ಹಳ್ಳಿಗಳು ವೃದ್ಧಾಶ್ರಮಗಳಾಗ್ತಿವೆ

ಹಳ್ಳಿಗಳು ವೃದ್ಧಾಶ್ರಮಗಳಾಗ್ತಿವೆ

ಹಳ್ಳಿಗಳು ವೃದ್ಧಾಶ್ರಮಗಳಾಗ್ತಿವೆ

ಅದೊಂದು ಕಾಲವಿತ್ತು.. ಮನೆ ತುಂಬಾ ಜನ.. ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅವ್ರ ಮಕ್ಳು, ಅಪ್ಪ ಅಮ್ಮ ಅಣ್ಣ ತಂಗಿ, ಹೇಳ್ತಾ ಹೋದ್ರೆ ಈ ಸಾಲು ಮುಗಿಯೋದೆ ಇಲ್ಲ.. ಸಣ್ಣ ಪುಟ್ಟ ಜಗ್ಳದ ನಡುವೆ ಮನೇಲಿ ಅದೆಷ್ಟು ಖುಷಿ. ಪ್ರತಿ ದಿನ ಮನೆ ಹಬ್ಬ ಇದ್ದಂಗೆ ಇರೋದು. ಯಾವತ್ತಿಗೂ ಒಂಟಿ ಅನ್ನಿಸ್ತಾನೆ ಇರ್ಲಿಲ್ಲ. ಇದು ಮನೆ ಕಥೆ ಆದ್ರೆ ನಮ್ ಹಳ್ಳಿಲೂ ಹಾಗೆ, ಊರ್ ತುಂಬಾ ಜನ... ಊರು ಯಾವಾಗ್ಲೂ ಗಿಜಿಗಿಜಿ ಅನ್ನೋದು.. ಹುಟ್ಟಿದೂರಲ್ಲೇ ಹೇಗೋ ಜನ ಬದುಕು ಕಟ್ಕೊಂಡಿದ್ರು. ನಾಟಿ, ಕೋಯ್ಲು, ಬಂತಂದ್ರೆ ಮತ್ತೊಂದು ರೀತಿ ಹಬ್ಬ... ಹಾಗಂತ ಜಗ್ಳ, ಗಲಾಟೆ ಇಲ್ಲ ಅಂತಿಲ್ಲ.. ಅದೂ ಆಗೋದು.. ಆದ್ರೆ ಪೊಲೀಸೂ ಕೋರ್ಟ್ ಅಂತಾ ಹೋಗ್ತಿದ್ದವ್ರು ಕಡ್ಮೆ ಬಿಡಿ.. ಒಟ್ನಲ್ಲಿ ಊರ್ ತುಂಬಾ ಜನ ಅಂತೂ ಇದ್ರೂ..  

ಆದ್ರೆ ಈಗ...! 

ಒಮ್ಮೆ ನಿಮ್ಮ ನಿಮ್ಮ ಹಳ್ಳಿನಾ ಸೂಕ್ಷ್ಮವಾಗಿ ಗಮನಿಸಿ. ಬಹುತೇಕ ಹಳ್ಳಿಗಳು ವೃದ್ಧಾಶ್ರಮ ಆಗಿವೆ. ಮಕ್ಳು, ಮೊಮ್ಮಕ್ಳು ಆಗ್ ಮನೆಗ್ ಬರ್ತಾರೆ ಈಗ್ ಮನೆಗ್ ಬರ್ತಾರೆ ಅಂತಾ ದಾರಿ ಕಾಯ್ತಿರೋ ಹಣ್ ಹಣ್ ಮುದ್ಕ ಮುದ್ಕಿಯರು ಮಾತ್ರ ಕಾಣಿಸ್ತಾರೆ. ಹಾಗಂತ ಅವ್ರ್ಯಾರು ಬೀದಿಗ್ ಬಂದಿಲ್ಲ. ತಿಂಗ್ಳಿಗೊಮ್ಮೆ ಮಕ್ಳು ದುಡ್ ಕಳಿಸ್ತಾರೆ. ಆದ್ರೆ ಮಕ್ಕಳ ಪ್ರೀತಿ, ಬಿಸಿ ಅಪ್ಪುಗೆ ಅದ್ಯಾವ್ದೂ ಇಲ್ಲ. ಮಕ್ಳು, ಮೊಮ್ಮಕ್ಳು ಎಲ್ರೂ, ಪೇಟೆ ಸೇರಿ ಆಗಿದೆ. ಮೊಮ್ಮಕ್ಳಿಗಂತೂ ಸ್ವಂತ ಅಜ್ಜ ಅಜ್ಜಿನೇ ಪರಿಚಯ ಇಲ್ಲ.. ಇದು ನನ್ನೂರು ಅನ್ನೋ  ಬಾಂಧವ್ಯಾನೂ ಇಲ್ಲ.. ಆ ಹಳ್ಳಿ, ಸಂಸ್ಕೃತಿ , ಆಚರಣೆ ಇದ್ಯಾವುದರ ಪರಿಚಯಾನೂ ಇಲ್ಲ. ಇನ್ನೊಂದಿಷ್ಟು ಮಕ್ಳಿಗಂತೂ ದೊಡ್ಡಮ್ಮ, ದೊಡ್ಡಪ್ಪ, ಚಿಕ್ಕಪ್ಪ, ಚಿಕ್ಕಮ್ಮ ಅನ್ನೋ ಸಂಬಂಧಾನ ಪರಿಚಯಾನೇ ಗೊತ್ತಿಲ್ಲ. ಅವ್ರ ಮಕ್ಳಿಗೆ ಇವ್ರ್ ಗೊತ್ತಿಲ್ಲ, ಇವ್ರ ಮಕ್ಳಿಗೆ ಅವ್ರ್ ಗೊತ್ತಿಲ್ಲ. ಊರ್ ಬದಿ ಸಿಗೋ ಮಾವಿನ ಹಣ್ಣು, ನೇರಳೆ ಹಣ್ಣು, ಸೀಬೆ ಹಣ್ಣು, ಆರೋಗ್ಯಕ್ಕೆ ಹಾನಿಕರ ಅಂದ್ಕೊಂಡ ಮಕ್ಳೇ ಜಾಸ್ತಿ. ಹಳ್ಳಿ ಬಿಸಿಲಲ್ಲಿ ಬೆಂದು ಗೊತ್ತಿಲ್ಲ, ಮಳೇಲಿ ನೆಂದ್ರೆ ಆಗಲ್ಲ, ಚಳಿ ಅಂದ್ರಂತೂ ಬೇಡ್ವೇ ಬೇಡ ಅಂತಾವೆ ಮಕ್ಳು. ಹಳ್ಳಿಲಿ ಹಸು, ಕುರಿ ನೋಡಿದ್ರೆ, ಓಹ್ ಫೋಟೋದಲ್ಲಿ ನೋಡ್ತಿದ್ವಲ್ಲ ಅವೇ ಇವು ಅನ್ನೋದ್ ಬಿಟ್ರೆ, ಹಸು, ಕುರಿಯಿಂದ ಹಾಲ್ ಹಿಂಡ್ತೀವಿ ಅನ್ನೋದು ತಿಳ್ದಿಲ್ಲ. ಆತಂಕ ಅಂದ್ರೆ ಇನ್ನೊಂದು ಎರಡು ಜನರೇಶನ್ ಪಾಸ್ ಆದ್ರೆ ಹಳ್ಳಿಗಳ ಕಥೆ ಗೊತ್ತಿಲ್ಲ.. !

ಯಾಕೆ ಹೀಗಾಯ್ತು ಅಂತೀರಾ? ಒಂದ್ ಟೈಮ್‌ನಲ್ಲಿ ಜನ ಎಲ್ಲಿದ್ದಾರೋ ಅಲ್ಲಲ್ಲೇ ಹೇಗೋ ಕಷ್ಟಪಟ್ಟು ಬದುಕು ಕಟ್ಕೊಂಡಿದ್ರು. ಸಣ್ಣಸಣ್ಣದ್ರಲ್ಲೇ ಮನುಷ್ಯನಿಗೆ ಖುಷಿ ಇತ್ತು. ಬರ್ತಾ ಬರ್ತಾ ಒಂದಷ್ಟು ನಗರಗಳು ಎಲ್ರನ್ನೂ ಅಟ್ರ್ಯಾಕ್ಟ್ ಮಾಡೋಕೆ ಶುರುಮಾಡ್ತು. ಅದಕ್ಕೆ ತಕ್ಕ ಹಾಗೆ, ಹಳ್ಳಿಲಿದ್ದ ಗುಡಿ‌ ಕೈಗಾರಿಕೆ ಎಲ್ಲಾ ಮಾಯ ಆದ್ರೆ, ಇತ್ತ ಕೃಷಿಗೂ ಬೇಕಾದ ಪ್ರೋತ್ಸಾಹ ಸಿಗ್ಲಿಲ್ಲ. ಸಹಜವಾಗೇ ಒಂದ್ ಕೈ ನೊಡೇಬಿಡೋಣ ಅಂತಾ ಹಳ್ಳಿ ಬಿಟ್ಟು ಸಿಟಿ ಕಡೆ ಬರೋಕೆ ಶುರುಮಾಡಿದ್ರು. ಬರ್ತಾ ಬರ್ತಾ ಆ ಸಂಖ್ಯೆ ಜಾಸ್ತಿ ಆಯ್ತು. ದುಡಿಮೆ, ಸಾಧಿಸೋ ಕನಸು, ನಗರದ ಆಕರ್ಷಣೆ, ಹೀಗೆ ಯಾವುದ್ಯಾವ್ದೋ ಕಾರಣಕ್ಕೆ ಬರ್ತಾನೆ ಹೋದ್ರು. ಒಮ್ಮೆ ಬಂದವ್ರು ವಾಪಾಸ್ ಹೋಗ್ಲಿಲ್ಲ. ಇಲ್ಲೆ ಬದುಕು ಕಟ್ಕೊಳೋಕೆ ಶುರುಮಾಡಿದ್ರು. ಈ ಜೀವ್ನಾನೇ ಚಂದ ಅನ್ಸೋಕೆ ಶುರುವಾಯ್ತು... ಪರಿಣಾಮ ಬೆಂಗಳೂರಿನಂತಹ ನಗರದ ಜನಸಂಖ್ಯೆ ಕೋಟಿ ದಾಟಿದ್ರೆ, ಹಳ್ಳೆಗಳಲ್ಲಾ ಹಂತಹಂತವಾಗಿ ಖಾಲಿ ಆಗೋಕೆ ಶುರುವಾದ್ವು. ಒಂದಷ್ಟ್ ಮಂದಿಗೆ ಊರಲ್ಲೇ ಬದುಕು ಸಾಗಿಸ್ಬೇಕು ಅನ್ನೋ ಆಸೇ ಏನೋ ಇದೆ. ಆದ್ರೆ ನಾವೆಲ್ಲಾ ಹೇಗಾಗಿದ್ದೀವಿ ಅಂದ್ರೇ ಹುಟ್ಟೂರಲ್ಲೇ ಏನಾದ್ರು ಮಾಡ್ತೀವಿ ಅಂದ್ರೆ ಅವ್ನು ವೇಸ್ಟ್, ಸಿಟಿಲಿದ್ದೂ ಹೋಟೆಲ್‌ನಲ್ಲಿ ಲೋಟ ತೊಳಿತಿದ್ರೂ ಗ್ರೇಟ್ ಅನ್ನೋ ಮನಸ್ಥಿಗೆ ಬಂದ್‌ಬಿಟ್ಟಿದಿವಿ. ಇದ್ರ ಪರಿಣಾಮಾನೇ ಇವತ್ತು ಹಳ್ಳಿಗಳೆಲ್ಲಾ ವೃದ್ಧಾಶ್ರಮ ಆಗ್ತಿವೆ. ಎಷ್ಟೋ ಹಳ್ಳಿಗಳಲಂತೂ ಹೆಸರಿಗೆ ಊರಿದೆ ಆದ್ರೆ ಹುಡ್ಕಿದ್ರೂ ನಾಲ್ಕ್ ಜನ ಸಿಗ್ದಿದ್ ಪರಿಸ್ಥಿತಿ.

ನಿಮ್ಗೂ ಹೀಗೆ ಅನ್ಸತ್ತಾ?

- ಸುಬ್ರಹ್ಮಣ್ಯ ಎಸ್ ಹಂಡಿಗೆ