ನಿರ್ಲಿಪ್ತ-ಶಾಂತ ಸ್ವಭಾವದ ಭೈರಪ್ಪ: ಪತ್ನಿ ಸರಸ್ವತಿ ಸಂದರ್ಶನ
"'ನಾನೂ ಹಠ ಹಿಡಿದು ಇವರ ಜತೆ ಟೂರ್ ಹೋಗ್ತಿನಿ ಅಂತ ಇಟ್ಕೊಳ್ಳಿ, ದಾರೀಲಿ ಯಾವುದೋ ನದಿಯೋ, ಬೆಟ್ಟವೋ ಕಾಣಿಸುತ್ತೆ... ಇವರು ಅದನ್ನೇ : ನೋಡ್ತಾ ಗಂಟೆ ಗಟ್ಟಲೆ ಆ ಸ್ಥಳದಲ್ಲೇ ನಿಂತುಬಿಡ್ತಾರೆ.... ಮಾತಿಲ್ಲ ಕತೆಯಿಲ್ಲ. ನಂಗೆ ಅವು ಕೇವಲ ಒಂದು ನದಿ ಅಥವಾ ಬೆಟ್ಟ. ಆದರೆ ನನ್ನ ಗಂಡ ಅವುಗಳಲ್ಲೆಲ್ಲ ನನ್ನ ಯೋಚನಾ ಶಕ್ತಿಗೆ ಮೀರಿದ ಯಾವುದನ್ನೋ ಕಾಣ್ತಿರ್ತಾರೆ," ಎನ್ನುತ್ತಾರೆ ಸರಸ್ವತಿ ಭೈರಪ್ಪ. ಅವರು ಎಸ್.ಎಲ್ ಭೈರಪ್ಪ ಅವರ ಕುರಿತು ಹಂಚಿಕೊಂಡ ಮಾತುಗಳಿವು.
ʻಮದುವೆಯಾದ ದಿನದಿಂದಲೂ ನಾನು ಒಂಟಿತನಾನ ಅಭ್ಯಾಸ ಮಾಡಿಕೊಂಡಿರುವುದರಿಂದ ನನಗೆ ಅದರಲ್ಲಿ ವಿಶೇಷವೇನೂ ಕಾಣೋಲ್ಲ....' ಸರಸ್ವತಿ ನಗುತ್ತಲೆ ನುಡಿಯುತ್ತಾರೆ. ಆದರೆ ಈ ಏಕಾಕಿತನವನ್ನು ಅನುಭವಿಸುವುದರ ಹಿನ್ನೆಲೆಯಲ್ಲೇ ಮಹದಾಕಾಂಕ್ಷೆಯ, ಮಹತ್ತರ ಕೃತಿಗಳ ಲೇಖಕರಾದ ತಮ್ಮ ಪತಿಯ ಬಗ್ಗೆ ಅಭಿಮಾನವೂ ಪರೋಕ್ಷವಾಗಿ ಒಡಮೂಡುತ್ತದೆ. ಮೈಸೂರಿನ ದೊಡ್ಡ ಮನೆ. ಹಲವಾರು ವರ್ಷಗಳಿಂದಲೂ ಇಲ್ಲಿ ಶಕ್ತಿಮೀರಿ ಬದುಕನ್ನು ಸಮರ್ಪಕವಾಗಿ ನಡೆಸುತ್ತಾ ಬಂದಿರುವ ಸರಸ್ವತಿ.
ಅವರ ಕೃತಿಗಳ ವಸ್ತುಗಳು ಎಷ್ಟು ಅಪರೂಪವೋ ಅಷ್ಟೇ ಜನರ ಕಣ್ಣಿಗೂ ಅಪರೂಪಕ್ಕೊಮ್ಮೆ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ಭೈರಪ್ಪನವರ ವ್ಯಕ್ತಿತ್ವದ ವೈಯಕ್ತಿಕ ಮಗ್ಗುಲನ್ನು ತಿಳಿಯುವ ಉತ್ಸಾಹದಿಂದ ಅವರ ಮನೆಗೆ ಹೋದಾಗ ಅಲ್ಲಿ ಕಾಣಿಸಿಕೊಳ್ಳುವವರು ಸರಸ್ವತಿ ಮಾತ್ರ. ವಿದೇಶ ಪ್ರವಾಸಕ್ಕೆ ಹೋಗಿರುವ ಪತಿಯ ಬರುವಿಕೆಯನ್ನೇ ನಿರೀಕ್ಷಿಸುತ್ತ ದೂರದಲ್ಲಿರುವ ಮಕ್ಕಳ ಟೆಲಿಫೋನ್ ಕರೆಗಳಿಗಾಗಿ ಕಾಯುತ್ತಾ ಕೂತಿರುವ ಭೈರಪ್ಪನವರ ಪತ್ನಿ ಸರಸ್ವತಿ.
'ನಾನು ಮೆಟ್ರಿಕ್‌ವರೆಗೆ ಮಾತ್ರ ಓದಿದವಳು. ನನ್ನಪ್ಪ ಅನಂತರಾಮ ಜೋಯಿಸರು ಎಷ್ಟು ಕಟ್ಟುನಿಟ್ಟಿನ ಮನುಷ್ಯ ಅಂದ್ರೆ ನಾನು ಸಣ್ಣ ವಯಸ್ಸಿನಲ್ಲಿ ಹೊರಗೆ ಹೋದವಳೇ ಅಲ್ಲ. ಚಿಕ್ಕ ವಯಸ್ಸಿನಲ್ಲಿ ಬುದ್ದಿ ಬೆಳೆಯೋಕೇ ಅವಕಾಶ ಇರಲಿಲ್ಲ ನೋಡಿ' ಎಂದೇ ತಮ್ಮ ವೃತ್ತಾಂತವನ್ನು ಪ್ರಾರಂಭಿಸುವ ಸರಸ್ವತಿ, ಸಂಭಾಷಣೆ ಬೇರೆ ಬೇರೆ ಮಜಲುಗಳನ್ನು ಮುಟ್ಟುತ್ತಿದ್ದಂತೆಯೇ ವ್ಯಕ್ತಪಡಿಸುವ ವಿಚಾರಗಳು ಮಾತ್ರ ಸ್ವಾರಸ್ಯಕರ. ಸಾರಸ್ವತ ಲೋಕದ ಅಗ್ರಗಣ್ಯರಲ್ಲೊಬ್ಬರಾದ ಪತಿಯನ್ನು ವಸ್ತುನಿಷ್ಠರಾಗಿ ಪರಿಚಯಿಸಿಕೊಡುವಂಥ ಮೋಹಕ ಮಾತುಗಾರಿಕೆ.
'ನನ್ನಪ್ಪ ಅನಂತರಾಮ ಜೋಯಿಸರು ಅಂತ ಆಗಲೇ ಹೇಳಿದೆನಲ್ಲ, ತಾಯಿ ಜಯಲಕ್ಷಮ್ಮ, ನಾವು ತಿಪಟೂರು ತಾಲ್ಲೂಕಿನ ನೊಣವಿನಕೆರೆಯವರು. ನನ್ನ ತಾತ-ಅಂದರೆ ನನ್ನ ತಾಯಿಯ ತಂದೆ ತಲಕಾಡಿನಲ್ಲಿ ಶಿರಸ್ತೇದಾರರು. ಅದರ ಜತೆಗೇ ಜೋಯಿಷ್ಯಕ್ಕೇಂತ ನಲವತ್ತು ಹಳ್ಳಿಗಳನ್ನು ಒಂದು ಸಾವಿರ ರೂಪಾಯಿಗೆ ಕೊಂಡುಕೊಂಡಿದ್ದರಂತೆ. ನೊಣವಿನಕೆರೆ ಸುತ್ತಮುತ್ತಲಿನ ಹಳ್ಳಿಗಳಲ್ಲೆಲ್ಲ ತಾತಂದು ಓಡಾಟ. ಅಪ್ಪನಿಗೆ ಭೂಮಿಕಾಣಿ ಆಸ್ತಿಯಾಗಿ ಬಂತು. ಅದಲ್ಲದೆ ಜೋಯಿಸಿಕೆ ಕೂಡಾ. ನನ್ನ ತಾತನ ಕಾಲಕ್ಕಿಂತಲೂ ಅಪ್ಪನ ಕಾಲ ಮುಂದುವರಿದೇ ಇರಬೇಕಲ್ಲ ಅಪ್ಪನಿಗೆ ಜೋಯಿಸಿಕೆ ಮಾಡೋದು ಅವಮಾನ, ದಾನ ತೊಗೊಳ್ಳೋದು ಕರ್ಮ. ತಾನು ದುಡಿದು ತಿನ್ನಬೇಕೇ ಹೊರತು ಕಂಡವರ ಮನೇಲಿ ಹೊಟ್ಟೆ ಹೊರೆದುಕೋಬಾರದು ಅಂತ ಏನೇನೋ ಯೋಚನೆ ಬಂದು ತಮ್ಮ ತೆಂಗಿನ ತೋಟ, ಗದ್ದೆ ಇವನ್ನೇ ಮುಂದುವರಿಸಕೊಂಡು ಹೋದರು. ಒಂದು ಕಾಲಕ್ಕೆ ಕಾಂಗ್ರೇಸ್‌ಗೂ ಕೆಲಸ ಮಾಡಿದ್ದುಂಟು. ತಿಮ್ಮೇಗೌಡ, ಹುಚ್ಚೇಗೌಡ, ವಿ ಸುಬ್ರಹ್ಮಣ್ಯ, ಕಡಿದಾಳ್ ಮಂಜಪ್ಪ, ರೇವಣಸಿದ್ದಯ್ಯ ಇಂಥಹವರು ಚುನಾವಣೆಗೆ ನಿಂತಾಗ; ಆದರೆ ಜಾತಿ ರಾಜಕೀಯ ಶುರುವಾದಾಗ ಅಪ್ಪ ರಾಜಕಾರಣದಲ್ಲಿ ಇದ್ದ ಅಲ್ಪಸ್ವಲ್ಪ ಅಸಕೀನೂ ಕಳೆದುಕೊಂಡರು. ಅವರಾಯ್ತು ಅವರ ಬೇಸಾಯವಾಯ್ತು ಮನೇಲಿ ಅವರದ್ದೇ ಹುಕುಂ. ಅಪ್ಪನಿಗೆ ಗಂಡು ಮಕ್ಕಳಿಲ್ಲ ನಾನು, ನನ್ನ ಇಬ್ಬರು ತಂಗಿಯರು. ಪಕ್ಕದ ಮನೆಗೆ ಆರಸಿನ ಕುಂಕುಮಕ್ಕೆ ಹೋಗಬೇಕಾದರೂ ಅಪ್ಪನ ಕಣ್ಣಪ್ಪಿಸಿ, ಕದ್ದು ಹೋಗಬೇಕಾಗಿತ್ತು. ನಾವೆಲ್ಲೂ ಹೋಗಬಾರದು. ಬರಬಾರದು. ನಾನು ೧೯ನೇ ವಯಸ್ಸಿನವರೆಗೂ ರೈಲನ್ನೇ ನೋಡಿರಲಿಲ್ಲ. ಆದ್ರೂ ಅಪ್ಪನಿಂದ ಮರೆಮಾಚಿ ಲೈಬ್ರರಿಗೆ ಓಡಿಹೋಗಿ ಅಮ್ಮನಿಗೆ ತ.ರಾ.ಸು. ಅ.ನ.ಕೃ. ಕಾದಂಬರಿಗಳನ್ನು ತಂದೊಡ್ತಾ ಇದ್ದೆವು. ಅಮ್ಮನಿಗೋ ಓದೋ ಹುಚ್ಚು. ಮೈಸೂರು ಮಹಾರಾಣಿ ಸ್ಕೂಲಿನಲ್ಲಿ ೭ನೇ ಕ್ಲಾಸಿನವರೆಗೂ ಓದಿದ್ದರು. ಅಪ್ಪ ಮನೆ ಖರ್ಚಿಗೆ ಅಂತ ಕೊಡ್ತಿದ್ದ ದುಡ್ಡಿನಲ್ಲಿ 8 ಆಣೆ ಉಳಿಸ್ಕೊಂಡು ನಮಗೆ 'ಚಂದಮಾಮ' ತರಿಸಿ ಕೊಡ್ತಿದ್ದರು.
'ನಂಗೆ ೧೬ ವರ್ಷ ಆಗ್ತಿದ್ದಹಾಗೇ ಗಂಡು ಹುಡುಕೋಕ್ಕೆ ಶುರು ಮಾಡಿದರು. ಲಾಯರು, ಡಾಕ್ಟರು, ಎಂಜಿನಿಯರು ಹೀಗೆ ವರಗಳು ಬಂದವು. ಆದ್ರೆ ಓದಿದ ಹುಡುಗಿ ಅಲ್ಲ ಅಂತ ನನ್ನನ್ನು ಅವರಾರೂ ಒಪ್ಪಲಿಲ್ಲ. ನನ್ನ ಜತೆ ಓಡ್ತಾ ಇದ್ದ ಒಬ್ಬ ಹುಡುಗ ಹೊಯ್ಸಳ ಕರ್ನಾಟಕರ ಹಾಸ್ಟೆಲ್ಲಿನಲ್ಲಿದ್ದಾಗ ಭೈರಪ್ಪನವರ ಸ್ನೇಹಿತನಾಗಿದ್ದ. 'ಭೈರಪ್ಪ ಅಂತ ಬಿ.ಎ. ಅನರ್ಸ್‌ನಲ್ಲಿ ಒಬ್ಬನಿದ್ದಾನೆ. ನೋಡ್ತೀರಾ ?' ಅಂತ ಅಪ್ಪ ಅಮ್ಮನ್ನ ಕೇಳಿದ. ಸರಿ, ಇವರು ಎಚ್. ಟಿ. ಶಾಂತಾ ಅಂತ ಫಿಲಾಸಫಿ ಪ್ರೊಫೆಸರಾಗಿದ್ದ ಒಬ್ಬಾಕೆ ಜತೆ ನನ್ನ ನೋಡೋಕೆ ಬಂದರು. ಭೈರಪ್ಪನವರಿಗೆ ಹೇಳಿಕೊಳ್ಳುವಂಥ ಸಂಬಂಧಿಕರೇನೂ ಇರಲಿಲ್ಲ. ಜತೆಯಲ್ಲಿ ಹುಟ್ಟಿದವಳು ಒಬ್ಬಳೇ ತಂಗಿ, ಲಲಿತಾ ಅಂತ. ಇವರ ತಾಯಿ- ಗೌರಮ್ಮ-ಅಷ್ಟು ಹೊತ್ತಿಗಾಗಲೇ ತೀರಿಕೊಂಡಿದ್ದರು. ತಂದೆ ಲಿಂಗಣ್ಣಯ್ಯ, ಸಂತೆಶಿವರ ಇವರ ಊರು. ಹೆಸರಿಗೆ ಮಾತ್ರ ಶ್ಯಾನುಭೋಗರು. ಎಂದೂ ಶ್ಯಾನುಭೋಗಿಕೇನ ಸರಿಯಾಗಿ ನಡೆಸಲೇ ಇಲ್ಲ. ತೀರಾ ಬೇಜವಾಬ್ದಾರಿ ಮನುಷ್ಯ, ಭೈರಪ್ಪ ವಾರಾನ್ನ, ಭಿಕ್ಷಾನ್ನದಿಂದ ದೊಡ್ಡರಾದವು. ತಂಗಿಯ ಜವಾಬ್ದಾರೀನೂ ಭೈರಪ್ಪನವರ ಹೆಗಲಿಗೇ ಬಿದ್ದಿತ್ತು. ಇವರ 'ಗೃಹಭಂಗ' ಕಾದಂಬರಿಗೆ ತಮ್ಮ ತಂದೆಯ ವರ್ತನೆಯೇ ಪ್ರೇರಣೆ.
ತೀವ್ರ ಹಂಬಲ
1959ರಲ್ಲಿ ನೊಣವಿನಕೆರೆಯಲ್ಲಿ ನಮ್ಮ ಮದುವೆಯಾಯಿತು. ನಂಗೆ ೨೦ ವರ್ಷ, ಇವರಿಗೆ ೨೫. ನಮ್ಮ ಮದುವೆ ಗೊತ್ತು ಮಾಡಿದ್ದರಲ್ಲಾ, ಪ್ರೊ. ಶಾಂತಾ, ಅವರು ಆವತ್ತೇ ನಂಗೆ ಹೇಳಿದರು ‘ನೋಡು, ಭೈರಪ್ಪ ಯಾವಾಗಲೂ ಬರೀತಾ ಕೂತುಕೊಳ್ಳೋನು. ನೀನು ಅವನಿಗೆ ಸಹಕಾರ ನೀಡಬೇಕೇ ಹೊರತು ಎಂದೂ ಮನಸ್ತಾಪಕ್ಕೆ ಕಾರಣ ಆಗಬಾರದು' ಅಂತ. ಇವರು ಆಗ ಹುಬ್ಬಳ್ಳಿಯ ಕಾಡುಸಿದ್ದೇಶ್ವರ ಆರ್ಟ್ಸ್ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಬಡತನ ಹೇಳತೀರದು. ಇವರು ಅಂಥ ಸ್ಥಿತಿಯಲ್ಲೇ ತಂಗಿಗೆ ಮದುವೆ ಮಾಡಿದರು. ಆದರೆ ಎಂಥಾ ದುರದೃಷ್ಟ ಅಂತೀರೀ.... ಅವಳನ್ನು ಮದುವೆಯಾದವನು ಸರಿಯಾಗಿರಲಿಲ್ಲ.
ಸಂಗೀತವೇ ಸೇರದು. ಆದರೆ ಇವರಿಗೆ ಅದನ್ನು ಕೇಳಲೇಬೇಕು. ಸಂಜೆ ಇವರು ಕಾಲೇಜು ಮುಗಿಸಿಕೊಂಡು ಬರುವಷ್ಟರಲ್ಲಿ ಡಬ್ಬಿಲಿ ಚಪಾತಿ ಪಲ್ಯ ಇಡ್ಕೊಂಡು ಕಚೇರಿಗೆ ಹೋಗೋ ದಾರೀಲಿ ನಿಂತಿದ್ದಾ ಇದ್ದೆ. ಇವರು ತಿಂಡಿ ತಿಂದು, ನಾನು ಹಾಗೂ ನನ್ನ ಮಗನನ್ನು ಸೈಕಲ್ ಮೇಲೆ ಕೂರಿಸಿಕೊಂಡು ಹೋಗ್ತಿದ್ರು. ಸಭಾಂಗಣಕ್ಕೆ ಹೋದಾಗ ನಂಗೆ ಸಾಕಷ್ಟು ತಿಳುವಳಿಕೆ ಕೊಡ್ತಿದ್ದರು - ಹಾಡುತ್ತಾ ಇರೋರು ಇಂಥ ಊರಿನವು, ಅವರ ಮುಖ ಕಟ್ಟು ಹೀಗಿದೆ. ಈಗ ಈ ರಾಗ ಹೇಳುತ್ತಾ ಇದಾರೆ, ಅಂತಲ್ಲ. ಸ್ವಲ್ಪ ಸಂಗೀತ ಜ್ಞಾನ ನನ್ನಲ್ಲೂ ಹುಟ್ಟಿತ್ತು.
'ಇವರು ಬೆಳಿಗ್ಗೆ ನನ್ನ ಮಗನಿಗೆ ನೀರು ಹಾಕಿ ಆರು ಗಂಟೆಗೆ ಕೆಲಸಕ್ಕೆ ಹೊರಟರು ಅಂದರೆ ಇಡೀ ದಿನ ನಂಗೆ ಬಟ್ಟೆ ಒಗೆಯೋದು, ಪಾತ್ರೆ ತೊಳೆಯೋದು, ಮಗೂನ ಆಡಿಸೋದು ಇಷ್ಟೆ. ಮದುವೆಯಾಗೋಕ್ಕೆ ಮೊದಲೇ ಸ್ವಲ್ಪ ಹಿಂದಿ ಓದಿದ್ದೆ. ಗುಜರಾತ್‌ಗೆ ಬಂದ ಮೇಲೆ ಇಂಗ್ಲಿಷ್, ಹಿಂದಿ, ಗುಜರಾತಿ ಮೂರು ಭಾಷೆಗಳನ್ನೂ ಮಾತನಾಡಲು ಕಲಿತು, ಹಿಂದಿ ಪೇಪರ್ ಓದ್ಯೋತಿದ್ದೆ. ಆದರೆ ಗುಜರಾತ್‌ಗೆ ಹೋದೆವು ಅಂತ ನಮ್ಮ ಕಷ್ಟ ಕಾರ್ಪಣ್ಯವೇನೂ ಮುಗಿದಿರಲಿಲ್ಲ. ಇವರು ಪಿಎಚ್.ಡಿ ಮಾಡ್ತಿದ್ದಾಗ ಯೂನಿವರ್ಸಿಟಿಗೆ ಬೇರೆ ದುಡ್ಡು ಕಟ್ಟಬೇಕಾಗಿತ್ತು. ಮನೇಲಿ ಒಂದು ಇಂದ್ರೆ ಒಂದಿಲ್ಲ. ಯಾವಾಗಲೋ ಎರಡು ರೂಪಾಯಿ ಉಳಿತಾಯ ವಾದಾಗ ಎರಡು ಲೋಟ ಕೊಂಡ್ಕೊಂಡಿದ್ದಾಯಿತು. ಮತ್ತೆ ಯಾವಾಗಲೋ ಹತ್ತು ರೂಪಾಯಿ ಉಳೀತು. ಆಗ ಊಟದ ತಟ್ಟೆ ಕೊಂಡೆವು. ಹಿತ್ತಾಳೆ ಪಾತ್ರೆಲಿ ಹಾಲು ಕಾಯಿಸ್ತಾ ಇದ್ದೆ ಕಣೀ.... ಯಾರೋ ಹೇಳಿದರು ಅದು ತಪ್ಪು ಅಂತ. ಆಗ ಇವರನ್ನು ಕಾಡಿ ಬೇಡಿ ಹಾಲಿಗೆ ಒಂದು, ಸಾರಿಗೆ ಒಂದು ಅಂತ ಎರಡು ಸ್ಟೀಲ್ ಪಾತ್ರೆಗಳನ್ನು ಕೊಂಡೆ. ಒಂದೊಂದು ಸಾಮಾನು ಕೊಳ್ಳೋದೂ ಒಂದೊಂದು ಪ್ರಯಾಸ. ಹಾರೆ, ಬಾಂಡಲಿ ಇಂಥವನ್ನು ಕೊಳ್ಳೋಕೂ ಎಷ್ಟು ಕಟ್ಟ ಪಟ್ಟಿದೀನಿ ಅಂತಾ. ಸೀರೆಯಂತೂ ಬಿಡಿ. ವರ್ಷಕ್ಕೊಂದಾದರೆ ಹೆಚ್ಚು. ಇವರಿಗೆ ತಾನೆ ಎಷ್ಟು ಬಟ್ಟೆ ಇತ್ತು! ಮೂರು ಪಾಯಿಜಮ, ಮೂರು ಜುಬ್ಬಾ, ಮೂರು ಬನಿಯನ್, ಎಣಿಸಿದ ಹಾಗೆ. ಇವರಿಗೆ ಮದುವೆಯಲ್ಲಿ ಕೊಟ್ಟ ಸೂಟಿತ್ತು. ನಂಗೆ ಧಾರೇಲಿ ಕೊಟ್ಟಿದ್ದ ಒಂದು ಕಲಾಪತ್ತು ಸೀರೆ. ಒಂದು ಸಲ ಸ್ನೇಹಿತರ ಜತೆ ಪಿಕ್ನಿಕ್‌ಗೆ ಹೋಗಿದ್ದೀ. ಚೆನ್ನಾಗಿ ಅಡಿಗೆ ಮಾಡ್ಕೊಂಡಿದ್ದೆ. ಆದರೆ ಮನೇಲಿ ಸ್ಟೀಲ್ ಪಾತ್ರೆಗಳೇ ಇರಲಿಲ್ಲ ಅಂದಲ್ಲ, ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಅವನ್ನು ಹಾಕ್ಕೊಂಡು ಹೋಗಿದ್ದೆ. ಎಲ್ಲೂ ತಿನ್ನೋಕೆ ಕೂತರು. ಆದರೆ ನನ್ನ ಊಟ ತಿಂಡಿಯೆಲ್ಲಾ ಪ್ಲಾಸ್ಟಿಕ್ ವಾಸನೆ !
ಮರಳಿ ಮೈಸೂರಿಗೆ
'ಗುಜರಾತ್‌ನಲ್ಲಿ ಸಂಸಾರ ನಿಭಾಯಿಸುತ್ತಿದ್ದ ಹಾಗೇ ಒಂದು ದಿನ ವೈಸ್ ಚಾನ್ಸ್‌ಲರ್ ಇವರನ್ನು ಕರೆಸಿ ಹೇಳಿದರು: 'ನೋಡಿ, ಫಿಲಾಸಫಿಗೆ ವಿದ್ಯಾರ್ಥಿಗಳೇ ಬರ್ತಾ ಇಲ್ಲ ಈ ವರ್ಷ ಓಡ್ತಾ ಇರೋ ವಿದ್ಯಾರ್ಥಿಗಳು ಹೊರಬಿದ್ದ 'ಧರ್ಮಶ್ರೀ' 'ದೂರ ಸರಿದರು' ಕಾದಂಬರಿಗಳು ಪ್ರಕಟವಾಗಿ ಹೆಸರು ಮಾಡಿದು. ಆದರೆ ಹೊಟ್ಟೆಪಾಡು ! ನಂಗೆ ಅಪ್ಪ ಹಳ್ಳಿಲಿ ಸ್ವಲ್ಪ ಜಮೀನು ಕೊಟ್ಟಿದರು. ಇವರೆಂದರು: 'ನೋಡು ಇನ್ನೇಲೆ ಸಾಹಿತ್ಯದಿಂದಲೇ ಜೀವನ ಕಳೀಬೇಕು. ನಿನ್ನೂರಲ್ಲಿ ಒಂದು ಪುಟ್ಟ ಮನೆ ಕಟ್ಟಿಸೋಣ. ನೀನು ಬಟ್ಟೆ ಹೊಲಿಯೋದನ್ನು ಕಲಿತು ಸ್ವಲ್ಪ ಸಂಪಾದಿಸು. ಮನೇಲಿ ಸಿಹಿತಿಂಡಿ ಮಾಡಿ ಮಾರಾಟ ಮಾಡು. ನಾನು ರಾಣೆ ಬೆನ್ನೂರಿನಲ್ಲಿರೋ ಗೋವಿಂದರಾಯರ ಹತ್ತಿರ ಹೋಗಿ ಅವರ ಸಹಾಯದಿಂದ ಒಂದು ಪುಟ್ಟ ಹೋಟೇಲನ್ನು ಶುರು ಮಾಡ್ತೀನಿ, ಕೆಳಗಿನ ಶಾಲೆಗಳಲ್ಲಿ ಕೆಲಸ ಸಿಗಬಹುದು. ಆದರೆ ಅವೆಲ್ಲ ನಂಗೆ ಇಷ್ಟ ಇಲ್ಲ...' ನಿರ್ವಾಹವೇ ಇರಲಿಲ್ಲ.
'ಆದರೆ ಅದೇನು ಭಗವಂತನ ಕೃಪೇನೋ, ದೆಹಲೀಲಿ ಚಂದ್ರಶೇಖರಯ್ಯ ಅಂತಿದ್ರು. ಅವರ ಹೆಂಡತಿ ತುಂಬಾ ಸಾಹಿತ್ಯ ಓದಿರೋರು. ಇವರಿಗೆ ಎನ್.ಸಿ.ಇ.ಆರ್.ಟಿ.ನಲ್ಲಿ ಸೀನಿಯರ್ ರಿಸರ್ಚ್ ಆಫೀಸರ್ ಹುದ್ದೆಗೆ ಸಂದರ್ಶನಕ್ಕೆ ಕರೆ ಬಂತು. ೧೯೬೮-೬೯ ಅಲ್ಲಿದ್ದೆವು. ಆಮೇಲೆ ಮೈಸೂರಿನ ರೀಜನಲ್ ಕಾಲೇಜಿನ ಫಿಲಾಸಫಿ ವಿಭಾಗಕ್ಕೆ ಬಂದರು. ಒಂಟಿಕೊಪ್ಪಲು, ಝಾನ್ಸಿ ಲಕ್ಷ್ಮೀಬಾಯಿ ರಸ್ತೆ, ಹೀಗೆ ಎಲ್ಲೆಲ್ಲೋ ಬಾಡಿಗೆ ಮನೆಗಳಲ್ಲಿ ಅಲೆದಾಡಿದೆವು. ಮನೆ ಮಾಲೀಕರು ಒಂದು ವರ್ಷಾನೂ ಒಂದು ಕಡೆ ಇರಗೊಡಿಸ್ತಾ ಇರಲಿಲ್ಲ. ಮೈಸೂರಿಗೆ ಬಂದ ಮೇಲೆ ಸರೀಕರ ಮನೆಗೆ ಮದುವೆ ಮುಂಜಿಗೇಂತ ಹೋಗಲೇಬೇಕಾಯಿತು. ಇವರು ಎಲ್ಲಿಗೂ ಬರುತ್ತಿರಲಿಲ್ಲ. ನನ್ನ ಹತ್ತಿರ ಬಟ್ಟೆ ಒಡವೆ ಇಲ್ಲದೆ ಯಾವುದೇ ಸಮಾರಂಭಕ್ಕೆ ಹೋಗೋಕ್ಕೆ ಹಿಂಜರೀತಾ ಇದ್ದೆ. ದಾರದಲ್ಲಿ ಪೋಣಿಸಿದ ಕರೀಮಣಿ, ಗಾಜಿನ ಬಳೆ ಇಷ್ಟೇ ನನ್ನ ಆಭರಣ. ಒಂದು ಸಲ ಇವರಿಗೆ ಯಾವುದೋ ಪುಸ್ತಕದ ದುಡ್ಡ ಬಂತು ಧೈರ್ಯ ಮಾಡಿ ಕೇಳಿದೆ: 'ನಂಗೆ ಒಂದೆರಡು ಒಡವೆ, ಸೀರೆ ಬೇಕು' ಅಂತ. ಪಾಪ, ನನ್ನ ಮನಸ್ಸು ಅರ್ಥವಾಯಿತೇನೋ, ತೆಗೆಸಿಕೊಟ್ಟರು. ಆಗ ನನಗೆ 'ನಾನೂ ನಾಲ್ಕು ಜನರಂತೆ' ಅನ್ನೋ ಭಾವನೆ ಬಂತು. ಒಂದೊಂದೇ ಡಬ್ಬ, ತಟ್ಟೆ, ಪಾತ್ರೆ, ಚಮಚ ಶೇಖರಿಸಿದೆ. ಒಟ್ಟಿನಲ್ಲಿ ಆ ಕಾಲದ ಮಧ್ಯಮ ವರ್ಗದ ಮೈಸೂರು ಬ್ರಾಹ್ಮಣರ ಮನೆಯಲ್ಲಿ ಪ್ರದರ್ಶನವಾಗುತ್ತಿದ್ದವನ್ನು ನಾನೂ ನನ್ನ ಮನೇಲಿ ಪ್ರದರ್ಶಿಸೋದು ಸಾಧ್ಯವಾಯಿತು !
'ಯಾವುದೇ ವಾತಾವರಣ ಇದ್ರೂ ಇವರ ಬರವಣಿಗೆ ನಿರಂತರವಾಗಿ ಸಾಗ್ತಿತ್ತು. ನಾನು ಕನ್ನಡ ಟೈಪ್ ರೈಟಿಂಗ್ ಕಲಿತು ಹಸಪ್ರತೀನ ಟೈಪ್ ಮಾಡಿದರೆ ತಮಗೆ ನೆರವಾಗುತೆ ಅಂತ ಸಲಹೆ ಮಾಡಿದರು. ಕಲಿತೆ. 'ದಾಟು', 'ಪರ್ವʼ, ಕಾದಂಬರಿ ಹಸ್ತಪ್ರತಿಗಳನ್ನು ಇಡಿಯಾಗಿ ಟೈಪ್ ಮಾಡಿದೆ. ತೀವ್ರ ಬೆನ್ನುನೋವು ಕಾಣಿಸಿಕೊಂಡಿತು. ಇವರ ಬಟ್ಟೆಗಳನ್ನು ನಾನೇ ಒಗೆದು ಇಸ್ತ್ರಿ ಮಾಡಬೇಕಾಗಿತ್ತು ಈ ಕೆಲಸಗಳ ಮಧ್ಯೆಯೂ ಹೊಟ್ಟೆ ಆಪರೇಶನ್ ಆಯಿತು, ಆ ಕೆಲಸವೂ ನಿಂತಿತು.
'ಬಡತನ ಬರವಣಿಗೆ ಇವುಗಳ ಮಧ್ಯೆ ಸಂಸಾರ ತೂಗಿಸ್ಕೊಂಡು ಹೋಗಿದ್ದಾಗ ಮಕ್ಕಳನ್ನು ನನ್ನ ತೌರಿನಲ್ಲಿ ಬಿಡುವುದು ಅನಿವಾರ್ಯವಾಗಿತ್ತು, ಮೈಸೂರಿಗೆ ಬಂದ ಮೇಲೆ ಅವರನ್ನು ಕರೆತಂದೆವು. ನಾನು ಅನುಭವದಿಂದ ಹೇಳ್ತಿದೀನಿ ಕೇಳೀ.... ಮಕ್ಕಳನ್ನು ಬುದ್ದಿ ಬಂದೇಲೆ ಹೊರಗೆ ಕಳಿಸಬೇಕೇ ಹೊರತು ಸಣ್ಣ ವಯಸ್ಸಿನಲ್ಲೇ ಎಂದೂ ಬೇರೆ ಮನೆಗೆ ಕಳಿಸಬಾರದು ಕಣೋ.... ಮಕ್ಕಳು ಮನೆಗೆ ಬಂದ್ರಲ್ಲ.... ಎಂಥಾ ಧೋರಣೆ ಅಂತೀರೀ... ನಾನು ಏನು ಮಾಡಿದರೂ ಇದು ಅಜ್ಜಿ ಮಾಡಿದ ಹಾಗಿಲ್ಲ ಅಂತ ಆಕ್ಷೇಪಣೆ. ಅದು ಸರಿಯಿಲ್ಲ. ಇದು ಸರಿಯಿಲ್ಲ ಅಂತ ದಿನದಿನಕ್ಕೂ ದೂಷಣೆ. ಈಗ ನನ್ನ ದೊಡ್ಡ ಮಗ ರವಿಶಂಕರ್ ಎಂಜಿನಿಯರಾಗಿ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ.ನೂ ಮಾಡಿ ಲಂಡನ್‌ನಲ್ಲಿದ್ದಾನೆ. ನ್ಯೂಯಾರ್ಕ್‌ನಲ್ಲಿ ಕೆಲಸ ಮಾಡಿದ, ರೋಟರಿ ವ್ಯಾಸಂಗ ವೇತನವೂ ಅವನಿಗೆ ಸಿಕ್ಕಿತು. ಎರಡನೆಯವನೂ ಬಿ.ಇ. ಮಾಡಿ ಹೈದರಾಬಾದ್‌ನಲ್ಲಿ ವೀಡಿಯಾ ಇಂಡಿಯಾದಲ್ಲಿ ತುಂಬಾ ದೊಡ್ಡ ಹುದ್ದೆಯಲ್ಲಿದ್ದಾನೆ. ಆದರೆ ಅಂತರ್ಮುಖಿಯಾದ. ಬರವಣಿಗೆಯನ್ನೇ ಧೈಯವನ್ನಾಗಿ ಹೊಂದಿದ ಪತಿಯನ್ನು ಪಡೆದ ನಾನು ಅವರ ಮಕ್ಕಳ ತಾಯಿಯಾಗಿ ಮೊದಮೊದಲು ತುಂಬಾ ಕಷ್ಟ ಪಟ್ಟಿದ್ದೀನಿ. ನನ್ನ ಮಕ್ಕಳು ಹೇಳಲಾರದಷ್ಟು ತುಂಟರಾಗಿದ್ದರು. ಕೈ ಮುರಿದುಕೊಳ್ಳೋದು, ಕಾಲು ಮುರಿದುಕೊಳ್ಳೋದು ಇವಂತೂ ಇದ್ದೇ ಇತ್ತು ಇವರು ಊರೂರು ತಿರುಗುತ್ತಾ ಇರೋರು. ಅಪ್ಪನ ಅಂಕೆ ಇಲ್ಲ. ಮಕ್ಕಳಿಗೆ ಸಿನಿಮಾ ಗೀಳು ಹತ್ತಿತ್ತು ಅಪ್ಪ ದುಡ್ಡಿನ ವಿಷಯದಲ್ಲಿ ಜಿಪುಣ, ತುಂಬಾ ಬಿಗಿ ಅಂತ ಮಕ್ಕಳು ಅಂದ್ಯೋತಿದ್ದವು. ಸುಳ್ಳು, ತಟವಟ, ಕದಿಯೋದು ಎಲ್ಲ ಶುರುವಾಯಿತು. ದುಡ್ಡು ಕಾಸು ಪರವಾಗಿಲ್ಲ. ಸ್ವಲ್ಪ ಸುಧಾರಿಸಿತು ಅಂದುಕೊಳ್ಳುವಷ್ಟರಲ್ಲಿ ಮಕ್ಕಳೇ ದೊಡ್ಡ ತಲೆನೋವಾದರು. ಒಂದು ಕಾಲಕ್ಕಂತೂ ಮೈಸೂರಿನಲ್ಲಿ 'ಭೈರಪ್ಪನವರ ಮಕ್ಕಳು ಅಂದ್ರೆ ಪೋಲಿಗಳು' ಅಂತ ಜನ ಮಾತಾಡಿಕೊಳ್ಳುವ ಮಟ್ಟಕ್ಕೂ ಅವರ ನಡತೆ ಮುಂದುವರಿಯಿತು. ನಾನು ಇವರಿಗೆ ಮಕ್ಕಳ ಮೇಲೆ ಚಾಡಿ ಹೇಳಿದ್ದೆ. ಆದರೆ ಅದರ ಪರಿಣಾಮ ಮಕ್ಕಳಿಗೆ ಇವರಿಂದ ಏಟು, ಬುದ್ದಿವಾದ. ಆದರೆ ಅಪ್ಪ ಮರೆಯಾದ ಕೂಡಲೇ ಮಕ್ಕಳು ನನ್ನನ್ನೇ ದಬಾಯಿಸುತ್ತಿದ್ದರು, ಚಾಡಿ ಹೇಳಿ ಹೊಡೆಸಿದೆ ಅಂತ. ಆರಡಿ ಎತ್ತರಕ್ಕೆ ನನಗಿಂತಲೂ ತುಂಬಾ ಎತ್ತರಕ್ಕೆ ಬೆಳೆದಿದ್ದ ಮಕ್ಕಳು, ನಂಗೆ ಅವರ ಹತ್ತಿರ ಜಗಳವಾಡೋಕ್ಕೆ ತಾಕತ್ತಿತ್ತೇ? ಸುಮ್ಮನೆ ಕೂತು ಅತ್ತು ಬಿಡುತ್ತಿದ್ದೆ. ನಮಗೆ ಅವರನ್ನು ಶಿಸ್ತಿನಲ್ಲಿ ಬೆಳೆಸೋಕ್ಕೆ ಆಗದಿದ್ದಾಗ ಮೈಸೂರಿನ ರಾಮಕೃಷ್ಣಾಶ್ರಮಕ್ಕೆ ಅವರನ್ನು ಕಳಿಸೋಕೆ ಪ್ರಯತ್ನ ಮಾಡಿದೆವು. ಮಂಗಳೂರಿನ ಹತ್ತಿರ ಇರುವ ಅಳಕೆಗೆ ಮಕ್ಕಳನ್ನು ಕಳಿಸಿ ಅಲ್ಲಿನ ಸತ್ಯಸಾಯಿ ವಿಹಾರದಲ್ಲಿ ಓದಿಸಿದೆವು. ಇವರು ಮಕ್ಕಳಿಗೆ ಹೇಳಿದರು: 'ನಾನು ನಿಮಗೆ ಕೊಡಿಸೋದು ಒಂದೇ ಡಿಗ್ರಿ. ಮುಂದೆ ಓದೋದು ನಿಮ್ಮದೇ ಹೊಣೆ' ಅಂತ. ಅದ್ಯಾವ ಜನ್ಮದ ಪುಣ್ಯವೋ! ಮಕ್ಕಳು ಕೈಬಿಟ್ಟೇ ಹೋದರು ಅಂತ ನಾನು ತಿಳಿದಿದ್ದಾಗ ಮತ್ತೆ ಅವರು ದಾರಿಗೆ ಬಂದರು. ಈಗ ಮದುವೆಯಾಗಿ ತಮ್ಮ ಪಾಡಿಗೆ ತಾವಿದ್ದಾರೆ. ನಮ್ಮ ರವಿ ಶಂಕರನ ಹೆಂಡತಿ ಆರ್ಚನಾ, ಬಿ.ಇ. ಪದವೀಧರೆ. ಎರಡನೆಯ ಸೊಸೆ ಅನುರಾಧಾ ನಿಟ್ಟೂರು ಶ್ರೀನಿವಾಸರಾಯರ ಮೊಮ್ಮಗಳು. ಮೊದಲನೆಯವರಿಗೆ ಒಂದು ಹೆಣ್ಣುಮಗು ಚಂದನಾ. ಎರಡನೆಯವನ ಮಗ ವಿಕ್ರಮ್. ಈಗ ಮಕ್ಕಳಿಗೆ ಅಪ್ಪನ ಮೇಲೆ ತುಂಬಾ ಗೌರವ. ಅವರಿಗೆ ಕಾದಂಬರಿಗಳು ಓದುವ ಅಭ್ಯಾಸ ಏನಿಲ್ಲ. ಆದರೆ ಸೊಸೆಯರು ಓದುತ್ತಾರೆ. ಈಗ ಮಕ್ಕಳು ಅಂತಾರೆ, 'ನಮ್ಮ ಮಕ್ಕಳನ್ನು ನಿಮ್ಮ ಹತ್ರ ಬಿಡ್ತೀವಮ್ಮಾ, ಮೈಸೂರಲ್ಲೇ ಓದಿಸು' ಅಂತ. ನಾನದಕ್ಕೆ “ಬೇಡಪ್ಪಾ, ಬೇಡ..... ಅವು ದೊಡ್ಡವಾದ ಮೇಲೆ ಬಿಡಿ ಬೇಕಾದರೆ. ಈಗಂತೂ ನಂಗೆ ಆ ಜಂಜಾಟವೇ ಬೇಡ' ಅಂತೀನಿ.
ನಿರ್ಲಿಪ್ತ
ಇವರು ಊರಲ್ಲಿದ್ದಾಗ ನಾವಿವರನ್ನು ನೋಡೋದು ಬೆಳಿಗ್ಗೆ ೫.೩೦ ಗಂಟೆಗೆ ಕಾಫಿ, ಟೀ ಕುಡಿಯೋದೇ ಇಲ್ಲದಿದ್ದರೂ ಕಾಣಿಸ್ತಾರೆ. ಮಧ್ಯಾಹ್ನ ೧.೩೦ ಗಂಟೆಗೆ ಊಟಕ್ಕೆಂತ ಮಹಡಿಯಿಂದ ಇಳಿದು ಬರ್ತಾರೆ. ಒಂದು ಚಪಾತಿ, ಒಂದು ಬೇಯಿಸಿದ ಪಲ್ಯ, ಒಂದು ಹಸಿ ಪಲ್ಯ, ಹಣ್ಣು ತಿಂತಾರೆ ಸ್ವಲ್ಪ ಹಾಲು ಕುಡೀತಾರ. ತಿರುಗಿ ರಾತ್ರಿ ೭ ಗಂಟೆಗೇ ಮತ್ತೆ ಇವರ ಮುಖದರ್ಶನ. ರಾಗಿ ಮುದ್ದೆ ತಿನ್ನುತ್ತಿರುವಾಗ, ಆಗ ಎಷ್ಟು ಮಾತಾಡ್ತೀವೋ ಅಷ್ಟೆ. ಯಾವುದಾದರೂ ಬರವಣಿಗೆ ಶುರು ಮಾಡಿದ್ದರಂತೂ 'ಹಾಂ... ಹೂಂ....' ಇಷ್ಟೇ ಕೇಳಿದ್ದಕ್ಕೆಲ್ಲ. ಈಗ ಇವರಿಗೂ 60 ವರ್ಷವಾಯಿತು. ಬೆನ್ನುನೋವಿಂದ ಒದ್ದಾಡ್ತಿದಾರೆ ಅಂತಲೂ ಗೊತ್ತು ದೆಹಲಿ ಬಿಡುವಾಗಲೇ ಪೈಲ್ಸ್ ಕಂಪ್ಲೇಂಟ್ ಶುರುವಾಗಿತ್ತು. ಆದ್ದರಿಂದ ಆಹಾರ ಸೇವನೆಯಲ್ಲಿ ತುಂಬಾ ನಿಯಂತ್ರಣ ಇಟ್ಟೋತಾರೆ. ಬರೆಯುವಾಗ ೨-೩ ಬಟ್ಟಲು ಹಾಲನ್ನು ಹೆಚ್ಚಾಗಿ ಕುಡೀತಾರೆ. ಬೇರೆ ಯಾವ ದುರಭ್ಯಾಸವೂ ಇಲ್ಲ, ಕುಡಿಯೊಲ್ವ ಸಿಗರೇಟು ಸೇದೊಲ್ಲ. ನಡುರಾತ್ರಿಯಾದರೂ ಇವರು ಬರೀತಾ ಕೂತಿದಾರೆ ಅಂತ ಗೊತ್ತಾದರೂ ನಾನೇನೂ ಮಾಡಲಾರೆ. 'ಪರ್ವ' ಬರೆಯುವಾಗಲಂತೂ ಗೊತ್ತಿಲ್ಲ ಇವರ ಆರೋಗ್ಯದ ಸ್ಥಿತಿ ಏನಾಗಿತ್ತು ಅಂತ. ಆಗ ಮಾತ್ರ ನಾವಿಬ್ಬರೇ ಟೂರ್ ಹೋಗಿದ್ದೆವು. ಕಾದಂಬರಿ ರೂಪಗೊಳ್ಳಲು ೪ ವರ್ಷಗಳು ಹಿಡಿದವು. ತೀರಾ ಸುಸ್ತಾಗಿಬಿಟ್ಟಿದ್ದರು. ಮಾನಸಿಕವಾಗಿ ಕೂಡಾ... ಹುಬ್ಬಳ್ಳಿಯಲ್ಲಿ ಡಾಕ್ಟರ ಹತ್ತಿರ ಹೋದಾಗ ಅವರೆಂದರು. 'ನಿಮ್ಮ ತಲೇಲಿ ಇರುವುದನ್ನು ಬರೆದು ಬಿಡಿ ಆಗಲೇ ನೀವು ಸುಧಾರಿಸಿಕೊಳ್ಳೋದು ಅಂತ. ಮೈಸೂರಿಗೆ ಬಂದು ಕೂತು ಸತತವಾಗಿ ಅದನ್ನು ಬರೆದು ಪೂರೈಸಿದಾಗಲೇ ಇವರಿಗೆ ನೆಮ್ಮದಿಯಾದದ್ದು.
'ಇವರು ಬರೆಯಲಿರೋ ಕಾದಂಬರಿನ ನನ್ನ ಹತ್ತಿರವೇನೂ ಎಂದು ಚರ್ಚಿಸಿಲ್ಲ. ಯಾವ ಸಾಹಿತಿಗಳ ಜತೇನೂ ಹೆಚ್ಚಾಗಿ ಸೇರೊಲ್ಲ ಏಕೆಂದರೆ ಸಾಹಿತಿಗಳ ಜತೆ ಸೇರಿದರೆ ಬರೀ ಸಾಹಿತ್ಯಾನೇ ಚರ್ಚಿಸುತ್ತಾ ಇರಬೇಕಾಗುತ್ತೆ ಬೇರೆ ಚರ್ಚೆಗೆ ಆಸ್ಪದವಿರೊಲ್ಲ' ಅಂತ. ಆದರೆ ಕೆಲವು ಹೊರಗಿನ ಜನರನ್ನು ಒಮ್ಮೊಮ್ಮೆ ಪದೇ ಪದೇ ಭೇಟಿಯಾಗ್ತಾರೆ. ಅವರ ಜತೆ ಮಾತ್ರ ಹೆಚ್ಚಿಗೆ ಮಾತಾಡ್ತಾರೆ. ಅವರ ಪೂರ್ವಿಕರು, ವಾತಾವರಣ. ಇತಿಹಾಸ ಇವುಗಳ ಬಗ್ಗೆ ಒಮ್ಮೊಮ್ಮೆ ನನ್ನನ್ನೆ ಎಕ್ಸ್‌ಪೆರಿಮೆಂಟ್ ಆಗಿ ಇಡ್ಕೊತಾರೇನೋ ಅಂತ ಅನ್ನಿಸಿಬಿಡುತ್ತೆ ಹೀಗೆಲ್ಲ ಬೇರೆಯವರ ಜತೆ ಇವರು ಮಾತನಾಡುತ್ತಿದ್ದಾಗ ಹಿಂದೆಲ್ಲ ನಾನೂ ಮಧ್ಯೆ ಬಾಯಿ ಹಾಕಿ ಬೈಸಿಕೊಂಡಿದ್ದೆ. ಇವರು ಯಾವುದೋ ಪುಸ್ತಕದ ಮಾಹಿತಿಗಾಗಿ ಅವರ ಜತೆ ಮಾತಾಡ್ತಿದಾರೆ ಅಂತ ನಂಗೆ ಗೊತ್ತಾಗ್ತಾ ಇರಲಿಲ್ಲ. ಈಗ ಅರ್ಥವಾಗಿದೆ. ಅನೇಕ ಸಲ ಇವರು ಟೂರ್ ಹೋದಾಗ ಎಲ್ಲಿದ್ದಾರೆ. ಯಾವಾಗ ಬರ್ತಾರೆ ಅಂತಲೂ ಗೊತ್ತಿರೊಲ್ಲ 'ಬದುಕಿದ್ದರೆ ಮನೆಗೆ ಬರ್ತೀನಿ. ನಾನು ಸತ್ತರೆ ಹೇಗೋ ವಿಷಯ ಗೊತ್ತಾಗುತ್ತೆ' ಅಂತ ಉತ್ತರ ಕೊಟ್ಟರೆ ನಾನೇನ್ಮಾಡಲಿ ಹೇಳಿ ? ಒಟ್ಟಿನಲ್ಲಿ ಅವರು ಕೆಟ್ಟ ಕೆಲಸ ಮಾಡ್ತಿಲ್ಲ ಅನ್ನೋ ನಂಬಿಕೆ ನನಗಿದೆ. ಪುಸ್ತಕ ಬರೆದ ಮೇಲೆ ಹಸ್ತಪ್ರತಿ ತೋರಿಸ್ತಾರೆ. ಅಭಿಪ್ರಾಯ ಕೇಳ್ತಾರೆ. ಕೆಲವೊಮ್ಮೆ ತಿದ್ದಿಕೊಂಡಿರುವುದೂ ಉಂಟು. ಆದರೆ ಎಂ.ಎಸ್.ಕೆ. ಪ್ರಭು, ಪ್ರೊ.ಬಾಲಸುಬ್ರಹ್ಮಣ್ಯಂ ಇವರಿಬ್ಬರ ಮುಂದಂತೂ ಯಾವುದೇ ಕೃತಿಯನ್ನು ಪ್ರಕಟನೆಗೆ ಮೊದಲೇ ವಾಚನ ಮಾಡಲೇ ಬೇಕು. ಈಗ ಶಂಕರಾಚಾರ್ಯರ ಬಗ್ಗೆ ಬರಿತೀನಿ ಅಂತ ಯಾವಾಗಲೋ ಹೇಳಿದ್ದರು. ತಮ್ಮ ಆತ್ಮಕಥನವನ್ನು ಪ್ರಾರಂಭಿಸಬೇಕು. ತಮ್ಮ ತಾಯಿ ಸತ್ತಮೇಲೆ ಬಂದ ಕಷ್ಟಗಳು, ಊರಿಗೆ ಪ್ಲೇಗ್ ಬಂದಿದ್ದಾಗ, ಬರ ಬಂದಿದ್ದಾಗ ನಡೆದ ಘಟನೆಗಳು. ಇವರಜ್ಜಿ ೭-೮ ರೊಟ್ಟಿಗಳನ್ನು ಒಟ್ಟಿಗೆ ಮಾಡಿ ಬಡುವಿನ ಮೇಲಿಟ್ಟಾಗ ಒಣಗಿದ್ದನ್ನು ಎಷ್ಟೋ ದಿನಗಳ ಕಾಲ ಸ್ವಲ್ಪಸ್ವಲ್ಪವೇ ತಿನ್ನಬೇಕಾದಾಗ ಅವನ್ನು ಚೌಕದಲ್ಲಿ ಕಟ್ಟಿ ನೀರಲ್ಲಿ ನೆನೆಸಿಟ್ಟು ಮೆತ್ತಗಾದ ಮೇಲೆ ಅವನ್ನು ತಿಂತಾ ಇದ್ದದ್ದು, ಮಹಾರಾಜಾ ಕಾಲೇಜಿನ ಕಲ್ಲು ಬೆಂಚಿನ ಮೇಲೆ ಮಲಗಿ ರಾತ್ರಿಗಳನ್ನು ಕಳೆದದ್ದು, ಬಿ.ಎ. ಆನರ್‌ನಲ್ಲಿದ್ದಾಗ ದಿನವೂ ೮ ಆಣೆ ಕೊಟ್ಟು ೭- ೮ ಇಡ್ಲಿಗಳನ್ನು ತಿಂದು ದಿನಗಳನ್ನು ಕಳೆದದ್ದು ಇವೆಲ್ಲವೂ ಅದರಲ್ಲಿ ಬರಬಹುದು. ಈಗ 'ಸಾಕ್ಷಿ' ಅಥವಾ 'ವಂಶವೃಕ್ಷ' ಇವೆರಡರಲ್ಲಿ ಒಂದು ಇಂಗ್ಲೀಷ್ ತರ್ಜುಮೆಯಾಗ್ತಿದೆ. ಅದರ ಸಂಬಂಧವಾಗಿಯೇ ಈಗ ಲಂಡನ್‌ನಲ್ಲಿದ್ದಾರೆ.
ಕಾದಂಬರಿ ಬರೆಯೋಕೆ ಮುಂಚೆ ಇವರ ಮಾನಸಿಕ ಸ್ಥಿತಿ ತುಂಬಾ ಗಂಭೀರವಾಗಿದ್ದರೂ ಅದು ಹೊರಬಂದ ಮೇಲೆ ಕೀರ್ತಿ ಅಪಕೀರ್ತಿಗಳ ಬಗ್ಗೆ ಎಂದೂ ಯೋಚನೆ ಮಾಡಿದವರಲ್ಲ. ಯಾರ ಜತೆ ಮನಸ್ತಾಪಾನೂ ಇಲ್ಲ ಅತಿಯಾದ ಸ್ನೇಹವೂ ಇಲ್ಲ' ಸ್ವತಂತ್ರ ವ್ಯಕ್ತಿ 'ಭೈರಪ್ಪನವರು ಭಾರೀ ಜಿಪುಣದ ಅವರ ಮನೆಗೆ ಹೋದರೆ ಏನೂ ಸಿಗೊಲ್ಲ' ಅನ್ನೋರಿದ್ದಾರೆ. ಆದರೆ ಕೈಲಾಗದವರಿಗೆ, ಕಷ್ಟದಲ್ಲಿದ್ದವರಿಗೆ, ವಿದ್ಯಾರ್ಥಿಗಳಿಗೆ ಕೊಡುಗೈನಿಂದ ದಾನ ಮಾಡ್ತಾರೆ: ಬಿಡುಗೈನಿಂದ ಸಹಾಯ ಮಾಡ್ತಾರೆ. ಅನ್ನೋದು ನಂಗೆ ಗೊತ್ತಿದೆ. ತಮ್ಮ ಕೃತಿಯ ಬಗೆಗಾಗಲಿ, ವೈಯಕ್ತಿಕ ನಿಂದೆಯ ಬಗ್ಗೆಯಾಗಲಿ ತಲೆ ಕೆಡಿಸಿಕೊಂಡವರಲ್ಲ. ಯಾರ್ಯಾರೋ ಏನೇನೋ ಹೆಸರಿಡ್ತಾರೆ. ರಾಜಕೀಯ ಪಕ್ಷಗಳ ಜತೆ ಇವರ ಹೆಸರನ್ನು ಸೇರಿಸ್ತಾರೆ. ಆದರೆ ಇವರದ್ದು ಸಾಮಾನ್ಯವಾಗಿ ಶಾಂತ ಸ್ವಭಾವವೇ, ನಿರ್ಲಿಪ್ತವಾಗಿ ತಮಗೆ ಸರಿ ಕಂಡಂಥ ನಿಲುವೇ !'.
ಕೃಪೆ: ಮಯೂರ


