ಉಳುವ ಭೂಮಿಯಲಿ ಬೀಳುವ ಗೆರೆ ಅವಳು
ಉಳುವ ಭೂಮಿಯಲಿ ಬೀಳುವ ಗೆರೆ ಅವಳು
ಉಳುವ ಭೂಮಿಯಲಿ ಬೀಳುವ ಗೆರೆ ಅವಳು
ಏರಿಸಿಬಿಟ್ಟರು ಅವಳನ್ನು
ಅಟ್ಟಕ್ಕೆ ಆಗಸಕ್ಕೆ
ಮೂಡರು ಹಿಂಬಾಲಿಸಿಬಿಟ್ಟರು
ಅಲ್ಲಿಂದಲೂ ಆಚೆಯವರೆಗೆ
ಕಣ್ಣಿದ್ದೂ ಕಾಣಲಿಲ್ಲ
ಅವರಿಗೆ ಅವಳು
ಅರವಳಿಕೆ ಹೆಚ್ಚಾದ
ಅವರು ಅಲೆಯುತ್ತಿದ್ದಾರೆ
ಆಕೆಗಾಗಿ
ಅಮಲಲಿ ಅಲೆದಲೆದು
ಅವಳು ಮರೀಚಿಕೆಯಾದಾಗ
ಕಲಾವಿದನ ಕುಂಚದಲ್ಲಿ
ಬಂದಿಸಿಟ್ಟರು
ಉಳ್ಳವರು ಮಾಡಿದರು
ಗುಡಿಯಲಿ ಗೋರಿ
ಅವಳೂ ಯುವತಿ
ಅವಳಿಗೂ ಮನಸ್ಸಿದೆ ಬಯಕೆಗಳಿವೆ
ಉಳುವ ಭೂಮಿಯಲ್ಲಿ ಬೀಳುವ
ಗೆರೆ ಅವಳು
ಬಿತ್ತನೆಗೆ ಕಾತರಿಸಿ ವಂಚನೆಗೆ ಒಳಗಾದವಳು
ಕಟ್ಟಿಕೊಂಡವನ ಕೈಯಲ್ಲೇ
ನಾರುಮಡಿ ಉಡಿಸಿಕೊಂಡವಳು
ಕತ್ತಲ ಕಾಡಿಗೆ ಕರಗಿ ಹೋದವಳು
ನಡೆದು ಹೋದವಳು
ನಿಂದನೆಗೆ ಒಳಗಾಗಿ ಮರಳಿ ತಾಯ ಗರ್ಭ ಸೇರಿದವಳು
ಅವಳಿಲ್ಲೇ ಇದ್ದಾಳೆ
ಅಲ್ಲಿ-ಇಲ್ಲಿ ನಮ್ಮ ನಡುವಿನಲ್ಲೆ
ಹುಡುಕಿಬಿಡಿ ಅವಳನ್ನು
ಒರಸಿಬಿಡಿ ಕಣ್ಣೀರನ್ನು
ಕೊಟ್ಟು ಬಿಡಿ ಪ್ರೀತಿಯನ್ನು
ಹುಡುಕುವ ಮುನ್ನ ಕಳಚಿಬಿಡಿ
ಕಣ್ಣಪೊರೆಯನ್ನ
-ಅಲ್ಲಾರಂಡ ವಿಠಲ ನಂಜಪ್ಪ
mob:70199 44635


