ಧರ್ಮಸ್ಥಳ: ಉತ್ಖನನದ ವಿಧಿ ವಿಜ್ಞಾನ ವರದಿ ಬಂದ ನಂತರ ತನಿಖೆ ಆರಂಭ:ಗೃಹ ಸಚಿವ ಪರಮೇಶ್ವರ್

ಧರ್ಮಸ್ಥಳ: ಉತ್ಖನನದ ವಿಧಿ ವಿಜ್ಞಾನ ವರದಿ ಬಂದ ನಂತರ ತನಿಖೆ ಆರಂಭ:ಗೃಹ ಸಚಿವ ಪರಮೇಶ್ವರ್

ಧರ್ಮಸ್ಥಳದ ಅಸಹಜ ಸಾವು ಪ್ರಕರಣದ ಎಸ್ ಐ ಟಿ ತನಿಖೆಯು ಉತ್ಖನನದ ಎಫ್ ಎಸ್ ಎಲ್ ವರದಿ ಬಂದ ನಂತರ ಆರಂಭವಾಗಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಸದನಕ್ಕೆ ತಿಳಿಸಿದ್ದಾರೆ.
     ವಿರೋಧ ಪಕ್ಷ ಬಿಜೆಪಿ ಕಳೆದೆರಡು ದಿನಗಳಿಂದ ಸದನದಲ್ಲಿ ತನಿಖೆಯ ಮಧ್ಯಂತರ ವರದಿಗಾಗಿ ಸರಕಾರವನ್ನು ಆಗ್ರಹಿಸಿ ಚರ್ಚೆ ಆರಂಭಿಸಿತ್ತು.ಅಲ್ಲದೆ ಸೌಜನ್ಯ ಕೊಲೆ ಪ್ರಕರಣದ ಹೋರಾಟಗಾರ ಮಹೇಶ್ ತಿಮರೋಡಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಕೊಲೆಗಾರ ಎಂದು ದೂಷಣೆ ಮಾಡಿರುವ ವೀಡಿಯೋ ಸಮೂಹ ಮಾಧ್ಯಮದಲ್ಲಿ ಹರಿದಾಡುತ್ತಿದೆ ಆತನನ್ನು ಕೂಡಲೆ ಬಂಧಿಸುವಂತೆ‌ ಇಂದು ಸದನದಲ್ಲಿ ಪಟ್ಟು ಹಿಡಿಯಿತು.ಹಕ್ಕು ಚ್ಯುತಿ ಮಂಡಿಸುವಂತೆಯೂ ಆಗ್ರಹಿಸಿತು.
    ಬಿಜೆಪಿಯ ಆಗ್ರಹಕ್ಕೆ ಸದನದಲ್ಲಿ‌ ಇಂದು ಸಂಜೆ ಉತ್ತರಿಸಿದ ಗೃಹ ಸಚಿವರು,ಅನಾಮಧೇಯ ತೋರಿಸಿದ ಜಾಗದಲ್ಲೆಲ್ಲಾ ವಿಶೇಷ ತನಿಖಾ ತಂಡ ಉತ್ಖನನ ನಡೆಸಿದ್ದಾರೆ.ಅಲ್ಲಿ ಎರಡು ಕಡೆ ದೊರೆತಿರುವ ಮಾನವ ಅಸ್ಥಿಪಂಜರಗಳು,ಅನಾಮಧೇಯ ವ್ಯಕ್ತಿ ಹಾಜರು ಪಡಿಸಿರುವ ತಲೆ ಬುರುಡೆ ಹಾಗೂ ಉಳಿದಿರುವ ಜಾಗದಲ್ಲಿ ಅಗೆದಿರುವ ಮಣ್ಣನ್ನು ಸಹ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ,ವರದಿ ಬಂದ ನಂತರ ತನಿಖೆ ಆರಂಭವಾಗಲಿದೆ.ಇಲ್ಲಿವರೆಗೆ ನಡೆದಿರುವುದು ಗುರುತಿಸಿರುವ ಜಾಗದ ಉತ್ಖನನವಷ್ಟೆ ಎಂದು ಸ್ಪಷ್ಟಪಡಿಸಿದರು.
     ರಾಜ್ಯ ಮಹಿಳಾ ಆಯೋಗದ ದೂರು ಹಾಗೂ ಅನಾಮಧೇಯ ನ್ಯಾಯಾಲಯಕ್ಕೆ ನೀಡಿರುವ ದೂರಿನಂತೆ ಸರಕಾರ ತನಿಖೆಗೆ ಆದೇಶಿಸಿದೆ.ಇದರಲ್ಲಿ ಯಾರ ಒತ್ತಡವೂ ಇಲ್ಲ ಎಂದರು.
     ನ್ಯಾಯಾಲಯ ಮತ್ತು ಜಿಲ್ಲಾ ದಂಡಾಧಿಕಾರಿಗಳ ಸಮಿತಿಯ ಆದೇಶದಂತೆ ಅನಾಮಧೇಯ ವ್ಯಕ್ತಿಗೆ ರಕ್ಷಣೆ ನೀಡಲಾಗಿದ್ದು,ಆತನ ಗುರುತು ಮರೆಮಾಚಿ ಆತನಿಗೆ ವಿ ಎಂದು ಹೆಸರಿಸಲಾಗಿದೆ ಎಂದರು.
      ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿರುವ ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸರಕಾರಕ್ಕೆ ಗೌರವವಿದೆ.ಧರ್ಮಸ್ಥಳದಲ್ಲಿ ಏನು ನಡೆದಿರಬಹುದು,ಸತ್ಯವೋ ಸುಳ್ಳೋ ಎನ್ನುವ  ಕುತೂಹಲ ಧರ್ಮಸ್ಥಳದ ಭಕ್ತರಲ್ಲಿದೆ.ತನಿಖೆಯಿಂದ ಮಾತ್ರ ಸತ್ಯ ಗೊತ್ತಾಗಲಿದೆ ಅಲ್ಲಿವರೆಗೆ ಕಾಯಬೇಕಷ್ಟೆ ಎಂದರು.
   ಮುಖ್ಯಮಂತ್ರಿ ಸಿದ್ಧರಾಮಯ್ಯ ಇಪ್ಪತ್ತೆಂಟು ಕೊಲೆಗಾರ ಎಂದು ಎಲ್ಲೆಡೆ ಈಗ ಹರಿದಾಡುತ್ತಿರುವ ವೀಡಿಯೋ 2023 ರ ಹಳೆಯದು,ಆಗ ಬಿಜೆಪಿ ಅಧಿಕಾರದಲ್ಲಿತ್ತು ಎಂದಷ್ಟೆ ಸದನಕ್ಕೆ ಅವರು ತಿಳಿಸಿದರು.
     ಈ ಸಂಬಂಧ ಮಹೇಶ್ ತಿಮ್ಮರೋಡಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು,ನಮ್ಮ  ಕ್ಷೇತ್ರದ  ಬಿಜೇಪಿ ಶಾಸಕ ಮುಖ್ಯಮಂತ್ರಿ ಮೇಲೆ ಕೊಲೆ ಆರೋಪ ಹೊರೆಸಿದ್ದನ್ನು ನಾನು ಪ್ರಶ್ನೆ ಮಾಡಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದೆ,ಅದನ್ನೀಗ ಬಿಜೇಪಿಯವರು ತಿರುಚಿ ನನ್ನ ಮೇಲೆ ಆರೋಪ ಹೊರೆಸಿದ್ದಾರೆ ಎಂದಿದ್ದಾರೆ.ಇದರ ಸತ್ಯಾಸತ್ಯತೆಯ ಕುರಿತ ವೀಡಿಯೋಗಳು ಈಗ ಸಮೂಹ ಮಾಧ್ಯಮದಲ್ಲಿ ಹರಿದಾಡುತ್ತಿದೆ.