ಧರ್ಮಸ್ಥಳ: ಎಸ್ ಐ ಟಿ ತನಿಖೆ ಆರಂಭ:ದೂರುದಾರನ ವಿಚಾರಣೆ-ಹೇಳಿಕೆ ದಾಖಲು
ಧರ್ಮಸ್ಥಳ: ಎಸ್ ಐ ಟಿ ತನಿಖೆ ಆರಂಭ:ದೂರುದಾರನ ವಿಚಾರಣೆ-ಹೇಳಿಕೆ ದಾಖಲು
ದೇಶದ ಗಮನ ಸೆಳೆದಿರುವ ಧರ್ಮಸ್ಥಳ ಅಸಹಜ ಸಾವಿನ ಪ್ರಕರಣದ ತನಿಖೆ ಇಂದಿನಿಂದ ಆರಂಭವಾಗಿದೆ.
ಬೆಳ್ತಂಗಡಿಯ ಮಲ್ಲಿಕಟ್ಟೆ ಪ್ರವಾಸಿ ಮಂದಿರವನ್ನೇ ಎಸ್ ಐ ಟಿ ತನಿಖೆಯ ಕಚೇರಿಯಾಗಿ ಪರಿವರ್ತಿಸಲಾಗಿದ್ದು,ಇಂದು ಬೆಳಿಗ್ಗೆ ಹನ್ನೊಂದು ಘಂಟೆಯಿಂದ ದೂರುದಾರನ ವಿಚಾರಣೆ ನಡೆಸಲಾಗುತ್ತಿದೆ.ತನಿಖೆಗಾಗಿ ಡಿಐಜಿ ಅನುಚೇತ್ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.ಮೊದಲಿಗೆ ದೂರುದಾರನ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದ್ದು,ಹೇಳಿಕೆಯನ್ನು ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ.ಸ್ಥಳದಲ್ಲಿ ದೂರುದಾರನ ಪರ ವಕೀಲರು ಸಹ ಹಾಜರಿದ್ದು,ತನಿಖೆಗೆ ಸಹಕಾರ ನೀಡುತ್ತಿದ್ದಾರೆ.ಹೇಳಿಕೆಯ ನಂತರ ಹೂತಿರಬಹುದಾದ ಶವಗಳನ್ನು ಹೊರತೆಗೆದು ಮಹಜರು ನಡೆಸಲು ಒಂದು ತಂಡವನ್ನು ರಚಿಸಲಾಗಿದ್ದು,ಸಾಕ್ಷ್ಯಗಳನ್ನು ಕಲೆ ಹಾಕಲು ಮತ್ತೊಂದು ತಂಡ ಸಿದ್ಧವಾಗಿದೆ.ಈ ಪ್ರಕರಣದಲ್ಲಿ ಯಾರು ಯಾರು ಭಾಗಿಗಳಾಗಿದ್ದರೆ ಎಂದು ನಂತರ ಪತ್ತೆಹಚ್ಚಲು ಮತ್ತೊಂದು ತಂಡ ಸನ್ನದ್ಧವಾಗಿದ್ದು,ಶವಗಳ ವಿಧಿ ವಿಜ್ಞಾನ ಪರೀಕ್ಷೆಗಾಗಿ ಮತ್ತೊಂದು ತಂಡ ಸಜ್ಜಾಗಿದೆ.ಹೇಳಿಕೆಯ ನಂತರ ಪ್ರಕರಣದಲ್ಲಿ ಭಾಗಿಯಾಗಿರಬಹುದಾದ ಆರೋಪಿಗಳನ್ನು ಪತ್ತೆಹಚ್ಚಿ ವಿಚಾರಣೆ ನಡೆಯಲಿದೆ,ಅಗತ್ಯ ಬಿದ್ದಲ್ಲಿ ಅವರನ್ನು ಬಂಧಿಸಬೇಕಾದ ಪ್ರಮೇಯವು ಹೆಚ್ಚಿದೆ.
ಮಲ್ಲಿಕಟ್ಟೆ ಪ್ರವಾಸಿ ಮಂದಿರದ ಸುತ್ತಾ ಪತ್ರಕರ್ತರ ದಂಡೇ ಜಮಾಯಿಸಿದ್ದು,ಎಲ್ಲಾ ಸುದ್ದಿ ಮಾಧ್ಯಮಗಳು ಕ್ಷಣ ಕ್ಷಣದ ಸುದ್ದಿಯನ್ನು ಪ್ರಸಾರ ಮಾಡುತ್ತಿವೆ.
ದೇಶದಾದ್ಯಂತ ಈಗ ಧರ್ಮಸ್ಥಳ ಸುದ್ದಿಯ ಕೇಂದ್ರ ಬಿಂದುವಾಗಿದೆ,ಭಾರಿ ಕುತೂಹಲ ಕೆರಳಿಸಿದೆ.