ಧರ್ಮಸ್ಥಳಕ್ಕೆ ಏನಾಗಿದೆ?

ಧರ್ಮಸ್ಥಳಕ್ಕೆ ಏನಾಗಿದೆ?

ಧರ್ಮಸ್ಥಳಕ್ಕೆ ಏನಾಗಿದೆ?

ಭಾಗ-1

ಧರ್ಮಸ್ಥಳಕ್ಕೆ ಏನಾಗಿದೆ? ಇದು ಶ್ರೀ ಮಂಜುನಾಥ ಸ್ವಾಮಿಯ ಅತ್ಯಂತ ಪ್ರಸಿದ್ಧ ದೇವಾಲಯವನ್ನು ಹೊಂದಿರುವ ಶ್ರೀಕ್ಷೇತ್ರ.  ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸರಹದ್ದಿನ ನೇತ್ರಾವತಿ ನದಿಯ ದಡದಲ್ಲಿರುವ  ಈ ಊರು ಮಂಜುನಾಥ ಸ್ವಾಮಿ ದೇವರ ಪೂಜ್ಯ ನೆಲೆಯಾಗಿದೆ.   ಶ್ರೀ ಕ್ಷೇತ್ರವು ದಕ್ಷಿಣಭಾರತದ ಅತೀ ದೊಡ್ಡ ಭಕ್ತಿ ಕೇಂದ್ರವಾಗಿದ್ದು  ದಾನ ಮತ್ತು ಧರ್ಮಗಳಿಂದ ಪ್ರಸಿದ್ಧಿಯಾಗಿದೆ. ಈ ಕ್ಷೇತ್ರವು ಸಾಮಾಜಿಕಸಾಂಸ್ಕೃತಿಕವಾಗಿ ಜನರಲ್ಲಿ ವಿಶೇಷವಾಗಿ ಆಚರಣೆ, ನಂಬಿಕೆ, ವಿಶ್ವಾಸ, ಭಕ್ತಿ, ಎಲ್ಲವುಗಳಿಂದಲೂ  ಮಹತ್ವ ಪಡೆದುಕೊಂಡಿರುವ

 ಕೋಟ್ಯಾಂತರ ಭಕ್ತರ ಆರಾಧ್ಯ ಕೇಂದ್ರವಾಗಿದೆ. ಜನಜನಿತವಾದ ಒಂದು ಮಾತಿದೆ:  ತಿಮ್ಮಪ್ಪ ಕಾಸು ಬಿಡ ಮಂಜುನಾಥ ಮಾತು ಬಿಡ ಎಂಬ ನಾಣ್ಣುಡಿಯಿದೆ. ತಿರುಪತಿ ತಿಮ್ಮಪ್ಪನಿಗೆ ಹಣದ ಹರಕೆ ಹೊತ್ತರೆ ಅದನ್ನು ಒಪ್ಪಿಸಲೇ ಬೇಕಂತೆ, ಇಲ್ಲದಿದ್ದರೆ ತಿಮ್ಮಪ್ಪ ಬಿಡಲಾರ. ಹಾಗೆಯೇ ಮಂಜುನಾಥಸ್ವಾಮಿಯ ಮೇಲೆ ಆಣೆ ಮಾಡಿದರೆ ಅದನ್ನು ಪಾಲಿಸಲೇ ಬೇಕಂತೆ, ಇಲ್ಲದಿದ್ದರೇ ಮಂಜುನಾಥ ಬಿಡಲಾರ; ಅಷ್ಟು ಭಕ್ತಿ ಗೌರವನ್ನು ಹೊಂದಿರುವ ನಂಬಿಕೆ ಕೇಂದ್ರವಾಗಿದೆ

       ಆದರೆ ಇತ್ತೀಚೆಗೆ ಈ ಧರ್ಮಸ್ಥಳವು ಅದೇಕೋ ಬೇರೆ ಬೇರೆ ವಿಚಾರ ವಿವಾದಗಳಿಂದ ಸುದ್ಧಿಯಾಗುತ್ತಿರುವುದು  ಬೇಸರದ ಸಂಗತಿ. 

ಈಗ ಕೇಳಿ ಬರುತ್ತಿರುವ ಸರಣಿ ಕೊಲೆ ಆರೋಪಗಳ ದೂರಿನ ತನಿಖೆ ಸಂಬಂಧ ಸರಕಾರವು ಎಸ್ಐಟಿ ರಚನೆ ಮಾಡಿದೆ.  ಅನನ್ಯ ಭಟ್ ಎಂಬಾಕೆಯು ಕಾಣೆಯಾಗಿರುವ ಪ್ರಕರಣ ಸೌಜನ್ಯ ಕೊಲೆಯ ಪ್ರಕರಣ ನಂತರ ಹೊಸದಾಗಿ ಬಂದಿರುವ ಮತ್ತೊಂದು ಆರೋಪ ಇದು. ಹಿಂದೆ ಧರ್ಮಸ್ಥಳದ ಪಂಚಾಯಿತಿಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬರು ಧರ್ಮಸ್ಥಳದಲ್ಲಿ ನಿಗೂಡವಾಗಿ ಕೊಲೆಯಾಗಿರುವ ಹಲವಾರು ಹೆಣಗಳನ್ನು ಹೂತು ಹಾಕಿರುವುದಾಗಿ ನೀಡಿದ ಹೇಳಿಕೆಯ ಆಧಾರದಲ್ಲಿ ಪೊಲೀಸ್ ಪ್ರಕರಣ ದಾಖಲು ಆದ ಹಿನ್ನೆಲೆಯಲ್ಲಿ ಧರ್ಮಸ್ಥಳವು ವಿವಾದದ ಬಿರುಗಾಳಿಗೆ ತತ್ತರಿಸಿದೆ. 

2003ರಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ  ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಳು ಕಾಣೆಯಾಗಿದ್ದು ಆಕೆಯ ಅಸ್ಥಿಪಂಜರ ಯಾವುದಾದರೂ ಇದ್ದರೆ ಹುಡುಕಿ ಕೊಡಿ ಎಂದು 22 ವರ್ಷಗಳ ನಂತರ ಆಕೆಯ ತಾಯಿ ಇಳಿ ವಯಸ್ಸಿನ ಸುಜಾತ ಭಟ್ ಧೈನ್ಯತೆಯಿಂದ ವಿನಂತಿಸುತ್ತಿರುವ ದೃಶ್ಯ   ಹೃದಯವನ್ನು ಹಿಂಡದೇ ಇರದು.

ಕರಾವಳಿಯನ್ನು ಕೆಲವು ದಶಕಗಳಿಂದ ಕೋಮುವಾದದ ಪ್ರಯೋಗಾಲಯವೆಂದು ಗುರುತಿಸಲ್ಪಟ್ಟಿದೆ.  ಅದನ್ನು ಒಂದು ಹೆಗ್ಗಳಿಕೆಯಾಗಿಯೇ ಎಲ್ಲರೂ ಭಾವಿಸಿದ್ದರು. ಅಲ್ಲಿ ಯಾವುದೇ ವಿಚಾಗಳು ಇದ್ದರೂ ಹಿಂದು ಮುಸ್ಲಿಂ ವಿಚಾರಕ್ಕೆ ಮಾತ್ರ ಪ್ರಾಶಸ್ತ್ಯ! ಉಳಿದೆಲ್ಲವೂ ನಗಣ್ಯ. ಬರೀ ಹಿಂದು ಮುಸ್ಲಿಂ, ಹಿಂದು ಮುಸ್ಲಿಂ, ಹಿಂದು ಮುಸ್ಲಿಂ ಅಷ್ಟೇ! ಅದಕ್ಕೆ ಸಂಬಂಧಿಸಿದ್ದು ಮಾತ್ರ ಅಲ್ಲಿನ ಸಮಸ್ಯೆ.  ಅದನ್ನು ಬಿಟ್ಟು ಬೇರೆ ಏನೂ ಇದ್ದರೂ ಅದು ಲೆಕ್ಕಕ್ಕೆ ಇಲ್ಲ. ಅದನ್ನು ಪ್ರೋತ್ಸಾಹಿಸುವುದು ಇಲ್ಲ, ಪ್ರಶ್ನಿಸುವುದೂ ಇಲ್ಲ. ಈ ಅಘೋಷಿತ ನಿಯಮವು ಕರಾವಳಿ ಪ್ರದೇಶದಲ್ಲಿ ಬಹಳ ಹಿಂದೆಯೇ ಕರಾವಳಿಗರು ಜಾರಿಗೊಳಿಸಿದ್ದಾರೆ. ಅದನ್ನು ಎಲ್ಲರೂ ಒಪ್ಪಬೇಕೆಂಬ ಅಪ್ಪಣೆಯು ಕಡ್ಡಾಯವಾಗಿ ಪಾಲನೆಯಲ್ಲಿದೆ.  

ಯಾವ ವಿಚಾರವೇ ಇರಲಿ; ಅಪರಾಧವಿರಲಿ, ದುಷ್ಕೃತ್ಯವಿರಲಿ ಅದನ್ನು ಸಮಾಜ ವಹಿಸಿಕೊಳ್ಳಬೇಕಾದರೇ  ಅದಕ್ಕೆ ಜಾತಿ ಲೇಬಲ್ ಇರಲೇಬೇಕು.  ಹಿಂದು ಮುಸ್ಲಿಂ ವಿಚಾರಕ್ಕೆ ಸಂಬಂಧಪಟ್ಟರೆ ಆ ವಿಚಾರ ಎಷ್ಟೇ ಕ್ಷುಲ್ಲಕವಿರಲಿ ಅದನ್ನು ಊದಿ ಉಬ್ಬಿಸಿ ದೊಡ್ಡದು ಮಾಡಿ ಇಡೀ ಸಮಾಜವನ್ನೇ ಪ್ರಚೋನೆಗೊಳಪಡಿಸಿ ಜನ ಸಾಮಾನ್ಯರು ಉಸಿರುಗಟ್ಟಿ ಒದ್ದಾಡುವಂತೆ ಮಾಡಿ ಬಿಡುತ್ತಾರೆ. ಸಮಾಜವು ರೊಚ್ಚಿಗೇಳ ಬೇಕು  ಇಲ್ಲವೇ ತೆಪ್ಪಗಿರ ಬೇಕು. ಇದೇ ಕೋಮುವಾದದ ಲ್ಯಾಬೋರೇಟರಿಯ ಮೂಲ  ಉದ್ದೇಶ ಮತ್ತು ಅದು ನಡೆಸುತ್ತಿರುವ ಚಟುವಟಿಕೆ.  ಸಮಾಜವನ್ನು ಈ ರೀತಿಯ ಕುಣಿಕೆಯಲ್ಲಿ ಸಿಕ್ಕಿಸಿಡುವುದಕ್ಕಾಗಿಯೇ  ರಾಜಕೀಯ ಪಕ್ಷ, ನಾಯಕರುಗಳು, ಸಂಘ ಸಂಸ್ಥೆಗಳ ದಂಡೇ ಸಿದ್ಧವಾಗಿರುತ್ತವೆ.

ಮಾಧ್ಯಮಗಳಂತೂ ಇದರ ಪೋಷಕ ಜವಾಬ್ದಾರಿಯನ್ನು ವಹಿಸಿ ಸುದ್ಧಿ ಸುಳ್ಳು ಸುದ್ಧಿಗಳ ವಾಂತಿ ಮಾಡಿ, ವಾಂತಿ ಮಾಡಿ ಅವುಗಳನ್ನು ತಿಂದ ಜನಸಾಮಾನ್ಯರು ಯಾವುದು ಸರಿ ಯಾವುದು ತಪ್ಪು ಎಂಬುದನ್ನು ತಿಳಿಯಲಾಗದೇ ಅರೆ ಪ್ರಜ್ಞಾವಸ್ಥೆಯಲ್ಲಿರುತ್ತಾರೆ.  ಇನ್ನು ಕರಾವಳಿಯ ಪೊಲೀಸರು;  ಹಿಂದು ಮುಸ್ಲೀಂ ವಿಚಾರವಾದರೇ ಮಾತ್ರ ಪೊಲೀಸ್ ತನಿಖೆಯನ್ನು ಕಂಬಳದ ಕೋಣದಂತೆ ಓಡಿಸಿಕೊಂಡು ಹೋಗುತ್ತಾರೆ. ಅದಲ್ಲವಾದರೆ ತನಿಖೆ ಮಕಾಡೆ ಮಲಗಿಬಿಡುತ್ತದೆ.  ಸೌಜನ್ಯಳ ವಿಷಯದಲ್ಲಿಯೂ ಆಗಿದ್ದು ಅದೆಯೇ. ಏನಾಗಿದೆ ಎಂದು ಜಗತ್ತು ತಿಳಿದುಕೊಳ್ಳುವಷ್ಟರಲ್ಲಿ ಅಮಾಯಕ ವಿಧ್ಯಾರ್ಥಿನಿ ಸೌಜನ್ಯಳು ಸಮಾಜದ ಚಾಲ್ತಿಯಲ್ಲಿರುವ ಈ ವಿಚಾರಧಾರೆಗೆ  ಆಹುತಿಯಾದಳು.

ದಿನಾಂಕ 9-10-2012ರಂದು ಉಜಿರೆ ಕಾಲೇಜಿನಿಂದ ವಾಪಾಸ್ಸು ಬಂದ ಸೌಜನ್ಯಳಿಗೆ ಆಕೆಯ ಮನೆ ತಲುಪಲು ಆಗಲಿಲ್ಲ. ಆ ದಿವಸ ಮತ್ತು ಮಾರನೆಯ ದಿವಸ ಚೆನ್ನಾಗಿ ನೆನಪಿದೆ. ಈ ಘಟನೆ ನಡೆದಾಗ ಹಿಂದು ಮುಸ್ಲಿಂ ಬಣ್ಣದ ಹೊಗೆ ಕಟ್ಟಿತ್ತು. ಮಾಧ್ಯಮ ಸುದ್ಧಿಗಳ ಭರಾಟೆ, ಪ್ರದೇಶದಲ್ಲಿ ಪ್ರಕ್ಷುಬ್ಧವಾಗುತ್ತಿರುವ ವಾತಾವರಣ, ಬಿಗಿಯಾದ ಪೊಲೀಸ್ ಬಂದೋಬಸ್ತು, ಎನಾಗುತ್ತದೋ ಏನೋ ಎಂಬ ಆತಂಕ ಎಲ್ಲವೂ ಇತ್ತು.  ಸೌಜನ್ಯಳು ಅತ್ಯಾಚಾರಕ್ಕೆ ಬಲಿಯಾಗಿ ಕೊಲೆಯಾಗಿ ಪತ್ತೆಯಾದಳು.  ಯಾವಾಗ ಅದು ಹಿಂದು ಮುಸ್ಲಿಂ ವಿಚಾರ ಅಲ್ಲವೆಂದು ಗೊತ್ತಾಯಿತೋ ಅಂದೇ ಸೌಜನ್ಯಳ ಕೇಸು ಮಕಾಡೆ ಮಲಗಿ ಬಿಟ್ಟಿತು. ಇವತ್ತಿನವರೆಗೂ ಅದು ಮೇಲೆ ಏಳಲೇ ಇಲ್ಲ. ಸಾರ್ವಜನಿಕರು ಪೊಲೀಸರನ್ನು, ಸ್ಥಳೀಯ ಪೊಲೀಸರನ್ನು ಸಿಐಡಿ ಪೊಲೀಸರು, ಸಿಐಡಿ ಪೊಲೀಸರನ್ನು ಸಿಬಿಐ ಪೊಲೀಸರು ದೂಷಿಸುತ್ತಾ ಕೇಸನ್ನು ನ್ಯಾಯಾಲಯಕ್ಕೆ ಕೊಟ್ಟರು. ನ್ಯಾಯಾಲಯ ಇವರು ಕೊಟ್ಟದ್ದನ್ನು ವಿಚಾರಣೆ ಮಾಡಿ ತೀರ್ಪನ್ನು ನೀಡಿತು. ಕೇಸು ಖುಲಾಸೆಯಾಯಿತು!

  ಆಕಾಶ ಕಳಚಿ ಬಿದ್ದರೆ ಜಗತ್ತನ್ನು ನಾನು ಹೇಗಪ್ಪಾ ಕಾಪಾಡೋದು ಅಂತ ಭ್ರಾಂತಿಗೆ ಬಿದ್ದು ಯೋಚಿಸುತ್ತಾ ಕಾಲಕಳೆಯುತ್ತಿದ್ದ ಒಬ್ಬನ್ನು ಹಿಡಿದು ಇವನೇ ಈ ಪ್ರಕರಣದ ವಿಕೃತ ಕಾಮಿ ಮತ್ತು ಕೊಲೆಗಾರನೆಂದು ಪೊಲೀಸರು ಕೇಸು ಪಟ್ಟಿಗೆ ಯಾವಾಗ ಸೇರಿಸಿದರೋ ಆವಾಗಿನಿಂದಲೂ ಆತ ನೈಜ ಆರೋಪಿಯಲ್ಲವೆಂದು ಜನಸಾಮಾನ್ಯರು ಖಂಡತುಂಡವಾಗಿ ಅಲ್ಲಗೆಳೆದಿದ್ದರು. ತನಿಖೆಯನ್ನು ಸರಿಯಾಗಿ ನಡೆಸಿ  ನೈಜ ಆರೋಪಿಯನ್ನು ಪತ್ತೆ ಮಾಡಲು ಒತ್ತಾಯಿಸುತ್ತಲೇ ಇದ್ದರು. ಆದರೇ ಕೋಮುವಾದದ ಫ್ಯಾಕ್ಟರಿಯ ಜೊತೆಗೆ ಕೆಲಸ ಮಾಡುತ್ತಿದ್ದ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದಿದ್ದು ಜನರಲ್ಲಿರುವ ಅನುಮಾನ ಮತ್ತಷ್ಟೂ ಬೆಳೆಯುವುದಕ್ಕೆ ಕಾರಣವಾಯಿತು. ಅದೇ ಇಂದಿನ ಸಮಸ್ಯೆಗೆ ನಿಜವಾದ ಕಾರಣ.

ಆದರೆ ಸೌಜನ್ಯಳ ಕೊಲೆಯು ಅರ್ಧ ಪಜ್ಞೆಯನ್ನು ಕಳೆದುಕೊಂಡಂತಿದ್ದ ಕರಾವಳಿಯ ಸಮಾಜವನ್ನು ಚೆನ್ನಾಗಿ ಚಿವುಟಿ ಎಬ್ಬಿಸಿಬಿಟ್ಟಿದೆ.  ಸೌಜನ್ಯಳಿಗೆ ನ್ಯಾಯ ಕೇಳುವ ಕೂಗು ಇಡೀ ಕರಾವಳಿಯಲ್ಲಿ ಮಾರ್ಧನಿಸುತ್ತಿದೆ. ಮಹೇಶ ತಿಮ್ಮರೋಡಿ ಎಂಬ ಗಂಡೆದೆಯ ನಾಯಕನಿಂದಾಗಿ ಈ ವಿಚಾರ ಇಂದಿಗೂ ಹೋರಾಟದ ಮುನ್ನೆಲೆಯಲ್ಲಿದೆ.  ಇಲ್ಲದಿದ್ದಲ್ಲಿ ಈ ಪ್ರಕರಣ ದೇಶದಾದ್ಯಂತ ಈ ಮಟ್ಟದಲ್ಲಿ ಗಮನಸೆಳೆಯುತ್ತಿರಲಿಲ್ಲ. ತನಿಖೆಯನ್ನು ಸೌಜನ್ಯಳ ಜೊತೆಗೆ ಮಣ್ಣು ಮಾಡಿ ಬಿಡುತ್ತಿದ್ದರು.

ಹಾಗೇ ನೋಡಿದರೆ, ಮಹೇಶ್ ತಿಮ್ಮರೋಡಿ ಸಹಾ ಅಂತಹ ಒಂದು ಕೋಮುವಾದ ಲ್ಯಾಬೊರೇಟರಿಯ ಮುಖ್ಯ ಟೆಕ್ನಿಷಿಯನ್ನಾಗಿಯೇ ಇದ್ದವರು!  ಆದರೇ ಸೌಜನ್ಯಳ ಕೊಲೆಯಲ್ಲಿ ಅವರಿಗೆ ಯಾವುದೋ ನಿಗೂಢ ಪಾತ್ರವನ್ನು ಕಂಡಿದ್ದಾರೆ. ಗಮನಿಸಿದ್ದಾರೆ. ಅದರ ವಿರುದ್ಧವಾಗಿ ಅಂದಿನಿಂದ ಇಂದಿನವರೆಗೂ ಅವಿಶ್ರಾಂತವಾಗಿ ಹೋರಾಡುತ್ತಲೇ ಬಂದಿದ್ದಾರೆ. ಅಲ್ಲಿನ ಜನರ ಭಾವನೆಗೆ ನಾಯಕತ್ವ ನೀಡಿದ್ದರಿಂದಾಗಿಯೇ ಮಹೇಶ್ ತಿಮ್ಮರೋಡಿ ಇವತ್ತು ಕರಾವಳಿಯಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಹೋರಾಟಗಾರರಾಗಿ ಗುರುತಿಲ್ಪಟ್ಟಿದ್ದಾರೆ.   ಜನಾಭಿಪ್ರಾಯ ಎಷ್ಟೊಂದು ಪ್ರಭಲವಾಗಿದೆ ಎಂದರೆ ರಾಜಕೀಯ ಪಕ್ಷವಾಗಲೀ, ಮುಖಂಡರಾಗಲೀ, ಅಥವಾ ಇನ್ಯಾರಿಗೇ ಆಗಲೀ  ಸೌಜನ್ಯ ಪರ ಮಾತನಾಡುವ ಹಾಗೆಯೂ ಇಲ್ಲ, ವಿರೋಧಿಸುವ ಹಾಗೆಯೂ ಇಲ್ಲ ಎಂಬ ಸ್ಥಿತಿಯನ್ನು ಸೃಷ್ಟಿಸಿದೆ.

ಈಗ ಸೌಜನ್ಯ ಪ್ರಕರಣದ ಜೊತೆಗೆ ಹತ್ತು ಹಲವು ದೂರುಗಳು ಮೇಲೆದ್ದಿವೆ. ಕೇರಳದ ಮಾಧ್ಯಮಗಳ ವರದಿಗಳನ್ನು ನೋಡಿದರೇ ನಿಜಕ್ಕೂ ಆತಂಕವಾಗುತ್ತಿದೆ.       ಈಗ ಎಸ್ಐಟಿ ರಚನೆಯಾಗಿದೆ. ಅದರ ಉದ್ದೇಶ ಮತ್ತು ದುರುದ್ದೇಶ ಏನಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ.  ಆದರೆ ಒಂದಂತೂ ಸತ್ಯ. ಈ ವಿವಾದಗಳು ಸತ್ಯವೋ, ವದಂತಿಗಳೋ, ಒಟ್ಟಾರೆ ಪ್ರಜ್ಞಾವಂತರ ಮನಸಾಕ್ಷಿಯನ್ನು ಘಾಸಿಗೊಳಿಸಿದೆ. ಮಹೇಶ್ ತಿಮ್ಮರೋಡಿ ಹೇಳುವಂತೆ ಸೌಜನ್ಯಳು ಕಾಳಿಮಾತೆಯ ರೂಪದಲ್ಲಿ ಕರಾವಳಿಗೆ ಹಿಡಿದಿರುವ ಕೋಮು ಭ್ರಾಂತಿಯ ಪೊರೆಯನ್ನು ಕಿತ್ತು ಸತ್ಯವನ್ನು ಹೊರ ತರುತ್ತಾಳೋ ಎಂಬುದನ್ನು ಕಾದು ನೋಡ ಬೇಕು.  

ಎಸ್ಐಟಿ ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲಿ. ವಿವಾದದ ನೈಜಾಂಶವನ್ನು ಜನರ ಮುಂದಿಡಲಿ.  ಸತ್ಯವಿಚಾರ ಗೊತ್ತಾಗಬೇಕು.    ಆರೋಪ ಮತ್ತು ಆರೋಪಿಗಳನ್ನೂ ಪತ್ತೆ ಮಾಡಬೇಕು. ಆದರೆ ಧರ್ಮಸ್ಥಳ ದೈವನೆಲೆಯ ಕೇಂದ್ರ. ಕೋಟ್ಯಾಂತೆರ ಜನರ ಭಕ್ತಿ ಭಾವನೆಯ ಶ್ರೀಕ್ಷೇತ್ರ. ಅದರ  ಗೌರವಕ್ಕೆ ಅಪಚಾರವಾಗಬಾರದು.

ಬಿ.ಆರ್. ಮಂಜುನಾಥ್, 7353353797