ಹಬ್ಬದ ಸಂಭ್ರಮದಲ್ಲಿ ಝಗಮಗಿಸಿದ ಚಾಮರಾಜನಗರ ಸಂತ ಪೌಲರ ದೇವಾಲಯ-ಭಕ್ತಿಭಾವದಲ್ಲಿ ಮಿಂದೆದ್ದ ಭಕ್ತ ವೃಂದ

ಚಾಮರಾಜನಗರ. ಆ.4.ಜೋಡಿ ರಸ್ತೆಯ ಕಥೋಲಿಕರ ಸಂತ ಪೌಲರ ದೇವಾಲಯದ ವಾರ್ಷಿಕೋತ್ಸವದಲ್ಲಿ ಮೈಸೂರು ಕುವೆಂಪು ನಗರ ಸಹಾಯ ಮಾತೆ ದೇವಾಲಯದ ವಂದನೀಯ ಗುರು ಡಾ. ಆರೋಗ್ಯ ಸ್ವಾಮಿ ವಿವಿಧ ಧರ್ಮಕೇಂದ್ರಗಳ ಇಪ್ಪತ್ತಕ್ಕೂ ಮಿಕ್ಕಿ ಧರ್ಮಗುರುಗಳೊಂದಿಗೆ ಆಡಂಬರದ ಗಾಯನ ದಿವ್ಯ ಬಲಿಪೂಜೆ ಅರ್ಪಿಸಿದರು. ಮೈಸೂರು ಹಾಗೂ ಊಟಿ ಧರ್ಮಪ್ರಾಂತ್ಯದ ವಿವಿಧ ಧರ್ಮಕೇಂದ್ರದ ಧರ್ಮಗುರುಗಳು ಪೂಜಾ ವಿಧಿವಿದಾನಗಳಲ್ಲಿ ಭಾಗವಹಿಸಿದ್ದರು. ಆರು ಮಕ್ಕಳಿಗೆ ಪರಮಪ್ರಸಾದ ಸಂಸ್ಕಾರ ನೀಡಲಾಯಿತು. ಸುತ್ತಮುತ್ತಲ ಧರ್ಮಕೇಂದ್ರಗಳಿಂದ ಆಗಮಿಸಿದ ನೂರಾರು ಭಕ್ತರು ಸ್ಥಳೀಯ ಭಕ್ತವೃಂದದ ಜೊತೆ ಭಕ್ತಿಭಾವದಲ್ಲಿ ಮಿಂದೆದ್ದರು. ಹಬ್ಬದ ಸಿದ್ದತೆಯಾಗಿ ಗುರುವಾರ ಸಂತ ಪೌಲರ ಧ್ವಜಾರೋಹಣ ನೆರವೇರಿಸಲಾಗಿತ್ತು. ಗುರು ದೀಪಕ್ ಜೋಸೆಫ್ ಮತ್ತು ಗುರು ವಿನಯ್ ರವರು ಹಬ್ಬದ ತ್ರಿದಿನಗಳ ಸಿದ್ದತೆಯಾಗಿ ಬಲಿಪೂಜೆ ನೀಡಿ ಬೈಬಲ್ ಪ್ರವಚನಗಳ ಮೂಲಕ ಭಕ್ತಾಧಿಗಳನ್ನು ಆತ್ಮೀಕವಾಗಿ ತಯಾರುಗೊಳಿಸಿದ್ದರು. ಕಳೆದ ಮೂರು ದಿನಗಳಿಂದ ಇಡೀ ದೇವಾಲಯ ಮತ್ತು ಪರಿಸರವನ್ನು ತಳಿರು ತೋರಣಗಳಿಂದ ಝಗಮಗಿಸುವ ವಿದ್ಯುತ್ ದೀಪಗಳಿಂದ, ಬಲಿಪೀಠವನ್ನು ಚಿತ್ತಾಕರ್ಷಕ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಪೂಜಾ ಕಾರ್ಯಕ್ರಮಗಳ ಬಳಿಕ ಅಲಂಕೃತಗೊಂಡ ತೇರಿನಲ್ಲಿ ಸಂತ ಪೌಲರ ಪುತ್ಥಳಿಯ ಮೆರವಣಿಗೆ ಜೋಡಿ ರಸ್ತೆಯಲ್ಲಿ ಸಾಗಿ ಚರ್ಚ್ ಆವರಣ ಸೇರಿತು. ಮೆರವಣಿಗೆಯಲ್ಲೂ ನೂರಾರು ಭಕ್ತರು ಪಾಲ್ಗೊಂಡರು. ಕೊನೆಯಲ್ಲಿ ಪ್ರಸಾದ ವಿನಿಯೋಗದೊಂದಿಗೆ ಕಾರ್ಯಕ್ರಮ ಸಂಪನ್ನ ಗೊಂಡಿತು. ಮಹೋತ್ಸವದಲ್ಲಿ ಸ್ಥಳೀಯ ಧರ್ಮಕೇಂದ್ರದ ವಂ ಗುರು ಅಂತೋಣಪ್ಪ. ಸಿ. ಇತರ ಧರ್ಮಕೇಂದ್ರಗಳ ಗುರುಗಳಾದ ರಾಯಪ್ಪ, ಸಾಲೋಮನ್, ಗೆಬ್ರಿಯೆಲ್, ಬರ್ನಾಡ್ ಪ್ರಕಾಶ್,ಮಾಣಿಕ್ಯಂ, ಅಂತೋಣಿಸ್ವಾಮಿ,ಫ್ರಾನ್ಸಿಸ್, ಎಡ್ವರ್ಡ್‌,ಅಂತೋಣಿಸ್ವಾಮಿ, ಜೋಸೆಫ್,ಬೆನೆಡಿಕ್ಟ್ ಅಂತೋಣಿರಾಜ್,ಜಯಪೌಲ್ ಮತ್ತಿತರ ಗುರುವರ್ಯರು ಭಾಗವಹಿಸಿದ್ದರು. ಅಲ್ಪ ಸಂಖ್ಯಾತರ ಏಳಿಗೆಗೆ ಸರ್ವತಾ ಸಿದ್ದ - ಪುಟ್ಟರಂಗ ಶೆಟ್ಟಿ ಸಂತ ಪೌಲರ ವಾರ್ಷಿಕ ಸಂಭ್ರಮೋತ್ಸವದಲ್ಲಿ ಭಾಗವಹಿಸಿದ ಶಾಸಕ ಪುಟ್ಟರಂಗಶೆಟ್ಟಿ ಅಲ್ಪ ಸಂಖ್ಯಾತ ಹಿಂದುಳಿದ ವರ್ಗಗಳು ಸದಾ ನನ್ನ ಬೆನ್ನಿಗೆ ನಿಂತು ಆಶೀರ್ವದಿಸಿದ್ದರಿಂದ ತಾವು ನಾಲ್ಕು ಬಾರಿ ಸತತವಾಗಿ ಗೆಲುವು ಸಾಧಿಸಲು ಸಾಧ್ಯವಾಯಿತು. ಅದಕ್ಕಾಗಿ ಈ ಸಮುದಾಯಕ್ಕೆ ಚಿರ ಋಣಿಯಾಗಿರುತ್ತೇನೆ. ದೇವಾಲಯದ ಆವರಣದ ಸಮುದಾಯ ಭವನದ ಮುಂದುವರಿದ ಕಾಮಗಾರಿ ಪೂರ್ಣಗೊಳಿಸಲು ಎಷ್ಟಾದರೂ ಖರ್ಚಾಗಲಿ ಸಂಪೂರ್ಣ ಖರ್ಚು ವೆಚ್ಚವನ್ನು ತಮ್ಮ ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡುವುದಾಗಿ ಭರವಸೆ ನೀಡಿದರು. ಅವರು ವಾರ್ಷಿಕ ಸಂಭ್ರಮೋತ್ಸವದಲ್ಲಿ ಭಾಗವಹಿಸಿದ ಎಲ್ಲಾ ಗುರುವರ್ಯರನ್ನು ಶಾಲು ಹೊದಿಸಿ ಫಲಪು಼ಷ್ಪಾಹಾರದೊಂದಿಗೆ ಗೌರವಿಸಿದರು. ಚರ್ಚ್ ವತಿಯಿಂದ ಪುಟ್ಟರಂಗಶೆಟ್ಟರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಇದೇ ವೇಳೆ ಮಾಜಿ ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್ ರನ್ನು ಸಹ ಸನ್ಮಾನಿಸಲಾಯಿತು.