ವೈದ್ಯಕೀಯ ವಿದ್ಯಾರ್ಥಿಗಳು ಸೀಟ್ ಲೀವಿಂಗ್ ಬಾಂಡ್ ನೀಡುವುದು  ಕಡ್ಡಾಯ.

ಮೆಡಿಕಲ್ ಸೀಟು ಹಗರಣಗಳಿಂದಾಗಿ ರಾಜ್ಯದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತೀ ವರ್ಷವೂ ಅನ್ಯಾಯವಾಗುತ್ತಿದೆ.  ಪ್ರತಿವರ್ಷ ನೂರಾರು ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು ವಿದೇಶಗಳಿಗೆ ಹೋಗಿ ವೈಧ್ಯಕೀಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ.  ಪ್ರತಿಭೆ ಇರಲಿ ಇಲ್ಲದಿರಲಿ ಇಲ್ಲಿನ ಸೀಟುಗಳು ಸಿರಿವಂತರ ಪಾಲಿಗೆ ಮೀಸಲಾಗಿದೆ.

ವೈದ್ಯಕೀಯ ವಿದ್ಯಾರ್ಥಿಗಳು ಸೀಟ್ ಲೀವಿಂಗ್ ಬಾಂಡ್ ನೀಡುವುದು  ಕಡ್ಡಾಯ.

ವೈದ್ಯಕೀಯ ವಿದ್ಯಾರ್ಥಿಗಳು ಸೀಟ್ ಲೀವಿಂಗ್ ಬಾಂಡ್ ನೀಡುವುದು  ಕಡ್ಡಾಯ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2025 ರ ಸ್ನಾತಕೋತ್ತರ ವೈದ್ಯಕೀಯ / ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಇ-ಮಾಹಿತಿ ಬುಲೆಟಿನ್ ಅನ್ನು ಪ್ರಕಟಿಸಿದೆ. ಇನ್ನು ಮೇಲೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳು ಆಯ್ಕೆಗೊಂಡ ಕಾಲೇಜನ್ನು ಬಿಡುವುದಿಲ್ಲವೆಂದು  ಸೀಟ್ ಲೀವಿಂಗ್ ಬಾಂಡ್ ನೀಡುವುದನ್ನು ಕಡ್ಡಾಯಗೊಳಿಸಿದೆ.

          ಇದರಿಂದಾಗಿ ಕರ್ನಾಟಕದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ವಿದ್ಯಾರ್ಥಿಗಳು ಈಗ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸರ್ಕಾರ ನಿಗದಿಪಡಿಸಿದ ನಮೂನೆಯಲ್ಲಿ ಬಾಂಡ್ ಸಲ್ಲಿಸಬೇಕಾಗಿದೆ.  ಶೈಕ್ಷಣಿಕ ವರ್ಷದ ಅಂತಿಮ ಪ್ರವೇಶ ದಿನಾಂಕದ ನಂತರ ಕೋರ್ಸ್ ಮುಗಿಯುವ ಮೊದಲು ಕೋರ್ಸ್ ಅನ್ನು ತೊರೆದರೆ ದಂಡವಾಗಿ 10 ಲಕ್ಷ ರೂ. ಪಾವತಿಸುವಂತೆ ಪ್ರಾಧಿಕಾರವು ಷರತ್ತು ವಿಧಿಸಿದೆ.

ಕರ್ನಾಟಕದಲ್ಲಿ ಸ್ನಾತಕೋತ್ತರ ವೈದ್ಯಕೀಯ ಅಥವಾ ದಂತ ಡಿಪ್ಲೊಮಾ ಅಧ್ಯಯನಕ್ಕೆ ದಾಖಲಾದ ವಿದ್ಯಾರ್ಥಿಗಳಿಗೆ ಸೀಟ್ ಲೀವಿಂಗ್ ಬಾಂಡ್ ದಂಡವು 4 ಲಕ್ಷ ರೂ ಆಗಿದೆ. ಸೀಟ್ ಖಾಲಿ ಮಾಡುವ ಬಾಂಡ್ ದಂಡದ ಮೊತ್ತದ ಜೊತೆಗೆ, ಕೌನ್ಸೆಲಿಂಗ್ ಸಮಯದಲ್ಲಿ ಆಯ್ಕೆ ಮಾಡಿದ ಸೀಟುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಷರತ್ತುಗಳನ್ನು ಈ ನಿಯಮಗಳು ವಿವರಿಸುತ್ತವೆ. ಆದರೆ ಇದು ಎಷ್ಟು ಪ್ರಾಮಾಣಿಕವಾಗಿ ಜ್ಯಾರಿಯಾಗುತ್ತದೋ ಎಂಬುದನ್ನು ಹೇಳಲು ಸಾಧ್ಯವಿಲ್ಲ.  

ಈ ಪ್ರಮುಖ ಷರತ್ತುಗಳ ಪ್ರಕಾರ ಸೀಟುಗಳ ಮೊದಲ ಸುತ್ತಿನ ಹಂಚಿಕೆಯ ನಂತರ ಮತ್ತು ಎರಡನೇ ಸುತ್ತಿನ ಮೊದಲು ಅಭ್ಯರ್ಥಿಯು ಸೀಟನ್ನು ರದ್ದುಗೊಳಿಸಿದರೆ ಅಭ್ಯರ್ಥಿಯು ಸಂಸ್ಕರಣಾ  ಶುಲ್ಕವಾಗಿ ರೂ.  25,000 ದಂಡ ನೀಡಬೇಕಾಗುತ್ತದೆ. ಎರಡನೇ ಸುತ್ತಿನಲ್ಲಿ ಕ್ಲಿನಿಕಲ್ ಪದವಿ ಸೀಟನ್ನು ಹಂಚಿಕೆ ಮಾಡಿದ ಅಭ್ಯರ್ಥಿಯು ಅಂತಿಮ ದಿನಾಂಕದೊಳಗೆ ಸೇರಲು ವಿಫಲವಾದರೆ, ಅವರು 1.5 ಲಕ್ಷ ರೂ. (ಪದವಿ) ಅಥವಾ 60,000 ರೂ. (ಡಿಪ್ಲೊಮಾ) ಪಾವತಿಸಬೇಕು ಮತ್ತು ಆ ವರ್ಷ ಮುಂದಿನ ಸುತ್ತುಗಳಿಂದ ನಿರ್ಬಂಧಿಸಲ್ಪಡಬೇಕು. ಎರಡನೇ ಸುತ್ತಿನ ನಂತರ ಆದರೆ ಮಾಪ್-ಅಪ್‌ಗೆ ಮೊದಲು ರದ್ದುಗೊಳಿಸಿದರೆ 7 ಲಕ್ಷ ರೂ. (ಕ್ಲಿನಿಕಲ್ ಪದವಿ) ಅಥವಾ 3 ಲಕ್ಷ ರೂ. (ಕ್ಲಿನಿಕಲ್ ಡಿಪ್ಲೊಮಾ) ದಂಡ ವಿಧಿಸಲಾಗುತ್ತದೆ.

ಮಾಪ್-ಅಪ್ ನಂತರ ರದ್ದುಗೊಳಿಸಿದರೆ ಕರ್ನಾಟಕದ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ನಿರ್ದೇಶನಾಲಯಕ್ಕೆ ವೈಯಕ್ತಿಕವಾಗಿ ಶರಣಾಗಬೇಕಾಗುತ್ತದೆ ಮತ್ತು 8 ಲಕ್ಷ ರೂ. (ವೈದ್ಯಕೀಯ ಪದವಿ/ಡಿಪ್ಲೊಮಾ) ಅಥವಾ 6 ಲಕ್ಷ ರೂ. (ದಂತ ಪದವಿ/ಡಿಪ್ಲೊಮಾ) ದಂಡ ಮತ್ತು ಪಾವತಿಸಿದ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕಾಗುತ್ತದೆ.

          ವಿಶೇಷತೆಗಳ ಆಧಾರದ ಮೇಲೆ ದಂಡವನ್ನು ಸಹ ನಿಗದಿಪಡಿಸಲಾಗಿದೆ; ಪ್ರಿ-ಕ್ಲಿನಿಕಲ್ ಸೀಟುಗಳಿಗೆ (ಅಂಗರಚನಾಶಾಸ್ತ್ರ, ಶರೀರಶಾಸ್ತ್ರ, ಜೀವರಸಾಯನಶಾಸ್ತ್ರ, ಫೋರೆನ್ಸಿಕ್ ಮೆಡಿಸಿನ್), ರದ್ದತಿ ಶುಲ್ಕವು ಮುಟ್ಟುಗೋಲು ಶುಲ್ಕದೊಂದಿಗೆ 1 ಲಕ್ಷ ರೂ.; ಪ್ಯಾರಾ-ಕ್ಲಿನಿಕಲ್ ಸೀಟುಗಳಿಗೆ (ಫಾರ್ಮಕಾಲಜಿ, ಪ್ಯಾಥಾಲಜಿ, ಮೈಕ್ರೋಬಯಾಲಜಿ, ಕಮ್ಯುನಿಟಿ ಮೆಡಿಸಿನ್), ದಂಡವು 2 ಲಕ್ಷ ರೂ. (ಪದವಿ) ಅಥವಾ 75,000 ರೂ. (ಡಿಪ್ಲೊಮಾ) ಮತ್ತು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

ಹೆಚ್ಚುವರಿಯಾಗಿ, ಸೇವಾ ನಿರತ ಅಭ್ಯರ್ಥಿಗಳು ಕನಿಷ್ಠ ಅವಧಿಗೆ (ಸರ್ಕಾರಿ ಸ್ಥಾನಗಳಿಗೆ ಮೂರು ವರ್ಷಗಳು, ನಿಯೋಜನೆ ಮೇಲೆ ಬಂದವರಿಗೆ ಹತ್ತು ವರ್ಷಗಳು) ಸರ್ಕಾರದಲ್ಲಿ ಸೇವೆ ಸಲ್ಲಿಸಬೇಕು ಅಥವಾ ಅವರ ತರಬೇತಿಯ ವೆಚ್ಚವನ್ನು ಮರುಪಾವತಿಸಬೇಕು, ಇದರಲ್ಲಿ ಸ್ಟೈಫಂಡ್, ಭತ್ಯೆಗಳು, ಬೋಧನೆ ಮತ್ತು ಹೆಚ್ಚುವರಿಯಾಗಿ 50 ಲಕ್ಷ ರೂ. (ಪದವಿ) ಅಥವಾ 25 ಲಕ್ಷ ರೂ. (ಡಿಪ್ಲೊಮಾ) ದಂಡವನ್ನು ಪಾವತಿಸಬೇಕು ಇತ್ಯಾದಿಯಾಗಿ ಹೊಸ ನಿಯಮಗಳನ್ನು ಪ್ರಾಧೀಕಾರವು ಜ್ಯಾರಿಗೆ ತಂದಿದ್ದು ಸೀಟು ಹಂಚಿಕೆಗಳಲ್ಲಿ ಹಗರಣವನ್ನು ತಡೆಯಲು ಕೆಲವಾರು ಕ್ರಮಗಳನ್ನು ಕೈಗೊಂಡಿದೆ.  ಹೀಗೆ ಮಾಡುವುದರಿಂದ ಮೆರಿಟ್ ವಿಧ್ಯಾರ್ಥಿಗಳು ಖಾಸಾಗಿ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಬ್ಲಾಕಿಂಗ್ ಮಾಡುವುದನ್ನು ತಡೆಯಬಹುದಾಗಿದೆ.

          ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಹಂಚಿಕೆಗಳಲ್ಲಿ ವರ್ಷಪ್ರತಿ ಸಾವಿರಾರು ಕೋಟಿ ರೂಪಾಯಿಗಳ ಅವ್ಯವಹಾರಗಳನ್ನು ಖಾಸಗಿ ಮೆಡಿಕಲ್ ಕಾಲೇಜು ನಡೆಸುತ್ತವೆ.  ಇದನ್ನು ಏಕೆ ನಿಗ್ರಹಿಸಲು ಸಾಧ್ಯವಾಗಿಲ್ಲ ಎಂಬುದಕ್ಕೆ ಕಾರಣವೇನನ್ನೂ ಹುಡುಕಬೇಕಾಗಿಲ್ಲ. ನಿಜ ಹೇಳಬೇಕೆಂದರೆ ಸರಕಾರಕ್ಕೆ ಮೆಡಿಕಲ್ ಕಾಲೇಜುಗಳ ಮೇಲೆ ಯಾವ ನಿಯಂತ್ರಣವೂ ಇಲ್ಲ.  ಬಹುತೇಕ ಎಲ್ಲಾ ಮೆಡಿಕಲ್ ಕಾಲೇಜುಗಳ ಮಾಲೀಕರು ಪಕ್ಕಾ ರಾಜಕಾರಿಣಿಗಳು, ಶಕ್ತಿಕೇಂದ್ರಗಳ ಮೇಲೆ ಪಕ್ಕಾ ನಿಯಂತ್ರಣವಿರುವವರು.  ರಾಜಕಾರಣಕ್ಕೂ ಮತ್ತು ವೈಧ್ಯಕೀಯ ಶಿಕ್ಷಣಕ್ಕೂ ಹಾಗೂ ಮೆಡಿಕಲ್ ಕಾಲೇಜು ವ್ಯವಹಾರಕ್ಕೂ ಅಘೋಷಿತ ನಂಟಿದೆ. ಆದ್ದರಿಂದಲೇ ಸರಕಾರ ಈ ವಿಚಾರವಾಗಿ ಹೊಸ ನಿಯಮಗಳನ್ನು ಜ್ಯಾರಿಗೊಳಿಸಿರುವುದು ಒಂದು ಅಚ್ಚರಿಯ ಸಂಗತಿಯಾಗಿದೆ!

          ಮೆಡಿಕಲ್ ಸೀಟು ಹಗರಣಗಳಿಂದಾಗಿ ರಾಜ್ಯದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತೀ ವರ್ಷವೂ ಅನ್ಯಾಯವಾಗುತ್ತಿದೆ.  ಪ್ರತಿವರ್ಷ ನೂರಾರು ಸಂಖ್ಯೆಯಲ್ಲಿ ವಿಧ್ಯಾರ್ಥಿಗಳು ವಿದೇಶಗಳಿಗೆ ಹೋಗಿ ವೈಧ್ಯಕೀಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ.  ಪ್ರತಿಭೆ ಇರಲಿ ಇಲ್ಲದಿರಲಿ ಇಲ್ಲಿನ ಸೀಟುಗಳು ಸಿರಿವಂತರ ಪಾಲಿಗೆ ಮೀಸಲಾಗಿದೆ.

ಮೆಡಿಕಲ್ ಸೀಟು ಹಗರಣಗಳ ಶೈಲಿಯೇ ಒಂದು ಕುತೂಹಲದ ವಿಚಾರ. ಈ ವಂಚನೆ ಹೇಗೆ ನಡೆಯುತ್ತದೆ ಎಂದರೆ ನೀಟು ಮುಂತಾದ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೆರಿಟ್ ವಿಧ್ಯಾರ್ಥಿಗಳಿಗೆ ಖಾಸಗಿ ಮೆಡಿಕಲ್ ಕಾಲೇಜುಗಳು ತಮ್ಮ ಕಾಲೇಜಿನಲ್ಲಿ ಅರ್ಜಿ ಹಾಕಲು ಪ್ರೇರೇಪಿಸುತ್ತಾರೆ.  ದೇಶದಾದ್ಯಂತ ಇಂತಹ ವಿಧ್ಯಾರ್ಥಿಗಳನ್ನು ಕಂಡು ಹಿಡಿಯಲು ಮೆಡಿಕಲ್ ಕಾಲೇಜುಗಳು ಏಜೆಂಟರನ್ನು  ನಿಯೋಜಿಸುತ್ತಾರೆ. ಇಂತಹ ವಿಧ್ಯಾರ್ಥಿಗಳಿಗೆ ಹಣದ ಅಮಿಷವನ್ನು ಕೊಟ್ಟು ಅರ್ಜಿ ಹಾಕಿಸಿ ಸೀಟು ಬ್ಲಾಕ್ ಮಾಡುತ್ತಾರೆ.  ಇದಕ್ಕಾಗಿ ವಿಧ್ಯಾರ್ಥಿಗಳಿಗೂ ಲಕ್ಷಾಂತರ ರೂಪಾಯಿಗಳನ್ನು ನೀಡಲಾಗುತ್ತದೆ.  ಹೇಗಿದ್ದರೂ ಪ್ರತಿಭಾವಂತ ವಿಧ್ಯಾರ್ಥಿಯಾಗಿರುವುದರಿಂದ ಆತ ಬೇರೆ ಯಾವುದಾದರೂ ಕಾಲೇಜಿಗೆ ಸೇರ್ಪಡೆಯಾಗುತ್ತಾನೆ.  ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಈತನ  ಆಯ್ಕೆಯು ಬ್ಲಾಕ್ ಆಗಿದ್ದು ಅದನ್ನು ಮೆಡಿಕಲ್ ಕಾಲೇಜು ಮತ್ತು ಉನ್ನತ ಶಿಕ್ಷಣ ಇಲಾಖೆಯು ಹೊಂದಾಣಿಕೆ ಮಾಡಿಕೊಂಡು ಖಾಸಾಗಿಯಾಗಿ ಮಡಿಕಲ್ ಕಾಲೇಜಿನ ನಿರ್ವಾಹಕರು ಅನರ್ಹರಾಗಿರುವ ಕಡಿಮೆ ಅಂಕಗಳನ್ನು ಪಡೆದುಕೊಂಡಿರುವ ಶ್ರೀಮಂತರ ಮಕ್ಕಳಿಗೆ ಕೋಟ್ಯಾಂತರ ರೂಪಾಯಿಗಳಿಗೆ ಮಾರಾಟ ಮಾಡುತ್ತಾರೆ.  ಒಂದು ಸ್ನಾತಕೋತ್ತರ ಸೀಟಿಗೆ ಈಗ 4 ಕೋಟಿ ಇದೆಯೆಂದರೆ ನಿಮಗೆ ದಿಗ್ಬ್ರಮೆಯಾಗದೆ ಇರದು!  ಇನ್ನು ಸಾಧಾರಣ ಮೆಡಿಕಲ್ ಸೀಟಿಗೆ ಕಡಿಮೆ ಎಂದರೂ 1 ಕೋಟಿ ಇದೆ. ಇದರ ಹೊರತಾಗಿ ವಿಕಲ ಚೇತನರ ಕೋಟದಲ್ಲಿಯೂ ಮೋಸ ನಡೆಯುತ್ತದೆ. ನಕಲಿ ದೃಡೀಕರಣ ಪತ್ರ ನೀಡಿ ಸೀಟು ಹಂಚಲಾಗುತ್ತದೆ.  ಇದಕ್ಕೂ ಕೋಟ್ಯಾಂತರ ರೂಪಾಯಿ ಕ್ಯಾಪಿಟೇಶನ್ ಇದೆ. ಹೀಗೆ ಖಾಸಗಿ ಮೆಡಿಕಲ್ ಕಾಲೇಜುಗಳು ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ದಂಧೆಯನ್ನು ನಡೆಸುತ್ತವೆ.  ಇದರಿಂದ ಅಮಾಯಕ ಪ್ರತಿಭಾವಂತರು ವಂಚಿತರಾಗಿದ್ದಾರೆ.  ಬೆಲೆಕಟ್ಟಲಾಗದ ಅನ್ಯಾಯಕ್ಕೆ ಬಲಿಯಾಗುತ್ತಿದ್ದಾರೆ. ಆದರೆ ಇದಕ್ಕೆ ಕಡಿವಾಣ ಹಾಕಲು ಸರಕಾರಕ್ಕೆ ಅತೀ ಸಾಹಸದ ಧೈರ್ಯವಿರಬೇಕು. ಆದರೆ

          ಕೆಲವು ವರ್ಷಗಳ ಹಿಂದೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ಧೇಶನಾಲಯಗಳು ದಾಳಿ ನಡೆಸಿದ್ದರು.  ಕೇಸು ದಾಖಲು ಮಾಡಿದ್ದರು.  ಸುಮಾರು 400 ಕೋಟಿ ಅಕ್ರಮ ಹಣವನ್ನು ಪತ್ತೆ ಮಾಡಿದ್ದರು.  ಕೇಸು ಏನಾಗಿದೆಯೋ ಗೊತ್ತಿಲ್ಲ.   ಬೆಕ್ಕಿಗೆ ಗಂಟೆ ಕಟ್ಟುವವರಾರು ಎಂಬ ಪರಿಸ್ಥಿತಿ ಇದೆ. ಆದರೆ ತಡವಾಗಿಯಾದರೂ ಸರಕಾರ ಕೆಲವೊಂದು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ. ರಾಜ್ಯದ ಮೆಡಿಕಲ್ ಕಾಲೇಜಿನಲ್ಲಿ ಅರ್ಜಿ ಸಲ್ಲಿಸುವ ಮೆರಿಟ್ ವಿಧ್ಯಾರ್ಥಿಗಳ ಚಟುವಟಿಕೆಗಳ ಮೇಲೆ ನಿಗಾ ಇಟ್ಟಲ್ಲಿ ಈ ಹಗರಣವನ್ನು ಸ್ವಲ್ಪ ಮಟ್ಟಿಗೆ ತಡೆಹಿಡಿಯಬಹುದು.

# ಕರೀಂ ರಾವ್ ತರ್.