ಮಾಧ್ಯಮಗಳು ಪಕ್ಷಪಾತ ಮಾಡುವುದನ್ನು ನಿಲ್ಲಿಸಲಿ
ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳು ರಾಜಕೀಯ ಪಕ್ಷಗಳ ಮುಖವಾಣಿಗಳಾಗಿರದೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಮೌಲ್ಯಗಳನ್ನು ಸಂರಕ್ಷಿಸುವ ಪ್ರಾಮಾಣಿಕವಾದ ಜವಾಬ್ದಾರಿಯನ್ನು ನಿರ್ವಹಿಸಿದಲ್ಲಿ ಮಾತ್ರ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸಂರಕ್ಷಿಸಬಹುದಾಗಿದೆ. ಇದರ ಮಹತ್ವ ಮತ್ತು ಜವಾಬ್ದಾರಿಯನ್ನು ಮಾಧ್ಯಮಗಳು ನಿರ್ಲಕ್ಷಿಸಬಾರದು.
ಮಾಧ್ಯಮಗಳು ಪಕ್ಷಪಾತ ಮಾಡುವುದನ್ನು ನಿಲ್ಲಿಸಲಿ
ಯಾರು ಮಾಧ್ಯಮವನ್ನು ನಿಯಂತ್ರಣದಲ್ಲಿಡುತ್ತಾರೋ ಅವರು ರಾಜ್ಯವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳುತ್ತಾರೆಂದು ಸ್ವತಂತ್ರ ಅಮೇರಿಕ ಸಂಯುಕ್ತ ಸಂಸ್ಥಾನದ ರಚನಾಕಾರರಲ್ಲಿ ಒಬ್ಬರಾಗಿದ್ದ ಮತ್ತು 3ನೇ ಅಮೇರಿಕದ ಅಧ್ಯಕ್ಷರಾಗಿದ್ದ ಸರ್. ಹೋಮಸ್ ಜಾಫರ್ಸನ್ ಹೇಳಿದ್ದರು. ಸಾಂಸ್ಕೃತಿಕ ಮತ್ತು ರಾಜಕೀಯ ತತ್ತ್ವಶಾಸ್ತ್ರದ ಪ್ರತಿಪಾದಕ ಮತ್ತು ಬ್ರಿಟೀಷ್ ರಾಜಕಾರಿಣಿ ಸರ್ ಎಡ್ಮಂಡ್ ಬರ್ಕ್ ಹಾಗೂ ಥಾಮಸ್ ಕಾರ್ಲೈಲ್ ಮುಂತಾದವರು ಪತ್ರಿಕಾ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವೆಂದು ಕರೆದು ವಿಶ್ವಮಾನ್ಯತೆಯನ್ನು ನೀಡಿದ್ದರು.
ರಾಜ್ಯದ ಪಾತ್ರ ಮತ್ತು ಸಮಾಜದ ಮೌಲ್ಯಗಳು ಒಂದಕ್ಕೊಂದು ಸಂಬಂಧವನ್ನು ಹೊಂದಿರುತ್ತವೆ. ರಾಜಕೀಯ ಸಾಮರ್ಥ್ಯವು ಅಪಾಯದಲ್ಲಿರುವಾಗ ಅದರ ಹಕ್ಕುಗಳನ್ನುಸಂರಕ್ಷಿಸುವ ಜವಾಬ್ದಾರಿಯು ಮಾಧ್ಯಮಗಳಿಗಿರುತ್ತವೆ. ಸರಕಾರದ ಜವಾಬ್ದಾರಿಯನ್ನು ಸರಕಾರಕ್ಕೇ ತಿಳಿಸುತ್ತದೆ ಹಾಗೂ ಸಾಮಾಜಿಕ ಮೌಲ್ಯಗಳ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ಒದಗಿಸುತ್ತದೆ. ಜನಸಾಮಾನ್ಯರು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರೋತ್ಸಾಹಿಸಬೇಕು. ಸಮಸ್ಯೆಗಳು ಬಂದಾಗ ಸ್ಪಷ್ಟೀಕರಣ ನೀಡುವುದು, ವಿವಾದಗಳಿದ್ದಾಗ ಚರ್ಚೆ ನಡೆಸುವುದು ಮತ್ತು ಸತ್ಯಾಂಶಗಳನ್ನು ಸಮಾಜದ ಮುಂದೆ ಬಹಿರಂಗಗೊಳಿಸುವ ಪಾತ್ರಗಳನ್ನು ನಿರ್ವಹಿಸಬೇಕು. ಆಡಳಿತವು ಅದಕ್ಷತೆ, ಭ್ರಷ್ಟಾಚಾರ, ಅಧಿಕಾರದ ದುರುಪಯೋಗ ಮುಂತಾದ ದುರಾಡಳಿತದಲ್ಲಿ ತೊಡಗಿದಲ್ಲಿ ಜನರ ಪರವಾಗಿ ಅದರ ವಿರುದ್ಧದ ಮೇಲ್ವಿಚಾರಣೆಯನ್ನು ನಡೆಸಬೇಕು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಾರ್ವಜನಿಕರ ಸೇವೆಗಿರುವುದನ್ನು ಖಚಿತಪಡಿಸುತ್ತಿರಲಿ. ಆದುದರಿಂದಲೇ ಮಾಧ್ಯಮವನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವೆಂದು ವೈಭವೀಕರಿಸಲಾಗಿದೆ.
ಆದರೆ ಬದಲಾಗಿರುವ ರಾಜಕೀಯ ವ್ಯವಸ್ಥೆಯಲ್ಲಿ ಮಾಧ್ಯಮಗಳು ಪುರಸ್ಕೃತವಲ್ಲದ ಮಾಹಿತಿಗಳಿಗೆ ಆಧ್ಯತೆಯನ್ನು ನೀಡುವ ಮೂಲಕ ಅಥವಾ ಸತ್ಯವನ್ನು ಮರೆಮಾಚುವ ಮೂಲಕ ನಕರಾತ್ಮಕ ಧ್ರುವೀಕರಣವು ಸಮಾಜದಲ್ಲಿ ಬೆಳೆಯಲು ನೆರವಾಗುತ್ತಿದೆ. ಮಾಧ್ಯಮಗಳು ಪಕ್ಷಪಾತವನ್ನು ಅನುಸರಿಸಿದಾಗ ಉಂಟಾಗುವ ಋಣಾತ್ಮಕ ಪರಿಣಾಮಗಳಿಂದಾಗಿ ಆಡಳಿತ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಕರ್ನಾಟಕ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳ ಕಾರ್ಯನಿರ್ವಹಣೆಯನ್ನು ನೋಡಿದರೆ ಅವುಗಳು ಸ್ಪಷ್ಟವಾಗಿ ಸರಕಾರದ ವಿರುದ್ಧವಿದ್ದು ಆಡಳಿತವನ್ನು ದುರ್ಬಲಗೊಳಿಸುವ ಭಾಗವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ಕಾಣಿಸಿಕೊಳ್ಳುತ್ತಿರುವುದು ದುರಾದೃಷ್ಟಕರ.
ರಾಜ್ಯದ ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ಥಂಭದ ಜವಾಬ್ದಾರಿ ಮತ್ತು ಕಾಳಜಿಯನ್ನು ಹೊಂದಿರುವಂತೆ ಕಂಡು ಬರುತ್ತಿಲ್ಲ. ಕಥೆಗಳನ್ನು ಸುದ್ಧಿಗಳನ್ನಾಗಿಯೂ; ವದಂತಿಗಳನ್ನು ವರದಿಗಳನ್ನಾಗಿಯೂ; ಊಹೆಗಳನ್ನು ಸತ್ಯ ಘಟನೆಗಳನ್ನಾಗಿಯೂ; ಸುಳ್ಳುಗಳನ್ನು ಪ್ರಾತ್ಯಕ್ಷಿಕ ವಿಚಾರಗಳನ್ನಾಗಿಯೂ ಜನರ ಮುಂದಿಡುವ ಒಂದು ರಾಜಕೀಯ ತಂತ್ರಗಾರಿಕೆಯ ಭಾಗವಾಗಿ ಮಾಧ್ಯಮಗಳು ವರ್ತಿಸುತ್ತಿರುವುದು ಗೋಚರಿಸುತ್ತಿದೆ.
ದಕ್ಷಿಣ ಭಾರತದಲ್ಲಿ ರಾಜಕೀಯ ಪಕ್ಷಗಳು ತಮ್ಮ ತಮ್ಮ ಪಕ್ಷದ ನೀತಿ –ಸಿದ್ಧಾಂತಗಳನ್ನು ಜನರ ಮುಂದೆ ತಿಳಿಸುವುದಕ್ಕಾಗಿ ಅವುಗಳೇ ಸ್ವಂತ ಪತ್ರಿಕಾ ಮಾಧ್ಯಮ ಸಂಸ್ಥೆಗಳನ್ನು ಹೊಂದಿರುತ್ತವೆ. ಆದರೆ ಕರ್ನಾಟಕದಲ್ಲಿ ಸ್ಥಿತಿ ಹಾಗೆ ಇಲ್ಲ. ಇಲ್ಲಿನ ಪತ್ರಿಕಾ ಮಾಧ್ಯಮಗಳು ಸದಾ ಸರಕಾರದ ವಿರುಧ್ದ ಅಪಪ್ರಚಾರ ಮಾಡುತ್ತಿರುವುದನ್ನು ನೋಡಬಹುದು. ಅದರಲ್ಲಿಯೂ ಕಾಂಗ್ರೇಸ್ ಪಕ್ಷವೆಂದರೇ ಅವುಗಳಿಗೆ ಒಂದು ರೀತಿಯ ಅಲರ್ಜಿ ಬಾಧೆಯಿದೆ. ಎಲ್ಲವೂ ಪಕ್ಕಾ ವಿರೋಧ ಪಕ್ಷಗಳ ಮುಖವಾಣಿಗಳ ತರಹವೇ ಕಾರ್ಯನಿರ್ವಹಿಸುತ್ತಿವೆ. ಜನಸಾಮಾನ್ಯರಲ್ಲಿ ಸರಕಾರದ ಪ್ರವೃತ್ತಿಯ ಬಗ್ಗೆ , ಕಾರ್ಯನಿರ್ವಹಣೆಯ ಬಗ್ಗೆ ಅತೃಪ್ತಿಯನ್ನು ಮೂಡಿಸುವುದೇ ಇದರ ಉದ್ದೇಶ. ಮತ್ತು ನೇರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಟಾರ್ಗೆಟ್ ಮಾಡುವ ಗುರಿಯಿಟ್ಟುಕೊಂಡಿದೆ. ಕಾಂಗ್ರೇಸ್ ಸರಕಾರದ ಯಾವುದೇ ಕಾರ್ಯಕ್ರಮಗಳಿರಲೀ, ಯೋಜನೆಗಳಿರಲೀ ಅವುಗಳನ್ನು ಪರಾಜಯಗೊಳಿಸುವ ಹಿಡೆನ್ ಅಜೆಂಡಾಗಳನ್ನು ಹೊಂದಿವೆ. ಕಾಂಗ್ರೇಸ್ ಪಕ್ಷದ ಬೆಂಬಲಕ್ಕೆ ಒಂದೇ ಒಂದು ಪತ್ರಿಕೆ ಅಥವಾ ಟಿವಿ ಚಾನೆಲ್ ಕರ್ನಾಟಕದಲ್ಲಿ ಇಲ್ಲ, ಅದರ ಬೆಂಬಲಕ್ಕೂ ಇಲ್ಲ.
ಜಾತಿ ಗಣತಿಯಂತಹ ಕಾರ್ಯಕ್ರಮಗಳನ್ನು ಅಮೇರಿಕಾದಂತಹ ಅಭಿವೃದ್ಧಿ ಹೊಂದಿದ ಮುಂದುವರಿದ ದೇಶಗಳೂ ಸಹ ನಡೆಸುತ್ತವೆ. ಅಮೇರಿದಲ್ಲಿ ಜಾತಿ ವ್ಯವಸ್ಥೆ ಇಲ್ಲದಿದ್ದರೂ ಜನಸಾಮಾನ್ಯರ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಮಗ್ಗೆ ಮಾಹಿತಿ ಸಂಗ್ರಹಿಸಿ ದುರ್ಬಲರನ್ನು ಗುರುತಿಸಿ ಅವರ ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ, ನೈರ್ಮಲ್ಯ, ಮುಂತಾದ ಸ್ಥಿತಿಗತಿಗಳಲ್ಲಿ ಗುಣಮಟ್ಟವೇರಿಸಲು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತವೆ. ಜನಗಣತಿಯಂತೆಯೇ ಜಾತಿ ಗಣತಿಯನ್ನೂ ಸಹ ನಡೆಸುವುದು ಅವಶ್ಯಕ.
ಭಾರತದಂತಹ ಬೃಹತ್ ದೇಶದ ನಾಗರೀಕರಿಗೆ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಭಾಗವಹಿಸುವ ಅವಕಾಶವನ್ನು ನೀಡಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಸರಕಾರವೊಂದು ನಿರ್ಧರಿಸಿದಲ್ಲಿ ಅದು ಸ್ವಾಗತಾರ್ಹವೇ ಸರಿ. ಅದು ಒಂದು ಉತ್ತಮ ಸರಕಾರದ ಜವಾಬ್ದಾರಿಯಾಗಿದೆ. ನಮ್ಮ ದೇಶದಲ್ಲಿ 1931 ರಲ್ಲಿ ಜಾತಿಗಳ ಜನಗಣತಿಯನ್ನು ನಡೆಸಲಾಗಿತ್ತು. ಆನಂತರ ಜನಗಣತಿಯು ಪರಿಶಿಷ್ಟ ಜಾತಿಗಳು (SCs) ಮತ್ತು ಪರಿಶಿಷ್ಟ ಪಂಗಡಗಳು (STs) ಜನಗಣತಿಯನ್ನು ನಡೆಸಲಾಗುತ್ತಿತ್ತು. ಹಿಂದುಳಿದ ವರ್ಗಗಳ ಜನಗಣತಿಯನ್ನು ನಡೆಸಿರಲಿಲ್ಲ. ಒಂದೆರೆಡು ಬಾರಿ ಪ್ರಯತ್ನಿಸಲಾಗಿದ್ದರೂ ಅವುಗಳು ಕಾರ್ಯಗತವಾಗಿಲ್ಲ.
ಜನರ ಜಾತಿ, ಶಿಕ್ಷಣ, ಉದ್ಯೋಗ, ವಸತಿ, ಆರೋಗ್ಯ, ನೈರ್ಮಲ್ಯ, ನೀರು ಮತ್ತು ವಿದ್ಯುತ್ ಮುಂತಾದ ಸೌಕರ್ಯಗಳ ಕುರಿತು ವಿವರಗಳನ್ನು ಸಂಗ್ರಹಿಲು ಜನಗಣತಿಯನ್ನು ನಡೆಸಬೇಕು. ಜನರ ಸ್ಥಿತಿಗತಿಗಳನ್ನು ಅಂದಾಜಿಸಲು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಾಗರಿಕರು/ಕುಟುಂಬಗಳು ಭಾಗವಹಿಸಿ ಸ್ವಯಂಪ್ರೇರಿತವಾಗಿ ತಮ್ಮ ಮಾಹಿತಿಯನ್ನು ಸರಕಾರಕ್ಕೆ ಒದಗಿಸುವುದರಿಂದ ಮುಂದೆ ಯಾವ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸ ಬೇಕೆಂಬ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯ. ಇದು ಒಂದು ಸಮುದಾಯದವರು, ಅಥವಾ ಜಾತಿ ಜನಾಂಗಗಳಿಂದ ಮಾತ್ರ ಸೀಮಿತವಾಗಿ ಸಂಗ್ರಹಿಸಬೇಕಾದ ಮಾಹಿತಿಗಳಲ್ಲ. ಎಲ್ಲರ ಸಾಮಾಜಿಕ ಸ್ಥಿತಿಗತಿಗಳ ಮಾಹಿತಿಗಳನ್ನು ಸಂಗ್ರಹಿಸಬೇಕು. ಇದು ಜನಪರ ಕಾಳಜಿಯನ್ನು ಹೊಂದಿರುವ ಸರಕಾರವೊಂದು ಕೈಗೊಂಡಿರುವಅಪರೂಪದ ತೀರ್ಮಾನ. ರಾಜ್ಯದ ಸಂಪನ್ಮೂಲಗಳನ್ನು ಹಂಚಿಕೆ ಮಾಡುವಾಗ ಹೆಚ್ಚು ಅಗತ್ಯವಿರುವ ಪ್ರದೇಶ ಮತ್ತು ಫಲಾನುಭವಿಗಳಿಗೆ ಸರ್ಕಾರಿ ಕಾರ್ಯಕ್ರಮ ಮತ್ತು ಸೇವೆಗಳ ಪೂರೈಕೆಗೆ ಮಾರ್ಗದರ್ಶನ ನೀಡುತ್ತವೆ. ಆರ್ಥಿಕವಾಗಿ ಹಿಂದುಳಿದಿರುವ ಸಮಾಜದ ಕೊಟ್ಟ ಕೊನೆಯ ಸಾಲಿನಲ್ಲಿರುವ ದುರ್ಬಲವರ್ಗದವರಿಗೆ ಆ ಸಮಯದಲ್ಲಿ ಸರಕಾರಿ ನೌಕರಿಗಳಲ್ಲಿಯೂ ಪ್ರಾತಿನಿಧ್ಯ ನೀಡುವ ಅವಕಾಶ ಒದಗಿಸುತ್ತದೆ
ಆದರೆ ಮಾಧ್ಯಮ ಕ್ಷೇತ್ರದಲ್ಲಿ ಈ ಬಗ್ಗೆ ನಕರಾತ್ಮಕ ಮಾಹಿತಿಗಳು ಮೂಡಿ ಬರುತ್ತಿರುವುದರಿಂದ ಸಮಾಜದಲ್ಲಿ ಋಣಾತ್ಮಾಕ ಸಂದೇಶಗಳು ರವಾನೆಯಾಗುತ್ತಿವೆ. ಜನ ಸಾಮಾನ್ಯರಲ್ಲಿ ಸಂದೇಹಗಳು ಹುಟ್ಟುತ್ತಿವೆ. ಇದನ್ನು ಸರಕಾರಿ ನೌಕರಿ ಕೊಡುವುದಕ್ಕಾಗಿ ನಡೆಸಲಾಗುತ್ತಿರುವ ಜಾತಿಗಣತಿಯೆಂದೇ ಪ್ರಚಾರ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ ಆರಂಭದಿಂದಲೂ ವಿರೋಧ ವ್ಯಕ್ತವಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ಜಿಲ್ಲಾ ಕೇಂದ್ರಗಳಲ್ಲಿ ಸಭೆಗಳನ್ನು ನಡೆಸಿ ಸರಕಾರದ ಕಾರ್ಯಕ್ರಮದ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕಾದ ಅನಿವಾರ್ಯತೆಯುಂಟಾಗಿದೆ.
ರಾಜ್ಯದಲ್ಲಿನ ದಿನಪತ್ರಿಕೆ ಮತ್ತು ಟಿವಿ ಮಾಧ್ಯಮಗಳನ್ನು ನೋಡಿ: ಎಲ್ಲವೂ ಬಿಜೆಪಿ ಬೆಂಬಲಿತ ಮಾಧ್ಯಮಗಳೇ ಆಗಿವೆ. ಸುವರ್ಣ ಟಿವಿ – ರಾಜೀವ ಚಂದ್ರಶೇಖರ್ (ಬಿಜೆಪಿ); ಪಬ್ಲಿಕ್ ಟಿವಿ – ಹೆಚ್.ಆರ್. ರಂಗನಾಥ(ಬಿಜೆಪಿ) ; ಜೀ ಟಿವಿ- ಸುಭಾಶ್ ಚಂದ್ರ (ಬಿಜೆಪಿ); ನ್ಯೂಸ್18- ಮುಖೇಶ್ ಅಂಬಾನಿ( ಬಿಜೆಪಿ); ಎನ್ ಡಿಟಿವಿ- ಗೌತಮ್ ಅಧಾನಿ(ಬಿಜೆಪಿ); ಈ ಟಿವಿ-ಮುಖೇಶ್ ಅಂಬಾನಿ(ಬಿಜೆಪಿ); ಟಿವಿ9-ರಮೇಶ್ ರಾವ್ (ವೈಎಸ್ಆರ್); ಟಿವಿ5-ರಾಜಗೋಪಾಲ ನಾಯ್ಡು(ಟಿಡಿಪಿ); ರಾಜ್ ಟಿವಿ- ರಾಜೇಂದ್ರನ್ (ಡಿಎಂಕೆ) ಸೂರ್ಯ ಟಿವಿ-ಕಲಾನಿಧಿ ಮಾರನ್(ಡಿಎಂಕೆ); ಮತ್ತು ಪ್ರಜಾವಾಣಿ ಮತ್ತು ವಾರ್ತಾಭಾರತಿ ಪತ್ರಿಕೆಗಳನ್ನು ಹೊರತು ಪಡಿಸಿ ಕರ್ನಾಟಕದ ಉಳಿದ ಎಲ್ಲಾ ದಿನಪತ್ರಿಕೆಗಳು ಬಿಜೆಪಿ ಪರವಾಗಿವೆ.
ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳು ರಾಜಕೀಯ ಪಕ್ಷಗಳ ಮುಖವಾಣಿಗಳಾಗಿರದೆ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಮೌಲ್ಯಗಳನ್ನು ಸಂರಕ್ಷಿಸುವ ಪ್ರಾಮಾಣಿಕವಾದ ಜವಾಬ್ದಾರಿಯನ್ನು ನಿರ್ವಹಿಸಿದಲ್ಲಿ ಮಾತ್ರ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಸಂರಕ್ಷಿಸಬಹುದಾಗಿದೆ. ಇದರ ಮಹತ್ವ ಮತ್ತು ಜವಾಬ್ದಾರಿಯನ್ನು ಮಾಧ್ಯಮಗಳು ನಿರ್ಲಕ್ಷಿಸಬಾರದು.
# ಕರೀಂ ರಾವ್ ತರ್


