ಕೊಟ್ಟಿಗೆ ಹಾರದ ನೀರು ದೋಸೆ ರುಚಿ ಕಳಕೊಂಡಿದೆ - ಜೋಗಿ ಕಂಡಂತೆ ತೇಜಸ್ವಿ
The importance of being Thejasvi
—————————————————-
ಗಾಳ ಹೆಗಲಿಗಿಟ್ಟುಕೊಂಡು ನದಿದಡಕ್ಕೆ ನಡೆದುಹೋಗಿ ಮೌನಕ್ಕೆ ಶರಣಾಗುತ್ತಾ, ಹಳದಿ ಬಣ್ಣವನ್ನು ಅಷ್ಟಾಗಿ ಮೆಚ್ಚುತ್ತಾ, ಕಂಪ್ಯೂಟರಿನೊಳಗೆ ತಲೆಹಾಕಿ ಕೂತು ಬೆರಗಾಗುತ್ತಾ, ಜಗತ್ತಿನ ಅಸಂಖ್ಯ ಪ್ರಯೋಗಶೀಲತೆಗೆ ಅಚ್ಚರಿಗೊಳ್ಳುತ್ತಾ, ತಾನೂ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಇದ್ದ ತೇಜಸ್ವಿ ನಮ್ಮೊಳಗಿರುವುದು ಕೇವಲ ಲೇಖಕರಾಗಿ ಅಲ್ಲ. ಅವರು ಕೂಡ ಕಾಡಿನಂತೆ, ಚಿಟ್ಟೆಯಂತೆ, ಫಳಕ್ಕನೆ ಮಿಂಚಿ ಮಾಯವಾಗುವ ಮಿಂಚುಳ್ಳಿಯಂತೆ, ಚಾರ್ಮಾಡಿಯ ಅನೂಹ್ಯ ತಿರುವಿನಂತೆ,ಕಣಿವೆಯಂತೆ, ಮಂಜಿನಂತೆ ಮತ್ತು ನಮ್ಮ ವಿಲಕ್ಷಣ ಲಹರಿಯಂತೆ.
1. ಭಾಷಣ ಮಾಡೋಲ್ಲ ಅನ್ನುತ್ತಿದ್ದರು.
2. ತುಂಬ ಓದುತ್ತಿರಲಿಲ್ಲ.
3. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದರು.
4. ವಿಮರ್ಶೆಗಳನ್ನು ನೆಚ್ಚಿಕೊಳ್ಳಲಿಲ್ಲ.
5. ಸಂದರ್ಶನ ಕೊಡುತ್ತಿರಲಿಲ್ಲ.
6. ಬರಹಕ್ಕಿಂತ ಬದುಕುವುದು ಮುಖ್ಯ ಎಂದು ನಂಬಿಕೊಂಡಿದ್ದರು.
7. ತನಗಿಷ್ಟವಾಗದೇ ಹೋದರೆ ತನ್ನ ಪುಸ್ತಕಗಳನ್ನೂ ಪ್ರಕಟಿಸುತ್ತಿರಲಿಲ್ಲ.
8. ಮುನ್ನುಡಿ ಎಲ್ಲಾ ಬರೆಯೋಲ್ಲ ಹೋಗ್ರೋ ಅಂತ ರೇಗುತ್ತಿದ್ದರು.
9. ಸಾಹಿತ್ಯಕ್ಕಿಂತ ಹೆಚ್ಚು ಪರಿಸರ, ತೋಟ, ಆರೋಗ್ಯ, ಅಡುಗೆ ಕುರಿತು ಮಾತಾಡುತ್ತಿದ್ದರು.
10. ಪುಸ್ತಕಗಳ ಜೊತೆ ಬಂದಿಯಾಗುವ ಬದಲು, ಕಾಡಿನಲ್ಲಿ ಲೀನವಾಗಲು ಇಷ್ಟಪಡುತ್ತಿದ್ದರು.
ಪೂರ್ಣಚಂದ್ರ ತೇಜಸ್ವಿ ಅವರಿಗೆ ಅರವತ್ತು ವರ್ಷ ಆದಾಗ ಅವರದೊಂದು ಅಭಿನಂದನಾ ಗ್ರಂಥ ತರಬೇಕೆಂದು ಕೆಲವರು ಅವರ ಬಳಿ ಅನುಮತಿ ಕೇಳಿದ್ದರಂತೆ. ಸನ್ಮಾನ ಮಾಡುವುದಾಗಿ ಹೆದರಿಸಿದ್ದರಂತೆ. ತೇಜಸ್ವಿ ಅವರನ್ನೆಲ್ಲ ಬೈದು ಝಾಡಿಸಿದ್ದರು. ಮಾಡಕ್ ಕೆಲ್ಸ ಇಲ್ಲ ಕಣಯ್ಯ ನಿಮಗೆಲ್ಲ, ಅರವತ್ತಾಗೋದೇ ಕಾಯ್ತಿರ್ತೀರಿ ಅಂತ ಛೇಡಿಸಿದ್ದರು.
ಒಬ್ಬ ಲೇಖಕ ಕೇವಲ ಲೇಖಕನಾಗಿ ಉಳಿಯುವುದು ಎಷ್ಟು ಕಷ್ಟ ಅನ್ನುವುದನ್ನು ತೇಜಸ್ವಿ ಅರಿತುಕೊಂಡಿದ್ದರು. ಅವರು ಮೂಡಿಗೆರೆಯನ್ನು ಪ್ರಜ್ಞಾಪೂರ್ವಕವಾಗಿಯೇ ಆರಿಸಿಕೊಂಡಿದ್ದರು ಅನ್ನುವುದು ಅವರ ಮಾತು ಕೇಳಿದವರಿಗೆಲ್ಲ ಗೊತ್ತು. ಬೆಂಗಳೂರಿನಂಥ ಮಹಾನಗರ, ಬದಲಾವಣೆ ಇಲ್ಲದ ಊರು. ಎಂದೂ ಅರಳದ ಊರು ಎನ್ನುತ್ತಿದ್ದ ಅವರು, ಅದೇ ದಾರಿ, ಅದೇ ರಸ್ತೆ, ಅದೇ ಟ್ರಾಫಿಕ್ಕಲ್ಲಿ ಕೂತು ಯಾರಾದರೂ ಏನಾದರೂ ಬರೆಯೋದಕ್ಕೆ ಸಾಧ್ಯವಾ? ಮನಸ್ಸು ಮುದುಡಿ ಹೋಗೋದಕ್ಕೆ ಒಂದು ಗಂಟೆ ಅಲ್ಲಿದ್ರೆ ಸಾಕು ಎನ್ನುತ್ತಿದ್ದರು.
ತೇಜಸ್ವಿ ಹೇಗಿದ್ದರು ಅನ್ನುವುದನ್ನು ಹತ್ತಿರದಿಂದ ನೋಡಿದವರಿಗೆ ಅಚ್ಚರಿಯಾಗುತ್ತದೆ. ಒಬ್ಬ ಲೇಖಕ ಹೀಗೇ ಇರುತ್ತಾನೆ ಎಂದು ನಂಬಿಕೊಂಡು ಹೋದವರ ಅನಿಸಿಕೆಗಳು ಸುಳ್ಳಾಗುವಂತೆ ಬದುಕಿದವರು ಅವರು. ತಮಗೆ ಏನು ಬೇಕು ಮತ್ತು ಏನು ಬೇಡ ಅನ್ನುವುದು ಅವರಿಗೆ ಗೊತ್ತಿತ್ತು. ತಾನು ಯಾರನ್ನು ಓದಬೇಕು ಅನ್ನುವುದು ಅವರಿಗೆ ಸ್ಪಷ್ಟವಿತ್ತು. ಫೋನ್ ಮಾಡಿದಾಗೆಲ್ಲ, ನಾನು ಇಂಥ ಲೇಖಕನ ಇಂಥಾ ಪುಸ್ತಕವನ್ನು ಓದಿದೆ ಅಂತ ಹೇಳುವ ಚಟವಂತೂ ಅವರಿಗೆ ಇರಲೇ ಇಲ್ಲ. ಹಾಗೆ ನೋಡಿದರೆ ಅವರು ಅಷ್ಟಾಗಿ ಓದುತ್ತಲೂ ಇರಲಿಲ್ಲ. ಕೂತು ಓದುವುದಕ್ಕಿಂತ ಬೇರೆಯವರ ಜೊತೆ ಸುತ್ತಾಡುವುದರಲ್ಲಿ, ಹರಟುವುದರಲ್ಲಿ ಅವರಿಗೆ ಆಸಕ್ತಿ. ಮೂಡಿಗೆರೆಯ ಪೇಟೆಯಲ್ಲಿ ಅಡ್ಡಾಡುತ್ತಾ, ಯಾರ್ಯಾರದೋ ತರಲೆ ತಾಪತ್ರಯದ ಮೂಲ ತಿಳಿದುಕೊಳ್ಳುತ್ತಾ, ತೋಟಕ್ಕೆ ಬರುವ ಹೊಸ ಹಕ್ಕಿಗಳಿಗಾಗಿ ಕಾಯುತ್ತಾ, ಯಾವ ಹೊಂಡಕ್ಕೆ ಯಾವ ಕಾಲಕ್ಕೆ ಯಾವ ಮೀನು ಬರುತ್ತದೆ ಎಂದು ಊಹಿಸುತ್ತಾ ಇದ್ದವರು ಅವರು.
ತೇಜಸ್ವಿ ಅವರ ಥರ ಬದುಕುವುದು ಒಬ್ಬ ಲೇಖಕನ ಅನಿವಾರ್ಯತೆಯೂ ಹೌದೇನೋ? ಒಂದು ರಾಶಿ ಪುಸ್ತಕವನ್ನು ಮನೆಯಲ್ಲಿ ತಂದು ಒಟ್ಟಿಕೊಂಡು, ಯಾವುದನ್ನೂ ಓದಲಾಗದೇ, ಓದಿದ ಪುಸ್ತಕಗಳು ಕೊಡುವ ಸಿಟ್ಟನ್ನು ತಾಳಿಕೊಂಡು, ತನ್ನ ಸಹನೆಯನ್ನು ಕಳಕೊಳ್ಳುವುದು ಯಾರಿಗೆ ಬೇಕೋ ಮಾರಾಯಾ ಎಂದು ಹೇಳುತ್ತಿದ್ದ ತೇಜಸ್ವಿ, ಬಹುಶಃ ಒಂದೇ ಒಂದು ಪುಸ್ತಕಕ್ಕೂ ಮುನ್ನುಡಿ ಬರೆದು ಕೊಟ್ಟಂತಿಲ್ಲ. ಪುಸ್ತಕ ಕಳಿಸೋದು ಕಳಿಸಿ, ಓದು ಅಂತ ಮಾತ್ರ ಹೇಳಬೇಡ ಅಂತ ನೇರವಾಗಿಯೇ ಹೇಳುತ್ತಿದ್ದ ಅವರು, ಲೇಖಕ ನಿಜಕ್ಕೂ ಪಡಕೊಳ್ಳುವುದೇನಾದರೂ ಇದ್ದರೆ, ಅದು ತನ್ನ ಪರಿಸರದಿಂದ ಎಂಬುದನ್ನು ಅರ್ಥಮಾಡಿಕೊಂಡಂತೆ ಬರೆದವರು. ಕೊಟ್ಟಿಗೆಹಾರಕ್ಕೆ ಬಂದೊಡನೆ ಅಲ್ಲೊಂದು ಜುಗಾರಿ ಕ್ರಾಸ್ ಅವರಿಗೆ ಕಾಣಿಸಿಬಿಡುತ್ತಿತ್ತು. ಆ ನಿರ್ಜನ ಏಕಾಂತದ ಊರಿಗೆ ಯಾರಾದರೂ ಯಾಕೆ ಬಂದು ನೆಲೆಸುತ್ತಾರೆ ಎಂಬ ಪ್ರಶ್ನೆ ಮೂಡುತ್ತಿತ್ತು. ಪ್ಲಾಸ್ಟಿಕ್ಕು ಬಂದದ್ದೇ ತಡ ಮೇದರಹಳ್ಳಿಯಂಥ ಒಂದು ಹಳ್ಳಿಯೂ ಅಲ್ಲಿದ್ದ ಸಮುದಾಯವೂ ನಾಶವಾದ ಚಿತ್ರ ಅವರ ಕಣ್ಮುಂದೆ ಸುಳಿಯುತ್ತಿತ್ತು.
ತೇಜಸ್ವಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡವರಲ್ಲ. ತೀರಾ ಒತ್ತಾಯ ಮಾಡಿದರೆ, ತಮಗೆ ಆಪ್ತರಾದವರ ಕಾರ್ಯಕ್ರಮಗಳಿಗೆ ಹೋಗಿ, ಹಿಂದೆ ಕೂತು ಬರುತ್ತಿದ್ದರು. ವೇದಿಕೆಯ ಮೇಲಿಂದ ಮಾತಾಡುತ್ತಿದ್ದುದಂತೂ ತೀರಾ ಕಡಿಮೆ. ಸಂದರ್ಶನ ಕೊಡಿ ಅಂತ ಕೇಳಿದಾಗೆಲ್ಲ, ಹಾಳಾಗಿ ಹೋಗೋ.. ಎಂದು ತಮಾಷೆಯಾಗಿ ಬೈಯುತ್ತಿದ್ದ ತೇಜಸ್ವಿ, ಅಂಥ ಖ್ಯಾತಿಯನ್ನು ಬಯಸಿದವರೂ ಅಲ್ಲ. ಹಾಗೆ ನೋಡಿದರೆ ಅವರ ಪುಸ್ತಕಗಳ ಬಗ್ಗೆ ವಿಮರ್ಶೆ ಕೂಡ ಬರುತ್ತಿರಲಿಲ್ಲ. ಒಂದಿಬ್ಬರು ವಿಮರ್ಶಕರನ್ನು ಬಿಟ್ಟರೆ, ಯಾರೂ ಕೂಡ ಅವರ ಬಗ್ಗೆ ಬರೆಯುವ ಪ್ರಯತ್ನ ಕೂಡ ಮಾಡಲಿಲ್ಲ.
ತರುಣ ಓದುಗರನ್ನು ಅವರಂತೆ ಸೆಳೆದವರು, ಓದಿಗೆ ಹಚ್ಚಿದವರು ಮತ್ತೂಬ್ಬರಿಲ್ಲ ಎಂದೇ ಹೇಳಬೇಕು. ಪರಿಸರದ ಕತೆ, ಕರ್ವಾಲೋ ಮತ್ತಿತರ ಕೃತಿಗಳನ್ನು ಅವರು ಬರೆದದ್ದು ಕಂತು ಕಂತಾಗಿಯೇ. ವಾರ ವಾರ ಎಷ್ಟು ಬೇಕೋ ಬರೆದು ಕಳುಹಿಸುತ್ತಿದ್ದರು. ಬರೆದದ್ದನ್ನು ಮತ್ತೂಮ್ಮೆ ತಿದ್ದುವ ಗೋಜಿಗೆ ಹೋಗುತ್ತಿರಲಿಲ್ಲ. ಒಂದೇ ಒಂದು ಅಚ್ಚಿನ ದೋಷ ಇಲ್ಲದಂತೆ ಎಚ್ಚರ ವಹಿಸುತ್ತಿದ್ದರು. ಅವರೊಳಗೆ ಕತೆ ಹುಟ್ಟುತ್ತಲೇ ಹೋಗುತ್ತಿತ್ತು, ನದಿಯಂತೆ ಹರಿಯುತ್ತಿತ್ತು.
ಕಾಫಿ ಬೆಲೆ, ಸೆಪ್ಟೆಂಬರ್ ಮಳೆ, ಹಾರುವ ಓತಿ, ಮನೆ ಹಿಂದಿನ ಕೆರೆ, ಕಿವಿ ಎಂಬ ನಾಯಿ, ಪ್ಯಾರ ಎಂಬ ಹುಡುಗ, ಸಾಬಿ ಅಂಗಡಿಯ ಬಿರಿಯಾನಿ, ಪೋಸ್ಟ್ ಮ್ಯಾನ್‌ನ ಸೈಕಲ್ಲು, ಹಾವುಗೊಲ್ಲರ ತರಲೆಗಳನ್ನೆಲ್ಲ ನೋಡುತ್ತಾ, ಗಾಳ ಹೆಗಲಿಗಿಟ್ಟುಕೊಂಡು ನದಿದಡಕ್ಕೆ ನಡೆದುಹೋಗಿ ಮೌನಕ್ಕೆ ಶರಣಾಗುತ್ತಾ, ಹಳದಿ ಬಣ್ಣವನ್ನು ಅಷ್ಟಾಗಿ ಮೆಚ್ಚುತ್ತಾ, ಕಂಪ್ಯೂಟರಿನೊಳಗೆ ತಲೆಹಾಕಿ ಕೂತು ಬೆರಗಾಗುತ್ತಾ, ಜಗತ್ತಿನ ಅಸಂಖ್ಯ ಪ್ರಯೋಗಶೀಲತೆಗೆ ಅಚ್ಚರಿಗೊಳ್ಳುತ್ತಾ, ತಾನೂ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಇದ್ದ ತೇಜಸ್ವಿ ನಮ್ಮೊಳಗಿರುವುದು ಕೇವಲ ಲೇಖಕರಾಗಿ ಅಲ್ಲ.
ಅವರು ಕೂಡ ಕಾಡಿನಂತೆ, ಚಿಟ್ಟೆಯಂತೆ, ಫಳಕ್ಕನೆ ಮಿಂಚಿ ಮಾಯವಾಗುವ ಮಿಂಚುಳ್ಳಿಯಂತೆ, ಚಾರ್ಮಾಡಿಯ ಅನೂಹ್ಯ ತಿರುವಿನಂತೆ,ಕಣಿವೆಯಂತೆ, ಮಂಜಿನಂತೆ ಮತ್ತು ನಮ್ಮ ವಿಲಕ್ಷಣ ಲಹರಿಯಂತೆ.
-2-
ನಾನು ಬೆಂಗಳೂರಿನಿಂದ ನಮ್ಮೂರಾದ ಉಪ್ಪಿನಂಗಡಿಗೆ ಹೋಗುವಾಗೆಲ್ಲ ನೇರವಾದ ಶಿರಾಡಿ ಘಾಟಿಯ ಹಾದಿ ಬಿಟ್ಟು ಒಂದೋ ಚಾರ್ಮಾಡಿ ಘಾಟಿ ಅಥವಾ ಬಿಸಲೆ ಘಾಟಿಯ ಮೂಲಕ ಹೋಗುತ್ತೇನೆ. ಹಾಗೆ ಸುತ್ತಿ ಬಳಸಿ ಹೋಗುವುದಕ್ಕಿದ್ದ ಕಾರಣಗಳು ಅನೇಕ- ಬಿಸಲೆ ಘಾಟಿಯ ನಿರ್ಜನ ಹಾದಿಯ ಆಕರ್ಷಣೆ, ದಾರಿಯಲ್ಲಿ ಮಳೆಗೋ ಗಾಳಿಗೋ ಬಿದ್ದ ಮರದಿಂದಾಗಿ ಪ್ರಯಾಣ ನಿಲುಗಡೆಯಾಗಿ, ಕಾಡಿನಲ್ಲೊಂದು ರಾತ್ರಿ ಕಳೆಯುವ ಅವಕಾಶವಾಗಲಿ ಅನ್ನುವ ಆಸೆ, ಆ ಪ್ರದೇಶದಲ್ಲಿ ಆಗೀಗ ರಸ್ತೆಗೆ ಅಡ್ಡವಾಗಿ ಸಿಗುವ ಆನೆಹಿಂಡು ಕಣ್ಣಿಗೆ ಬಿದ್ದೀತೆಂಬ ದುರಾಸೆ.
ಹಾಗೇ ಚಾರ್ಮಾಡಿ ಘಾಟಿಯ ಕಡಿದಾದ ತಿರುವುಗಳೆಂದರೆ ನನಗೆ ಪ್ರೀತಿ. ಅದಕ್ಕಿಂತ ಪ್ರೀತಿಯೆಂದರೆ ಮೂಡಿಗೆರೆಯಲ್ಲಿ ಒಂದಷ್ಟು ಹೊತ್ತು ಉಳಿದು, ತೇಜಸ್ವಿಯವರ ಮನೆಯಲ್ಲಿ ಗಡದ್ದು ಊಟ ಹೊಡದು ಹೋಗುವ ಆಶೆ. ಜೊತೆಗೇ ಅವರೊಂದಿಗೆ ಮಾತಾಡಿ ಒಂದಷ್ಟು ಹೊಸತನ ತುಂಬಿಕೊಳ್ಳುವ ಬಯಕೆ. ಅವರು ಸಿಗದೇ ಹೋದರೆ ಕೊಟ್ಟಿಗೆ ಹಾರದ ನೀರುದೋಸೆ, ಕಕ್ಕಿಂಜೆಯ ವಿಚಿತ್ರ ವ್ಯಾಮೋಹ ಕೂಡ ಸಾಕಷ್ಟು ರೋಚಕವಾಗೇ ಕಾಣುತ್ತಿತ್ತು. ಹ್ಯಾಂಡ್ ಪೋಸ್ಟಿನ ಕಡೆಗೆ ಕಾರು ತಿರುಗಿಸಿ, ಹಳದಿ ಬಣ್ಣ ಬಳಿದ ತೇಜಸ್ವಿಯವರ ತೋಟದ ಗೇಟು ತೆಗೆದು ಕೆಳಗಿಳಿದರೆ ಅನತಿ ದೂರಕ್ಕೇ ಅವರ ಮನೆ.
ಶಿರಾಡಿ, ಬಿಸಲೆ, ಸಂಪಾಜೆ, ಚಾರ್ಮಾಡಿ ಘಾಟಿಯನ್ನೆಲ್ಲ ಆವರಿಸಿದ ಕಾಡುಗಳ ಹಾಗೆ ತೇಜಸ್ವಿ ಕೂಡ ಪ್ರತಿಸಾರಿಯೂ ಹೊಸಹೊಸದಾಗೇ ಕಾಣಿಸುತ್ತಿದ್ದರು. ಮೊದಲ ಬಾರಿ ಹೋದಾಗ ಅವರ ಮುಂದೆ ಅಷ್ಟಗಲದ ಫೋಟೋಗಳಿದ್ದವು. ಅವನ್ನೆಲ್ಲ ಹೇಗೆ ತಾನು ಒಂದೇ ಫ್ರೇಮಿನಲ್ಲಿ ಬರುವ ಹಾಗೆ ಮಾಡಿದೆ ಅನ್ನುವುದನ್ನು ತೇಜಸ್ವಿ ಅರ್ಧಗಂಟೆ ವಿವರಿಸಿದ್ದರು. ಎರಡನೇ ಸಾರಿ ಹೋದಾಗ ಹಗಲು, ಅವರ ಮನೆಹಿಂದಿನ ಕೊಳದಲ್ಲಿ ಜೋಡಿ ಹಂಸಗಳಿದ್ದವು. ಮತ್ತೊಮ್ಮೆ ಹೋದಾಗ ತೇಜಸ್ವಿ ಅದೆಲ್ಲಿಂದಲೋ ಒಂದು ಲಕ್ಷ ರುಪಾಯಿ ಕೊಟ್ಟು ಹೊಸ ಡಿಜಿಟಲ್ ಕೆಮರಾ ತರಿಸಿದ್ದರು. ಅದರಲ್ಲಿ ಒಂದು ಸೆಕೆಂಡಿಗೆ ಐವತ್ತೋ ಅರುವತ್ತೋ ಫೋಟೋ ಕ್ಲಿಕ್ಕಿಸಬಹುದು ಎಂದೂ ಪ್ರತಿ ಫೋಟೊ ಕೂಡ ಅದೆಷ್ಟೋ ಹೆಚ್ಚಿನ ರೆಸಲ್ಯೂಷನ್ನಿನಲ್ಲಿ ರೆಕಾರ್ಡ್ ಆಗುತ್ತದೆಂದೂ ಆರ್ಡಿನರಿ ಕೆಮರಾದಲ್ಲಾದರೆ ಒಂದು ಫೋಟೊ ಕ್ಲಿಕ್ಕಿಸಿ ಮತ್ತೊಂದು ಕ್ಲಿಕ್ಕಿಸುವುದಕ್ಕೆ ಒಂದಷ್ಟು ಹೆಚ್ಚು ಸಮಯ ಬೇಕಾಗುತ್ತದೆಂದೂ ವಿವರಿಸುದ್ದರು. ಬೆಂಗಳೂರಿನಲ್ಲಿ, ಸೋ ಕಾಲ್ಡ್ ಐಟಿ ಸಿಟಿಯಲ್ಲಿ ಕೂತ ನಾನು ಕೂಡ ಆಧುನಿಕ ತಂತ್ರಜ್ಞಾನದ ಸರಕುಗಳನ್ನು ನೋಡಿದ್ದು ತೇಜಸ್ವಿ ಮನೆಯಲ್ಲಿಯೇ. ನಾನು ಮೊದಲ ಸಲ ಇಂಟರ್ ನೆಟ್ಟಿಗೆ ಕಾಲಿಟ್ಟದ್ದೂ ಅವರ ಮನೆಯಲ್ಲೇ.
ಹತ್ತು ಹನ್ನೆರಡು ವರುಷದ ಹಿಂದೆಯೇ ಅವರು ಕಂಪ್ಯೂಟರಿನಲ್ಲಿ ಕನ್ನಡ ಬರೆಯುತ್ತಾ ಆ ಲೇಖನವನ್ನೂ ಅದರ ಫಾಂಟುಗಳನ್ನೂ ಕಳುಹಿಸಿಕೊಡುತ್ತಾ ಅದನ್ನು ಹೇಗೆ ಡೌನ್ ಲೋಡ್ ಮಾಡಿ ಬಳಸಿಕೊಳ್ಳಬೇಕು ಎಂದು ವಿವರಿಸುತ್ತಾ ನಮ್ಮ ಅಜ್ಞಾನವನ್ನು ನಯವಾಗಿ ಗೇಲಿ ಮಾಡುತ್ತಿದ್ದವರು.
ನನಗೆ ತೇಜಸ್ವಿಯವರ ಪ್ರೀತಿ ಮತ್ತು ಸ್ನೇಹ ಸಿಗುವಂತೆ ಮಾಡಿದವರು ಮಿತ್ರರಾದ ರವಿ ಬೆಳಗೆರೆ. ಆಗಷ್ಟೇ ಲಂಕೇಶ್ -ತೇಜಸ್ವಿ ನಡುವಿನ ಸ್ನೇಹ ಹಳಸಿಹೋಗಿತ್ತು. ಕುವೆಂಪು ರಾಮಾಯಣ ಹಸ್ತಪ್ರತಿ ವಿಚಾರದಲ್ಲಿ ತೇಜಸ್ವಿಯವರನ್ನು ಲಂಕೇಶ್ ಏನೇನೋ ಅಂದಿದ್ದರು. ಆ ಹೊತ್ತಲ್ಲಿ ಅದರ ಸತ್ಯಾಸತ್ಯತೆ ತಿಳಿದುಕೊಂಡು ಬಾ ಎಂದು ರವಿ ನನ್ನನ್ನು ಕಳುಹಿಸಿಕೊಟ್ಟಿದ್ದರು.
ನಾನು ಮೂಡಿಗೆರೆಯ ಅವರ ಮನೆಗೆ ಕಾಲಿಟ್ಟಾಗ ರಾತ್ರಿ ಹತ್ತೂವರೆ. ಅಪರಾತ್ರಿ ಎರಡೂವರೆಯ ತನಕ ತೇಜಸ್ವಿ ನನಗೆ ಹಸ್ತಪ್ರತಿಯನ್ನು ಮುದ್ರಿಸಿದ ತಂತ್ರಜ್ಞಾನ ವಿವರಿಸಿದ್ದರು. ಆರು ಗಂಟೆಗೆ ಹೊರಟುಬಿಡಬೇಕು ಎಂದು ನಾನು ಪೇಜರ್ ಅಲಾರಾಂ ಇಟ್ಟು ಮಲಗಿದ್ದೆ. ಪಕ್ಕದ ಕುರ್ಚಿಯಲ್ಲಿ ತೇಜಸ್ಲಿ ಕೂಡ ಕೂತೇ ನಿದ್ದೆ ಹೋಗಿದ್ದರು. ಬೆಳಗ್ಗೆ ಅವರು ನನ್ನನ್ನು ಅಲ್ಲಾಡಿಸಿ ಎಬ್ಬಿಸಿದಾಗ ಎಂಟು ಗಂಟೆ. ಪತ್ರಿಕೆ ಎರಡು ಗಂಟೆ ತಡವಾಗಿ ಬರುತ್ತದೆ ಅನ್ನುವ ಗಾಬರಿಯಲ್ಲಿ ನಾನು ಅಲ್ಲಿಂದ ಟೀ ಕೂಡ ಕುಡಿಯದೆ ಜಿಗಿದು ಓಡಿದ್ದೆ.
ತೇಜಸ್ವಿಯವರ ಕೃಷ್ಣೇಗೌಡನ ಆನೆ ಕತೆಯನ್ನು ರಾಜೇಂದ್ರ ಸಿಂಗ್ ಬಾಬು ಸಿನಿಮಾ ಮಾಡಲು ಹೊರಟಾಗ ಅದರ ಚಿತ್ರಕತೆಯ ಹೊಣೆ ಹೊತ್ತದ್ದು ನಾನು ಮತ್ತು ಉದಯ ಮರಕಿಣಿ. ಅದಕ್ಕಾಗಿ ಒಂದೆರಡು ಬಾರಿ ಅವರ ಮನೆಗೆ ಅಲೆದಾಡಿದೆ. ನನಗೆ ತೋರಿಸಲೇ ಬೇಡ, ಆದರೆ ಡಬ್ಬಾದಲ್ಲಿ ಉಳಿಯುವ ಸಿನಿಮಾ ಮಾತ್ರ ಮಾಡಬೇಡ. ನನ್ನ ಬೇರೆ ಕತೆಯ ಭಾಗಗಳನ್ನು ಬೇಕಿದ್ದರೂ ಬಳಸಿಕೋ ಎಂದಿದ್ದರು. ನೀವೇನೇ ಸುಡುಗಾಡು ಕಮರ್ಷಿಯಲ್ ಅಂತೀರಲ್ಲ ಹಾಗಿರಬೇಕು ಅಂದಿದ್ದರು. ಮೊದಲು ಅಂಬರೀಷ್ ನಟಿಸುತ್ತಾರೆ ಅಂತಾಗಿತ್ತು. ಆಮೇಲೊಂದು ದಿನ ಕೃಷ್ಣೇಗೌಡನ ಆನೆ ಚಿತ್ರದಲ್ಲಿ ಜಗ್ಗೇಶ್ ನಟಿಸುತ್ತಾರೆ ಅಂದಾಗ ನೀವು ಆನೆ ಪಾತ್ರಕ್ಕೆ ಕಲಾವಿದರನ್ನು ಹುಡುಕ್ತಿದ್ದೀರೋ ಕೃಷ್ಣೇಗೌಡನ ಪಾತ್ರಕ್ಕೋ ಅಂತ ಗೇಲಿ ಮಾಡಿದ್ದರು. ಆಗ ನಾನು ಕೂಡ ತುಂಬ ದಪ್ಪಗಿದ್ದೆ, ಗೆಳೆಯ ಮರಕಿಣಿ ತೆಳ್ಳಗಿದ್ದರು. ನಮ್ಮಿಬ್ಬರನ್ನೂ ನೋಡಿದವರೇ ತೇಜಸ್ವಿ ನೀನೇ ಆನೆ , ಮರಕಿಣಿ ಮಾವುತ ಅಂತ ಮತ್ತೊಂದು ಸುತ್ತು ನಕ್ಕು ನಮ್ಮನ್ನೂ ನಗಿಸಿದ್ದರು.
ಈ ಮಧ್ಯೆ ಸುಂದರನಾಥ ಸುವರ್ಣ ಕೇವಲ ಒಂದು ಕ್ಯಾಮರಾ ಮತ್ತು ಆನೆ ಮಾತ್ರ ಬಳಸಿಕೊಂಡು ಅತಿ ಕಡಿಮೆ ಬಜೆಟ್ಟಿನಲ್ಲಿ ಕೃಷ್ಣೇಗೌಡನ ಆನೆ ಸಿನಿಮಾ ಮಾಡಲು ಮುಂದಾಗಿದ್ದರು. ಅದಕ್ಕೂ ಒಪ್ಪಿದ್ದರು ತೇಜಸ್ವಿ. ನಾವು ಚೌಕಾಸಿ ಮಾಡಿ, ಇಡೀ ಸಿನಿಮದ ಬಜೆಟ್ಟೇ ಎರಡೋ ಮೂರೋ ಲಕ್ಷ ಎಂದು ಸುಳ್ಳು ಹೇಳಿದ್ದನ್ನೂ ನಂಬಿದಂತೆ ನಟಿಸಿದ್ದರು ಅವರು.
ಅವರಿಗೆ ತುಂಬ ಭರವಸೆ ಇದ್ದದ್ದು ಜುಗಾರಿ ಕ್ರಾಸ್ ಚಿತ್ರದಲ್ಲಿ. ಅದಕ್ಕೆ ಗೆಳೆಯರಾದ ಸೂರಿ ರಚಿಸಿದ ಚಿತ್ರಕತೆಯಿಂದ ಥ್ರಿಲ್ಲಾಗಿ ಹೋಗಿದ್ದರು ತೇಜಸ್ವಿ. ಅದು ಕೊನೆಗೂ ಸಿನಿಮಾ ಆಗಲಿಲ್ಲ. ಆಮೇಲೆ ಕೋಡ್ಲು ರಾಮಕೃಷ್ಣ ಅದನ್ನು ಮಲೇಶಿಯದಲ್ಲಿ ಚಿತ್ರಿಸುತ್ತೇನೆ ಅಂದಾಗ ತೇಜಸ್ವಿ ಗಹಗಹಿಸಿದ್ದರು. ಈ ಸಿನಿಮಾದವರು ಎಲ್ಲೆಲ್ಲ ದುಡ್ಡು ಕಳೀತಾರೆ ಮಾರಾಯ ಅಂದಿದ್ದರು.
ಇವೆಲ್ಲ ಇತ್ತೀಚಿನ ನೆನಪುಗಳಾದರೆ, ತೇಜಸ್ವಿಯವರನ್ನು ಮೊದಲ ಸಲ ಕಂಡದ್ದು ಮಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ. ಅಲ್ಲಿಗೆ ಯಾವುದೋ ಭಾಷಣಕ್ಕೆ ಬಂದಿದ್ದ, ಯಾರ ಜತೆಗೂ ಮಾತಾಡದೇ ತನ್ನ ಪಾಡಿಗೆ ತಾನಿದ್ದ, ತೇಜಸ್ವಿಯನ್ನು ಮಾತಾಡಿಸಲು ಭಯವಾಗಿ ನಾನು ಮತ್ತು ಗೆಳೆಯ ಗೋಪಾಲಕೃಷ್ಣ ಕುಂಟಿನಿ ಅವರು ಏಕಾಂತದಲ್ಲಿರುವ ಹೊತ್ತಿಗೆ ಕಾಯುತ್ತಿದ್ದೆವು. ಕೊನೆಗೂ ಅವರು ತಮ್ಮ ಕಾರಿನ ಹತ್ತಿರ ನಮ್ಮ ಕೈಗೆ ಸಿಕ್ಕಿಬಿದ್ದರು. ಅವರ ಪ್ರಸಿದ್ಧ ಸಿಟ್ಟಿನ ಪರಿಚಯ ಇದ್ದ ನಾನು ಮಾತಿನ ಮಲ್ಲ ಗೋಪಿಯನ್ನು ಮುಂದಕ್ಕೆ ಬಿಟ್ಟೆ. ಗೋಪಿ ಅವರ ಹತ್ತಿರ ಹೋಗಿ ನಮಸ್ಕಾರ ಅಂತ ಕೊಂಚ ಅಂತ ಹೆದರುತ್ತಲೇ ಹೇಳಿದ್ದ. ತೇಜಸ್ವಿ ತಮ್ಮ ಕೈಲಿದ್ದ ಕಾರಿನ ಕೀಯನ್ನು ಥಟ್ಟನೆ ಎತ್ತರಕ್ಕೆ ಎಸೆದು ಕ್ಯಾಚ್ ಹಿಡಿದು ನಮಸ್ಕಾರಾ..... ಅಂದಿದ್ದರು. ಅಲ್ಲಿಗೆ ಮಾತು ಮುಗಿದಿತ್ತು.
ತೇಜಸ್ವಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ನಮ್ಮೂರಿಗೂ ಕೆಲಸಕ್ಕೆ ಬರುತ್ತಿದ್ದರು. ಘಟ್ಟದಿಂದ ಮೇಲೆ ಕೆಳಗೆ ಅವರ ಸವಾರಿ ಓಡಾಡುತ್ತಿದ್ದದ್ದು ತೀರಾ ಸಾಮಾನ್ಯ. ಅವರ ಪೈಕಿ ರಾಮಣ್ಣ ಎಂಬ ಮೇಸ್ತ್ರಿಯೊಬ್ಬ ತೇಜಸ್ವಿ ಮನೆಯಲ್ಲಿ ಕೆಲಸ ಮಾಡುತ್ತಿದ್ದವನು ನಮ್ಮೂರಿಗೆ ಬಂದಿದ್ದ. ಅವನದು ಮಂಗ ಹಿಡಿಯುವ ಕೆಲಸ. ಒಂದು ಬೋನು ಮಾಡಿ ಅದರೊಳಗೆ ಮಂಗ ಸಿಕ್ಕಿಬೀಳುವ ಹಾಗೆ ಮಾಡಿ ಆ ಮಂಗಗಳನ್ನು ಲಾರಿಯಲ್ಲಿ ಸಾಗಿಸಿ ಬೇರೆ ಊರಿಗೆ ಬಿಟ್ಟು ಬರುವುದಕ್ಕೆ ಅವನು ಒಂದೊಂದು ಮಂಗಗಳಿಗೆ ತಲಾ ಇಪ್ಪತ್ತೈದು ರುಪಾಯಿ ಕಕ್ಕಿಸುತ್ತಿದ್ದ. ಅವನಿಗೆ ಆ ಬೋನು ಮಾಡಲು ಹೇಳಿಕೊಟ್ಟದ್ದು ತೇಜಸ್ವಿ ಅನ್ನುತ್ತಿದ್ದ. ಗೋಪಾಲಕೃಷ್ಣ ಕುಂಟಿನಿಯ ತೋಟದಲ್ಲೇ ಐವತ್ತೋ ಅರುವತ್ತೋ ಮಂಗಗಳನ್ನು ಆತ ಹಿಡಿದಿದ್ದ.
ಆಮೇಲೆ ಸಿಕ್ಕಾಗ ತೇಜಸ್ವಿಯವರನ್ನು ಈ ಬಗ್ಗೆ ಕೇಳಿದ್ದೆ. ಓಹೋ ಅವನಾ, ಮಹಾ ಕಿಲಾಡಿ. ಇಲ್ಲಿ ಹಿಡಿದ ಮಂಗಗಳನ್ನು ಮುಂದಿನ ಊರಲ್ಲಿ ಬಿಡುತ್ತಾನೆ. ಆಮೇಲೆ ಅಲ್ಲಿಗೆ ಹೋಗಿ ಮಂಗ ಹಿಡೀತಾನೆ. ಹಾಗೆ ಅವನ ವ್ಯಾಪಾರ ಯಕ್ಷಗಾನ ಮೇಳ ಸಂಚಾರ ಹೊರಟ ಹಾಗೆ ಊರಿಂದೂರಿಗೆ ಸಾಗುತ್ತದೆ. ಒಂದು ವರುಷಕ್ಕೆ ಸರಿಯಾಗಿ ಅದೇ ಮಂಗ ನಿಮ್ಮ ತೋಟಕ್ಕೆ ವಾಪಸ್ಸು ಬರುತ್ತೆ ಕಣ್ರೀ ಅಂತ ನಕ್ಕಿದ್ದರು.
ಇನ್ನು ಮೇಲೆ ಉಪ್ಪಿನಂಗಡಿಗೆ ಹೋಗುವಾಗ ಚಾರ್ಮಾಡಿ ಘಾಟಿಯ ಮೇಲಾಗಿ ಹೋಗುವುದಕ್ಕೆ ಕಾರಣಗಳೇ ಇಲ್ಲ. ಕೊಟ್ಟಿಗೆ ಹಾರದ ನೀರುದೋಸೆ ರುಚಿ ಕಳಕೊಂಡಿದೆ. ಕಕ್ಕಿಂಜೆಯ ರಸ್ತೆಗಳಲ್ಲಿ ಆ ಹಳೆಯ ಸೆಳೆತ ಇಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ ಕುರುಚಲು ಗಡ್ಡದ, ತುಂಡು ಪ್ಯಾಂಟಿನ, ಗಡಸು ಮಾತಿನ, ಮೈತುಂಬ ನಗುವಿನ ತೇಜಸ್ವಿ ಇಲ್ಲ.
ಅವರಿಲ್ಲದ ಕಾಡಿಗೆ ಆಕರ್ಷಣೆಯೂ ಇಲ್ಲ.
ಜೋಗಿ


