ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಯುವರಾಜನ ಆಗಮನ

ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಯುವರಾಜನ ಆಗಮನ

ತನ್ನದೇ ಪಡಿಯಚ್ಚನ್ನ ತಯಾರು ಮಾಡಿದ್ದಾನೆ ದೇಶ ಕಂಡ ಅಪ್ರತಿಮ ಕ್ರಿಕೆಟ್ ಯೋಧ ಯುವರಾಜ..! 

ಆ ದ್ರೋಣನನ್ನು ಏಕಲವ್ಯನಂತೆ ಆರಾಧಿಸುತ್ತಿದ್ದ ಶಿಷ್ಯನಿಗೆ ದ್ರೋಣನೇ ಪ್ರತ್ಯಕ್ಷ ಗುರುವಾಗಿ ಸಿಕ್ಕಿ ಬಿಟ್ಟ.. 

ಯುವರಾಜ್ ಸಿಂಗ್ ಎಂಬ ಹೆಸರು ಕೇಳಿದರೆ ಕ್ರಿಕೆಟ್ ಪ್ರಿಯರ ನರನಾಡಿಗಳಲ್ಲಿ ಒಂದು ಕ್ಷಣ ರೋಮಾಂಚನ..  

ಕಾರಣ.. ಅದು ಬರೀ ಹೆಸರಲ್ಲ.. ವಿಶ್ವಕಪ್ ಗೆಲ್ಲಲಾಗದೆ ಬಸವಳಿದಿದ್ದ ಭಾರತಕ್ಕೆ ಸಿಕ್ಕ ಉಸಿರು.. ಭಾರತದ ಮಟ್ಟಿಗೆ ವೈಟ್ ಬಾಲ್ ಕ್ರಿಕೆಟ್’ನಲ್ಲಿ ಬಹುಶಃ ಅವನಂಥಾ ಮ್ಯಾಚ್ ವಿನ್ನರ್ ಮತ್ತೊಬ್ಬನಿಲ್ಲ. 

ಎಷ್ಟು ರನ್ ಹೊಡೆದ ಎಂಬುದಕ್ಕಿಂತ.. ಎಷ್ಟು ದಾಖಲೆಗಳನ್ನು ಬರೆದ, ಎಷ್ಟು ಶತಕಗಳನ್ನು ಬಾರಿಸಿದ ಎಂಬ ಹೆಚ್ಚುಗಾರಿಕೆಗಿಂತ ದೇಶಕ್ಕೆ ಎಷ್ಟು ವಿಶ್ವಕಪ್’ಗಳನ್ನು ಗೆಲ್ಲಿಸಿಕೊಟ್ಟ ಎಂಬುದೇ ಮುಖ್ಯ. 

ಶ್ರೇಷ್ಠತೆಗೆ ಇದೇ ಅಳತೆಗೋಲಾದರೆ ಯುವರಾಜ್ ಸಿಂಗ್ ಜೊತೆ ಸ್ಪರ್ಧೆಗೆ ನಿಲ್ಲುವವರೇ ಇಲ್ಲ. ಅವನು ತನ್ನ ಸವ್ಯಸಾಚಿ ಆಟದಿಂದ ದೇಶಕ್ಕೆ ಗೆಲ್ಲಿಸಿಕೊಟ್ಟ ವಿಶ್ವಕಪ್’ಗಳು ಒಂದಲ್ಲ, ಎರಡಲ್ಲ.. ಮೂರು. 

 ಇಂಥಾ ಯುವರಾಜ.., 
ಅಪ್ರತಿಮ ಕ್ರಿಕೆಟ್ ಯೋಧ ಯುವರಾಜ.., 
ವ್ಯಕ್ತಿಗಿಂತ ತಂಡ ಮೊದಲು ಎಂಬ ಮಾತನ್ನು ತಲೆಯ ಮೇಲೆ ಹೊತ್ತು ಮೆರೆಸಿದಂತೆ ಆಡಿದ ಯುವರಾಜ.., 
ದೇಶಕ್ಕೆ ಮೂರು ಮೂರು ವಿಶ್ವಕಪ್’ಗಳನ್ನು ಗೆದ್ದು ಕೊಟ್ಟ ಯುವರಾಜ ತನ್ನದೇ ಪಡಿಯಚ್ಚಿನಂಥಾ ಶಿಷ್ಯನೊಬ್ಬನನ್ನು ತಯಾರು ಮಾಡಿದ್ದಾನೆ. 

ಅವನು ಯುವರಾಜನಂತೆ fearless.. ಅವನ ಆಟ ಯುವರಾಜನಂತೆ ವಿಧ್ವಂಸಕ.. ಸಿಡಿಲ ಸಿಕ್ಸರ್’ಗಳನ್ನು ಬಾರಿಸುವುದರಲ್ಲಿ ಗುರುವನ್ನೇ ನೆನಪಿಸುತ್ತಿರುವ ಶಿಷ್ಯೋತ್ತಮ. ಅವನು ಪಂಜಾಬ್’ನ ಅಮೃತಸರದ ಅಭಿಷೇಕ್ ಶರ್ಮಾ. 

‘’ಅವನ ಆಟ ನೋಡಿದರೆ ನನ್ನ ಗತವೈಭವದ ದಿನಗಳು ಟ ನೆನಪಾಗುತ್ತವೆ..’’ ಎಂಬ  ಯುವರಾಜನ ಮಾತಿನಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ. ಹೌದು.. ಬ್ಯಾಟಿಂಗ್’ನಲ್ಲಿ ಆ high backlift, ಸಿಕ್ಸರ್ ಬಾರಿಸುವ ರೀತಿ, ಆ ತೋಳ್ಬಲ, ಆ swag.. ಎಲ್ಲವೂ ಯುವರಾಜನೇ.. 

2020..
ಕೋವಿಡ್ ಕೆಡುಕಿನ ಕಾಲ.. ದೇಶಕ್ಕೆ ದೇಶವೇ ಲಾಕ್’ಡೌನ್ ಆಗಿತ್ತು. ಆಗಷ್ಟೇ ಹದಿಹರೆಯವನ್ನು ದಾಟಿದ್ದ ಹುಡುಗನೊಬ್ಬ ಯುವರಾಜನ ಮನೆಗೆ ಬಂದಿದ್ದ.. ಕೆಲ ದಿನಗಳ ಕಾಲ ನಾನು ನಿಮ್ಮೊಂದಿಗೆ ನಿಮ್ಮ ಮನೆಯಲ್ಲಿಯೇ ಇರುತ್ತೇನೆ ಎಂದಿದ್ದ. ಹುಡುಗನ ಬಗ್ಗೆ, ಅವನ ಆಟದ ಬಗ್ಗೆ ಗೊತ್ತಿತ್ತು ಯುವಿಗೆ. ಅವನೊಂದಿಗೆ ಒಂದು ರಣಜಿ ಪಂದ್ಯದಲ್ಲಿ ಕ್ರೀಸ್ ಕೂಡ ಹಂಚಿಕೊಂಡಿದ್ದ. 

ಮಹಾಭಾರತದ ದ್ರೋಣ ತನ್ನ ಶಿಷ್ಯನನ್ನು ಹುಡುಕುತ್ತಾ ಹಸ್ತಿನಾಪುರಕ್ಕೆ ಬಂದರೆ, ಇಲ್ಲಿ ಅರ್ಜುನನೇ ದ್ರೋಣನನ್ನು ಹುಡುಕಿ ಬಂದಿದ್ದ. 

ಇಡೀ ದೇಶ ಕೋವಿಡ್ ಆಘಾತದಲ್ಲಿದ್ದರೆ, ಪಂಜಾಬ್’ನ ಚಂಡೀಗಢದಲ್ಲಿರುವ ಆ ಮೈದಾನದಲ್ಲಿ ಹುಡುಗನಿಗೆ ಯುವರಾಜನ ಕ್ರಿಕೆಟ್ ಪಾಠಶಾಲೆ ಆರಂಭವಾಗಿತ್ತು. 

ಹುಡುಗ ತಯಾರಾಗಿಯೇ ಬಂದಿದ್ದ. ಬೇಕಿದ್ದದ್ದು ಸಣ್ಣ ಸಣ್ಣ ಬದಲಾವಣೆಗಳಷ್ಟೇ. ಬ್ಯಾಟಿಂಗ್ stance, shoulder positionನಲ್ಲಿ ಕೆಲ ಸಣ್ಣ ಬದಲಾವಣೆಗಳನ್ನು ಮಾಡಿದ ಯುವಿ. ಕೊನೆಯ ಕ್ಷಣದವರೆಗೆ ಚೆಂಡನ್ನು ನೋಡಿ ದಂಡಿಸುವ, ಚೆಂಡಿಗೆ ಪ್ರಹಾರ ನಡೆಸುವ ಕಲೆ, ಬಿರುಸಿನ ಹೊಡೆತಗಳನ್ನು ಬಾರಿಸಲು ಬೇಕಾದ ಪಾದಚಲನೆ.. 
ಹೀಗೆ ತನ್ನ ಅಷ್ಟೂ ಅನುಭವವನ್ನು ಹುಡುಗನಿಗೆ ಧಾರೆ ಎರೆದು ಬಿಟ್ಟ ಭಾರತದ ಸರ್ವಶ್ರೇಷ್ಠ ವಿಶ್ವಕಪ್ ಹೀರೋ ಯುವರಾಜ್ ಸಿಂಗ್. 

ಅಭಿಷೇಕನ್ನು ಗಾಲ್ಫ್ ಅಂಗಣಕ್ಕೆ ಕರೆದೊಯ್ದು ಗಾಲ್ಫ್ ಆಡಿಸಿದ. high backlift, ಚೆಂಡಿಗೆ ಪ್ರಹಾರ ನಡೆಸುವಾಗ ಅಗತ್ಯವಾಗಿ ಇರಬೇಕಾದ ನಿಖರತೆಯನ್ನು ಕರಗತ ಮಾಡಿಕೊಳ್ಳಲು ಗಾಲ್ಫ್ ಸಹಕಾರಿ. ಯುವರಾಜನ ಹದ್ದಿನ ಕಣ್ಣುಗಳಡಿ ಆ ಕಲೆಯನ್ನೂ ಅಭಿಷೇಕ್ ಶರ್ಮಾ ಕರಗತ ಮಾಡಿಕೊಂಡ. 
 
ಎಲ್ಲರಿಗೂ ತನ್ನ ಕ್ರಿಕೆಟ್ ಹೀರೋನೇ ಗುರುವಾಗಿ ಸಿಗುವುದಿಲ್ಲ. ಅಷ್ಟರ ಮಟ್ಟಿಗೆ ಅಭಿಷೇಕ್ ಶರ್ಮಾ ಅದೃಷ್ಟವಂತ. 

ಒಬ್ಬ ಶಿಷ್ಯನ ಯಶಸ್ಸಿನ ಶ್ರೇಯ ಅವನ ಗುರುವಿನದ್ದೇ ಆಗಿರುತ್ತದೆ. ಅಮೃತಸರದ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್’ನಲ್ಲಿ ಸುನಾಮಿಯಂತೆ ಎದ್ದು ಬಂದಿದ್ದಾನೆ ಎಂದರೆ ಅದಕ್ಕೆ ಕಾರಣ ಯುವರಾಜ. 

‘’ಕೈಯಲ್ಲಿ ಬ್ಯಾಟ್ ಇರುವಾಗ ಚೆಂಡನ್ನೇಕೆ ತಡೆದು ನಿಲ್ಲಿಸಬೇಕು.. ಬ್ಯಾಟ್ ಇರುವುದೇಕೆ..? ದಂಡಿಸಲಿಕ್ಕಲ್ಲವೇ..?’’ 
ಕೈಯಲ್ಲಿ ಮರದ ಪುಟ್ಟ ಬ್ಯಾಟ್ ಇದ್ದಾಗಲೇ ಈ ಪ್ರಶ್ನೆಯನ್ನು ತಂದೆ ರಾಜ್ ಕುಮಾರ್ ಶರ್ಮಾ ಅವರಿಗೆ ಕೇಳಿದ್ದನಂತೆ ಅಭಿಷೇಕ್ ಶರ್ಮಾ. ಅಂದ ಹಾಗೆ ಅಭಿ ಪಾಲಿನ ಮೊದಲ ಕ್ರಿಕೆಟ್ ಗುರು ಸ್ವತಃ ಕ್ರಿಕೆಟ್ ಆಡಿದ್ದ ತಂದೆ ರಾಜ್ ಕುಮಾರ್ ಶರ್ಮಾ. 

2016ರ ವಿಜಯ್ ಮರ್ಚೆಂಟ್ ಟ್ರೋಫಿ ಅಂಡರ್-16 ಟೂರ್ನಿಯಲ್ಲಿ ಮಗ 1200 ರನ್, 60 ವಿಕೆಟ್ ಪಡೆದಾಗಲೇ ಇವನು "India material" ಎಂದು ಅವತ್ತೇ ತಂದೆಗೆ ಅನ್ನಿಸಿತ್ತಂತೆ. 

2018ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ತಂಡದ ಸದಸ್ಯ ಅಭಿಷೇಕ್ ಶರ್ಮಾ. ಆಗ ಕನಿಷ್ಠ ಆರು ತಿಂಗಳುಗಳ ಕಾಲ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಅಭ್ಯಾಸ. ನಂತರ ಯುವರಾಜನ ಪಾಠಶಾಲೆ. ಒಬ್ಬ ಸಂತ, ಇನ್ನೊಬ್ಬ ಸಿಡಿಲು. ಇಬ್ಬರ ಗರಡಿಯಲ್ಲಿ ಪಳಗಿ ಬಂದಿರುವ ಅಭಿಷೇಕ್ ಶರ್ಮಾ ಟಿ20 ಕ್ರಿಕೆಟ್ ಜಗತ್ತನ್ನೇ ನಡುಗಿಸುತ್ತಿದ್ದಾನೆ.

ಕ್ರಿಕೆಟ್’ನ ಮೂರೂ ಪ್ರಕಾರಗಳಲ್ಲಿ ಆಡಿಸಿದರೆ ಯುವರಾಜನ ಶಿಷ್ಯ ಮತ್ತೊಬ್ಬ ವೀರೇಂದ್ರ ಸೆಹ್ವಾಗ್ ಆಗಬಲ್ಲ..   

-ಸುದರ್ಶನ್