ಅನುಪಮಾ ಅವರ ʼಎರಡಳಿದುʼ ಕವನ ಸಂಕಲನ
ಡಾ. ಎಚ್ ಎಸ್ ಅನುಪಮಾ ಅವರ ʼಎರಡಳಿದುʼ ಕವನ ಸಂಕಲನ
ನಮ್ಮ ಪ್ರಾಚೀನ ಮತ್ತು ಮಧ್ಯಕಾಲೀನ ಕವಿಗಳು ಕಾವ್ಯವನ್ನೇ ಜೀವಿಸಿದರು. ಬೇಂದ್ರೆ, ಕುವೆಂಪು, ಗೋಪಾಲಕೃಷ್ಣ ಅಡಿಗ, ರಾಮಚಂದ್ರ ಶರ್ಮ, ಸಿದ್ದಲಿಂಗಯ್ಯ ಮೊದಲಾದವರು ಕವನಗಳನ್ನು ಬರೆಯುತ್ತಿರುವ ಕಾಲಘಟ್ಟದಲ್ಲಿ ಕವಿತೆಗಳನ್ನು ಸಂಭ್ರಮಿಸಲಾಗುತ್ತಿತ್ತು. ಪತ್ರಿಕೆಗಳಲ್ಲಿ ಕವಿತೆಗಳ ವಿಮರ್ಶೆಗಳೂ ವಿಸ್ತಾರವಾಗಿ ಪ್ರಕಟವಾಗುತ್ತಿದ್ದವು. ಆದರೆ ಇವತ್ತು ಜಗತ್ತು ಬದಲಾಗಿದೆ. ಮಾರುಕಟ್ಟೆ ಕೇಂದ್ರಿತವಾದ ಜಾಗತೀಕರಣವು ಕವಿತೆಗಳ ಸ್ಥಾನವನ್ನು ಗೌಣಗೊಳಿಸಿದೆ. ಆರ್ಥಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಏಕೀಕರಣ ಬೆಳೆಯುತ್ತಿರುವಾಗ, ಕನ್ನಡದಂಥ ಸ್ಥಳೀಯ ಭಾಷೆಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಳೆಸುವ ಮತ್ತು ಎತ್ತಿ ಹಿಡಿಯುವ ಬಗೆ ಹೇಗೆಂಬುದರ ಬಗ್ಗೆ ನಮಗೆ ಸ್ಪಷ್ಟವಾದ ತಿಳಿವಳಿಕೆಯೇನೂ ಇಲ್ಲ. ಜಾಗತೀಕರಣವು ಈಗಾಗಲೇ ವಿಶ್ವದ ನೂರಾರು ಸಣ್ಣ ಭಾಷೆಗಳ ಕತ್ತು ಹಿಸುಕಿದೆ. ಅಲ್ಪಸಂಖ್ಯಾಕ ಸಮುದಾಯಗಳು ಕಣ್ಮರೆಯಾಗುತ್ತಿವೆ. ಕವಿಗಳಿಗೆ ಮೂಲಪ್ರೇರಣೆ ನೀಡುತ್ತಿರುವ ಪರಿಸರ ಬರಡಾಗುತ್ತಿದೆ. ಆರ್ಥಿಕ, ರಾಜಕೀಯ ಮತ್ತು ಏಕರೂಪೀ ಸಾಂಸ್ಕೃತಿಕ ಜಾಗತೀಕರಣ ಪ್ರಕ್ರಿಯೆಯಗಳು ಭಾಷೆಗಳ ಬಹುತ್ವವನ್ನು ನಿರಾಕರಿಸಿ ಮಾನವಿಕಗಳನ್ನೇ ಅಪ್ರಸ್ತುತಗೊಳಿಸುತ್ತಿವೆ.
ಇಂಥ ಪ್ರತಿಕೂಲ ಸಂದರ್ಭದಲ್ಲಿ ಡಾ. ಅನುಪಮಾ ಅವರ ʼಎರಡಳಿದುʼ ಕವನ ಸಂಕಲನವು ಸಮಕಾಲೀನ ಜಗತ್ತಿನಲ್ಲಿ ಕವಿತೆ ನಿರ್ವಹಿಸಬಹುದಾದ ಕೆಲಸಗಳ ಬಗ್ಗೆ ಕೆಲವು ಒಳನೋಟಗಳನ್ನು ನೀಡುತ್ತದೆ.
ಪ್ರಸ್ತುತ ಕವನ ಸಂಕಲನದಲ್ಲಿ ಒಟ್ಟು ೨೮ ಕವಿತೆಗಳಿವೆ. ಈ ಕವಿತೆಗಳನ್ನು ʼಕೇದಗಿಯ ಬನʼ ಮತ್ತು ʼಬಯಲಿನೆಡೆಗೆʼ ಎಂದು ಎರಡು ರೀತಿಯಿಂದ ವಿಭಜಿಸಿಕೊಳ್ಳಲಾಗಿದೆ. ʼಕೇದಗೆಯ ಬನʼದಲ್ಲಿ ೨೯ ಕವಿತೆಗಳಿದ್ದರೆ ʼಬಯಲಿನೆಡೆಗೆʼಯಲ್ಲಿ ೨೮ ಕವಿತೆಗಳಿವೆ. ಹೆಸರೇ ಸೂಚಿಸುವಂತೆ ಒಂದು ಅಂತರಂಗದ ಧ್ವನಿ ತರಂಗಗಳಾದರೆ, ಎರಡನೆಯದು ಬಯಲಿನ ಸದ್ದುಗಳಿಗೆ ಕಿವಿಗೊಡುವ ದಿಟ್ಟ ಸಾಲುಗಳಾಗಿವೆ. ಕವಿತೆಗಳ ಗಾಂಭೀರ್ಯವನ್ನು ಹೆಚ್ಚಿಸುವ ಕೆಲವು ಭಾವಪೂರ್ಣ ಚಿತ್ರಗಳೂ ಇಲ್ಲಿವೆ. ಅವು ವಾಸ್ತವವಾಗಿ ಚಿತ್ರಕಾವ್ಯಗಳು.
ನನಗೆ ಬಹಳ ಇಷ್ಟವಾದ ಕವಿತೆ ರಾಮನ ಕುರಿತಾದದ್ದು. ʼಜೈ ಶ್ರೀರಾಮ್ʼ ಘೋಷಣೆ ಎಲ್ಲೆಡೆಯೂ ಮೊಳಗುತ್ತಿರುವಾಗ, ಅವುಗಳಿಂದ ಸಿಡಿದು ದೂರ ನಿಂತ ಅನುಪಮಾ ಅವರು ಬರೆಯುವುದು ಹೀಗೆ-
ʼಪ್ರಭೂ..
ರಾಮ ರಾಮು ಶ್ರೀರಾಮ
ರಾಮಿ ರಾಮೇಶ್ವರಿ ರಾಮಕ್ಕ
ರಾಮಯ್ಯ ರಾಮಪ್ಪ
ರಾಮಣ್ಣ ರಾಮನ್
ಸಿದ್ಧರಾಮ ಸೀತಾರಾಮ
ಶಿವರಾಮ ಮಂಗಲರಾಮ
ಜಾನಕೀರಾಮ ಕೌಸಲ್ಯಾರಾಮ
ಪಟ್ಟಾಭಿರಾಮ ಜಯರಾಮ
ರಾಮಮ್ಮ ರಾಮಲೀಲಾ
ರಾಮಚಂದ್ರ ರಾಮಕೃಷ್ಣ
ರಾಮಾನಂದ ಕಲ್ಯಾಣ ರಾಮ..
ಅಬಬಾ!
ಅದೆಷ್ಟು ಸಾವಿರದ ಹೆಸರುಗಳಾಗಿ
ಎಲ್ಲೆಡೆಗಳಲಿ ಹಲವರೆದೆಗಳಲಿ
ಇರುವೆಯಲ್ಲ ಹೇ ರಾಮ,
ಮತ್ತೇಕೆ ನಿನಗೆ ಗುಡಿ ಪ್ರಭೂ
ಹೀಗೆ ಅನುಪಮಾ ಅವರ ಕವಿತೆಗಳು ಜವಾಬ್ದಾರಿಯುತವಾಗಿ ವರ್ತಮಾನಕ್ಕೆ ಪ್ರತಿಕ್ರಿಯಿಸುತ್ತವೆ. ಸಮಕಾಲೀನ ವಿಶ್ವದ ಬೆಳವಣಿಗೆಗಳನ್ನು ಕವಿತೆಗಳು ಹೇಗೆ ಇದಿರಿಸಬಲ್ಲವು ಎಂಬುದಕ್ಕೆ ಇಲ್ಲಿನ ಹಲವು ಕವಿತೆಗಳು ಸಾಕ್ಷಿ ನುಡಿಯುತ್ತವೆ.
-ಪುರುಷೋತ್ತಮ ಬಿಳಿಮಲೆ


