ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು
ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು
ಸ್ವಲ್ಪ ದಿನಗಳ ಹಿಂದಷ್ಟೇ ಬರೆದಂತೆ, ಇತ್ತೀಚೆಗೆ ಓದಿದ ಕೆಲ ಪುಸ್ತಕಗಳಿಂದಾಗಿ ನನ್ನ ಓದುವ ಹವ್ಯಾಸಕ್ಕೆ ಅಡಚಣೆ ಉಂಟಾಗಿದೆ. ಹಾಗಾಗಿ ಪುಸ್ತಕಗಳನ್ನು ಅಂಗಡಿಗಳಲ್ಲಿ ಕೊಳ್ಳುವಾಗ ಸಾಧ್ಯವಾದಷ್ಟು ಓದಿಸಿಕೊಳ್ಳುವ ಪುಸ್ತಕ ಅಂತ ಅನ್ನಿಸುವುದನ್ನು ಮಾತ್ರ ಕೊಳ್ಳುತ್ತಿದ್ದೇನೆ.
ಒಂದಷ್ಟು ದಿನಗಳ ಹಿಂದೆ ಕೃಪಾಕರ-ಸೇನಾನಿಯವರ "ಕೆನ್ನಾಯಿಯ ಜಾಡಿನಲ್ಲಿ" ಅನ್ನುವ ಪುಸ್ತಕವನ್ನು ಓದಿದ್ದೆ. ಕಾಡಿನೊಳಗೆ ನಡೆಯುವ ವಿಷಯಗಳನ್ನೇ ಕಥೆಗಳಂತೆ ಬರೆವ ಇವರ ಶೈಲಿಗೆ ಮಾರುಹೋಗಿದ್ದೆ. ಪಾತ್ರಗಳೇ ಇರದ ಪ್ರಪಂಚದೊಳಗೆ ಪ್ರಕೃತಿಯನ್ನೇ ಪಾತ್ರವನ್ನಾಗಿಸಿ ಕಥೆಯಂತೆ ಹೇಳುವ, ಆ ಮೂಲಕ ಪ್ರಕೃತಿಯತ್ತ ನಮ್ಮ ಮನಸ್ಸನ್ನು ಸೆಳೆಯುವ ಅವರ ಬರವಣಿಗೆಯ ಶೈಲಿ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಹಾಗಾಗಿ ಈ ಬಾರಿ Beetle Book shopಗೆ ಭೇಟಿ ಕೊಟ್ಟಾಗ ಕಣ್ಣಿಗೆ ಕಂಡ ಕೃಪಾಕರ-ಸೇನಾನಿಯವರ ಮತ್ತೊಂದು ಪುಸ್ತಕ "ಸೆರೆಯಲ್ಲಿ ಕಳೆದ ಹದಿನಾಲ್ಕು ದಿನಗಳು" ಪುಸ್ತಕವನ್ನೇ ಓದಲು ಆಯ್ಕೆ ಮಾಡಿಕೊಂಡೆ.
ಕಾಡುಗಳ್ಳ ವೀರಪ್ಪನ್ 1998 ಅಕ್ಟೋಬರ್‌ನಲ್ಲಿ ಕೃಪಾಕರ ಸೇನಾನಿ ಸೇರಿದಂತೆ ಇನ್ನೊಂದಷ್ಟು ಜನರನ್ನು ಅಪಹರಿಸಿ 14 ದಿನಗಳ ಕಾಲ ತನ್ನ ವಶದಲ್ಲಿ ಇಟ್ಟುಕೊಂಡಿದ್ದ.
ತಾವು ತಮ್ಮ ಮನೆಯಿಂದ ಅಪಹರಣಕ್ಕೊಳಗಾದ ಕ್ಷಣದಿಂದ ಹಿಡಿದು ಮತ್ತೆ ಬಿಡುಗಡೆಯಾಗಿ ಮನೆ ಸೇರಿದ ದಿನಗಳವರೆಗೂ ತಮಗಾದ ಅನುಭವಗಳನ್ನು ರಸವತ್ತಾಗಿ ಕಟ್ಟಿಕೊಟ್ಟಿದ್ದಾರೆ ಕೃಪಾಕರ ಸೇನಾನಿಯವರು. ನನ್ನ ನಿರೀಕ್ಷೆಯಂತೆಯೇ ಕೊಂಚವೂ ಬೇಸರವಾಗದಂತೆ ಖುಷಿ ಖುಷಿಯಾಗಿ ಓದಿಸಿಕೊಂಡಿತು.
ಮೊದಲೇ ನಾನು ಹುಟ್ಟಿ ಬೆಳೆದದ್ದು ಕೊಳ್ಳೇಗಾಲ ತಾಲೂಕಿನಲ್ಲಿ. ನಮ್ಮ ಊರಿನ ಅಕ್ಕಪಕ್ಕದ ಕಾಡುಗಳಲ್ಲಿ ವೀರಪ್ಪನ್ ಓಡಾಡುತ್ತಿದ್ದದಾಗಿ ಆಗ ಮಾತನಾಡಿಕೊಳ್ಳುತ್ತಿದ್ದರು. ನಮ್ಮೂರಿನ ಪಕ್ಕದ ಕಾಡುಗಳು ಹೇಗಿವೆ ಎಂದರೆ ಒಂದು ಬೆಟ್ಟದಿಂದ ಮತ್ತೊಂದು ಬೆಟ್ಟಕ್ಕೆ ನಡೆಯುತ್ತಾ ಹೋದರೆ ನೇರವಾಗಿ ಕರ್ನಾಟಕದಿಂದ ತಮಿಳುನಾಡು ಸೇರಿಕೊಳ್ಳಬಹುದು. ಅಷ್ಟು ನಿರಂತರವಾದ ಹಸಿರುಳ್ಳ ಬಯಲುಸೀಮೆಯ ಕಾಡುಗಳು. ಸಹಜವಾಗಿಯೇ ವೀರಪ್ಪನ್ ಬಗ್ಗೆ ನಮಗೆ ವಿಧವಿಧವಾದ ಕಥೆಗಳು ಕೇಳಿ ಬರುತ್ತಿದ್ದವು. ವೀರಪ್ಪನ್ ಬದುಕಿದ್ದಾಗ ಪೊಲೀಸರು, ಅರಣ್ಯ ಇಲಾಖೆ, BSF ವಾಹನಗಳು ನಮ್ಮ ಊರಿನಲ್ಲಿ ಸದಾ ಓಡಾಡುತ್ತಿದ್ದವು. ಮುಂಚಿನಂತೆ ಅರಣ್ಯಗಳಿಗೆ ಸೌದೆ ತರಲು, ಮರ ಮುಟ್ಟು ಸಂಗ್ರಹಿಸಲು ಮುಕ್ತ ಅವಕಾಶವಿರಲಿಲ್ಲ.
ಈ ಪುಸ್ತಕವನ್ನು ಓದುವಾಗ ವೀರಪ್ಪನ್ ಬಗ್ಗೆ ನಾವು ಕೇಳಿದ್ದ ಕಥೆಗಳು ಬಹುತೇಕ ನಿಜ ಅಂತ ಅನ್ನಿಸತೊಡಗಿದವು. ಜೊತೆಗೆ ಮಾಧ್ಯಮಗಳಲ್ಲಿ ಬರುತ್ತಿದ್ದ ಆತನ ಬಗೆಗಿನ ವರದಿಗಳು ಬಹುತೇಕ ಆತನನ್ನು ಕೆರಳಿಸಲೆಂದೇ ಸುಳ್ಳು ಸುಳ್ಳೇ ಬರೆದಿದ್ದವು ಅಂತಲೂ ಅನ್ನಿಸಿದವು. ಆದರೆ ಕೃಪಾಕರ ಸೇನಾನಿ ಇಬ್ಬರೂ ವೀರಪ್ಪನ್ ಜೊತೆ ಇದ್ದು ಆತನೊಂದಿಗೆ ಒಡನಾಡಿದ್ದೇ ಇಲ್ಲಿ ಸಿಕ್ಕಾಪಟ್ಟೆ ಕುತೂಹಲಕಾರಿಯಾಗಿದೆ.
ಮೊದಲೇ ಕೆನ್ನಾಯಿಯ ಜೀವನವನ್ನು ಅರ್ಥ ಮಾಡಿಕೊಳ್ಳಲು ಕಾಡುಮೇಡು ಅಲೆಯುತ್ತಿದ್ದ ಕೃಪಾಕರ ಸೇನಾನಿಗೆ ಕಾಡಿನ ವಾಸ ಅಷ್ಟೊಂದು ಹೊಸತೇನೂ ಆಗಿರಲಿಲ್ಲ. ಹಾಗಾಗಿಯೇ ವೀರಪ್ಪನ್ ಜೊತೆ ಇದ್ದ ಅಷ್ಟೂ ದಿವಸಗಳು ಇವರಿಗೆ ಕಷ್ಟ ಅಂತಲೂ ಅನ್ನಿಸಿಲ್ಲ. ಬಹುಶಃ ಈ ಅಪರಹರಣದಿಂದಾಗಿಯೇ ವೀರಪ್ಪನ್‌ಗೆ ಇದ್ದ ಕಾಡಿನ ಬಗೆಯ ಜ್ಞಾನವು ಲೇಖಕರಿಗೆ ಅರ್ಥವಾಯಿತು. ಜೊತೆಗೆ ಕೃಪಾಕರ ಸೇನಾನಿಯವರ ಕಾಡಿನ ಬಗೆಗಿನ ವಿಷಯಗಳು ಆತನಿಗೆ ತಿಳಿದವು. ಇವರಿಬ್ಬರ ಸಂಭಾಷಣೆಗಳಿಂದ ನಿಜವಾಗಿಯೂ ಸಹಾಯವಾಗಿದ್ದು ಓದುಗರಿಗೆ. ಏಕೆಂದರೆ ನಾವು ಪುಸ್ತಕದಲ್ಲಿ ಓದಿರಬಹುದಾದ ಕಾಡಿನ ಬಗೆಗಿನ ಜ್ಞಾನಕ್ಕೂ ವಾಸ್ತವದಲ್ಲಿ ಸಿಗುವ ಕಾಡಿನ ಬಗೆಗಿನ ಜ್ಞಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೃಪಾಕರ ಸೇನಾನಿ ಯವರ ಮಾತುಗಳನ್ನು ಕೇಳಿಸಿಕೊಳ್ಳುತ್ತಾ ಹೋದಂತೆ ಪ್ರಕೃತಿಯ ಬಗ್ಗೆ ನಮಗೆ ಇನ್ನೊಂದು ಮಜಲು ದೊರಕುತ್ತಾ ಹೋಗುತ್ತದೆ
ಅನೇಕ ಪ್ರಸಂಗಗಳನ್ನು ಈ ಪುಸ್ತಕ ಓದಿ ಮುಗಿಸಿದ ಮೇಲೂ ಮತ್ತೆ ಮತ್ತೆ ನೆನಪಿಸಿಕೊಳ್ಳುವಂತೆ ಈ ಪುಸ್ತಕದಲ್ಲಿ ದಾಖಲಾಗಿವೆ. ಒಂದು ಕಡೆ ವೀರಪ್ಪನ್ ತಾನು ಕಾಡುಪ್ರಾಣಿಗಳ ಸಹವಾಸಕ್ಕೆ ಹೋಗುವುದಿಲ್ಲ ಅಂತ ಹೇಳಿಕೊಳ್ಳುತ್ತಾನೆ. ಆರಂಭದ ದಿನಗಳಲ್ಲಿ ಒಮ್ಮೆ ವೀರಪ್ಪನ್ ಒಬ್ಬನೇ ಕಾಡೊಳಗೆ ನಡೆಯುವಾಗ ಕರಡಿಯೊಂದು ಅನಿರೀಕ್ಷಿತವಾಗಿ ಎದುರಾಗುತ್ತದೆ. ಅದು ಇನ್ನೇನು ದಾಳಿಮಾಡಬೇಕು, ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಅರಿತ ವೀರಪ್ಪನ್ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅದರೆದೆಗೆ ಗುಂಡಿಕ್ಕುತ್ತಾನೆ. ಅಂದು ಸಂಜೆ ಅದೇ ದಾರಿಯಲ್ಲಿ ವಾಪಸ್ ಮರಳುವಾಗ ಆ ಕರಡಿಯ ಮೃತ ದೇಹ ಅದೇ ಜಾಗದಲ್ಲಿ ಬಿದ್ದಿರುತ್ತದೆ. ಆ ಕರಡಿ ಸತ್ತಿದೆ ಎಂದು ಅರಿಯದ ಅದರ ಕಂದಮ್ಮಗಳು ತಾಯಿಯ ಮೊಲೆಯನ್ನು ಚೀಪುತ್ತಾ ಅದರ ಮೇಲೆ ಆಟವಾಡಿಕೊಂಡಿರುತ್ತವೆ. ಆಗ ವೀರಪ್ಪನ್‌ಗೆ ತಾನು ಮಾಡಿದ ಕೃತ್ಯದ ಬಗ್ಗೆ ತುಂಬಾ ಪಶ್ಚಾತ್ತಾಪವಾಗುತ್ತದೆ. ಮತ್ತೊಂದು ಕಡೆ ತಾನು ಆನೆಗಳನ್ನು ಸಾಯಿಸಿಲ್ಲ, ಬದಲಿಗೆ ತನ್ನ ಹೆಸರನ್ನು ಹೇಳಿಕೊಂಡು ಅನೇಕ ದಂತಚೋರರ ತಂಡಗಳು ಆನೆಗಳನ್ನು ಸಾಯಿಸುತ್ತವೆ ಅಂತ ಹೇಳುತ್ತಾನೆ.
ವೀರಪ್ಪನ್‌ಗೆ ಇದ್ದ ಕಾಡಿನ ಜ್ಞಾನದ ಬಗ್ಗೆ, ಕಾಡುಪ್ರಾಣಿಗಳ ಬಗ್ಗೆ, ದೈವಭಕ್ತಿಯ ಬಗ್ಗೆ ನಾನು ಚಿಕ್ಕಂದಿನಲ್ಲಿ ಕೇಳಿ ತಿಳಿದುಕೊಂಡಿದ್ದ ವಿಷಯಗಳೇ ಈ ಪುಸ್ತಕದಲ್ಲಿ ಪುನರಾವರ್ತನೆಗೊಂಡವು ಅನ್ನಿಸಿತು. ಕೃಪಾಕರ ಸೇನಾನಿಯವರನ್ನು ತನ್ನ ವಶದಿಂದ ಬಿಡುಗಡೆಗೊಳಿಸಿ ವಾಪಸ್ಸು ಕಳುಹಿಸಿಕೊಡುವ ಮುನ್ನ ಆತ ತಾನು ಭಾವುಕನಾದದರ ಬಗ್ಗೆ ಈ ಪುಸ್ತಕದಲ್ಲಿ ಅವರೇ ಬರೆದುಕೊಂಡಿದ್ದಾರೆ.
ಲೇಖಕರ ಆಶಯದಂತೆ ಅವರೆಲ್ಲರೂ ನಾಡಿಗೆ ವಾಪಸ್ ಬಂದ ಮೇಲೆ ಏನಾದರೂ ವೀರಪ್ಪನ್‌ಗೆ ಕ್ಷಮಾದಾನ ಕೊಟ್ಟು ಆತನನ್ನು ಮತ್ತೆ ಮುಖ್ಯ ವಾಹಿನಿಗೆ ಸೇರಿಸಿಕೊಂಡಿದ್ದರೆ ನಂತರ ನಡೆದ ಅನೇಕ ಕಹಿ ಘಟನೆಗಳು ನಡೆಯುತ್ತಿರಲಿಲ್ಲವೇನೋ ಅನ್ನಿಸುತ್ತದೆ. ಇವೆಲ್ಲ ಈ ಪುಸ್ತಕವನ್ನು ಓದಿ ಮುಗಿಸಿದ ಮೇಲೆ ಅನ್ನಿಸಿದಂಥವು.
ಒಟ್ಟಾರೆ ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ತಾವು ಅನುಭವಿಸಿದ ವಿಷಯಗಳನ್ನು ತಿಳಿಹಾಸ್ಯದಿಂದಲೇ ಪ್ರಸ್ತುತಪಡಿಸುವ ಕೃಪಾಕರ ಸೇನಾನಿ ಬರೆದ ಈ ಪುಸ್ತಕವನ್ನು ನೀವು ಓದಲೇಬೇಕು.
-ಸಂತು


