ಮಡಿಕೇರಿ ಎಫ್ ಎಂ ಕೆ ಸಿ ಕಾಲೇಜು ಆವರಣಕ್ಕೆ ಪಂದ್ಯಂಡ ಬೆಳ್ಯಪ್ಪ ಹೆಸರು ನಾಮಕರಣವಾಗಲಿ:ಅಲ್ಲಾರಂಡ ರಂಗಚಾವಡಿಯ ವಿಠಲ ನಂಜಪ್ಪ ಆಗ್ರಹ
ಮಡಿಕೇರಿ ಎಫ್ ಎಂ ಕೆ ಸಿ ಕಾಲೇಜು ಆವರಣಕ್ಕೆ ಪಂದ್ಯಂಡ ಬೆಳ್ಯಪ್ಪ ಹೆಸರು ನಾಮಕರಣವಾಗಲಿ:ಅಲ್ಲಾರಂಡ ರಂಗಚಾವಡಿಯ ವಿಠಲ ನಂಜಪ್ಪ ಆಗ್ರಹ
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಸ್ಥಾಪನೆಗೆ ಮೂಲ ಕಾರಣಕರ್ತರಾದ ಸ್ವಾತಂತ್ರ್ಯ ಹೋರಾಟಗಾರ ಕೊಡಗಿನ ಗಾಂಧಿ ಎಂದೇ ಹೆಸರಾಗಿದ್ದ ದಿ.ಪಂದ್ಯಂಡ ಬೆಳ್ಯಪ್ಪನವರ ಹೆಸರನ್ನು ಆ ಕಾಲೇಜಿನ ಕ್ಯಾಂಪಸ್ ಗೆ ನಾಮಕರಣಗೊಳಿಸಬೇಕೆಂದು ಮಡಿಕೇರಿಯ ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ಸರಕಾರವನ್ನು ಒತ್ತಾಯಿಸಿದ್ದಾರೆ.
ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿಗಳನ್ನು ಇಂದು ಗುರುವಾರ ಭೇಟಿ ಮಾಡಿದ ಅವರು ಈ ಕುರಿತು ಮನವಿ ಸಲ್ಲಿಸಿದ್ದಾರೆ.
ಕಾಲೇಜು ಆವರಣದಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವುದರೊಂದಿಗೆ,ಅವರ ಸ್ವಾತಂತ್ರ್ಯ ಹೋರಾಟವನ್ನು ಶಾಸನವಾಗಿ ರೂಪಿಸಿ ಅಲ್ಲಿ ಪ್ರತಿಸ್ಠಾಪಿಸುವ ಮೂಲಕ ಅವರನ್ನು ಸದಾ ಸ್ಮರಿಸುವಂತಾಗಬೇಕೆಂದು ಅವರು ಮನವಿ ಮಾಡಿದ್ದಾರೆ.
ಪಂದ್ಯಂಡ ಬೆಳ್ಯಪ್ಪನವರು ಕೊಡಗು ಪ್ರತ್ಯೇಕ ರಾಜ್ಯವಾಗಿದ್ದಾಗ 1948 ರಿಂದಲೇ ಮಡಿಕೇರಿಯಲ್ಲಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಗೆ ಹೋರಾಟ ನಡೆಸಿದ್ದಲ್ಲದೆ ಸತತ ಒಂದು ವರ್ಷ ವ್ಯವಹರಿಸಿ ಆಗಿನ ಪ್ರಧಾನಿ ನೆಹರು ಅವರನ್ನು ಖುದ್ದು ಭೇಟಿಯಾಗಿ 1949 ರಲ್ಲಿ ಕಾಲೇಜು ಸ್ಥಾಪನೆಗೆ ಕಾರಣರಾದರು.
ಉಪಕುಲಪತಿಗಳಿಗೆ ವಿಠಲ ಅವರು ಸಂಬಂಧಿಸಿದ ದಾಖಲಾತಿಗಳನ್ನು ಸಹ ನೀಡಿದ್ದಾರೆ.ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಸಮಾಜ ಸೇವಕರು ಈ ಕಾರ್ಯದಲ್ಲಿ ಕೈ ಜೋಡಿಸಬೇಕೆಂದು ಅವರು ಮನವಿ ಮಾಡಿದ್ದಾರೆ.