ಗತದ ಗೆಳೆಯ ಗಣೇಶ್

ಗತದ ಗೆಳೆಯ ಗಣೇಶ್

ಗತದ ಗೆಳೆಯ ಗಣೇಶ್

-ಬಸವರಾಜು ಮೇಗಲಕೇರಿ

ಗಣೇಶ್ ನನಗೆ ಸಿಕ್ಕಿದ್ದು 'ಲಂಕೇಶ್ ಪತ್ರಿಕೆ'ಯಿಂದ. 'ಪತ್ರಿಕೆ' ಎನ್ನುವುದು ಒಂದು ಯೂನಿವರ್ಸಿಟಿ. ಲಂಕೇಶರು ಆ ಯೂನಿವರ್ಸಿಟಿಯ ವೈಸ್ ಛಾನ್ಸಲರ್ ಅಲ್ಲ, ನಿಜ ಅರ್ಥದ ಪಾಳೇಗಾರರು. ಹಾಗಂತ ಅಲ್ಲಿಂದ ತಯಾರಾಗಿ ಬಂದವರೆಲ್ಲ ಪೈಲ್ವಾನರಲ್ಲ. ಕೆಲವರಷ್ಟೇ ಪೈಲ್ವಾನರಂತೆ ಪಟ್ಟುಗಳನ್ನು ಕಲಿತು ದೇಸೀತನ ರೂಢಿಸಿಕೊಂಡರು. ಯೂನಿವರ್ಸಿಟಿಗೆ ಹೆಸರು ತಂದರು. ಅಲ್ಲಿ ಸಿಕ್ಕವರು ಜೀವಕ್ಕೆ, ಜೀವನಕ್ಕೆ ಹತ್ತಿರವಾದರು. ಜೀವಕ್ಕೆ ಹತ್ತಿರವಾದವರಲ್ಲಿ ಗತದಲ್ಲೇ ಬದುಕುವ ಗತಕಾಲದ ಗೆಳೆಯ ಗಣೇಶ್ ಕೂಡ ಒಬ್ಬರು.

1991 ರಲ್ಲಿ ಗಣೇಶರ ಕೈ ಬರಹದ 'ಅಲ್ಲಿ ಆ ಅಳು ಈಗಲೂ' ಕತೆ ಪೋಸ್ಟ್ ಮೂಲಕ 'ಪತ್ರಿಕೆ' ವಿಳಾಸಕ್ಕೆ ಬಂತು. ಕತೆ ಓದುವ ಉಮೇದು, ಸಮಯ ಎರಡೂ ಇರಲಿಲ್ಲ. ಆದರೆ ಆ ಕತೆಯ ಕೈ ಬರಹ, ಹೂ ಪೋಣಿಸಿದಂತಹ ಅಕ್ಷರ ನೋಡಿ ಓದಬೇಕೆನಿಸಿತು. ಕತೆ ಓದುತ್ತಾ ಕೂತೆ, ಕಳೆದೇ ಹೋದೆ. ಆ ಕತೆಯಲ್ಲಿ ನಾನಿದ್ದೆ, ಅದು ನನ್ನದೇ ಕತೆಯಾಗಿತ್ತು, ಕಣ್ಣಲ್ಲಿ ನೀರು ಜಿನುಗಿಸಿತ್ತು. ಎಲ್ಲರಿದ್ದೂ ಇಲ್ಲದ ಖಾಲಿತನ, ಅನಾಥಭಾವ. ಗಾಳಿ-ಬೆಳಕೇ ಬೆನ್ನಿಗಿರುವಾಗ ಮತ್ತಿನ್ಯಾರು ಎಂಬ ಧೈರ್ಯ. ಆ ಕತೆಯ ಪಾತ್ರಗಳು ಇವತ್ತಿಗೂ- ಮೂವತ್ಮೂರು ವರ್ಷಗಳಾದ ಮೇಲೂ- ಒಡಲಾಳದಲ್ಲಿ ಉಳಿದಿದೆ. ಆತ ಅವನದೇ ಕತೆಯನ್ನು ಬರೆದ, ನಾನು ನನ್ನದೇ ಕತೆ ಎಂದು ಓದಿದೆ. ಇಬ್ಬರ ಕತೆಯೂ ಒಂದೇ. ಆ ಕರುಳುಬಳ್ಳಿ ನಮ್ಮಿಬ್ಬರನ್ನು ಬೆಸೆಯಿತು. ಇವತ್ತಿಗೂ ಆ ಸಂಬಂಧ ಬೆಳೆಯುತ್ತಲೇ ಇದೆ.  

ಕತೆಗಳ ಕತೆಯೇ ಅದು, ಕಳೆದುಹೋಗುವಂಥದ್ದು. ಓದಿ ಮುಗಿಸಿದ ಮೇಲೆ, ಕತ್ತೆತ್ತಿದರೆ ಅದೇ ಮೇಜು-ಕುರ್ಚಿಗಳ ಆಫೀಸು. ಆ ಸಂದರ್ಭದಲ್ಲಿ 'ಪತ್ರಿಕೆ'ಗೆ ದಿನಕ್ಕೆ ನೂರಾರು ಪತ್ರಗಳು ಬರುತ್ತಿದ್ದವು. ಅವೆಲ್ಲವನ್ನು ಒಡೆದು ನೋಡಿ, ವಿಂಗಡಿಸಿ, ಅವುಗಳನ್ನು ಲಂಕೇಶ್ ಮೇಸ್ಟ್ರ ಟೇಬಲ್ ಮೇಲಿಡುವುದು, ಪ್ರತಿದಿನದ ಕೆಲಸಗಳಲ್ಲಿ ಒಂದು. ಮೇಸ್ಟ್ರು ಬಂದು ಕಾಫಿ ಕುಡಿದು, ಪತ್ರಗಳನ್ನು ನೋಡಿ, ಅವುಗಳಲ್ಲಿ ಕೆಲವನ್ನು ಪ್ರಕಟಣೆಗೆ ಆಯ್ದು ಕೊಡುವುದಿತ್ತು. ಬೆಲ್ ಮಾಡಿದರು. ಹೋದರೆ, 'ನೋಡೋ…' ಎಂದು ಗಣೇಶ್ ಕತೆ ಕೊಟ್ಟರು. 'ನಾನಾಗ್ಲೇ ಓದ್ದೆ, ಚೆನ್ನಾಗಿದೆ' ಅಂದೆ. ದಟ್ಟ ಹುಬ್ಬುಗಳು ಪ್ರಶ್ನಾರ್ಥಕ ಚಿಹ್ನೆಯಂತೆ ಕನ್ನಡಕದ ಮರೆಯಿಂದ ಮೇಲೆದ್ದವು. ಅರೆಕ್ಷಣದಲ್ಲಿ ವ್ಯಂಗ್ಯ ನಗೆ. ಕತೆ ಪ್ರಕಟವಾಯಿತು. ಓದುಗರಿಗೆ ಇಷ್ಟವಾಯಿತು. ಅದಕ್ಕಿಂತ ಲಂಕೇಶರಿಗೆ, ಡಿಸ್ಟರ್ಬ್ ಮಾಡಿತು. ಜೊತೆಗೆ ಕತೆಗಾರ ಯಾರು? ಏನು? ಎತ್ತ? ಎಂಬ ಕುತೂಹಲ ಕೆರಳಿಸಿತು. ವಿಳಾಸ ನೋಡಿ, ಮೈಸೂರಿನ ಪ್ರೊ.ಕೆ. ರಾಮದಾಸ್ ಮತ್ತು ಸ್ವಾಮಿ ಆನಂದ್ ಅವರಿಗೆ ಫೋನಾಯಿಸಿದ್ದೂ ಆಯಿತು.

ಕೆಲವೇ ದಿನಗಳ ನಂತರ… ಸ್ವಾಮಿ ಆನಂದರೊಂದಿಗೆ ಮೊಗಳ್ಳಿ ಗಣೇಶ್ ಮೇಸ್ಟ್ರ ಮುಂದೆ ಕೂತಿದ್ದಾರೆ. ಕುರ್ಚಿಯಲ್ಲಿ ಕೂತಿದ್ದ ಗಣೇಶ್, ಕೂತಲ್ಲೇ ಕರಗಿಹೋಗುವಷ್ಟು ಸಂಕೋಚದಿಂದ; ಗಣೇಶನ ಮೂರ್ತಿಯನ್ನು ಮಾಡಲು ಮಿದ್ದಿಟ್ಟ ಮಣ್ಣಿನ ಮುದ್ದೆಯಂತೆ ಕಾಣುತ್ತಿದ್ದರು. ಅದೇನು ಮಾತನಾಡಿದರೋ, ಇಬ್ಬರೂ ಕಾಫಿ ಕುಡಿದು ಹೊರಬಂದರು. ನಂತರ ಲಂಕೇಶರು ನನ್ನನ್ನು ಕರೆದು, 'ಪತ್ರಿಕೆ ಪ್ರಕಾಶನದಿಂದ ಗಣೇಶನ ಕಥಾಸಂಕಲನ ಪ್ರಕಟಿಸೋಣ' ಎಂದರು. ಆ ಸಂಕಲನಕ್ಕೆ 'ಬುಗುರಿ' ಎಂದು ಹೆಸರಿಟ್ಟು, ಮೇಸ್ಟ್ರೆ ಮುಂದಾಗಿ ಕವರ್ ಪೇಜಿಗೆ ಒಂದೊಳ್ಳೆ ಸೆಕ್ಸಿ ಫೋಟೋ- ಸುಂದರಿಯ ಬಾಡಿಯೇ ಬುಗುರಿಯಂತಿದ್ದ ಚಿತ್ರವನ್ನು ಹುಡುಕಿಕೊಟ್ಟಿದ್ದರು. 1992 ರಲ್ಲಿ ಪುಸ್ತಕ ಪ್ರಕಟವಾಯಿತು. ಅದು ಗಣೇಶರ ಮೊದಲ ಕಥಾ ಸಂಕಲನ. ಕೈ ತುಂಬಾ ಸಂಭಾವನೆ, ಜೊತೆಗೊಂದಷ್ಟು ಪುಸ್ತಕಗಳು. ಅಷ್ಟೇ ಅಲ್ಲ, ಲಂಕೇಶರ ಆಪ್ತ ಬಳಗದಲ್ಲಿ ಗಣೇಶರೂ ಒಬ್ಬರಾಗಿದ್ದರು.

ಲಂಕೇಶರು ತಾಯಿ ಕೋಳಿಯಂತೆ. ತಮ್ಮ ಸನಿಹಕ್ಕೆ ಬಂದವರನ್ನು ಮರಿಗಳಂತೆ ಅವುಚಿಕೊಳ್ಳುತ್ತಿದ್ದರು, ಕಾವು ಕೊಟ್ಟು ಬೆಳೆಸುತ್ತಿದ್ದರು. ಬೇಡವೆನಿಸಿದಾಗ ಅಷ್ಟೇ ನಿರ್ದಾಕ್ಷಿಣ್ಯವಾಗಿ ಕುಕ್ಕಿ ದೂರ ದೂಡುತ್ತಿದ್ದರು. ಅವರಿಗೆ ಎಲ್ಲರಿಂದಲೂ ಬರೆಸುವ ಆಸೆ ಇತ್ತು. ಅದನ್ನವರು ಸರ್ಕ್ಯಾಸ್ಟಿಕ್ಕಾಗಿ 'ಎಲ್ಲಾನು ನಾನೇ ಬರದ್ರೆ, ಯಾರೋತ್ತರಲೇ, ನಾನೂ ಖಾಲಿ, ಅವರ್ಗೂ ಬೋರು' ಎನ್ನುತ್ತಿದ್ದರು. ಅವರ ಮುಂದೆ ಕೂತ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಬರಹಗಾರರಾಗಿದ್ದಾರೆ. ಆದರೆ ಗಣೇಶ್, ಲಂಕೇಶರ ಸಹವಾಸಕ್ಕೆ ಬೀಳುವ ಮುಂಚೆಯೇ ಬಹುಮಾನಿತ ಕತೆಗಾರನೆಂದು ಖ್ಯಾತಿ ಗಳಿಸಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಸ್ಥಾನವನ್ನು ಗುರುತಿಸಿಕೊಂಡಿದ್ದರು. 'ಅಲ್ಲಿ ಆ ಅಳು ಈಗಲೂ' ಕತೆಯ ಮೂಲಕ 'ಪತ್ರಿಕೆ'ಯ ಬಳಗಕ್ಕೆ ಬಂದರು. ಲಂಕೇಶರ ಆಪ್ತಕೂಟದಲ್ಲಿ ಒಬ್ಬರಾದರು. ಗಣೇಶರ ಕತೆ ಓದಿ ಥ್ರಿಲ್ಲಾದ ಲಂಕೇಶರು, ಅವರನ್ನು ಕರೆದು, ಸರಿಸಮಾನವಾಗಿ ಕೂರಿಸಿಕೊಂಡು ಡ್ರಿಂಕ್ ಕೊಟ್ಟು ಗೌರವಿಸಿದರು. ಓದಲೇಬೇಕಾದ ಕೆಲವು ಅಪರೂಪದ ಪುಸ್ತಕಗಳನ್ನು ಕೊಟ್ಟು, ಬರೆಯಲು ಪ್ರೇರೇಪಿಸಿದರು. ಶೋಷಿತ ಸಮುದಾಯದಿಂದ, ಬಡತನದಿಂದ, ತಳವರ್ಗದಿಂದ ಬಂದ ಹುಡುಗ/ಹುಡುಗಿಯರಿಗೆ ಅದು ಎಂತಹ ಧೈರ್ಯ ಕೊಡುತ್ತದೆ, ಸ್ಪೂರ್ತಿ ನೀಡುತ್ತದೆ ಎಂಬುದನ್ನು ಅನುಭವಿಸಿದವರೇ ಬಲ್ಲರು.

ಲಂಕೇಶರ ಪ್ರೋತ್ಸಾಹ ಮತ್ತು 'ಪತ್ರಿಕೆ'ಯ ಪ್ರಭಾವದಿಂದ ಪುಟಿದೆದ್ದ ಗಣೇಶ್, 'ಪತ್ರಿಕೆ'ಗೆ ನಿರಂತರವಾಗಿ ಬರೆಯತೊಡಗಿದರು. ಲಂಕೇಶರಿಂದಲೇ ಕೆಲ ಪುಸ್ತಕಗಳನ್ನು ಪಡೆದು ವಿಮರ್ಶೆ ಮಾಡಲು ಆರಂಭಿಸಿದರು. ಆ ಸಂದರ್ಭದಲ್ಲಿ ಕನ್ನಡದ ಜನಪ್ರಿಯ ಲೇಖಕರೆಂದು ಹೆಸರು ಗಳಿಸಿದ್ದವರ ಕೃತಿಗಳನ್ನೆಲ್ಲ 'ಬೂಸಾ' ಎಂದು ಬಿಡಿಸಿಟ್ಟರು. ಚಂದ್ರಶೇಖರ ಕಂಬಾರರ ಕೃತಿಯೊಂದನ್ನು ಕಟುವಾಗಿ ವಿಮರ್ಶಿಸಿ, ಕೆಂಗಣ್ಣಿಗೆ ಗುರಿಯಾದರು. ಓದುಗರ ಕಣ್ಣಲ್ಲಿ ನಿಷ್ಠುರ ವಿಮರ್ಶಕ ಎನಿಸಿಕೊಂಡರು. ಆದರೆ ಕನ್ನಡ ಸಾಹಿತ್ಯ ಲೋಕದ ದಿಗ್ಗಜರು ಕಸಿವಿಸಿಗೊಳಗಾದರು. ಗುಂಪುಗಾರಿಕೆ, ಜಾತಿಪ್ರೀತಿ, ಬಾರ್ಟರ್ ಸಿಸ್ಟಮ್ನಲ್ಲಿ ಬೆಳೆಯುತ್ತಿದ್ದವರು ಜಾಗೃತರಾದರು. ಮುಂದೆ ಗಣೇಶರ ಕೃತಿಗಳ ಕುರಿತು ಚರ್ಚಿಸದಂತೆ, ಬರೆಯದಂತೆ, ಮಾತನಾಡದಂತೆ 'ಜಾಗೃತೆ'ಯಿಂದ ನೋಡಿಕೊಂಡರು. ಸಮಾಜದಲ್ಲಷ್ಟೇ ಅಲ್ಲ, ಸಾಹಿತ್ಯದಲ್ಲೂ ಅಸ್ಪೃಶ್ಯತೆ ಆಚರಿಸಿದರು. 

1993 ರಲ್ಲಿ, ಕತೆಗಾರ ಗಣೇಶ್ ಬಗ್ಗೆ ಲಂಕೇಶರು ಕತೆಗಾರ್ತಿ ರೇಖಾರಾಣಿಯವರಿಗೆ ಹೇಳಿದ್ದರೋ ಅಥವಾ ಅವರ ಕತೆಗಳನ್ನು ಓದಿ ರೇಖಾರಾಣಿಯವರಿಗೇ ಕುತೂಹಲ ಮೂಡಿತ್ತೋ ಗೊತ್ತಿಲ್ಲ. ಒಂದು ದಿನ ಅವರು, 'ಬಸುಮಾ, ಮೊಗಳ್ಳಿ ಗಣೇಶ್ ಮೀಟ್ ಮಾಡಿ ಬರೋಣ ಬಾ' ಎಂದರು. ಮೈಸೂರಿನ ಮಾನಸ ಗಂಗೋತ್ರಿಗೆ ಹೋಗಿ, ಗಣೇಶರನ್ನು ಭೇಟಿ ಮಾಡಿ, ಅಲ್ಲಿನ ಮರದ ಕೆಳಗೆ ಕೂತು ಇಬ್ಬರು ಕತೆಗಾರರು ತಂತಮ್ಮ ಲೋಕಗಳನ್ನು ಹರವಿಕೊಂಡರು. ರೇಖಾರಾಣಿಯವರದು ಮೈಸೂರು. ನಗರಸಂವೇದನೆ, ಶುಷ್ಕ ಸಂಬಂಧಗಳು, ಹೆಣ್ಣು-ಗಂಡಿನ ಒಳವೇದನೆ, ತಲ್ಲಣ, ತಾಕಲಾಟಗಳು, ಆ ಸೂಕ್ಷ್ಮ ಲೋಕವೇ ಬೇರೆ. ಗಣೇಶರದು ಸಂತೆಮೊಗೇನಹಳ್ಳಿ. ಅವರ ಕೇರಿ, ಕುರಿ, ಕೋಳಿ, ಹಂದಿ, ನಾಯಿ, ಹೇಲು ಗುಂಡಿ, ಹರಕಲು ಚೆಡ್ಡಿಗಳ ಚಿತ್ತಾರ ಮತ್ತು ಹಸಿವು-ಅವಮಾನಗಳೇ ಬೇರೆ. ಇಬ್ಬರಿಗೂ, ಇಬ್ಬರ ಜಗತ್ತು ಬೆರಗುಟ್ಟಿಸುವಂಥದ್ದು. ಅದನ್ನು ಬರಹದಲ್ಲಿ ಬಿಡಿಸಿ ಓದುಗರನ್ನು ಬೆಚ್ಚಿ ಬೀಳಿಸಿದವರು. ಮಾತು ಮುಗಿದ ಮೇಲೆ, ಆ ಭೇಟಿಯನ್ನು ಅಲ್ಲಿಗೇ ಬಿಡುವುದು ಬೇಡ ಎಂದು ಶ್ರೀರಂಗಪಟ್ಟಣದ ಬಳಿಯ ಬ್ಲಫ್(ಗಗನಚುಕ್ಕಿ-ಭರಚುಕ್ಕಿ)ಗೆ ಹೋದೆವು. ಅಲ್ಲಿ ಮಾತಿಲ್ಲ ಕತೆಯಿಲ್ಲ. ನೀರು ನೋಡುತ್ತಾ ಸುಮ್ಮನೆ ನಿಂತರು. ಅದು ಅವರಿಬ್ಬರಲ್ಲಿ ಅದೆಂತಹ ಕತೆಗೆ ಕಾರಣವಾಯಿತೋ, ಗೊತ್ತಿಲ್ಲ.

ಈತನ್ಮಧ್ಯೆ, ಗಣೇಶ್ ಬೆಂಗಳೂರಿಗೆ ಬಂದುಹೋಗುವುದು ಹೆಚ್ಚಾಯಿತು. ಬಂದಾಗಲೆಲ್ಲ ಮೇಸ್ಟ್ರೊಂದಿಗೆ ಮಾತು, ಸಂಜೆಯ ಕೂತಾಡುವ ಕ್ಷಣಗಳು ಹೆಚ್ಚಾದವು. ಹೊರಗಿನಿಂದ ಬಂದವರಿಗೆ ಬಂದ ದಿನ ಕರೆದು ಡ್ರಿಂಕ್ಸ್ ಕೊಡುವುದು; ಹೋಗುವಾಗ ಖರ್ಚಿಗೊಂದಿಷ್ಟು ದುಡ್ಡು, ಪುಸ್ತಕಗಳನ್ನು ಕೊಟ್ಟು ಕಳುಹಿಸುವುದು ಲಂಕೇಶರ ರೂಢಿಗತ ಬದುಕಾಗಿತ್ತು. ಹಾಗಂತ ಮೇಸ್ಟ್ರು ಪ್ರತಿದಿನ ಕೊಡುತ್ತಿರಲಿಲ್ಲ. ಪ್ರತಿದಿನ ಆಫೀಸಿನಲ್ಲಿ ಕಾಣಿಸಿಕೊಂಡರೂ ಸಹಿಸುತ್ತಿರಲಿಲ್ಲ. ಮುಖದ ಮೇಲೆ ಹೊಡೆದಂತೆ, ಒರಟಾಗಿಯೇ ಹೇಳಿಬಿಡುತ್ತಿದ್ದರು. ಅದು ಗೊತ್ತಿದ್ದ ಗಣೇಶ್ ನನ್ನ ರೂಮಿಗೆ ಬಂದು ಇರುತ್ತಿದ್ದರು. ಅದೊಂದು ಪುಟ್ಟ ರೂಮು. ಇಬ್ಬರು ಅಥವಾ ಮೂವರು ಮಲಗಲಷ್ಟೇ ಜಾಗವಿರುವ, ಒಂದು ಬೆಡ್ಡು, ಬಕೇಟಿದ್ದ, ಕಾಮನ್ ಟಾಯ್ಲೆಟ್ ಬಾತ್ ರೂಮಿದ್ದ ರೂಮು. ಅದರಲ್ಲಿಯೇ ಸಂಜೆಯ ಸಮಾರಾಧನೆಗಳು ನಡೆಯುತ್ತಿದ್ದವು.

ಒಂದು ದಿನ ಗಣೇಶ್, 'ಬಸು, ನನ್ನ ಗೆಳತಿಯೊಬ್ಬಳು ಸಿಕ್ತೀನಂತ ಹೇಳಿದಾಳೆ, ರೂಮಿನ ಕೀ ಕೊಡಬಹುದಾ' ಎಂದರು. ಕೊಟ್ಟೆ, ಆಫೀಸಿನ ಜಂಜಾಟದಲ್ಲಿ ಮರೆತೆ. ಸಂಜೆ ಎಂದಿನಂತೆ ರೂಮಿನಲ್ಲಿದ್ದರು. ನಾನೇನು ಕೇಳದಿದ್ದರೂ, ಅವರೇ ಮುಂದಾಗಿ, 'ಬಸು, ಆ ಹುಡುಗಿ ಬಂದಿದ್ಲು, ಆಕೆಯ ಮನಸ್ಸಿನಲ್ಲೇನಿತ್ತು ಅಂತ ಹೇಳಲಿಲ್ಲ, ನಾನೂ ಹೆಚ್ಚು ಮಾತನಾಡಲಿಲ್ಲ, ಅವಳಿಗೆ ನನ್ನ ನೋಡಿ, ಅವಳ ಕಲ್ಪನೆಯ ಕತೆಗಾರ ಕಾಣದೆ, ಬೇಜಾರು ಮಾಡ್ಕಂಡ್ಳೋ ಏನೋ, ಆಕೆಗೆ ಒಂದು ಕಾಫಿನೂ ಕೊಡಿಸದೆ ಕಳಿಸಿಬಿಟ್ಟೆ' ಎಂದು ಕೊರಗಿದರು. ಆ ಕೊರಗಿನ ಹಿಂದೆ, ಅವರ ಊರು-ಕೇರಿ, ಸ್ಥಿತಿ-ಗತಿ, ಹಿಂಜರಿಕೆ ಎಲ್ಲವೂ ಇದ್ದವು. ನಾಲ್ಕೈದು ದಿನವಿದ್ದು ಬೆಂಗಳೂರು ಬೇಜಾರಾದಾಗ ಊರಿನತ್ತ ಹೆಜ್ಜೆ ಹಾಕುತ್ತಿದ್ದರು. ಹಾಗೆ ಹೋಗುವಾಗ ಅವರಿಗಿಷ್ಟವಾದ ನನ್ನ ಅಂಗಿಯನ್ನು ಅವರದೇ ಎಂಬಂತೆ ಧರಿಸಿ ಹೋಗುತ್ತಿದ್ದರು, ಹೇಳುತ್ತಿರಲಿಲ್ಲ. ಗಣೇಶ ಬಿಟ್ಟುಹೋದ ಅಂಗಿ ಧರಿಸಿದರೆ, ಕತೆಗಾರನಾಗಬಹುದೆಂಬ ದುರಾಸೆಯಿಂದ, ನಾನೂ ಕೇಳುತ್ತಿರಲಿಲ್ಲ.

ಮೊಗಳ್ಳಿ ಗಣೇಶ್ ಜೊತೆ ಮಾತಿಗೆ ಕೂತರೆ ಬಾಲ್ಯವೇ ಬರುತ್ತಿತ್ತು. ಅವರ ಅಜ್ಜ, ಊರು, ಗೌಡ್ರು ಅವರದೇ ಕತೆ. ಅವರಿಗೆ ಬಾಲ್ಯವೇ ಬಹು ದೊಡ್ಡ ದ್ರವ್ಯ. ಅಲ್ಲಿಂದ ಅವರಿಗೆ ಬಗೆದಷ್ಟು ಸರಕು ಸಿಕ್ಕಿತ್ತು, ಸಿಗುತ್ತಲೇ ಇತ್ತು. ಬರೆಯುವುದೆಂದರೆ ಬಲು ಪ್ರೀತಿ. ಬರವಣಿಗೆಯಲ್ಲಿಯೇ ಕಳೆದುಹೋಗುವ, ಬರೆಯುವಾಗ ವ್ಯಾಸ-ವಾಲ್ಮೀಕಿಯಂತೆ ಕಾಣುವ, ಗತದಲ್ಲಿಯೇ ಬದುಕುವ ಗಣೇಶ್- ಯಾರೊಂದಿಗಾದರೂ ಸಲೀಸಾಗಿ ಬೆರೆಯುವ ಪೈಕಿಯಲ್ಲ. 'ಪತ್ರಿಕೆ'ಯ ಸಂಪರ್ಕಕ್ಕೆ ಬಂದ ಮೂರ್ನಾಲ್ಕು ವರ್ಷಗಳಲ್ಲಿ, ತನ್ನದೇ ಜಗತ್ತಿನಲ್ಲಿ ಜೀವಿಸುತ್ತ ದಿನದಿಂದ ದಿನಕ್ಕೆ ಕುಗ್ಗತೊಡಗಿದರು. ತನ್ನದೇ ಬಲೆಯಲ್ಲಿ ನೊಂದು ನೋಯುವ ಜೇಡನಂತೆ, ಅವರನ್ನು ಅವರೇ ಕಟ್ಟಿಹಾಕಿಕೊಳ್ಳತೊಡಗಿದರು. ಅದಕ್ಕೆ ತಕ್ಕಂತೆ ಎಂ.ಎ. ಮುಗಿಸಿದರೂ, ಕೆಲಸ ಸಿಗದೆ, ಅದನ್ನು ಯಾರಿಗೂ ಹೇಳಿಕೊಳ್ಳಲಾಗದೆ, ಅದರಿಂದ ಬಿಡುಗಡೆ ಪಡೆಯಲು ಮದ್ಯ ವ್ಯಸನಿಯಾದರು. ವ್ಯಸನಕ್ಕೆ ಹಣ ಹೊಂದಿಸಲಾಗದೆ, ಅವರಿವರ ಮುಂದೆ ಕೈ ಚಾಚಿದರು. ಅದು ವ್ಯಕ್ತಿಯನ್ನು, ವ್ಯಕ್ತಿತ್ವವನ್ನು ಕೆಡಿಸಿತು. ಹಗುರವಾಗಿ ಮಾತನಾಡಿಕೊಳ್ಳುವವರಿಗೆ ದಾರಿ ಮಾಡಿಕೊಟ್ಟಿತು. ಒಂದು ದಿನ ಇದ್ದಕ್ಕಿದ್ದಂತೆ ಬಸವನಗುಡಿ ಪೊಲೀಸ್ ಠಾಣೆಯಿಂದ ನನಗೆ ಕರೆ ಬಂತು. ಹೋದರೆ, 'ರಾತ್ರಿ ಯಾವುದೋ ಅಂಗಡಿ ಮುಂದೆ ಮಲಗಿದ್ದರು, ಕೇಳಿದಾಗ ಸರಿಯಾಗಿ ಉತ್ತರಿಸಲಿಲ್ಲ, ಕೊನೆಗೆ ಹೇಳಿದ್ದು ನಿಮ್ಮ ಹೆಸರು' ಎಂದರು. ಅವರ ಸ್ಥಿತಿ ನೋಡಿ ಪಿಚ್ಚೆನಿಸಿತು. ಗಟ್ಟಿ ಕತೆಗಾರನ ಕತೆ ಮುಗಿಯಿತು ಅನ್ನಿಸಿತು.

ಅಷ್ಟೊತ್ತಿಗೆ ಸರಿಯಾಗಿ, ಯಾರ ಮೇಲೆ ಕಟುವಾಗಿ ವಿಮರ್ಶೆ ಬರೆದು ಕೆಂಗಣ್ಣಿಗೆ ಗುರಿಯಾಗಿದ್ದರೋ, ಅವರೇ- ಚಂದ್ರಶೇಖರ ಕಂಬಾರರೇ- ಕರೆದು ಕೆಲಸ ಕೊಟ್ಟರು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ವಿಭಾಗದಲ್ಲಿ ಅಧ್ಯಾಪಕ ಹುದ್ದೆ ಅಲಂಕರಿಸಿದರು. 

ಇದಾಗಿ ಸುಮಾರು ವರ್ಷಗಳವರೆಗೆ ಫೋನ್ನಲ್ಲಿ ಸಂಭಾಷಣೆಯಷ್ಟೇ. ನಾನು ಕೂಡ 'ಲಂಕೇಶ್ ಪತ್ರಿಕೆ' ಬಿಟ್ಟು 'ಅಗ್ನಿ' ಸೇರಿದ್ದೆ. ಆ ಸಂದರ್ಭದಲ್ಲಿ ಮೊಗಳ್ಳಿ ಗಣೇಶ್ ಕನ್ನಡ ಸಾಹಿತಿಗಳ ಕುರಿತು ತಕರಾರು ತೆಗೆದರು- ಆ ದಾರಿ ನಿಷ್ಠುರವಾದುದು, ದಂಡಿಸುವಂಥದು, ಸ್ವಯಂದಂಡನೆಗೂ ಈಡು ಮಾಡುವಂಥದ್ದು. ಬಹುಸಂಖ್ಯಾತರ ವಿರೋಧ ಕಟ್ಟಿಕೊಂಡು ಒಂಟಿಯಾಗುವಂಥದು. ಅಂದರೆ ಸಾಹಿತಿಗಳನ್ನು, ಅವರ ಸಾಹಿತ್ಯವನ್ನು ನಿಕಷಕ್ಕೆ ಒಡ್ಡುವಂಥದು. ಅದನ್ನು 'ಅಗ್ನಿ'ಯಲ್ಲಿ ಅಂಕಣವಾಗಿ ಪ್ರಕಟಿಸಲು ನನ್ನನ್ನು ಸಂಪರ್ಕಿಸಿದರು. 'ಅಗ್ನಿ' ಪತ್ರಿಕೆಯ ಸಂಪಾದಕರಾದ ಶ್ರೀಧರ್ ಅವರಿಗೆ, ನಮ್ಮ ಅಗ್ನಿಗೆ ಕನ್ನಡ ಸಾಹಿತಿಗಳು ಬರೆಯುವುದಿಲ್ಲ ಎಂಬ ಕೊರಗಿತ್ತು. ಅಂತಹ ಸಂದರ್ಭದಲ್ಲಿ ನಾನು ಮೊಗಳ್ಳಿ ಗಣೇಶ್ ಒಂದು ಕಾಲಂ ಶುರು ಮಾಡುತ್ತಾರಂತೆ ಎಂದು ಕೇಳಿದೆ. 'ಏಯ್… ಮಾಡ್ಸಿ ಮಾಡ್ಸಿ' ಎಂದು ಅತಿ ಉತ್ಸಾಹ ತೋರಿದರು. 'ಸರ್, ಅದು ಕನ್ನಡ ಸಾಹಿತಿಗಳ ಬಗೆಗಿನ ತಕರಾರು' ಎಂದೆ. 'ಏಯ್, ಇರ್ಲಿ ಬಸುರಾಜ್, ಅಂಥದೆಲ್ಲ ಬರಬೇಕು' ಎಂದರು. ಅದು ಕನ್ನಡ ಸಾಹಿತ್ಯ ಲೋಕದಲ್ಲಿ ನಿಜಕ್ಕೂ ಆರೋಗ್ಯಕರ ಚರ್ಚೆಗೆ ಆಸ್ಪದವೀಯಿತು ಎಂದು ಹೇಳಲು ಧೈರ್ಯವಾಗುತ್ತಿಲ್ಲ. ಬದಲಿಗೆ 'ಅಗ್ನಿ' ಪತ್ರಿಕೆಗೆ ಸಾಹಿತ್ಯದ ಸ್ಪರ್ಶ ನೀಡಿತು. ಸಾಹಿತಿಗಳೂ ಗಮನಿಸುವಂತೆ, ಪ್ರತಿಕ್ರಿಯಿಸುವಂತೆ, ಬರೆಯುವಂತೆ ಮಾಡಿತು.

ಆ ನಂತರ, ಗಣೇಶ್ 'ತಕರಾರು' ಅಂಕಣ ಬರಹವನ್ನು ಪುಸ್ತಕರೂಪದಲ್ಲಿ ತರಬೇಕೆಂದು ಆಸೆಪಟ್ಟರು. ಅದಕ್ಕೆ ತೇಜಸ್ವಿಯವರು ಮುನ್ನುಡಿ ಬರೆಯಬೇಕೆಂದು ಕೇಳಿಕೊಂಡರು. ಆದರೆ ಅದೇಕೋ ಕೈಗೂಡಲಿಲ್ಲ. ಬೇಸರಕ್ಕೆ ಬಿದ್ದು, ಪುಸ್ತಕ ತರುವ ಯೋಚನೆಯನ್ನು ಬಿಟ್ಟರು. ಅದನ್ನು ಪಲ್ಲವ ಪ್ರಕಾಶನದ ವೆಂಕಟೇಶ್ ಪ್ರಕಟಿಸಲು ಆಸ್ಥೆ ವಹಿಸಿದಾಗ, ಅಗ್ನಿ ಶ್ರೀಧರ್ ಬೆನ್ನುಡಿ ಬರೆದರು, ಅದು 2008ರಲ್ಲಿ ಹೊರಬಂತು.

ಹೀಗೆ… ಸಾಹಿತಿಗಳಿಂದ ವಿರೋಧ ವ್ಯಕ್ತವಾದರೂ ಗಣೇಶ್ ಬರೆಯುವುದನ್ನೇನೂ ನಿಲ್ಲಿಸಲಿಲ್ಲ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಕರೆಯುವುದನ್ನೂ ಮರೆಯಲಿಲ್ಲ. ಗಣೇಶ್ ಗೆ ಯು.ಆರ್. ಅನಂತಮೂರ್ತಿ ಮತ್ತು ಕಿ.ರಂ. ನಾಗರಾಜರನ್ನು ಕಂಡರೆ ಬಹಳ ಪ್ರೀತಿ. ಅವರೂ ಕೂಡ ಗಣೇಶ್ ಕರೆದಲ್ಲಿಗೆ ಬಂದು, ಅವರ ಬರಹದ ಬಗ್ಗೆ ಬೆರಗಿನಿಂದ ಮಾತನಾಡುತ್ತಿದ್ದರು. ಅವರ ಮಾತಿಗೆ ಮೊಗಳ್ಳಿ ಮಾರುಹೋಗುತ್ತಿರಲಿಲ್ಲ. ಅಂಥದ್ದು ಬೇಕು ಎಂದು ಬಯಸುತ್ತಿದ್ದರು. ಆದರೆ, ಅವರ ಸಮಕಾಲೀನ ಬರಹಗಾರರು ಅವರನ್ನು ಸಮನಾಗಿ ನೋಡಲಿಲ್ಲವೆಂಬ ಕೊರಗು; ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಗಲಿಲ್ಲವೆಂಬ ಸಿಟ್ಟು ಇತ್ತು.

ಹಿಂದೊಮ್ಮೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು 'ಅಗ್ನಿ' ಪತ್ರಿಕೆಗೆ 'ಹೊಸ ದಿಗಂತದತ್ತ' ಎಂಬ ಲೇಖನ ಬರೆದರು. ಅದರಲ್ಲಿ ಅವರು, 'ದಿಢೀರ್ ಜನಪ್ರಿಯತೆ ನನಗೆಂದೂ ದೊರೆತೇ ಇಲ್ಲ. ನಾನು ನಿರೀಕ್ಷಿಸುವುದೂ ಇಲ್ಲ. ಓದುಗರು ನನ್ನಂತೆಯೇ ಅನ್ನ ತಿನ್ನುವ ಮನುಷ್ಯರು. ನನಗೆ ಅನ್ನಿಸಿದ್ದು ಇವತ್ತಲ್ಲದಿದ್ದರೆ ನಾಳೆ ನಿಧಾನವಾಗಿಯಾದರೂ, ಅವರಿಗೂ ಅನ್ನಿಸುತ್ತದೆ ಎನ್ನುವ ನಂಬಿಕೆಯಿಂದಲೇ ನಾನು ಬರೆಯುವುದು. ತತ್ ಕ್ಷಣದ ಜನಪ್ರಿಯತೆಗಾಗಿ ಗುಂಪುಗಾರಿಕೆ ಮಾಡುವುದು, ಶಿಷ್ಯರ ತಂಡ ಬೆಳೆಸುವುದು, ಕರಡು ಪ್ರತಿಯನ್ನೇ ಒಂದಷ್ಟು ಜನಕ್ಕೆ ಕೊಟ್ಟು ಪತ್ರಿಕೆಗಳಲ್ಲಿ ಪೂರ್ವಭಾವಿ ಅವಲೋಕನ ಬರೆಸುವುದು, ಅಭಿಮಾನಿಗಳ ಬಳಗ ಬೆಳೆಸುವುದು ಇತ್ಯಾದಿಗಳ ತಂಟೆಗೆ ಹೋಗದೆ, ಜನ ಅಕಸ್ಮಾತ್ ಸಂಪೂರ್ಣ ಉಪೇಕ್ಷಿಸಿದರೂ ಪರವಾಗಿಲ್ಲ ಎನ್ನುವ ಮನಸ್ಸಿದ್ಧತೆಯಲ್ಲೇ ನಾನು ಬರೆಯುತ್ತೇನೆ' ಎಂದು ಬರೆದಿದ್ದರು.

ಗಣೇಶ್ ಹೀಗೆ ಬಹಿರಂಗವಾಗಿ ಹೇಳದಿದ್ದರೂ, ಬರೆದು ದಾಖಲಿಸದಿದ್ದರೂ, ತೇಜಸ್ವಿಯವರ ನಿಲುವು ಸರಿ ಎಂದು ಒಪ್ಪಿದ್ದರು. ಅದರಂತೆಯೇ ಬರೆದರು, ಬದುಕಿದರು. ಅವರಿಗೆ ಪಾತಾಳಕ್ಕಿಳಿದು, ಪಾತಾಳವನ್ನೇ ತನ್ನದಾಗಿಸಿಕೊಂಡು ಬರೆಯುವ ಆಸೆಯಿತ್ತು. ಕಸುವೂ ಇತ್ತು. ಆದರೂ, ಅವರಾಗಿಯೇ ಅವಸರಿಸಿ, ಹೋಗಿಬಿಟ್ಟರು. ಅವರ, 'ನೆನಪು ಎಷ್ಟು ಸುಖ, ಕಾಲ ಎಷ್ಟು ದುಃಖ'ವನ್ನು ಈಗ ನಮ್ಮ ತಿಳಿವಳಿಕೆಗೆ ತೋಚಿದಂತೆ ವಿವರಿಸಿಕೊಳ್ಳಬೇಕಾಗಿದೆ.