"ಕನ್ನಡವೇ ಜಗತ್ತಿನ ಮೊದಲ ಭಾಷೆ"

"ಕನ್ನಡವೇ ಜಗತ್ತಿನ ಮೊದಲ ಭಾಷೆ"

"ಕನ್ನಡವೇ ಜಗತ್ತಿನ ಮೊದಲ ಭಾಷೆ"
ಅಂತ ಬೇಂದ್ರೆ ಅಜ್ಜಾವ್ರು ಯಾಕೆ ಹೇಳಿದ್ರು ಗೊತ್ತಾ?
_________
ಬೇಂದ್ರೆ ಎಂಬ ನುಡಿಗಾರುಡಿಗನ ತರ್ಕ ವೈಖರಿಗೆ, 
ಶಬ್ದ ಸಂಪತ್ತಿಗೆ ಬೆರಗಾಗದವರುಂಟೇ!!
ಕವಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಬರೆದಿರುವ ಇದೊಂದು ಸ್ವಾರಸ್ಯಕರ ಪ್ರಸಂಗ ಓದಿ ನೋಡಿ..
________
ಒಮ್ಮೆ ತೀನಂಶ್ರೀಯವರು ಕನ್ನಡ ಶಬ್ದವೊಂದರ ಬಗ್ಗೆ (ಬಹುಶಃ ವತ್ಸ, ಬಚ್ಚ ಇತ್ಯಾದಿ) ಬೇಂದ್ರೆಯವರು ಮಾಡಿದ ಶಾಸ್ತ್ರಜಿಜ್ಞಾಸೆ ಪ್ರಸ್ತಾಪಿಸುತ್ತ "ಬೇಂದ್ರೆ ಶಾಸ್ತ್ರ ವಿಷಯದ ಚರ್ಚೆಗೂ ತುಂಬ ಊಹೆ ಕಲ್ಪನೆ ಬಳಸುತ್ತಾರೆ,ಜೊತೆಗೆ ವಿಚಿತ್ರ ತರ್ಕ ಬಳಸುತ್ತಾರೆ. ಕೇಳುತ್ತ ಕೂತರೆ ನಿಮ್ಮನ್ನು ಒಪ್ಪಿಸಿಯೂ ಬಿಡುತ್ತಾರೆ. ಎಷ್ಟೇ ಆಗಲಿ ಅವರು ಕವಿ.ಕವಿಗಳು ಶಾಸ್ತ್ರಾಧೀನರೆ?ಶಾಸ್ತ್ರವನ್ನೇ ಸೃಷ್ಟಿಸುವವರು."ಎಂದು ವಿನೋದವಾಗಿ ನುಡಿದರು. ನಗು ನಗುತ್ತಲೇ ಅವರು ಬೇಂದ್ರೆ ವ್ಯಾಖ್ಯಾನವನ್ನು ಬದಿಗೆ ಸರಿಸಿದರು. 

ಆದರೆ ಅವರು ಬೇಂದ್ರೆ ಬಗ್ಗೆ ಹೇಳಿದ ಆ ಮಾತು ಒಂದು ವಿನೋದದ ಪ್ರಸಂಗದ್ದೇ ಆದರೂ ಅದು ನೂರಕ್ಕೆ ನೂರು ನನ್ನ ಅನುಭವಕ್ಕೂ ಬಂತು.

ಬೇಂದ್ರೆಯವರು ಮಹಾರಾಜ ಕಾಲೇಜಿನಲ್ಲಿ ವಿಶೇಷ ಉಪನ್ಯಾಸಗಳ ಸಲುವಾಗಿ ಮೈಸೂರಿಗೆ ಬಂದಿದ್ದರು. ತೀನಂಶ್ರೀಯವರ ಮನೆಯಲ್ಲೇ ಅವರ ವಾಸ್ತವ್ಯ. ಹಿಂದಿನ ದಿನ ನಾನು ಅವರಲ್ಲಿಗೆ ಹೋಗಿದ್ದಾಗ ಶ್ರೀಕಂಠಯ್ಯನವರು- "ಭಟ್ಟ, ನಾಳೆ ಬೇಂದ್ರೆ ಬರುತ್ತಾರೆ. ಎರಡು ದಿನ ಇರುತ್ತಾರೆ. ನೀವೂ ಬಂದು ಜೊತೆಗೆ ಸ್ವಲ್ಪ ಕಾಲ ಕಳೆಯಿರಿ. ಬೇಂದ್ರೆ ಅದ್ಭುತ ವ್ಯಕ್ತಿ.ಅವರನ್ನು ಹತ್ತಿರದಿಂದ ಕಾಣಬೇಕು."  ಎಂದರು.
ನಾನು ಬಹಳ ಖುಷಿಯಿಂದಲೇ 
"ಆಗಲಿ ಸರ್" ಅಂತ ಹೇಳಿ ಮಾರನೇ ದಿನ ಮಧ್ಯಾಹ್ನ ಅವರಲ್ಲಿಗೆ ಹೋದೆ.

ಅಲ್ಲಿ ಆಗಲೇ ಮೂರ್ತಿರಾಯರು,ತೀನಂಶ್ರೀ, ನಂ. ಶಿವರಾಮ ಶಾಸ್ತ್ರಿಯವರು ಕುಳಿತು ಬೇಂದ್ರೆ ಜೊತೆ ಹರಟೆ ಕೊಚ್ಚುತ್ತಿದ್ದರು. ನಾನೂ ಅವರ ಬಳಿ ಹೋಗಿ ಕೂತೆ. ಗುರುಗಳು ನನ್ನನ್ನು ಬೇಂದ್ರೆಗೆ ಪರಿಚಯಿಸಿದರು."ಈತನಿಗೆ ಕಾವ್ಯದಲ್ಲಿ ವಿಶೇಷ ಆಸಕ್ತಿ"ಎಂದೂ ಸೇರಿಸಿದರು.

ಬೇಂದ್ರೆ ವಿನೋದವಾಗಿ "ಹುಡುಗಾ, ನಿನಗೆ ಕಾವ್ಯದಲ್ಲಿ 
ಈಗಲೂ ಆಸಕ್ತಿ ಉಳಿದಿದೆಯೋ ಅಥವಾ (ತೀನಂಶ್ರೀಯನ್ನು ತಮ್ಮ ಕೈಕೋಲಿನಿಂದ ತೋರಿಸುತ್ತ) ಈತನ ಭಾಷಾಶಾಸ್ತ್ರದ ಮಹಾಗ್ನಿಯಲ್ಲಿ ಎಲ್ಲ ದಗ್ಧವಾಗಿ ಹೋಯಿತೋ?" ಎಂದು ನಕ್ಕರು.
ನಾನು "ಎಲ್ಲಾದರೂ ಉಂಟೆ. ಅವರು ಕಾವ್ಯ ಮೀಮಾಂಸೆ ಬರೆದವರು.ಕಾವ್ಯದಲ್ಲಿ ನನಗಿದ್ದ ರುಚಿಯನ್ನು ಬೆಳೆಸಿದವರು."ಎಂದು ಮಾತು ಜೋಡಿಸಿದೆ.

ಬೇಂದ್ರೆ "ಏನೋಪ್ಪ ನನಗೆ ನಂಬಿಕೆಯಿಲ್ಲ.ಕಾವ್ಯ ಇರಲಿ, ಈತನ ಶಾಸ್ತ್ರಜ್ಞಾನ ಕೂಡ ನನಗೆ ಅನುಮಾನದ್ದಾಗಿ 
 ಕಾಣುತ್ತದೆ. ನೀನೇ ನೋಡು. ಕನ್ನಡ ಒಂದು ದ್ರಾವಿಡ ಭಾಷೆ.ತಮಿಳಿಗಿಂತ ಕೊಂಚ ನಂತರ ಬಂದದ್ದು. ಹೀಗೆ ಏನೇನೋ ಈತನ ತರ್ಕ.ಅದು ಎಲ್ಲಾದರೂ ಸಾಧ್ಯವೆ?
ಕನ್ನಡ ಎಲ್ಲಭಾಷೆಗಿಂತ ಮೊದಲು ಹುಟ್ಟಿದ್ದಲ್ಲವೆ?  ಜಗತ್ತಿನ ಮೊದಲ ಭಾಷೆಯೇ ಕನ್ನಡ."ಎಂದರು!

ನಾನು ಅವಾಕ್ಕಾಗಿ ಗುರುಗಳ ಕಡೆ ನೋಡಿದೆ.
ಅವರು ನಗುತ್ತ "ಗಾಬರಿಯಾಗಬೇಡಿ, ಅದಕ್ಕೆ 
 ಸಮರ್ಥನೆ ಕೊಡಿ ಅನ್ನಿ. ಅದನ್ನೂ ಕೊಡುತ್ತಾರೆ.‌ ಆಗಲೇ ಆಕಾಶ ಮಿಂಚತೊಡಗಿದೆ! " ಎಂದರು.

ಬೇಂದ್ರೆ "ಒಹೋ ಇಷ್ಟು ಸರಳ ಸತ್ಯಕ್ಕೆ ಸಮರ್ಥನೆ ಬೇರೆ ಬೇಕಾ? ಆಯಿತು.  ಈಗ ನೋಡಿ. ಕನ್ನಡದ ಯಾವುದೇ ಮುಖ್ಯವಾದ ಪದ ತೆಗೆದುಕೊಳ್ಳಿ. ಅದು 'ಕ'ಕಾರದಿಂದಲೇ ಆರಂಭವಾಗುತ್ತೆ. ಆರಂಭದ ಭಾಷೆ ಕನ್ನಡವೇ ಅನ್ನೋದಕ್ಕೆ ಬೇರೆ ಆಧಾರ ಯಾಕೆ ಬೇಕು? "
ಅಂದು ಬಿಟ್ಟರು!

ಮೂರ್ತಿರಾಯರು ನಗುತ್ತ "ಎಲ್ಲಿ ಒಂದಿಷ್ಟು ಉದಾಹರಣೆ ಕೊಡಿಯಪ್ಪ." ಎಂದರು.

ಬೇಂದ್ರೆ ಕೈಯಿಂದ ತಮ್ಮ ಮೈಯ ಒಂದೊಂದೂ ಅಂಗ ಮುಟ್ಟಿ ತೋರಿಸುತ್ತ "ನೋಡಿ, ಇದು ಕತ್ತು ಹೌದೆ?ಇದು ಕಂಠ.‌ ಇದು ಕಣ್ಣು. ಇದು ಕಿವಿ.ಇದು ಕೂದಲು.ಇಗೋ ಇದು ಕೈ. ಇದು ಕಾಲು.ಇದು ಕೆನ್ನೆ.ಸಾಕೇ?"ಎಂದರು.

ಮೂರ್ತಿರಾಯರು ಬೇಂದ್ರೆಯವರ ಉಪಾಯ ತಿಳಿದು ಅವರನ್ನು ಕೆಡವಲು ತಮ್ಮ ಸೊಂಟದ ಕಡೆ ಬೆರಳು ಮಾಡಿ "ಇದು?"  ಅಂತ ಕೇಳಿದರು.

ಬೇಂದ್ರೆ ಈಗ ಸಿಕ್ಕಿಬಿದ್ದರು ಅಂತ ನಾವು ಅಂದುಕೊಳ್ಳುತ್ತಿರುವಂತೆಯೇ ಅವರು ತಮ್ಮ ಕೈಕೋಲಿನ ತುದಿಯಿಂದ ಮೂರ್ತಿರಾಯರ ಸೊಂಟ ಚುಚ್ಚುತ್ತ "ಅದು ಕಟಿ ತಾನೆ " ಅಂದರು!
ಕೂಡಲೆ ಮೂರ್ತಿರಾಯರು ಬೇಂದ್ರೆಯವರ ಪಂಚೆ ಕಡೆ ಬೆರಳು ಮಾಡಿದರು.
"ಅದು ಕಚ್ಚೆ ಪಂಚೆ"  ಎಂಬ ಉತ್ತರ ಬಂತು!

ಮೂರ್ತಿರಾಯರು ತಮ್ಮ ಲುಂಗಿ ಕಡೆ ತೋರಿಸುತ್ತ 
"ಇದಕ್ಕೇನು ಹೇಳುತ್ತೀರಪ್ಪಾ?"ಎಂದರೆ ಬೇಂದ್ರೆ ಎಷ್ಟೂ ತಡವರಿಸದೆ "ಕೊಳವಿ ಪಂಚೆ" ಎಂದುಬಿಟ್ಟರು!

ಅಷ್ಟು ಹೊತ್ತಿಗೆ ಕಾಫಿ ಬಂತು. ಬೇಂದ್ರೆ ಅದನ್ನು ತೆಗೆದುಕೊಳ್ಳುತ್ತಾ" ಇಗೋ,‌ ಇದು ಕಪ್ಪು,ಇದು ಕಾಫಿ,
ಇದರ ರುಚಿ ಕಹಿ" ಎಂದರು.
ನಮಗೆಲ್ಲ ಹಿಡಿಸಲಾರದ ನಗು.

ತೀನಂಶ್ರೀ ಮೂರ್ತಿರಾಯರನ್ನು ತಡೆಯುತ್ತ 
" ಯಾಕಪ್ಪ ಸುಮ್ಮನೆ ಆಯಾಸ ಮಾಡಿಕೊಳ್ಳುತ್ತೀರ? 
 ಅವರ ಹತ್ತಿರ ವಾದಮಾಡಿ  ಸರಸ್ವತಿ ಗೆದ್ದಾಳೆ? "
ಎಂದರು.ಕಾಫಿ ಕುಡಿದ ಬೇಂದ್ರೆ ಕೈಕೋಲು ತಿರುವುತ್ತಾ, ಬೀಸುತ್ತ ಯಾಕೋ ಹೊರಕ್ಕೆ ಹೋದರು.

ತೀನಂಶ್ರೀ ನನ್ನ ಕಡೆ ತಿರುಗಿ "ನೋಡಿದಿರಾ ಬೇಂದ್ರೆಯನ್ನು? ಶಾಸ್ತ್ರದ ಭರ್ತ್ಸನೆ ಹೇಗಿದೆ?
 ಹೀಗೆ ವಿನೋದವಾಗಿ ಮಾತನಾಡುವಾಗಲೂ 
 ಅವರು ಕವಿ ಎನ್ನುವುದು ಎಷ್ಟು ಚೆನ್ನಾಗಿ ವ್ಯಕ್ತವಾಗುತ್ತೆ! ಅವರು ಮಾತನ್ನು ಹೇಗೆ 
ಜಗಿಯುತ್ತಾರೆ, ಬಗೆಯುತ್ತಾರೆ.ತರ್ಕವನ್ನು ಹೇಗೆ 
ನೆಗೆಯುತ್ತಾರೆ -- ಅದೂ ತರ್ಕದ ತೋರಿಕೆಯಲ್ಲೇ!
ಈ ಬೇಂದ್ರೆ ನಮ್ಮ ಕಾಲದ ಒಂದು ಅದ್ಭುತ "
ಎಂದರು.

-ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ.
(ಆಧುನಿಕ ಕನ್ನಡ ಸಾಹಿತ್ಯದ ಮೂವತ್ತೆಂಟು ಜನ ಹಿರಿಯ ಲೇಖಕರ ವ್ಯಕ್ತಿಚಿತ್ರಗಳನ್ನೊಳಗೊಂಡ 
"ಸಾಹಿತ್ಯ ರತ್ನ ಸಂಪುಟ"ದ
'ನಿಷ್ಕಳಂಕ ವಿದ್ವತ್ತಿನ ಮತ್ತೊಂದು ಹೆಸರು ತೀನಂಶ್ರೀ.' ಲೇಖನದಿಂದ)