ತಂಬಾಕು ವಿಶ್ವವ್ಯಾಪಿಯಾಗಲು ಗ್ರಹಣಗಳೇ ಕಾರಣವಾದವು!
ನಮ್ಮ ಜಗತ್ತಿನಲ್ಲಿ ಐದು ಪ್ರಾಚೀನ ನಾಗರಿಕತೆಗಳು ಸ್ವತಂತ್ರವಾಗಿ ಉದಯಿಸಿದವು. ಮೆಸೊಪೊಟೋಮಿಯನ್, ಈಜಿಪ್ಷಿಯನ್, ಸಿಂಧು-ಸರಸ್ವತಿ, ಪ್ರಾಚೀನ ಚೀನಾ ಮತ್ತು ಆಂಡಿಯನ್ ನಾಗರಿಕತೆಗಳು. ಇವನ್ನು ’ನಾಗರಿಕತೆಯ ತೊಟ್ಟಿಲು’ ಎಂದು ಕರೆಯಬಹುದು. ಈ ಮನುಕುಲಗಳು ಇತರ ಸಂಸ್ಕೃತಿಗಳ ಸೋಂಕಿಲ್ಲದೆ ಸ್ವತಂತ್ರವಾಗಿ ಬೆಳೆದವು ಎನ್ನಬಹುದು. ಆಂಡಿಯನ್ ನಾಗರಿಕತೆಯು ದಕ್ಷಿಣ ಅಮೆರಿಕದ ಆಂಡೀಸ್ ಪರ್ವತ ಶ್ರೇಣಿಯಲ್ಲಿ ಬಾಳಿ ಬದುಕಿತು. ಇಂದಿನ ಕೊಲಂಬಿಯ, ಯೂಕಡರ್, ಪೆರು, ಚಿಲಿ ಮತ್ತು ಅರ್ಜೆಂಟೀನದ ಕೆಲವು ಭಾಗಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಇದು ಸುಮಾರು ೭೦೦೦ ಕಿಮೀ ಉದ್ದದ ಪ್ರದೇಶ. ಕ್ರಿ.ಪೂ.೧೫,೦೦೦ ವರ್ಷಗಳು. ಮನುಷ್ಯರು ಈ ಪ್ರದೇಶದಲ್ಲಿ ಬೇಟೆಯಾಡುತ್ತಾ, ಹಣ್ಣು ಹಂಪಲುಗಳನ್ನು ಸಂಗ್ರಹಿಸುತ್ತಾ ಬದುಕುತ್ತಿದ್ದರು. ಕಾಲಕ್ರಮೇಣ ಇವರು ತಮ್ಮದೇ ಆದ ಸಂಸ್ಕೃತಿಗಳನ್ನು ಕಟ್ಟಲಾರಂಭಿಸಿದರು. ಹಾಗಾಗಿ ಇಲ್ಲಿ ಹಲವು ಸಂಸ್ಕೃತಿಗಳು ಹುಟ್ಟಿ, ಬೆಳೆದು ಅಸ್ತಮಿಸಿದವು. ಅವುಗಳಲ್ಲಿ ಮುಖ್ಯವಾದವು ಕಾರಲ್, ವಾಲ್ಡೀವಿಯ, ಚಾವಿನ್, ನಾಜ಼್ಕ, ಮೋಷೆ, ಚಾಚಾಪೋಯಾಸ್, ವಾತಿ, ತಿವನಾಕು ಮತ್ತು ಚೀಮು. ಕ್ರಿ.ಶ.೧೧೫೧-ಕ್ರಿ.ಶ.೧೪೭೭ರ ನಡುವೆ ’ಅಯಮಾರ ಸಾಮ್ರಾಜ್ಯ’ವು ಆರಂಭವಾಯಿತು. ಇದರ ನಂತರ ವಿಶ್ವವಿಖ್ಯಾತ ’ಇಂಕಾ ಸಾಮ್ರಾಜ್ಯ’ವು ಸ್ಥಾಪನೆಯಾಯಿತು. ಇದು ಕ್ರಿ.ಶ.೧೪೩೮-ಕ್ರಿ.ಶ.೧೫೩೩ರವರೆಗೆ ಮುಂದುವರೆಯಿತು. ಯೂರೋಪಿನ ಸ್ಪ್ಯಾನಿಶ್ ನಾವಿಕರು ಆಕ್ರಮಣಕಾರರಾಗಿ ಈ ಸಂಸ್ಕೃತಿಯನ್ನು ನಾಶಪಡಿಸಿದ್ದು ಮರೆಯಲಾಗದ ರಕ್ತಸಿಕ್ತ ಇತಿಹಾಸವಾಗಿದೆ.
ಇಂಕಾ ಸಾಮ್ರಾಜ್ಯದ ಜನರು ಮುಗ್ದರು ಹಾಗೂ ಪ್ರಾಮಾಣಿಕರು. ಕೃಷಿ ಮತ್ತು ಹೈನುಗಾರಿಕೆಯು ಇವರ ಮುಖ್ಯ ಕಸುಬಾಗಿತ್ತು. ಜೋಳ, ಆಲೂಗಡ್ಡೆ, ಕಿನೋವ, ಟೊಮಾಟೊ, ದಪ್ಪಮೆಣಸಿನಕಾಯಿ, ಹತ್ತಿ, ಕೊಕೊ, ಕೋಕ, ತಂಬಾಕು, ಅನಾನಸು, ಕಡೆಲೆಕಾಯಿಬೀಜ ಹಾಗೂ ನಾನಾ ರೀತಿಯ ಅವರೆಗಳನ್ನು ಬೆಳೆಯುತ್ತಿದ್ದರು. ಬಿಜಿಎಲ್ ಸ್ವಾಮಿಯವರು ಬರೆದ ’ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ’ ಎನ್ನುವ ಪುಸ್ತಕದಲ್ಲಿ ಮೆಕ್ಕೆಜೋಳ, ಆಲೂಗಡ್ಡೆ, ಟೊಮ್ಯಾಟೊ, ಮೆಣಸಿನಕಾಯಿ, ತಂಬಾಕು, ಅನಾನಸು, ಕಡೆಲೆಕಾಯಿಬೀಜ, ಕೊಕೊ ಮುಂತಾದವು ಹೇಗೆ ದಕ್ಷಿಣ ಅಮೆರಿಕದಿಂದ ಭಾರತಕ್ಕೆ ಬಂದವು ಎಂಬುದರ ಬಗ್ಗೆ ಸೊಗಸಾಗಿ ಬರೆದಿದ್ದಾರೆ. ಕನ್ನಡಿಗರು ಓದಲೇಬೆಕಾದಂತಹ ಶ್ರೇಷ್ಠ ಕೃತಿಗಳಲ್ಲಿ ಇದೊಂದಾಗಿದೆ.
ಇಂಕಾ ಸಾಮ್ರಾಜ್ಯದವರು ಬಹುದೇವತಾ ಆರಾಧನೆಯನ್ನು ಮಾಡುತ್ತಿದ್ದರು. ’ವಿರಾಕೋಚ’ ಮೂರು ಲೋಕಗಳಲ್ಲಿ ಸೃಜಿಸಿದ. ’ಅಪು ಇಲ್ಲಪು’ ಮಳೆದೇವತೆ, ’ಇಲ್ಲಪ’ ಗುಡುಗು ಸಿಡಿಲಿನ ದೇವತೆ, ’ಇಂತಿ’ ಸೂರ್ಯದೇವ ಹಾಗೂ ’ಮಮಾ ಕ್ವಿಲ್ಲ’ ಚಂದ್ರ ದೇವತೆ. ಈಕೆಯು ಸೂರ್ಯನ ಮಡದಿ. ಹೀಗೆ ಇವರು ಪ್ರಕೃತಿಯ ಒಂದೊಂದು ಆಯಾಮಕ್ಕೂ ಒಂದೊಂದು ದೈವವು ಕಾರಣ ಎಂದು ನಂಬಿದ್ದರು. ದೇವರು ಹಾಗೂ ಮನುಷ್ಯರ ನಡುವೆ ’ಶಮನ್’ ಅಥವ ’ಶಾಮನ್’ ಎಂದು ಹೆಸರಾಗಿದ್ದ ಅಭಿಚಾರಿ ವೈದ್ಯರು ಮಧ್ಯವರ್ತಿಗಳಾಗಿದ್ದರು. ನಮ್ಮ ಪುರೋಹಿತರು ಇದ್ದಹಾಗೆ. ಮಾಚು ಪಿಚ್ಚುವಿನಲ್ಲಿದ್ದ ಅಭಿಚಾರಿಗಳಿಗೆ ಮೂಲಭೂತ ಖಗೋಳ ವಿಜ್ಞಾನದ ಬಗ್ಗೆ ಮಾಹಿತಿಯಿತ್ತು. ಹಾಗಾಗಿ ಅವರು ಋತು ಬದಲಾವಣೆಯನ್ನು ನಿಖರವಾಗಿ ಹೇಳುತ್ತಿದ್ದರು. ಹಾಗೆಯೇ ಗ್ರಹಣಗಳು ಸಂಭವಿಸುವುದನ್ನು ಮುಂಚಿತವಾಗಿ ತಿಳಿಯಬಲ್ಲವರಾಗಿದ್ದರು.
ಇಂಕಾ ಸಂಸ್ಕೃತಿಯಲ್ಲಿ ಗ್ರಹಣಗಳು ಬಹಳ ಮುಖ್ಯವಾಗಿದ್ದವು. ಇವರ ಸೂರ್ಯ ದೇವರಾ ಇಂತಿಗೆ ತುಂಬಾ ಬೇಸರವಾದರೆ ಅಥವ ಕೋಪಗೊಂಡರೆ ಅವನು ಮರೆಯಾಗಿಬಿಡುತ್ತಿದ್ದ. ಸೂರ್ಯನು ಅವರ ಮುಖ್ಯ ದೇವಾನುದೇವತೆಗಳಲ್ಲಿ ಒಬ್ಬನಾಗಿದ್ದ. ಇಂತಹ ಶಕ್ತಿಶಾಲಿ ದೇವತೆಯು ಇದ್ದಕ್ಕಿದ್ದ ಹಾಗೆ ಮರೆಯಾದರೆ, ಬಹುಶಃ ಬಾನಿನಲ್ಲಿರುವ ಪ್ಯೂಮ ಅಥವ ಜಾಗ್ವರ್ ನಂತಹ ಹಿಂಸ್ರ ಪ್ರಾಣಿಯು ಇಂತಿಯ ಮೇಲೆ ಆಕ್ರಮಣ ಮಾಡುತ್ತಿರಬೇಕು ಎಂದು ಭಾವಿಸಿದ್ದರು. ಸೂರ್ಯನ ಹೆಂಡತಿ ಮಾಮಾ ಕ್ವಿಲ್ಲ ಎಂಬ ಚಂದ್ರ. ಚಂದ್ರಗ್ರಹಣವಾದಾಗ ಬಾನಿನಲ್ಲಿ ಒಂದು ಕದನವು ನಡೆಯುತ್ತಿದೆ ಎಂಬುದು ಅವರ ಗ್ರಹಿಕೆ. ಚಂದ್ರಗ್ರಹಣದ ಸಂದರ್ಭದಲ್ಲಿ ’ರ್‍ಯಾಲೆ ಪರಿಣಾಮ’ದ (ಬೆಳಕಿನ ಏಳು ಬಣ್ಣದಲ್ಲಿ ಕೆಂಪು ಬಣ್ಣ ಮಾತ್ರ ಚೆದುರುತ್ತದೆ) ಕಾರಣ ಚಂದ್ರನು ಕೆಂಪು ಬಣ್ಣವನ್ನು ತಳೆಯುತ್ತಾನೆ. ಇಂದಿನ ದಿನಗಳಲ್ಲಿ ನಾವು ಇದನ್ನು ’ಬ್ಲಡ್ ಮೂನ್’ ಎಂದು ಕರೆಯುತ್ತೇವೆ. ಹಾಗಿರುವಾಗ ಇಂಕಾ ಜನರು ಕೆಂಪಾಗಿರುವ ಚಂದ್ರನನ್ನು ನೋಡಿ ಮಾಮಾ ಕ್ವಿಲ್ಲ ಹಾಗೂ ಮಹಾ ಸರ್ಪದ ನಡುವೆ ನಡೆಯುವ ಹೋರಾಟ ಎಂದೇ ಭಾವಿಸಿದ್ದರು. ಈ ಹೋರಾಟದಲ್ಲಿ ತುಂಬಾ ರಕ್ತವು ಹರಿಯುತ್ತಿದ್ದ ಕಾರಣ, ಮಾಮಾ ಕ್ವಿಲ್ಲ ರಕ್ತದಲ್ಲಿ ಮುಳುಗಿದ್ದಾಳೆ ಎಂದು ಎಲ್ಲರೂ ದುಃಖ ಪಡುತ್ತಿದ್ದರು. ಆ ಸಮಯದಲ್ಲಿ ಅಭಿಜಾರಿ ವೈದ್ಯರು ಜನಸಾಮಾನ್ಯರಿಗೆ ಧೈರ್ಯವನ್ನು ನೀಡಿ ತಾವು ಆ ದುಷ್ಟ ಪ್ರಾಣಿಗಳನ್ನು ಓಡಿಸುವುದಾಗಿ ಭರವಸೆಯನ್ನು ನೀಡುತ್ತಿದ್ದರು.
ಜನರೆಲ್ಲರು ಬೆಟ್ಟದ ಮೇಲಿನ ಸಮತಳದಲ್ಲಿ ಸೇರುತ್ತಿದ್ದರು. ಅಭಿಚಾರಿಗಳು ಜೋರಾಗಿ ಮಂತ್ರವನ್ನು ಪಠಿಸುತ್ತಿದ್ದರೆ, ಜನರೆಲ್ಲ ಭೀಕರ ರಣವಾದ್ಯಗಳನ್ನು ನುಡಿಸುತ್ತಾ ದುಷ್ಟಶಕ್ತಿಗಳನ್ನು ಹೆದರಿಸಲು ಪ್ರಯತ್ನಿಸುತ್ತಿದ್ದರು. ತಾವು ಸೇವಿಸುತ್ತಿದ್ದ ಎಲ್ಲ ಆಹಾರ ಪದಾರ್ಥಗಳ ಜೊತೆಯಲ್ಲಿ ’ಚೀಚಾ’ ಎಂಬ ಮೆಕ್ಕೆಜೋಳದ ಮದ್ಯವನ್ನು ಅರ್ಪಿಸಿ ’ಲಾಮ’ ಎಂಬ ಪ್ರಾಣಿಯನ್ನು ಬಲಿಗೊಡುತ್ತಿದ್ದರು. ಈ ಅವಧಿಯಲ್ಲಿ ಮುಖ್ಯ ಪುರೋಹಿತರು ಒಂದು ವಿಧಿಯನ್ನು ನಡೆಸುತ್ತಿದ್ದರು. ಉದ್ದನೆಯ ಕೊಳವೆಗಳು. ಆ ಕೊಳವೆಯ ತುದಿಯಲ್ಲಿ ಕೆಂಡವನ್ನಿರಿಸುತ್ತಿದ್ದರು. ಅದರಲ್ಲಿ ತಂಬಾಕಿನ ಒಣ ಎಲೆಗಳನ್ನು ತುಂಬುತ್ತಿದ್ದರು. ಆಗ ಅತ್ಯಂತ ಘಾಟಿನ, ವಿಪರೀತ ಕೆಮ್ಮನ್ನು, ಕಣ್ಣಿನಲ್ಲಿ ನೀರನ್ನೂ ಹರಿಸುವ ದಟ್ಟ ಹೊಗೆ ಏಳುತ್ತಿತ್ತು. ಆ ಹೊಗೆಯನ್ನು ಗ್ರಹಣಕ್ಕೆ ಒಳಗಾದ ಸೂರ್ಯ / ಚಂದ್ರರ ಕಡೆಗೆ ಜೋರಾಗಿ ಊದುತ್ತಿದ್ದರು. ಕೆಮ್ಮುತ್ತಲೇ ಹೊಗೆಯನ್ನು ಬಾನಿನ ಕಡೆಗೆ ಹೊಗೆಯನ್ನು ಊದುವಾಗ, ಒಂದಷ್ಟು ಹೊಗೆಯು ಅವರ ಶ್ವಾಸಕೋಶಗಳಲ್ಲಿ ಸೇರುತ್ತಿತ್ತು. ಅವರ ಪಾಲಿಗೆ ತಂಬಾಕು ಒಂದು ಪವಿತ್ರವಾದ ದೈವದತ್ತ ಸಸ್ಯ. ಔಷಧೀಯ ಸಸ್ಯ. ಸೂರ್ಯಚಂದ್ರರಿಗೆ ತೊಂದರೆಯಾದಾಗ, ಈ ಉಗ್ರ ಘಾಟಿನ ಹೊಗೆಯನ್ನು ಊದಿದರೆ, ಆ ಪ್ಯೂಮ/ಜಾಗ್ವರ್/ಮಹಾಸರ್ಪ ಓಡಿಹೋಗುತ್ತದೆ ಎನ್ನುವುದು ಅವರ ನಂಬಿಕೆ. ಆದರೆ ಅವರು ಅಕಸ್ಮಾತ್ ಹೊಗೆಯನ್ನು ಸೇವಿಸಿದಾಗ, ತಂಬಾಕಿನಲ್ಲಿರುವ ನಿಕೋಟಿನ್ ಮುಂತಾದಾ ರಾಸಾಯನಿಕಗಳು ರಕ್ತದಲ್ಲಿ ಬೆರೆತು ಮಿದುಳನ್ನು ತಲುಪುತ್ತಿದ್ದವು. ಆಗ ಅವರು ಉತ್ತೇಜಿತರಾಗುತ್ತಿದ್ದರು. ಗ್ರಹಣವು ಬಿಟ್ಟ ಕೂಡಲೇ, ಅವರು ತಂಬಾಕಿನ ಪ್ರಭಾವದಲ್ಲಿ, ತಾವೆಲ್ಲರೂ ಸೇರಿ ಹೇಗೆ ಸೂರ್ಯ-ಚಂದ್ರರನ್ನು ಮುಕ್ತಗೊಳಿಸಿದೆವೆಂದು ಹೇಳುತ್ತಾ, ಈ ಗ್ರಹಣಗಳ ಭವಿಷ್ಯವನ್ನು ನುಡಿಯುತ್ತಿದ್ದರು. ತಂಬಾಕಿನ ಪ್ರಭಾವದಲ್ಲಿ ಅವರು ನುಡಿಯುತ್ತಿದ್ದ ಭವಿಷ್ಯವು ನಿಜವೇ ಆಗುತ್ತದೆ ಎಂದು ಎಲ್ಲರೂ ನಂಬಿದ್ದರು. ತಂಬಾಕಿನ ಪ್ರಭಾವದಲ್ಲಿ ಭವಿಷ್ಯವನ್ನು ನುಡಿಯುತ್ತಾ ಇಂಕಾ ಅಭಿಚಾರಿ ವೈದ್ಯರು, ಇದೇ ತಂಬಾಕು ಜಗತ್ತಿನ ಜನರನ್ನು ಮಹಾ ದಾಸ್ಯದಲ್ಲಿ ನೂಕುತ್ತದೆ ಎನ್ನುವ ಭವಿಷ್ಯವನ್ನು ಮಾತ್ರ ಹೇಳದಾದರು.
ವಿಜ್ಞಾನಿಗಳು ಇಂಕಾ ಸಾಮ್ರಾಜ್ಯದಲ್ಲಿ ಬೆಳೆಯುತ್ತಿದ್ದ ತಂಬಾಕನ್ನು ’ನಿಕೋಟಿಯಾನ ರಸ್ಟಿಕ’ ಎಂದು ಅದರ ಪ್ರಭೇದವನ್ನು ಗುರುತಿಸಿದ್ದಾರೆ. ನಾವು ಇಂದು ಬೀಡಿ ಮತ್ತು ಸಿಗರೇಟಿನಲ್ಲಿ ಬಳಸುತ್ತಿರುವ ತಂಬಾಕು ’ನಿಕೋಟಿಯಾನ ಟೊಬಾಕಮ್’ ಎಂಬ ಪ್ರಭೇದ. ನಿ. ಟೊಬಾಕಮ್ ಪ್ರಭೇದದಲ್ಲಿ ನಿಕೋಟಿನ್ ಪ್ರಮಾಣವು ೧%-೩% ಮಾತ್ರ ಇರುತ್ತದೆ. ನಿ. ರಸ್ಟಿಕದಲ್ಲಿ ನಿಕೋಟಿನ್ ಪ್ರಮಾಣವು ಸಾಮಾನ್ಯವಾಗಿ ೪%-೯% ಇರುತ್ತದೆ. ಕೆಲವು ನಮೂನೆಗಳಲ್ಲಿ ೧೮%ರಷ್ಟು ನಿಕೋಟಿನ್ ಇರುತ್ತದೆ. ಹಾಗಾಗಿ ಇಂಕಾ, ಮಾಯ (ಮಧ್ಯ ಅಮೆರಿಕ: ಇಂದಿನ ಗ್ವಾಟೆಮಾಲ, ಎಲ್ ಸಾಲ್ವಡರ್, ಬೆಲೀಜ಼್ ಮತ್ತು ಹೊಂಡುರಸ್), ಅಜ಼್ಟೆಕ್ (ಮಧ್ಯ ಅಮೆರಿಕ; ಪ್ರಧಾನವಾಗಿ ಮೆಕ್ಸಿಕೊ ದೇಶ) ಸಂಸ್ಕೃತಿಗಳಲ್ಲಿದ್ದ ಅಭಿಚಾರಿವೈದ್ಯರು ರಸ್ಟಿಕವನ್ನು ಬಳಸುತ್ತಿದ್ದರು.
ಇಂಕ ಸಂಸ್ಕೃತಿಯು ವ್ಯಾಪಿಸಿದ್ದ ಆಂಡೀಸ್ ಪರ್ವತ ಶ್ರೇಣಿಯಲ್ಲಿ ಕೋಕ ಮರಗಳು (ಎರಿಥ್ರೋಜ಼ೈಲಮ್ ಕೋಕ) ಬೆಳೆಯುತ್ತವೆ. ಇಂಕಾ ಅಭಿಚಾರಿ ವೈದ್ಯರಿಗೆ ರಸ್ಟಿಕದ ಪರಿಚಯವಿದ್ದ ಹಾಗೆ ಕೋಕ ಎಲೆಗಳ ಪರಿಚಯವು ಚೆನ್ನಾಗಿ ಇತ್ತು. ಇವೆರಡನೂ ಅವರು ತಮ್ಮ ಧಾರ್ಮಿಕ ವಿಧಿಗಳಲ್ಲಿ ಹಾಗೂ ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸುತ್ತಿದ್ದರು. ಕೋಕ ಎಲೆಗಳ ಕಷಾಯವನ್ನು ಕಷ್ಟಪಟ್ಟು ದುಡಿಯುವ ಕಾರ್ಮಿಕ ವರ್ಗಕ್ಕೆ ನೀಡುತ್ತಿದ್ದರು. ಇದು ಪ್ರಧಾನವಾಗಿ ಹಸಿವನ್ನು ಕಡಿಮೆ ಮಾಡುತ್ತಿತ್ತು ಹಾಗೂ ಚೈತನ್ಯವನ್ನು ಹೆಚ್ಚಿಸುತ್ತಿತ್ತು. ಕೋಕ ಎಲೆಯಲ್ಲಿರುವ ಅತ್ಯಲ್ಪ ಪ್ರಮಾಣದ ಕೊಕೇನ್ ಇದಕ್ಕೆ ಕಾರಣ. ಇದು ಅಭಿಚಾರಿಗಳಿಗೆ ಗೊತ್ತಿತ್ತು. ಹಾಗಾಗಿ ಆಂಡೀಸ್ ಪರ್ವತ ಶ್ರೇಣಿಗಳಲ್ಲಿ ಬೆಟ್ಟ ಹತ್ತಿ ಇಳಿಯಲು ಬೇಕಾದ ಶಕ್ತಿಯನ್ನು ಒದಗಿಸಲು ಈ ಕೋಕ ಎಲೆಗಳನ್ನು ಬಳಸುತ್ತಿದ್ದರು.
ರಾಜರು, ಶ್ರೀಮಂತರು ಹಾಗೂ ಜನಸಾಮಾನ್ಯರು ಇಂಕಾ ಅಭಿಚಾರೀ ವೈದ್ಯರ ಬಳಿಗೆ ಭವಿಷ್ಯವನ್ನು ಕೇಳಲು ಬರುತ್ತಿದ್ದರು. ಮಳೆ ಬರುವ ಬಗ್ಗೆ, ಕೃಷಿಯ ಬಗ್ಗೆ, ಹವಾಮಾನದ ಬಗ್ಗೆ, ಪ್ರಯಾಣದ ಬಗ್ಗೆ, ಯುದ್ಧದ ಬಗ್ಗೆ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದ ಹಾಗೆ ಮುಂದೇನಾಗುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲವು ಅವರಿಗೆ ಇರುತ್ತಿತ್ತು. ರಾಜನು ಭವಿಷ್ಯವನ್ನು ಕೇಳಲು ಬರುತ್ತಾನೆ ಎಂದರೆ ಅಭಿಚಾರೀವೈದ್ಯನು ಉಪವಾಸ ಇರುತ್ತಿದ್ದ. ರಾಜನು ಬಂದಾಗ, ಕೋಕ ಎಲೆಗಳ ಕಷಾಯವನ್ನು ಕುಡಿಯುತ್ತಿದ್ದ. ಆನಂತರ ರಸ್ಟಿಕ ತಂಬಾಕಿನ ಹೊಗೆಯನ್ನು ಸೇವಿಸುತ್ತಿದ್ದ. ಆಗ ನಿಕೋಟಿನ್, ಮಿದುಳಿನಲ್ಲಿದ್ದ ’ನಿಕೋಟಿನಿಕ್ ಅಸಿಟೈಲ್ ಕೋಲಿನ್ ರೆಸೆಪ್ಟಾರ್’ ಎನ್ನುವ ಗ್ರಾಹಕದ ಸಂಪರ್ಕಕ್ಕೆ ಬರುತ್ತಿತ್ತು. ಕೂಡಲೇ ಅದು ಡೋಪಮಿನ್, ನಾರ್-ಎಪಿನೆಫ್ರಿನ್ ಮುಂತಾದ ನರ-ರಾಸಾಯನಿಕಗಳ ಬಿಡುಗಡೆಯನ್ನು ಹೆಚ್ಚಿಸುತ್ತಿತ್ತು. ಮಿತ ಪ್ರಮಾಣದಲ್ಲಿ ಮಿದುಳು ಚುರುಕಾಗುತ್ತಿತ್ತು. ಸುತ್ತಮುತ್ತಲಿನ ಹಾಗೂ ಸಂದರ್ಭದ ವಿಶ್ಲೇಷಣೆಯನ್ನು ಮಾಡುವ ಶಕ್ತಿಯು ಹೆಚ್ಚುತ್ತಿತ್ತು. ಬಹುಶಃ ತಾರ್ಕಿಕವಾಗಿ ಉತ್ತರವನ್ನು ಕೊಡುತ್ತಿದ್ದ. ದೈವವು ಅಥವ ವಿಶಿಷ್ಠ ಶಕ್ತಿಗಳು ಭವಿಷ್ಯವನ್ನು ನುಡಿಸುತ್ತಿವೆ ಎಂದು ಜನರು ಭಾವಿಸುತ್ತಿದ್ದರು. ಆದರೆ ಕೋಕ ಕಷಾಯ ಹಾಗೂ ರಸ್ಟಿಕ ಹೊಗೆಯನ್ನು ಮಿತಿಮೀರಿದರೆ, ಅಭಿಚಾರೀವೈದ್ಯನು ಭ್ರಮೆಗೆ ಒಳಗಾಗುತ್ತಿದ್ದ. ತನ್ನ ಮಾತು ಮತ್ತು ನಡವಳಿಕೆಯ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದ. ವಾಂತಿಯನ್ನು ಮಾಡಿಕೊಂಡು ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿದ್ದ. ದೈವಕ್ಕೆ ಮುನಿಸು ಬಂದಿದೆಯೆಂದು ಎಲ್ಲರೂ ಭಾವಿಸುತ್ತಿದ್ದರು.
ಇಂಕಾ ಅಭಿಚಾರೀ ವೈದ್ಯರು ರಸ್ಟಿಕ ಧೂಮವನ್ನು ವೈದ್ಯಕೀಯ ವೃತ್ತಿಯಲ್ಲಿ ಬಳಸುತ್ತಿದ್ದರು. ಗಾಯಗಳ ಮೇಲೆ ರಸ್ಟಿಕ ಹೊಗೆಯನ್ನು ಊದುತ್ತಿದ್ದರು. ಗಾಯವು ಬೇಗ ಗುಣವಾಗುತ್ತದೆ ಎಂದು ನಂಬುತ್ತಿದ್ದರು. ಗರ್ಭವತಿಯರ ಉಬ್ಬಿದ ಹೊಟ್ಟೆಯ ಮೇಲೆ ರಸ್ಟಿಕ ಹೊಗೆಯನ್ನು ಊದುತ್ತಿದ್ದರು. ಹೀಗೆ ಮಾಡುವುದರಿಂದ ಗರ್ಭಕ್ಕೆ ರಕ್ಷಣೆ ದೊರೆಯುತ್ತದೆ ಹಾಗೂ ಪ್ರಸವವು ಸುಲುಭವಾಗುತ್ತದೆ ಎಂದು ಅವರ ನಂಬಿಕೆ. ಕುಡಿಯುವ ನೀರಿನ ಮೇಲೆ ಹೊಗೆಯನ್ನು ಉಗುಳುತ್ತಿದ್ದರು. ಆ ನೀರನ್ನು ’ಟಾನಿಕ್’ ನಂತೆ ಕುಡಿಯುತ್ತಿದ್ದರು. ಮೈಮೇಲೆ ಅಂಟಿಕೊಂಡು ರಕ್ತಹೀರುವ ಕೀಟಗಳನ್ನು ದೂರವಿಡಲು ತಂಬಾಕಿನ ರಸವನ್ನು ಚರ್ಮಕ್ಕೆ ಲೇಪಿಸುತ್ತಿದ್ದರು. ಹಾಗೆಯೇ ಕೀವುಗುಳ್ಳೆಯನ್ನು ಒಡೆಯಲು ತಂಬಾಕಿನ ಪೌಲ್ಟೀಸ್ ಕಟ್ಟುತ್ತಿದ್ದರು. ೧೬ನೆಯ ಶತಮಾನದಲ್ಲಿ ಓರ್ವ ಸ್ಪ್ಯಾನಿಶ್ ಸೈನಿಕನಿಗೆ ಹಾವು ಕಚ್ಚಿತು. ಆಗ ಒಬ್ಬ ಅಭಿಚಾರಿವೈದ್ಯನು ತಂಬಾಕನ್ನು ಚೆನ್ನಾಗಿ ಅಗೆದು, ಹಾವು ಕಚ್ಚಿದ ಸ್ಥಳದಲ್ಲಿ ಮೆತ್ತಿದನಂತೆ. ಅದರಿಂದ ಸೈನಿಕನು ಗುಣಮುಖನಾದನಂತೆ. ಈ ವಿವರವು ಸ್ಪ್ಯಾನಿಶ್ ಬರಹದಲ್ಲಿದೆ. ಬಹುಶಃ I ಮಾಹಿತಿಯು ಪೂರ್ಣ ಸತ್ಯವಿರಲಾರದು. ತಂಬಾಕಿಗೆ ಹಾವಿನ ವಿಷವನ್ನು ಗುಣಪಡಿಸುವ ಸಾಮರ್ಥ್ಯವಿಲ್ಲ. ಇದು ನಮಗೆ ಸ್ಪಷ್ಟವಾಗಿ ತಿಳಿದಿರುವಂತಹ ವಿಷಯ. ಬಹುಶಃ ಆ ಸೈನಿಕನನ್ನು ಕಚ್ಚಿದ ಹಾವು ವಿಷದ ಹಾವು ಅಲ್ಲದಿರಬಹುದು ಅಥವ ವಿಷದ ಹಾವೇ ಕಚ್ಚಿದ್ದರೂ ಸಹ, ಸಾಕಷ್ಟು ವಿಷವು ದೇಹದ ಒಳಗೆ ಸೇರದಿರಬಹುದು. ಇಂತಹ ಸಂದರ್ಭವನ್ನು ’ಡ್ರೈ ಬೈಟ್’ ಎಂದು ಕರೆಯುತ್ತಾರೆ. ೪%/೯%/೧೮% ಸಾಮರ್ಥ್ಯದ ತಂಬಾಕನ್ನು ಉತ್ತಮ ಕೀಟನಾಶಕವನ್ನಾಗಿ ಬಳಸಬಹುದು. ಹಾಗಾಗಿ ಅಭಿಚಾರಿವೈದ್ಯರ ವೈದ್ಯಕೀಯ ಉಪಯೋಗಗಳಲ್ಲಿ ಕೆಲವಾದರೂ ನಿಜವಾಗಿದ್ದಿರಬಹುದು.
ಕೊಲಂಬಸ್ ಹಾಗೂ ಅವನ ಜೊತೆಯ ನಾವಿಕರು ಇಂಕಾ ಸಾಮ್ರಾಜ್ಯಕ್ಕೆ ಬಂದಾಗ, ತಂಬಾಕಿನ ಬಗ್ಗೆ ಮಾರು ಹೋದರು. ಅದನ್ನು ಯೂರೋಪಿಗೆ ಕೊಂಡೊಯ್ದು ಬೆಳೆದರು. ತಂಬಾಕಿನ ಹೊಗೆಯು ತಲೆನೋವು, ಅಸ್ತಮ, ಪ್ಲೇಗ್, ವಿಷಣ್ಣತೆ (ಮೆಲಾಂಕಲಿ) ಮುಂತಾದವನ್ನು ಗುಣಪಡಿಸುತ್ತದೆ ಎಂದು ವೈದ್ಯರು ಭಾವಿಸಿದ್ದರು. ಆದರೆ ತಂಬಾಕು ಒಂದು ಔಷಧವಲ್ಲ, ಅದೊಂದು ’ಮಾರಿ’ ಎನ್ನುವುದು ಈಗ ತಿಳಿದಿದೆ. ಆದರೂ ಜಗತ್ತಿನ ೨೨% (೧.೩ ಬಿಲಿಯನ್) ಜನರು ತಂಬಾಕಿಗೆ ದಾಸರಾಗಿದ್ದಾರೆ. ೧೭%-೨೫% ಧೂಮಪಾನವನ್ನು ಮಾಡುತ್ತಿದ್ದಾರೆ. ೩೬.೭%ರಷ್ಟು ಪುರುಷರು ಹಾಗೂ ೭.೮% ಮಹಿಳೆಯರೂ ಧೂಮಪಾನವನ್ನು ಮಾಡುತ್ತಿದ್ದಾರೆ. ರಕ್ತದ ಏರೊತ್ತಡ, ಹೃದಯದ ಕಾಯಿಲೆಗಳು ಹಾಗೂ ಕಾನ್ಸರ್ ಮುಂತಾದ ಕಾಯಿಲೆಗಳು ದಿನೇ ದಿನೇ ಹೆಚ್ಚುತ್ತಿವೆ. ತಂಬಾಕು ಅನಾರೋಗ್ಯಕಾರೀ ಎಂದು ತಿಳಿದಿದ್ದರೂ ಸಹ, ಅದನ್ನು ಪ್ರಜ್ಞಾಪೂರ್ವಕವಾಗಿ ಬಳಸುತ್ತಿರುವ ಮನುಷ್ಯನ ವರ್ತನೆಯನ್ನು ಏನೆಂದು ಕರೆಯೋಣ?
--------------
- ಡಾ|ನಾ.ಸೋಮೇಶ್ವರ


