ದಸರಾ ಉತ್ಸವ- ಭಿನ್ನ ಆಚರಣೆಗಳು, ನೋಟಗಳು
ದಸರಾ ಉತ್ಸವ- ಭಿನ್ನ ಆಚರಣೆಗಳು, ನೋಟಗಳು
ದಸರಾ ಉತ್ಸವಕ್ಕೂ, ರಾಜಮನೆತನಗಳಿಗೆ, ರಾಜ, ಮಹಾರಾಜರಿಗೆ ಸಂಬಂಧವಿರುವುದು ತಿಳಿದ ವಿಷಯವೇ ಆಗಿದೆ. ವಿಜಯನಗರ ಸಾಮ್ರಾಜ್ಯಕ್ಕಿಂತಲೂ ಹಿಂದೆ ಹೊಯ್ಸಳರು ರಾಜ್ಯವಾಳುತ್ತಿದ್ದಾಗ ದಸರಾವನ್ನು ಆಚರಿಸಲಾಗುತ್ತಿತ್ತು ಎಂಬುದು ಪ್ರಾಕ್ತನ ಶಾಸ್ತ್ರ ಮತ್ತು ಪುರಾತನ ಇತಿಹಾಸದ ಪ್ರೊ. ಶೆಲ್ವಪಿಳ್ಳೈ ಐಯ್ಯಂಗಾರರ ಅಭಿಪ್ರಾಯ. ನಂತರ ಅದು ವಿಜಯನಗರದ ಸಾಮ್ರಾಜ್ಯದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಆ ಕಾಲದಲ್ಲಿ ಈ ಹಬ್ಬವನ್ನು ʼ ಮಹಾನವಮಿ ʼ ಎಂದು ಕರೆಯಲಾಗುತ್ತಿತ್ತು. ಹಂಪಿಯ ಹಜಾರ ರಾಮ ದೇಗುಲದ ಹೊರಗೋಡೆಯಲ್ಲಿ ದಸರಾದ ದೃಶ್ಯಗಳನ್ನು ಬಿಂಬಿಸಲಾಗಿದೆ. ಅಲ್ಲಿರುವ ಮಹಾನವಮಿ ದಿಬ್ಬ ಕೂಡ ಈ ವಿಷಯಕ್ಕೆ ಸಂಬಂಧಿಸಿದ ಸ್ಥಳವಾಗಿದೆ. ವಿಜಯನಗರ ಸಾಮ್ರಾಜ್ಯಕ್ಕೆ ಅನೇಕ ವಿದೇಶಿ ವ್ಯಾಪಾರಸ್ಥರು ಮತ್ತು ಪ್ರವಾಸಿಗರು ಭೇಟಿ ನೀಡಿದ್ದರು. ಪರ್ಶಿಯಾದ ಅಬ್ದುರ್ ರಝಾಕ್ ಎರಡನೇ ದೇವರಾಯನ ಆಳ್ವಿಕೆಯ ಕಾಲದಲ್ಲಿ ಸುಮಾರು ಕ್ರಿ ಶ 1442-1443ರಲ್ಲಿ ಭೇಟಿ ನೀಡಿದ್ದ. ಹಾಗೆಯೇ ಪೋರ್ಚುಗೀಸ್ ಮೂಲದವರಾದ ಡೊಮಿನ್ಗೊ ಪಯಝ್, ಕೃಷ್ಣದೇವ ರಾಯ ರಾಜ್ಯಭಾರ ಮಾಡುತ್ತಿದ್ದಾಗ(ಕ್ರಿ ಶ 1520-22) ಮತ್ತು ಫರ್ನಾನೊ ನುನಿಝ್, ಅಚ್ಯುತ ದೇವರಾಯನ ಆಸ್ಥಾನಕ್ಕೆ ಕ್ರಿ ಶ 1535-37ರಲ್ಲಿ ಭೇಟಿ ನೀಡಿದ್ದರ ಬಗೆಗೆ ಉಲ್ಲೇಖಗಳಿವೆ. ಇಟಾಲಿಯ ನಿಕೊಲೊ-ಡಿ ಕೌಂಟಿ ಕೂಡ ಭೇಟಿ ನೀಡಿದ್ದ ಎಂದು ಹೇಳಲಾಗುತ್ತದೆ. ಇವರೆಲ್ಲ ಆ ಕಾಲದ ದಸರಾದ ವೈಭವಯುತ ಆಚರಣೆಗಳ ವಿವರಣೆಗಳನ್ನು ದಾಖಲಿಸಿದ್ದಾರೆ.1
ವಿಜಯನಗರ ಸಾಮ್ರಾಜ್ಯ ಕ್ರಮೇಣ ಅವನತಿ ಹೊಂದಿದ ತರುವಾಯ ಇತರ ರಾಜವಂಶಗಳು ಮುನ್ನೆಲೆಗೆ ಬಂದವು. ಅವುಗಳಲ್ಲಿ ಒಡೆಯರ್ ರಾಜವಂಶವೂ ಒಂದಾಗಿತ್ತು. ರಾಜಾ ಒಡೆಯರ್ (ಕ್ರಿಶ 1578-1617) ಸ್ವತಂತ್ರವಾಗಿ ರಾಜಪಟ್ಟವನ್ನು ಪಡೆದ ನಂತರ ದಸರಾಗೆ ಗತದಿನಗಳ ವೈಭವ ಪ್ರಾಪ್ತಿಯಾಯಿತು. ಆತನ ಆಡಳಿತಾವಧಿಯಲ್ಲಿ ದಸರಾ ಒಂದು ರಾಜ್ಯ ಹಬ್ಬವಾಗಿ ಮಾರ್ಪಾಟಾಯಿತು. ಕ್ರಿ ಶ 1610ರಲ್ಲಿ ರಾಜಧಾನಿ ಶ್ರೀರಂಗಪಟ್ಟಣದಲ್ಲಿ ದೊಡ್ಡ ಮಟ್ಟದಲ್ಲಿ, ದಸರಾವನ್ನು ಸಂಭ್ರಮದಿಂದ ಆಚರಿಸಲಾಯಿತು. ಇದೇ ರಾಜವಂಶದ ಕಂಠೀರವ ನರಸರಾಝ ಒಡೆಯರ್ ಕಾಲದಲ್ಲಿ ಕೂಡ ದಸರಾ ಸಾಂಪ್ರದಾಯಿಕ ರೀತಿಯಲ್ಲಿ ನಡೆಸಲಾಗುತ್ತಿತ್ತು.
ಕ್ರಿ ಶ 1648ರಲ್ಲಿ ಆಸ್ಥಾನ ಕವಿಯಾಗಿದ್ದ ಗೋವಿಂದ ವೈದ್ಯ ʼ ಕಂಠೀರವ ನರಸರಾಜ ವಿಜಯ ʼ ಎಂದ ಕೃತಿಯನ್ನು ರಚಿಸಿದ. ಇದು ಒಂದು ವಿಶೇಷ ಕೃತಿಯಾಗಿತ್ತು. ಇದರಲ್ಲಿ ದಸರಾ ಕುರಿತ ಹೆಚ್ಚಿನ ಮಾಹಿತಿಗಳು ಇದ್ಚವು. ನವರಾತ್ರಿ ಸಂಬಂಧಿಸಿದಂತೆ ಇದು ಅತ್ಯಂತ ಮುಂಚಿನ ಕೃತಿ ಎಂದು ಹೇಳಲಾಗುತ್ತದೆ. ಚಿಕ್ಕದೇವರಾಜ ಒಡೆಯರ್ ರಾಜ್ಯಭಾರದಲ್ಲಿ ದಸರಾ ಪುನಶ್ಚೇತನವನ್ನು ಪಡೆಯಿತು. ಸೈನ್ಯದ ಲಾಂಛನಗಳಾದ ʼ ನಗಾರಿ , ʼ ನೌಬತ್ ʼ ಮತ್ತು
ʼ ನಿಶಾನ್ ʼಗಳನ್ನು ಬಳಸಲಾಗುತ್ತಿತ್ತು.2
ಹದಿನೆಂಟನೇ ಶತಮಾನದಲ್ಲಿ ಹೈದರ್ ಆಲಿ ಮತ್ತು ಟಿಪ್ಪು ಸುಲ್ತಾನ್ ಆಳ್ವಿಕೆಯ ಸಂದರ್ಭದಲ್ಲೂ ದಸರಾಗೆ ಸಂಬಂಧಿಸಿದ ಆಚರಣೆಗಳು ಜರಗುತ್ತಿದ್ದವು. ಮೈಸೂರಿನಲ್ಲಿ ಈ ಹಬ್ಬದ ಆಚರಣೆಗಳು ಹತ್ತೊಂಬತ್ತನೆಯ ಮತ್ತು ಇಪ್ಪತ್ತನೆಯ ಶತಮಾನದಲ್ಲಿ ಹತ್ತನೇ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಜಯಚಾಮರಾಜ ಒಡೆಯರ್ ಕಾಲದಲ್ಲಿ ಇನ್ನು ಹೆಚ್ಚಿನ ಬಗೆಯಲ್ಲಿ ಕೀರ್ತಿಯ ಶಿಖರವನ್ನು ಏರಿದವು. ಹತ್ತನೇ ಚಾಮರಾಜ ಒಡೆಯರ್ ಇದಕ್ಕೆ ಪೌರಸ್ತ್ಯ(ಓರಿಯಂಟಲ್) ಸ್ಪರ್ಶವನ್ನು ನೀಡಿದರು. ಕೆಲವು ಐರೋಪ್ಯ ಶೈಲಿಗಳನ್ನು ಅನುಸರಿಸಲಾಯಿತು. ಬೆಂಗಳೂರು ಮತ್ತು ಮೈಸೂರಿನ ನಡುವೆ ವಿಶೇಷ ರೈಲುಗಳು ಸಂಚರಿಸಿದವು. ಅವುಗಳಲ್ಲಿ ಐರೋಪ್ಯ ದೇಶಗಳ ಮಂದಿ ಹೆಚ್ಚಾಗಿರುತ್ತಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ದರ್ಬಾರುಗಳು ಜರಗುತ್ತಿದ್ದವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದವರಿಗೆ ಪುರಸ್ಕಾರಗಳನ್ನು ನೀಡಲಾಗುತ್ತಿತ್ತು. ಈ ಕಾಲದಲ್ಲಿ ಕುಸ್ತಿ ಆಟವೂ ದಸರಾ ಆಚರಣೆಯ ಭಾಗವಾಯಿತು.
ʼಮಹಾನವಮಿಯ ಪದʼಎಂಬ ಕೃತಿ ಮೈಸೂರು ಪ್ರಾಂತ್ಯದ ಸಾಮಾನ್ಯ ಜನರ ನಾಲಿಗೆಯ ಮೇಲೆ ಇಪ್ಪತ್ತನೆಯ ಶತಮಾನದ ಆದಿಯ ಸಮಯದಲ್ಲಿ ನಲಿದಾಡುತ್ತಿತ್ತು. ಇದು ನವರಾತ್ರಿಯ ಮಹಾನವಮಿ ಹಬ್ಬದ ವೈಭವವನ್ನು, ವಿಶೇಷಗಳನ್ನೂ ಸರ̧̧ಳ ಸುಂದರ ಶೈಲಿಯ ಚೌಪದಿಗಳಲ್ಲಿ ವರ್ಣಿಸುತ್ತದೆ.3 ಪ್ರಸ್ತುತ ದಸರಾ ʼನಾಡ ಹಬ್ಬʼವಾಗಿ ಕರ್ನಾಟಕ ಸರ್ಕಾರದ ವತಿಯಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ʼ ಮೈಸೂರು ದಸರಾ ಎಷ್ಟೊಂದು ಸುಂದರ I ಚೆಲ್ಲಿದೆ ನಗೆಯ ಪನ್ನೀರ ಎಲ್ಲೆಲ್ಲು ನಗೆಯ ಪನ್ನೀರI ……ಈ ಹಾಡು ʼ ಕರುಳಿನ ಕರೆ ʼ(1970) ಚಲನಚಿತ್ರದ್ದು. ಇದರ ಸಾಹಿತ್ಯವನ್ನು ರಚಿಸಿದವರು ಆರ್ ಎನ್ ಜಯಗೋಪಾಲ್, ಸಂಗೀತ ನಿರ್ದೇಶಕರು ಎಂ ರಂಗರಾವ್. ಈ ಸಿನಿಮಾದ ನಿರ್ದೇಶಕರು ಪುಟ್ಟಣ್ಣ ಕಣಗಾಲ್. ಡಾ. ರಾಜಕುಮಾರ್ ಅವರ ನಟನೆಯಿರುವ, ಪಿ ಬಿ ಶ್ರೀನಿವಾಸ್ ತಮ್ಮ ಸುಶ್ರಾವ್ಯ ಕಂಠದಲ್ಲಿ ಹಾಡಿರುವ ಈ ಗೀತೆ ಇಂದಿಗೂ ಜನಪ್ರಿಯವಾಗಿದೆ.
ನಮ್ಮ ರಾಜ್ಯದ ಮಡಕೇರಿ, ಮಂಗಳೂರು, ಶಿವಮೊಗ್ಗ ಇತ್ಯಾದಿ ಊರುಗಳಲ್ಲಿ ದಸರಾ ಉತ್ಸವವನ್ನು ನಡೆಸಲಾಗುತ್ತಿದೆ. ಅಲ್ಲದೆ ಹಿಮಾಚಲ ಪ್ರದೇಶದ ಕುಲ್ಲು, ಉತ್ತರ ಪ್ರದೇಶದ ರಾವಣ ದಹನ್, ರಾಜಸ್ಥಾನದ ಕೋಟಾ ದಸರಾ ಜಾತ್ರೆ, ಛತ್ತೀಸ್‌ಗಢದ ಬಸ್ತಾರ್ ದಸರಾ, ದೆಹಲಿಯ ರಾಮ್ ಲೀಲಾ, ಬಂಗಳಾದ ದುರ್ಗಾ ಪೂಜೆ, ಗುಜರಾತಿನ ನವರಾತ್ರಿಯ ಜಾನಪದ ಗರ್ಭಾ ನೃತ್ಯ ಮುಂತಾದವು ಹೆಸರುವಾಸಿಯಾಗಿವೆ. ಒಟ್ಟಿನಲ್ಲಿ ನವರಾತ್ರಿ ಹಬ್ಬ ಮುಖ್ಯವಾಗಿ ದುಷ್ಟತನದ ಮೇಲೆ ಒಳ್ಳೆಯದರ ಗೆಲುವನ್ನು ಸಂಕೇತಿಸುತ್ತದೆ.
ಪುರಾಣದ ಅನ್ವಯ ಮಹಿಷಾ ಎಂಬ ಅಸುರನನ್ನು ಚಾಮುಂಡೇಶ್ವರಿ ದೇವಿ ಕೊಂದದ್ದನ್ನು ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿ ಪ್ರತಿನಿಧಿಸುತ್ತದೆ. ಆದರೆ ಇದನ್ನು ಭಿನ್ನ ಬಗೆಯಲ್ಲಿ ವ್ಯಾಖ್ಯಾನಿಸುವ ಪರಿಯೂ ನಮ್ಮಲ್ಲಿ ಕೆಲವರು ಮಾಡುತ್ತ ಬಂದಿದ್ದಾರೆ. ಇತಿಹಾಸ ಮತ್ತು ಪ್ರಾಕ್ತನ ಶಾಸ್ತ್ರದ ಪ್ರೊ. ಮುರುಗೇಶಿ ಅವರು ಮಹಿಷನನ್ನು ಅಸುರನಂತೆ ಕಾಣುವುದು ವೈದಿಕ ಪ್ರಭಾವದಿಂದ ಎಂದು ಅಭಿಪ್ರಾಯ ಪಡುತ್ತಾರೆ. ದಕ್ಷಿಣಕ್ಕೆ ಪ್ರವೇಶಿಸಿದ ವೈದಿಕರು ಮಹಿಷ ಮತ್ತು ಆತನ ಅನುಯಾಯಿಗಳನ್ನು ಶತ್ರುಗಳಂತೆ ಕಾಣುತ್ತಾರೆ. ಏಕೆಂದರೆ ಮಹಿಷಾ ವೈದಿಕರ ಪ್ರಭಾವವನ್ನು ಮತ್ತು ಅವರ ವ್ಯಾಪಿಸುವಿಕೆಗೆ ಭಂಗವನ್ನು ಉಂಟುಮಾಡುತ್ತಾನೆ. ಸಾಮಾನ್ಯವಾಗಿ ಮಹಿಷಾ ಎಂದರೆ ಎಮ್ಮೆ ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ. ಹೀಗೆ ಮಾಡುವುದರಿಂದ ಅದಕ್ಕೊಂದು ಅಸುರ ಅಸ್ಮಿತೆಯಿದೆ ಎಂಬ ಕಲ್ಪನೆಯನ್ನು ಸ್ಥಿರೀಕರಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಅಲೂಪ ರಾಜವಂಶಕ್ಕೆ ಸೇರಿದ ಕ್ರಿ ಶ 8 ಮತ್ತು 9ನೇ ಶತಮಾನಗಳಿಗೆ ಸೇರಿದ ಶಾಸನಗಳು ಬೇರೆಯೇ ಆದ ನಿರೂಪಣೆಗಳನ್ನು ನೀಡುತ್ತವೆ. ಈ ಕಾಲಘಟ್ಟದ ರಾಜರಿಗೆ ಮೈಗೇಶ ಎಂಬ ಬಿರುದನ್ನು ನೀಡಲಾಗಿತ್ತು(ಮಹಿಗೆ + ಈಶ). ಇದರ ಅರ್ಥ: ಭೂಮಿಯ ದೊರೆ ಅಥವಾ ಸಾಮ್ರಾಟ. ಮಹಿಷಿ ಎಂದರೆ ರಾಣಿ. ಹೀಗೆ ಮಹಿಷಾ ಎನ್ನುವುದು ಒಬ್ಬ ಅಸುರನನ್ನು ಸೂಚಿಸುವುದಿಲ್ಲ. ಬದಲಿಗೆ ಜನರು ಗೌರಿಸುವ ಒಬ್ಬ ಶಕ್ತಿಶಾಲಿ ರಾಜನನ್ನು ಸೂಚಿಸುತ್ತದೆ ಎಂಬುದು ಅವರ ನಿಲುವು.
“ ಈ ಪ್ರಾಂತ್ಯದ ಸಂಕೀರ್ಣ ಮತ್ತು ವಿವಿಧ ಮಜಲುಗಳ ಇತಿಹಾಸವನ್ನು ಮಹಿಷಾ ಪಂಥ( Cult) ಪ್ರತಿನಿಧಿಸುತ್ತದೆ. ಇದು ಬರೀ ಪುರಾಣದ ಕಥೆಯಲ್ಲ. ಬದಲಿಗೆ ಪುರಾತನ ದಕ್ಷಿಣ ಭಾರತದ ಸಮಾಜೊ ರಾಜಕೀಯ ಒಳಗೊಂಡಿರುವ ಒಂದು ಸಾಂಸ್ಕೃತಿಕ ಸಂಪ್ರದಾಯವನ್ನು ಸೂಚಿಸುತ್ತದೆ. ಅಲ್ಲದೆ ಮಹಿಷಾ ಕಲ್ಟ್ ಎನ್ನುವುದು ಈ ಪ್ರಾಂತ್ಯದ ಬೌದ್ಧ ಪರಂಪರೆಗೂ ಒಂದು ಆಯಾಮವನ್ನು ನೀಡಿದೆ. ಕ್ರಿಸ್ತ ಶಕದ ಪ್ರಾರಂಭಿಕ ಶತಮಾನಗಳಲ್ಲಿ ಬನವಾಸಿ ಪ್ರದೇಶದಲ್ಲಿ ಮಹಿಷಶಕ ಅಥವಾ ಮಹಿಶಕ ಎಂಬ ಬೌದ್ಧರ ಒಂದು ಶಾಖೆ ಕ್ರಿಯಾಶಾಲಿಯಾಗಿತ್ತು. ತಲಕಾಡಿನಲ್ಲಿ(ಮೈಸೂರಿನಿಂದ ಸುಮಾರು 45 ಕಿಮಿ ದೂರದಲ್ಲಿರುವ ಸ್ಥಳ) ಉತ್ಖನನಗಳನ್ನು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊ. ಎಂ ಎಸ್ ಕೃಷ್ಣ ಮೂರ್ತಿ ಮಾಡಿದ್ದಾರೆ. ಇಲ್ಲಿ ದೊರಕಿರುವ ಪ್ರಾಕ್ತನಾ ಸಾಕ್ಷ್ಯಗಳು ಈ ಪ್ರದೇಶದಲ್ಲಿ ಮಹಿಷನ ಪ್ರಾಮುಖ್ಯತೆ ಇತ್ತು ಎಂಬುದನ್ನು ಸಾರುತವೆ “ ಎಂಬುದು ಪ್ರೊ ಮುರುಗೇಶಿಯವರು ಮುಂದಿಡುವ ವಿಚಾರ.
ಪ್ರೊ. ಕೃಷ್ಣ ಮೂರ್ತಿ ಅವರ ಅನ್ವಯ ತಲಕಾಡು ಒಂದು ಕಾಲದಲ್ಲಿ ಮಹಿಷ ಮಂಡಲದ ಪ್ರಧಾನ ಸ್ಥಳವಾಗಿತ್ತು. ವಿದ್ವಾಂಸರಾದ ಪ್ರೊ ಮುರುಗೇಶಿ ಮತ್ತು ಪ್ರೊ ಕೃಷ್ಣ ಮೂರ್ತಿ ಪ್ರತಿಪಾದಿಸುವ ಮಹಿಷನ ಐತಿಹಾಸಿಕ ನಿರೂಪ̧ಣೆ ದೀರ್ಘಕಾಲದಿಂದ ನಂಬಲಾಗಿರುವ ವ್ಯಾಖ್ಯಾನಗಳನ್ನು ಪ್ರಶ್ನಿಸುತ್ತದೆ. ದೇವತೆಗಳಿಂದ ಕೊಲ್ಲಲ್ಪಟ್ಟ ಅಸುರ ಎಂಬ ನಿರೂಪಣೆಗಿಂತ, ಆತ ಬಹಶಃ ಒಬ್ಬ ಬಲಶಾಲಿ ರಾಜನಾಗಿದ್ದ ಮತ್ತು ತನ್ನ ರಾಜ್ಯವನ್ನು ಬಾಹ್ಯಶಕ್ತಿಗಳಿಂದ ಕಾಪಾಡುವ ನಿಟ್ಟಿನಲ್ಲಿ ಪ್ರಾಣಾರ್ಪಣೆ ಮಾಡಿದ ಎಂಬುದು ಇಂತಹ ಪ್ರತಿಪಾದನೆಗಳಿಂದ ವೇದ್ಯವಾಗುವ ಅಂಶ.4 ಇತ್ತೀಚಿನ ವರ್ಷಗಳಲ್ಲಿ ಚಾಮುಂಡಿ ಬೆಟ್ಟದ ಮೇಲೆ ಮಹಿಷ ದಸರಾವನ್ನು ಕೂಡ ದಲಿತರು, ವಿಚಾರವಾದಿಗಳು, ಪ್ರಗತಿಪರರು ಆಚರಿಸುತ್ತ ಬಂದಿದ್ದಾರೆ.
ಇಂತಹ ಭಿನ್ನ ಆಯಾಮಗಳುಳ್ಳ ದಸರಾ ಹಬ್ಬ ನಮ್ಮ ರಾಜ್ಯದ ಸಾಂಸ್ಕೃತಿಕ ಹೆಗ್ಗುರುತು ಎಂದು ಹೇಳಬಹುದು.
ಆಕರ: 1. ವರದಿ-ಶೀರ್ಷಿಕೆ : ಮೈಸೂರು ದಸರಾ, ಎ ಟ್ರೆಡಿಷನ್ ಸ್ಟೀಪ್ಡ್ ಇನ್ ಹಿಸ್ಟರಿ, ʼ ದಿ ಹಿಂದೂʼ ಪತ್ರಿಕೆ- 22/09/2025.
2. ʼ ದಿ ಹಿಸ್ಟರಿ ಆಫ್ ದಸರಾ- ಬರಹ – ನರೇಂದ್ರ ಪ್ರಸಾದ್- ಡೆಕ್ಕನ್ ಹೆರಾಲ್ಡ್ ಪತ್ರಿಕೆ- 05/10/2023.
3. ಕರ್ನಾಟಕ ಪರಂಪರೆ-ಸಂಪುಟ 2, ಪುಟ 288
4. ʼ ಮಹಿಷಾ ಕಲ್ಟ್ : ಯಾನ್ ಏನ್ಷಿಯಂಟ್ ಟ್ರೆಡಿಶನ್ ಥ್ರೈವಿಂಗ್ ಅಲಾಂಗ್ ವೆಸ್ಟ್ ಕೋಸ್ಟ್ ಆಫ್ ಇಂಡಿಯಾ- ಡೆಕ್ಕನ್ ಹೆರಾಲ್ಡ್ ಪತ್ರಿಕೆ- 03/10/2024
ಮ ಶ್ರೀ ಮುರಳಿ ಕೃಷ್ಣ


