ಶಿಕ್ಷಣದಲ್ಲಿ ದೇಶ ವಿಭಜನೆಯನ್ನು ಪ್ರತ್ಯೇಕವಾಗಿ ಹೇಳಬೇಕೆ?

ಶಿಕ್ಷಣದಲ್ಲಿ ದೇಶ ವಿಭಜನೆಯನ್ನು ಪ್ರತ್ಯೇಕವಾಗಿ ಹೇಳಬೇಕೆ?

ಇತ್ತೀಚೆಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT) ಎಲ್ಲ ಶಾಲೆಗಳಿಗೂ ಒಂದು ಸುತ್ತೋಲೆಯನ್ನು ಹೊರಡಿಸಿ ದೇಶ ವಿಭಜನೆಯ ಭಯಾನಕತೆಯನ್ನು ಪ್ರಾರ್ಥನೆಯ ಸಮಯದಲ್ಲಿ ಶಾಲಾ ಮಕ್ಕಳಿಗೆ ಮಾಡ್ಯೂಲ್‌ಗಳ  ಮೂಲಕ ತಿಳಿಸಿ ಅರಿವು ಹುಟ್ಟಿಸಬೇಕು ಮತ್ತು ಯೋಜನೆಯನ್ನು ಕಡ್ಡಾಯವಾಗಿ ಅನುಷ್ಠಾನ ಮಾಡಿದ ವರದಿಯನ್ನು ನೀಡಬೇಕು ಎಂದು ತಿಳಿಸಿತು. ಈ ಯೋಜನೆಯನ್ನು ಜಾರಿ ಮಾಡುವಂತೆ ಶಾಲೆಗಳಿಗೆ ಆದೇಶವನ್ನು ಕಳಿಸಿದ ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರು ನಂತರ ತಮ್ಮ ಆದೇಶವನ್ನು ಹಿಂದಕ್ಕೆ ಪಡೆದುಕೊಂಡರು. ಇಲ್ಲಿರುವ ಪ್ರಶ್ನೆ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ್ದಲ್ಲ. ಯೋಜನೆಯ ಪರಿಕಲ್ಪನೆಗೆ ಸಂಬಂಧಿಸಿದ್ದಾಗಿದೆ. 

ಮೊದಲನೆಯದಾಗಿ, ಏಳನೆಯ ತರಗತಿ ಮತ್ತು ಹತ್ತನೆಯ ತರಗತಿಯಲ್ಲಿ ಸಮಾಜ ವಿಜ್ಞಾನ ಪಠ್ಯದಲ್ಲಿ ಭಾರತದ ಸ್ವಾತಂತ್ರ್ಯ ಚಳವಳಿಯ ಪಾಠಗಳಿವೆ. ಮತ್ತು ಅಲ್ಲಿ ಬಹಳ ವಿಸ್ತೃತವಾಗಿ ದೇಶ ವಿಭಜನೆಯ ಇತಿಹಾಸವಿದೆ. ಪ್ರಶ್ನೆ ಪತ್ರಿಕೆಯ ನೀಲ ನಕಾಶೆಯ ಪ್ರಕಾರ ಈ ಪಾಠಕ್ಕೆ ವೈಟೇಜ್ ಜಾಸ್ತಿ ಇದ್ದು ಮುಖ್ಯ ಪ್ರಶ್ನೆಗಳಲ್ಲಿ ಒಂದನ್ನಾದರೂ ಅದರಿಂದಲೇ ತೆಗೆಯಬೇಕು. ಕಳೆದ ಏಳು ದಶಕಗಳಿಂದಲೂ ದೇಶ ವಿಭಜನೆಯ ಪಾಠ ಬೋಧನೆಯನ್ನು ಮಾಡುತ್ತಲೇ ಇರುವಾಗ ಪ್ರತ್ಯೇಕವಾಗಿ ಒಂದು ವಿಶೇಷ ಕಾರ್ಯಕ್ರಮವಾಗಿ ದೇಶ ವಿಭಜನೆಯ ಬಗ್ಗೆ ಮಕ್ಕಳಿಗೆ ವಿವರಿಸುವುದರ ಉದ್ದೇಶ ಏನು ಎನ್ನುವುದು ಸ್ಪಷ್ಟವಿಲ್ಲ. ಸಂವಿಧಾನದ ಪ್ರಸ್ತಾವನೆಯನ್ನು ಪ್ರತ್ಯೇಕ ಕಾರ್ಯಕ್ರಮವಾಗಿ ನಡೆಸುವ ಔಚಿತ್ಯ ಬೇರೆ ಬಗೆಯದು. ಸಂವಿಧಾನದ ಪ್ರಸ್ತಾವನೆಯೂ ಕೂಡ ಪಾಠ ಪುಸ್ತಕದಲ್ಲೆ ಬರುತ್ತದೆ. ಆದರೆ ಸಂವಿಧಾನವು ವರ್ತಮಾನ ಮತ್ತು ಭವಿಷ್ಯದ ಬದುಕಿನ ಒಡನಾಡಿಯಾಗಿರುವುದರಿಂದ ಅದನ್ನು ವಿಶೇಷ ಕಾರ್ಯಕ್ರಮವಾಗಿ ನಡೆಸುವುದಕ್ಕೆ ಮಹತ್ವ ಇದೆ. ಆದರೆ ದೇಶ ವಿಭಜನೆಯ ವಿಚಾರ ಹಾಗಲ್ಲ.‌ ಅದು ಇತಿಹಾಸದ ಒಂದು ಘಟನೆ. ಆ ಘಟನೆಯ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡಲು ಹೊರಟಾಗ ಪ್ಲಾಸಿ ಕದನ, ಪಾಣಿಪತ್ ಕದನದಿಂದ ತೊಡಗಿ ವೇದ ಕಾಲದ ಸಪ್ತ ಸಿಂಧೂ ಕದನದ ವರೆಗೂ ವಿಶೇಷ ಕಾರ್ಯಕ್ರಮಗಳನ್ನು ನಡೆಸಬೇಕಾಗುವುದಿಲ್ಲವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. 

ಎರಡನೆಯದಾಗಿ ಶಿಕ್ಷಣ ಮತ್ತು ಮನೋ ವಿಜ್ಞಾನದ ನಡುವೆ ಹತ್ತಿರದ ಸಂಬಂಧವಿದೆ. ಆ ಕಾರಣಕ್ಕಾಗಿಯೇ ' ಶೈಕ್ಷಣಿಕ ಮನೋವಿಜ್ಞಾನ' ಎಂಬ ಒಂದು ಜ್ಞಾನ ಶಾಖೆಯೇ ಇದೆ. ಅಧ್ಯಾಪಕರು ಡಿ.ಎಡ್, ಬಿ.ಎಡ್ ತರಬೇತಿ ಪಡೆಯುವಾಗ ಶೈಕ್ಷಣಿಕ ಮನೋವಿಜ್ಞಾನವನ್ನು ಒಂದು ಪತ್ರಿಕೆಯಾಗಿ ಅಭ್ಯಾಸ ಮಾಡುತ್ತಾರೆ. ಅಲ್ಲದೆ ಅಧ್ಯಾಪಕರದ್ದು ಕೇವಲ ಆದೇಶವನ್ನು ಅನುಷ್ಠಾನ ಮಾಡುವ 'ಉದ್ಯೋಗ' ಅಲ್ಲ. 'ಅಧ್ಯಾಪನ' ಎನ್ನುವುದು ಒಂದು ವೃತ್ತಿಯಾಗಿದ್ದು ವಕೀಲರು ಮತ್ತು ವೈದ್ಯರುಗಳ ಹಾಗೆ ಅಧ್ಯಾಪಕರೂ ವೃತ್ತಿ ಪರಿಣಿತರಾಗಿರುತ್ತಾರೆ. ಆದ್ದರಿಂದ ಪಾಠ ಬೋಧನೆ ನಡೆಸುವಾಗ ಮಕ್ಕಳ ಮಾನಸಿಕ ಸ್ಥಿತಿಗೆ ಹಾನಿಯಾಗದ ಹಾಗೆ ಎಚ್ಚರ ವಹಿಸಿ ಬೋಧಿಸಬೇಕಾಗುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದ ಮಕ್ಕಳಿಗೆ ಭಯಾನಕವಾದದ್ದನ್ನೂ ಕೂಡ ಭೀಭತ್ಸ ಎನಿಸದ ರೀತಿಯಲ್ಲಿ ಹೇಳಬೇಕಾಗುತ್ತದೆ. ಅದರ ಉದ್ದೇಶ ಮಕ್ಕಳ ಮಾನಸಿಕ ಬೆಳವಣಿಗೆಯ ಮಟ್ಟಕ್ಕೆ ಅಷ್ಟು ಭೀಬತ್ಸವಾಗಿರುವುದನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ ಎನ್ನುವುದೇ ಹೊರತು ಸುಳ್ಳನ್ನು ಹೇಳಬೇಕು ಎನ್ನುವುದಲ್ಲ. ಅಂತಾದ್ದರಲ್ಲಿ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು ತನ್ನ ಸುತ್ತೋಲೆಯಲ್ಲೆ 'ಭಯಾನಕತೆಯ ಅರಿವು ಮೂಡಿಸುವುದು' ಎಂಬ ಪರಿಕಲ್ಪನೆಯನ್ನು ಕೊಟ್ಟಿರುವುದು ಶೈಕ್ಷಣಿಕ ಮನೋವಿಜ್ಞಾನದ ಹಿನ್ನೆಲೆಯಲ್ಲಿ ಸಮಂಜಸವೆನಿಸುವುದಿಲ್ಲ. ಇದಿಷ್ಟು ಶೈಕ್ಷಣಿಕ ಸಂಗತಿಗಳಾದರೆ ದೇಶ ವಿಭಜನೆ ಎಂಬ ಪರಿಕಲ್ಪನೆಯನ್ನು ವ್ಯಾಪಕವಾಗಿ ಅರ್ಥ ಮಾಡಿಕೊಂಡ ಕ್ರಮದಲ್ಲೆ ಸಾಕಷ್ಟು ದೋಷವಿದೆ.

ಸಾಮಾನ್ಯವಾಗಿ ದೇಶ ವಿಭಜನೆ ಎಂದ ತಕ್ಷಣ ಇಂದಿನ ಭಾರತದ ನಕಾಶೆ, ಪಾಕಿಸ್ಥಾನದ ನಕಾಶೆ, ಬಾಂಗ್ಲಾ ದೇಶದ ನಕಾಶೆಗಳೆಲ್ಲವೂ ಒಂದೇ ನಕಾಶೆಯಾಗಿತ್ತು, ಅದನ್ನು ಪಶ್ಚಿಮ ಪಾಕಿಸ್ಥಾನ ಮತ್ತು ಪೂರ್ವ ಪಾಕಿಸ್ಥಾನವೆಂದು ವಿಭಜಿಸಿ ಪ್ರತ್ಯೇಕವಾಗಿ ಕಡಿದು ಹಾಕಲಾಯಿತು ಎಂಬ ಅರ್ಥದಲ್ಲಿ ಕಲ್ಪಿಸಿಕೊಳ್ಳಲಾಗುತ್ತದೆ. ಆದರೆ ವಾಸ್ತವದಲ್ಲಿ ಅದು ಹಾಗಿರಲೇ ಇಲ್ಲ.

ವೈಚಾರಿಕ ಸ್ಪಷ್ಟತೆಯಿಂದ ಮಾತನಾಡುವುದಾದರೆ, ಇವತ್ತಿನ ಭಾರತ ಎನ್ನುವುದು 1947 ರ ಭಾರತ ಆಗಿರಲಿಲ್ಲ. 1947 ರ ಕಾಲದಲ್ಲಿ ಬ್ರಿಟಿಷರ ಅಧೀನದಲ್ಲಿ 17 ಪ್ರಾಂತ್ಯಗಳು ಇದ್ದವು. ಯುನೈಟೆಡ್ ಪ್ರಾವಿನ್ಸಸ್, ಸಿಂಧ್, ಪಂಜಾಬ್, ಪಂತ್-ಪಿಪ್ಲೋಡ, ಒರಿಸ್ಸಾ, ವಾಯವ್ಯ ಗಡಿ ಪ್ರಾಂತ್ಯ, ಮದ್ರಾಸ್, ಡೆಲ್ಲಿ, ಕೊಡಗು, ಸೆಂಟ್ರಲ್ ಪ್ರಾವಿನ್ಸ್ ಮತ್ತು ಬಿರಾರ್, ಬೊಂಬಾಯಿ, ಬಿಹಾರ, ಬಂಗಾಳ, ಬಲೂಚಿಸ್ಥಾನ, ಅಸ್ಸಾಂ, ಅಂಡಮಾನ್ ನಿಕೋಬಾರ್, ಅಜ್ಮೀರ್-ಮೇರ್ವಾರ ಇವೇ ಆ ಹದಿನೇಳು ಪ್ರಾಂತ್ಯಗಳು. 1947 ರ ಭಾರತ ಸ್ವಾತಂತ್ರ್ಯ ಶಾಸನವು ಸ್ವಾತಂತ್ರ್ಯದ ಘೋಷಣೆ ಮಾಡಿದ್ದು ಮತ್ತು ಭಾರತ- ಪಾಕಿಸ್ಥಾನವೆಂಬ ಎರಡು ರಾಷ್ಟ್ರಗಳನ್ನು ಸೃಷ್ಟಿಸಿದ್ದು ಈ 17 ಪ್ರಾಂತ್ಯಗಳಿಗೆ ಮಾತ್ರ. ಉದಾಹರಣೆಗೆ ಹೇಳುವುದಾದರೆ ದಕ್ಷಿಣ ಕನ್ನಡ ಜಿಲ್ಲೆಗೆ 1947 ರ ಸ್ವಾತಂತ್ರ್ಯದ ಶಾಸನದ ಪ್ರಕಾರ ಸ್ವಾತಂತ್ರ್ಯ ಬಂದಿತ್ತು. ಏಕೆಂದರೆ ಅದು ಬ್ರಿಟಿಷರ ಮದ್ರಾಸ್ ಪ್ರಾಂತ್ಯದಲ್ಲಿತ್ತು.‌ ಆದರೆ 1947 ರ ಸ್ವಾತಂತ್ರ್ಯ ಶಾಸನದ ಪ್ರಕಾರ ಸಕಲೇಶಪುರಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಏಕೆಂದರೆ ಅದು ಬ್ರಿಟಿಷರ ಅಧೀನದಲ್ಲಿ ಇರಲಿಲ್ಲ. ತಮ್ಮ ಅಧಿಕಾರವೇ ಇಲ್ಲದ ಸ್ಥಳಕ್ಕೆ ಬ್ರಿಟಿಷರು ಸ್ವಾತಂತ್ರ್ಯ ಘೋಷಿಸಲು ಸಾಧ್ಯವಿರಲಿಲ್ಲ. ಸಕಲೇಶಪುರವು ಮೈಸೂರಿನ ಮಹಾರಾಜರ ಅಧೀನದಲ್ಲಿತ್ತು.

ಇಲ್ಲಿ ಮಹಾರಾಜರು ಅಥವಾ 1947 ರಲ್ಲಿ ಅಸ್ಥಿತ್ವದಲ್ಲಿದ್ದ ಸುಮಾರು 565 ಮಹಾರಾಜರುಗಳ ರಾಜ್ಯಕ್ಕೂ ಬ್ರಿಟಿಷರಿಗೂ ಏನು ಸಂಬಂಧ ಎಂದು ಮೊದಲು ಅರ್ಥ ಮಾಡಿಕೊಳ್ಳಬೇಕು. ಸಂವಿಧಾನದ ಕಾರಣದಿಂದಾಗಿ ಕೊಂಚ ವ್ಯತ್ಯಾಸವಿದೆ ಎಂಬುದನ್ನು ಬಿಟ್ಟರೆ ಇವತ್ತು ರಾಜ್ಯ ಸರ್ಕಾರಕ್ಕೂ ಕೇಂದ್ರ ಸರ್ಕಾರಕ್ಕೂ ಇರುವ ಸಂಬಂಧಕ್ಕೂ 1947 ರಲ್ಲಿ ಬ್ರಿಟಿಷರಿಗೂ ದೇಶೀಯ ರಾಜರುಗಳಿಗೂ ಇದ್ದ ಸಂಬಂಧದ ನಡುವೆ ಹೋಲಿಕೆ ಇದೆ. ಇವತ್ತು ಭಾರತದ ಎಲ್ಲ ರಾಜ್ಯ ಸರ್ಕಾರಗಳೂ ಸ್ವತಂತ್ರ ಅಧಿಕಾರವನ್ನೆ ಹೊಂದಿವೆ. ಆದರೆ ರಾಜ್ಯ ಸರ್ಕಾರಗಳಿಗೆ ಪರಮಾಧಿಕಾರ ಇಲ್ಲ. ಇನ್ನೊಂದು ದೇಶದೊಂದಿಗೆ ಯುದ್ಧ ನಡೆಸುವ ಅಥವಾ ಶಾಂತಿ ಒಪ್ಪಂದ ಮಾಡಿಕೊಳ್ಳುವ ಪರಮಾಧಿಕಾರ ಇರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. 1947 ರ ಕಾಲದಲ್ಲಿ ರಾಜರುಗಳು ಸ್ವತಂತ್ರ ಅಧಿಕಾರವನ್ನೆ ಹೊಂದಿದ್ದರು. ಆದರೆ ಯುದ್ಧ ಘೋಷಿಸುವ ಅಥವಾ ಶಾಂತಿ ಒಪ್ಪಂದ ಮಾಡಿಕೊಳ್ಳುವ ಪರಮಾಧಿಕಾರ ಇದ್ದದ್ದು ಬ್ರಿಟಿಷ್ ಸರ್ಕಾರಕ್ಕೆ ಮಾತ್ರ. 1947 ರ ಈ ಸ್ಥಿತಿಗೆ ಕಾರಣವಾಗಿರುವುದು 1798 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್ ವೆಲ್ಲೆಸ್ಲಿ ಜಾರಿಗೊಳಿಸಿದ್ದ ಸಹಾಯಕ ಸೈನ್ಯ ಪದ್ಧತಿ ಎಂಬ ನೀತಿ. ಈ ನೀತಿಯನ್ನು ಸ್ವೀಕರಿಸಿದ ದೇಶೀಯ ರಾಜರುಗಳಿಗೆ ಯಾರೊಂದಿಗೂ ಯುದ್ಧ ಘೋಷಿಸುವ ಮತ್ತು ಶಾಂತಿ ಒಪ್ಪಂದ ಮಾಡಿಕೊಳ್ಳುವ ಅಧಿಕಾರ ಇರಲಿಲ್ಲ. ಆದರೆ ಆ ರಾಜರುಗಳ ರಕ್ಷಣೆ ಬ್ರಿಟಿಷರ ಜವಾಬ್ದಾರಿಯಾಗಿತ್ತು. ಇದೇ ನೀತಿ ಕಾಲಾನುಕ್ರಮದಲ್ಲಿ ಬ್ರಿಟಿಷರಿಗೆ ಕೆಲವು ವಿಷಯಗಳಲ್ಲಿ ತುಸು ಜಾಸ್ತಿ ಅಧಿಕಾರವಾಗಿ ವಿಸ್ತರಿಸಲ್ಪಟ್ಟು 1947 ರ ವರೆಗೂ ಮುಂದುವರಿದಿತ್ತು. ಟಿಪ್ಪೂ ಸುಲ್ತಾನ್ ಬ್ರಿಟಿಷರ ವಿರುದ್ಧ ಯುದ್ಧ ನಡೆಸಲು ಕಾರಣವೂ ಈ ನೀತಿಯೇ. ಬ್ರಿಟಿಷರೇನೂ ಟಿಪ್ಪೂ ಸುಲ್ತಾನ್ ರಾಜನೇ ಆಗಿರತಕ್ಕದ್ದಲ್ಲ ಎಂದು ಕೇಳಿರಲಿಲ್ಲ. "ನಿನ್ನ ಪರಮಾಧಿಕಾರವನ್ನು ನಮಗೆ ಶರಣಾಗಿಸಿ ನಮ್ಮ ಅಧೀನದಲ್ಲಿ ನೀನು ರಾಜನಾಗಿರಬೇಕು" ಎನ್ನುವುದು ಬ್ರಿಟಿಷರ ಬೇಡಿಕೆಯಾಗಿತ್ತು. ತನ್ನ ಪರಮಾಧಿಕಾರವನ್ನು ಬ್ರಿಟಿಷರಿಗೆ ಶರಣಾಗಿಸಲಾರೆ ಎಂಬ ನಿಲುವಿನಲ್ಲಿ ಟಿಪ್ಪೂ ಯುದ್ಧ ನಡೆಸಿದ್ದಾಗಿತ್ತು. 

1947 ರ ಭಾರತ ಸ್ವಾತಂತ್ರ್ಯ ಶಾಸನ ಜಾರಿಯಾಗುವ ಕಾಲಕ್ಕೆ ಬ್ರಿಟಿಷರು ಸಾಮ್ರಾಟರ ಹಾಗಿದ್ದರೆ 565 ರಾಜರುಗಳು ಸಾಮ್ರಾಟರಿಗೆ ಕಪ್ಪ ಕಾಣಿಕೆ ಕೊಡುವ ರಾಜರ ಹಾಗಿದ್ದರು ಎಂದು ಭಾವಿಸಿಕೊಳ್ಳಬಹುದು. 1947 ರ ಸ್ವಾತಂತ್ರ್ಯ ಶಾಸನವು ಜಾರಿಯಾದ ತಕ್ಷಣ ಬ್ರಿಟಿಷ್ ಚಕ್ರವರ್ತಿ 6 ನೆಯ ಆರ್ಥರ್ ಲೂಯಿಸ್ ಫ್ರೆಡ್ರಿಕ್ ಜಾರ್ಜ್ ಅವರಿಗೆ ಭಾರತದ ಮೇಲಿರುವ ಪರಮಾಧಿಕಾರವೂ ರದ್ದಾಗುತ್ತದೆ ಎನ್ನುವುದು ಶಾಸನದ ಒಂದು ನಿಯಮವಾಗಿತ್ತು. ಬ್ರಿಟಿಷ್ ಸಾಮ್ರಾಟನ  ಅಧಿಕಾರವೇ ರದ್ದಾದಾಗ ಸಾಮ್ರಾಟನೊಂದಿಗೆ 565 ರಾಜರುಗಳು ಮಾಡಿಕೊಂಡ ಯಾವ ಒಪ್ಪಂದವೂ ಊರ್ಜಿತದಲ್ಲಿರುವುದಿಲ್ಲ. ಆಗ ಆ ರಾಜರುಗಳ ವ್ಯವಸ್ಥೆ ಏನು? ಅದಕ್ಕೂ 1947 ರ ಸ್ವಾತಂತ್ರ್ಯ ಶಾಸನದಲ್ಲೆ ಬ್ರಿಟಿಷರು ವ್ಯವಸ್ಥೆ ಮಾಡಿದ್ದರು. 567 ರಾಜರುಗಳು ಬ್ರಿಟಿಷರು ಸ್ವತಂತ್ರಗೊಳಿಸಿದ ಅವರ ಅಧೀನದ ಪ್ರಾಂತ್ಯದ ಆಡಳಿತದೊಂದಿಗೆ ಬೇಕಾದರೂ ವಿಲೀನಗೊಳ್ಳಬಹುದಿತ್ತು ಅಥವಾ ಸ್ವತಂತ್ರರಾಗಿ ಬೇಕಾದರೂ ಇರಬಹುದಾಗಿತ್ತು. ವಿಲೀನಗೊಳ್ಳಲೇ ಬೇಕು ಎನ್ನುವ ಶರತ್ತು ಇರಲಿಲ್ಲ. ಆಗ ದೇಶ ವಿಭಜನೆ ಆಗದೆ ಇದ್ದರೆ ಈಗ ಪಾಕಿಸ್ಥಾನವಾಗಿರುವ ಭಾಗದಲ್ಲಿದ್ದ ರಾಜರುಗಳು ಭಾರತದೊಂದಿಗೆ ವಿಲೀನ ಆಗುತ್ತಿದ್ದರು ಎಂದು ಊಹಿಸಲು ಬರುವುದಿಲ್ಲ. ಧರ್ಮದ ಆಧಾರದಲ್ಲಿ ವಿಭಜನೆಯಾದ ನಂತರವೂ ಕಾಶ್ಮೀರದ ಹರಿಸಿಂಗ್ ಅವರೇ ಭಾರತದೊಂದಿಗೆ ವಿಲೀನಗೊಳ್ಳಲು ಒಪ್ಪದೆ ತಾನು ಸ್ವತಂತ್ರ ಪರಮಾಧಿಕಾರಿಯಾಗಿರುತ್ತೇನೆ ಎಂಬ ನಿರ್ಧಾರವನ್ನೆ ತೆಗೆದುಕೊಂಡಿದ್ದರು ಎಂದ ಮೇಲೆ ಈಗಿನ ಪಾಕಿಸ್ಥಾನದಲ್ಲಿದ್ದ ನವಾಬರುಗಳೆಲ್ಲ ಭಾರತದೊಂದಿಗೆ ವಿಲೀನಗೊಳ್ಳಲು ಒಪ್ಪುವ ಸಾಧ್ಯತೆ ತೀರಾ ವಿರಳವಿತ್ತು. 

ಇದಿಷ್ಟೇ ಅಲ್ಲ. 1947 ರ ಕಾಲದಲ್ಲಿ ಪಂಡಿಚೇರಿ, ಕರೈಕಲ್, ಮಾಹೆ, ಯಾನಂ, ಚಂದ್ರನಗರಗಳು ಫ್ರೆಂಚರ ಅಧೀನದಲ್ಲೂ, ಗೋವಾ, ಡಾಮನ್, ಡಿಯು, ನಗರ ಹವೇಲಿ, ದಾದ್ರಾಗಳು ಪೋರ್ಚುಗೀಸರ ಅಧೀನದಲ್ಲೂ ಇದ್ದವು. ಫ್ರೆಂಚ್ ಮತ್ತು ಪೋರ್ಚುಗೀಸ್ ಪ್ರಾಂತ್ಯಗಳು ಆಯಾ ಸರ್ಕಾರಗಳ ಪರಮಾಧಿಕಾರವನ್ನೆ ಹೊಂದಿದ್ದು,"ನೀವು ಈ ರೀತಿ ಮಾಡಬಹುದು" ಎಂದು ಸೂಚಿಸುವ ಅಧಿಕಾರವೂ ಬ್ರಿಟಿಷರಿಗೆ ಇರಲಿಲ್ಲ. ಪೋರ್ಚುಗೀಸರ ಪ್ರಾಂತ್ಯವನ್ನು ಯುದ್ಧದ ಮುಖಾಂತರ ಸ್ವತಂತ್ರಗೊಳಿಸಲಾಗಿತ್ತು. 19 ಡಿಸೆಂಬರ್ 1961 ರಂದು ಪೋರ್ಚುಗೀಸ್ ಪ್ರಾಂತ್ಯಗಳು ಸ್ವತಂತ್ರಗೊಂಡವು. ಫ್ರೆಂಚರೊಂದಿಗೆ ಯುದ್ಧ ನಡೆಯದೆ ಇದ್ದರೂ ಹಲವು ಸತ್ಯಾಗ್ರಹಗಳು ನಡೆದು ಜನಮತ ಗಣನೆ ಆಗಿ ಪೂರ್ಣವಾಗಿ ಅದು 16 ಆಗಸ್ಟ್ 1962 ರಂದು ಸ್ವತಂತ್ರವಾಯಿತು. ಆಗಲೂ ಮುಂದಿನ 50 ವರ್ಷಗಳಲ್ಲಿ ಬೇರೆ ಯುರೋಪಿಯನ್ ಶಕ್ತಿಗಳು ಪಾಂಡಿಚೇರಿಯನ್ನು ಆಕ್ರಮಿಸಿದರೆ ಆಗ ಫ್ರೆಂಚರೇ ಮತ್ತೆ ಬರುತ್ತಾರೆ, ನಿಗದಿತ ಕಾಲದ ತನಕವೂ ಪಾಂಡಿಚೇರಿ ಭಾರತದ ಅಧೀನದಲ್ಲೆ ಇದ್ದರೆ ಆಮೇಲೆ ಅದರ ಮೇಲೆ ಫ್ರಾನ್ಸಿಗೆ ಯಾವ ಹಕ್ಕೂ ಇರುವುದಿಲ್ಲ ಎಂಬ ಶರತ್ತಿನ ಮೇರೆಗೆ ಸ್ವತಂತ್ರವಾಯಿತು.  ಇಷ್ಟೂ ಪ್ರಕ್ರಿಯೆಗಳು ಮುಗಿದ ನಂತರ 'ಭಾರತ' ಎನ್ನುವ ಈಗಿನ ಭೂಪಟ ರೂಪುಗೊಂಡಿದೆ. ಹಾಗಿರುವಾಗ ಈಗಿನ ಭಾರತದ ಭೂಪಟ ಮತ್ತು ಪಾಕಿಸ್ಥಾನ, ಬಾಂಗ್ಲಾ ದೇಶದ ಭೂಪಟಗಳ ಗಡಿ ರೇಖೆಗಳನ್ನು ತೆಗೆದು ಕಲ್ಪಿಸಿಕೊಂಡು ದೇಶ ವಿಭಜನೆಯನ್ನು ಅರ್ಥ ಮಾಡಿಕೊಳ್ಳುವುದು ಸಮರ್ಪಕ ಗ್ರಹಿಕೆಯಾಗುವುದಿಲ್ಲ.

1947 ರ ಕಾಲದಲ್ಲಿ ಸಾಕಷ್ಟು ಅಧ್ಯಯನ ನಡೆದಿರುವುದಿಲ್ಲ, ದೇಶ ವಿಭಜನೆಯನ್ನು ಭಾವನಾತ್ಮಕವಾಗಿ ತೆಗೆದುಕೊಳ್ಳುವುದು ಸಹಜವಾಗಿತ್ತು. ಈಗ, ದೇಶ ವಿಭಜನೆಯ ಅನೇಕ ಒಳನೋಟಗಳ ಅಧ್ಯಯನ ನಡೆದಿದೆ. ಆ ಅಧ್ಯಯನಗಳು ದೇಶ ವಿಭಜನೆಯ ಹಿಂದಿನ ಅಂತಾರಾಷ್ಟ್ರೀಯ ತಂತ್ರಗಳನ್ನೂ ಅರ್ಥ ಮಾಡಿಸಿವೆ.  ದೇಶ ವಿಭಜನೆಯಾಗದೆ ಸಮಸ್ಯೆಯನ್ನು ಇತ್ಯರ್ಥಪಡಿಸಲು ವೈಸರಾಯ್ ವವೆಲ್ ಒಂದು ಪ್ರಸ್ತಾಪವನ್ನು ಗಾಂಧಿ, ನೆಹರೂ, ಪಟೇಲ್ ಮುಂದೆ ಇರಿಸಿದ್ದರು. ಪೂರ್ವ ಪಾಕಿಸ್ಥಾನ ಮತ್ತು ಪಶ್ಚಿಮ ಪಾಕಿಸ್ಥಾನದ ಬ್ರಿಟಿಷ್ ಪ್ರದೇಶಗಳನ್ನು ಮುಸ್ಲಿಂ ಲೀಗ್ ಕೈಗೂ, ಇತರೇ ಭಾಗಗಳ ಬ್ರಿಟಿಷ್ ಪ್ರಾಂತ್ಯಗಳನ್ನು ಕಾಂಗ್ರೆಸ್ ಕೈಗೂ ಕೊಟ್ಟು ಎಲ್ಲರಿಗಾಗಿ ಒಂದೇ ಸಂಸತ್ತನ್ನು ರೂಪಿಸುವುದು. ಆದರೆ ಮುಸ್ಲಿಂ ಲೀಗಿಗೆ ವಿಟೋ ಅಧಿಕಾರವನ್ನು ಕೊಡುವುದು ವವೆಲ್ ಯೋಜನೆಯಾಗಿತ್ತು. ಈ ಯೋಜನೆ ಜಾರಿಗೆ ಬಂದಿದ್ದರೆ ಸಂಸತ್ತಿನ ಸರ್ವಾನುಮತದ ನಿರ್ಣಯವನ್ನು ಮುಸ್ಲಿಮ್ ಲೀಗಿನ ಒಬ್ಬ ಸದಸ್ಯ ರದ್ದುಪಡಿಸಬಹುದಾಗಿತ್ತು. ಈ ಅವೈಚಾರಿಕ ಪ್ರಸ್ತಾಪವನ್ನು ಕೇಳಿ ಗಾಂಧಿ,"ನಮ್ಮ ವೈಸರಾಯರಿಗೆ ಒಬ್ಬ ಕಾನೂನು ಸಲಹೆದಾರನ ಅಗತ್ಯವಿದೆ. ಕಳಿಸಿಕೊಡಿ" ಎಂದು ಬ್ರಿಟಿಷ್ ಪ್ರಧಾನಿಗೆ ಟೆಲಿಗ್ರಾಂ ಕಳಿಸಿದ್ದರು. ನೆಹರೂ ಈ ವೈಸರಾಯ್ ಅನ್ನೆ ಬದಲಿಸಬೇಕಷ್ಟೆ ಎಂದು ಇಂಗ್ಲೆಂಡಿಗೆ ಹೋಗಿ ಮೌಂಟ್ ಬ್ಯಾಟನ್ ಅವರನ್ನು ಹಾಕಿಸಿಕೊಂಡು ಬಂದಿದ್ದರು. ಅದೇ ಸಮಯಕ್ಕೆ ಲಂಡನ್‌ಗೆ ಹೋದ ಮಹಮದಾಲಿ ಜಿನ್ನಾ  ಬ್ರಿಟಿಷ್ ಪ್ರಧಾನಿಯನ್ನು ಭೇಟಿಯಾಗುವ ಬದಲು ವಿರೋಧ ಪಕ್ಷದ ನಾಯಕ ಚರ್ಚಿಲ್ ಅವರನ್ನು ಭೇಟಿಯಾಗಿದ್ದರು. ಏಕೆಂದರೆ ಚರ್ಚಿಲ್ ಜಿನ್ನಾ ಪರ ಇದ್ದರು. ಚರ್ಚಿಲ್ ಪ್ರಧಾನಿಯಾಗಿದ್ದ ಕಾಲದಲ್ಲಿ ವೈಸರಾಯ್ ವವೆಲ್ ಜೊತೆ ಭಾರತ ಸ್ವಾತಂತ್ರ್ಯಕ್ಕೆ ಸಂಬಂಧಿಸಿ ಏಕಾಂತ ಗೌಪ್ಯ ಸಭೆ ನಡೆಸಿದ್ದರು. ಹೆಚ್ಚು ಕಮ್ಮಿ ಅದೇ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಟ್ರೂಮನ್ ಭಾರತ ಸ್ವಾತಂತ್ರ್ಯದ ಪ್ರಸ್ತಾಪ ಮಾಡಿದ್ದಾಗ ಚರ್ಚಿಲ್,"ನಮಗೆ ಅಭ್ಯಂತರವಿಲ್ಲ. ಆದರೆ ಹಿಂದೂ ಮುಸ್ಲಿಮರ ಸಮಸ್ಯೆಗಳಿದ್ದು ಅದಕ್ಕೆ ವಿಲೇವಾರಿ ಆಗಬೇಕು" ಎಂದು ಉತ್ತರಿಸಿದ್ದರು. ವಾಸ್ತವದಲ್ಲಿ ಬ್ರಿಟನ್ ಮತ್ತು ಅದರ ಮಿತ್ರ ರಾಷ್ಟ್ರಗಳಿಗೆ ಕಮ್ಯುನಿಸ್ಟ್ ರಷ್ಯಾ ಪೆಟ್ರೋಲಿಯಂ ರಾಷ್ಟ್ರಗಳ ವ್ಯಾಪ್ತಿಯಲ್ಲಿ ಹಿಡಿತ ಸಾಧಿಸದ ಹಾಗೆ ಒಂದು ತಡೆ ಶಕ್ತಿಯನ್ನು ಸೃಷ್ಟಿಸುವ ಅಗತ್ಯ ಇತ್ತು. ದೇಶ ವಿಭಜನೆ ಆಗದ ಹಾಗೆ ಚರ್ಚೆ ನಡೆಸಲು ಸಿಮ್ಲಾ ಸಭೆ ನಡೆಯುವ ಹಿಂದಿನ ದಿವಸ ಬ್ರಿಟಿಷ್ ಅಧಿಕಾರಿಗಳು ಜಿನ್ನಾ ಬಳಿ ಹೋಗಿ,"ಎಷ್ಟು ಮಾತ್ರಕ್ಕೂ ಗಾಂಧಿಯವರ ಮಾತಿಗೆ ಒಪ್ಪಬೇಡಿ. ಪಾಕಿಸ್ಥಾನವನ್ನು ಮಾಡಿಕೊಡುವ" ಎಂದು ಹೇಳಿದ್ದರ ಅಧ್ಯಯನ ವರದಿಗಳಿವೆ. ನಿಜವಾಗಿ ದೇಶ ವಿಭಜನೆ ಬ್ರಿಟಿಷರು ಮಾಡಿದ ಪರಿಸ್ಥಿತಿಯಾಗಿತ್ತು. ವಿಭಜನೆ ಯಾಕಾಯಿತು, ದೇಶೀಯ ರಾಜರು ವಿಲೀನಗೊಳ್ಳತಕ್ಕದ್ದು ಎಂದು ಶಾಸನ ಮಾಡಬಹುದಾಗಿದ್ದರೂ, ಅದನ್ನು ಮಾಡದೆ ದೇಶೀಯ ರಾಜರು ಸ್ವತಂತ್ರವಾಗಿ ಬೇಕಾದರೂ ಇರಬಹುದುದು ಎಂಬ ಶರತ್ತನ್ನು ಸ್ವಾತಂತ್ರ್ಯ ಶಾಸನದಲ್ಲಿ ಹಾಕಿದ್ದೇಕೆ ಎಂದೆಲ್ಲ ಅರ್ಥ ಮಾಡಿಕೊಳ್ಳದೆ ಔಪಚಾರಿಕ ಶಿಕ್ಷಣ ವ್ಯವಸ್ಥೆಯ ಒಳಗೆಯೇ ದೇಶ ವಿಭಜನೆಯನ್ನು ವರ್ತಮಾನದ ಮಹತ್ವವಾಗಿ ಕಾಣಿಸುವುದು ಸಮಂಜಸವಾಗಲಾರದು.

 -ಅರವಿಂದ ಚೊಕ್ಕಾಡಿ