ಕಾರಂತರನ್ನು ಲೀಲಾ ಮೆಚ್ಚಿಕೊಂಡಿದ್ದೇಕೆ?

ಕಾರಂತರನ್ನು ಲೀಲಾ ಮೆಚ್ಚಿಕೊಂಡಿದ್ದೇಕೆ?

ಕಾರಂತರನ್ನು ಲೀಲಾ ಮೆಚ್ಚಿಕೊಂಡಿದ್ದೇಕೆ?
__________
1935ರ ಸಮಯದಲ್ಲಿ ಮಂಗಳೂರಿನ ಬೇಸೆಂಟ್ ಹೈಸ್ಕೂಲಿನ ವಿದ್ಯಾರ್ಥಿನಿ ಲೀಲಾ ಆಳ್ವ ಅವರು, ತಮ್ಮ ಶಾಲೆಗೆ ನಾಟಕ ಕಲಿಸಲು ಬರುತ್ತಿದ್ದ ಶಿವರಾಮ ಕಾರಂತರನ್ನು ಮದುವೆಯಾಗಲು ನಿರ್ಧರಿಸಿದ ಆ ಕ್ಷಣದ ಬಗ್ಗೆ ಹೀಗೆ ಬರೆದಿದ್ದಾರೆ:

"ಒಂದು ದಿನ ನಾಟಕ ವೇಷಧಾರಿಗಳಿಗೆ ಪೋಷಾಕು ತಯಾರಿಸಲು ಬೇಕಾದ ಬಣ್ಣದ ಕಾಗದ, ಬೇಗಡೆ, ಜರಿ,ಮಣಿಗಳು ಇತ್ಯಾದಿ ಸಾಮಾಗ್ರಿಗಳು ಬಂದವು. ಸ್ವಲ್ಪ ಹೊತ್ತಿನಲ್ಲೇ ನಾಟಕ ತಾಲೀಮು ನೀಡುತ್ತಿದ್ದ ಮೇಸ್ಟ್ರು ಕಾರಂತರು ಬಂದರು.ಬಂದವರೇ ಕತ್ತರಿ ಹಿಡಿದು ಕೆಲಸದಲ್ಲಿ ತೊಡಗಿದರು.ಬಣ್ಣದ ಕಾಗದಗಳನ್ನು ಪಾತ್ರಧಾರಿಗಳ ಅಳತೆಗೆ ವಿವಿಧ ಆಕಾರಗಳಲ್ಲಿ ಕತ್ತರಿಸತೊಡಗಿದರು.

 ನನ್ನ ದೃಷ್ಟಿ ಅವರ ಕೈಬೆರಳುಗಳ ಚಲನೆಯನ್ನು ಈಕ್ಷಿಸಿತು.ಅದೇನು ವೇಗ! ಅದೇನು ಬೆರಳುಗಳ ಚಲನೆ! ನೋಡುತ್ತಾ ನಿಂತೆ, ಮೈಮರೆತು.ಏನೊಂದು ಕೈಚಳಕ! ವಿಚಿತ್ರವಾಗಿ ಕಂಡಿತು ನನಗೆ.ಬಣ್ಣದ ಕಾಗದಗಳನ್ನು ಲೀಲಾಜಾಲವಾಗಿ ಕತ್ತರಿಸಿ, ಅಂಟಿಸಿ, ಕೆಲವಾರು ಕಿರೀಟಗಳು, ಸೊಂಟ ಹಾಗೂ ಕೈಪಟ್ಟಿಗಳು, ಉಡುಪುಗಳು,ಒಂದೆರಡು ಗಂಟೆಗಳಲ್ಲೇ ತಯಾರಾದವು. 

ಆ ಕೈ ಬೆರಳುಗಳ ಚಲನೆ ಕಂಡು, ಆನಂದಿಸಿತು ನನ್ನ ಮನಸ್ಸು. ಆ ಕೈಗಳ ಬಳಿ ಸದಾ ನಾನಿರುವಂತಾದರೆ ಎಷ್ಟೊಂದು ಆನಂದ ಅನಿಸಿತು. ನಾನಿದ್ದೇ ತೀರಬೇಕು ಆ ಕೈಗಳ ಬಳಿ ಎಂಬ ಉತ್ಕಟ ಇಚ್ಛೆ ನನ್ನಲ್ಲುಂಟಾಯಿತು. ಜೀವನದಲ್ಲಿ ಮೊದಲ ಬಾರಿಗೆ ಇದು ಬೇಕು ನನಗೆ ಎಂದು ಆಸೆಪಟ್ಟುದು ಕಾರಂತರ ಕಲಾತ್ಮಕ ಕೈಗಳನ್ನು.ಅದೊಂದು ವಿಚಿತ್ರ ಹಾಗೂ ವಿಶಿಷ್ಟ ಗಳಿಗೆ.."

ಮುಂದೆ ಕಾರಂತ್ ಮತ್ತು ಲೀಲಾ ಮದುವೆ ಮೇ 6,1936 ಬುದ್ಧ ಹುಣ್ಣಿಮೆಯ ದಿನದಂದು  ನೆರವೇರಿತು. ಕಾರಂತರು ಬ್ರಾಹ್ಮಣರಾದರೆ ಲೀಲಾ ಬಂಟ ಸಮುದಾಯದವರು. ನಿರೀಕ್ಷಿಸಿದಂತೆ ಇವರಿಬ್ಬರ ಅಂತರ್ಜಾತೀಯ ವಿವಾಹವು ಕಾರಂತರ ಪೋಷಕರೂ ಸೇರಿದಂತೆ ಉಡುಪಿ ಸುತ್ತಲಿನ ಸಂಪ್ರದಾಯನಿಷ್ಠ ಬ್ರಾಹ್ಮಣರನ್ನು ಕೆರಳಿಸಿತು.ಆ ಕಾಲದಲ್ಲಿ ಸಂಪ್ರದಾಯ ನಿಷ್ಠೆ ಮತ್ತು ಜಾತಿ ವ್ಯವಸ್ಥೆ ಪ್ರಬಲವಾಗಿದ್ದು. ಕಾರಂತರು ಅನೇಕರ ಟೀಕೆ -ತಿರಸ್ಕಾರಗಳನ್ನು ಎದುರಿಸಬೇಕಾಯಿತು.ಕೆಲವರು ಮುದ್ರಣ ಮಾಧ್ಯಮದ ಮೂಲಕವೂ ಧಾಳಿ ನಡೆಸಿದರು.

ಅದೇ ಸಮಯದಲ್ಲಿ ತೀರ್ಥಹಳ್ಳಿಯ ಜನಾರ್ದನ ಆಚಾರ್ಯ ಎಂಬವರು ವಿಷ ಕಾರುತ್ತ ಕಟುವಾಗಿ ಟೀಕಿಸಿ"ಕಾರಂತ ಲೀಲೆ" ಎಂಬ ಲೇಖನವೊಂದನ್ನು ಪತ್ರಿಕೆಯಲ್ಲಿ ಪ್ರಕಟಿಸಿದಾಗ ಸಿಟ್ಟಿಗೆದ್ದ ಕಾರಂತರು ಆಚಾರ್ಯರ ವಿರುದ್ಧ ಕೋರ್ಟಿಗೆ ಹೋಗಿ ಗೆದ್ದರು.
ಕೇಸು ಸೋತ ಜನಾರ್ದನ ಆಚಾರ್ಯರು ದಂಡ ಕಟ್ಟಲೂ ನಿರಾಕರಿಸಿ ಮೂರು ತಿಂಗಳು ಜೈಲುವಾಸವನ್ನೇ ಅನುಭವಿಸಿದರಂತೆ.!!

ಹಾಗೆ ನೋಡಿದರೆ, ಕಾರಂತರ ಬದುಕಿನಲ್ಲಿ ಯಾವ ಘಟನೆಯೂ ಅದು ಚಿಕ್ಕದಾಗಿರಲಿ ದೊಡ್ಡದಾಗಿರಲಿ ತೀವ್ರ ಹೋರಾಟ ಹಾಗೂ ನಾಟಕೀಯತೆ ಇಲ್ಲದೆ ಘಟಿಸುತ್ತಿರಲಿಲ್ಲ.
_______
- ಕೇಂದ್ರ ಸಾಹಿತ್ಯ ಅಕಾಡೆಮಿಯ 'ಭಾರತೀಯ ಸಾಹಿತ್ಯ ನಿರ್ಮಪಕರು' ಮಾಲಿಕೆಯಲ್ಲಿ ಡಾ. ಸಿ.ಎನ್. ರಾಮಚಂದ್ರನ್ ಬರೆದ "ಕೋಟ ಶಿವರಾಮ ಕಾರಂತ" ಪುಸ್ತಕದಿಂದ.