಯನ ಮನಸ್ಸು ಬುದ್ಧದೇವನ ಕಡೆಗೆ ಹೆಚ್ಚು ಹೆಚ್ಚಾಗಿ ಒಲಿದಿತ್ತು. ಆತನ ತಪಸ್ಸೂ, ಕಷ್ಟಗಳ ಸಮ್ಮುಖದಲ್ಲಿ ಆತನಿಗಿದ್ದ ವಜ್ರಮನಸ್ಸೂ, ಲೋಕಕ್ಕಾಗಿ ತನ್ನನ್ನು ತಾನೇ ಇಲ್ಲಗೈದುಕೊಳ್ಳುವ ಗಗನೋಪಮ ಮಹೌದಾರ್ಯವೂ ಹೂವಯ್ಯನ ಪ್ರಕೃತಸ್ಥಿತಿಗೆ ತಾರಕಮಂತ್ರವಾಗಿದ್ದುದು. ಕೈಲಾದಮಟ್ಟಿಗೆ ಆ ಗುರುವನ್ನು ಆದರ್ಶವಾಗಿಟ್ಟುಕೊಂಡು, ಆತನನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದನು. ಆದರೆ ಎಷ್ಟೊ ಸಾರಿ ಹಳೆಯ ರಾಗದ್ವೇಷಗಳಿಂದ ಆ ಪ್ರಯತ್ನ ವಿಫಲವಾಗುತ್ತಿತ್ತು’’ ಎಂದು ಕಾದಂಬರಿ ಹೇಳುತ್ತದೆ. ಹೂವಯ್ಯ ಬುದ್ಧನಂತಾಗಲು ಮಾಡುವ ಹೋರಾಟದಲ್ಲಿ ಯಶಸ್ವಿಯಾಗುವುದಿಲ್ಲ. ರಾಮಕೃಷ್ಣ ಆಶ್ರಮದಲ್ಲಿದ್ದ ಕುವೆಂಪು, ತಮ್ಮ ವ್ಯಕ್ತಿತ್ವದ ಪ್ರತಿಬಿಂಬದಂತಿರುವ ಹೂವಯ್ಯನನ್ನು ವಿವೇಕಾನಂದರ ಜತೆ ಸಮೀಕರಿಸುತ್ತಿರುವಂತೆ ತೋರುತ್ತದೆ. ಜತೆಗೆ ಆತನನ್ನು ಬೌದ್ಧಧಮ್ಮದ ಹಾದಿಯಲ್ಲಿರುವ ಉಪಾಸಕನಂತೆಯೂ ಕಾಣಿಸುತ್ತದೆ. ಕಾದಂಬರಿಗೆ ಬುದ್ಧ ಮತ್ತು ವಿವೇಕಾನಂದರ ಪ್ರಭಾವಗಳನ್ನು ಒಂದೇ ವ್ಯಕ್ತಿತ್ವದಲ್ಲಿ ಕಾಣಿಸುವ ವಿಷಯದಲ್ಲಿ  ದಾರ್ಶನಿಕ ಗೊಂದಲವಿಲ್ಲ.  

ಕಾದಂಬರಿಯ ಕೊನೆಯಲ್ಲಿ ವೈಶಾಖ ಬುದ್ಧಪೂರ್ಣಿಮೆಯ ಉತ್ಸವ ಜರುಗುವ ಸನ್ನಿವೇಶವಿದೆ. ಉತ್ಸವಕ್ಕೆ ಹಲವು ತಲೆಮಾರಿಗೆ ಸೇರಿದ ಮಲೆನಾಡಿನ ವ್ಯಕ್ತಿಗಳು  ಜಮಾಯಿಸಿದ್ದಾರೆ. ಅವರಲ್ಲಿ ವಯಸ್ಸಾದ ಸಿಂಗಪ್ಪಗೌಡ, ವಿವಾಹ ಸನ್ನದ್ಧರಾಗಿರುವ  ವಾಸು ಮತ್ತು ಲಕ್ಷ್ಮಿ, ಎಳೆ ಮಕ್ಕಳ ತಂದೆತಾಯಿಗಳಾದ ಪುಟ್ಟಮ್ಮ-ಚಿನ್ನಯ್ಯ, ಮದುವೆಯಾಗಲಾಗದೆ ದೈವಿಕ ಪ್ರೇಮದಲ್ಲಿ ಉಳಿದ ಹೂವಯ್ಯ-ಸೀತೆಯಯರು ಹಾಗೂ ಎಳೆಗೂಸು ಮಾಧು ಇದ್ದಾರೆ. ಅಗ್ರಹಾರದ ಬ್ರಾಹ್ಮಣ ಮಕ್ಕಳೂ ಹಾಗೂ ಬಂಟ ಬೇಲ ಸಮುದಾಯಕ್ಕೆ ಸೇರಿದ ಆಳುಗಳು ಸೇರಿದ್ದಾರೆ. ಈ ಜಾತ್ಯತೀತ ವಯೋತೀತವಾದ ಗುಂಪು ಒಟ್ಟಾಗಿ ಹಾಡುತ್ತದೆ. ಈ ಹಾಡಿನಲ್ಲಿ ಕೇವಲ ಬುದ್ಧ ಮತ್ತು ವಿವೇಕಾನಂದರಿಲ್ಲ. ಕಾಳಿಯೂ ಇದ್ದಾಳೆ. 

ಉದಯಿಸುತಿಹನದೊ ಅಭಿನವ ದಿನಮಣಿ ಸಹ್ಯಾದ್ರಿಯ ಶೃಂಗಾಳಿಯ ಮೇಲೆ
ಹರಿದೋಡಿದೆ ನಿಶೆ, ನಗೆಬೀರಿದೆ ಉಷೆ, ತೀಡುತಲಿದೆ ತಂಗಾಳಿಯ ಲೀಲೆ
ಮಲೆನಾಡನು ಮನಮೋಹಿಸುತಿದೆ ಓ ದಿನಮುಖನ ದಿನ ಕಾಂಚನಕಾಂತಿ
ಏಳೇಳಿರಿ! ಕರೆಯುತ್ತಿದೆ ಕೇಳಿರಿ, ಓ ನವಜೀವನ ಸಂಕ್ರಾಂತಿ!
ಉದಯಿಸುತಿದೆ ನೂತನ ಯುಗದೇವತೆ ಮಿಥ್ಯೆಯ ಮೌಢ್ಯತೆಯನ್ನು ಸೀಳಿ;
ಜ್ಞಾನದ ವಿಜ್ಞಾನದ ಮತಿಖಡ್ಗದಿ ಮೈದೋರುವಳೈ ನವಕಾಳಿ!
ಕೆಚ್ಚಿನ ನೆಚ್ಚಿನ ತನುಮನ ಪಟುತೆಯ ಸಂಪಾದಿಸಿ ಓ ಮೇಲೇಳಿ:
ಕಣ್ದೆರೆಯಿರಿ ನವಕಾಂತಿಗೆ, ಶಾಂತಿಗೆ, ಓ ಕ್ರಾಂತಿಯ ಪುತ್ರರೆ, ಬಾಳಿ!

ಈ ಹಾಡಿನ ಪ್ರಕಾರ, ಹೊಸ ಸಮಾಜದ ಹುಟ್ಟಿಗೆ ಕ್ರಾಂತಿಗೆ ಜ್ಞಾನ ವಿಜ್ಞಾನ ಮತಿಗಳು ಬೇಕಾಗಿವೆ. ಕೆಚ್ಚಿನ ತನುಮನ ಪಟುತೆಯ ತರುಣರು ಬೇಕಾಗಿದ್ದಾರೆ. ಇದಕ್ಕಾಗಿ ಬುದ್ಧನ ಧ್ಯಾನದ ಜತೆ ಕಾಳಿಯ ಕ್ಷಾತ್ರವೂ ಸೇರಬೇಕಿದೆ. ಈ ಪ್ರಕರಣವು ಕನ್ನಡದ ದೊಡ್ಡಲೇಖಕರು ಬುದ್ಧ ಮತ್ತು ಧಮ್ಮವನ್ನು ತಮ್ಮ ಕಾಲದ ಒತ್ತಡಗಳಲ್ಲಿ ಪರಿಭಾವಿಸಿದ ಮತ್ತು ಮರುಹುಟ್ಟಿಸಿದ ವಿಶಿಷ್ಟ ಪರಿಗೆ ನಿದರ್ಶನವಾಗಿದೆ. ಇಲ್ಲಿ ಬೌದ್ಧಧರ್ಮವನ್ನು ದುರುಳೀಕರಿಸುವ ವಿನ್ಯಾಸದ ಕಾದಂಬರಿಗಳಿಗಿಂತಲೂ, ಬುದ್ಧ ಮತ್ತು ಧಮ್ಮಗಳನ್ನು ಆತ್ಯಂತಿಕ ಪರ್ಯಾಯವೆಂದು ಕಾಣಿಸುವ ಧಮ್ಮ ಪ್ರಸರಣ ಸಾಹಿತ್ಯಕ್ಕಿಂತಲೂ ವಿಭಿನ್ನವಾದ ನಿಲುವಿದೆ. ಈ ನಿಲುವು ಹುಟ್ಟಿರುವುದು, ವರ್ತಮಾನದ ಒತ್ತಡದಲ್ಲಿ ಪ್ರಾಚೀನ ದರ್ಶನಗಳು ಮರುಹುಟ್ಟು ಪಡೆಯುವ ಸಂಕರಶೀಲ ಮತ್ತು ಸಂಕೀರ್ಣ ವಿಧಾನದಲ್ಲಿ. ಕುವೆಂಪು ಬೇಂದ್ರೆ ಕಾರಂತ ಲಂಕೇಶ್ ತೇಜಸ್ವಿ ಎಲ್ಲರೂ ತಾವು ಪ್ರೇರಣೆ ಪಡೆದ ತಾತ್ವಿಕತೆಗಳನ್ನು ತಮ್ಮ ಅನುಭವ ಮತ್ತು ಕರ್ನಾಟಕದ ವರ್ತಮಾನದ ಅಗತ್ಯದ ಪರಿಭಾವನೆಯ ಕುಲುಮೆಯಲ್ಲಿ ಕರಗಿಸಿ ಮರುಹುಟ್ಟಿಸಿದವರು. ಈ ತಾತ್ವಿಕ ಮರುಹುಟ್ಟು ಸಿದ್ಧಾಂತಗಳನ್ನು ಕಟ್ಟುವ ತರ್ಕನಿಶಿತತೆಯಲ್ಲಿ ಇರುವುದಿಲ್ಲ. ಸೃಜ‌ನಶೀಕವಾದ ಸಂಕರ ಮತ್ತು ಅರಾಜಕತೆಯಲ್ಲಿ ಇರುತ್ತದೆ. ಇದನ್ನು ಬೇಂದ್ರೆಯವರ `ಬುದ್ಧ’ ಕವನದಲ್ಲೂ ಕಾಣಬಹುದು.
-ರಹಮತ್ ತರಿಕೆರೆ