ಲಾಲೆಟ್ಟನ್ ಈಗ ದಾದಾ ಸಾಹೇಬ
ಸಹಜಾಭಿನಯ ಉಸಿರಾಡುವ ಮೋಹನ್ ಲಾಲ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ
“ಲಾಲೆಟ್ಟನ್” ಇದು ಮಲೆಯಾಳಿಗರು ನಟ ಮೋಹನ್ ಲಾಲ್ ವಿಶ್ವನಾಥನ್ ನಾಯರ್ ಅವರನ್ನು ಪ್ರೀತಿಯಿಂದ ಕರೆಯುವ ಪರಿ. ಇದರರ್ಥ ಲಾಲ್ ಅಣ್ಣ !
ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸಿನಿಮಾ ಪ್ರೇಕ್ಷಕರಿಗೆ ಬೋರ್ ಹೊಡೆಸದೇ ಏಕತಾನತೆಯ ಅಭಿನಯ ಎನಿಸದೇ ವೃತ್ತಿಜೀವನದ ಗ್ರಾಫ್ ಕಾಪಾಡಿಕೊಳ್ಳುವುದು ಸಾಧಾರಣ ಸಂಗತಿಯಲ್ಲ ! ಇದರಲ್ಲಿ ಮೋಹನ್ ಲಾಲ್ ಯಶಸ್ವಿ ! ಯಾವುದೇ ಪಾತ್ರ ನೀಡಿದರೂ ಅದರ ತಳಸ್ಪರ್ಶಿ ಅಧ್ಯಯನ ಮಾಡಿಯೇ ಪರಕಾಯ ಪ್ರವೇಶದೊಂದಿಗೆ ಅಭಿನಯಿಸುವ ಬಹುಮುಖ, ಬಹುಭಾಷೆಗಳ ನಟನಾ ಪ್ರತಿಭೆ !! ಇದರಿಂದಾಗಿಯೇ ಭಾರತದ ಯಾವುದೇ ಮೂಲೆಯಲ್ಲಿಯೂ ಗುರುತಿಸುವುದರೊಂದಿಗೆ ಗೌರವಿಸಲ್ಪಡುತ್ತಿದ್ದಾರೆ !
ಕೇರಳದ ಪತ್ತನಂತಿಟ್ಟದ ಎಲಂತೂರ್‌ನಲ್ಲಿ ಮೇ 21, 1960 ರಂದು ಜನನ. ಮೋಹನ್ ಲಾಲ್ ತಿರುವನಂತಪುರ ನಗರದಲ್ಲಿಯೇ ಬೆಳವಣಿಗೆ. ಇವರ ತಂದೆ ವಿಶ್ವನಾಥನ್ ನಾಯರ್ ಸರ್ಕಾರಿ ಉದ್ಯೋಗಿ. ತಾಯಿ ಶಾಂತಕುಮಾರಿ ಗೃಹಿಣಿ ! ಇವರಿಬ್ಬರ ಪ್ರೋತ್ಸಾಹವೇ ಲಾಲ್ ಪ್ರತಿಭೆಯನ್ನು ಪೋಷಿಸಿತು.ಶಾಲಾ – ಕಾಲೇಜು ದಿನಗಳಲ್ಲಿಯೇ ನಟನೆಯತ್ತ ಒಲವು. ನಾಟಕಗಳಲ್ಲಿ ಅಭಿನಯ ! ಇದರಿಂದಾಗಿಯೋ ಏನು ಭವಿಷ್ಯದ ಹಾದಿ ಗೊಂದಲಮಯ ಆಗಿರಲಿಲ್ಲ. ಲಾಲ್ ಸೀದಾ ಬಂದು ನಿಂತಿದ್ದು ಮಲೆಯಾಳ ಚಿತ್ರರಂಗದ ಬಾಗಿಲಿಗೆ ! ಅದು ಸಂಪೂರ್ಣವಾಗಿ ತೆರೆದಿತ್ತು !
1980 ರಲ್ಲಿ ನಿರ್ದೇಶಕ ಫಾಜಿಲ್ ಅವರು ಮಂಜಿಲ್ ವಿರಿಂಜ ಪೂಕ್ಕಲ್ ಚಿತ್ರದ ಖಳನಾಯಕನ ಪಾತ್ರಕ್ಕಾಗಿ ಹೊಸ ಮುಖದ ಹುಡುಕಾಟದಲ್ಲಿದ್ದರು. ಆಡಿಷನ್ ನಲ್ಲಿ ಭಾಗವಹಿಸಿದ್ದ ನೂರಾರು ಜನರ ನಡುವೆ ಆಯ್ಕೆಯಾಗಿದ್ದು ಮೋಹನ್ ಲಾಲ್ ! ಆಗಿನ್ನೂ ವಯಸು ಕೇವಲ 20 ! ನಟನೆಯ ಸಾಮರ್ಥ್ಯ, ಗೆಲ್ಲಲ್ಲೇಬೇಕೆಂಬ ಹಸಿವು ಗೆಲ್ಲಿಸಿತು. ಚಿತ್ರರಂಗದವರು, ಚಿತ್ರ ವೀಕ್ಷಕರು ಒಮ್ಮೆಲೆ ಗುರುತಿಸಿದರು.
ಇದಾದ ಐದೇ ವರ್ಷದಲ್ಲಿ ನಾಯಕ ನಟನೂ ಆದರು. ಈ ಬೆಳವಣಿಗೆಯಲ್ಲಿ ನಿರ್ದೇಶಕ ಪ್ರಿಯದರ್ಶನ್ ಅಂಥವರ ಕೊಡುಗೆಯೂ ಇದೆ. ಎಷ್ಟಾದರೂ ಮೋಹನ್ ಲಾಲ್, ನಿರ್ದೇಶಕರ ಅಚ್ಚುಮೆಚ್ಚಿನ ನಟ ! ಅವರು ಅಂದುಕೊಂಡಿರುವುದಕ್ಕಿಂತಲೂ ಪರಿಪೂರ್ಣವಾಗಿ ಪಾತ್ರವನ್ನು ಪ್ರೆಸೆಂಟ್ ಮಾಡುವ ನಟ !
ಚಿತ್ರಂ (1988), ಕಿಲುಕ್ಕಂ (1991), ತೆನ್ಮಾವಿನ್ ಕೊಂಬತ್ತು (1994) ಸೇರಿದಂತೆ ಕೆಲವು ಚಿತ್ರಗಳು ಭಾರಿ ಜನಪ್ರಿಯತೆ ತಂದುಕೊಟ್ಟವು. ಖಳನಾಯಕ ಪಾತ್ರವಿರಲಿ, ಹಾಸ್ಯ, ಅಕ್ಷನ್ ಹೀಗೆ ಯಾವುದೇ ಪಾತ್ರಕ್ಕೂ ನ್ಯಾಯ ಸಲ್ಲಿಸುವ ಕಲಾವಿದ ಎನಿಸಿದರು !!
ಭಾರತಂ (1991), ವನಪ್ರಸ್ಥಂ (1999), ಮತ್ತು ಕಿರೀಟಂ (1989), ದೃಶ್ಯಂ ನಂತಹ ಚಲನಚಿತ್ರಗಳು ಭಾವನಾತ್ಮಕತೆ ಮಜಲುಗಳನ್ನು ಪ್ರದರ್ಶಿಸುವ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿವೆ.
ಮೋಹನ್ ಲಾಲ್ ಇದುವರೆಗೂ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಹಲವು ವಿಶ್ವಾದ್ಯಂತ ಭಾಷಾ ತಾರತಮ್ಯವಿಲ್ಲದ ಅಭಿಮಾನಿ ಬಳಗ ಸೃಷ್ಟಿಸಿದೆ.
ಇಂಥ ಬಹುಭಾಷೆಯ, ಬಹುಮುಖ ಪ್ರತಿಭೆಯ ನಟನಿಗೆ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಇದೀಗ ಭಾರತ ಸರ್ಕಾರ ಪ್ರದಾನ ಮಾಡುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೂ ಸಂದಿದೆ. ತನ್ಮೂಲಕ ಫಾಲ್ಕೆ ಪ್ರಶಸ್ತಿಯ ಕಿರೀಟಕ್ಕೆ ಮತ್ತೊಂದು ಹಿರಿಮೆಯ ಗರಿ ಸೇರಿದೆ.
-ಕುಮಾರ ರೈತ


