ಮೈಸೂರು ದಸರಾ:ಬಾನು ಮುಷ್ತಾಕ್ ಉದ್ಘಾಟನೆಗೆ ಬಿಜೆಪಿ ವಿರೋಧ-ಸಮರ್ಥಿಸಿದ ಸರಕಾರ

ಮೈಸೂರು ದಸರಾ:ಬಾನು ಮುಷ್ತಾಕ್ ಉದ್ಘಾಟನೆಗೆ ಬಿಜೆಪಿ ವಿರೋಧ-ಸಮರ್ಥಿಸಿದ ಸರಕಾರ

ನಾಡಿನ ಹೆಸರಾಂತ ಸಾಹಿತಿ, ಹೋರಾಟಗಾರ್ತಿ ಬಾನು ಮುಷ್ತಾಕ್ ಅವರಿಂದ ನಾಡಹಬ್ಬ ಮೈಸೂರು ದಸರಾ ಉದ್ಘಾಟಿಸುವುದನ್ನು ವಿರೋಧ ಪಕ್ಷ ಬಿಜೆಪಿ ವಿರೋಧಿಸಿದೆ.ರಾಜ್ಯ ಸರಕಾರ ತನ್ನ ಕ್ರಮವನ್ನು ಸಮರ್ಥಿಸಿದೆ.
     ಮುಖ್ಯಮಂತ್ರಿ ಸಿದ್ಧರಾಮಯ್ಯ ಟಿಪ್ಪುವಿನ ಮನಸ್ಥಿತಿ ಹೊಂದಿರುವುದರಿಂದ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿರೋಧ ವ್ಯಕ್ತಪಡಿಸಿದ್ದಾರೆ.ಹೊಸಪೇಟೆಯಲ್ಲಿ ಇಂದು ಸೋಮವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಮುಸ್ಲಿಮರಲ್ಲಿ ಮೂರ್ತಿ ಪೂಜೆ ನಿಷೇಧವಿದೆ.ಅವರನ್ನು ಅವರ ಧರ್ಮದಿಂದಲೇ ಉಚ್ಛಾಟಿಸಿದರೆ ಏನು ಮಾಡ್ತೀರ ಎಂದು ಪ್ರಶ್ನಿಸಿದ್ದಾರೆ.
      ಕನ್ನಡ ಭಾಷೆಯ ತಾಯಿ ಭುವನೇಶ್ವರಿಯನ್ನು ಒಪ್ಪಿಕೊಳ್ಳದ ಬಾನು ಅವರಿಂದ ತಾಯಿ ಚಾಮುಂಡೇಶ್ವರಿಯನ್ನು ಪೂಜಿಸುವುದು ಅದೆಷ್ಟು ಸರಿ ಎಂದು ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಉಚ್ಛಾಟಿತ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಸಹ ಪ್ರಶ್ನಿಸಿದ್ದಾರೆ.
      ಬಿಜೆಪಿಯ ವಿರೋಧಕ್ಕೆ ಗೃಹ ಸಚಿವ ಡಾ.ಪರಮೇಶ್ವರ್ ಹಾಗೂ ಮೈಸೂರು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.ನಾಡಹಬ್ಬ ದಸರಾ ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾದುದಲ್ಲ,ಒಂದು ಧರ್ಮವನ್ನು ಹೊರಗಿಟ್ಟು ನಾಡಹಬ್ಬವನ್ನು ಆಚರಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ ಮಿರ್ಜಾ ಇಸ್ಮಾಯಿಲ್ ಮೈಸೂರು ದಿವಾನರಾಗಿ ದಸರಾ ಆಚರಿಸಲಿಲ್ಲವೇ?ಕವಿ ನಿಸಾರ್ ಅಹಮ್ಮದ್ ದಸರಾ ಉದ್ಘಾಟಿಸಲಿಲ್ಲವೇ?ಎಂದು ಪ್ರಶ್ನಿಸಿದರು.ಚಾಮುಂಡೇಶ್ವರಿಯನ್ನು ನಂಬುವುದು ಬಿಡುವುದು ಉದ್ಘಾಟಕರಿಗೆ ಸೇರಿದ್ದು,ದಸರಾ ಊರ ಹಬ್ಬ ಅದನ್ನು ಎಲ್ಲರೂ ಒಟ್ಟು ಸೇರಿಯೇ ಆಚರಿಸಬೇಕು ಎಂದರು.
   ಮಹಾರಾಜರು ಪಟ್ಟದಲ್ಲಿ ಇಲ್ಲದಾಗ ಹೈದರಾಲಿ ಮತ್ತು ಟಿಪ್ಪು ದಸರಾ ನಡೆಸಿದ್ದಾರೆ.ಇತಿಹಾಸವನ್ನು ಮರೆಯಲು ಸಾಧ್ಯವೇ ಎಂದು ಶಾಸಕ ತನ್ವೀರ್ ಸೇಠ್ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವ್ಯಕ್ತಿಯ ಸ್ಥಾನಮಾನ ಗುರುತಿಸಿ ಅವರನ್ನು ದಸರಾ ಉದ್ಘಾಟನೆಗೆ ಕರೆಯುತ್ತೇವೆ. ಸಾಹಿತಿ ಎಸ್.ಎಲ್.ಭೈರಪ್ಪ ದಸರಾ ಉದ್ಘಾಟಿಸಿದಾಗ ನಾವು ವಿರೋಧಿಸಲಿಲ್ಲ.ತಾಯಿ ಚಾಮುಂಡಿಗೆ ಪೂಜೆ ಮಾಡಿಯೇ ದಸರಾ ಉದ್ಘಾಟಿಸುತ್ತೇವೆ ಎಂದರು.