'ಕರ್ನಾಟಕ ಶಿಕ್ಷಣ ನೀತಿ ಅಥವಾ ' ಥೋರಟ್ ವರದಿ ' : ಕನ್ನಡ ದಮನಕ್ಕೆ ಶಿಕ್ಷಣ ನೀತಿಯ ಹೊಸ ಅಸ್ತ್ರ
ಬಹು ನಿರೀಕ್ಷಿತ 'ಕರ್ನಾಟಕ ಶಿಕ್ಷಣ ನೀತಿ ' ಯನ್ನು ರಚಿಸಲು 2023 ರಲ್ಲಿ ನೇಮಕವಾಗಿದ್ದ ಥೋರಟ್ ಆಯೋಗ ತನ್ನ ವರದಿಯನ್ನು ನೆನ್ನೆ ( 8. 8. 2025. ರಂದು ) ಸರ್ಕಾರಕ್ಕೆ ನೀಡಿದೆ .
5 ಸಂಪುಟ ಗಳ 2197 ಪುಟಗಳ ಈ ವರದಿಯ ಸಲಹೆಗಳು ( ಶಿಪಾರಸುಗಳು ) ಈಗ ಮಾಧ್ಯಮಗಳಲ್ಲಿ ಲಭ್ಯವಿವೆ .. ಶಾಲಾ ಶಿಕ್ಷಣ , ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಎಂಬ ಮೂರು ಭಾಗಗಳಡಿ ಈ ವರದಿ ಹರಹು ಹಬ್ಬಿದೆ
ಕರ್ನಾಟಕ ರಾಜ್ಯ ತನ್ನದೇ ಶಿಕ್ಷಣ ನೀತಿಯನ್ಬು ಹೊಂದುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯ ಬಿಂಬವಾಗಬೇಕಿದ್ದ
ಈ ವರದಿ ಅಥವಾ ಶಿಕ್ಷಣ ನೀತಿ ತನ್ನ ಅಂತರ್ಗತ ಕನ್ನಡ ವಿರೋಧದಿಂದಾಗಿ ತಿರಸ್ಕಾರಕ್ಕೆ ಅರ್ಹವಾಗಿ ಪರಿಣಮಿಸಿದೆ ..
ಯಾವುದೇ ಶಿಕ್ಷಣ ನೀತಿ ತಾನು ರೂಪುಗೊಳ್ಳುವ ಭಾಷಾ ಸಮುದಾಯದ ಬಹುಸಂಖ್ಯಾತರ ಹಿತಗಳನ್ನು ಪೊರೆದು ಕಾಪಾಡದೆ ಹೋದರೆ ಅದು ಸಹಜವಾಗೇ ಆ ಭಾಷಾ ಜನಪದಕ್ಕೆ ಅಪ್ರಸ್ತುತ ವಾಗಲೇಬೇಕಾಗುತ್ತದೆ...
ಇದುವರೆವಿಗೆ ಕರ್ನಾಟಕದ ಜನತೆ ಅನುಸರಿಸುತ್ತ , ಪಾಲಿಸುತ್ತ ಬಂದ ಮೂರೂ ಶಿಕ್ಷಣ ನೀತಿಗಳು ( 1968 ,1986 ,1992 ಮತ್ತು 2020 ) ತ್ರಿಭಾಷಾ ನೀತಿಯ ಮೂಲಕ ಹಿಂದಿ ಮತ್ತು ಸಂಸ್ಕೃತ ಗಳನ್ನು ಜನತೆಯ ಮೇಲೆ ಹೇರುತ್ತ ಕರ್ನಾಟಕ ದ ಪಾಲಿಗೆ ಶೈಕ್ಷಣಿಕ , ಸಾಂಸ್ಕೃತಿಕ , ರಾಜಕೀಯ , ಸಾಮಾಜಿಕ ಗುಲಾಮಗಿರಿ ಗೆ ದೂಡಿದವು .
ಇಂತಹ ಸನ್ನಿವೇಶದಲ್ಲಿ ಈ ಆಯೋಗದಿಂದ ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಕನ್ನಡಿಗ ಹತಾಶನಾಗಿದ್ದಾನೆ ..
ಸದ್ಯದ ಸನ್ನಿವೇಶದಲ್ಲಿ ಕನ್ನಡಿಗನ ಅಗತ್ಯಗಳಾದರೂ ಏನಿದ್ದವು ?ಅವು ಅತ್ಯಂತ ಸರಳ ಮತ್ತು ಜಾರಿಮಾಡಲು ಅತ್ಯಂತ ಸುಲಭವಾದವುಗಳು
ಒಂದು : ತ್ರಿಭಾಷಾ ಸೂತ್ರದ ನೀತಿಯ ರದ್ದತಿ . ಇದರಿಂದ ಕನ್ನಡಿಗರ ಮೇಲೆ ಆಗಿರುವ ನಿಡುಗಾಲದ ಮಾನಸಿಕ ನೈತಿಕ ಬೌದ್ಧಿಕ ಹಾನಿಯನ್ನು ತಪ್ಪಿಸುವುದು
ಎರಡು : ಹತ್ತನೆಯ ತರಗತಿಯ ನಂತರ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳಿಗೆ ಕೊಡುವಂತೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡುವುದು . ಪ್ರತಿ ವರ್ಷ ನಾಲ್ಕೂವರೆಯಿಂದ ಐದು ಲಕ್ಷ ಮಕ್ಕಳು ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದಾರೆ.. ಅವರ ಭವಿಷ್ಯದ ಶಿಕ್ಷಣಕ್ಕೆ ಕನ್ನಡ ಮಾಧ್ಯಮದ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು
ಮೂರು : ಕುವೆಂಪು ಅವರ ಮಾರ್ಗದರ್ಶಿ ಸೂತ್ರದಂತೆ ವಿವಿಧ ಜ್ಙಾನ ಶಿಸ್ತುಗಳ ಜ್ನಾನವನ್ನು ಕನ್ನಡೀಕರಿಸುವುದು .. ಈಗಿರುವಂತೆ ವಿವಿಧ ವಿಷಯಗಳ ಪಾರಿಬಾಷಿಕ ಪದಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡದೆ ,ಈಗ ಇರುವ ರೂಪದಲ್ಲೇ ಉಳಿಸಿಕೊಳ್ಳುವುದು .. ಈ ಮೂಲಕ ಕನ್ನಡ ಮಾಧ್ಯಮದ ಶಿಕ್ಷಣದ ಗುಣವತ್ತತೆಯನ್ನು ಹೆಚ್ಚಿಸುವುದು
ನಾಲ್ಕು : ಶಿಕ್ಷಣ ಹಕ್ಕು ಕಾಯ್ದೆಯನ್ನು ( RTE )ಈಗಿದ್ದಂತೆ , ಕನ್ನಡ ಮಾಧ್ಯಮದ ಸರ್ಕಾರಿ ಶಾಲಾ ಶಿಕ್ಷಣವನ್ನು ನಾಶಮಾಡಲಷ್ಟೇ ಬಳಸಿಕೊಳ್ಳದೆ ಕಾಯ್ದೆಯ ಸದುದ್ದೇಶಗಳ ಜಾರಿ ಗೆ ಬಳಸಿಕೊಳ್ಳುವುದು
ಇವಿಷ್ಟೂ ಸ್ಥೂಲವಾಗಿ ಕನ್ನಡಿಗರ ಹಿತವನ್ನು ಕಾ ಪಾಡುತ್ತವೆ ಎಂದು ಅಪಾರ ನಂಬಿಕೆ ಇಡಲಾಗಿತ್ತು..
ಅದರೆ . ಆಗಿರುವುದೇನು ?
ಮೊದಲನೆಯದಾಗಿ , ವಿಕೃತಗೊಂಡ 'ದ್ವಿಭಾಷಾ ನೀತಿ'ಯ ಸಲಹೆ . ನನ್ನ ಗ್ರಹಿಕೆಯಂತೆ ಈ ವರದಿಯಲ್ಲಿ ಶಿಪಾರಸುಗೊಂಡ 'ದ್ವಿಭಾಷಾ ನೀತಿ' , ಕನ್ನಡ ,ಕರ್ನಾಟಕ , ಕನ್ನಡಿಗರು , ಕರ್ನಾಟಕ ಏಕೀಕರಣ ತತ್ವ ಹಾಗೂ ಭಾರತದ ಭಾಷಾಧಾರಿತ ಒಕ್ಕೂಟ ತತ್ವಗಳಂತಹ ಮೂಲಭೂತ ಅಂಶಗಳನ್ನು ಪರಿಗಣಿಸಿಯೇ ಇಲ್ಲವೆನ್ನುವುದು ಸ್ಪಷ್ಟವಾಗುತ್ತದೆ ..
ಇಲ್ಲಿ ಶಿಫಾರಸು ಮಾಡಲಾದ ದ್ವಿಭಾಷಾ ನೀತಿ ಕನ್ನಡದ ಆಯ್ಕೆಯನ್ನು ಐಚ್ಛಿಕ ವನ್ನಾಗಿ ಮಾಡಿ 'ದ್ವಿಭಾಷಾ ನೀತಿ'ಯನ್ನು ವಿಕೃತಗೊಳಿಸುತ್ತದೆ . ಕುವೆಂಪು ಪ್ರತಿಪಾದಿತವಾದ ಮತ್ತು ಕನ್ನಡಿಗರ ಏಳ್ಗೆಯನ್ನೂ ಹಾಗೂ ಕರ್ನಾಟಕದಲ್ಲಿ ಭಾಷಿಕ ಸಾಮರಸ್ಯವನ್ನೂ ಏಕಕಾಲದಲ್ಲಿ ಸಾದಿಸುವ ದ್ವಿಭಾಷಾ ನೀತಿಗೆ ಇಲ್ಲಿ ಮನ್ನಣೆ ಕೊಟ್ಟಿಲ್ಲ..
ದ್ವಿಬಾಷಾ ನೀತಿಗೆ ಸಂಬಂಧಿಸಿದ ಥೋರಟ್ ಆಯೋಗದ ಶಿಫಾರಸ್ ಹೀಗಿದೆ :
"ದ್ವಿಭಾಷಾನೀತಿಯನ್ನುಅನುಷ್ಠಾನಗೊಳಿಸಿ:ಕನ್ನಡ/ಮಾತೃಭಾಷೆ, ಇಂಗ್ಲಿಷ್ "
ಕನ್ನಡ ಅಥವಾ ಮಾತೃಭಾಷೆ ಮತ್ತು ಇಂಗ್ಲಿಷ್ ಎಂಬುದು ಈ ಆಯೋಗದ ಕನ್ನಡ ಘಾತುಕ ಶಿಫಾರಸ್ ಅಥವಾ ಸಲಹೆಯಾಗಿದೆ
ಕನ್ನಡಿಗರು ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಅಂದರೆ ಕುವೆಂಪು ಅವರ, ಕಳೆದ ಶತಮಾನದ ಆಗ್ರಹದಿಂದ ಹಿಡಿದು , ಇವತ್ತಿನವರೆಗೆ ಕನ್ನಡಿಗರರ ಏಳ್ಗೆಗೆ ಅವಶ್ಯಕವೆನಿಸುವ ನೀತಿ "ಕನ್ನಡ ಮತ್ತು ಇಂಗ್ಲಿಷ್ ಅಥವಾ ಇಚ್ಚಿತ ಭಾಷೆ " ಅಂದರೆ ಕನ್ನಡದ ಜೊತೆಗೆ ಮತ್ತೊಂದು ಭಾಷೆ ಇರಬೇಕಾಗಿತ್ತು .ಅದರೆ ಈ ಆಯೋಗ ಇಂಗ್ಲಿಷ್ ನ ಜೊತೆಗೆ ಕನ್ನಡ ಅಥವಾ ಯಾವುದಾದರೂ ಮಾತೃಭಾಷೆ ಎಂದಾಗಿದೆ .ಈ ಮೂಲಕ ಈ ವರದಿ ಕನ್ನಡವನ್ನು ಸ್ಮಷಾನಗಾಣಿಸುವ ಉದ್ದೇಶಹೊಂದಿದೆ..
ಕುವೆಂಪು ಅವರು ಆತಂಕದಿಂದ ಸಂಶಯಿಸಿದ್ದ ಸ್ವರೂಪದಲ್ಲಿ ದ್ವಿಭಾಷಾ ನೀತಿಯನ್ನು ರೂಪಿಸಲಾಗಿದೆ 1968 ದಶಕದಲ್ಲೇ ಕುವೆಂಪು ಹೀಗೆ ಆತಂಕಿತರಾಗಿ ನುಡಿದಿದ್ದರು " ಬಹುಭಾಷೆಗಳಲ್ಲಿ ದ್ವಿಭಾಷೆ ನೂತ್ರದಲ್ಲಿ ಕನ್ನಡವನ್ನೇ ಬಿಟ್ಟುಬಿಡಬಹುದಲ್ಲ? ಎಂದು ನನ್ನನ್ನು ಕೆಲವರು ಕೇಳಿದರು. ಬಹುಭಾಷೆಗಳನ್ನಿಟ್ಟಾಗ ದ್ವಿಭಾಷೆ ತೆಗೆದುಕೊಂಡರೆ ಸಾಕು. ಅಂದರೆ ಕನ್ನಡವನ್ನೇ ಬಿಡುವುದೇ ? ಅದಕ್ಕೆ ನಾನು ಹೇಳಿದೆ - ಸರಕಾರ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕು. ಆಗ ಕನ್ನಡ ತನಗೆ ಬೇಡ ಎಂದು ಯಾರಾದರೂ ಹೇಳಿದರೆ ಅದರ ಅರ್ಥ ಏನೆಂದರೆ - ಕನ್ನಡ ಭಾಷೆಯಿಂದ ಬರುವ ಯಾವ ಪ್ರಯೋಜನವನ್ನೂ ಅವನು ಪಡೆಯೋದಿಲ್ಲ ಅಂತ. ಇಂಥ ವ್ಯಕ್ತಿ ರಷ್ಯಕ್ಕೋ ಇನ್ನೆಲ್ಲಿಗೋ ಹೊರಗೆ ಹೋಗುವವನು. ಬಹುಭಾಷೆಗಳಲ್ಲಿ ದ್ವಿಭಾಷೆ ಅಂದಾಗ ರಷ್ಯನ್ ಮತ್ತು ಇಂಗ್ಲಿಷ್ ಕಲಿತೀನಿ ಅನ್ನಬಹುದು. ಅಥವಾ ಇಂಗ್ಲಿಷ್ ಮತ್ತು ಇನ್ನೊಂದು ಭಾಷೆ ಕಲಿತೀನಿ ಅನ್ನಬಹುದು. ಅಂದರೆ ಕನ್ನಡಿಗನಾದರೂ ಅವನು ಕರ್ನಾಟಕದಲ್ಲಿ ಇರೋದಿಲ್ಲ. ಕನ್ನಡದಿಂದ ಅವನಿಗೆ ಪ್ರಯೋಜನ ಇಲ್ಲ
ಆದರೆ ಯಾವಾಗ ಅಧಿಕೃತ ಭಾಷೆ ಆಗಿ ಎಲ್ಲ ವ್ಯವಹಾರ ಕನ್ನಡದಲ್ಲಿ ನಡೆಯುವುದೋ, ಕೆಲಸಕ್ಕೆ ಸೇರಬೇಕಾದರೆ ಕನ್ನಡ ಕಲಿತಿರಲೇಬೇಕು ಎಂದಾಗುವುದೋ ಆಗ ಕರ್ನಾಟಕದಲ್ಲಿ ಇರುವಂಥ ಎಲ್ಲ ಜನರೂ ಕನ್ನಡ ಕಲಿಯಲೇಬೇಕಾಗುತ್ತದೆ. ನಾವು ಬಹುಭಾಷೆಗಳಲ್ಲಿ ದ್ವಿಭಾಷೆ ಅಂದಾಗ ಒಂದು ಭಾಷೆ ಕನ್ನಡ ಎಂದೇ ಅವರು ತಿಳಿದುಕೊಳ್ಳಬೇಕಾಗುತ್ತದೆ.
ದೇಶ ಸ್ವತಂತ್ರವಾದ ಮೇಲೆ ಎಂದು ನೀವು ತ್ರಿಭಾಷೆಯನ್ನು ಒಪ್ಪಿಕೊಂಡಿರೋ ಅಂದೇ ನಿಮ್ಮದೆಲ್ಲಾ ಹೋಯಿತು. ತ್ರಿಭಾಷಾ ಸೂತ್ರ ಒಪ್ಪಿಕೊಂಡರೆ ಇಂಗ್ಲಿಷ್ ಮತ್ತು ಹಿಂದಿ ಕಡ್ಡಾಯವಾಗುತ್ತವೆ. ದೇಶಭಾಷೆಗಳು ಕಡ್ಡಾಯ ಆಗುವುದಿಲ್ಲ ಗೊತ್ತಾಯಿತೆ ? ''
(ಮಟ ೧೦೫೪, ಕೆ.ಎಸ್. ಭಗವಾನ್ ಸಂದರ್ಶನ : ಕುವೆಂಪು ಸಮಗ್ರ ಗದ್ಯ, ಸಂಪುಟ-೨.)
ಕುವೆಂಪು ಅವರ ಮುಂಗಾಣ್ಕೆಯಲ್ಲಿದ್ದ ಅತಂಕ ನಿಜವಾಗಿದೆ. ಈ ಆಯೋಗ ನೀಡಿದ ದ್ವಿಭಾಷಾ ನೀತಿಯ ಕಲ್ಪನೆಯಲ್ಲಿ ಕನ್ನಡವನ್ನು ಬಿಟ್ಟುಬಿಡುವ ಆತಂಕ ಸ್ಪಷ್ಟವಾಗಿದೆ
ಎರಡನೆಯದಾಗಿ ,
ಪ್ರತಿ ವರ್ಷವೂ ಹತ್ತನೆಯ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ನಿವಾರಿಸಲ್ಪಡುತ್ತಿದ್ದಾರೆ .ಈ ವರದಿ ಈ ಜ್ವಲಂತ ಸಮಸ್ಯೆಗೆ ಪರಿಹಾರವನ್ನೆ ಒದಗಿಸಿಲ್ಲ.ಹತ್ತನೆಯ ತರಗತಿಯ ನಂತರ ಕನ್ನಡ ಮಾದ್ಯಮದ ಶಿಕ್ಷಣವನ್ನು ಒದಗಿಸುವ ಬಗ್ಗೆ ಈ ಆಯೋಗ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕಿತ್ತು ಆದರೆ ಬಹುಸಂಖ್ಯಾತ ಮಕ್ಕಳ ಹಿತವನ್ನು ವ್ಯವಸ್ಥಿತವಾಗಿ ದಮನಿಸಲಾಗಿದೆ
ಈ ವರದಿಯು ಸಲಹೆ ಮಾಡಿರುವ ಶೈಕ್ಷಣಿಕ ಕಾರ್ಯಕ್ರಮ ರಚನೆಯನ್ನೂ ಮತ್ತು ಈ. ಆಯೋಗದ. ಭಾಷಾ ನೀತಿಯ ಸಲಹೆಯನ್ನೂ ನೋಡಿದರೆ , ಕನ್ನಡವನ್ನು ಬೇರು ಸಮೇತ ಎತ್ತಿಕಿತ್ತೆಸೆಯುವ ಹುನ್ನಾರ ವೇ ಇದರ ಹಿಂದೆ ಇರುವಂತೆ ಕಾಣುತ್ತದೆ
" 2+8+4 ರಚನೆಯನ್ನು ಅಳವಡಿಸಿಕೊಳ್ಳಿ: 2 ವರ್ಷ ಪೂರ್ವ-ಪ್ರಾಥಮಿಕ, 8 ವರ್ಷ ಪ್ರಾಥಮಿಕ, ಮತ್ತು 4 ವರ್ಷ ಮಾಧ್ಯಮಿಕ ಶಿಕ್ಷಣ " ಎಂದು ಮತ್ತೊಂದು ಸಲಹೆಯನ್ನು ಆಯೋಗ ನೀಡಿದೆ..ಎಂಟು ವರ್ಷ ಪ್ರಾಥಮಿಕ ಮತ್ತು ನಾಲ್ಕು ವರ್ಷ ಮಾಧ್ಯಮಿಕ ಶಿಕ್ಷಣದ ಈ ಹೊಸ ಶೈಕ್ಷಣಿಕಕಾರ್ಯಕ್ರಮದಲ್ಲಿ ಈಗ ಇರುವ ಕನ್ನಡ ಮಾಧ್ಯಮದ ಶಿಕ್ಷಣವನ್ನು ಹೇಗೆ ಅಳವಡಿಸುತ್ತಾರೆ ,ಅಥವಾ ಮುಂದುವರಿಸಿಕೊಂಡು ಹೋಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಗಳಿಲ್ಲ
ಮೊದಲು ಇದ್ದ 4+3+3+2 ( ನಾಲ್ಕು ವರ್ಷ ಪ್ರಾಥಮಿಕ , ಮೂರು ವರ್ಷ ಮಾದ್ಯಮಿಕ , ಮೂರು ವರ್ಷಗಳ ಪ್ರೌಢ , ಮತ್ತು ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣದ ಬದಲಿಗೆ ಇಲ್ಲಿ : 2+8+4 ( ಎರಡು ವರ್ಷ ಪೂರ್ವ ಪ್ರಾತಮಿಕ , ಎಂಟು ವರ್ಷ , ಪ್ರಾತಮಿಕ ,ಮತ್ತು ನಾಲ್ಕು ವರ್ಷ ಮಾಧ್ಯಮಿಕ. ಎಂಬ ಈ ಹೊಸ ರಚನೆಯನ್ನು ಸಲಹೆ ಮಾಡುತ್ತಲೇ "ಪ್ರಾಥಮಿಕ ಐದನೆ ತರಗತಿ 'ಮತ್ತು 'ಮೆಟ್ರಿಕ್'' ಅನ್ನುವ ಪದಗಳನ್ಜು ಇಲ್ಲಿ ಶಿಫಾರಸುಗಳಾಗಿ ಬಳಸಲಾಗುತ್ತದೆ ಇವೆರಡೂ ಹಳೆಯ ಅಥವಾ ಈಗಿರುವ ವ್ಯವಸ್ತೆಗೆ ಸೇರಿರುವ ನುಡಿಗಟ್ಟುಗಳು .. ಈ ಗೊಂದಲದ ಪರಿಸ್ತಿತಿ ಯಲ್ಲಿ ಕನ್ನಡ ಮಾಧ್ಯಮದ ಶಿಕ್ಷ ಣವನ್ನು ಹೇಗೆ ಉಳಿಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಆಯೋಗ ಮಾತೇ ಆಡಿಲ್ಲ . ಜೊತೆಗೆ ಈ ಶಿಕ್ಷಣ ನೀತಿ ಆಯೋಗ ಕನ್ನಡದಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಮಾತನ್ನೆ ಆಡದೆಹೋಗಿದೆ.. ಈ ಕಾರಣದಿಂದ ಇದೊಂದು ಸಂವೇದನಾ ಶೂನ್ಯ ಹೊಣೆಗೇಡಿ ವರದಿಯಾಗಿಬಿಟ್ಟಿದೆ
ಮೂರನೆಯದಾಗಿ ,
'ಥೋರಟ್ ಆಯೋಗ' ದ ಮತ್ತೊಂದು ಸಲಹೆ ಅಥವಾ ಶಿಪಾರಸ್ : ." ಎಲ್ಲಾ ಬೋರ್ಡ್ ಶಾಲೆಗಳಲ್ಲಿ 5ನೇ ತರಗತಿಯವರೆಗೆ ಕನ್ನಡ/ಮಾತೃಭಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಕಡ್ಡಾಯಗೊಳಿಸಿ ''
ಎಂದು ಹೇಳುತ್ತದೆ . ಈಗಾಗಲೇ ಈ ಸಂಬಂಧದಲ್ಲಿ ಸುಪ್ರೀಂ ಕೋರ್ಟ್ ನ ಪೂರ್ಣ ಪೀಠದ ತೀರ್ಪು( ಡಿಸೆಂಬರ್ 2014 ) ಈ ಸಲಹೆ ಅಥವಾ ಶಿಫಾರ್ಸಿನ ವಿರುದ್ಧವಾಗಿದೆ. '' ಕನ್ನಡ ಅಥವಾ ಮಾತೃಬಾಷೆಯನ್ನು ಬೋಧನಾ ಮಾಧ್ಯಮವನ್ನಾಗಿ ಮಾಡಲು ಸಾಧ್ಯವಿಲ್ಲ.. " ಅದು ಹೇರಿಕೆ , ಶಿಕ್ಷಣ ಮಾಧ್ಯಮದ ಆಯ್ಕೆ , ಮಕ್ಕಳ ಮತ್ತು ಪೋಷಕರ ಹಕ್ಕಿನ ಮೇಲೆ ನಡೆದ ದಾಳಿ " ಎಂದು ಸುಪ್ರೀಂ ತನ್ನ ತೀರ್ಪಿನಲ್ಲಿ ಕೋರ್ಟ್ ಸ್ಪಷ್ಟವಾಗಿ ಸರ್ಕಾರವನ್ನು ಎಚ್ಚರಿಸಿದೆ
ಹೀಗಾಗಿ , ಆಯೋಗದ ಈ ಸಲಹೆ , ಈ ಹೊಸ ನೀತಿ ಜಾರಿಗೊಂಡರೂ ಕೋರ್ಟುಗಳಲ್ಲಿ ಊರ್ಜಿತವಾಗುವುದಿಲ್ಲ..ಕಡು ಸೋಜಿಗದ ಸಂಗತಿ ಎಂದರೆ
ಐದನೆ ತರಗತಿ ಅಲ್ಲ ಹತ್ತನೇ ತರಗತಿಯವರೆಗೆ ಭರ್ತಿ ಹತ್ತು ವರ್ಷಗಳವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿಯುವ ಅಂದಾಜು ಐದು ಲಕ್ಷ ಮಕ್ಕಳು ಕರ್ನಾಟಕದಲ್ಲಿ ಇದ್ದಾರೆ ... ಥೋರಟ್ ಅಯೋಗ ಈ ವಾಸ್ತವ ಸಂಗತಿಯತ್ತ ನೋಡದೆಹೋಗಿದೆ ದುರದೃಷ್ಟಕರ ಸಂಗತಿ ಎಂದರೆ ಈ ಬಗೆಗೆ ಅಯೋಗ ತಿಳಿದೂ ಇಲ್ಲ , ಈ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಏನನ್ನೂ ಮಾಡಿಲ್ಲ . ಆಯೋಗದ ಸದಸ್ಯರಾಗಿದ್ದ ಕರ್ನಾಟಕದ. ಬುದ್ದಿಜೀವಿ ಗಳು ಬರೆಹಗಾರರು ಕರ್ನಾಟಕದ ಲಕ್ಷಾಂತರ ಬಡ ಮಕ್ಕಳಿಗೆ ಅನ್ಯಾಯ ಮಾಡಿದ್ದಾರೆ.
ಹತ್ತನೆಯ ತರಗತಿಯ ನಂತರ ಕನ್ನಡ ಮಾಧ್ಯಮದ ಶಿಕ್ಷಣವಿಲ್ಲದೆ ತಮ್ಮ ಶಿಕ್ಷಣವನ್ನು ಕೊನೆಗಾಣಿಸುವ ಸಾಮಾಜಿಕವಾಗಿ ಮತ್ತು ಆರ್ಥಿವಾಗಿ ಹಿಂದುಳಿದ ಸಮುದಾಯಗಳಿಂದ ಬಂದ ಈ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಕೊಡುವುದಷ್ಟೇ ಆಗಿದ್ದು ಆ ಬಗ್ಗೆ ಸ್ಪಷ್ಟವಾದ ನೀತಿ ಮತ್ತು ಮಾರ್ಗದರ್ಶನ ಈ ನೀತಿಯಿಂದ ಒದಗಬೇಕಾಗಿತ್ತು , ಅದಾಗದೇಹೋಗಿದೆ
ನಾಲ್ಕನೆಯದಾಗಿ ,ಥೋರಟ್ ಆಯೋಗದ ಮತ್ತೊಂದು ಸಲಹೆ ಅಥವಾ ಶಿಪಾರಸ್ ಹೀಗಿದೆ : "
"ಹಂತ ಹಂತವಾಗಿ RTE ವ್ಯಾಪ್ತಿಯನ್ನು 4-18 ವಯಸ್ಸಿನವರಿಗೆ ವಿಸ್ತರಿಸಿ."
RTE , ಕನ್ನಡ ಶಾಲೆಗಳ , ಕನ್ನಡ ಮಾಧ್ಯಮದ , ಕನ್ನಡ ಭಾಷೆಯ ಉಳಿವಿನ ದೃಷ್ಟಿಯಿಂದ ಅತ್ಯಂತ ವಿನಾಶಕಾರಿಯಾದದ್ದಾಗಿದೆ.. ಇದರಿಂದ ಈಗಾಗಲೇ ಲಕ್ಷಲಕ್ಷ ಸಂಕ್ಯೆಯಲ್ಲಿ ವಿದ್ಯಾರ್ಥಿಗಳು ಕಾಸಗಿ ಶಾಲೆಗಳಿಗೆ ಗುಳೆಹೋಗಿದ್ದಾರೆ .. RTE ಕಾರಣದಿಂದ 2012 ರಿಂದಲೇ ಸರ್ಕಾರಿ ಶಾಲೆಗಳು ನೊಣಹೊಡೆಯುವ ಪರಿಸ್ತಿತಿ ನಿರ್ಮಾಣವಾಗಿದೆ . ಪ್ರತಿ ವರ್ಷವೂ ಸರ್ಕಾರಿ ಶಾಲೆಗಳ ಪ್ರವೇಶಾತಿ ಯ ಐದನೇ ಒಂದರಷ್ಟು ವಿದ್ಯಾರ್ಥಿಗಳು ಸರ್ಕಾರಿ ಕನ್ನಡ ಮಾದ್ಯಮದ ಶಾಲೆಗಳ ನ್ನು ತೊರೆದು ಕಾಸಗಿ ಇಂಗ್ಲಿಷ್ ಮೀಡಿಯಂ ಶಾಲೆಗಳನ್ನು ಸೇರಿಕೊಂಡಿವೆ. ಇದರಿಂದಾಗಿ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಶರವೇಗದಲ್ಲಿ ಮುಚ್ಚಿಹೋಗುತ್ತಿವೆ ..
ಐದನೆಯ ದಾಗಿ , ಈ ಆಯೋಗದ ಮತ್ತೆರಡು ಸಲಹೆಗಳು ಕೂಡಾ ಕನ್ನಡ ಘಾತುಕವಾಗಿದೆ. : "NCERT ಪಠ್ಯಪುಸ್ತಕಗಳ ಅವಲಂಬನೆಯನ್ನು ಕೊನೆಗೊಳಿಸಿ; ವಿಷಯಗಳನ್ನು ಸ್ಥಳೀಯಗೊಳಿಸಿ" ಮತ್ತು
"ಕನ್ನಡ/ಮಾತೃಭಾಷೆ/ಭಾರತೀಯ/ವಿದೇಶಿ ಭಾಷೆ ಸೇರಿದಂತೆ ಎರಡನೇ ಭಾಷಾ ಕೋರ್ಸ್ ಅನ್ನು ಕಡ್ಡಾಯಗೊಳಿಸಿ."
NCERT ಪಠ್ಯಪುಸ್ತಕಗಳ ಅವಲಂಬನೆಯನ್ನು ಕೊನೆಗೊಳಿಸಿ , ವಿಷಯಗಳನ್ನು ಸ್ಥಳೀಯಗೊಳಿಸಿದರೆ ಮತ್ತೆ ನಮ್ಮಮಕ್ಕಳು ಕೂಪ ಮಂಡೂಕಗಳಾಗುತ್ತವೆ ... ಜಾಗತಿಕ ಸ್ಪರ್ಧಾ ವೇದಿಕೆಗಳಲ್ಲಿ ಹಿಂದುಳಿಯುತ್ತಾರೆ ಈ ಕಾರಣದಿಂದ ಸಮಾನ ಸಿಲಬಸ್ ಅಥವಾ ಪಠ್ಯಕ್ರಮವನ್ನು ಅಳವಡಿಸುವ ಕೆಲಸವನ್ನು ತುರ್ತಾಗಿ ಮಾಡಬೇಕಾಗಿದೆ .. ಈ ಬಗೆಗೆ ಅಯೋಗ ಸೂಕ್ಷ್ಮವಾಗದೆಹೋಗಿದೆ
NCERT ರಾಷ್ಟ್ರದ ಒಟ್ಟೂ ಹಿತವನ್ನು ಪರಿಗಣಿಸಿ ತಾರತಮ್ಯರಹಿತ ಸಮಾನ ಸಿಲಬಸ್ ರೂಪಿಸಬೇಕಾಗಿದೆ .. ಇದರಿಂದ ಬೇರೆ ಬೇರೆ ಭಾಗೀದಾರ ಸಮುದಾಯಗಳಲ್ಲಿ ಮೇಲರಿಮೆ ಕೀಳರಿಮೆಗಳಿಗೆ ಅವಕಾಶ ವಿಲ್ಲವಾಗುತ್ತದೆ ..
ಮತ್ತೊಂದು ಶಿಪಾರಸ್ : " ಕನ್ನಡ/ಮಾತೃಭಾಷೆ/ಭಾರತೀಯ/ವಿದೇಶಿ ಭಾಷೆ ಸೇರಿದಂತೆ ಎರಡನೇ ಭಾಷಾ ಕೋರ್ಸ್ ಅನ್ನು ಕಡ್ಡಾಯಗೊಳಿಸಿ." ಎಂದು ಹೇಳುತ್ತದೆ
ಈ ಸಲಹೆಯೂ ಸಹ ಕನ್ನಡ ನಾಶಕ ಸಲಹೆಯಾಗಿದೆ ಎರಡನೆಯ ಭಾಷಾ ಕೋರ್ಸಿನಲ್ಲಿ ಕನ್ನಡ ಐಚ್ಚಿಕವಾಗಬಾರದು ಬದಲು ಕಡ್ಡಾಯವಾಗಬೇಕಾಗಿದೆ.. ಅದರೆ ಈ ಶಿಪಾರಸಿನಂತೆ ಕನ್ನಡ ಇಲ್ಲಿ ಕಡ್ಡಾಯವಾಗದೆ ಐಚ್ಚಿಕ ಸ್ಥಾನಕ್ಕೆ ಸರಿಸಲ್ಪಟ್ಟಿದೆ ..
ಇನ್ನು ಅನುವಾದದ ವಿಚಾರಕ್ಕೆ ಸಂಬಂದಿಸಿದಂತೆ ಇರುವ ಶಿಪಾರಸು ಸ್ಪಷ್ಟವಾಗಿಲ್ಲ.. ಇಲ್ಲಿರುವ ನೂರಾರು ಶಿಪಾರಸುಗಳಲ್ಲಿ ಕನ್ನಡದಲ್ಲಿ ತಿಳಿಯುವ , ಚರ್ಚಿಸುವ , ಜ್ನಾನ ದ ವಿನಿಮಯ ದ ಹಕ್ಕಿನ ಕುರಿತ ಮಹಾತ್ಮಾ ಗಾಂದಿ ,ಲೋಹಿಯಾ ,ಕುವೆಂಪು ಅವರಂತಹ ಹಿರಿಯ ಚೇತನಗಳ ಅನಾದಿ ಆಗ್ರಹವನ್ನು ನಿರ್ಲಕ್ಷಿಸಲಾಗಿದೆ .. ಈ ಕುರಿತು ಇಲ್ಲಿ ಬಗ್ಗೆ ಎರಡು ಅಸ್ಪಷ್ಟ ಶಿಫಾರಸುಗಳಿವೆ :
"ದ್ವಿಭಾಷಾ ಬೋಧನೆಯನ್ನು ಉತ್ತೇಜಿಸಿ ಮತ್ತು ಪ್ರಮುಖ ಪಠ್ಯಪುಸ್ತಕಗಳ ದ್ವಿಭಾಷಾ ಆವೃತ್ತಿಗಳನ್ನು ಒದಗಿಸಿ." ಮತ್ತು
" ಕನ್ನಡ ಹಾಗು ಜಾಗತಿಕ ಭಾಷೆಗಳ ನಡುವಿನ ಜ್ಞಾನ ಅನುವಾದಕ್ಕಾಗಿ ಪ್ರತ್ಯೇಕ ಕೇಂದ್ರವನ್ನು ರಚಿಸಿ."
ಪ್ರಾಣಾಂಶಗಳಾಗಬೇಕಾಗಿದ್ದ ಈ ಎರಡು ಶಿಪಾರಸುಗಳು ಕೊನೆಕೊನೆಗೆ ಒತ್ತರಿಸಲ್ಪಟ್ಟಿವೆ ಅಷ್ಟೇ ಅಲ್ಲ , ತಾವು ಹೇಳಹೊರಟಿರುವುದರ ಬಗ್ಗೆ ಅಸ್ಪಷ್ಟವಾಗಿವೆ .. ಜ್ಙಾನವನ್ನು ಅತಿ ಶೀಘ್ರವಾಗಿ ಕನ್ನಡಕ್ಕೆ ತಂದುಕೊಳ್ಳುವ ಬಗ್ಗೆ ಇಲ್ಲಿ ಸ್ಪಷ್ಟ ನಿರ್ದೇಶನಗಳು ಇರಬೇಕಾಗಿತ್ತು .. ಅದಿಲ್ಲದೆ ಈ ಎರಡೂ ಸಲಹೆಗಳು ಬರೀ ಹೆಸರಿಗಾಗಿ ಮಾತ್ರ ಇರುವಂತೆ ಕಾಣುತ್ತವೆ..
ಈ ಎಲ್ಲ. ಕಾರಣಗಳಿಂದ ಈ ನೀತಿ ಸ್ವೀಕಾರ ಯೋಗ್ಯವಾಗಿಲ್ಲದ ಕಾರಣ ,ಕನ್ನಡಿಗರು ಈ ವರದಿಯನ್ನು ಒಪ್ಪದಂತೆ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ .. ..
ಕನ್ನಡವನ್ನು ವ್ಯವಸ್ತಿತವಾಗಿ ದಮನಿಸುವ ಶಿಫಾರಸ್ಸುಗಳನ್ನುಳ್ಳ ಈ ನೀತಿಯು ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಯನ್ನಾಗಲಿ , ಸಾಮಾಜಿಕ ರಾಜಕೀಯಾದಿ ಅಸ್ತಿತ್ವ ಮತ್ತು ಅನನ್ಯತೆಗಳನ್ನಾಗಲಿ ಪೊರೆಯದ ,ಪೋಶಿಸದ , ಶೈಕ್ಷಣಿಕ ಉನ್ನತಿಗೆ ನೆರವಾಗದ
ವಿನಾಶಕಾರಕ ನೀತಿಯಾದ ಕಾರಣ , ಈ ಕನ್ನಡ ಘಾತುಕ ನೀತಿಯನ್ನು ಕನ್ನಡಿಗರು ಒಮ್ಮೈಯ್ಯಾಗಿ ನಿಂತು ತಿರಸ್ಕರಿಸಬೇಕಾಗಿದೆ
ಕೊನೆಯ ಮಾತು :
ಪಕ್ಕದ ಮಹಾರಾಷ್ಟ್ರದ ಪ್ರೊ ಥೋರಟ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗಲೇ ಕನ್ನಡದ ಹಿತಗಳ ಮೇಲೆ ಕಾರ್ಮೋಡ ಕವಿದವು .. ಕರ್ನಾಟಕದ ಶಿಕ್ಷಣ ನೀತಿಯನ್ನು ರೂಪಿಸುವ ಜವಾಬ್ದಾರಿ ಹೊತ್ತ ಆಯೋಗಕ್ಕೆ ಕರ್ನಾಟಕದ ಪರಂಪರೆ ಮತ್ತು ಸಾಂಸ್ಕೃತಿಕ ಗುರುತುಗಳನ್ನು ಬಲ್ಲ ಕನ್ನಡಿಗರೇ ಅಧ್ಯಕ್ಷರಾಗಬೇಕಾಗಿತ್ತು.. ಆರಂಭದಲ್ಲೇ ಎಡವಿದ ಕರ್ನಾಟಕ ರಾಜ್ಯ ಸರ್ಕಾರ ಥೋರಟ್ ಅವರನ್ನು ಆಯೋಗದ ಮೇಲೆ ಹೇರಿದಾಗಲೇ ಕನ್ನಡದ ಕನಸುಗಳು ಕಮರಿಹೋದವು..
ಅದರೆ ಇದಕ್ಕೆ ವ್ಯತಿರಿಕ್ತವಾಗಿ ತಮಿಳುನಾಡಿನ ಉದಾಹರಣೆ ಯನ್ನು ನೊಡಬಹುದಾಗಿದೆ. 2025 ರ ತಮಿಳುನಾಡು ಶಿಕ್ಷಣ ನೀತಿ ಆಯೋಗದ ಅಧ್ಯಕ್ಷರಾಗಿ ದೆಹಲಿ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಡಿ . ಮುರುಗೇಶನ್ ಅವರನ್ನು ನೇಮಕಮಾಡಿತ್ತು .. ಅವರ ಅಯೋಗವೂ ಈಗ ತನ್ನ ವರದಿಯನ್ನು ನೀಡಿದೆ..
ಹೀಗೆ ಕನ್ನಡದ ದುರವಸ್ಥೆಯನ್ನು ಬಣ್ಣಿಸಲು ಪದಗಳೇ ಇಲ್ಲವಾಗಿವೆ. ರಾಜ್ಯದ ಶಿಕ್ಷಣ ನೀತಿಯ ಕರಡನ್ನು ಬಿಡುಗಡೆ ಮಾಡುತ್ತ ತಮಿಳು ನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಹೇಳಿದ ಮಾತುಗಳು ಕನ್ನಡಿಗರಿಗೆ ಪಾಠವಾಗಬೇಕಾಗಿದೆ
" ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಪರ್ಯಾಯವಾಗಿ ತಮಿಳುನಾಡು ಸರ್ಕಾರ ರೂಪಿಸಿರುವ ಶಾಲಾ ಶಿಕ್ಷಣ ನೀತಿ-2025 (ಎಸ್‌ಇಪಿ) ಅನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, 'ಮಾತೃಭಾಷೆ ತಮಿಳು ನಮ್ಮ ಅಸ್ಮಿತೆ, ನಮ್ಮ ಹೆಮ್ಮೆ ಎನ್‌ಇಪಿ ಮೂಲಕ ಹಿಂದಿ ಹೇರಿಕೆ ಮಾಡುವ ಪ್ರಯತ್ನಗಳಿಗೆ ನಾವು ಮಣಿಯುವುದಿಲ್ಲ' ಎಂದು ಹೇಳಿದರು.
'ತಮಿಳುನಾಡಿನ ಸಂಸ್ಕೃತಿ, ಭಾಷೆ ಮತ್ತು ಸಾಮಾಜಿಕ ಪರಂಪರೆ ಶಿಕ್ಷಣ ನೀತಿಯಲ್ಲಿ ಅಡಗಿದೆ. ತಮಿಳುನಾಡು ಎಲ್ಲದರಲ್ಲೂ ವಿಶಿಷ್ಟತೆಯನ್ನು ಹೊಂದಿದೆ. ನಮ್ಮಲ್ಲಿ ಪ್ರಗತಿಪರ ಆಲೋಚನೆಗಳಿವೆ. ಇದೆಲ್ಲದರ ಆಧಾರದ ಮೇಲೆ ಶಿಕ್ಷಣ ನೀತಿ ರಚಿಸಲಾಗಿದೆ' ಎಂದರು."
•ಡಾ ನಟರಾಜ ಕೆ ಪಿ


