ಪರಿಷ್ಕೃತ ಮೀಸಲಾತಿ ರೋಸ್ಟರ್ ಪ್ರಕಟ

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಜಾರಿಗೆ ಬಂದಿರುವ ಕಾರಣ, ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇರ ನೇಮಕಾತಿಯ ವೇಳೆ ಅನುಸರಿಸಬೇಕಾದ ‘ಪರಿಷ್ಕೃತ ಮೀಸಲಾತಿ ರೋಸ್ಟರ್‌’ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪರಿಶಿಷ್ಟ ಜಾತಿಗಳಲ್ಲಿರುವ 101 ಜಾತಿಗಳನ್ನು ಪ್ರವರ್ಗ ‘ಎ’, ‘ಬಿ’, ‘ಸಿ’ ಎಂದು 3 ಪ್ರವರ್ಗಗಳಾಗಿ ವರ್ಗೀಕರಿಸಿ, ಲಭ್ಯ ಶೇಕಡ 17 ಮೀಸಲಾತಿಯನ್ನು ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಡಗೈ ಸಂಬಂಧಿತ ಜಾತಿಗಳಿರುವ ಪ್ರವರ್ಗ ‘ಎ’ಗೆ ಶೇ 6, ಬಲಗೈ ಸಂಬಂಧಿತ ಜಾತಿಗಳಿರುವ ಪ್ರವರ್ಗ ‘ಬಿ’ಗೆ ಶೇ 6 ಮತ್ತು ಸ್ಪೃಶ್ಯ ಮತ್ತು ಅಲೆಮಾರಿ ಜಾತಿಗಳಿರುವ ‘ಸಿ’ ಪ್ರವರ್ಗಕ್ಕೆ ಶೇ 5ರಂತೆ ಒಳ ಮೀಸಲಾತಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು.

ಒಳ ಮೀಸಲಾತಿ ಹಂಚಿಕೆ ಆದೇಶಕ್ಕೆ ಅನುಗುಣವಾಗಿ, ಒಟ್ಟು 100 ರೋಸ್ಟರ್‌ ಬಿಂದುಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ಗುರುತಿಸಿದ 17 ಬಿಂದುಗಳನ್ನು ‘ಪ್ರವರ್ಗವಾರು’ ಎ, ಬಿ ಮತ್ತು ಸಿ ಬಿಂದು ಗಳೆಂದು ನಿಗದಿಪಡಿಸಿ ಬುಧವಾರ ಆದೇಶ ಹೊರಡಿಸಲಾಗಿದೆ.