ಭೀಮಾತೀರದ ಬಾಹುಬಲಿ..  ಬುಲ್ಸ್ ಪಡೆಯ ದೈತ್ಯ ಗೂಳಿ.. 

ಭೀಮಾತೀರದ ಬಾಹುಬಲಿ..  ಬುಲ್ಸ್ ಪಡೆಯ ದೈತ್ಯ ಗೂಳಿ.. 

ಭೀಮಾತೀರದ ಬಾಹುಬಲಿ.. 
ಬುಲ್ಸ್ ಪಡೆಯ ದೈತ್ಯ ಗೂಳಿ.. 
ಕೂಲಿ ಕಾರ್ಮಿಕ ಕುಟುಂಬದ ಕಬಡ್ಡಿ ಕಿಚ್ಚು.. 
ಕಬಡ್ಡಿ ದ್ರೋಣಾಚಾರ್ಯ ಬಿ.ಸಿ ರಮೇಶ್ ಶೋಧ ಈ ಗಣೇಶ ಹನುಮಂತಗೋಳ್..!

ಬಿಜಾಪುರದ ಭೀಮಾತೀರ ಪ್ರದೇಶದ ಕೂಲಿ ಕಾರ್ಮಿಕ ಕುಟುಂಬದ ಹುಡುಗ.. ಆರೂವರೆ ಅಡಿ ಎತ್ತರ ಕಟ್ಟುಮಸ್ತಿನ ಯುವಕ.. 

ಎಲ್ಲಿಯ ಭೀಮಾತೀರ..? ಎಲ್ಲಿಯ ಪ್ರೊ ಕಬಡ್ಡಿ ಲೀಗ್..? ಮಧ್ಯೆ ಸೇತುವೆಯಾಗಿ ನಿಂತವರು ದೇಶ ಕಂಡ ಹೆಸರಾಂತ ಕಬಡ್ಡಿ ಆಟಗಾರ, ಭಾರತ ತಂಡದ ಮಾಜಿ ನಾಯಕ, ವಿಶ್ವಕಪ್, ಏಷ್ಯಾಕಪ್ ವಿಜೇತ ಕಬಡ್ಡಿ ದಿಗ್ಗಜ, ಬೆಂಗಳೂರು ಬುಲ್ಸ್ ತಂಡದ ಹೆಡ್ ಕೋಚ್ ಬಿ.ಸಿ ರಮೇಶ್..

ಭೀಮಾತೀರದ ಹುಡುಗ ಗಣೇಶ ಹನುಮಂತಗೋಳ್ ಇವತ್ತು ಪ್ರೊ ಕಬಡ್ಡಿ ಲೀಗ್’ನಲ್ಲಿ ಮಿಂಚುತ್ತಿದ್ದಾನೆ ಎಂದರೆ ಅದಕ್ಕೆ ಕಾರಣ ಬಿ.ಸಿ ರಮೇಶ್.. ಒಬ್ಬ ಶಿಷ್ಯನ ಯಶಸ್ಸಿನ ಶ್ರೇಯ ಅವನ ಗುರುವಿನದ್ದೇ ಆಗಿರುತ್ತದೆ.. 

ಭಾರತೀಯ ಕಬಡ್ಡಿಯಲ್ಲಿ ಬಿ.ಸಿ ರಮೇಶ್ ಅವರದ್ದು ದೊಡ್ಡ ಹೆಸರು.. ಪ್ರೊ ಕಬಡ್ಡಿ ಇತಿಹಾಸದಲ್ಲಿ ಎರಡು ಬೇರೆ ಬೇರೆ ತಂಡಗಳನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೋಚ್ ಯಾರಾದರೂ ಇದ್ದರೆ ಅದು ಚನ್ನಪಟ್ಟಣದ ಬಿ.ಸಿ ರಮೇಶ್ ಮಾತ್ರ. ನೆನಪಿರಲಿ.. ಬೆಂಗಳೂರು ಬುಲ್ಸ್ 6ನೇ ಸೀಸನ್’ನಲ್ಲಿ ಚಾಂಪಿಯನ್ ಆದಾಗ ತಂಡದ ಅಸಿಸ್ಟೆಂಟ್ ಕೋಚ್ ಆಗಿದ್ದವರು ಇದೇ ರಮೇಶ್.. 

ಪ್ರೊ ಕಬಡ್ಡಿಯಲ್ಲಿ ಮೂರು ಚಾಂಪಿಯನ್ ಕಿರೀಟಗಳು.. ಅಪ್ಪಟ ಕನ್ನಡಿಗ.. ಕನ್ನಡ ಮಣ್ಣಿನ ಹೆಮ್ಮೆಯ ಕಬಡ್ಡಿ ತಾರೆ.. ಬೆಂಗಳೂರು ಬುಲ್ಸ್ ಕೋಚ್ ಹುದ್ದೆಗೆ ಬಿ.ಸಿ ರಮೇಶ್ ಅವರಿಗಿಂತ ಉತ್ತಮ ಆಯ್ಕೆ ಬೇರೆ ಯಾರಿದ್ದರು..? ಈ ಹಿಂದೆ ಕೋಚ್ ಆಗಿದ್ದ ರಣಧೀರ್ ಸಿಂಗ್ ಸೆಹ್ರಾವತ್ ಗರಡಿಯಲ್ಲಿ ಬೆಂಗಳೂರು ಬುಲ್ಸ್ ಒಮ್ಮೆ ಪ್ರಶಸ್ತಿ ಗೆದ್ದಿತ್ತು ನಿಜ.. ಆದರೆ ಸತತ 11 ವರ್ಷಗಳ ಸಾಧನೆಯನ್ನು ನೋಡಿದರೆ ಗೆದ್ದದ್ದಿಕ್ಕಿಂತ ಸೋತದ್ದೇ ಹೆಚ್ಚು.. ಹೀಗಾಗಿ ಈ ಬಾರಿ ಬಿ.ಸಿ ರಮೇಶ್ ಅವರ ಕೈಗೆ ಬುಲ್ಸ್ ಪಡೆಯ ಚುಕ್ಕಾಣಿ ನೀಡಲಾಗಿತ್ತು.

ಆರೇ ಆರು ತಿಂಗಳ ಹಿಂದಿನ ಮಾತು..
ಬಿ.ಸಿ ರಮೇಶ್ ಆಗಷ್ಟೇ ಬೆಂಗಳೂರು ಬುಲ್ಸ್ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದರು.. ರಮೇಶ್ ಅವರ ವಿಶೇಷತೆ ಏನೆಂದರೆ ಅವರು ಸ್ಟಾರ್’ಗಳ ಹಿಂದೆ ಹೋಗುವವರಲ್ಲ.. ಸ್ಟಾರ್’ಗಳನ್ನು ಹುಟ್ಟು ಹಾಕುವವರು. ಬುಲ್ಸ್ ಪಡೆಗೆ ಹೊಸ ಹುಡುಗರ ಹುಡುಕಾಟದಲ್ಲಿದ್ದರು ರಮೇಶ್.. ಹಾಗೆ ಹುಡುಕುತ್ತಾ ಹುಡುಕುತ್ತಾ ಬಂದು ಸೇರಿದ್ದು ದೊಡ್ಡಬಳ್ಳಾಪುರಕ್ಕೆ.

ದೊಡ್ಡಬಳ್ಳಾಪುರದಲ್ಲಿ ರಾಜ್ಯ ಮಟ್ಟದ ಕಬಡ್ಡಿ ಟೂರ್ನಿ ನಡೆಯುತ್ತಿತ್ತು.. ತನ್ನ ಪಾಲಿನ ಅರ್ಜುನ ಇಲ್ಲಿ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿ ದೊಡ್ಡಬಳ್ಳಾಪುರಕ್ಕೆ ಬಂದಿದ್ದರು ಕಬಡ್ಡಿ ದ್ರೋಣ..  ಹಾಗೇ ನೋಡುತ್ತಿದ್ದಾಗ ಒಬ್ಬ ಹುಡುಗ ರಮೇಶ್ ಅವರ ಗಮನವನ್ನು ತನ್ನತ್ತ ಸೆಳೆದು ಬಿಟ್ಟ.. ಆ ದೇಹ, ಆ ಎತ್ತರ, ಆ ಬಾಹುಬಲ.. ಅವೆಲ್ಲಕ್ಕಿಂತ ಮುಖ್ಯವಾಗಿ ಆತನಲ್ಲಿದ್ದ ಕೌಶಲ್ಯ.. ವಿಶೇಷ ಗುಣವೊಂದನ್ನು ಆ ದಿನ ಆ ಹುಡುಗನಲ್ಲಿ ನೋಡಿದರು ರಮೇಶ್.. ಅಂದ ಹಾಗೆ ಅವತ್ತು ದೊಡ್ಡಬಳ್ಳಾಪುರದಲ್ಲಿ ಬಿ.ಸಿ ರಮೇಶ್ ಕಣ್ಣಿಗೆ ಬಿದ್ದ ಹುಡುಗನ ಹೆಸರು ಭೀಮಾತೀರದ ಗಣೇಶ್ ಹನುಮಂತಗೋಳ್.

ನಿನ್ನೆ ತೆಲುಗು ಟೈಟನ್ಸ್ ವಿರುದ್ಧದ ಪಂದ್ಯ ಬೆಂಗಳೂರು ಬುಲ್ಸ್ ತಂಡದಿಂದ ಬಹುತೇಕ ಕೈ ಜಾರಿ ಹೋಗಿತ್ತು. ಕೊನೆ 30 ಸೆಕೆಂಡ್’ಗಳ ಆಟ ಬಾಕಿ ಇದ್ದಾಗ 32-31ರಲ್ಲಿ ಹಿನ್ನಡೆಯಲ್ಲಿತ್ತು ಬೆಂಗಳೂರು.. ಕೊನೆಯ ರೇಡ್’ಗಾಗಿ ತೆಲುಗು ಟೈಟನ್ಸ್ ಅಖಾಡ ಪ್ರವೇಶಿಸಿದವನು ಗಣೇಶ್ ಹನುಮಂತಗೋಳ್. ಮದ್ದಾನೆಯಂತೆ ನುಗ್ಗಿದವನೇ ಮೂವರನ್ನು ಹೊತ್ತು ತಂದ.. ಸೋಲಿನ ಸುಳಿಯಲ್ಲಿದ್ದ ಬೆಂಗಳೂರು 34-31ರಲ್ಲಿ ಪಂದ್ಯ ಗೆದ್ದು ಬಿಟ್ಟಿತು. ಡಗೌಟ್’ನಲ್ಲಿ ಕುಳಿತಿದ್ದ ಬುಲ್ಸ್ ಕೋಚ್ ರಮೇಶ್ ಮುಖದಲ್ಲಿ ಮಂದಹಾಸ.. ಎದ್ದು ನಿಂತವರೇ ಎರಡು ಬಾರಿ ತೊಡೆ ತಟ್ಟಿ ಬಿಟ್ಟರು..

ಸಾಮಾನ್ಯವಾಗಿ ಬಿ.ಸಿ ರಮೇಶ್ ಅವರು ಈ ರೀತಿ excite ಆಗುವವರೇ ಅಲ್ಲ. ಸೋಲಿನಲ್ಲೂ ಗೆಲುವಿನಲ್ಲೂ ಅವರು ಸ್ಥಿತಪ್ರಜ್ಞ.. ಅಂಥಾ ರಮೇಶ್ ಗಣೇಶನ ಆಟ ನೋಡಿ ತೊಡೆ ತಟ್ಟಿ ಬಿಟ್ಟರು ಎಂದರೆ ಅದಕ್ಕೆ ಕಾರಣ ಅವನು ಅವರ ಹುಡುಗ.. ಅವರೇ ಹುಡುಕಿ ತಂದ ಹುಡುಗ.. 

ಗಣೇಶ್ ಹನುಮಂತಗೋಳ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ.. ಗೊತ್ತಿದ್ದದ್ದು ಒಂದೇ.. ಬಡವರ ಮನೆಯ ಈ ಹುಡುಗನನ್ನು ಹುಡುಕಿ ತಂದವರು ಬಿ.ಸಿ ರಮೇಶ್ ಎಂದು.. 

ನಿನ್ನೆ ತೆಲುಗು ಟೈಟನ್ಸ್ ವಿರುದ್ಧ ಗಣೇಶ್ ಹನುಮಂತಗೋಳ್ ಆಟವನ್ನು ನೋಡಿ ಇವತ್ತು ಬೆಳಗ್ಗೆ ಬಿ.ಸಿ ರಮೇಶ್ ಅವರಿಗೆ ಕರೆ ಮಾಡಿದ್ದೆ..  ‘ಎಲ್ಲಿಂದ ತಂದಿರಿ ಸಾರ್ ಈ ಹುಡುಗನನ್ನ’ ಎಂದು ಕೇಳಿದೆ..
‘ಬಿಜಾಪುರದ ಗೂಳಿ ಸಾರ್ ಇದು.. ಆರು ತಿಂಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಆಟ ನೋಡಿದ್ದೆ. ಕಬಡ್ಡಿ ಆಟಗಾರರಲ್ಲಿ ತೀರಾ ಅಪರೂಪ ಎನ್ನಬಹುದಾದ ಎರಡು ಕೌಶಲ್ಯಗಳನ್ನು ಕಂಡಿದ್ದೆ. ನೇರವಾಗಿ ಬುಲ್ಸ್ ಟ್ರಯಲ್ಸ್’ಗೆ ಕರೆಸಿದ್ದೆ.. ಫಲಿತಾಂಶ ನಿಮ್ಮ ಕಣ್ಣ ಮುಂದೆಯೇ ಇದೆ’’ ಎಂದರು ಬಿ.ಸಿ ರಮೇಶ್..

‘‘ಇನ್ನೂ ಮೂರರಿಂದ ನಾಲ್ಕು ಕೌಶಲ್ಯಗಳನ್ನು ರೂಢಿಸಿಕೊಂಡರೆ ಇನ್ನು ಮೂರು ವರ್ಷಗಳಲ್ಲಿ ಈ ಹುಡುಗ ಭಾರತ ತಂಡದಲ್ಲಿರುತ್ತಾನೆ ನೋಡುತ್ತಿರಿ’’ ಎಂದ ರಮೇಶ್ ಅವರ ಮಾತಿನಲ್ಲಿ ಗಣೇಶ್ ಹನುಮಂತಗೋಳನ ತಾಕತ್ತಿನ ಪರಿಚಯವಿತ್ತು.

ಕಬಡ್ಡಿ ದ್ರೋಣ ಮಾತು ನಿಜವಾಗಲಿ.. ಬಡವರ ಮಕ್ಕಳು ಬೆಳೆದರೆ ಅದೇ ಖುಷಿ.

-ಸುದರ್ಶನ್