"ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಭೂತ ಇದ್ದಂತೆ"!!
"ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ದೊಡ್ಡ ಭೂತ ಇದ್ದಂತೆ"!!
-ಡಾ.ಯು.ಆರ್.ಅನಂತಮೂರ್ತಿ
-------------------------------
ಒಂದು ಸಾರಿ ನಾನು ಕಾರಂತರನ್ನು ಅವರ ಪ್ರದೇಶದಲ್ಲಿಟ್ಟು ನೋಡುವಾಗ "ಕಾರಂತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಭೂತ ಇದ್ದಂತೆ" ಅನ್ನುವ ಮಾತು ಬಳಸಿದ್ದೆ. ಅದು ಅರ್ಥ ಆಗುವುದಕ್ಕೆ ಸ್ವಲ್ಪ ವಿವರಣೆ ಕೊಡಬೇಕು.
ದ.ಕ.ಜಿಲ್ಲೆಯಲ್ಲಿ ಭೂತಾರಾಧನೆ ಇದೆ. ಅಲ್ಲಿ ಎಲ್ಲಿ ಹೋದರೂ ಪಂಜುರ್ಲಿ ಹಾಯ್ಗುಳಿ ಬೊಬ್ಬರ್ಯ ಜೆಟ್ಟಿಗ ಭೂತಗಳ ಆರಾಧನೆ ನಡೆಯುತ್ತದೆ. ಅಲ್ಲಿ ಭೂತಗಳಿಗೆ ಹೆದರಿಕೊಂಡು ಜನ ನಡೆಯುತ್ತಾರೆ. ಆ ಭೂತಗಳು ಯಾವುವೆಂದರೆ ಒಂದು ಕಾಲದಲ್ಲಿ ಕಾಳಗದಲ್ಲಿ ಹೀರೋಗಳಾಗಿದ್ದು,ಗೆದ್ದು ಬಂದು, ಅವರು ಸತ್ತ ಮೇಲೆ ಜನ ಅವರನ್ನು ಆರಾಧಿಸುವ ಕ್ರಮ. ಅವರು ಭೂತಗಳಾಗಿರಬಹುದು.ಅವರೆಲ್ಲ ನಮ್ಮ ನಾಡಿನ ದೇವತೆಗಳು,ಆ ಜನರ ದೇವತೆಗಳು.
ಕಾರಂತರು ಒಂದು ಭೂತ ಇದ್ದ ಹಾಗೆ ಎಂದು ಏಕೆ ಹೇಳಿದೆನೆಂದರೆ, ದಕ್ಷಿಣ ಕನ್ನಡ ಜಿಲ್ಲೆಗೆ ನೀವು ಹೋದರೆ, ಅಲ್ಲಿ ಬಲವಾದ ಕೆಲವು ಸಂಸ್ಥೆಗಳಿವೆ. ಒಂದು ಉಡುಪಿಯ ಶ್ರೀಮಠ, ಇನ್ನೊಂದು ಪೈಗಳ ಇನ್ಸ್ಟಿಟ್ಯೂಷನ್ ಅದು ಬಹಳ ಬಲವಾದದ್ದು. ಮತ್ತೊಂದು ನಮ್ಮ ಹೆಗ್ಗಡೆಯವರ ಧರ್ಮಸ್ಥಳ. ಈ ಮೂರು ಇನ್ಸ್ಟಿಟ್ಯೂಷನ್ ಗಳು. ಇವುಗಳ ನಡುವೆ ಕಾರಂತರಿದ್ದರು.
ಅವರು ಯಾರ ಜೊತೆಗೂ ಒಪ್ಪಂದ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಅವರು ಎಲ್ಲರಿಗೂ ಬೇಕಾದವರೇ ಆಗಿದ್ದು ಇವರನ್ನು ಅವರು ಬಳಸಿಕೊಳ್ಳುತ್ತಿದ್ದರು.ಆದ್ದರಿಂದ ' ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರಂತರು ಭೂತ ಇದ್ದ ಹಾಗೆ.ತಮ್ಮನ್ನು ತಾವು ಕಾಪಾಡಿಕೊಂಡಿದ್ದಾರೆ' ಎಂದು ಸಾಂಕೇತಿಕವಾಗಿ ಹೇಳಿದ್ದೆ. ಅವರು ನೋಡಲಿಕ್ಕೂ ಅನನ್ಯವಾಗಿದ್ದರು, ಕೂದಲು ಉದ್ದವಾಗಿ ಬಿಟ್ಟಿದ್ದರು. ಮೀಸೆಯಿತ್ತು, ಹೊಳೆಯುವ ಕಣ್ಣುಗಳಿದ್ದವು.
- ಯು.ಆರ್.ಅನಂತಮೂರ್ತಿ
ಆಕರ ಗ್ರಂಥ : "ಸಾಹಿತ್ಯ ಸಹವಾಸ"
ಪುಟ:74 ಮತ್ತು 75.
(ಈ ಕೃತಿಯು ಮೂಲತಃ ಅಜೀಂ ಪ್ರೇಮ್ ಜಿ ವಿ.ವಿ.ಯಲ್ಲಿ ಉಪನ್ಯಾಸಕರಾಗಿದ್ದ ಚಂದನ್ ಗೌಡ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ 2014ರಲ್ಲಿ
ದೂರದರ್ಶನದಲ್ಲಿ ಪ್ರಸಾರವಾದ ಅನಂತಮೂರ್ತಿಯವರ 13 ಉಪನ್ಯಾಸ ಸರಣಿಯ ಪುಸ್ತಕ ರೂಪ.)
ಪ್ರಕಾಶಕರು: ಅಹರ್ನಿಶಿ ಪ್ರಕಾಶನ ಶಿವಮೊಗ್ಗ.


