ಜಗತ್ತಿನ ಮೊದಲ ಪ್ರಜಾಪ್ರಭುತ್ವ ರಾಷ್ಟ್ರ ಬ್ರಿಟನ್ನಿನ ಮೊದಲ ಚುನಾವಣೆಯಲ್ಲಿ ಭಾರಿ ಅಕ್ರಮ: ನಕಲಿ ಮತದಾರರ ಬಳಕೆ
ಮೂರು ಶತಮಾನಗಳ ಹಿಂದೆ 1695 ರಲ್ಲಿ ಬ್ರಿಟನ್ ನಲ್ಲಿ ಮೊದಲ ಚುನಾವಣೆ. ಆ ಚುನಾವಣೆಯಲ್ಲಿಯೇ ಅಭ್ಯರ್ಥಿಗಳು #ಮನರಂಜನೆ ಕಾರ್ಯಕ್ರಮ ಏರ್ಪಡಿಸಿದರು. ಏಲ್ ಎಂಬ ಬ್ರಿಟನ್‌ನ ಜನಪ್ರಿಯ #ಮದ್ಯವನ್ನು ಕೇಸ್‌ಗಟ್ಟಲೆ ಸರಬರಾಜು ಮಾಡಿದರು. ಹಾಗೆಯೇ ಅಂದು ಬಹಳ ದುಬಾರಿಯಾಗಿದ್ದ ಅಮೆರಿಕದ #ಹೊಗೆಸೊಪ್ಪನ್ನು ಯಥೇಚ್ಛವಾಗಿ ಸರಬರಾಜು ಮಾಡಿದರು. ಇದಕ್ಕಾಗಿ ಹಣದ ಹೊಳೆ ಹರಿಸಿದರು.
ಕೆಲವರು ಒಂದೊಂದು ಮತವನ್ನೂ ಹಣ ಕೊಟ್ಟು ಕೊಂಡರು. ಆಗ ಒಂದು ಓಟಿನ ಬೆಲೆ ೨೦ ಪೌಂಡ್‌ಗಳಷ್ಟು. ಮೂರು ಶತಮಾನಗಳ ನಂತರ ಈಗ ಅದರ ಬೆಲೆ ಎಷ್ಟು ಎಂದು ಲೆಕ್ಕಿಸಿದರೆ ಎಷ್ಟಾಗಬಹುದು !
ಮತದಾನದ ದಿನ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳ ಮಾಡುತ್ತಿದ್ದ ಆಬ್ಬರವೇನು ! ಒಬ್ಬ ಅಭ್ಯರ್ಥಿ 9೦೦ ಕುದುರೆ ಸವಾರರ ಜೊತೆ ಮೆರವಣಿಗೆ ಮಾಡುತ್ತಾ ಬಂದ. ಮತ್ತೊಂದು ಕಡೆ ಕೇವಲ ಮೂರು ಸಾವಿರ ಮಾತ್ರ ಮತದಾರರಿದ್ದರು. ಆದರೆ ಅಭ್ಯರ್ಥಿ ಹತ್ತು ಸಾವಿರ ಜನರ ಮೆರವಣಿಗೆ ಮಾಡಿದ.
ಲಂಚದ ಪಾರ್ಲಿಮೆಂಟ್:
೧೮೪೧ ರ ಚುನಾವಣೆಯ ನಂತರದ ಪಾರ್ಲಿಮೆಂಟ್ ಲಂಚದ ಮೇಲೆ ಆಯ್ಕೆಯಾದ ಪಾರ್ಲಿಮೆಂಟ್ ಎಂದೇ ಹೆಸರಾಯಿತು. ಅಷ್ಟೊಂದು ಹಣದ ಹೊಳೆ ಹರಿದಿತ್ತು. ವಸಾಹತುಗಳಲ್ಲಿ ಕಪ್ಪು ಜನರನ್ನು ಗುಲಾಮರನ್ನಾಗಿ ದುಡಿಸಿಕೊಂಡು ಸಾವಿರಾರು ಎಕರೆಗಳಷ್ಟು ವಿಶಾಲ ವಿಸ್ತೀರ್ಣದಲ್ಕಿ ಕಬ್ಬು ,ಹತ್ತಿ, ಹೊಗೆಸೊಪ್ಪು ಬೆಳೆದು ಗಳಿಸಿದ ಲಾಭ, ಭಾರತದಂತಹ ದೇಶಗಳ ನೇಕಾರರನ್ನು ಉಪವಾಸ ಕೆಡವಿ ಮ್ಯಾಂಚೆಸ್ಟರ್ ಬಟ್ಟೆಗಳನ್ನು ಮಾರಿ ಗಳಿಸಿದ ಲಾಭ ಕುಣಿಯುತ್ತಿತ್ತಲ್ಲ. ಅದು ಈ ಚುನಾವಣೆಗಳಲ್ಲಿಯೂ ಕುಣಿಯಿತು.
ಫೇಕ್ ಮತದಾರರು :
ಅಲ್ಲಿಯ ವಿವಿಧ ಕ್ಷೇತ್ರಗಳಲ್ಲಿ ಅಂದಿನ ನಿಯಮಗಳ ಪ್ರಕಾರ ಮತದಾನದ ಅರ್ಹತೆಯಿಲ್ಲದ, ಆದರೆ ತಮ್ಮ ಹಿಡಿತದಲ್ಲಿರುವ ಜನರನ್ನು ಎಂಪಿ ಅಭ್ಯರ್ಥಿಗಳು ಮತದಾರನ್ನಾಗಿ ನೋಂದಾವಣೆ ( registration ) ಮಾಡಿದರು. ಅವರ ಮತಗಳ ಬಲದಿಂದಲೇ ವಿಜಯ ಗಳಿಸಿದರು. ಅಲ್ಲಿ ಇಂಥಹ ಮತದಾರರಿಗೆ faggot ( ನೊಣಗಳ ಮರಿಗಳಿಗೆ faggot ಎಂದು ಹೆಸರು ) ಮತದಾರರು ಎಂದು ಕರೆಯುತ್ತಿದ್ದರು.
ಚುನಾವಣಾ ವೆಚ್ಚದ ಮೇಲೆ ನಿರ್ಬಂಧ :
ನಾವು ಭಾರತದ ಚುನಾವಣೆಗಳಲ್ಲಿ ಚುನಾವಣಾ ವೆಚ್ಚದ ಮೇಲೆ ಮಿತಿಯ ಕಾನೂನು, ಅದರ ಮೇಲೆ ಉಸ್ತುವಾರಿಯ ಕ್ರಮಗಳು, ಹಣ ಸಾಗಣೆಯ ಜಫ್ತಿ ಇತ್ಯಾದಿಗಳ ಬಗ್ಗೆ ಕೇಳುತ್ತೇವೆಲ್ಲ .
ಇಂತಹ ಕ್ರಮಗಳ ತಾಯಿಯೂ ಜಗತ್ತಿನ ಪ್ರಜಾಪ್ರಭುತ್ವದ ತಾಯಿಯಾದ ಇಂಗ್ಲೆಂಡೇ ! ಇಂಗ್ಲೆಂಡಿನಾದ್ಯಂತ ಜನರ ನಡುವೆ ಲಂಚದ ಪಾರ್ಲಿಮೆಂಟ್ ಬಗ್ಗೆ ಎದ್ದ ಅಸಹನೆ ೧೮೫೪ ರಲ್ಲಿ ಪಾರ್ಲಿಮೆಂಟ್ ಚುನಾವಣಾ ವೆಚ್ಚ ನಿರ್ಬಂಧಕ ಕಾನೂನು ಅಂಗೀಕರಿಸುವಂತೆ ಮಾಡಿತು.
ಆದರೆ ಈ ಕಾನೂನು ಚುನಾವಣಾ ಭ್ರಷ್ಟಾಚಾರವನ್ನು ನಿಯಂತ್ರಿಸುವಲ್ಲಿ ಬಹಳ ಪ್ರಯೋಜನವೇನೂ ಆಗಲಿಲ್ಲ ಎಂಬುದಕ್ಕೆ ೧೮೭೦ ರಲ್ಲಿ ಪಾರ್ಲಿಮೆಂಟ್ ನೇಮಿಸಿದ1868 ರ ಚುನಾವಣೆಯ ಅಕ್ರಮಗಳ ಜಂಟಿ ತನಿಖಾ ಸಮಿತಿಯ ವರದಿ ಸ್ಪಷ್ಟಪಡಿಸುತ್ತದೆ. ಅದರ ಪ್ರಕಾರ : ಬಹಳಷ್ಟು ಮತದಾರರು ಮೊದಲೇ ದುಡ್ಡು ಕೊಡದೇ ಇದ್ದರೆ ಮತಗಟ್ಟೆಗಳಿಗೇ ಬರುವುದಿಲ್ಲ. ಅದರ ಜೊತೆಗೆ ಮದ್ಯ ಸರಬರಾಜಿನ ಕೂಪನ್ ಕೂಡಾ ನೀಡಲಾಗುತ್ತಿದೆ.
ಬೆದರಿಕೆಗಳು, ದೈಹಿಕ ದಾಳಿಗಳು :
ಇದೇ ಸಮಿತಿ ಮುಂದುವರೆದು ಚುನಾವಣೆಗಳಲ್ಕಿ ಬೆದರಿಕೆ ಹಾಕುವುದು, ಹೊರಗಿನ ಪ್ರಭಾವ ಕೂಡಾ ಚುನಾವಣಾ ಫಲಿತಾಂಶಗಳನ್ನು ವಿಕೃತಗೊಳಿಸುತ್ತದೆ. ಗ್ರಾಮೀಣ ಕ್ಷೇತ್ರಗಳಲ್ಲಿ ಇದು ಸಾಮಾನ್ಯ ಎಂದು ಹೇಳಿದೆ.
ಇಷ್ಟೆಲ್ಲ ಹಣದ, ಮದ್ಯದ ಹೊಳೆ ಹರಿಯುವಾಗ ಕೈ ಕೈ ಮಿಲಾಯಿಸುವುದೂ, ಹಿಂಸೆ ಕೊಲೆಗಳೂ ನಡೆಯುತ್ತಿದ್ದವು.
೧೮೬೮ ರ ಒಂದು ಚುನಾವಣೆಯಲ್ಲಿ ಐವತ್ತು ದಿನಗಳ ಪ್ರಚಾರದ ಅವಧಿಯಲ್ಲಿ ೩೯ ದಂಗೆಗಳು , ೧೭೮ ಗಲಭೆಗಳು, ೧೯೫ ಇತರ ಪ್ರಕರಣಗಳು ನಡೆದಿವೆ. ೧೭ ಜನರ ಹತ್ಯೆಯಾಗಿದೆ.
ಹೀಗೆ ಹಲವು ಪಾರ್ಲಿಮೆಂಟ್ ಚುನಾವಣೆಗಳಲ್ಲಿ ಹಿಂಸೆ, ಕೊಲೆಗಳು ಚುನಾವಣೆಗಳನ್ನು ವಿಕೃತಗೊಳಿಸುತ್ತಿದ್ದವು. ಅದರ ನಿಯಂತ್ರಣಕ್ಕಾಗಿ ಹಲವೆಡೆ ಸೈನ್ಯವನ್ನು ನಿಯೋಜಿಸುವ ತುರ್ತು ಇತ್ತು.
ಆದರೆ ಸೈನ್ಯವನ್ನೇ ಬೆದರಿಕೆಯ ಸಾಧನವಾಗಿ ಬಳಸಲಾಗುತ್ತಿತ್ತು ಎಂದು ಆ ವರದಿ ಹೇಳಿದೆ.
ಈ ವಿವರಗಳು ಪಾರ್ಲಿಮೆಂಟ್ ಎಂದರೆ ಆಸ್ತಿವಂತ , ಬಂಡವಾಳಶಾಹಿ ವರ್ಗಗಳು ತಮ್ಮ ಶೋಷಣೆಯನ್ನು ಮುಂದುವರೆಸಲು, ಸಂಪತ್ತನ್ನು ವೃದ್ಧಿಸಿಕೊಳ್ಳಲು ಎಲ್ಲ ಅನೀತಿಯುತ ಮಾರ್ಗಗಳಿಗೂ ಕೈ ಹಾಕುವುದು ಪ್ರಜಾಪ್ರಭುತ್ವದ ಮೊದಲ ದೇಶದಲ್ಲಿ, ಪ್ರಜಾಪ್ರಭುತ್ವದ ಮೊದಲ ದಿನಗಳಿಂದಲೇ ಅವಿರತವಾಗಿ ಸಾಗುತ್ತಿತ್ತು ಎಂಬುದನ್ನು ಸಾರುತ್ತವೆ.
ಬ್ರಿಟನ್ ನಲ್ಲಿ ಅಧುನಿಕ ಯುಗ ಮತ್ತು ಪ್ರಜಾಪ್ರಭುತ್ವದ ಉಗಮದ ಬಗ್ಗೆ ಬರೆಯುತ್ತಿರುವ ಲೇಖನ ಮಾಲೆಯ ಭಾಗ.
***
Gn Nagaraj ಬರೆಹ


