ಕೆಪಿಎಸ್ (Karnataka public school) ಯೋಜನೆಯಿಂದ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ..!!

ಕೆಪಿಎಸ್ (Karnataka public school) ಯೋಜನೆಯಿಂದ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ..!!

ಕೆಪಿಎಸ್ (Karnataka public school) ಯೋಜನೆಯಿಂದ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ..!!

ಕರ್ನಾಟಕ ಸರಕಾರ ಅನುಷ್ಠಾನ ಮಾಡಲು ಹೊರಟಿರುವ ಕೆಪಿಎಸ್‌ ಯೋಜನೆಯು ರಾಜ್ಯದ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಯ ಗುಣಾತ್ಮಕ ಸುಧಾರಣೆಯ ಉದ್ದೇಶವನ್ನು ಹೊಂದಿದೆ ಎನ್ನುವ ನಿರೀಕ್ಷೆ ಇದೆ. ಖಾಸಗಿ ಶಿಕ್ಷಣ ವ್ಯಾಪಾರಿಗಳ ದಬ್ಬಾಳಿಕೆಯಿಂದ ಸೊರಗುತ್ತಿರುವ ಸರಕಾರಿ ಶಾಲೆಗಳಿಗೆ ಈ ಯೋಜನೆ ಶಕ್ತಿಯನ್ನು ತುಂಬಲಿದೆ. ಸಿದ್ದರಾಮಯ್ಯ ನೇತೃತ್ವದ ಮೊದಲ ಅವಧಿಯಲ್ಲಿ ಸರಕಾರದಲ್ಲಿ ೨೦೧೮ ರಲ್ಲಿ ಚಾಲನೆ ನೀಡಲಾದ ಕೆಪಿಎಸ್ ಪರಿಕಲ್ಪನೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಬೆಂಬಲ ನೀಡಿರಲಿಲ್ಲ. ಹೀಗಾಗಿ ಯೋಜನೆ ವಿಸ್ತಾರ ಗೊಂಡಿರಲಿಲ್ಲ. ಬೊಮ್ಮಾಯಿ ಸರಕಾರ ಮಾಡೆಲ್ ಸ್ಕೂಲ್ ಹೆಸರಿನ ಇನ್ನೊಂದು ಯೋಜನೆಯನ್ನು ಆರಂಭಿಸುವ ಪ್ರಯತ್ನ ಮಾಡಿತಾದರೂ ಆ ಯೋಜನೆಗೆ ಇಲಾಖೆಯ ಕಡತದಿಂದ ಮೋಕ್ಷಸಿ ಗಲೇ ಇಲ್ಲ.

ಈ ಬೆಳವಣಿಗೆಗಳ ನಡುವೆಯೂ ರಾಜ್ಯದಲ್ಲಿ ೨೦೧೮ ರಿಂದ ಆರಂಭಗೊಂಡಿದ್ದ ೩೦೮ ಕೆಪಿಎಸ್ ಶಾಲೆಗಳ ಪ್ರಗತಿಯು ಅತ್ಯಂತ ಪ್ರೋತ್ಸಾಹದಾಯಕವಾಗಿದೆ. ಈ ಶಾಲೆಗಳಲ್ಲಿ ೨.೮ ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಹತ್ತನೇ ತರಗತಿಯ ಫಲಿತಾಂಶ ಸುಮಾರು ಶೇ. ೮೦ ರಷ್ಟು ದಾಖಲಾಗಿದ್ದು, ಇದು ಉತ್ತಮ ಸಾಧನೆಯಾಗಿದೆ.

ಯೋಜನೆಯನ್ನು ವಿಸ್ತರಿಸುವ ನಿರ್ಧಾರ:

ಪ್ರಸ್ತುತ ಎರಡನೇ ಬಾರಿಗೆ ಅಧಿಕಾರಕ್ಕೇರಿರುವ ಸಿದ್ದರಾಮಯ್ಯ ಸರಕಾರ ೨೦೨೫-೨೦೨೬ ಸಾಲಿನ ಆಯವ್ಯಯ ಮಂಡನೆಯ ಸಂದರ್ಭದಲ್ಲಿ ಕೆ ಪಿಎಸ್ ಯೋಜನೆಯನ್ನು ವ್ಯಾಪಕವಾಗಿ ವಿಸ್ತರಿಸಿ ಅನುಷ್ಠಾನಗೊಳಿಸುವ ಘೋಷಣೆ ಮಾಡಿತ್ತು. ಈ ಯೋಜನೆಗಾಗಿ ಏಶ್ಯನ್ ಡೆವಲಪೆಂಟ್‌ ಬ್ಯಾಂಕ್‌ (ಎಡಿಬಿ) ನಿಂದ ಸಾಲ ಪಡೆಯುವ ನಿರ್ಧಾರ ಮಾಡಲಾಗಿತ್ತು. ಬಜೆಟ್ ಮಂಡನೆಯಾಗಿ ೬ ತಿಂಗಳ ಅನಂತರ ಇದೀಗ ಸರಕಾರದ ನಿರ್ಧಾರ ಅನುಷ್ಠಾನಗೊಳ್ಳುವ ಭರವಸೆ ಕಂಡುಬಂದಿದೆ. ಈ ಕುರಿತು ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ೧೫.೧೦.೨೦೨೫ರಂದು ವಿವರವಾದ ಆದೇಶವನ್ನು ಹೊರಡಿಸಿದೆ:
(ಆದೇಶ ಸಂಖ್ಯೆ: ಇಪಿ ೬೪ ಎಂಪಿಇ ೨೦೨೪, ಬೆಂಗಳೂರು,ದಿನಾಂಕ:
೧೫.೧೦.೨೦೨೫)

ಈ ಆದೇಶದ ಪ್ರಕಾರ ೨೦೨೫-೨೬ ಮತ್ತು ೨೦೨೬-೨೭ ನೇ ಸಾಲಿನಲ್ಲಿ ಮ್ಯಾಗ್ನೆಟ್ ಶಾಲೆಗಳೆಂದು ಗುರುತಿಸಲಾಗಿರುವ ರಾಜ್ಯದ ೫೦೦ ಸರಕಾರಿ ಶಾಲೆಗಳು ಮತ್ತು ಕಲ್ಯಾಣ ಕರ್ನಾಟಕ ಭಾಗದ ೭ ಜಿಲ್ಲೆಗಳ ೨೦೦ ಸರಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲು ಸರಕಾರ ಅನುಮೋದನೆ ನೀಡಿದೆ.

ಕೆಪಿಎಸ್ ಪರಿಕಲ್ಪನೆ:

ಕರ್ನಾಟಕದಲ್ಲಿ ಪ್ರಸ್ತುತ ೧೯,೬೦೩ ಪ್ರಾಥಮಿಕ, ೨೧,೬೭೬ ಹಿರಿಯ ಪ್ರಾಥಮಿಕ, ೪,೮೯೫ ಪ್ರೌಢ ಶಾಲೆಗಳು ಮತ್ತು ೧,೩೧೯ ಪಿ ಯು ಕಾಲೇಜುಗಳು ಇವೆ. ಈ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರತೀ ವರ್ಷ ಕುಸಿಯುತ್ತಲೇ ಇದೆ. ೨೦೧೫-೧೬ ರಲ್ಲಿ ಇದ್ದ ೪೭.೧ ಲಕ್ಷ ವಿದ್ಯಾರ್ಥಿಗಳ ದಾಖಲಾತಿಯು ೨೦೨೫-೨೬ ರಲ್ಲಿ ೩೮.೨ ಲಕ್ಷಕ್ಕೆ ಕುಸಿದಿದೆ.ಇದೇ ಅವಧಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ೩೬.೩ ಲಕ್ಷಗಳಿಂದ ೪೭ ಲಕ್ಷಗಳಿಗೆ ಏರಿಕೆಯಾಗಿದೆ. ಇದಕ್ಕೆ ಪೂರಕವಾಗಿ ೨೦೨೫-೨೬ ನೇ ಸಾಲಿನಲ್ಲಿ ೫೦ ಮತ್ತು ಅದಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಇರುವ ಸರಕಾರಿ ಶಾಲೆಗಳ ಸಂಖ್ಯೆ ೨೫,೬೮೩ಕ್ಕೆ ಏರಿಕೆ ಆಗಿರುವುದು ಆತಂಕದ ವಿಚಾರವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಈಗಾಗಲೇ ಆರಂಭಿಸಲಾಗಿ ರುವ ಕೆಪಿಎಸ್ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಗಣನೀಯವಾಗಿ ಚೇತರಿಸಿಕೊಂಡಿದೆ. ಜೊತೆಗೆ ಕಲಿಕೆಯ ಗುಣಮಟ್ಟ ಕೂಡ ಹೆಚ್ಚಿರುವುದು ೧೦ನೇ ತರಗತಿಯ ಫಲಿತಾಂಶದಿಂದ ಸಾಬೀತಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಉನ್ನತ ಗುಣಮಟ್ಟದ, ಭವಿಷ್ಯ ಕೇಂದ್ರಿತ ಶಿಕ್ಷಣವನ್ನು ನೀಡಲು ಸಾಧ್ಯವಾಗುವಂತೆ ಸಂಯುಕ್ತ ಶಾಲಾ ಶಿಕ್ಷಣದ ಮಾದರಿಯನ್ನು ಕಾರ್ಯಗತಗೊಳಿಸಲು ಸರಕಾರ ನಿರ್ಧರಿಸಿದೆ.

* ಪ್ರಸ್ತಾವಿತ ಯೋಜನೆಯಲ್ಲಿ ೨೦೨೫-೨೬ ಮತ್ತು ೨೦೨೬-೨೭ ನೇ ಸಾಲಿನಲ್ಲಿ ಒಟ್ಟು ೭೦೦ ಸರಕಾರಿ ಶಾಲೆಗಳನ್ನು ಮಾದರಿ ಕೆಪಿಎಸ್ ಶಾಲೆಗಳಾಗಿ ಉನ್ನತೀಕರಿಸಲಾಗುತ್ತದೆ.

* ಈ ಕೆಪಿಎಸ್ ಶಾಲೆಗಳಲ್ಲಿ ಎಲ್‌ಕೆಜಿ ಯಿಂದ ಮೊದಲ್ಗೊಂಡು ಪಿ ಯು ವರೆಗಿನ ಶಿಕ್ಷಣವನ್ನು ನೀಡುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.

* ಈ ಶಾಲೆಗಳಲ್ಲಿ ಕನಿಷ್ಠ ೧,೨೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು
ಅಗತ್ಯ ಇರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ೨ ರಿಂದ ೪ ಕೋಟಿ  ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ.

* ಎಲ್ ಕೆ ಜಿ ಯಿಂದಲೇ ದ್ವಿಭಾಷಾ ಮಾಧ್ಯಮದಲ್ಲಿ ತರಗತಿಗಳ ಸೌಲಭ್ಯ ಇರುತ್ತದೆ.

* ಭವಿಷ್ಯದ ವೃತ್ತಿಪರ ತರಬೇತಿಗಳನ್ನು ೬ ನೇ ತರಗತಿಯಿಂದಲೇ ಆರಂಭಿಸಲಾಗುತ್ತದೆ.

* ಪ್ರೌಢಶಾಲೆಯ ವಿದ್ಯಾರ್ಥಿಗಳ ಕಲಿಕೆಯ ಸುಧಾರಣೆಯ ಜೊತೆಗೆ ೧೦ನೇ ತರಗತಿ ಮತ್ತು ೧೨ ನೇ ತರಗತಿಯ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ.

* STEAM ಶಿಕ್ಷಣ, ವೃತ್ತಿಪರ ತರಬೇತಿ, ಡಿಜಿಟಲ್ ಸಂಪನ್ಮೂಲಗಳ ಸಂಯೋಜನೆ, ಸಂವಹನ ಮತ್ತು ಜೀವನ ಕೌಶಲ್ಯಗಳ ಅಭಿವೃದ್ಧಿ ವಿಷಯಗಳು ಪಠ್ಯಕ್ರಮದ ಭಾಗವಾಗಲಿವೆ.

ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇವೆಲ್ಲವೂ ಒಳ್ಳೆಯ ವಿಚಾರಗಳೇ ಆಗಿವೆ. ಆದರೆ ಇವೆಲ್ಲವೂ ಪರಿಣಾಮಕಾರಿಯಾಗಿ ಕಾರ್ಯಗತ ಆಗಲು ರಾಜಕೀಯ ಇಚ್ಛಾಶಕ್ತಿ ಮತ್ತು ಆಡಳಿತಾತ್ಮಕ ದಕ್ಷತೆಯ ಅಗತ್ಯ ಇದೆ. ಇಲ್ಲದೇ ಹೋದಲ್ಲಿ ಕೆಪಿಎಸ್ ಯೋಜನೆಯ ಆಶಯ ಈಡೇರಲು ಸಾಧ್ಯವಿಲ್ಲ.

ಸೂಕ್ತ ಮೇಲ್ವಿಚಾರಣೆ:

ರಾಜ್ಯ ಸರಕಾರ ತುಂಬ ಮಹತ್ವಕೊಟ್ಟಿರುವ ಈ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಯೋಜನೆಯ ಸುಸ್ಥಿರತೆಯನ್ನು ಕಾಪಾಡುವುದು ಕೂಡ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಎರಡು ಸಮಿತಿಗಳನ್ನು ರಚಿಸಲು ಅಗತ್ಯ ಕ್ರಮ ಕೈಗೊಳ್ಳಲು ಸರಕಾರ ಸೂಚಿಸಿದೆ. ಸರಕಾರದ ಮಾರ್ಗಸೂಚಿಯ ಪ್ರಕಾರ ಪ್ರತಿಯೊಂದು ಕೆಪಿಎಸ್ ಶಾಲೆಗೆ ಒಂದು ಆಡಳಿತ ಮಂಡಳಿ ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯನ್ನು ರಚಿಸಬೇಕಿದೆ. ಆಡಳಿತ ಮಂಡಳಿಗೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಅಧ್ಯಕ್ಷರಾಗಿರುತ್ತಾರೆ. ಆಯಾ ವಿಧಾನ ಸಭಾ ಕ್ಷೇತ್ರದ ಶಾಸಕರು ಎಸ್‌ಡಿಎಂಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಾರೆ.

 ಕೆಪಿಎಸ್ ಶಾಲೆಯ ಶಿಕ್ಷಕರಿಗೆ ೧೦ ವರ್ಷಗಳ ಸ್ಥಿರ ಸೇವಾ ಅವಧಿಯನ್ನು ಖಾತರಿ ಪಡಿಸಲು ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾವ ಸಲ್ಲಿಸಲು ಮತ್ತು ಶಿಕ್ಷರಿಗೆ ಅಗತ್ಯವಾದ ವಿಶೇಷ ಕೌಶಲ ತರಬೇತಿಗಳನ್ನು ನೀಡಲು ಸರಕಾರ ಅನುಮತಿ ನೀಡಿದೆ. ಕಲಿಕಾ ಗುಣಮಟ್ಟ ಮತ್ತು ಸುಸ್ಥಿರತೆಯ ದೃಷ್ಟಿಯಿಂದ ಇದು ಒಳ್ಳೆಯ ತೀರ್ಮಾನವಾಗಿದೆ.

ಕೊನೆಯ ಮಾತು:

ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಕುರಿತು ಸಚಿವ ಮಧು ಬಂಗಾರಪ್ಪ ಅವರ ಹೇಳಿಕೆಗಳು ಮತ್ತು ಸರಕಾರದ ನಿರ್ಧಾರ ಮೇಲ್ನೋಟಕ್ಕೆ ಬಹಳ ಸುಂದರವಾಗಿ ಕಾಣುತ್ತಿವೆ. ಸರಕಾರಿ ಶಾಲೆಗಳ ಕುರಿತು ಜನರಲ್ಲಿ ಸೃಷ್ಟಿ ಆಗಿರುವ ಅಪನಂಬಿಕೆಯನ್ನು ಹೋಗಲಾಡಿಸುವ ಜೊತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲಿನ ವ್ಯಾಮೋಹವನ್ನು ಕಡಿಮೆ ಮಾಡುವ ಸವಾಲು ಕೆಪಿಎಸ್ ಯೋಜನೆಯ ಮೇಲೆ ಇದೆ. ಅದಕ್ಕಿಂತ ಮುಖ್ಯವಾಗಿ, ಎಲ್ಲಾ ಜನ ಸಮುದಾಯದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಯಾವುದೇ ರೀತಿಯ ತಾರತಮ್ಯ ಇಲ್ಲದೆ ಎಟಕುವಂತೆ ಮಾಡುವುದು ಸರಕಾರದ ಹೊಣೆಗಾರಿಕೆಯಾಗಿದೆ. ಅಧಿಕಾರಿಗಳು, ಸಚಿವರು, ಸರಕಾರದ ಬದಲಾವಣೆ ಈ ಯೋಜನೆಯ ಗತಿಯನ್ನು ವಿಚಲಿತಗೊಳಿಸದಂತೆ ಅನುಷ್ಠಾನ ಪ್ರಕ್ರಿಯೆಯನ್ನು ಬಿಗಿಗೊಳಿಸುವ ಅಗತ್ಯ ಇದೆ.

ಕೆಪಿಎಸ್ ಯೋಜನೆ ಮುಂದಿನ ದಿನಗಳಲ್ಲಿ ರಾಜ್ಯದ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಲಿ. ಶಿಕ್ಷಣ ವ್ಯಾಪಾರದಮ ಅಂಗಡಿಗಳು ಮುಚ್ಚಿಹೋಗಲಿ.

* ವಿಲ್ಫ್ರೆಡ್ ಡಿಸೋಜ