ಅಧ್ಯಾಪಕರಿಗೆ ಗೌರವಯುತ ಔದ್ಯೋಗಿಕ ಪರಿಸರ ಇರಬೇಕು

ಅಧ್ಯಾಪಕರಿಗೆ ಗೌರವಯುತ ಔದ್ಯೋಗಿಕ ಪರಿಸರ ಇರಬೇಕು

ಅಧ್ಯಾಪಕರಿಗೆ ಗೌರವಯುತ ಔದ್ಯೋಗಿಕ ಪರಿಸರ ಇರಬೇಕು
----------------------------
 * ಅರವಿಂದ ಚೊಕ್ಕಾಡಿ

ಅಧ್ಯಾಪಕರ ದಿನಾಚರಣೆ ಪ್ರತೀ ವರ್ಷವೂ ಸಪ್ಟಂಬರ್‌ನಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುತ್ತದೆ. ಮೊದಲೆಲ್ಲ ಸಪ್ಟಾಮಬರ್ 5 ರಂದು ಮಾತ್ರ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿನಲ್ಲಿ ನಡೆಯುತ್ತಿದ್ದ ದಿನಾಚರಣೆಗಳು ಈಗ ವಿಸ್ತರಿಸಿಕೊಂಡಿವೆ. ಹೀಗೆ ವಿಸ್ತಾರಗೊಳ್ಳಲು ಕಾರಣವಾಗಿರುವುದು ದಿನಾಚರಣೆಯ ಸ್ವರೂಪ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಡೆಸುವ ಅಧ್ಯಾಪಕರ ದಿನಾಚರಣೆಯು ಅಂಗನವಾಡಿಯಿಂದ ವಿಶ್ವ ವಿದ್ಯಾನಿಲಯಗಳ ವರೆಗೆ ಅಧ್ಯಾಪನದಲ್ಲಿ ತೊಡಗಿಕೊಂಡ ಎಲ್ಲರನ್ನೂ ಒಳಗೊಳಿಸಿಕೊಳ್ಳಲು ಸಾಧ್ಯವಾಗದೆ ಇರುವುದರಿಂದ ವಿವಿಧ ಹಂತಗಳಲ್ಲಿ, ವಿವಿಧ ದಿನಾಂಕಗಳಲ್ಲಿ ಅಧ್ಯಾಪಕರ ದಿನಾಚರಣೆಗಳು ನಡೆಯುತ್ತವೆ. ಒಟ್ಟಿನಲ್ಲಿ ಸಪ್ಟಂಬರ್ ಎಂದರೆ ಅಧ್ಯಾಪಕರ ತಿಂಗಳು. ಆದರೆ ವಿವಿಧ ಹಂತಗಳಲ್ಲಿ ಕಾರ್ಯಕ್ರಮಗಳು ನಡೆದರೂ ಕಾರ್ಯಕ್ರಮದ ಸ್ವರೂಪದಲ್ಲಿ ದೊಡ್ಡ ವ್ಯತ್ಯಾಸ ಇರುವುದಿಲ್ಲ. ಅಧ್ಯಾಪಕರನ್ನು ಹೊಗಳುವುದು, ಅಧ್ಯಾಪಕರಿಗೆ ಬುದ್ಧಿ ಹೇಳಿ ತಿದ್ದಿ ತೀಡುವುದು, ನಿವೃತ್ತ ಅಧ್ಯಾಪಕರಿಗೆ ಸಂಮ್ಮಾನ, ಸಾಧಕ ಅಧ್ಯಾಪಕರಿಗೆ ಪ್ರಶಸ್ತಿ, ಆಮೇಲೆ ಊಟ- ಈ ಸ್ವರೂಪದಲ್ಲಿ ಹೆಚ್ಚಿನ ಬದಲಾವಣೆಗಳಿರುವುದಿಲ್ಲ. ಪ್ರಶಸ್ತಿಗೂ ಸಂಮ್ಮಾನಕ್ಕೂ ವ್ಯತ್ಯಾಸವೂ ಇರುವುದಿಲ್ಲ. ಇವೆರಡೂ ಹಾರ,ಶಾಲು,ಹಣ್ಣಿನ ಬುಟ್ಟಿಯ ಗಳಿಕೆಗಳಾಗಿರುತ್ತವೆ.

ಶಿಕ್ಷಣ ಎನ್ನುವುದು ಎಲ್ಲ ಜ್ಞಾನ ಶಾಖೆಗಳ ತಾಯಿ. ತಾಯಿಯೇ ದುರ್ಬಲಳಾದರೆ ಯಾವುದೂ ಸಶಕ್ತವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಿದೆ, ಎಲ್ಲರೂ ಒಪ್ಪುತ್ತಾರೆ ಕೂಡ. ಈ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಇತ್ತೀಚೆಗೆ ಹೀಗೆ ಹೇಳಿದೆ:"ಅಧ್ಯಾಪಕರನ್ನು ಗೌರವದಿಂದ ನಡೆಸಿಕೊಳ್ಳದೆ ಇದ್ದರೆ ಅಥವಾ ಗೌರವಯುತ ವೇತನ ನೀಡದೆ ಇದ್ದರೆ ಅದು ದೇಶವು ಜ್ಞಾನಕ್ಕೆ ನೀಡುವ ಮೌಲ್ಯವನ್ನು ಕಡಿಮೆಗೊಳಿಸಿದಂತೆ ಆಗುತ್ತದೆ. ಅಲ್ಲದೆ ಅದು ಬೌದ್ಧಿಕ ಬಂಡವಾಳ ನಿರ್ಮಿಸುವ ಜವಾಬ್ದಾರಿ ಹೊಂದಿರುವವರ ಪ್ರೇರಣೆಯನ್ನೂ ಹಾಳುಗೆಡವುತ್ತದೆ' ಎಂದು ಸರ್ವೋಚ್ಛ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಅಧ್ಯಾಪಕರ ಗೌರವದ ವಿಚಾರವನ್ನು ಪ್ರಸ್ತಸಪಿಸಿದ ತಕ್ಚಣ,"ಅಧ್ಯಾಪಕರು ಸರಿಯಿಲ್ಲ. ಅಧ್ಯಾಪಕರ ಲೈಂಗಿಕ ದೌರ್ಜನ್ಯ" ಇತ್ಯಾದಿ ಇತ್ಯಾದಿ ಆರೋಪಗಳು ಪ್ರತಿಕ್ರಿಯೆಯಾಗಿ ಬರುತ್ತವೆ. ಸಧ್ಯಕ್ಕೆ ಭಾರತೀಯ ಸಮಾಜ ಎನ್ನುವುದು 'ಆರೋಪಿಸುವ ಸಮಾಜ'. ಆರೋಪಗಳು ಅಧ್ಯಾಪಕರಿಗಷ್ಟೇ ಸೀಮಿತ ಅಲ್ಲ; ರಾಜಕಾರಣಿಗಳು, ಅಧಿಕಾರಿಗಳು, ಪತ್ರಕರ್ತರು ಹೀಗೆ ಯಾವ ವೃತ್ತಿಗೆ ಸಂಬಂಧಿಸಿದ್ದಾದರೂ ಆ ವೃತ್ತಿ ನಿರತರ ಒಂದು ಸಮಸ್ಯೆಯ ವಿಚಾರವನ್ನು ಪ್ರಸ್ತಾಪಿಸಿದ ತಕ್ಷಣ ವಿಚಾರದ ಬಗ್ಗೆ ಗಮನ ಕೊಡದೆ,"ಅವರು ಸರಿಯಿಲ್ಲ" ಎನ್ನುವುದು ಸಮಾಜದ ಮಾನಸಿಕತೆಯಾಗಿದೆ. "ಸರಿಯಿಲ್ಲ" ಎಂದು ಹೇಳಿಬಿಟ್ಟರೆ ಆ ಮೇಲೆ ಆ ಸಮಸ್ಯೆಗೆ ಸ್ಪಂದಿಸುವ ಅಗತ್ಯ ಇರುವುದಿಲ್ಲ. ಇದು ಮನೋ ವೈಜ್ಞಾನಿಕ ಪಲಾಯನ ವಾದ.‌ "ಸರಿ ಇಲ್ಲ" ಎಂದು ವಿಷಯವನ್ನು ನಿರಾಕರಿಸದೆ ಇದ್ದಲ್ಲಿ ಆ ವಿಷಯಕ್ಕೆ ಸ್ಪಂದಿಸಿ ಯೋಚಿಸುವ ಅವಶ್ಯಕತೆಯಾದರೂ ಇರುತ್ತದೆ.‌ ವಿಷಯದ ಬಗ್ಗೆ ಯೋಚಿಸಲೂ ತಾನು ತಯಾರಿಲ್ಲ ಎಂಬ ಮನಸ್ಥಿತಿಗೆ ಬಂದವರು,"ಸರಿಯಿಲ್ಲ" ಎಂಬ ಒಂದೇ ಪದದಲ್ಲಿ ತಮ್ಮ‌  ಮಾನಸಿಕ ಜವಾಬ್ದಾರಿಯನ್ನು ಕಳೆದುಕೊಳ್ಳುತ್ತಾರೆ.

ಯಾವುದೆ ವೃತ್ತಿಯಲ್ಲಾದರೂ "ಸರಿ ಇಲ್ಲದವರು" ಒಂದಷ್ಟು ಜನ ಸಾರ್ವಕಾಲಿಕವಾಗಿ ಇರುತ್ತಾರೆ. "ಸರಿ ಇಲ್ಲ" ಎಂದು ಗೊತ್ತಾದ ಮೇಲೆ ಯಾಕೆ ಸುಮ್ಮನಿರುತ್ತಾರೆ,ಅಂಥವರನ್ನು ವಜಾಗೊಳಿಸಲು ಏನಾದರೂ ಚಾಲನೆ ಕೊಡಬೇಕಲ್ಲವೆ ಎನ್ನುವ ಪ್ರಶ್ನೆ ಇದ್ದೇ ಇದೆ. ಆ ಪ್ರಶ್ನೆಯನ್ನು ಬದಿಗಿರಿಸಿದಾಗಲೂ "ಸರಿ ಇಲ್ಲ" ದವರನ್ನು ಆಧರಿಸಿದ ಚಿಂತನೆಯನ್ನು ಸರಿ ಇರುವ ಎಲ್ಲರಿಗೂ ಅನ್ವಯಿಸುವುದು ವೈಯಕ್ತಿಕವಾಗಿ ಆತ್ಮ ವಂಚನೆಯೂ, ಸಾರ್ವತ್ರಿಕವಾಗಿ ಸರಿ ಇರುವವರ ಕುರಿತ ತಿರಸ್ಕಾರವೂ ಆಗಿರುತ್ತದೆ.

ಶೈಕ್ಷಣಿಕ ಪ್ರಕ್ರಿಯೆ ಚೆನ್ನಾಗಿ ನಡೆಯಬೇಕಾದರೆ ಅಧ್ಯಾಪಕರು ಗೌರವಯುತವಾದ ಸ್ಥಿತಿಯಲ್ಲಿ ಇರಬೇಕು ಎನ್ನುವುದು ಸಾಮಾನ್ಯ ಜ್ಞಾನಕ್ಕೆ ಅರ್ಥವಾಗುವ ವಿಷಯ. ಗೌರವ ಯುತವಾದ ಸ್ಥಿತಿ ಎಂದರೆ ಅಧ್ಯಾಪಕರ ಮಾತಿಗೆ ಗೌರವ ಕೊಡುವುದು ಎಂಬ ಸಂಕುಚಿತ ಅರ್ಥವಲ್ಲ. ಕುಟುಂಬವನ್ನು ತೃಪ್ತಿಕರವಾಗಿ ನಿರ್ವಹಿಸಲು ಬೇಕಾದಷ್ಟು ಆದಾಯ, ವೃತ್ತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಬೇಕಾದ ಔದ್ಯೋಗಿಕ ಪರಿಸರವೆರಡೂ ದೊರೆತಾಗ ಅದು ಗೌರವಯುತ ಸ್ಥಿತಿಯಾಗುತ್ತದೆ. ಆದರೆ ಒಟ್ಟಂದದಲ್ಲಿ ನಮ್ಮಲ್ಲಿ ಅಧ್ಯಾಪಕರ ಸ್ಥಿತಿಗತಿಗಳು ಹೇಗಿವೆ?

ಸರ್ಕಾರದ ಅಧೀನದಲ್ಲಿರುವ ಶಾಲಾ ಕಾಲೇಜುಗಳಲ್ಲಿ ಖಾಯಂ ಸಿಬ್ಬಂದಿಯಾಗಿರುವ ಅಧ್ಯಾಪಕರಿಗೆ ಗೌರವಯುತ ವೇತನವೇ ಸಿಗುತ್ತಿದೆ. ಆದರೆ ಸರ್ಕಾರಿ ಶಾಲಾ ಕಾಲೇಜುಗಳಲ್ಲಿರುವ ಖಾಯಂ ಸಿಬ್ಬಂದಿಯಾಗಿರುವ ಅಧ್ಯಾಪಕರ ಸಂಖ್ಯೆಗಿಂತ ಸರ್ಕಾರಿ ಶಾಲಾ ಕಾಲೇಜುಗಳಲ್ಲೆ ಅತಿಥಿ ಅಧ್ಯಾಪಕರು, ಹೊರ ಗುತ್ತಿಗೆ ಅಧ್ಯಾಪಕರುಗಳಾಗಿರುವವರು ಮತ್ತು ಖಾಸಗಿ ಶಾಲಾ ಕಾಲೇಜುಗಳಲ್ಲಿರುವ ಅಧ್ಯಾಪಕರುಗಳ ಒಟ್ಟು ಸಂಖ್ಯೆ ಜಾಸ್ತಿ ಇದೆ. ಸರ್ಕಾರಿ ಸಂಸ್ಥೆಗಳು ಮುಚ್ಚುತ್ತಾ ಹೋದ ಹಾಗೆ ಖಾಸಗಿ ಸಂಸ್ಥೆಗಳ ಪಾಲುದಾರಿಕೆ ಇನ್ನಷ್ಟು ಜಾಸ್ತಿಯಾಗಲಿದೆ. ಶಿಕ್ಷಣ ವ್ಯವಸ್ಥೆಯ ಬೃಹತ್ ಸಂಪನ್ಮೂಲವಾಗಿರುವ ಖಾಯಂ ಅಲ್ಲದ ಅಧ್ಯಾಪಕರ ವಿಷಯಗಳು ಸಾರ್ವಜನಿಕ ಮಹತ್ವವನ್ನು ಪಡೆದ ವಿಷಯಗಳೇ ಆಗಿವೆ ಎನ್ನುವುದನ್ನು ಒಪ್ಪಿಕೊಳ್ಳಲು ಮೊದಲು ಸಾಧ್ಯವಾಗಬೇಕು. ಖಾಯಂ ಅಲ್ಲದ ಸಿಬ್ಬಂದಿಯ ಸ್ಥಿತಿಗತಿಗಳ ಬಗ್ಗೆ ವ್ಯಾಪಕ ಅಧ್ಯಯನವೇನೂ ನಡೆದಿಲ್ಲ. ಈ ಅಧ್ಯಯನ ಇವತ್ತಿನ ತುರ್ತು ಅಗತ್ಯವೂ ಆಗಿದೆ. ಸರ್ಕಾರಿ ಶಾಲಾ ಕಾಲೇಜುಗಳಲ್ಲಿರುವ ಖಾಯಂ ಅಲ್ಲದ ಸಿಬ್ಬಂದಿ ಸದಾ ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯಲ್ಲಿರುತ್ತಾರೆ. ವಿಶೇಷವಾದ ಸಂಗತಿ ಎಂದರೆ ಹಾಗೆ ಉದ್ಯೋಗವನ್ನು ಕಳೆದುಕೊಳ್ಳಲು ಅವರ ಅದಕ್ಷತೆ ಅಥವಾ ದುರ್ನಡತೆಗಳೇನೂ ಕಾರಣವಾಗಬೇಕಾಗಿಲ್ಲ.‌ ಖಾಲಿ ಇರುವ ಹುದ್ದೆಗೆ ಬದಲಿಯಾಗಿ ಕೆಲಸ ಮಾಡುತ್ತಿರುವ ಸ್ಥಳಕ್ಕೆ ಒಬ್ಬ ಖಾಯಂ ಸಿಬ್ಬಂದಿ ವರ್ಗಾವಣೆಯಾಗಿ ಬಂದರೆ ಸಾಕು, ಅವರು ಎಂಥ ದಕ್ಷ ಅಧ್ಯಾಪಕರೇ ಆಗಿದ್ದರೂ ಉದ್ಯೋಗ ಕಳೆದುಕೊಳ್ಳುತ್ತಾರೆ.‌ ಬದಲಿ ವ್ಯವಸ್ಥೆಗಳಿಲ್ಲದೆ ಬಳಲುತ್ತಾರೆ. ಎರಡನೆಯದಾಗಿ ಖಾಯಂ ಸಿಬ್ಬಂದಿ ಮತ್ತು ಖಾಯಂ ಅಲ್ಲದ ಸಿಬ್ಬದಿ ಒಟ್ಟೊಟ್ಟಿಗೇ ಕೆಲಸ ಮಾಡುವಾಗ ಅತೀ ಕಡಿಮೆ ವೇತನ ಪಡೆಯುವವರಿಗೆ ಹೆಚ್ಚು ಕೆಲಸದ ಹೊರೆಯನ್ನು ಕೊಡಲಾಗುತ್ತದೆ. ಏಕೆಂದರೆ ಅವರು ಖಾಯಂ‌ ಅಲ್ಲ. ಆದ್ದರಿಂದ ಹೇಳಿದ್ದನ್ನು ಮಾಡದಿದ್ದರೆ ಅವರನ್ನು ಕೆಲಸದಿಂದ ತೆಗೆಯಬಹುದು. ಇದು ಅಧ್ಯಾಪಕರನ್ನು ಗೌರವಯುತವಾಗಿ ನಡೆಸಿಕೊಳ್ಳುವ ವಿಧಾನವಲ್ಲ.‌ ಖಾಯಂ ಸಿಬ್ಬಂದಿ ಮತ್ತು ಖಾಯಂ ಅಲ್ಲದ ಸಿಬ್ಬಂದಿ ಎನ್ನುವುದು ಅವರವರ ಆಡಳಿತಾತ್ಮಕ ಸ್ಥಿತಿಯನ್ನಷ್ಟೆ ಸೂಚಿಸುತ್ತದೆ ಹೊರತು ಅವರ ಸ್ಥಾನಮಾನದ ವ್ಯತ್ಯಾಸವನ್ನಲ್ಲ.‌ ಏಕೆಂದರೆ ವೃತ್ತಿಯನ್ನು ಇಬ್ಬರೂ ಸಮಾನವಾಗಿಯೇ ನಿರ್ವಹಿಸಬೇಕು. ಸಮಾನ ವೃತ್ತಿಗೆ ಸಮಾನ ವೇತನವಿಲ್ಲ, ಸಮಾನ ಗೌರವವೂ ಇಲ್ಲ ಎನ್ನುವುದು 'ಮೌಲ್ಯ' ಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಕಾಣಬೇಕಾದ ಶಿಕ್ಷಣ ವ್ಯವಸ್ಥೆಯಲ್ಲಿ ಅನಪೇಕ್ಷಣೀಯ ಸ್ಥಿತಿಯಾಗಿದೆ.

ಕೆಲವು ಖಾಸಗಿ ಶಾಲಾ ಕಾಲೇಜುಗಳು ಅಧ್ಯಾಪಕರಿಗೆ ಒಳ್ಳೆಯ ವೇತನವನ್ನೆ ಕೊಡುತ್ತಿವೆ. ಕೆಲವೆಡೆಗಳಲ್ಲಿ ಆಯ್ದ ಕೆಲವು ಪಠ್ಯಗಳ ಬೋಧಕರಿಗೆ ಸರ್ಕಾರ ಕೊಡುವುದಕ್ಕಿಂತಲೂ ಹೆಚ್ಚಿನ ವೇತನವನ್ನು ಕೊಡುತ್ತಾರೆ. ಆದರೆ ಇಂಥ ಖಾಸಗಿ ಸಂಸ್ಥೆಗಳು ಅತೀ ಕಡಿಮೆ ಸಂಖ್ಯೆಯಲ್ಲಿವೆ. ಇನ್ನು ಕೆಲವು ಆಡಳಿತ ಮಂಡಳಿಗಳ ವಿಷಯಕ್ಕೆ ಬಂದರೆ ಆಡಳಿತ ಮಂಡಳಿಯೇ ಹಣಕಾಸು ಬಿಕ್ಕಟ್ಟನ್ನು ಎದುರಿಸುತ್ತಾ ಶಾಲೆಗಳನ್ನು ನಿಭಾಯಿಸುತ್ತಿರುತ್ತವೆ. ಅಧ್ಯಾಪಕರಿಗೆ ಗೌರವಯುತ ವೇತನವನ್ನು ಕೊಡಲು ಅವುಗಳಿಗೇ ಸಾಧ್ಯವಾಗುವುದಿಲ್ಲ. ಆದರೆ ಖಾಸಗಿ ಸಂಸ್ಥೆಗಳಲ್ಲಿ ಹೆಚ್ಚಿನ ಸಂಸ್ಥೆಗಳು ಸಮಾರಂಭ, ಕಟ್ಟಡಗಳಿಗೆಲ್ಲ ಖರ್ಚು ಮಾಡುತ್ತವೆ. ಆದರೆ ಅಧ್ಯಾಪಕರಿಗೆ ವೇತನ ಕೊಡುವ ವಿಷಯಕ್ಕೆ ಬಂದಾಗ ಜಿಪುಣತನ ತೋರಿಸುತ್ತವೆ.‌

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಅಧ್ಯಾಪಕರಿಗೆ ಗೌರವಾನ್ವಿತ;ಅಂದರೆ ತೃಪ್ತಿಕರವಾಗಿ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗುವ ಮಟ್ಟಿನ ಸಾಮಾನ್ಯ ವೇತನ ಮಾನದಂಡವನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ಕನಿಷ್ಠ ವೇತನದ ಮಾನದಂಡ ಇದ್ದರೆ ಸಾಲುವುದಿಲ್ಲ. ಅದು ಅನುಷ್ಠಾನಕ್ಕೆ ಬರಬೇಕಾದ್ದು ಮುಖ್ಯ. ಅಧ್ಯಾಪಕರ ವೇತನಕ್ಕಾದಾಗ, ಅಧ್ಯಾಪಕರದ್ದು ವೃತ್ತಿ ಆಗಿರುವುದರಿಂದ ಕಾರ್ಮಿಕ ಕಾಯ್ದೆ ಅನ್ವಯವಾಗುವುದಿಲ್ಲ, ಆದ್ದರಿಂದ ಕಾರ್ಮಿಕ ಕಾಯ್ದೆಯ ಅನುಸಾರ ವೇತನ‌ ಕೊಡದೆ ಇರಲು ಅವಕಾಶವಿದೆ ಎಂಬ ವಿಚಿತ್ರ ತರ್ಕ ಇರುತ್ತದೆ.‌ ಅಧ್ಯಾಪಕರಿಗೆ ಕಾರ್ಮಿಕ ಕಾಯ್ದೆ ಅನ್ವಯ ಆಗದೆ ಇರುವುದು ಸರಿ.‌ ಆದರೆ ಕಾರ್ಮಿಕರಿಗೆ ಅಂಗಿ, ಪ್ಯಾಂಟು, ಸೀರೆ, ರವಕೆ ಹೊಲಿದುಕೊಡಲು ದರ್ಜಿ ತೆಗೆದುಕೊಳ್ಳುವ ಮೊತ್ತದಲ್ಲಿ ವ್ಯತ್ಯಾಸವಾಗುತ್ತದೆಯೇ.‌ ಅಕ್ಕಿಯ ಬೆಲೆ ಅಧ್ಯಾಪಕರಿಗೆ ಕಡಿಮೆ ಮಾಡಲ್ಪಡುತ್ತದೆಯೇ. ಕಾರ್ಮಿಕ ಕಾಯ್ದೆ ಅನ್ವಯವಾಗದ ಅಧ್ಯಾಪಕರೂ ಮನುಷ್ಯರೇ. ಅವರಿಗೆ ಕುಟುಂಬ ನಿರ್ವಹಣೆಗೆ ತಕ್ಕಷ್ಟು ವೇತಕ ಕೊಡಬೇಕು ಎನ್ನುವುದು ಸಾಮಾನ್ಯ ಜ್ಞಾನಕ್ಕೆ ಅರ್ಥವಾಗುತ್ತದೆ. ಖಾಸಗಿ ಶಾಲಾ ಕಾಲೇಜುಗಳಿಗೆ ಅವುಗಳದೇ ಸಂಘಟನೆಗಳಿವೆ. ಆಡಳಿತ ಮಂಡಳಿಗಳ ಸಂಘಟನೆ ಸಾಮೂಹಿಕವಾಗಿ ಅಧ್ಯಾಪಕರಿಗೆ ಗೌರವಾನ್ವಿತ ವೇತನವನ್ನು ನಿರ್ಧರಿಸಿ ಅನುಷ್ಠಾನಗೊಳಿಸಬೇಕು.‌ ಇದೇ ಕೆಲಸವನ್ನು ಸರ್ಕಾರ ಅತಿಥಿ ಅಧ್ಯಾಪಕರು, ಹೊರ ಸಂಪನ್ಮೂಲ ಅಧ್ಯಾಪಕರ ವಿಚಾರದಲ್ಲಿ ಮಾಡಬೇಕಾಗಿದೆ. ಖಾಸಗಿ ಆಡಳಿತ ಮಂಡಳಿಗಳೇ ಆರ್ಥಿಕವಾಗಿ ದುರ್ಬಲವಾಗಿದ್ದಾಗ ಅಂತಹ ಶಾಲೆಗಳನ್ನು ಖಾಸಗಿ ಆಡಳಿತ ಮಂಡಳಿಗಳ ಒಕ್ಕೂಟ ತನ್ನ ಮಧ್ಯ ಪ್ರವೇಶದ ಮೂಲಕ ನಿಭಾಯಿಸಲು ಸಾಧ್ಯವಾಗಬೇಕು. ಇದರ ಜೊತೆಗೆ ಅಧ್ಯಾಪಕರಿಗೆ ಉದ್ಯೋಗ ಭದ್ರತೆಯನ್ನು ಒದಗಿಸಬೇಕು. ಅತಿಥಿ ಅಧ್ಯಾಪಕರನ್ನು, ಹೊರ ಸಂಪನ್ಮೂಲ ಅಧ್ಯಾಪಕರನ್ನು, ಖಾಸಗಿ ಸಂಸ್ಥೆಗಳಲ್ಲಿನ ಅಧ್ಯಾಪಕರನ್ನು ಸೂಕ್ತ ಕಾರಣವಿಲ್ಲದೆ ತೆಗೆಯುವ ಪದ್ಧತಿಯನ್ನು ನಿಲ್ಲಿಸಲು ಸೂಕ್ತ ಕಾನೂನು ರಚನೆ ಆಗಬೇಕಾಗಿದೆ.

ಅಧ್ಯಾಪಕರ ಗೌರವದ ಎರಡನೆಯ ಭಾಗದಲ್ಲಿ ಔದ್ಯೋಗಿಕ ಪರಿಸರ ಗೌರವಾನ್ವಿತವಾಗಿರುವ ಹಾಗೆ ನೋಡಿಕೊಳ್ಳುವುದು ಮುಖ್ಯವಾಗಿದೆ. ವೇತನದ ವಿಚಾರಕ್ಕಾದಾಗ ಅಧ್ಯಾಪಕರದ್ದು ವೃತ್ತಿ;ಆದ್ದರಿಂದ ಅವರು ಕಾರ್ಮಿಕರಲ್ಲ ಎಂಬ ವಾದ ಬರುತ್ತದೆ. ಆದರೆ ಔದ್ಯೋಗಿಕ ಪರಿಸರದ ವಿಚಾರಕ್ಕಾದಾಗ ಇದೇ ವಾದ ಬರುವುದಿಲ್ಲ. ವಕೀಲರು ಮತ್ತು ವೈದ್ಯರುಗಳ ಹಾಗೆ ಅಧ್ಯಾಪಕರದ್ದೂ ವೃತ್ತಿ ಎಂದ ಮೇಲೆ ಅಲ್ಲಿ ವೃತ್ತಿ ಪರಿಣಿತಿ ಇರುತ್ತದೆ. ಅಂದರೆ ತನ್ನ ವಿದ್ಯಾರ್ಥಿಗೆ ಯಾವ ರೀತಿ ಬೋಧಿಸಬೇಕು, ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೇಗೆ ರಚಿಸಬೇಕು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಯಾವ ರೀತಿ ನಿರ್ವಹಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಸಂಬಂಧಪಟ್ಟ ಅಧ್ಯಾಪಕರೇ ನಿರ್ಧರಿಸಲು ಅವರಿಗೆ ಸ್ವಾತಂತ್ರ್ಯವಿರಬೇಕು.‌ ಸರ್ಕಾರಿ ಶಾಲೆಗಳಿಗಾದರೆ ಎಡೆ ಬಿಡದೆ ಅಧ್ಯಾಪಕರಿಗೆ ಪ್ರತಿಯೊಂದನ್ನೂ ಹೀಗೇ ಮಾಡಬೇಕು ಎಂದು ಆದೇಶ ಹೊರಡಿಸುತ್ತಾ ಇರುವುದು, ಖಾಸಗಿ ಶಾಲೆಗಳಾದರೆ ವಿದ್ಯಾರ್ಥಿಗಳ ನೋಟ್ ಪುಸ್ತಕಗಳನ್ನು ಕೂಡ ಹೀಗೆಯೇ ಪರಿಶೀಲಿಸಬೇಕು ಎನ್ನುವಷ್ಟು ಅತಿಯಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಅಧ್ಯಾಪಕರ ಸ್ವಾತಂತ್ರ್ಯವನ್ನು ಆಡಳಿತ ಮಂಡಳಿಗಳು ತೊಡೆದು ಹಾಕುತ್ತಿರುವುದು ಕಾಣಿಸುತ್ತಿದೆ.‌ ಇದರಿಂದ ಅಧ್ಯಾಪಕರ ಔದ್ಯೋಗಿಕ ಪರಿಸರವೇ ಅಗೌರವಯುತ ಪರಿಸರವಾಗಿ ಮಾರ್ಪಡುತ್ತದೆ. ಸರ್ಕಾರದ್ದಿರಲಿ, ಖಾಸಗಿ ಇರಲಿ ಶೈಕ್ಷಣಿಕ ಆಡಳಿತವು ಅಧ್ಯಾಪಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವರ್ತಿಸಬೇಕು ಹೊರತು ಜೀತಗಾರರ ಹಾಗೆ ನಡೆಸಿಕೊಳ್ಳಬಾರದು.‌ "ವೇತನ ಕೊಡುವುದಿಲ್ಲವೆ" ಎನ್ನುವುದು ಎಲ್ಲ ಸಮಸ್ಯೆಗಳಿಗೂ ಉತ್ತರವಾಗುವುದಿಲ್ಲ.‌ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಸಂಬಂಧಿಸಿ ಇಂತಿಂತಹ ಸಮಸ್ಯೆಗಳಿವೆ ಎಂದು ಹೇಳಿದರೆ ಕೇಳಿಸಿಕೊಳ್ಳುವ ಮನಸ್ಥಿತಿ ಶೈಕ್ಷಣಿಕ ಆಡಳಿತಕ್ಕೆ ಇರಬೇಕು. ಮತ್ತು ಅಧ್ಯಾಪಕರು ತರಗತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಳುವಂತೆ ಉತ್ತೇಜಿಸಬೇಕು. ವಿದ್ಯಾರ್ಥಿಗಳ ನಿರ್ದಿಷ್ಠ ಸಮಸ್ಯೆಗಳನ್ನು ಪರಿಹರಿಸಲು ತನಗೆ ಇಂತಿಂತಹ ಸಾಧನ ಸಲಕರಣೆಗಳು ಅಥವಾ ಸಂಪನ್ಮೂಲ ಬೇಕು ಎಂದು ಅಧ್ಯಾಪಕರು ಕೇಳಿದಾಗ ಅದನ್ನು ಒದಗಿಸಿಕೊಡಲು ಶೈಕ್ಷಣಿಕ ಆಡಳಿತ ಸಿದ್ಧವಿರಬೇಕು. ಕನಿಷ್ಠ ಪಕ್ಷ ಡಿ.ಎಡ್.ಮಾಡಿದ ಅಧ್ಯಾಪಕರು ಬೋಧನೆಯನ್ನು ಹೇಗೆ ಮಾಡಬೇಕು ಎಂದು ಹೇಳಬೇಕಾದರೆ ತನಗೆ ಬಿ.ಎಡ್.‌ಮಾಡಿದವರ ಮಟ್ಟದ ಜ್ಞಾನ ಇರಬೇಕು ಎನ್ನುವಷ್ಟಾದರೂ ವಿವೇಕ ಶೈಕ್ಷಣಿಕ ಆಡಳಿತದಲ್ಲಿ ಇರಬೇಕಾಗುತ್ತದೆ.

ಗೌರವಯುತ ಬದುಕು ಮತ್ತು ಪರಿಸರವನ್ನು ಅಧ್ಯಾಪಕರಿಗೆ ಒದಗಿಸದೆ ಅಧ್ಯಾಪನದಿಂದ ಅತ್ಯುತ್ತಮ ಫಲ ಸಿಗಬೇಕು ಎಂದು ನಿರೀಕ್ಷಿಸಿದರೆ ಅದು ಸಾಧ್ಯವಾಗಲಾರದು. ಸಪ್ಟಂಬರ್ ಐದರ ಅಧ್ಯಾಪಕರ ದಿನಾಚರಣೆಗಳನ್ನು ಹೆಚ್ಚು ವ್ಯಾಪಕಗೊಳಿಸುವುದರಿಂದ, ಅಥವಾ ಇನ್ನಷ್ಟು ಭವ್ಯವಾಗಿಸುವುದರಿಂದ ಇದೆಲ್ಲ ಸಾಧ್ಯವಾಗುವುದಿಲ್ಲ. ಬದಲು ಶಿಕ್ಷಣ- ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಬಗ್ಗೆ ಸಂವೇದನಾಶೀಲವಾಗಿ ಯೋಚಿಸುವ ಸಾಮರ್ಥ್ಯದಿಂದ ಸಾಧ್ಯವಾಗುವ ವಿಷಯಗಳಿವೆ. ಗೋಚರ ಅದ್ದೂರಿಯ ಜಾಗಕ್ಕೆ ಅಗೋಚರ ವಿವೇಕದ ಪ್ರವೇಶ ಆಗಬೇಕಾಗಿದೆ.